ಡಾ| ಶಿವಾನಂದ ಪ್ರಭು ಪ್ರೊಫೆಸರ್ , ಸರ್ಜರಿ ವಿಭಾಗ, | Jan 27, 2013
ರೋಗಿಗಳು ಆಸ್ಪತ್ರೆಗೆ ಸೇರುವಂತೆ ಮಾಡುವ ಸಾಮಾನ್ಯ ಕಾರಣಗಳಲ್ಲಿ, ಕಾಲಿನ ಉರಿಯೂತ ಅಥವಾ ಸೆಲ್ಯುಲೈಟಿಸ್ ಕೂಡ ಒಂದು.ಅದರಲ್ಲೂ,ಡಯಾಬೆಟೆಸ್‌ನಿಂದ ಬಳಲುತ್ತಿರುವ ರೋಗಿಗಳಲ್ಲಿ,ಈ ಸಾಧ್ಯತೆ ಇನ್ನೂ ಹೆಚ್ಚಿರುತ್ತದೆ.ಸಾಮಾನ್ಯ ಕಾಯಿಲೆಯಂತೆ ಕಂಡರೂ, ಇದರಲ್ಲಿ ಕೆಲವೊಮ್ಮೆ ಪ್ರಾಣಾಂತಿಕವಾಗಬಲ್ಲಂತಹಾ ಸಾಧ್ಯತೆಗಳೂ ಇರುತ್ತವೆ.
ಸೆಲ್ಯುಲೈಟಿಸ್ ಎಂದರೆ ದೇಹದ ಚರ್ಮದ ಅಡಿಯಲ್ಲಿರುವ ಅಂಗಾಂಶಗಳ ಉರಿಯೂತ. ಹೆಚ್ಚಿನ ಸಲ ಈ ರೀತಿಯ ಉರಿಯೂತ ಕಾಲಿನ ಅಂಗಾಂಶಗಳಲ್ಲೇ ಕಂಡು ಬರುತ್ತದೆ. ಅಪರೂಪಕ್ಕೊಮ್ಮೆ, ಅದರಲ್ಲೂ ಡಯಾಬೆಟೆಸ್ ಇದ್ದವರಿಗೆ, ದೇಹದ ಇತರ ಭಾಗಗಳಲ್ಲಿ ಕೂಡ ಇದು ಕಾಣಿಸಿಕೊಳ್ಳುವುದುಂಟು. ಕಾಲಿಗೆ ಸೆಲ್ಯುಲೈಟಿಸ್ ಆದಾಗ, ಕಾಲು ಊದಿಕೊಳ್ಳು ತ್ತದೆ. ಚರ್ಮ ಕೆಂಪು ಬಣ್ಣಕ್ಕೆ ತಿರುಗಬಹುದು. ಆ ಭಾಗವನ್ನು ಮಟ್ಟಿದಾಗ ನೋವಿನ ಅನುಭವವಾಗುತ್ತದೆ. ಕೆಲವೊಮ್ಮೆ ಜ್ವರ ಬರಲೂ
ಬಹುದು. ಮೊದಲು, ಒಂದು ಸಣ್ಣ ಭಾಗದಲ್ಲಿ ಕಾಣಿಸಿಕೊಳ್ಳುವ ಈ ಸೂಚನೆಗಳು, ಕ್ರಮೇಣ ಪಸರಿಸತೊಡಗುತ್ತವೆ.
ಸೆಲ್ಯುಲೈಟಿಸ್‌ಗೆ ಕಾರಣಗಳೇನು ?
ಹೆಚ್ಚಿನ ಭಾಗ ದೇಹದ ರೋಗನಿರೋಧಕ ಶಕ್ತಿ ಕುಂಠಿತಗೊಂಡಿರುವುದರ ಸೂಚನೆಯದು. ಪಾದದಲ್ಲಿನ ಸಣ್ಣ ಗಾಯ ಅಥವಾ ಚರ್ಮದ ಸೋಂಕಿನ ಮೂಲಕ ರೋಗಾಣು ದೇಹವನ್ನು ಪ್ರವೇಶಿಸುತ್ತದೆ. ಅದನ್ನು ಅಲ್ಲೇ ತಡೆಗಟ್ಟಲು, ದೇಹದ ರೋಗನಿರೋಧಕ ವ್ಯವಸ್ಥೆ ವಿಫಲವಾದಾಗ, ರೋಗಾಣು ತನ್ನ ವಂಶಾಭಿವೃದ್ಧಿ ಮಾಡಿಕೊಂಡು ಉರಿಯೂತವನ್ನುಂಟು ಮಾಡುತ್ತದೆ. ಇದರ ಪರಿಣಾಮವೇ, ಮೇಲೆ ಸೂಚಿಸದಂತಹ ರೋಗಲಕ್ಷಣಗಳು. ಸೋಂಕಿನಿಂದಾದ ಹೆಚ್ಚಿನ ರಕ್ತಪರಿಚಲನೆಯಿಂದ, ಕೆಂಪು ವರ್ಣ, ಊದಿಕೊಳ್ಳುವುದು, ಸೋಂಕು ಇರುವ ಜಾಗ ಬಿಸಿಯೇರುವುದು... ಇತ್ಯಾದಿ ರೋಗಲಕ್ಷಣಗಳು ಉಂಟಾಗುತ್ತವೆೆ.
ಡಯಾಬೆಟೆಸ್ ಇರುವವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಅದಲ್ಲದೆ, ಕಾಲಿನಲ್ಲಿ ರಕ್ತಸಂಚಾರವೂ ಕುಂಠಿತವಾಗುತ್ತಾ ಸಾಗಿರುತ್ತದೆ. ಹೀಗಾದಾಗ, ಒಳಬಂದ ರೋಗಾಣುವಿಗೆ ಹೆಚ್ಚಿನ ತಡೆ ಇರುವುದಿಲ್ಲ. ಮೇಲಾಗಿ, ದೇಹದ ಆಂಗಾಂಶಗಳಲ್ಲಿ ಸಕ್ಕರೆ ಅಂಶ ಹೇರಳವಾಗಿ ಸಿಗುವುದರಿಂದ, ರೋಗಾಣುವಿಗೆ ಆಹಾರ ಪೂರೈಕೆಯೂ ಸಮಸ್ಯೆ ಇಲ್ಲದೆ ನಡೆಯುತ್ತಿರುತ್ತದೆ. ಈ ಎಲ್ಲಾ ಕಾರಣಗಳ ಜೊತೆಗೆ, ನರದೌರ್ಬಲ್ಯವೂ ಸೇರಿಕೊಂಡಾಗ, ವ್ಯಕ್ತಿಗೆ ನೋವಿನ ಅನುಭವ ಅಷ್ಟಾಗಿ ಆಗದೇ ಇರುವುದರಿಂದ, ಆತ ಕಾಲಿನ ಸೋಂಕನ್ನು ನಿರ್ಲಕ್ಷಿಸುವ ಸಾಧ್ಯತೆಗಳು ಹೆಚ್ಚು. ಇದನ್ನೆಲ್ಲಾ ಗಮನಿಸಿದಾಗ, ಡಯಾಬೆಟೆಸ್ ರೋಗಿಗಳಲ್ಲಿ ಸೆಲ್ಯುಲೈಟಿಸ್ ಏಕೆ ಸಾಮಾನ್ಯ ಎಂಬುದು ಮನವರಿಕೆಯಾಗದಿರದು.
ಸ್ಟ್ರೆಪ್ಟೊಕಾಕಾಸ್ , ಸ್ಟೆಫೈಲೋ ಕಾಕಸ್, ಕ್ಲೆಬ್‌ಷಿಯೆಲ್ಲಾ ... ಇತ್ಯಾದಿಗಳು ಸೆಲ್ಯುಲೈಟಿಸ್ ಉಂಟುಮಾಡುವ ಸಾಮಾನ್ಯ ರೋಗಾಣುಗಳಾಗಿದ್ದು , ಹಲವೊಮ್ಮೆ ಪ್ರಚಲಿತ ಆ್ಯಂಟಿಬಯೋಟಿಕ್ ಔಷಧಿಗಳಿಗೆ ಅವು ಬಗ್ಗದೇ ಇರುವ ಸಾಧ್ಯತೆ ಇರುತ್ತದೆ. ಹೀಗಾದಾಗ, ಸೋಂಕು ಪಸರಿಸಿ, ದೇಹದಾದ್ಯಂತ ಆವರಿಸಿಕೊಳ್ಳಬಹುದು . ಈ ಪರಿಸ್ಥಿತಿಗೆ ಸೆಪ್ಟಿಸೀಮಿಯಾ ಅಥವಾ ರಕ್ತದ ಸೋಂಕು ಎನ್ನುತ್ತಾರೆ ಈ ಸ್ಥಿತಿಗೆ ತಲುಪಿದ ನಂತರ, ರೋಗಿಗೆ ಪ್ರಾಣಾಪಾಯದ ಭೀತಿ ಇರುತ್ತದೆ. ಆದ್ದರಿಂದಲೇ ಸೆಲ್ಯುಲೈಟಿಸ್‌ನ್ನು ನಿರ್ಲಕ್ಷಿಸುವುದು, ಅಪಾಯಕ್ಕೆ ಆಹ್ವಾನವಿತ್ತಂತೆ.
ಒಂದು ವೇಳೆ ದೇಹದ ರೋಗ ನಿರೋಧಕ ವ್ಯವಸ್ಥೆಯು ಕಾಲಿನ ಸೋಂಕು ರಕ್ತ ಸೋಂಕಾಗಿ ಪರಿವರ್ತನೆಯಾಗದಂತೆ ತಡೆಯವಲ್ಲಿ ಸಮರ್ಥವಾದರೂ, ಕಾಲಿನಲ್ಲಿ ಕೀವು ಉಂಟಾಗುವ ಸಾಧ್ಯತೆ ಇದ್ದೇ ಇರುತ್ತದೆ. ಈ ರೀತಿಯ ಕೀವಾಗುವಿಕೆ ರಕ್ತದ ಸೋಂಕಿನಷ್ಟು ಅಪಾಯಕಾರಿ ಅಲ್ಲದಿದ್ದರೂ, ಶಸ್ತ್ರಚಿಕಿತ್ಸೆ ಇಲ್ಲದೆ ವಾಸಿಯಾಗದು ಎಂಬುದು ಗಮನಾರ್ಹ ಅಂಶ.
ಸೆಲ್ಯುಲೈಟಿಸ್ ಉಂಟಾದಾಗ, ರೋಗಿ ಆದಷ್ಟು ಬೇಗ ವೈದ್ಯರ ಬಳಿ ಸಲಹೆ ಪಡೆಯಬೇಕು. ಆರಂಭಿಕ ಹಂತದಲ್ಲಿ ಸಾಮಾನ್ಯ ಬಳಕೆಯ ರೋಗ ನಿರೋಧಕ ಔಷಧಿಗಳಿಂದಲೇ ಇದನ್ನು ಗುಣಪಡಿಸಲು ಸಾಧ್ಯವಾಗಬಹುದು. ವ್ಯಕ್ತಿಗೆ ಡಯಾಬಿಟಿಸ್ ಅಥವಾ ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವ ಇತರ ಯಾವುದಾದರೂ ಕಾಯಿಲೆ ಇದೆಯೇ ಎಂಬುದನ್ನು ಪರಿಶೀಲಿಸುವುದು ಈ ಹಂತದಲ್ಲಿ ವೈದ್ಯರ ಕರ್ತವ್ಯವಾಗಿರುತ್ತದೆ. ಹಲವರಿಗೆ ಹೀಗಾದ ನಂತರವೇ ಡಯಾಬಿಟಿಸ್ ಇರುವುದು ಪತ್ತೆಯಾಗುವುದೂ ಇದೆ. ಡಯಾಬಿಟಿಸ್ ಇದ್ದಲ್ಲಿ , ಅದಕ್ಕೆ ಸೂಕ್ತ ಚಿಕಿತ್ಸೆ ಅಗತ್ಯ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಒಂದು ವೇಳೆ ಸೋಂಕು ಆಗಲೇ ಪಸರಿಸಿದ್ದರೆ, ಅಥವಾ ಪ್ರಾಥಮಿಕ ಚಿಕಿತ್ಸೆಯಿಂದ ರೋಗಿ ಗುಣಮುಖನಾಗದಿದ್ದಲ್ಲಿ, ಆಸ್ಪತ್ರೆಗೆ ದಾಖಲಾಗಿಸಿ, ನೇರವಾಗಿ ರಕ್ತನಾಳಗಳ ಮುಖೇನ ಕೊಡಲ್ಪಡುವ ಆಂಟಿಬಯೋಟಿಕ್ ಔಷಧಿಗಳನ್ನು ಬಳಸಬೇಕಾಗಬಹುದು. ಕೆಲವೊಂದು ರಕ್ತ ಪರೀಕ್ಷೆಗಳ ಮೂಲಕ ದೇಹದ ಆರೋಗ್ಯದ ಮಟ್ಟವನ್ನು ಆಗಾಗ ಅಳೆಯಬೇಕಾಗಬಹುದು. ಕಾಲಿನಲ್ಲಿ ಕೀವು ಸೋರುವ ಹುಣ್ಣೇನಾದರೂ ಇದ್ದಲ್ಲಿ, ಆದರಲ್ಲಿನ ಕೀವನ್ನು ತಪಾಸಣೆಗಾಗಿ ಕಳಿಸಬೇಕಾಗುತ್ತದೆ, ಕೀವು ತಪಾಸಣೆಯಿಂದ ಯಾವ ಆಂಟಿಬಯೋಟಿಕ್ ಸೂಕ್ತ ಎಂಬುದು ತಿಳಿಯುತ್ತದೆ. ಈ ರೀತಿಯ ವ್ರಣ ಇಲ್ಲದಿದ್ದಲ್ಲಿ, ಆಂಟಿಯೋಟಿಕ್ ಬಳಕೆಯು ತಜ್ಞರ ಊಹೆಗೆ ಬಿಟ್ಟದ್ದು . ಇತರ ರೋಗಲಕ್ಷಣಗಳ ಶಮನಕ್ಕಾಗಿಯೂ ಔಷಧಿಗಳನ್ನು ಬಳಸಲಾಗುತ್ತದೆ.
ಹಲವಾರು ಬಾರಿ, ಚಿಕ್ಕಪುಟ್ಟ ಸೋಂಕು ಉಂಟಾಗಿ, ಹೆಚ್ಚಿನ ಚಿಕಿತ್ಸೆ ಇಲ್ಲದೆ ವಾಸಿಯಾಗುವುದುಂಟು. ಇದರಿಂದ ರೋಗಿಗೆ ಒಂದು ರೀತಿಯ ಭಂಡ ಧೈರ್ಯ ಬಂದು, ಪ್ರತಿ ಬಾರಿಯೂ ಚಿಕಿತ್ಸೆಯನ್ನು ಮುಂದೂಡುವ ಸಂದರ್ಭ ಇಲ್ಲದಿಲ್ಲ . ಉಗುರಿನಿಂದ ತೆಗೆಯುವುದಕ್ಕೆ ಕೊಡಲಿ ತರಬೇಕಾಯಿತು ಎಂಬ ಗಾದೆ ಮಾತಿನಂತೆ, ಕೊನೆಗೆ ದುಬಾರಿ ಔಷಧಿಗಳಿಗೆ ಶರಣಾಗಿ, ಆಸ್ಪತ್ರೆಯಲ್ಲಿ ದಿನಗಟ್ಟಲೆ ಕಳೆದು, ಮಾನಸಿಕವಾಗಿ ಕುಗ್ಗಿ ಹೋಗುವ ರೋಗಿಗಳನ್ನು ಕಂಡಾಗ ನಮ್ಮಲ್ಲಿ ಈ ಬಗ್ಗೆ ಇನ್ನೂ ಮಾಹಿತಿ ಸಾಲದು ಎಂದು ಕಂಡದ್ದರಿಂದಲೇ ಈ ಲೇಖನ ಬರೆಯುವಂತಾಯಿತು.