Friday, May 24, 2013
Last Updated: 5:45:33 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕೃಷಿ-ವಾಣಿಜ್ಯ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ರಬ್ಬರ್‌ ಅಳಿಸೀತೇ ಕಣ್ಣೀರು?
    • ಕಡಿಮೆಯಾಯ್ತಾ ಕಂಗಿನ ರಂಗು?
    • ರಬ್ಬರ್‌ ತೋಟ

      • ಗೋಪಾಲ್‌ ಎಸ್‌. ಯಡಗೆರೆ | Jan 27, 2013

        ಅಡಿಕೆಯನ್ನು ನಂಬಿದ್ದ ರೈತರ ಮಾನ ಹೋಗಿದೆ. ಈಗಾಗಲೇ ಕ್ವಿಂಟಾಲ್‌ಗೆ ಸಾವಿರ ರೂ. ಬೆಲೆ ಇಳಿದು ಹೋಗಿದೆ. ರಬ್ಬರ್‌ ಕಡೆ ಮುಖ ಮಾಡುವ ರೈತರೆ ಯೋಚನೆಗೆ ಅಡಿಕೆ ಬೆಲೆ ಮತ್ತಷ್ಟು ಪುಷ್ಟಿ ನೀಡುತ್ತಿದೆ. ಇದು ಅಡಿಕೆ ಯುಗಾಂತ್ಯದ ಸೂಚನೆಯೇ?

        ಒಂದು ಕಾಲದಲ್ಲಿ ಚಿನ್ನದ ಬೆಳೆ ಎನಿಸಿಕೊಂಡಿದ್ದ ಅಡಿಕೆಯ ಮಾನ ಈಗ ಉಳಿದಿಲ್ಲ. ರೈತರ ಮುಖದಲ್ಲಿ ನಗುವೂ ಇಲ್ಲ. ಹಿತ್ತಾಳೆ ಚಿನ್ನ ಎಂದು ರೈತರೇ ಗೊಣಗುವ ಪರಿಸ್ಥಿತಿ ಎದುರಾಗಿದೆ.  ಈ ಹಿತ್ತಾಳೆ ಚಿನ್ನವನ್ನು  ಮುಂದಿಟ್ಟುಕೊಂಡು ಪರದಾಡುವ ಬದಲು ಬೇರೆ ಏನನ್ನಾದರೂ ಉದ್ಯೋಗ ಮಾಡುವ ಎನ್ನುವ ರೈತರೂ ಇಲ್ಲದಿಲ್ಲ. ಹೀಗಾಗಿಯೇ ಅಡಿಕೆ ತೋಟಗಳ ರೈತರಲ್ಲಿ ಕೆಲವರು ಇದ್ದಲ್ಲೇ ನವೆಯುತ್ತಿದ್ದರೆ, ಇನ್ನು ಕೆಲವರು ರಬ್ಬರ್‌ ಎಂಬ ಇನ್ನೊಂದು ವಾಣಿಜ್ಯ ಬೆಳೆಯತ್ತ ದಾಪುಗಾಲನ್ನಿಟ್ಟಿದ್ದಾರೆ. ಇದಾವುದರೂ ಉಸಾಬರಿಯೂ ಬೇಡ ಎಂದು ಇದ್ದ ಜಮೀನನ್ನು ಮಾರಿ ಕೈತೊಳೆದುಕೊಂಡು ಪಟ್ಟಣ ಸೇರುವವರ ಸಂಖ್ಯೆ ಬೆಳೆಯುತ್ತಲೇ ಇದೆ.

        ಮಲೆನಾಡು ಮತ್ತು ಕರಾವಳಿಯಲ್ಲೂ ಅಡಿಕೆಗೆ ಈಗ ಆ ರಾಜ್ಯ ಮರ್ಯಾದೆ ಇಲ್ಲ.  ರಾಜ್ಯದ 20 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಅಡಿಕೆ ಬಹು ಆಯಾಮಗಳಲ್ಲಿ ತನ್ನ ದರ್ಶನ ಮಾಡಿಸಿಕೊಂಡು ಸಾಕಷ್ಟು ಟೀಕೆ ಟಿಪ್ಪಣಿಗಳೂ ಕಾರಣವಾಗಿದೆ. ಗುಟ್ಕಾ ಬಂದು ಅಡಿಕೆ ಮಾನ ಉಳಿಸಿತು ಎಂದು ಅಂದುಕೊಂಡಿದ್ದ ರೈತರು ಈಗ ಇದೇ ಗುಟ್ಕಾವೇ ನಮ್ಮ ಮಾನ ಮರ್ಯಾದೆ ಎಲ್ಲವನ್ನೂ ಹರಾಜು ಮಾಡಿದ್ದು. ನಮ್ಮನ್ನು ಬೀದಿಗೆ ತಂದು ನಿಲ್ಲಿಸಿದ್ದು ಎಂದು ಗೊಣಗುತ್ತಾರೆ.

         1992 ರ ಹೊತ್ತಿಗೆ ಅಡಿಕೆಗೊಂದು ರಾಜ್ಯ ಮರ್ಯಾದೆ ಬಂದು ಬಿಟ್ಟಿತ್ತು. ಇದ್ದಕ್ಕಿದ್ದಂತೆ ಅಡಿಕೆ ಬೆಲೆ ಏರತೊಡಗಿದ್ದು, ಅದನ್ನು ಹಿಡಿಯುವವರೇ ಇಲ್ಲವಾಗಿದ್ದರು. ಅಡಿಕೆ  ಬೆಳೆಗಾರರಂತೂ ತಾವು ಯಾವ ರಾಜ ಮಹಾರಾಜರಿಗೂ ಕಡಿಮೆಯಿಲ್ಲ ಎಂದು ಬೀಗಿದ್ದೇ ಬೀಗಿದ್ದು. ಉಳಿದ ರೈತರು ಇವರನ್ನು ನೋಡಿ ಹೊಟ್ಟೆ ಉರಿಸಿಕೊಂಡಿದ್ದು ಈಗ ಇತಿಹಾಸ. ಅದೇ ತೋಟಗಳಲ್ಲಿ ಈಗ ನರಳಾಟದ ಧ್ವನಿ ಅಸ್ಪಷ್ಟವಾಗಿ ಕೇಳಿಸುತ್ತಿದೆ. ಕಳೆದ ಒಂದು ದಶಕದಲ್ಲಿ ಅಡಿಕೆ ತೋಟದಲ್ಲಿ ಎದ್ದ ಬಿರುಗಾಳಿ ಇನ್ನೂ ನಿಂತಿಲ್ಲ. ಧಾರಣೆಯಲ್ಲಿನ ಏರಿಳಿತ ಈ ರೈತರನ್ನು ಕಂಗಾಲು ಮಾಡಿದೆ. ಆದರೆ ಅಡಿಕೆಗೆ ಚಿನ್ನದ ಬೆಲೆ ಎಂಬ ಸುದ್ದಿಯ ಬೆನ್ನಲ್ಲೇ ಅಡಿಕೆ ಕೃಷಿಯ ಸುತ್ತಮುತ್ತ ಕಾಣಿಸಿಕೊಂಡ ಬೆಲೆಯೇರಿಕೆಗೆ ಮಾತ್ರ ಯಾವುದೇ ಬಿಸಿ ತಟ್ಟಿಯೇ ಇಲ್ಲ. ಅಡಿಕೆಗೆ ಬೇಕಾದ ಗೊಬ್ಬರದಿಂದ ಹಿಡಿದು, ಕೂಲಿ ನೀಡಿಕೆಯವರೆಗೆ ಕಾಣಿಸಿಕೊಂಡ ಏರಿಕೆ ಕ್ರಮಾಂಕ ಇಳಿಯುವಂತೆ ಕಾಣುತ್ತಿಲ್ಲ. ಹಾಳು ಬೇಕಾದರೂ ಬಿಡಬಹುದು, ಆದರೆ ಆಳನ್ನು ಕರೆದು ಕೆಲಸ ಮಾಡಿಸಲು ಸಾಧ್ಯವಾ ಎಂದು ಬಾಯಿ ತೆರೆದು ಪ್ರಶ್ನಿಸುವಂತಾಗಿತ್ತು. ಆದರೆ ಅನಿವಾರ್ಯ. ಬಿಡುವಂತಿಲ್ಲ, ಅನುಭವಿಸುವಂತಿಲ್ಲ. ಇಷ್ಟಾಗಿಯೂ ಕೂಲಿಕಾರರಾದರೂ ಸಿಗುತ್ತಾರಾ ಎಂದರೆ ಅದೂ ಇಲ್ಲ. ಹೀಗಾಗಿ ಅಡಿಕೆ ತೋಟದ ಮಂದಿ ಉಸ್ಸಪ್ಪಾ ಎಂದು ಕೈ ಕಾಲು ಚಾಚಿ ಕೂತುಬಿಟ್ಟಿದ್ದಾರೆ. ಇನ್ನು ಸಾಧ್ಯವೇ ಇಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಕೂಗುತ್ತಿದ್ದಾರೆ.

        ವಿಸ್ತರಣೆಯೇ ಇಲ್ಲ

        ಹೀಗಾಗಿ ಕಳೆದ ಎರಡು ಮೂರು ವರ್ಷಗಳಲ್ಲಿ ಅಡಿಕೆ ತೋಟದ ವಿಸ್ತರಣೆ ಎಂಬ ಕನಸನ್ನು ರೈತರು ಅಕ್ಷರಶಃ ಕೈಬಿಟ್ಟಿದ್ದಾರೆ.1992 ರಲ್ಲಿ 2.5 ಲಕ್ಷ  ಮೆಟ್ರಿಕ್‌ ಟನ್‌ ಅಡಿಕೆ ಉತ್ಪಾದನೆ ಬಳಿಕ ಏರುಗತಿಯಲ್ಲಿ ಸಾಗಿ 2005 ಕ್ಕೆ ಸರಿ ಸುಮಾರು 5 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆಗೆ ಬಂದು ನಿಂತಿತು.

        ಆದರೆ ಅಲ್ಲಿಂದ ಮತ್ತೆ ಮುಂದಕ್ಕೆ ಅದು ಹೋಗಲೇ ಇಲ್ಲ. 2009 ರಲ್ಲಿ 4.83 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆಯಾಗಿದ್ದರೆ, ಕಳೆದ ವರ್ಷ 4. 70 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆಗೆ ಬಂದು ನಿಂತಿದೆ.  2006 ರ ಬಳಿಕ ಉತ್ಪಾದನೆಯಲ್ಲಿ ಹೆಚ್ಚಳವೇ ಕಾಣಿಸಿಲ್ಲ. ಅಂದರೆ ವಿಸ್ತರಣೆ ನಿಂತಿರುವ ಜೊತೆಗೆ ಸಾಕಷ್ಟು ಅಡಿಕೆ ತೋಟಗಳ ನಿರ್ವಹಣೆಯೂ ಕಡಿಮೆಯಾಗಿದೆ. ಜೊತೆಗೆ ಕೆಲವು ತೋಟಗಳನ್ನು ಕಡಿದು ಬೇರೆ ಬೆಳೆ ಹಾಕಲಾಗಿದೆ ಎಂಬುದನ್ನು ಈ  ಅಂಕಿ ಅಂಶಗಳು ಹೇಳುತ್ತವೆ.

        1995 ರಿಂದ ಆರಂಭಗೊಂಡು 2000 ರ ಆಸುಪಾಸಿನಲ್ಲಿ ಅಡಿಕೆ ಬೆಳೆಯ ವಿಸ್ತರಣೆ ಕಂಡರೆ ಎಂತಹವರೂ ಗಾಬರಿಯಾಗಬೇಕಾಗಿತ್ತು. ಎಲ್ಲಿ ನೋಡಿದರೂ ಅಡಿಕೆ ತೋಟಗಳೇ. ಗುಡ್ಡಗಳಿಗೆ ಪೈಪ್‌ ಹಾಕಿ ಅಡಿಕೆ ತೋಟ ಮಾಡುವುದನ್ನು ನೋಡಿದರೆ ಯಾರಾದರೂ ಹುಚ್ಚರು ಎನ್ನಬೇಕು. ಆಗ  ಅಂಥ ಹುಚ್ಚು ಹತ್ತಿತ್ತು. ಆದರೆ 2002 ರಲ್ಲಿ ಬಂದ ಭೀಕರ ಬರಗಾಲದಲ್ಲಿ ಸಾಕಷ್ಟು ತೋಟಗಳು ಹೇಳ ಹೆಸರಿಲ್ಲದಂತೆ ನಾಶವಾಗಿದ್ದು ಇನ್ನೂ ಕಣ್ಣ ಮುಂದೆಯೇ ಇದೆ.

        ಅಡಿಕೆಗೆ ಬಂದ ಕುತ್ತು ಇದು ಮಾತ್ರವಲ್ಲ. ಆಮದು ಅಡಿಕೆಯ ಮೇಲೆ ಸರ್ಕಾರ ಸರಿಯಾದ ನಿಗಾ ಇಡದೆ ಇದ್ದುದು ದೊಡ್ಡ ಸಮಸ್ಯೆಗೆ ಕಾರಣವಾಯಿತು. ಆಮದು ನೀತಿಯಲ್ಲಿ ಸರ್ಕಾರದ ದುರ್ಬಲ ಹೆಜ್ಜೆಯಿಂದಾಗಿ ಕಳೆದ ವರ್ಷ ನಮ್ಮ ದೇಶಕ್ಕೆ ಸರಿ ಸುಮಾರು 3.95 ಲಕ್ಷ ಕ್ವಿಂಟಾಲ್‌ ಕಳಪೆ ಗುಣಮಟ್ಟದ ಅಡಿಕೆ ಆಮದಾಗಿದೆ. ಇದರಲ್ಲಿ ಇಂಡೋನೇಶಿಯಾದ ಅಡಿಕೆಯ ಪಾಲೇ ಬಹು ದೊಡ್ಡದು. 2. 32 ಲಕ್ಷ ಕ್ವಿಂ.  ಅಡಿಕೆ ಇಲ್ಲಿಂದಲೇ ಬಂದಿದ್ದರೆ, ಬಾಂಗ್ಲಾದಿಂದ 63 ಸಾವಿರ ಕ್ವಿಂ. ಬಂದಿದೆ. ಇದು ಲೆಕ್ಕಕ್ಕೆ ಸಿಕ್ಕಿದ್ದು. ಇನ್ನು ಲೆಕ್ಕಕ್ಕೆ ಸಿಗದೆ ಬಂದ ಅಡಿಕೆ ಎಷ್ಟು ಎಂಬುದು ಯಾರಿಗೂ ಗೊತ್ತಿಲ್ಲ. ನಮ್ಮ ವ್ಯಾಪಾರಿಗಳು ಯಾವಾಗಲೂ ಚಾಪೇ ಕೆಳಗೇ ನುಸುಳುತ್ತಿರುತ್ತಾರೆ.

        ಬಹುತೇಕ ಎಲ್ಲ ಸಂದರ್ಭಗಳಲ್ಲಿಯೂ ಸರ್ಕಾರ ಅಡಿಕೆ ಕುರಿತು ಸರಿಯಾದ ರೀತಿಯಲ್ಲಿ ವ್ಯವಹರಿಸಲೇ ಇಲ್ಲ. ಗುಟ್ಕಾ ನಿಷೇಧದ ಕುರಿತು ತೋರಿದ ಆಸಕ್ತಿ  ಅಡಿಕೆಗೆ ಸಂಬಂಧಿಸಿದ ಇನ್ನಾವುದೇ ವಿಷಯದಲ್ಲಿ ತೋರಲಿಲ್ಲ. ಒಂದು ಪಕ್ಷ ಈ ಬಗ್ಗೆ ಸರಿಯಾಗಿ ಗಮನ ಹರಿಸಿದ್ದರೆ ಅಡಿಕೆಗೆ ಖಂಡಿತಾ ಈ ದುಸ್ಥಿತಿ ಬರುತ್ತಿರಲಿಲ್ಲ. ಅಡಿಕೆ ಬೆಳೆಗಾರರು ಸಾಯುತ್ತಿರಲಿಲ್ಲ. 2009ರಲ್ಲಿ ಅಡಿಕೆ ಸಮಸ್ಯೆ ಕುರಿತು  ಅಧ್ಯಯನ ನಡೆಸಿ ವರದಿ ನೀಡುವಂತೆ ಗೋರಕ್‌ ಸಿಂಗ್‌ ನೇತೃತ್ವದ ಸಮಿತಿಗೆ ಕೇಂದ್ರ ಸರ್ಕಾರ ಸೂಚಿಸಿತ್ತು. ಆದರೆ 2009 ರಲ್ಲಿಯೇ ಈ ಸಮಿತಿ ವರದಿ ನೀಡಿದ್ದರೂ ಸರ್ಕಾರ ಈ ಬಗ್ಗೆ ಈ ಕ್ಷಣದವರೆಗೂ ಕ್ರಮ ಕೈಗೊಂಡಿಲ್ಲ. ಕೊನೆಗೆ ರಾಜ್ಯ ಹೈಕೋರ್ಟ್‌ ಬಗ್ಗೆ ಕೇಂದ್ರಕ್ಕೆ ಎಚ್ಚರಿಕೆ ನೀಡಿ ತಕ್ಷಣ ವರದಿ ಜಾರಿಗೊಳಿಸುವಂತೆ ಸೂಚಿಸಿದ್ದರೂ ಸರ್ಕಾರ ತನ್ನ ನಿರ್ಲಕ್ಷÂ ಧೋರಣೆ ತಾಳುತ್ತಿದೆ ಎಂದರೆ ಇದಕ್ಕಿಂತ ದುರಂತ ಇನ್ನೊಂದಿಲ್ಲ.
         ಈ ಎಲ್ಲ ಬೆಳವಣಿಗೆಯಿಂದಾಗಿಯೇ ಅಡಿಕೆ ಇಂದು ಈ ಪರಿಸ್ಥಿತಿಗೆ ಬಂದು ನಿಂತು ಬಿಟ್ಟಿದೆ. ಅಡಿಕೆ ಸಹವಾಸ ಸಾಕು ಎಂದು ರೈತರಿಗೆ ಅನಿಸಿಬಿಟ್ಟಿದೆ. 2011 ರ ಅಡಿಕೆ ಧಾರಣೆಗೆ ಹೋಲಿಸಿದರೆ ಈ ವರ್ಷ ಸರಿ ಸುಮಾರು ಕ್ವಿಂ. ಒಂದಕ್ಕೆ 1 ಸಾವಿರ ರೂ. ಕಡಿಮೆಯಾಗಿದೆ. ಆದರೆ ರೈತರು ಬದುಕಬೇಕಲ್ಲ. ಹೀಗಾಗಿಯೇ ಮಲೆನಾಡಿನ ತುಂಬೆಲ್ಲಾ ರಬ್ಬರ್‌ನ ಸದ್ದು. ಅಡಿಕೆ ಯುಗ ಮುಗಿದಂತೆ ಕಾಣುತ್ತಿದ್ದು, ಹೊಸದಾಗಿ ರಬ್ಬರ್‌ ಯುಗ ಆರಂಭಗೊಂಡಂತೆ ಕಾಣುತ್ತಿದೆ. ನೀರು ಬೇಕಾಗಿಲ್ಲ. ಬೀಳು ಭೂಮಿಯಲ್ಲಿ ಚಿನ್ನ ತೆಗೆಯಬಹುದು ಎಂದು ರೈತರು ಹೊರಟಿದ್ದಾರೆ. ಹೀಗಾಗಿ ಗುಡ್ಡದ ಮೇಲೆ ಹಾಕಿದ್ದ ಅಡಿಕೆಗೆ ಮೋಕ್ಷ ಕರುಣಿಸಿ ರಬ್ಬರ್‌ ಎಬ್ಬಿಸುತ್ತಿದ್ದಾರೆ. ಸದ್ಯಕ್ಕೆ ರಬ್ಬರ್‌ ಲಾಭದಾಯಕ ಬೆಳೆ ಎನ್ನಲು ಅಡ್ಡಿಯಿಲ್ಲ. ಫಸಲು ತೆಗೆಯುತ್ತಿರುವ ರೈತರು ಸಮೃದ್ಧವಾಗಿದ್ದಾರೆ. ಆದರೆ ದೊಡ್ಡ ಸಂಖ್ಯೆಯ  ರೈತರಿಗೆ ರಬ್ಬರ್‌ ಬೆಳೆಯುವ ಭೂಮಿ ಇಲ್ಲ.

        ಇನ್ನು ಒಂದೆರಡು ಎಕರೆ ಭೂಮಿ ಇಟ್ಟುಕೊಂಡವರು ರಬ್ಬರ್‌ ಬೆಳೆಯಬೇಕೆಂದರೆ ಸರಿ ಸುಮಾರು 9 ವರ್ಷ ಇದನ್ನು ಸಾಕಬೇಕಲ್ಲ? ಅಲ್ಲಿಯವರೆಗೆ ನಮ್ಮನ್ನು ಸಾಕುವವರು ಯಾರು ಎಂಬ ಸಮಸ್ಯೆಯಲ್ಲಿ ಸಿಕ್ಕಿದ್ದಾರೆ. ಒಣ ಭೂಮಿಗೆ ಒಳ್ಳೆ ಬೆಲೆ ಬರುತ್ತಿದೆ. ಇದ್ದವರು ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ಉಳ್ಳವರುಕೊಂಡು ರಬ್ಬರ್‌ ಬೆಳೆಯುತ್ತಿದ್ದಾರೆ. ಮಲೆನಾಡಿನ ತುಂಬೆಲ್ಲಾ ರಬ್ಬರ್‌ ಕಾಣಿಸತೊಡಗಿದೆ. ಅಡಿಕೆಯಲ್ಲಿ ಹೋದ ಮಾನ ರಬ್ಬರ್‌ನಲ್ಲಿ ಹುಡುಕುತ್ತಿದ್ದಾರೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus