ನವದೆಹಲಿ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಕಂಠಸಿರಿಯಲ್ಲಿ ಹೊರಹೊಮ್ಮಿದ 'ಏ ಮೇರೆ ವತನ್ ಕೀ ಲೋಗೋಂ'...ಎಂಬ ಹಾಡಿನ ಸಾಲು ಕಿವಿಗೆ ನಾಟುತ್ತಿದ್ದಂತೆ ಭಾರತೀಯರಲ್ಲಿ ದೇಶಪ್ರೇಮದ ಕಿಚ್ಚು ಹಚ್ಚಿಸುವುದಲ್ಲದೇ ಕೆಲಕ್ಷಣ ಭಾವುಕರನ್ನಾಗಿಸುವುದರಲ್ಲಿ ಎರಡು ಮಾತಿಲ್ಲ. ಹೀಗೆ ರಾಷ್ಟ್ರಪ್ರೇಮವನ್ನು ಮನದಾಳದಲ್ಲಿ ಬಡಿದೆಬ್ಬಿಸುವ ಇಂತಹ ಗೀತೆ ರಚನೆಯಾಗಿ ಭಾನುವಾರಕ್ಕೆ 50 ವಸಂತಗಳು ತುಂಬಿವೆ. ಹೌದು. 1962ರ ಡಿಸೆಂಬರ್‌ನಲ್ಲಿ ಚೀನಾ ಮೇಲೆ ನಡೆದ ಯುದ್ಧದಲ್ಲಿ ಭಾರತ ಸೋಲುಂಡ ಸಂಧರ್ಭದಲ್ಲಿ ದೇಶದ ಸೈನಿಕರಲ್ಲೇ ಮಂಕಾಗಿಹೋಗಿದ್ದರು. ಆ ಸಂದರ್ಭದಲ್ಲಿ ಕವಿ ಪ್ರದೀಪ್ ಅವರು ರಚಿಸಿದ ಈ ಗೀತೆ ಇಂದಿಗೂ ಎಲ್ಲರ ನಾಲಿಗೆ ಮೇಲೆ ಹರಿದಾಡುತ್ತಿದೆ. ಕವಿ ಪ್ರದೀಪ್ ಅವರು ಮುಂಬೈನ ಬೀದಿಯೊಂದರಲ್ಲಿ ನಡೆದು ಹೋಗುತ್ತಿದ್ದಾಗ ಹೊಳೆದ 'ಜೋ ಶಹೀದ್ ಹುಯೇ ಹೈ ಉನಿR, ಝರಾ ಯಾದ್ ಕರೋ ಕುರಬಾನಿ' ಎಂಬ ಸಾಲನ್ನು ಮೊದಲು ಸಿಗರೇಟ್ ಪ್ಯಾಕಿನ ಮೇಲೆ ಬರೆದುಕೊಂಡರು. ನಂತರ ಮನೆಗೆ ತೆರಳಿ ಈ ಗೀತೆಯನ್ನು ಪೂರ್ಣಗೊಳಿಸಿದರು. ಸಿ. ರಾಮಚಂದ್ರ ಅವರು ಸಂಗೀತ ಸಂಯೋಜಿಸಿದ ಆರುವರೆ ನಿಮಿಷಗಳ ಈ ಹಾಡನ್ನು ಗಾಯಕಿ ಲತಾ ಮಂಗೇಶ್ಕರ್ ಅವರು 27 ಜನವರಿ 1963ರಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅಂದಿನ ಪ್ರಧಾನಿ ಜವಹಾರ್‌ಲಾಲ್ ನೆಹರು ಅವರ ಸಮ್ಮುಖದಲ್ಲಿ ಹಾಡಿದ್ದರು. ವಿಪರ್ಯಾಸವೆಂದರೇ ದೆಹಲಿಯ ಈ ಸಮಾರಂಭಕ್ಕೆ ಕವಿ ಪ್ರದೀಪ್ ಅವರನ್ನು ಆಹ್ವಾನಿಸಿರಲೇ ಇಲ್ಲ. ನಂತರ ಮಾರ್ಚ್‌ನಲ್ಲಿ ಮುಂಬೈಗೆ ತೆರಳಿದ ನೆಹರು ಅವರು ರಾಜಭವನಕ್ಕೆ ಪ್ರದೀಪ್ ಅವರನ್ನು ಆಹ್ವಾನಿಸಿದರು. ನಂತರ ಅಲ್ಲಿಗೆ ತೆರಳಿದ ಪ್ರದೀಪ್ ಅವರು ಸ್ವಅಕ್ಷರದಲ್ಲಿ ಬರೆದಿದ್ದ ಈ ಗೀತೆಯನ್ನು ನೆಹರು ಅವರಿಗೆ ನೀಡಿದರು.