ನೇಮಿಚಂದ್ರ | Jan 28, 2013
ಇಪ್ಪತ್ತೂಂದು ವರ್ಷಗಳ ಹಿಂದೆ ಬಾಲ್ಯವಿವಾಹವನ್ನು ವಿರೋಧಿಸಿದ ತಪ್ಪಿಗೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ನ್ಯಾಯಕ್ಕಾಗಿ ಹೋರಾಡಿದ ಭಾಂವ್ರಿದೇವಿ ತನ್ನ ಸೋದರಿಯರ ಬದುಕನ್ನು ಬದಲಿಸಲು ಹೊರಟಾಕೆ.
ತನ್ನ ಬದುಕನ್ನೇ ನರಕವಾಗಿಸಿಕೊಂಡರೂ, ದುಡಿವ ಮಹಿಳೆಯರಾದ ನಮ್ಮೆಲ್ಲರಿಗೆ ಕೆಲಸದ ಜಾಗದಲ್ಲಿ ರಕ್ಷಣೆಯನ್ನು ತಂದುಕೊಟ್ಟ ಆ ಭಾಂವ್ರಿದೇವಿಯ ಕತೆಯನ್ನು ಲೋಕ ಮರೆತಂತಿತ್ತು.
ಭಾಂವ್ರಿದೇವಿ ರಾಜಸ್ತಾನದ ಹಳ್ಳಿಗಾಡಿನ ಓರ್ವ ಬಡ ಕುಂಬಾರ ಹೆಣ್ಣು. ನಾಲಕ್ಕೇ ವರ್ಷಕ್ಕೆ ಈಕೆಯ ವಿವಾಹ ನಡೆದಿತ್ತು, ಬಾಲ್ಯವಿವಾಹದ ಪಿಡುಗನ್ನು ಸ್ವತಃ ಅನುಭವಿಸಿದ ಮಹಿಳೆ ಭಾಂವ್ರಿ.
ಮಹಿಳಾ ಅಭಿವೃದ್ಧಿ ಯೋಜನೆಯ "ದೀದಿ' ಭಾಂವ್ರಿಯ ಮನೆಗೆ ಬಂದು, "ಸಾಥಿನ್' ಕೆಲಸವನ್ನು
ಗಂಡನಿಗೂ ವಿವರಿಸಿದಳು. ಆಕೆಯ ಗಂಡ ಹೆಂಡತಿಯ ಇಚ್ಚೆಗೇನೂ ಅಡ್ಡಿಯಾಗಲಿಲ್ಲ. ಆಕೆಯ ಕೆಲಸಕ್ಕೆ ಒಪ್ಪಿಗೆ ಕೊಟ್ಟ. ಭಾಂವ್ರಿ ತರಪೇತು ಮುಗಿಸಿ, "ಸಾಥಿನ್' ಆದಳು. "ಸಾಥಿನ್' ಅರ್ಥ ಜೊತೆ ನಿಂತು ಸಹಾಯ ಮಾಡುವವಳು. "ಸಾಥಿನ್' ಸಾಮಾಜಿಕ ಬದಲಾವಣೆಗೆ ದುಡಿಯುವ ಗ್ರಾಮಸೇವಕಿ. ಭಾಂವ್ರಿ ಹಳ್ಳಿಯ ಮಹಿಳೆಯರಿಗೆ ಜೊತೆ ನಿಂತ ಸಂಗಾತಿಯಾದಳು.
ಭಾಂವ್ರಿ ತನ್ನ ಹೊಸ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಂಡಳು. ಮನೆ ಮನೆಗೆ ಹೋಗಿ ಹೆಂಗಸರಿಗೆ ಹೊರಗೆ ಬರುವಂತೆ ಈ ಮೀಟಿಂಗುಗಳಲ್ಲಿ ಭಾಗವಹಿಸುವಂತೆ ಒತ್ತಾಯಿಸುವಾಗ ಅವರ ಗಂಡಸರು ಭಾಂವ್ರಿಗೆ ಹಿಡಿ ಹಿಡಿ ಶಾಪ ಹಾಕಿದರು. "ತಮ್ಮ ಹೆಂಗಸರ ತಲೆ ಕೆಡಿಸಲು ಬಂದಿದ್ದಾಳೆ' ಎಂದು ದೂರಿದರು. "ಗಂಡಸರು ಗಂಟೆಗಟ್ಟಲೆ ಹೆಂಡದಂಗಡಿಯಲ್ಲಿ ಹರಟುವಾಗ, ಹೆಂಗಸರು ತಮ್ಮ ಒಳಿತಿಗೆ ತಮ್ಮ ಮಕ್ಕಳ ಒಳಿತಿಗೆ ಪರಸ್ಪರರ ಮನೆಯಲ್ಲಿ ಒಂದು ಗಂಟೆಯ ಮೀಟಿಂಗ್ ಮಾಡಿದರೇನು ತಪ್ಪು?' ಭಾಂವ್ರಿ ವಾದಿಸಿದಳು. ಮೆಲ್ಲನೆ ಹತ್ತು ಹದಿನೈದು ಮಹಿಳೆಯರು ಬರತೊಡಗಿದರು. ತನ್ನ ಹಳ್ಳಿಯ ಸುಧಾರಣೆಗಾಗಿ ಬಹಳಷ್ಟನ್ನು ಮಾಡುವ ಆಸೆ ಭಾಂವ್ರಿಯದು. 1992ರಲ್ಲಿ ರಾಜಾಸ್ತಾನದ ಸರಕಾರ ಬಾಲ್ಯ ವಿವಾಹಗಳು ಜರುಗಬಾರದೆಂದು ಆರ್ಡರ್ ಹೊರಡಿಸಿತ್ತು. ಸರಕಾರ ಅಂಥಾ ಬಾಲ್ಯ ವಿವಾಹಗಳು ಜರುಗಲಿದ್ದರೆ ತಿಳಿಸುವಂತೆ ಕೇಳಿಕೊಂಡಿತ್ತು.
ಭಾಂವ್ರಿಗೆ ಹಳ್ಳಿಯ ಪಂಚರಲ್ಲಿ ಒಬ್ಬನಾದ ರಾಮ್ ಕಿರಣ್ ಗುಜಾjರನ ಒಂದು ವರ್ಷದ ಮಗಳಿಗೆ ವಿವಾಹವಾಗಲಿರುವುದು ತಿಳಿದಿತ್ತು. ಭಾಂವ್ರಿ ಆತನ ಮನೆಯ ಹೆಂಗಸರನ್ನು ಭೇಟಿಯಾಗಿ ಬಾಲ್ಯವಿವಾಹದ ಕೆಡಕುಗಳ ಬಗ್ಗೆ ಹೇಳಿದಳು. "ಬಾಲ್ಯವಿವಾಹ ಅಪರಾಧ' ಎಂದು ಕೂಡಾ ತಿಳಿಸಿದಳು. ಆಕೆಯ ಮಾತುಗಳು ಅವರಿಗೆ ಸರಿ ಕಂಡರೂ, ಸಂಪ್ರದಾಯದ ವಿರುದ್ಧ ಹೋಗುವ ಧೈರ್ಯ ಯಾರಿಗೂ ಇರಲಿಲ್ಲ. ಅದರಲ್ಲೂ ಗಂಡಸರ ಕೈಯಲ್ಲಿ ಎಲ್ಲ ನಿರ್ಧಾರಗಳಿರುವಾಗ ಅವರನ್ನು ಎದುರಿಸುವ ಶಕ್ತಿ ಅವರಿಗಿರಲಿಲ್ಲ. ಕೊನೆಗೆ ಭಾಂವ್ರಿ "ಮಹಿಳಾ ಅಭಿವೃದ್ಧಿ ಯೋಜನೆ'ಯ ಕಚೇರಿಗೆ ಹೋಗಿ ಒಂದು ವರ್ಷದ ಕೂಸಿನ ವಿವಾಹ ನಡೆಯಲಿರುವ ವಿಷಯ ತಿಳಿಸಿದಳು. ಅವರು ಪೊಲೀಸರಿಗೆ ತಕ್ಷಣ ದೂರಿತ್ತರು. ಸಾಥಿನ್ ಆಗಿ 200 ರೂಪಾಯಿ ಸಂಬಳ ತೆಗೆದುಕೊಳ್ಳುತ್ತಿರುವಾಗ ತನ್ನ ಕರ್ತವ್ಯವನ್ನು ತಾನು ನಿಭಾಯಿಸಬೇಕು ಎಂಬುದು ಆಕೆಯ ಸಂಕಲ್ಪವಾಗಿತ್ತು. "ಬಾಲ್ಯ ವಿವಾಹದ ವಿರುದ್ಧ ಹದಿನೈದು ದಿನಗಳನ್ನು' ಸರಕಾರ ಆಗಷ್ಟೇ ಘೋಷಿಸಿದ್ದ ಕಾರಣ ಪೊಲೀಸರು ಉತ್ಸಾಹದಿಂದ ಬಂದು ಆ ಮದುವೆಯನ್ನು ನಿಲ್ಲಿಸಿದರು. ಬಂದ ಬಾರಾತ್ ವಾಪಸಾದದ್ದು ಗುಜ್ಜಾjರರಿಗೆ ಎಲ್ಲಿಲ್ಲದ ಅಪಮಾನ ಅನಿಸಿತು. ಅದಕ್ಕೆ ಕಾರಣವಾದ ಭಾಂವ್ರಿಯ ಮೇಲೆ ಸೇಡು ಕಾರಿದರು. ತನ್ನ ಮನೆಯಲ್ಲೇ ತನ್ನ ಮೈದುನನಿಗೆ ಎರಡನೇ ವಿವಾಹಕ್ಕೆ ಇಂಥದ್ದೇ ಎಳೆಯ ಹುಡುಗಿ ಹುಡುಕಿದ್ದನ್ನೂ ಭಾಂವ್ರಿ ಪೊಲೀಸರಿಗೆ ತಿಳಿಸಿ, ಆ ಮದುವೆಯನ್ನೂ ನಿಲ್ಲಿಸಿದ್ದಳು. ಕೋಪಗೊಂಡ ಅತ್ತೆ ಮಾವ ಆಕೆಯೊಡನೆ ಮಾತನಾಡುವುದನ್ನು ನಿಲ್ಲಿಸಿದ್ದಲ್ಲದೆ, ಗಂಡ-ಹೆಂಡಿರನ್ನು ಬೇರೆ ಇಟ್ಟರು.

ಭಾಂವ್ರಿಯ ಕುಟುಂಬ ಬಹಿಷ್ಕರಿಸಲ್ಪಟ್ಟಿತು. ಆರ್ಥಿಕವಾಗಿ, ಸಾಮಾಜಿಕವಾಗಿ ಹಳ್ಳಿಯ ಈ ಏಕೈಕ ಕುಂಬಾರ ಕುಟುಂಬವನ್ನು ದೂರ ಮಾಡಿದರು. ಗುಜ್ಜಾರರು ಅವರಿಗೆ ಹಾಲು ಮಾರಲು ನಿರಾಕರಿಸಿದರು. ಹಾಲಿಲ್ಲದೆಯೇ ದಿನ ದೂಡಿದರು. ಮಗು ಕಾಯಿಲೆ ಬಿದ್ದು ನರಳುವಾಗ, ಹಾಲಿಗಾಗಿ ಪಕ್ಕದ ಹಳ್ಳಿಗೆ ಹೋಗಿಬರಬೇಕಾಯಿತು. ಅವರಿಂದ ಮಡಕೆ ಕೊಳ್ಳುವುದನ್ನೂ ನಿಲ್ಲಿಸಿದರು. ಈಗ ಭಾಂವ್ರಿಯ 200 ರೂಪಾಯಿಗಳ ಸಂಬಳದಲ್ಲಿ ಇಡೀ ಮನೆ ಮಕ್ಕಳ ಪೋಷಣೆ ನಡೆಯಬೇಕಿತ್ತು. ಎಲ್ಲಕ್ಕಿಂತ ನೋವಿನ ವಿಷಯವೆಂದರೆ ಆಕೆ ಹೋರಾಡಿ ನಿಲ್ಲಿಸಿದ ಬಾಲ್ಯ ವಿವಾಹಗಳು ಸ್ವಲ್ಪ$ಸಮಯದ ನಂತರ ನಡೆದೇ ಹೋದವು. ಅದೇ ಪೊಲೀಸರಿಗೆ ಈಗ ಈ ಮದುವೆಗಳನ್ನು ನಿಲ್ಲಿಸಲು ಯಾವ ಆಸಕ್ತಿಯೂ ಇರಲಿಲ್ಲ. ಪೊಲೀಸರೂ ಬಂದು, ತುಪ್ಪದ ಲಡ್ಡು ತಿಂದು ಹೋದರು.
ತಮ್ಮ ಮನೆಯಂಗಳಕ್ಕೆ ಪೊಲೀಸರನ್ನು ಕರೆತಂದ ಭಾಂವ್ರಿಯ ಮೇಲೆ ಹಳ್ಳಿಯ ಪಂಚ ಸೇಡು ಕಾರಿದ. ಹೆಣ್ಣನ್ನು ಬಗ್ಗು ಬಡಿಯಲು, ಬುದ್ಧಿಕಲಿಸಲು ಎಂದಿನಿಂದಲೂ ಬಳಕೆಯಲ್ಲಿರುವ ತಂತ್ರ-ಅತ್ಯಾಚಾರ !
ಭಾಂವ್ರಿ ತೆರೆದಿಟ್ಟ ವಿವರಗಳು ಎದೆ ನಡುಗಿಸುವಂತಹುದು.
"" 1992ರ ಸೆಪ್ಟೆಂಬರ್ 22ನೇ ತಾರೀಕು, ಸಂಜೆ ಆರರ ಸಮಯ. ನಾನು ಗಂಡನೊಡನೆ ಹೊಲದತ್ತ ಹಸುಗಳಿಗೆ ಮೇವು ಕತ್ತರಿಸಿ ತರಲು ಹೋಗಿದ್ದೆ. ತಟ್ಟನೆ ಗಂಡನ ನೋವಿನ ಕೂಗು ಕೇಳಿಸಿತು. ಗಂಡನತ್ತ ಓಡಿ ಬಂದೆ. ಅಲ್ಲಿ ಐದು ಜನ ಧಾಂಡಿಗರು ಕೈಯಲ್ಲಿ ಲಾಠಿ ಹಿಡಿದು ನಿಂತಿದ್ದರು. ರಾಮ್ ಕಿರಣ್, ರಾಮ್ ಸುಖ್, ಬದ್ರಿ, ಗ್ಯಾರ್ಸ್, ಶ್ರೀರಾಮ್ ಶರ್ಮ. ಲಾಠಿಯಲ್ಲಿ ಬಡಿದು ಬಡಿದು ಗಂಡ ವಿಪರೀತ ರಕ್ತಸ್ರಾವದಲ್ಲಿ ನರಳುತ್ತಿದ್ದ. ಅವರತ್ತ ಓಡಿ ಅವರ ಹೊಡೆತವನ್ನು ನಿಲ್ಲಿಸಲು ಪ್ರಯತ್ನಿಸಿದೆ. "ಅವನಿಗೆ ಬುದ್ಧಿ ಕಲಿಸಿದ್ದಾಯ್ತು, ಈಗ ನಿನ್ನ ಸರದಿ' ಎಂದರು. ಮೂರು ಜನ ಮೇಲೆ ಬಿದ್ದರು. ಅವರಲ್ಲೊಬ್ಬ ನನ್ನ ಕತ್ತು ಹಿಡಿದು ನೆಲದ ಮೇಲೆ ಕೆಡವಿದ. ಮೊದಲು ಗ್ಯಾರ್ಸ್ ನನ್ನ ಮೇಲೆ ಅತ್ಯಾಚಾರ ಎಸಗಿದ, ನಂತರ ಬದ್ರಿ ಬಿದ್ದ ರಭಸಕ್ಕೆ ತಲೆಯ ಹಿಂಬದಿಗೆ ಪೆಟ್ಟು ಬಿದ್ದಿತ್ತು. ಕೊಸರಾಡಿದೆ, ಮೈಕೈಯೆಲ್ಲಾ ತರಚಿದ ಗಾಯಗಳು. ಕೂಗಿ ಕೂಗಿ ಗಂಟಲು ಆರಿತ್ತು. ನೋವಿನಲ್ಲಿ ನರಳುತ್ತ ಭಯದಿಂದ ನಡುಗುತ್ತ ಬಿದ್ದ ಗಂಡ ಎಲ್ಲವನ್ನೂ ಕಣ್ಣಾರೆ ನೋಡಬೇಕಿತ್ತು. ಆತನ ತಲೆಗೆ ಭಾರೀ ಪೆಟ್ಟು ಬಿದ್ದಿತ್ತು. ಎಲ್ಲಾ ಮುಗಿದಿತ್ತು.
"" ಮಾತಿಲ್ಲದೆ ಮನೆಗೆ ಬಂದೆವು. ರಕ್ತಮಯ ಬಟ್ಟೆಗಳು, ಮೈಯೆಲ್ಲಾ ಗಾಯಗೊಂಡು ನಿಂತ ನಮ್ಮನ್ನು ನೋಡಿ ಮಕ್ಕಳು ದಿಗ್ಭ್ರಮೆಯಿಂದ ನಿಂತರು. ಕುಸಿದು ಚಾಪೆಯ ಮೇಲೆ ಉರುಳಿದಂತೆ ಏನು ಮಾಡಲೂ ತೋಚಲಿಲ್ಲ. ಗಂಡ ಬಹಳ ಹೆದರಿದ್ದ. "ನಾವು ಸುಮ್ಮನಿರುವುದೇ ಮೇಲು. ಹೆಚ್ಚೇನಾದರೂ ಮಾಡಿದರೆ, ಅವರು ನಮ್ಮನ್ನು ಕೊಂದೇ ಹಾಕುತ್ತಾರೆ' ಭಯದಿಂದ ಹೇಳಿದ. ನನಗೆ ಇಂಥ ಅನ್ಯಾಯವನ್ನು ಸಹಿಸಿಕೊಂಡು ಸುಮ್ಮನಿರುವುದು ಸರಿಯಲ್ಲ ಅನಿಸಿತು. ನನ್ನ ಮೇಲೆರಗಿದ ಇಂಥ ಅಪರಾಧವನ್ನು ನಾನು ಹೇಳದೆ ಮುಚ್ಚಿಟ್ಟರೆ ಅದು ಘಟಿಸಿತು ಎಂದು ಯಾರಿಗೆ ಗೊತ್ತಾಗುತ್ತದೆ? ನಾನು ಸುಮ್ಮನಿದ್ದರೆ, ಇದು ನಾಳೆ ನನ್ನ ಎಳೆಯ ಮಗಳ ಮೇಲೂ ನಡೆಯಬಲ್ಲದು.
"" ಬೆಳಗು ಆದೊಡನೆ ಹಳ್ಳಿಯ ಹಿರಿಯರಿಗೆ ನಡೆದದ್ದೆಲ್ಲವನ್ನು ಹೋಗಿ ತಿಳಿಸಿದೆ. ನನ್ನ ಮಗನ ಮೇಲೆ ಆಣೆ ಇಟ್ಟು ನನ್ನ ಮೇಲೆರಗಿದ ರಾಕ್ಷಸ ಕೃತ್ಯವನ್ನು ಹೇಳಿಕೊಂಡು ಅತ್ತೆ. ನನ್ನ ಮಾತಿನಲ್ಲಿ ಅವರಿಗೆ ನಂಬಿಕೆ ಇದ್ದರೂ, ಅನುಕಂಪವಿದ್ದರೂ, ಯಾರೂ ಬಹಿರಂಗವಾಗಿ ನನಗೆ ಬೆಂಬಲ ನೀಡಲು ಸಿದ್ಧವಿರಲಿಲ್ಲ. ನನ್ನ ಮೇಲೆ ಅತ್ಯಾಚಾರ ಎಸಗಿದವರು ದೊಡ್ಡ ಕುಳ. ಅವರ ಮುಖಂಡರು ದೆಹಲಿಯಲ್ಲಿದ್ದರು.
"" ಊರ ಹಿರಿಯರಿಂದ ಸಹಾಯ ದೊರೆಯದಾಗ ಗಂಡನೊಡನೆ ಅದೇ ಬಟ್ಟೆಯಲ್ಲಿ ಪಟಾನ್ ಹಳ್ಳಿಗೆ ಬಂದೆ. ಅಲ್ಲಿ "ಪ್ರಾಥಮಿಕ ಆರೋಗ್ಯ ಕೇಂದ್ರ'ಕ್ಕೆ ಹೋದರೆ ಅಲ್ಲಿನ ವೈದ್ಯ ನನ್ನ ಪರೀಕ್ಷೆ ಮಾಡಲು ನಿರಾಕರಿಸಿದ. "ತಡವಾದ ವೈದ್ಯ ಪರೀಕ್ಷೆ ಮಾನಭಂಗದ ಪುರಾವೆಗಳನ್ನೆಲ್ಲ ಅಳಿಸಿ ಹಾಕುತ್ತದೆ' ಎಂದು ನನಗೆ ತಿಳಿದಿರಲಿಲ್ಲ. ಅಲ್ಲಿಂದ ಪೊಲೀಸ್ ಠಾಣೆಗೆ ಬಂದರೆ ಅಲ್ಲಿಯೂ ಸಹಾಯಕ್ಕೆ ಯಾರೂ ಬರಲಿಲ್ಲ. ಆ ರಾತ್ರಿ ಪೊಲೀಸ್ ಠಾಣೆಯಲ್ಲಿ ನಾನು ಉಳಿಯಬೇಕಾಯಿತು. ಹೊರಗೆ ಬೀದಿಬದಿಯಲ್ಲಿ ನನ್ನ ಗಂಡ ಮಲಗಿದ್ದ. ಇಲ್ಲಿಯೂ ಅಣಕದ ಮಾತುಗಳನ್ನು ಕೇಳಬೇಕಿತ್ತು. "ಮಹಾಸತಿ ನೀನು' ಎಂಬ ವ್ಯಂಗ್ಯದ ಮೊನಚು ನುಡಿಗಳು. ಮರುದಿನ ನಾನು ಉಟ್ಟ ಗಾಗ್ರ ಲಂಗವನ್ನು ಅಲ್ಲಿಯೇ ಬಿಟ್ಟು ಹೋಗಲು ಹೇಳಿದರು. ಉಡಲು ಮತ್ತೇನನ್ನೂ ಕೊಡಲಿಲ್ಲ. ಗಂಡ ತನ್ನೊಡನೆ ತಂದಿದ್ದ ಹರುಕಲು ಬೆಡ್ ಶೀಟನ್ನೇ ಸುತ್ತಿಕೊಂಡು ಗಾಗ್ರ ತೆಗೆದುಕೊಟ್ಟೆ .
.
ಎರಡು ದಶಕಗಳ ಹಿಂದೆ ಭಾಂವ್ರಿ ಮಹಿಳಾ ಪತ್ರಿಕೆಗೆ ಹಂಚಿಕೊಂಡ ವಿವರಗಳನ್ನು ಓದುವಾಗ ಈಗಲೂ ಕಣ್ಣಲ್ಲಿ ಕಂಬನಿ ತುಂಬಿ ಬರುತ್ತದೆ. ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡಿ ಒಂದು ವರ್ಷದ ಕೂಸಿನ ಮದುವೆ ನಿಲ್ಲಿಸಿದ್ದಕ್ಕೆ ಅವಳ ಮೇಲೆರಗಿದ ಸಾಮೂಹಿಕ ಅತ್ಯಾಚಾರ, ಯಾರೊಬ್ಬರ ನೆರವು ಇಲ್ಲದೆ ಹೋರಾಡಿದ ಪರಿ, ಅನ್ಯಾಯದ ಅಗಾಧತೆ, ಕಿತ್ತು ತಿಂದ ಬಡತನ ಎಲ್ಲವೂ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಜಾತಿವಾದ, ವರ್ಗವಾದ, ಲಿಂಗಭೇದದ ಪೂರ್ವಗ್ರಹಗಳನ್ನು ತೆರೆದಿಟ್ಟಿದೆ.
ಭಾಂವ್ರಿ ತೆರೆದಿಟ್ಟ ನೋವಿನ ಕತೆ ಪತ್ರಿಕೆಗಳಲ್ಲಿ ಸುದ್ದಿಯಾಯಿತು. ಕೊನೆಗೂ ಮಹಿಳಾ ವಿಭಾಗದವರೆಲ್ಲ ಒತ್ತಾಯಿಸಿದ ಮೇಲೆ ಭಾಂವ್ರಿಯ ಕೇಸು ರಿಜಿಸ್ಟರ್ ಆಯಿತು. ಮಹಿಳಾ ವಿಕಾಸದ ಕೆಲಸಗಾರರು ವಿಷಯವನ್ನು ದೆಹಲಿಯ "ರಾಷ್ಟ್ರೀಯ ಮಹಿಳಾ ಆಯೋಗ' ಕಛೇರಿಗೆ ತಿಳಿಸಿದರು. ಮಹಿಳಾ ಅಭಿವೃದ್ಧಿ ಕೆಲಸಗಾರರು ಭಾಂವ್ರಿಯನ್ನು ದಿಲ್ಲಿಗೆ ಕರೆದುಕೊಂಡು ಹೋದರು. ಸಿಬಿಐ ಅಧಿಕಾರಿಗಳ ಭೇಟಿಯಾಯಿತು.
ಸಿಬಿಐ ವರದಿ ಬಂದಿತ್ತು. ಜಯಪುರ ಹೈಕೋರ್ಟ್ ಭಾಂವ್ರಿಯ ಕೇಸನ್ನು ಬೆಂಬಲಿಸಿತು. ಆದರೆ ಪೊಲೀಸರು, ಸಿಬಿಐ ಒಬ್ಬೊಬ್ಬರೂ ತನ್ನನ್ನು ತೀರಾ ಒಡ್ಡೊಡ್ಡಾಗಿ ಪ್ರಶ್ನಿಸಿದ ರೀತಿ ಭಾಂವ್ರಿಯನ್ನು ನೋಯಿಸಿತ್ತು. ತನ್ನ ಹೋರಾಟವನ್ನು ಬಿಟ್ಟುಕೊಡಲು ಬಯಸದ ಭಾಂವ್ರಿ ಎಲ್ಲವನ್ನೂ ಸಹಿಸಿಕೊಂಡಳು. ಒಮ್ಮೆಮ್ಮೊ¾ಗೇ ಹದಿನೈದು ಗಂಡಸರೆದುರು ಅವರು ಕೇಳಿದ್ದಕ್ಕೆಲ್ಲ ಉತ್ತರಿಸಬೇಕಾಯಿತು. ತನ್ನ ಒಂದು ಮಾನಭಂಗದ ನೋವಿನ ಅನುಭವವನ್ನು ಸಾವಿರ ಸಲ ಅದರೆಲ್ಲ ವಿವರಗಳೊಡನೆ ತೆರೆದುಕೊಳ್ಳಬೇಕಾಯ್ತು.
"ಹೇಗಾಯಿತು, ಹೇಗೆ ಮಾಡಿದರು?' ಬಹಳ ಕೆಟ್ಟ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳುತ್ತಿದ್ದರು. ಕಡೆಗೂ ನವೆಂಬರಿನಲ್ಲಿ ಚಾರ್ಜ್‌ಶೀಟ್ ಫೈಲ್ ಆಯಿತು. ಐದು ಮಂದಿ ಆರೋಪಿಗಳನ್ನು ಬಂಧಿಸಲಾಯಿತು.
ಜೈಪುರ ಹೈಕೋರ್ಟ್ ಭಾಂವ್ರಿಯ ಪರವಾಗಿ ಮಾತನಾಡಿದಾಗ ಭಾಂವ್ರಿಗೆಷ್ಟೋ ಸಮಾಧಾನವಾಗಿತ್ತು. ತಾನು ಆಯ್ದ ಕಲ್ಲು ಮುಳ್ಳಿನ ಹಾದಿಯಲ್ಲಿ ಒಂದು ಆಶಾಕಿರಣ ಕಂಡಿತ್ತು. ಆಕೆಯ ಪತಿ ಆಕೆಯ ಜೊತೆ ನಿಂತ. ಆತ ಆಕೆಯ ದಿಟ್ಟ ಹೆಜ್ಜೆಗಳನ್ನು ಬೆಂಬಲಿಸಿದ. ಬಡ ಕುಟುಂಬದ ಮಹಿಳೆಯರ ಮೇಲಿನ ಅನ್ಯಾಯ ಶೋಷಣೆಗೆ ಮಿತಿ ಇಲ್ಲ. ಆದರೆ ಅವರ ಸ್ವರ ಯಾರಿಗೂ ಕೇಳದೆ ಮೌನದಲ್ಲಿ ಕಳೆದು ಹೋಗುತ್ತದೆ. ಜನ ಕೇವಲ ಹಣವಂತರ ಶಕ್ತಿವಂತರ ಮಾತಿನತ್ತ ವಾಲುತ್ತಾರೆ. ಇಂಥ ಸಮಾಜದಲ್ಲಿ ತನ್ನಂತೆ ತನ್ನ ಮಗಳಿಗೆ, ಮತ್ತೂಬ್ಬ ಹೆಣ್ಣಿಗೆ ಆಗಬಾರದು ಎಂದು ದಿಟ್ಟವಾಗಿ ತನ್ನ ಮೇಲೆಸಗಿದ ಅಸಹ್ಯ ಕೃತ್ಯವನ್ನು ಬಯಲಿಗಿಟ್ಟ ಭಾಂವ್ರಿ "ಮಾನಭಂಗಕ್ಕೆ ಒಳಗಾದ ಹೆಣ್ಣಿಗೆ ಸಮಾಜದಲ್ಲಿ ಸ್ಥಾನವಿಲ್ಲ. ಇದು ಬದಲಾಗಬೇಕು. ಆಕೆಗೆ ಎಲ್ಲರ ಸಹಾನುಭೂತಿಯ ಅಗತ್ಯವಿದೆ. ತಮ್ಮ ಹಕ್ಕುಗಳಿಗಾಗಿ ಮಹಿಳೆ ಹೋರಾಡದಿದ್ದರೆ, ಅವಕ್ಕಾಗಿ ಮತ್ಯಾರೂ ಹೋರಾಡಿ ತಂದುಕೊಡುವುದಿಲ್ಲ' ಎಂದು ನಂಬಿ ಹೋರಾಟದ ದೀರ್ಘ ಹಾದಿಯನ್ನು ಹಿಡಿದಳು.
ಆರೋಪಿಗಳು ಪರಿಹಾರವಾಗಿ ಹಣ ನೀಡುತ್ತೇವೆ, ಕೋರ್ಟಿನ ಕೇಸನ್ನು ಹಿಂತೆಗೆದುಕೊಳ್ಳುವಂತೆ ದುಂಬಾಲು ಬಿದ್ದರು. ಭಾಂವ್ರಿ ತೀವ್ರವಾಗಿ ನಿರಾಕರಿಸಿದಳು. ಈ ದಿಟ್ಟ ಮಹಿಳೆಯ ಹೋರಾಟವನ್ನು ಗುರುತಿಸಿ 1994ರ "ನೀರ್ಜಾ ಭಾನೋಟ್' ಪುರಸ್ಕಾರವನ್ನು ಈಕೆಗೆ ನೀಡಲಾಯಿತು.
"ಅಶೋಕ ಚಕ್ರ'ದಿಂದ ಗೌರವಿಸಲ್ಪಟ್ಟ ಏಕಮಾತ್ರ ಮಹಿಳೆ ನೀರ್ಜಾ ಭಾನೋಟ್. ಆಕೆಯ ನೆನಪಿನಲ್ಲಿ ಪ್ರತಿವರ್ಷ ನೀರ್ಜಾ ಭಾನೋಟ್ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಸಮಾಜದ ಅನ್ಯಾಯದ ವಿರುದ್ಧ ಹೋರಾಡಿ ಇತರರಿಗೆ ಮಾದರಿಯಾದ ಮಹಿಳೆಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಮುಂಬಯಿಯಲ್ಲಿ ಭಾಂವ್ರಿಗೆ ಈ ಪ್ರಶಸ್ತಿಯನ್ನು ನೀಡುವಾಗ ಟಿ. ಎನ್. ಶೇಷನ್ ಹೇಳಿದ ಮಾತುಗಳು ಆಕೆಯ ಆತ್ಮಸ್ಥೈರ್ಯವನ್ನು ಎತ್ತಿ ಹಿಡಿದವು. "ಇಂದು ಜಗತ್ತು ಬಲಿಷ್ಠರ ಶಕ್ತಿಯ ಎದುರು, ಪಾತಕಿಗಳ ದುಷ್ಕಾರ್ಯಗಳ ಎದುರು, ಅಧಮಾತಿಅಧಮರ ಎದುರು ಸೆಣಸುತ್ತ ನಿಂತಿದೆ. ಆದರೆ ಇದೆಲ್ಲದರ ನಡುವೆಯೂ ನೀರ್ಜಾ ಮತ್ತು ಭಾಂವ್ರಿಯಂಥಾ ಮನುಷ್ಯರು ಹಣತೆಯಂತೆ ಉರಿಯುತ್ತಿದ್ದಾರೆ. ನೀರ್ಜಾ ತಾನು ನಂದಿದರೂ ತನ್ನ ಬೆಳಕನ್ನು ಉಳಿಸಿ ಹೋದವಳು. ಭಾಂವ್ರಿದೇವಿ "ದೇಹವನ್ನು ಛಿದ್ರವಾಗಿಸಬಹುದು, ಆದರೆ, ಆತ್ಮವನ್ನು ಮುಟ್ಟಲಾರಿರಿ' ಎಂದು ತೋರಿಸಿದ್ದಾಳೆ' ಎಂದು ಶ್ಲಾ ಸಿದರು.
ಸೆಪ್ಟಂಬರ್ 1995ರಲ್ಲಿ ಯು. ಎನ್. ಮಹಿಳಾ ಸಮ್ಮೇಳನದಲ್ಲಿ ಭಾಗವಹಿಸಲು ಬೀಜಿಂಗ್‌ಗೆ ಹೋದ ಭಾಂವ್ರಿ ಹಿಂದುಳಿದ ಜನಾಂಗದ ಹೆಣ್ಣುಮಗಳು ತನ್ನ ಮೇಲಿನ ಅತ್ಯಾಚಾರಗಳ ವಿರುದ್ಧ ದನಿ ಎತ್ತಿದ ದಿಟ್ಟ ಭಾರತೀಯ ಮಹಿಳೆಯ ಸಂಕೇತವಾದಳು.
ಅವಳ ದಿಟ್ಟತನ ಹೋರಾಟಕ್ಕೆ ಪ್ರಶಸ್ತಿ, ಪ್ರಶಂಸೆಗಳು ದೊರೆತವು. ಆದರೆ, ಭಾಂವ್ರಿಗೆ ನ್ಯಾಯ ದೊರೆಯಲಿಲ್ಲ. ನವೆಂಬರ್ 1995, ಜಯಪುರ ಡಿಸ್ಟ್ರಿಕ್ಟ್ ಮತ್ತು ಸೆಷನ್ನಿನ ನ್ಯಾಯಾಧೀಶರು ಭಾಂವ್ರಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿಸಿದ್ದ ಐದು ಮಂದಿ ಆರೋಪಿಗಳನ್ನು ಬಿಡುಗಡೆ ಮಾಡಿದರು. ನ್ಯಾಯಾಲಯ "ಈ ಆರೋಪಿತರು 50ರಿಂದ 60ರ ವಯಸ್ಸಿನಲ್ಲಿದ್ದು, ಗೌರವಾನ್ವಿತ ಕುಟುಂಬದಿಂದ ಬಂದವರು. ಅವರು ಮಾನಭಂಗ ಮಾಡಲು ಸಾಧ್ಯವಿಲ್ಲ. ತಮ್ಮ ವಯಸ್ಸು, ಜಾತಿ ಮರೆತು ಇಂಥ ಕೆಲಸ ಮಾಡುವಷ್ಟು ನಮ್ಮ ಭಾರತೀಯ ಸಂಸ್ಕೃತಿ ಅಧೋಗತಿಗಿಳಿದಿಲ್ಲ' ಎಂದು ಹೇಳಿ ಬಿಡುಗಡೆ ಮಾಡಿತ್ತು. ಮಹಿಳಾ ಜಾಗೃತಿಗೆ ಹೋರಾಡುತ್ತಿದ್ದ ಪ್ರತಿಯೊಬ್ಬರಿಗೂ ಆಘಾತ ತಂದ ತೀರ್ಪು.
ಈ ತೀರ್ಪು ರಾಜ್ಯದಲ್ಲಿ ಸುಮಾರು 600 ಜನರಿರುವ ಸಾಥಿನ್ ಸಮುದಾಯವನ್ನು ನಿರುತ್ಸಾಹಗೊಳಿಸಿತು. ಸರಪಂಚರು ಸಾಥಿನ್‌ಗಳನ್ನು ಬೆದರಿಸುವ ಕೆಲಸ ಮುಂದುವರೆಯಿತು. ಐದು ಮಹಿಳಾ ಸಂಘಗಳು, ಸರಕಾರಿ ಕೆಲಸದಲ್ಲಿರುವ ಮಹಿಳೆಯರಿಗೆ ರಕ್ಷಣೆ ನೀಡಬೇಕೆಂದು ಕೇಳಿ ಸುಪ್ರೀಂಕೋರ್ಟಿನಲ್ಲಿ ಪೆಟಿಷನ್ ಫೈಲ್ ಮಾಡಲು ಪ್ರೇರೇಪಿಸಿತು. ಭಾಂವ್ರಿಗೆ ನ್ಯಾಯ ದೊರೆಯದಿದ್ದರೂ, ಸುಪ್ರೀಂಕೋರ್ಟ್ "ವಿಶಾಖ ತೀರ್ಪಿ'ನ ಹೆಸರಿನಲ್ಲಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಲು ಭಾಂವ್ರಿ ಕಾರಣವಾದಳು. ಅಷ್ಟೇ ಅಲ್ಲ , ಇಂದು ಭಾರತದಲ್ಲಿ ಬಾಲ್ಯ ವಿವಾಹಗಳು ನಿಂತಿಲ್ಲದಿದ್ದರೂ, ಅವುಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಕಳೆದ ವರ್ಷ ಶೋಭಾ ಚೌಧರಿ ಎಂಬ ಯುವತಿ ರಾಜಸ್ಥಾನದ ಹೈಕೋರ್ಟಿನ ಮೆಟ್ಟಿಲು ಹತ್ತಿ ತನ್ನ ಬಾಲ್ಯವಿವಾಹವನ್ನು ರದ್ದುಗೊಳಿಸಲು ಕೇಳಿದಳು. ಈ ಎಲ್ಲ ಪರಿವರ್ತನೆಯ ಹಿಂದೆ ಅಪರೋಕ್ಷವಾಗಿ ಭಾಂವ್ರಿದೇವಿಯ ಹೋರಾಟವಿದೆ.
.
ದಶಕಗಳ ಹಿಂದಿನ ಆ ನಮ್ಮ ಮಹಿಳಾ ಚಳುವಳಿಯ ದಿನಗಳು ನೆನಪಾಗುತ್ತಿವೆ. ಏರು ಕಂಠದಲ್ಲಿ ಟೌನ್ ಹಾಲ್ ಮುಂದೆ, ನಡು ಬೀದಿಯಲ್ಲಿ "ಜಾಗೃತಿ ಗೀತೆ'ಯನ್ನು ಹಾಡಿದ್ದೆವು. ನಮ್ಮಕ್ಕ ನಮ್ಮ ತಂಗಿ ನಮ್ಮವ್ವ ನಮ್ಮ ಸೊಸೆ| ನಮ್ಮಂಗಳದೀ ಮೊಗ್ಗುಗಳು | ನಿರ್ಭೀತಿಯಿಂದ ಹಸನಾಗಿ ಬದುಕಲು |ಬನ್ನಿರಿ ಜೊತೆ ನಿಲ್ಲಿ ಹೋರಾಡುವಾ...
ಹಾಡು ಮುಗಿದಿತ್ತು, ಮಹಿಳಾ ಹೋರಾಟ ಮುಂದುವರೆದಿತ್ತು.