ಏನು ಮಾಡುವುದಿದ್ದರೂ ಪ್ರೀತಿಯಿಂದ ಮಾಡಿ. ಅದರಿಂದ ನಿಮಗೆ ಯಾವ ನಷ್ಟವೂ ಇಲ್ಲ. ನಷ್ಟವಾಗುವುದೇ ಇದ್ದರೆ ಕೆಲಸದಲ್ಲಿರುವ ನಿಮ್ಮ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದಿರುವ ಬಾಸ್‌ಗೆ ಅಥವಾ ಆಫೀಸಿಗೆ ಆಗುತ್ತದೆ! ಅದು ಒನ್ ವೇ ಲವ್. ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ರಿಸೆಪ್ಷನಿಸ್ಟ್ ಹುಡುಗಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್‌ಗೆ ಪ್ರೇಮಾಂಕುರವಾಗಿತ್ತು. ಆದರೆ ಅವಳಿಗೆ ಅದನ್ನು ಹೇಳಿರಲಿಲ್ಲ. ಅವಳೇನೂ ಸುಂದರಿಯಲ್ಲ. ನೋಡಲು ಸಾಮಾನ್ಯವಾಗಿದ್ದಳು. ಆದರೂ ಅವನಿಗೆ ಅವಳೆಂದರೆ ಪ್ರಾಣ. ಅವಳೇ ಬದುಕು. ಇಡೀ ದಿನ ಅವಳ ಬಗ್ಗೆ ಕನಸು ಹೆಣೆಯುತ್ತಿದ್ದ. ಒಟ್ಟಿಗೆ ಬದುಕು ಕಟ್ಟಿಕೊಳ್ಳುವ ಬಗ್ಗೆ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಿದ್ದ. 'ಅವಳು ನಿನ್ನನ್ನು ಲವ್ ಮಾಡ್ತಾಳೇನೋ?' 'ಗೊತ್ತಿಲ್ಲ.' 'ಮತ್ಯಾಕೆ ಸುಮ್ಮನೆ ಕನಸು ಕಾಣಿ¤àಯಾ? ಮೊದಲು ಹೋಗಿ ಅವಳಿಗೆ ಹೇಳು' ಅನುಭವಿ ಸ್ನೇಹಿತರು ಉಪದೇಶ ಮಾಡಿದರು. ಅವನಿಗೂ ಸರಿಯೆನ್ನಿಸಿತು. ಒಂದು ದಿನ ಪ್ರೊಪೋಸ್ ಮಾಡಲು ನಿರ್ಧರಿಸಿದ. ಅವನು ತನ್ನನ್ನು ಪ್ರೀತಿಸುತ್ತಿದ್ದಾನೆಂದು ರಿಸೆಪ್ಷನಿಸ್ಟ್‌ಗೆ ಮೊದಲಿನಿಂದಲೂ ಗೊತ್ತಿತ್ತು. ಆದರೂ ತನಗೇನೂ ಗೊತ್ತಿಲ್ಲವೆಂಬಂತೆ ತನ್ನ ಪಾಡಿಗೆ ತಾನಿದ್ದಳು. ಸೇಲ್ಸ್ ಎಕ್ಸಿಕ್ಯೂಟಿವ್ ಕೊನೆಗೂ ಅವಳನ್ನು ಕಾಫಿಗೆ ಕರೆದೊಯ್ದು 'ನನ್ನನ್ನು ಪ್ರೀತಿಸ್ತೀಯಾ?' ಅಂದ. ಅವಳು ಇಲ್ಲ ಅಂದಳು. ಅವನು ಅವಳನ್ನೆಷ್ಟು ಪ್ರೀತಿಸುತ್ತಾನೆಂಬುದನ್ನು ತಿಳಿದಿದ್ದ ಸ್ನೇಹಿತರು ಇವನ ಕತೆ ಮುಗಿಯಿತು ಎಂದುಕೊಂಡರು. ಎದೆ ಒಡೆದುಕೊಂಡು ಸಿಗರೇಟು, ಮದ್ಯ, ಡ್ರಗ್ಸ್‌ನ ದಾಸನಾಗುತ್ತಾನೆಂದು ಲೆಕ್ಕ ಹಾಕಿದರು. ಆದರೆ ಅಚ್ಚರಿಯೆಂಬಂತೆ ಅವನು ಚೆನ್ನಾಗಿಯೇ ಇದ್ದ. ಮೊದಲಿನಂತೆ ಎಲ್ಲರ ಜೊತೆಗೂ ನಗುನಗುತ್ತ ಮಾತಾಡುತ್ತಿದ್ದ. ಅವಳ ಜೊತೆಗೂ. ಕುತೂಹಲ ತಡೆಯಲಾಗದೆ ಸ್ನೇಹಿತರು ಕೇಳಿದರು. 'ಯಾಕೆ ಗುರೂ, ನಿಂಗೆ ಬೇಜಾರಾಗಿಲ್ವಾ?' 'ಬೇಜಾರು ಯಾಕೆ ಮಾಡ್ಕೊಳ್ಳಿ? ನನ್ನನ್ನು ಯಾವತ್ತೂ ಪ್ರೀತಿ ಮಾಡದೇ ಇದ್ದವಳನ್ನು ನಾನು ಕಳಕೊಂಡೆ ಅಷ್ಟೆ. ಆದರೆ ತನ್ನನ್ನು ಬೇರೆಲ್ಲರಿಗಿಂತ ಹೆಚ್ಚು ಪ್ರೀತಿಸುತ್ತಿದ್ದವಳನ್ನು ಅವಳು ಕಳಕೊಂಡಳು. ಲಾಸ್ ಆಗಿದ್ದು ಅವಳಿಗೇ.'