ಮಂಜುಳಾ ಎ. ರಾವ್, ಕೌನ್ಸೆಲರ್, ಐ.ಸಿ.ಟಿ.ಸಿ./ಎ.ಆರ್.ಟಿ. ವಿಭಾಗ | Jan 27, 2013
ಎಚ್.ಐ.ವಿ.ಯ ವಿಸ್ತೃತ ರೂಪ
ಈ ಕೆಳಗಿನಂತಿದೆ:
ಹ್ಯೂಮನ್ (ಮಾನವ) ಎಂದರೆ, ಈ ವೈರಸ್ ಮನುಷ್ಯರನ್ನು ಮಾತ್ರ ಬಾಧಿಸುತ್ತದೆ ಎಂದರ್ಥ.
ಇಮ್ಯುನೊ ಡಿಫೀಷಿಯನ್ಸಿ (ರೋಗನಿರೋಧಕ ಶಕ್ತಿಯ ಕೊರತೆ) ಎಂದರೆ ದೇಹದ ರೋಗ ನಿರೋಧಕ ಶಕ್ತಿ ಕ್ಷೀಣಿಸಿದೆ ಎಂದರ್ಥ.
ವೈರಸ್ : ರೋಗ ನಿರೋಧಕ ಶಕ್ತಿಯನ್ನು ಕ್ಷೀಣಿಸುವಂತೆ ಮಾಡುವ ಒಂದು ಸೂಕ್ಷ್ಮಾಣು ಜೀವಿ.
ಅಕ್ವಯರ್ಡ್ : ಇದು ಒಬ್ಬ ವ್ಯಕ್ತಿ ಎಚ್. ಐ.ವಿ. ಎಂಬ ವೈರಸ್‌ನಿಂದ ಸೋಂಕಿತಗೊಂಡಿದ್ದಾರೆ ಎಂದರೆ ಅದು ಆನುವಂಶಿಕವಾದುದಲ್ಲ ಎಂಬುದನ್ನು ತಿಳಿಸುತ್ತದೆ.
ಇಮ್ಯೂನೊ ಡಿಫೀಷಿಯನ್ಸಿ (ರೋಗನಿರೋಧಕ ಶಕ್ತಿಯ ಕೊರತೆ).
ಸಿಂಡ್ರೊಮ್ (ರೋಗಲಕ್ಷಣ ಕೂಟ ): ವ್ಯಕ್ತಿ ಎಚ್.ಐ.ವಿ.ಯಿಂದ ಸೋಂಕಿತಗೊಂಡಿದ್ದಾರೆ ಮತ್ತು ಅದು ಉಲ್ಬಣಿತ ಸ್ಥಿತಿಯನ್ನು ತಲುಪಿದೆ ಎಂದು ಸೂಚಿಸುವ ಲಕ್ಷಣ ಅಥವಾ ಕಾಯಿಲೆಗಳ ಸಮೂಹ.
ಹರಡುವ ವಿಧಾನಗಳು
ಲೈಂಗಿಕ ಮಾರ್ಗ
ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಎಚ್. ಐ.ವಿ. ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.
ಹೆತ್ತವರಿಂದ
ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ , ಪ್ರಸವ ಸಮಯದಲ್ಲಿ ಮತ್ತು ಎದೆಹಾಲು ಉಣಿಸುವಿಕೆ ಸಂದರ್ಭಗಳಲ್ಲಿ ಹರಡಬಹುದು.
ರಕ್ತದ ಮೂಲಕ
ಎಚ್.ಐ.ವಿ. ಸೋಂಕಿತ ರಕ್ತ ಮತ್ತು ರಕ್ತ ಉತ್ಪನ್ನಗಳನ್ನು ಸ್ವೀಕರಿಸುವುದರಿಂದ ಹರಡಬಹುದು.
ಸೋಂಕಿತ ವ್ಯಕ್ತಿಯೊಂದಿಗೆ ಸೂಜಿ, ಸಿರಿಂಜುಗಳನ್ನು ಹಂಚಿಕೊಳ್ಳುವುದರಿಂದ ಎಚ್. ಐ.ವಿ. ಹರಡಬಹುದು.
ಈ ಕೆಳಗಿನ ಮಾರ್ಗಗಳಿಂದ
ಎಚ್.ಐ.ವಿ. ಹರಡುವುದಿಲ್ಲ
ಕೆಮ್ಮುವುದು ಅಥವಾ ಸೀನುವುದು.
ಕೀಟಗಳ ಕಚ್ಚುವಿಕೆ.
ಸ್ಪರ್ಷಿಸುವುದು ಅಥವಾ
ಅಪ್ಪಿಕೊಳ್ಳುವುದು.
ಚುಂಬಿಸುವುದರಿಂದ.
ಹಸ್ತಲಾಘವ.
ಎಚ್.ಐ.ವಿ. ಸೋಂಕಿತ ವ್ಯಕ್ತಿಯ
ಜೊತೆ ಕೆಲಸ ಮಾಡುವುದು.
ಲೋಟಗಳು, ತಟ್ಟೆಗಳು ಮುಂತಾದ ಗೃಹೋಪಯೋಗಿ ವಸ್ತುಗಳಿಂದ.
ವ್ಯಕ್ತಿಯ ದೇಹದಲ್ಲಿ ಎಚ್.ಐ.ವಿ. ಸೇರಿದಾಗ ದೇಹದಲ್ಲಿ ಸಿ.ಡಿ.4 ಎಂಬ ಒಂದು ರೀತಿಯ ಜೀವಕೋಶಗಳಿರುತ್ತವೆ. ಈ ರೀತಿಯ ಜೀವಕೋಶಗಳು, ನಮ್ಮನ್ನು ವಿವಿಧ ಸೋಂಕುಗಳಿಂದ ಸಂರಕ್ಷಿಸುತ್ತವೆ ಮತ್ತು ಸ್ವಾಭಾವಿಕವಾದ ಇಮ್ಯೂನಿಟಿ ಅಥವಾ ರೋಗ ನಿರೋಧಕ ಶಕ್ತಿಯನ್ನು ಕೊಡುತ್ತವೆ. ಯಾವಾಗ ಎಚ್.ಐ.ವಿ. ನಮ್ಮ ದೇಹವನ್ನು ಪ್ರವೇಶಿಸುತ್ತದೆಯೋ, ಆಗ ಇದು ಸಿಡಿ 4 ಜೀವಕೋಶಗಳನ್ನು ನಾಶಪಡಿಸುತ್ತದೆ ಮತ್ತು ನಮ್ಮನ್ನು ಹೆಚ್ಚು ಸೋಂಕುಗಳಿಗೆ, ಅಪಾಯದ ಅಂಚಿಗೆ ಗುರಿ ಮಾಡುತ್ತದೆ.
ಎಚ್.ಐ.ವಿ. ಸೋಂಕಿನ ಲಕ್ಷಣಗಳು
ದುಗ್ಧರಸ ಗ್ರಂಥಿಗಳ ಉರಿಯೂತ, ತಲೆನೋವು, ಹಸಿವು ಆಗದಿರುವಿಕೆ, ಮುಖ್ಯವಾಗಿ ಬಹಳ ಕಾಲ ಮುಂದುವರಿದ ಜ್ವರ (ಒಂದು ತಿಂಗಳಿಗಿಂತಲೂ ಅಧಿಕ), ದೀರ್ಘಕಾಲೀನ ಭೇದಿ, ತೂಕದಲ್ಲಿ ಇಳಿಕೆಯಾಗುವುದು... ಇವೆಲ್ಲ ಎಚ್.ಐ.ವಿ. ಸೋಂಕಿತ ವ್ಯಕ್ತಿಗಳಲ್ಲಿ ಕಾಣಬಹುದಾದ ಸಾಮಾನ್ಯ ಲಕ್ಷಣಗಳು.
ಎಚ್.ಐ.ವಿ. ಇದೆಯೇ ಎಂದು ತಿಳಿದುಕೊಳ್ಳಲು ಕೇವಲ ರಕ್ತ ಪರೀಕ್ಷೆಯಿಂದ ಮಾತ್ರ ಸಾಧ್ಯ.
ಎಚ್.ಐ.ವಿ. ಪರೀಕ್ಷೆ ಎಂದರೆ
ಸೋಂಕಿಗೆ ಒಳಗಾದಾಗ ನಮ್ಮ ಶರೀರವು ಎಚ್.ಐ.ವಿ. ಗೆ ನಿಗದಿಯಾದ ಪ್ರತಿಕಾಯಗಳನ್ನು ಉತ್ಪತ್ತಿ ಮಾಡುತ್ತದೆ. ರಕ್ತದಲ್ಲಿ ಇರುವ ಈ ಪ್ರತಿಕಾಯಗಳನ್ನು ಎಚ್.ಐ.ವಿ. ಪರೀಕ್ಷೆ ಪತ್ತೆಹಚ್ಚುತ್ತದೆ. ಎಚ್.ಐ.ವಿ. ಪರೀಕ್ಷೆಯನ್ನು ಎಲ್ಲಾ ಮೆಡಿಕಲ್ ಕಾಲೇಜು, ಸರಕಾರಿ ಆಸ್ಪತ್ರೆಗಳಲ್ಲಿರುವ ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ಮಾಡಲಾಗುತ್ತದೆ, ಅಲ್ಲಿ ನುರಿತ ಕೌನ್ಸೆಲರ್ ಹಾಗೂ ಪ್ರಯೋಗ ಶಾಲಾ ತಂತ್ರಜ್ಞರು ಲಭ್ಯರಿರುತ್ತಾರೆ. ಈ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವವರ ವಿವರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ. ಐ.ಸಿ.ಟಿ.ಸಿ. ಕೇಂದ್ರಗಳಲ್ಲಿ ಪ್ರತಿಯೊಬ್ಬರು ಕೂಡ ಯಾವುದೇ ಭಯ, ಹಿಂಜರಿಕೆ ಇಲ್ಲದೆ ತಮ್ಮ ಪರೀಕ್ಷೆಗಳನ್ನು ಮಾಡಿಸಿಕೊಂಡು, ತಮ್ಮ ಅನುಮಾನಗಳನ್ನು ವಿಚಾರಿಸಿಕೊಳ್ಳಬಹುದು. ಇಲ್ಲಿ ಪರೀಕ್ಷೆಗೆ ಒಳಪಡುವ ಮೊದಲು ಕೌನ್ಸೆಲಿಂಗ್ ನೀಡಲಾಗುವುದು.
ಕೌನ್ಸೆಲಿಂಗ್ ಎಂದರೇನು ?
ಆಪ್ತ ಸಮಾಲೋಚನೆ (ಕೌನ್ಸೆಲಿಂಗ್) ಸಹಾಯ ಮಾಡುವ ಒಂದು ಪ್ರಕ್ರಿಯೆಯಾಗಿದ್ದು, ಇಲ್ಲಿ ಒಬ್ಬ ವ್ಯಕ್ತಿ ಸ್ಪಷ್ಟವಾಗಿ ಮತ್ತು ಉದ್ದೇಶಪೂರ್ವಕವಾಗಿ ತನ್ನ ಸ್ಥಿತಿಯನ್ನು ಗುರುತಿಸಿಕೊಂಡು, ಮತ್ತು ಪರಿಸರದ ಮಿತಿಯಲ್ಲಿ ಪರಿಹಾರವನ್ನು ಕಂಡುಕೊಳ್ಳಲು ಸಹಕರಿಸುವುದಾಗಿದೆ. ಎಚ್.ಐ.ವಿ. ಆಪ್ತ ಸಮಾಲೋಚನೆಯ ಉದ್ದೇಶವು, ಪರೀಕ್ಷೆಗೆ ಶಿಫಾರಸು ಮಾಡಲ್ಪಟ್ಟ ಅಥವಾ ಸ್ವಯಂಪ್ರೇರಿತರಾಗಿ ಪರೀಕ್ಷೆಗೆ ಬಂದವರಿಗೆ ಆ ಪರೀಕ್ಷೆ ಅವರಿಗೆ ಹೇಗೆ ಸಹಕಾರಿಯಾಗುತ್ತದೆ. ಎಂದು ತಿಳಿಸುವುದು ಮತ್ತು ಪರೀಕ್ಷೆ ಮಾಡಿಸಿಕೊಳ್ಳಬೇಕೋ ಬೇಡವೊ ಎಂಬ ನಿರ್ಧಾರ ತೆಗೆದುಕೊಳ್ಳಲು ಅವರನ್ನು ಬೆಂಬಲಿಸುವುದು.
ನೆಗೆಟಿವ್ ಪರೀಕ್ಷಾ ಫಲಿತಾಂಶ ಇದ್ದವರಿಗೆ ನೀಡುವ ಆಪ್ತ ಸಮಾಲೋಚನೆಯು, ಭವಿಷ್ಯ ದಲ್ಲಿ ಸೋಂಕನ್ನು ಹೊಂದುವ ಅಪಾಯ ವನ್ನು ಕಡಿಮೆ ಮಾಡಿಕೊಳ್ಳಲು ಅನುಸರಿ ಸಬೇಕಾದ ನಡವಳಿಕೆ ಬದಲಾವಣೆಗಳ ಬಗ್ಗೆ ಚರ್ಚಿಸುವುದು. ವ್ಯಕ್ತಿಯು ವಿಂಡೋ ಪಿರಿಯಡ್‌ನಲ್ಲಿ ಇದ್ದರೆ, ಪುನಃ ಮೂರು ತಿಂಗಳ ಅನಂತರ ಪರೀಕ್ಷಿಸಿಕೊಳ್ಳಲು ಹೇಳುವುದು.
ವಿಂಡೋ ಪೀರಿಯಡ್ ಎಂದರೆ
ಒಬ್ಬ ವ್ಯಕ್ತಿಯ ದೇಹದೊಳಗೆ ಎಚ್. ಐ.ವಿ. ವೈರಸ್ ಪ್ರವೇಶಿಸಿದ ದಿನದಿಂದ, ಅÂಂಟಿಬಾಡಿ ಉತ್ಪತ್ತಿಯಾಗುವ ನಡುವಿನ ಅವಧಿಯನ್ನು ವಿಂಡೋ ಪಿರಿಯಡ್ ಎನ್ನುತ್ತಾರೆ. ಆ್ಯಂಟಿಬಾಡಿ ದೇಹದಲ್ಲಿ ಉತ್ಪತ್ತಿಯಾಗಲು ಸುಮಾರು 6 ವಾರಗಳಿಂದ 3 ತಿಂಗಳ ಸಮಯ ತೆಗೆದುಕೊಳ್ಳುತ್ತದೆ. ಎಚ್.ಐ.ವಿ. ಪರೀಕ್ಷೆ ಮಾಡಿಸಿಕೊಂಡಾಗ, ಅಕಸ್ಮಾತ್ ವ್ಯಕ್ತಿ ಸೋಂಕಿಗೆ ಒಳಗಾಗಿ ಇನ್ನೂ ಮೂರು ತಿಂಗಳು ಆಗಿಲ್ಲ ಎಂದಾದರೆ, ಪರೀಕ್ಷೆಯ ಫಲಿತಾಂಶದಲ್ಲಿ ಸೋಂಕು ಇಲ್ಲ ಎಂದೇ ಫಲಿತಾಂಶ ಬರಬಹುದು. ಇದನ್ನು ನಾವು ಫಾಲ್ಸ್ ನೆಗೆಟಿವ್ ಫಲಿತಾಂಶ ಎಂದು ಕರೆಯುತ್ತೇವೆ.
ಎಚ್.ಐ.ವಿ ಪಾಸಿಟಿವ್ ಆದಲ್ಲಿ ವ್ಯಕ್ತಿಗೆ ನಿಧಾನವಾಗಿ ಆತನ ರಕ್ತ ಫಲಿತಾಂಶವನ್ನು ಹೇಳುವುದು ಆವಶ್ಯಕ. ವ್ಯಕ್ತಿ ರಕ್ತ ಪರೀಕ್ಷಾ ಫಲಿತಾಂಶವನ್ನು ಎಷ್ಟರಮಟ್ಟಿಗೆ ಸ್ವೀಕರಿಸುತ್ತಾನೆ ಎನ್ನುವುದರ ಮೇಲೆ, ಇದು ನಿರ್ಧರಿತವಾಗುತ್ತದೆ. ಎಚ್.ಐ.ವಿ. ಸ್ಥಿತಿಯನ್ನು ಸ್ವೀಕರಿಸಲು, ಮಾನಸಿಕವಾಗಿ ಸ್ಥೈರ್ಯ ತುಂಬಿ, ರೋಗಿಯನ್ನು ಸಿದ್ಧ ಮಾಡುವುದು ಆವಶ್ಯಕವಾಗಿರುತ್ತದೆ.
ಎಚ್.ಐ.ವಿ. ಪಾಸಿಟಿವ್ ಸ್ಥಿತಿಯನ್ನು
ತಿಳಿದುಕೊಳ್ಳುವುದರಿಂದ ಆಗುವ
ಅನುಕೂಲಗಳು
ಎ) ವ್ಯಕ್ತಿ ತನ್ನ ಸ್ಥಿತಿಯ ಬಗ್ಗೆ ಆರಂಭಿಕ ಹಂತದಲ್ಲಿ ತಿಳಿಯುವುದರಿಂದ, ಬೇಗನೆ ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ಶಿಫಾರಸ್ಸುಗೊಳ್ಳ ಬಹುದು.
ಅವುಗಳಲ್ಲಿ ಈ ಕೆಳಗಿನವುಗಳು
ಒಳಗೊಂಡಿರುತ್ತವೆ :
ಅವಕಾಶವಾದಿ ಸೋಂಕುಗಳ ವಿರುದ್ಧ ರೋಗ ಪ್ರತಿಬಂಧ.
ಅವಕಾಶವಾದಿ ಸೋಂಕುಗಳನ್ನು ಆರಂಭಿಕ ಹಂತದಲ್ಲೆ ಪತ್ತೆ ಹಚ್ಚುವಿಕೆ.
ಎಚ್.ಐ.ವಿ. ಪ್ರಗತಿಯನ್ನು ಕಡಿಮೆ ಮಾಡಲು ಅವಕಾಶವಾದಿ ಸೋಂಕುಗಳಿಗೆ ಚಿಕಿತ್ಸೆ ನೀಡುವುದು ಅಥವಾ ಆ್ಯಂಟಿ ರೆಟ್ರೋ ವೈರಸ್ ಚಿಕಿತ್ಸೆ ನೀಡುವುದು.
ಬಿ) ತಮ್ಮ ಲೈಂಗಿಕ ಸಂಗಾತಿಗಳಿಗೆ ರೋಗ ಹರಡದಂತೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳಬಹುದು ಅಥವಾ ಗರ್ಭಿಣಿ ಸ್ತ್ರೀಯಾಗಿದ್ದರೆ, ತಮ್ಮ ಮಗುವಿಗೆ ಅದು ಹರಡುವುದನ್ನು ತಪ್ಪಿಸಬಹುದು.
ಸಿ) ಸೋಂಕು ತಗುಲಿದ ವಕ್ತಿಗಳು ಪುನಃ ಎಚ್.ಐ.ವಿ. ಸೋಂಕಿಗೆ ಒಳಗಾಗುವುದನ್ನು ತಪ್ಪಿಸಬಹುದು.
ಎ.ಆರ್.ಟಿ. ಔಷಧ
ಎಚ್. ಐ. ವಿ. ವೈರಸನ್ನು ತಡೆಗಟ್ಟಲು ಅಥವಾ ಸಂಪೂರ್ಣವಾಗಿ ಗುಣಪಡಿಸಲು ಈ ಔಷಧಿಯಿಂದ ಸಾಧ್ಯವಿಲ್ಲ. ಎ.ಆರ್.ಟಿ. ಚಿಕಿತ್ಸೆಯು ವೈರಸ್ ಮೇಲೆ ನೇರವಾಗಿ ಪರಿಣಾಮ ಉಂಟುಮಾಡುವುದರಿಂದ, ದೇಹದಲ್ಲಿ ಅದು ರೋಗ ನಿರೋಧಕ ಶಕ್ತಿ ಕ್ಷೀಣಿಸುವುದನ್ನು ತಡವಾಗುವಂತೆ ಮಾಡುತ್ತದೆ. ಈ ಔಷಧ ತೆಗೆದು ಕೊಳ್ಳವುದರಿಂದ ಸುದೀರ್ಘವಾದ ಉತ್ತಮ ಜೀವನ, ಆರೋಗ್ಯಕರ ಜೀವನ ನಡೆಸಲು ಸಾಧ್ಯ.
ಈ ಎ.ಆರ್.ಟಿ. ಔಷಧವು ಎಚ್. ಐ.ವಿ ಸೋಂಕಿತರು, ಅವರ ಲೈಂಗಿಕ ಸಂಗಾತಿಗಳಿಗೆ ಅಥವಾ ರಕ್ತದಾನದ ಮೂಲಕ ಇತರಿರಿಗೆ ಹರಡುವುದನ್ನು ತಡೆಯಲಾರದು ಎನ್ನುವುದು ಮುಖ್ಯವಾದ ಸಂಗತಿ.
ಎ.ಆರ್.ಟಿ. ದೊರೆಯುವ
ಕೇಂದ್ರ
ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರದಲ್ಲಿ ಉಚಿತವಾಗಿ ಈ ಔಷಧವನ್ನು ಪಡೆದುಕೊಳ್ಳಬಹುದು. ಇಲ್ಲಿರುವ ನುರಿತ ವೈದ್ಯರು ನೀಡುವ ಚಿಕಿತ್ಸೆಯಿಂದ ಉತ್ತಮವಾದ ಸಂತೋಷದಾಯಕ ಜೀವನವನ್ನು ಒಬ್ಬ ಎಚ್.ಐ.ವಿ. ಸೋಂಕಿತ ವ್ಯಕ್ತಿ ತನ್ನದಾಗಿಸಿಕೊಳ್ಳಬಹುದು. ಈ ಔಷಧವನ್ನು ಸೋಂಕಿತ ವ್ಯಕ್ತಿಗಳು ಜೀವನ ಪರ್ಯಂತ ಸೇವಿಸಬೇಕು. ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಈ ಔಷಧವನ್ನು ಪಡೆದುಕೊಳ್ಳಬೇಕು. ಈ ಎ.ಆರ್.ಟಿ. ಔಷಧವು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸಹ ಲಭÂವಿರುತ್ತದೆ.