Saturday, May 25, 2013
Last Updated: 7:34:13 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕೃಷಿ-ವಾಣಿಜ್ಯ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನೂರು ಮನೆ ಕಂಡನ ಮಗೆ,ನಮ್ಮನೆಯೇ ನಮಗೆ ಮೇ ಲು
    • ಮನೆ ಮೆಚ್ಚು
    • ಕಡಿಮೆಯಾಯ್ತಾ ಕಂಗಿನ ರಂಗು?
    • ನಮ್ಮದೂ ಒಂದು ಮನೆ ಅಂತ ಇದ್ದರೆ ಸಾಲದು.

      • ಆರ್ಕಿಟೆಕ್ಟ್ ಕೆ. ಜಯರಾಮ್‌ | Jan 27, 2013

        ನಮ್ಮದೂ ಒಂದು ಮನೆ ಅಂತ ಇದ್ದರೆ ಸಾಲದು. ಅದು ಬೇರೆ ಮನೆಗಳಿಗಿಂತ ವಿಭಿನ್ನವೂ ಆಗಿರಬೇಕು. ಕಾಂಕ್ರೀಟ್‌ ಕಾಡುಗಳಲ್ಲಿ ಎಲ್ಲವೂ ಒಂದೇ ರೀತಿ ಮನೆಗಳು. ಉಳಿದವರ ಮನೆ ಮಧ್ಯೆ ವಿಶೇಷವಾಗಿರುವಂಥ ಮನೆಗಳನ್ನು ಹುಡುಕುವುದೂ ಇತ್ತೀಚೆಗೆ ಅಸಾಧ್ಯ. ಹಾಗಿದ್ದರೆ ನಿಮ್ಮ ಮನೆ ಚೂರ ಭಿನ್ನವಾಗಿರಲು ಏನು ಮಾಡಬೇಕು?

        ಬಡಾವಣೆಗಳು ಒಂದು ಕಾಲದಲ್ಲಿ ಡೆವಲಪ್‌ ಆಗುತ್ತದೆ ಹಾಗೂ ಆ ಕಾಲದಲ್ಲಿ ಜನಪ್ರಿಯವಾಗಿರುವ ವಿನ್ಯಾಸದಂತೆ ಹೆಚ್ಚಾ ಕಡಿಮೆ ಎಲ್ಲಾ ಮನೆಗಳೂ ಒಂದೇ ರೀತಿ ಇರುತ್ತವೆ.  ಮರಗಿಡಗಳೂ ಕೂಡ ಒಂದೇ ಮಾದರಿಯವಾಗಿದ್ದು ಮನೆ ಹುಡುಕಲು ಹರಸಾಹಸ ಪಡಬೇಕಾಗುತ್ತದೆ.  
        ಬೆಂಗಳೂರಿನ ಹಳೇ ಬೀದಿಗಳನ್ನು ನೋಡಿ. ಎಲ್ಲಾ ಮನೆಗಳೂ ಒಂದೇ ರೀತಿ. ವಿಳಾಸ ಇಲ್ಲದೇ ಮನೆ ಹುಡುಕುವುದು ನೀರ ಮೇಲೆ ಹೆಜ್ಜೆ ಇಟ್ಟಂತೆ. ಅದಕ್ಕೆ  ನಿಮ್ಮ ಮನೆಗೊಂದು ಪ್ರತ್ಯೇಕ ಐಡೆಂಟಿಟಿ ಇದ್ದರೆ ಈ ರೀತಿ ಆಗುವುದಿಲ್ಲ.  ಒಮ್ಮೆ ನೋಡಿದರೆ, ಇದೇ ಆ ಮನೆ ಎಂದು ಲಕ್ಷಾಂತರ ಮನೆಗಳಿರುವ ಬೃಹತ್‌ ನಗರಗಳಲ್ಲೂ ಸುಲಭವಾಗಿ ಗುರುತು ಹಿಡಿಯುವಂತಾಗುತ್ತದೆ. ಹೀಗೆ ಸ್ವಂತಿಕೆಯ ಛಾಪು ಮೂಡಿಸುವುದು ಹೇಗೆ?

        ವಿವಿಧ ಶೈಲಿಯ ವಿನ್ಯಾಸಗಳು

        ಮನೆಯನ್ನು ನಾನಾರೀತಿ ಡಿಸೈನ್‌ ಮಾಡ ಬಹುದು. ಒಳಗೆ ನಮಗೆ ಅನುಕೂಲಕರವಾಗಿ ವಿನ್ಯಾಸ ಮಾಡುವಂತೆಯೇ ಹೊರಗಿನ ಭಾಗ ವನ್ನೂ ಅಷ್ಟೇ ಆಸಕ್ತಿಯಿಂದ ಮೂಡಿಸಬೇಕು. ನಿಮಗೆ ಇಷ್ಟ
        ವಾಗುವ ಡಿಸೈನ್‌ ಅಂಶಗಳನ್ನು ಮನೆಗೆ ಅಳವಡಿಸಿ. ಅದು ಅಲಂಕಾರಿಕ ಹೂ ಕುಂಡಗಳಿರ ಬಹುದು ಇಲ್ಲವೇ ವಿಶಿಷ್ಟ ಮಾದರಿಯ ಗ್ರಿಲ್‌ ಇರಬಹುದು.  ನೋಡಿದ ಕೂಡಲೆ ಮನಸ್ಸಿಗೆ ನಾಟುವಂತಿರ ಬೇಕು. ನಿಮಗೆ ಆರ್ಚ್‌ಗಳು ಇಷ್ಟವಾದಲ್ಲಿ, ಅದನ್ನೇ ಒಂದು ವಿನ್ಯಾಸದ ಫೀಚರ್‌ ಆಗಿ ಉಪಯೋಗಿಸಿ. ಯಾವುದೇ ಕಾರಣಕ್ಕೂ  ಅಕ್ಕ ಪಕ್ಕದವರು ಮಾಡಿದ್ದಾರೆಂದು ಪೈಪೋಟಿಗೆ ಬಿದ್ದು, ಅದೇ ರೀತಿಯಲ್ಲಿ ಡಿಸೈನ್‌ ಮಾಡಲು ನೋಡಬೇಡಿ. ಇದು ನಿಮ್ಮ ಮನೆಗೆ ಪ್ರತ್ಯೇಕ ಐಡೆಂಟಿಟಿ ಕೊಡುತ್ತದೆ.

        ಅದೆ ಗೋಡೆ ಅದೆ ಸೂರು ಆದರೂ..,!

        ಎಲ್ಲರ ಮನೆಯಲ್ಲೂ ಇರುವುದು ಕೆಲವೇ ಕಟ್ಟಡದ ಮುಖ್ಯ ಭಾಗಗಳಾದರೂ ಇವುಗಳನ್ನು ನಾವು ಹೇಗೆ ಬಳಸುತ್ತೇವೆ.  ನಮ್ಮ ಮನೆ ಹೇಗೆ ಕಟ್ಟಿಕೊಳ್ಳಲಾಗಿದೆ ಎಂಬುದನ್ನಾಧರಿಸಿ ನಮ್ಮ ಸ್ವಂತಿಕೆ ಇರುತ್ತದೆ.  ಕಿಟಕಿಗಳ ಒಟ್ಟು ವಿಸ್ತೀರ್ಣ ಒಂದು ಕೊಠಡಿಯ ಶೇ. 20-25ರಷ್ಟು ಇದ್ದರೂ ಅವು ಅಗಲವಾಗಿ ಒಂದೇ ಇದೆಯೇ ಇಲ್ಲ ಅಗಲ ಕಡಿಮೆ, ಉದ್ದ ಹೆಚ್ಚು ಇದೆಯೇ ಎಂಬುದನ್ನಾಧರಿಸಿ ಮನೆಗೆ ಒಂದು ವಿಶಿಷ್ಟ ವಿನ್ಯಾಸ ದೊರೆಯುತ್ತದೆ.  ಸಣ್ಣ ಅಳತೆಯ ಎರಡುಮೂರು ಕಿಟಕಿಗಳನ್ನು ನೀವು ಬಯಸುತ್ತೀರೋ ಇಲ್ಲ ದೊಡ್ಡ ಗಾತ್ರದ ಒಂದೇ ಸಾಕೆ? ಎಂಬುದು ಕೂಡ ನಿಮ್ಮ ಮನೆಯ ಬಾಹ್ಯ ವಿನ್ಯಾಸದ ಮೇಲೆ ತನ್ನ ಛಾಪನ್ನು ಮೂಡಿಸುತ್ತದೆ.

        ಸ್ವಲ್ಪ ಕಲಾಗಾರಿಕೆ ಇರಲಿ

        ನಿಮಗೆ ಇಷ್ಟವಾದ ವಿನ್ಯಾಸದಲ್ಲಿ ಆರ್ಟ್‌ ವರ್ಕ್‌ ಮಾಡಿಸಲು ನಿಮ್ಮ ಒಟ್ಟಾರೆ ಬಜೆಟ್‌ನಲ್ಲಿ ಒಂದು ಸಣ್ಣ ಪಾಲನ್ನಾದರೂ ಮುಡುಪಾಗಿಡಿ. ಅದುಗೋಡೆ ಸೂರು ಸೇರುವ ಕಡೆ ಮಾಡುವ ಸರಳ ಕಾನೀìಸ್‌ ಇರಬಹುದು, ಇಲ್ಲ ವಿಶೇಷ ವಿನ್ಯಾಸದ ಸನ್‌ಶೇಡ್‌ -ಸಜಾjಗಳಿರಬಹುದು.  ಇದೆಲ್ಲವೂ ಮನೆಗೆ ಒಂದು ಪ್ರತ್ಯೇಕ ಐಡೆಂಟಿಟಿ ಕೊಡುತ್ತವೆ. ಒಮ್ಮೆ ನೋಡಿದರೆ ವಿನ್ಯಾಸವೇ ಮತ್ತೆ ಗುರುತಿಸಲು ನೆರವಾಗುತ್ತದೆ.

        ಮನೆ ಫಿನಿಶ್‌ ಸಂದರ್ಭದಲ್ಲಿ ಎಲ್ಲವನ್ನೂ ಸರಳ ಮಾಡುವ ತವಕದಲ್ಲಿ ಹೆಚ್ಚುವರಿ ಖರ್ಚಾಗಬಹುದು ಎಂದು ಈ ಮಾದರಿಯ ವಿಶೇಷ ವಿನ್ಯಾಸಕ್ಕೆ ಬದಲು,ಅಕ್ಕಪಕ್ಕದವರ ಮನೆಯಂತೆಯೇ ನಿಮ್ಮ ಮನೆಯ ವಿನ್ಯಾಸವನ್ನೂ ರೂಪಿಸಿಕೊಂಡರೆ ಐಡೆಂಟಿಟಿ ಕಷ್ಟ. ಹೀಗೆ ಮಾಡಿದರೆ ನಿಮ್ಮ ಮನೆಗೆ ಬರಬೇಕಾದವರು, ಪಕ್ಕದ ಮನೆಗೆ ಹೋಗಿ ಕದ ತಟ್ಟಿದರೂ ಆಶ್ಚರ್ಯವಿಲ್ಲ!

        ಮ್ಯೂರಲ್‌ ಬಳಸಿ

        ಫೈಬರ್‌ ಇಲ್ಲ ಕಲ್ಲು, ಸಿಮೆಂಟ್‌, ಟೆರ್ರಾಕೋಟದಲ್ಲಿ ಮಾಡಿದ ಉಬ್ಬುಶಿಲ್ಪಗಳನ್ನು ನಿಮ್ಮ ಆಭಿರುಚಿಗೆ ತಕ್ಕಂತೆ ರೂಪಿಸಿ ಕೊಡುವ ಕಲಾಕಾರರಿದ್ದಾರೆ. ಸರಳವಾದವು, ಸಣ್ಣಗಾತ್ರದ್ದಾಗಿದ್ದರೆ ಕೆಲವೇ ಸಾವಿರ ರೂಗಳಲ್ಲಿ ಲಭ್ಯವಿದ್ದರೂ ದೊಡ್ಡವಾದರೆ ಹತ್ತಾರು ಸಾವಿರವಾಗಬಹುದು. ಇದನ್ನು ಬಳಸಿ ನಿಮ್ಮ ಮನೆಯ ಬಾಹ್ಯ ಸೌಂದರ್ಯ ಹೆಚ್ಚಿಸಬಹುದು.

        ನಿಮ್ಮ ಮನೆಗೊಂದು ಚಂದದ ಹೆಸರಿಟ್ಟು ಅದನ್ನು ಲೋಹ, ಮರ ಅಥವಾ ಕಲ್ಲಿನಲ್ಲಿ ಮಾಡಿಸಿ ಮನಮುಟ್ಟುವ ಮಾದರಿಯ ಬ್ಯಾಗ್ರೌಂಡ್‌ ನಲ್ಲಿ ಅಂದರೆ ವಿಶೇಷ ಬಣ್ಣ ವಿನ್ಯಾಸ ಇರುವ ಮಾರ್ಬಲ್‌ ಗ್ರನೈಟ್‌ ಮೇಲೆ ಕೂರಿಸಿದರೆ, ಇದೂ ಕೂಡ ನಿಮ್ಮ ಮನೆಗೆ ತನ್ನದೇ ರೀತಿಯಲ್ಲಿ ಸ್ವಂತಿಕೆಯ ಛಾಪನ್ನು ಮೂಡಿಸುತ್ತದೆ. ಇದಕ್ಕೆಲ್ಲ ಹೆಚ್ಚೇನೂ ತಗುಲುವುದಿಲ್ಲ.  ವಿನ್ಯಾಸ ಗಾತ್ರ ಆಧರಿಸಿ ನಾಲ್ಕೈದು ಸಾವಿರ ರೂಗಳಲ್ಲೂ ಮುಗಿಸಬಹುದು!

        ವಿಶಿಷ್ಟ ವಸ್ತುಗಳ ಬಳಕೆ

        ಟೆರಾಕೋಟ ಬ್ಲಾಕ್ಸ್‌, ಲ್ಯಾಟರೈಟ್‌, ಜೆಂಬಿಟ್ಟಿಗೆ, ಕಲ್ಲು, ತೆರೆದ ಇಟ್ಟಿಗೆ ಗೋಡೆ, ಕಾಂಪೋಸಿಟ್‌ ಕಲ್ಲು ಕಟ್ಟಡ ಇತ್ಯಾದಿಗಳೂ ಸಹ ನಿಮ್ಮ ಮನೆಗೆ ಒಂದು ಪ್ರತ್ಯೇಕ ಐಡೆಂಟಿಟಿ ಕೊಡುತ್ತವೆ. ಎಲ್ಲರೂ ಸಾಮಾನ್ಯವಾಗಿ ಪ್ಲಾಸ್ಟರ್‌ ಮಾಡಿದ ಇಟ್ಟಿಗೆ ಇಲ್ಲ ಕಾಂಕ್ರಿಟ್‌ ಬ್ಲಾಕ್‌ ಗೋಡೆಗಳಿಗೇನೇ ಮೊರೆ ಹೋಗುವ ಕಾರಣ, ಇತರೆ ಯಾವುದೇ ವಸ್ತು ಬಳಸಿದರೂ ಅವುಗಳ ಅಪರೂಪದ ಬಳಕೆಯಿಂದಲೇ ಒಂದು ವಿಶೇಷ ಛಾಪನ್ನು ಮೂಡಿಸುತ್ತದೆ. ಸುಮಾರು ನೂರರಿಂದ ನೂರ ಐವತ್ತು ರೂಗಳವರೆಗೂ ತಗಲುವ ಮಾಮೂಲಿ ಇಟ್ಟಿಗೆ ಗೋಡೆ ಮತ್ತು ಪ್ಲಾಸ್ಟರ್‌ ಸೇರಿದಾಗ ಆಗುವ ದುಬಾರಿ ಬೆಲೆಗೆ ಹೋಲಿಸಿದರೆ, ಈ ಹೆಚ್ಚು ಬಳಕೆಯಲ್ಲಿರದ ಕೆಲ ವಸ್ತುಗಳು ಬಳಸಿ ನಿರ್ಮಿಸುವ ಗೋಡೆಗಳು ಅಷ್ಟೇನೂ ದುಬಾರಿಯಾಗುವುದಿಲ್ಲ.  ಆದರೆ ಇವು ಎಲ್ಲಿ ಎಷ್ಟು ರೇಟಿಗೆ ಸಿಗುತ್ತದೆ, ಸಾಗಿಸಲು ಎಷ್ಟು ತಗಲುತ್ತದೆ ಎಂದು ಲೆಕ್ಕಾ ಹಾಕಿಯೇ ಮುಂದುವರೆಯುವುದು ಉತ್ತಮ.

        ಒಂದು ಥೀಮ್‌ ಸಾಧ್ಯವೆ? ನೋಡಿ

        ಇಡೀ ಮನೆಗೆ ಸ್ವಾಭಾವಿಕವಾಗಿ ಸಿಗುವ ವಸ್ತುಗಳ ಬಳಕೆ, ಬಣ್ಣ ಬಳಿಯದೆ ಹಾಗೆಯೇ ವಸ್ತುಗಳ ಮೂಲ ಬಣ್ಣ - ವಿನ್ಯಾಸ ಕಾಣುವಂತೆ ಬಳಸಿ ನೋಡಿ.  ಪರಿಸರ ಸ್ನೇಹಿಯಾಗಿ ಮನೆ ವಿನ್ಯಾಸಗೊಳಿಸುವುದು ಸೇರಿದಂತೆ ಕಟ್ಟಡದಲ್ಲಿ ಕಮಾನುಗಳ ಬಳಕೆ, ವಿಶೇಷ ವಿನ್ಯಾಸದ ಕಿಟಕಿ ಬಾಗಿಲುಗಳೂ ಕೂಡ ಒಂದು ರೀತಿಯ ಐಡೆಂಟಿಟಿ ಕೊಡಬಹುದು.

        ಹೊಯ್ಸಳ ಶೈಲಿಯ ದೇವಸ್ಥಾನಗಳನ್ನೂ ವಿಜಯನಗರ ಕಾಲದ ದೇವಸ್ಥಾನಗಳನ್ನೂ ನೋಡಿದರೆ ಅವು ಯಾವಕಾಲಕ್ಕೆ ಸೇರಿದವೆಂದು ಸುಲಭ ವಾಗಿ ಹೇಳಬಹುದು. ಎರಡೂ ಬಗೆಯವು ದೇವಸ್ಥಾನಗಳೇ ಆದರೂಪ್ರತ್ಯೇಕ ಐಡೆಂಟಿಟಿ ಹೊಂದಿವೆ. ಹೋಯ್ಸಳ ಶೈಲಿ ಮೆದು ಕಲ್ಲಿನ ಕುಸುರಿ ಕೆಲಸಕ್ಕೆ ಪ್ರಾಮುಖ್ಯತೆ ಪಡೆದಿದ್ದರೆ ವಿಜಯನಗರ ಗಡಸು ಕಲ್ಲಿನ ಶಿಲ್ಪ ಹಾಗೂ ಕಟ್ಟಡಗಳಿಗೆ ಖ್ಯಾತಿ ಪಡೆದಿದೆ.
        ನಿಮ್ಮ ಮನೆಯಲ್ಲೂ ನಿಮಗೆ ಇಷ್ಟವಾಗುವ ನುಣುಪಾದ ಪಾಲಿಶ್‌ ಮಾಡಿದ ವಸ್ತುಗಳಿಂದ ಇಲ್ಲವೇ ನೈಸರ್ಗಿಕವಾಗಿ ಕಟ್ಟಡ ಕಟ್ಟಲು ಬಳಸುವ ಬಹುತೇಕ ವಸ್ತುಗಳ ರಫ್ನೆಸ್‌ ಹಾಗೆಯೇ ಉಳಿಸಿಕೊಂಡು ನಿಮ್ಮ ಮನೆ  ಕಟ್ಟಿಕೊಳ್ಳುವುದರ ಮೂಲಕವೂ ಪ್ರತ್ಯೇಕ ಐಡೆಂಟಿಟಿ ಪಡೆಯಬಹುದು.
        ಈ ಕಾಂಕ್ರಿಟ್‌ ಜಗತ್ತಿನಲ್ಲಿ ಮನುಷ್ಯನಿಗೆ ಐಡೆಂಟಿಟಿ ಎಷ್ಟು ಮುಖ್ಯವೋ ಮನೆಗೂ ಅಷ್ಟೇ ಮುಖ್ಯ.
          ಹೆಚ್ಚಿನ ಮಾಹಿತಿಗೆ:  9844132826

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus