ಮುಂಬೈ: ಬಚ್ಚನ್ ವಂಶದ ಕುಡಿ, ಒಂದು ವರ್ಷ ವಯಸ್ಸಿನ ಆರಾಧ್ಯಾ 'ಅಜ್ಜನಿಗೆ ತಕ್ಕ ಮೊಮ್ಮಗಳು' ಎನ್ನುವುವುದನ್ನು ಸಾಧಿಸಿ ತೋರಿಸಿದ್ದಾಳೆ! ಮೊಮ್ಮಗಳ ಸಾಹಸ ಕಂಡು ಸ್ವತಃ ಅಮಿತಾಭ್ ಬಚ್ಚನ್ ಅವರೇ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಆರಾಧ್ಯ ಅಂತದ್ದೇನು ಮಾಡಿದ್ದಾಳೆ ಅಂತಿರಾ? ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಪುತ್ರಿಯಾದ ಆರಾಧ್ಯಾಗೆ ಈಗತಾನೇ ಒಂದು ವರ್ಷ. ಅದಾಗಲೇ ಆಕೆ ಐಪ್ಯಾಡ್‌ನಲ್ಲಿ ತನಗೆ ಬೇಕಾದ ಹಾಡುಗಳನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಟೀವಿ ಕಾರ್ಯಕ್ರಮಗಳನ್ನು ತಾನೇ ಸ್ವತಃ ನೋಡುವದನ್ನು ಕಲಿತಿದ್ದಾಳಂತೆ. 'ಆರಾಧ್ಯ ಐಪ್ಯಾಡ್‌ನಲ್ಲಿ ಚಿಕ್ಕ ಮಕ್ಕಳ ಕಾರ್ಯಕ್ರಮಗಳನ್ನು ತಾನಾಗಿಯೇ ನಿರ್ವಹಿಸುತ್ತಾಳೆ. ಟೀವಿ ರಿಮೋಟ್‌ನ್ನು ಕೈಗೆ ತೆಗೆದುಕೊಂಡು ತನಗೆ ಬೇಕಾದ ಚಾನೆಲ್‌ನ್ನು ಬದಲಾಯಿಸುತ್ತಾಳೆ' ಎಂದು ಅಮಿತಾಭ್ ಟ್ವೀಟ್ ಮಾಡಿದ್ದಾರೆ. 'ಈಗಿನ ಜನಾಂಗ ಎಷ್ಟೊಂದು ಮುಂದುವರಿದಿದೆ ಅಂದರೆ ನಾನು ಚಿಕ್ಕವನಿದ್ದಾಗ ಇದನ್ನೆಲ್ಲಾ ನೋಡಿಯೂ ಇರಲಿಲ್ಲ' ಎಂದು ಹೇಳಿದ್ದಾರೆ.