Udayavani | Jan 27, 2013
ಅವನೊಬ್ಬನ ಹೆಸರು ಪ್ಯಾಚ್ ಆ್ಯಡಮ್ಸ್. ಒಂದು ದಿನ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ರೋಗಿಗಳ ಆಸ್ಪತ್ರೆಗೆ ದಾಖಲಾಗುತ್ತಾನೆ. ಒಂದು ತಂಪಾದ ಬೆಳಿಗ್ಗೆ ಹಾಸಿಗೆಯಿಂದೆದ್ದು ಅಲ್ಲಿ ಸುತ್ತಾಡುತ್ತಿದ್ದಂತೆಯೇ ಅವನಿಗೆ ಇದ್ದಕ್ಕಿದ್ದಂತೆ ಸತ್ಯವೊಂದು ಹೊಳೆಯುತ್ತದೆ. ಅವನು ನಗುತ್ತಾನೆ. ಅವನು ಬದಲಾಗುತ್ತಾನೆ. ಅವನು ಬದಲಿಸುತ್ತಾನೆ. ಅವನ ಕತೆಯಲ್ಲಿ ನಗುವಿದೆ. ನಗು ಮುಖದಲ್ಲಿ ಬೆಳಕಿದೆ. ಆ ಬೆಳಕಲ್ಲಿ ಮುಂದೆ ಹೋದ ಅವನು ಮಾಡಿದ ಸಾಹಸ ಅದ್ಭುತವಾದದ್ದು.
ಧೂಮಪಾನ ನಿಷೇಧಿಸಿದೆ.
ಹಾಸನದಲ್ಲಿರುವ ಒಂದು ಥಿಯೇಟರಲ್ಲಿ ಕಂಡ ಒಂದು ಫಲಕ. ವಿವರಣೆ ಅನವಶ್ಯ. ಇಂಥಾ ಫಲಕಗಳು ಅಲ್ಲಲ್ಲಿ ಕಾಣಿಸುತ್ತವೆ. ಒಂದಷ್ಟು ಜನ ಫೋಟೋ ತೆಗೆದು ಫೇಸ್‌ಬುಕ್‌ಗೊà, ಬ್ಲಾಗಿಗೋ ಪೋಸ್ಟ್ ಮಾಡುವುದು ಹೊಸ ವಿಷಯವಲ್ಲ. ಸುಮ್ಮನೆ ಕಣ್ಣು ಆ ಬರಹದ ಮೇಲೆ ಬಿದ್ದರೆ ಸಾಕು ನಗು ಹುಟ್ಟುತ್ತದೆ. ನಿಧಾನಕ್ಕೆ ನಗು ಹರಡುತ್ತದೆ. ಸನ್ನಿವೇಶ ತಿಳಿಯಾಗುತ್ತದೆ.
ಒಂದು ದಿನ ಶುರುವಾಗಿದೆ. ತಂಪಾದ ಬೆಳಿಗ್ಗೆ ಎದ್ದಿದ್ದೀರಿ. ಒಂದರ್ಧ ಕಾಫಿ ಕುಡಿದು ಅವಸರವಸರವಾಗಿಯೇ ಆಫಿಸೀಗೆ ಹೊರಟಿದ್ದೀರಿ. ಎಲ್ಲರೂ ಬಂದಿದ್ದಾರೆ. ಎಲ್ಲರ ಮುಖದಲ್ಲೂ ಘನ ಗಾಂಭೀರ್ಯ. ಮಾತಿಲ್ಲ. ನಗುವಿಲ್ಲ. ನೋಡಿದ ಕಣ್ಣುಗಳಿಗೆ ನೆಮ್ಮದಿ ಎಲ್ಲಿ? ಮಧ್ಯಾಹ್ನ ಹೊತ್ತಿಗೆ ತಲೆನೋವಿಗೆ ಎರಡು ಮಾತ್ರೆ ತಿಂದು, ಸಂಜೆ ಹೊತ್ತಿಗೆ ಇನ್ನೊಂದು ತಿಂದು ಮನೆ ಹೋಗೋ ಹೊತ್ತಿಗೆ ಹೈರಾಣಾಗೋ ಮನಸ್ಸಿಗೆ ಖುಷಿ ಎಲ್ಲಿ? ಜಗತ್ತು ನಗುತ್ತಲೇ ಇರುತ್ತದೆ. ನಾವು ಮಾತ್ರ ಗಂಭೀರವಾಗಿರುವವರ ಥರ ನಟಿಸುತ್ತೇವೆ. ಹೀಗೆ ಗಂಭೀರವಾಗಿರುವುದರಿಂದ ಯಾರಾದರೂ ತುಂಬಾ ಚೆನ್ನಾಗಿರುವುದು ಗೊತ್ತಾ? ನಗದೇ ಇರುವ ಕಾರಣಕ್ಕೆ ದೊಡ್ಡ ಶ್ರೀಮಂತನಾಗಿದ್ದಿದೆಯಾ? ಆಗಿದ್ದರೂ ಖುಷಿ ಕೊಡದ ದುಡಿಮೆ, ದುಡ್ಡು ಅವಶ್ಯ ಇದೆಯಾ?
ಸಿಂಪಲ್ಲಾಗಿ ಹೇಳಬಹುದಾಗಿದ್ದರೂ ಸೀರಿಯಸ್ ಆಗಿ ಹೇಳುತ್ತೇವೆ. ಆರಾಮಾಗಿರಬಹುದಾಗಿದ್ದರೂ ಗಂಭೀರವಾಗಿರೋ ಪೋಸು ಕೊಡುತ್ತೇವೆ. ಯಾರನ್ನೋ ದೂರ ಇಡಲು ನಮ್ಮಿಂದ ನಾವು ದೂರ ಆಗುತ್ತಿರುತ್ತೇವೆ. ಇದೆಲ್ಲಾ ಬೇಕಾ? ಹಾಯಾಗಿ, ಆಗಾಗ ಕಾಫಿ ಕುಡಿದು ನಕ್ಕು, ನಗಿಸಲು ಏನಾದರೂ ಕೊಡಬೇಕಾ?
ಒಂದು ಅದ್ಭುತವಾದ ಸಿನಿಮಾ ಇದೆ. ಅದರ ಹೆಸರು ಪ್ಯಾಚ್ ಆ್ಯಡಮ್ಸ್. ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ರೋಗಿಗಳ ಆಸ್ಪತ್ರೆ ಸೇರಿದ ವ್ಯಕ್ತಿಯೊಬ್ಬ ತನ್ನನ್ನು ತಾನು ಬದಲಿಸಿಕೊಳ್ಳುವ ಕತೆ. ಅವನು ಅಲ್ಲಿಯವರೆಗೆ ತುಂಬಾ ಗಂಭೀರವಾಗಿರುತ್ತಾನೆ. ಯಾವಾಗ ಮಾನಸಿಕ ರೋಗಿಗಳ ಆಸ್ಪತ್ರೆಗೆ ಹೋಗುತ್ತಾನೆ ಅವನಿಗೆ ಸಾûಾತ್ಕಾರ. ಮೆಡಿಕಲ್ ಕಾಲೇಜು ಸೇರುತ್ತಾನೆ. ಅಲ್ಲಿ ಅಳುತ್ತಾ ಮಲಗಿರುವ ರೋಗಿಗಳನ್ನು ನೋಡುತ್ತಾನೆ. ಹಾಗೆ ಮಲಗಿರುವವರಿಗೆ ಮದ್ದಿಗಿಂತ ನಗಿಸುವವರು ಬೇಕು ಅನ್ನೋ ಸತ್ಯವನ್ನು ಅರ್ಥ ಮಾಡಿಕೊಳ್ಳುತ್ತಾನೆ. ಮಕ್ಕರೆ ಎಲ್ಲವೂ ತನ್ನಿಂತಾನೇ ಪರಿಹಾರವಾಗುತ್ತದೆ ಅಂತ ನಂಬಿಕೊಂಡು ರೋಗಿಗಳನ್ನು ನಗಿಸಲು ಹೊರಡುತ್ತಾನೆ.
ಆಗ ಅವನು ಮಾಡುವ ಎಲ್ಲಾ ಸಾಹಸಗಳೂ ಅದ್ಭುತ. ಅಲ್ಲೊಂದು ವಾರ್ಡು ಮಕ್ಕಳ ವಾರ್ಡು. ಕ್ಯಾನ್ಸರ್ ಪೀಡಿತ ಮಕ್ಕಳು ಅಲ್ಲಿ ಬೇಜಾರಲ್ಲಿ ಮಲಗಿರುತ್ತವೆ. ಅವರಿಗೆ ಆಟಿಕೆಗಳಿವೆ. ಆದರೆ ನಗಿಸುವವರಿಲ್ಲ. ಅಲ್ಲಿ ಪ್ಯಾಚ್ ಆ್ಯಡಮ್ಸ್ ಪ್ರತ್ಯಕ್ಷನಾಗುತ್ತಾನೆ. ಜೋಕರ್ ಥರ ಮೂಗಿಗೊಂದು ದೊಡ್ಡ ಬಾಲ್ ಅಂಟಿಸುತ್ತಾನೆ. ನಾಲಗೆಗೆ ಪ್ಲಾಸ್ಟಿಕ್ ನಾಲಗೆ ಸೇರಿಸಿ ಉದ್ದ ಮಾಡಿಕೊಂಡು, ತಲೆಗೆ ಕೆಂಪಗಿನ ಟೋಪಿ ಹಾಕಿಕೊಂಡು ಚಿತ್ರವಿಚಿತ್ರವಾಗಿ ಡಾನ್ಸ್ ಮಾಡುತ್ತಾ ಮಕ್ಕಳ ಮುಂದೆ ಬರುತ್ತಾನೆ. ಒಮ್ಮೆ ಬೆಚ್ಚಿಬಿದ್ದ ಮಕ್ಕಳು. ಮೌನ ತುಂಬಿದ ವಾತಾವರಣ. ಆ್ಯಡಮ್ಸ್ ಕುಣಿಯುತ್ತಾನೆ. ಮಲಗಿರುವ ಮಕ್ಕಳನ್ನು ಎಬ್ಬಿಸುತ್ತಾನೆ. ಕೂತಿರುವ ಮಕ್ಕಳನ್ನು ಕುಣಿಸುತ್ತಾನೆ. ಆವಾಗ ಒಂದು ಮಗು ನಗುತ್ತದೆ. ಆ ಮಗು ನಕ್ಕಿದ್ದನ್ನು ನೋಡಿ ಇನ್ನೊಂದು ಮಗುವಿನ ಮುಖದಲ್ಲಿ ನಗು ಅರಳುತ್ತದೆ. ಸ್ವಲ್ಪ ಹೊತ್ತಷ್ಟೇ. ನಗು ಹರಡುತ್ತದೆ. ವಾರ್ಡಿನ ತುಂಬಾ ಬೆಳಕು. ಎಲ್ಲಾ ಮಕ್ಕಳ ಹೆತ್ತವರ ಕಣ್ಣಲ್ಲಿ ಹೊಳಪು.
ನಗುವಿಗಿರುವ ಶಕ್ತಿ ಇದೇ. ನಗು ಎಂದರೆ ಜೋಕ್ ಅಷ್ಟೇ ಅಲ್ಲ. ಅಚ್ಚರಿಯಲ್ಲೂ ನಗುವಿದೆ. ಮಂಗನಾಟದಲ್ಲೂ ನಗುವಿದೆ. ನಗು ಜೀವದ್ರವ್ಯ. ಈ ಜೀವದ್ರವ್ಯವನ್ನು ಬಳಸಿಕೊಂಡೇ ಹಾಸ್ಪಿಟಲ್‌ನಂತಿರಬಹುದಾದ ಆಫೀಸನ್ನು, ಕಂಪನಿಯನ್ನು ಅದ್ಭುತವನ್ನಾಗಿ ಬದಲಿಸಲು ಸಾಧ್ಯವಿದೆ. ಸುಮ್ಮನೆ ಯೋಚೆ° ಮಾಡಿ. ನಿಮ್ಮ ಆಫೀಸಲ್ಲೂ ವರ್ಷಕ್ಕೊಂದು ಆ್ಯನುವಲ್ ರಿಪೋರ್ಟು ಬರುತ್ತದೆ. ಎಷ್ಟು ಒಣ ಒಣ ವರದಿ ಎಂದರೆ ಓದಲು ಮನಸ್ಸು ಬರುವುದೇ ಇಲ್ಲ. ಅದೇ ಅಲ್ಲಲ್ಲಿ ತಮಾಷೆ ವಾಕ್ಯಗಳನ್ನು ಬಳಸಿದರೆ ಎಷ್ಟು ಚೆಂದ? ನಕ್ಕಾಗಲೇ ಅರ್ಥವಾಗುವುದು.
ಜಗಳವಾದ ಬೆಳಿಗ್ಗೆ ಆಫೀಸಿಗೆ ಬರುತ್ತೀರಿ. ಅದೇ ಬೇಜಾರಲ್ಲಿ ನಿಮ್ಮ ಕುರ್ಚಿ ಮೇಲೆ ಕೂರುತ್ತೀರಿ. ಅಲ್ಲಿಯವರೆಗೆ ಗಮನಿಸಿರುವುದಿಲ್ಲ. ಒಮ್ಮೆಲೆ ನಿಮ್ಮ ದೃಷ್ಟಿ ಟೇಬಲ್ ಮೇಲೆ ಹೋಗುತ್ತದೆ. ಅಲ್ಲೊಂದು ಕ್ಯೂಟ್ ಗೊಂಬೆ ಕೂತಿದೆ. ಅದರ ಕೈಯಲ್ಲಿ ಚೀಟಿಯೊಂದಿದೆ. ಅಚ್ಚರಿಯಿಂದ ತೆರೆಯುತ್ತೀರಿ.
ಆಲ್ ಇಸ್ ವೆಲ್. ಗುಡ್ ಮಾರ್ನಿಂಗ್.
ಹೀಗಂತ ಬರೆದಿರುತ್ತದೆ ಅದರಲ್ಲಿ. ನಿಮಗೆ ಎಷ್ಟು ಖುಷಿಯಾಗಬಹುದು? ಕಡಿಮೆ ಪಕ್ಷ ಬೇಸರ ಕಡಿಮೆಯಾಗಬಹುದಾ? ಬೇಸರ ಕಮ್ಮಿಯಾದರೆ ನೆಮ್ಮದಿಯಿಂದ ಕೆಲಸ ಮಾಡಬಹುದಾ? ಉತ್ತರ ಎಲ್ಲೋ ಹುಡುಕಬೇಕಿಲ್ಲ. ನಕ್ಕರೆ ಸಾಕಲ್ಲ. ನೋಟೀಸ್ ಬೋರ್ಡು, ಗ್ರೀಟಿಂಗ್ ಕಾರ್ಡು, ಮುದ್ದು ಗೊಂಬೆ, ಬಣ್ಣದ ಬಲೂನು ಇವೆಲ್ಲವೂ ಮನಸ್ಸನ್ನು ಮಕ್ಕಳಾಗಿಸುವ ಶಕ್ತಿ ಹೊಂದಿವೆ. ಮನಸ್ಸು ಮಕ್ಕಳಂತಾದರೆ ನಗು ತನ್ನಿಂತಾನೆ ಆಕ್ರಮಿಸುತ್ತದೆ. ಸಣ್ಣ ಕುತೂಹಲ, ಸಣ್ಣ ಸಣ್ಣ ವಿಷಯಕ್ಕೂ ಅಚ್ಚರಿ ಇವೆಲ್ಲವೂ ಜೀವಂತವಾಗಿಡುತ್ತವೆ. ಸುಖಾಸುಮ್ಮನೆ ಸೀರಿಯಸ್ ಪೋಸ್ ಕೊಟ್ಟರೆ ಸತ್ಯವಾಗಲೂ ಯಾರಿಗೂ ಸುಖವಿಲ್ಲ. ಎದುರಿಗೆ ಬಂದು ಮಾತಾಡುವವನಿಗೆ ಐದು ಪೈಸೆ ಲಾಭವಿಲ್ಲ. ಯಾರು ಸೀರಿಯಸ್ ಆಗಿ ಪೋಸ್ ಕೊಡುತ್ತಾರೋ ಅವರು ಖುಷಿಯಾಗಿರಲು ಹೇಗೆ ಸಾಧ್ಯ?
ಇಂಥಾ ಹೊತ್ತಲ್ಲಿ ಈ ಸೈಲೆಂಟ್ ಹ್ಯೂಮರ್ ಕುರಿತು ಯೋಚನೆ ಮಾಡುತ್ತಿರಬೇಕಾದರೆ ಕಾರ್ಪೋರೇಟ್ ಜಗತ್ತಿನ ಆಗುಹೋಗುಗಳ ಕುರಿತ ಒಂದಷ್ಟು ಆಸಕ್ತಿ ಹುಟ್ಟಿಸುವ ವಿಷಯಗಳು ಗೊತ್ತಾದುವು. ಪ್ರಷರ್ ಕುಕ್ಕರ್‌ನಂತೆ ಬದುಕುವ ಅದೆಷ್ಟೋ ಜನರ ಬದುಕು ಬದಲಿಸಬಹುದಾದ ಸತ್ಯದ ಹೊಳಹು ಕಾಣಿಸಿತು. ತಾನು ಬದಲಾದರೆ ಜಗತ್ತು ಬದಲಾಗುತ್ತದೆ ಅನ್ನೋ ಅಂತಿಮ ಸತ್ಯ ಸ್ಪಷ್ಟವಾಗುತ್ತಾ ಹೋಯಿತು.