ಉಪಮನ್ಯು | Jan 28, 2013
ನಕ್ಕರೆ ಸಿಹಿಯಾಗಿರಬೇಕು ಎಂಬುದೊಂದು ರೂಢಿಯ ಮಾತು. ನಗು ಸಿಹಿಯಾಗಿರುವುದಲ್ಲದೆ ಕಹಿಯಾಗಿರುವುದುಂಟೆ? ಕಹಿಯಾಗಿ ನಕ್ಕರೆ ಅದು ನಗುವಲ್ಲ. ನಗುವಿನಲ್ಲಿ ಸಿಹಿ ಇದ್ದರೆ ನಗುವವರ ಹೃದಯವೂ ಸವಿಯಾಗಿದೆ ಎಂದರ್ಥ. ಅಂದರೆ ಅಂತರಂಗವೇ ಮಧುವಿನ ಹಾಗೆ ಎಂದರ್ಥ. ಹಾಗೆಂದು ದೇಹದೊಳಗೆ ಸಿಹಿ ಇದ್ದರೆ ನಗುವೇನೂ ಸಿಹಿಯಾಗಿರಬೇಕೆಂದೇನಿಲ್ಲ. ಏಕೆಂದರೆ, ಅವರಿಗೆ ಸಿಹಿ ತಿನ್ನುವುದಕ್ಕಾಗುವುದಿಲ್ಲ !
ನಮ್ಮಲ್ಲೊಬ್ಬ ಹಿರಿಯರನ್ನು ಪರೀಕ್ಷೆ ಮಾಡಿದ ಡಾಕ್ಟರು ಸೂಚಿಸಿದರು, ""ನಿಮ್ಮ ರಕ್ತದಲ್ಲಿ ಸಕ್ಕರೆ ಅಂಶಗಳು ಅಧಿಕ ಇವೆ. ಹಾಗಾಗಿ ನೀವು ಇನ್ನು ಮುಂದೆ ಶುಗರ್‌ಲೆಸ್ ಟೀ ಕುಡಿಯಬೇಕಾಗುತ್ತದೆ'.
ಅದನ್ನು ಆ ಪುಣ್ಯಾತ್ಮ ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಯಾವುದಾದರೂ ಕಾರ್ಯಕ್ರಮಕ್ಕೆ ಹೋದಲ್ಲೆಲ್ಲ ಎರಡು ಮೋಹನ್‌ಲಾಡು, ಎರಡು ಜಿಲೇಬಿ, ಮೂರು ಮಾಲ್ಪುರಿ ತಿಂದ ಬಳಿಕ ನಿಯತ್ತಿನಿಂದ "ಸಪ್ಪೆ ಚಾ'ಕ್ಕೆ ಆರ್ಡರ್ ಮಾಡುತ್ತಿದ್ದರು.
ಬರುತ್ತ ಬರುತ್ತ ಮಧುಮೇಹ ರೋಗವೆಂಬುದೊಂದು ಪರಿಗಣಿತವಾಗದೆ ಅದೊಂದು ಜೀವನವಿಧಾನವಾಗಿ ಬದಲಾಗುತ್ತಿದೆ. ಇನ್ನು ಡಯಬಿಟಿಸ್ ಶುರುವಾದ ಮೇಲೆ ರಿಸ್ಕ್ ಬೇಡ ಅಂತ ಕೆಲವರು ಸಣ್ಣ ಪ್ರಾಯದಲ್ಲಿಯೇ ಸಿಹಿತಿಂಡಿ ನಿಯಂತ್ರಣ, ಸಪ್ಪೆ ಚಹಾ ಸೇವನೆಯನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಸುಮಾರು ಐವತ್ತು ದಾಟಿದ ಮೇಲೆ ಮೆಡಿಕಲ್ ಚೆಕ್‌ಅಪ್ ಮಾಡಿಸಿದಾಗ ಡಯಬಿಟೀಸ್ ಇಲ್ಲವೆಂದು ಸಾಬೀತಾದರೆ ಕೆಲವರಿಗೆ ಕೀಳರಿಮೆ ಕಾಡಲಾರಂಭಿಸುತ್ತದೆ. ಒತ್ತಡ, ಪರಿಶ್ರಮದ ಜೀವನದಿಂದ ಡಯಾಬಿಟಿಸ್ ಬರುತ್ತದೆಂಬುದು ನಂಬಿಕೆ. ಇನ್ನೂ ಮಧುಮೇಹ ಬಂದಿಲ್ಲವೆಂದಾದಲ್ಲಿ ತಾನು ಈವರೆಗಿನ ಜೀವನದಲ್ಲಿ ಸ್ವಲ್ಪವೂ ಕಷ್ಟಪಡದೆ ನಿರರ್ಥಕವಾಗಿ ಕಳೆದೆನೆಂದಾಯಿತು. ಕೊಲೀಗ್ ಒಬ್ಬರಿಗೆ "ಮಧುಮೇಹ' ಪತ್ತೆಯಾದಾಗ ""ಛೆ! ತುಂಬಾ ಟೆನÒನ್ ತಗೊಂಡು ದುಡೀತಿದ್ದರು' ಎಂಬುದೊಂದು ಪ್ರಶಂಸೆಯೇ ಹೊರತು ಅದರಲ್ಲಿ ವ್ಯಂಗ್ಯವೇನಿಲ್ಲ. ಅಲ್ಲದೆ, ಡಯಬಿಟೀಸ್ ಇಲ್ಲದಿದ್ದರೆ ಸಮಾಧಾನಪಟ್ಟುಕೊಳ್ಳುವ ಹಾಗಿಲ್ಲ, ಬೇರೇನಾದರೂ ಇರಬಹುದೆ? "ಕೊಲೆಸ್ಟರಾಲ್' ಇತ್ಯಾದಿ! ಒಂದಿಲ್ಲವೆಂದರೆ ಹತ್ತು ಸಂಶಯ. ಹೊಟೇಲ್‌ಗೆ ಐದಾರು ಮಂದಿ ಹೋಗಿ ಉಪಾಹಾರ ಮುಗಿಸಿ ಕಾಫಿ ಅಥವಾ ಚಹಾಕ್ಕೆ ಆರ್ಡರ್ ಮಾಡಿದಾಗಲೆಲ್ಲ ವೆಯrರ್ ಕೇಳುತ್ತಾನೆ ""ಶುಗರ್‌ಲೆಸ್ ಎಷ್ಟು?' ಆದರೆ, ಇತ್ತೀಚೆಗೆ ಅವನು ಕೇಳುವ ಶೈಲಿ ಬದಲಾಗಿದೆ.
""ವಿದ್ ಶುಗರ್ ಎಷ್ಟು?'
ಕೆಲವೊಮ್ಮೆ ಡಯಬಿಟೀಸ್ ಇಲ್ಲದವರು ತಮ್ಮ ಸನಿಹದವರು ಸಪ್ಪೆ ಕಾಫಿಗೆ ಆರ್ಡರ್ ಮಾಡಿದರೆ, ""ನಿಮಗೂ ಆ ಸಮಸ್ಯೆ ಉಂಟಾ?' ಎಂದು ಕೇಳುವುದು ಮಾಮೂಲು. ಆದರೆ, ಹತ್ತಿರ ಕುಳಿತವರು ಸಕ್ಕರೆ ಹಾಕಿದ ಕಾಫಿಯನ್ನೇ ಕುಡಿಯುತ್ತಿದ್ದರೆ ""ನಿಮಗಿನ್ನೂ ಶುರುವಾಗಲಿಲ್ಲವೆ?' ಎಂದು ಉದ್ಗರಿಸುವುದು ಇತ್ತೀಚೆಗಿನ ತೀರಾ ಸಾಮಾನ್ಯವಾಗಿಬಿಟ್ಟಿದೆ. "ಇನ್ನೂ ಶುರುವಾಗಲಿಲ್ಲವೆ?' ಎಂಬ ಧ್ವನಿಯಲ್ಲಿ ನೀವಿನ್ನೂ ಸಾಮಾಜಿಕವಾಗಿ ಕೆಳಸ್ತರದಲ್ಲಿದ್ದೀರಿ ಎಂಬ ಧ್ವನಿಯಿರುತ್ತದೆ.
ಕಾಯಿಲೆಯನ್ನೂ ಜೀವನಶಿಸ್ತನ್ನಾಗಿ ಪರಿವರ್ತಿಸಿಕೊಳ್ಳುವವನೇ ನಿಜವಾದ ಬುದ್ಧಿವಂತ. ಮಧುಮೇಹ ಇರುವವರು ಊಟದ ಸಮಯ ತಪ್ಪಿಸುವುದಿಲ್ಲ, ಅಧಿಕ ತಿನ್ನುವುದಿಲ್ಲ, ಸಣ್ಣ ದೂರವನ್ನು ಕ್ರಮಿಸಲು ವಾಹನವನ್ನು ಆಶ್ರಯಿಸುವುದಿಲ್ಲ, ಶರೀರದಲ್ಲಾಗುವ ಮಾರ್ಪಾಡುಗಳ ಬಗ್ಗೆ ನಿರ್ಲಕ್ಷ್ಯ ಹೊಂದಿರುವುದಿಲ್ಲ.
ಶಾರೀರಿಕ ತೊಂದರೆಗಳು ಹೆಚ್ಚಾಗುತ್ತಿರುವಂತೆಯೇ ಮತ್ತೂಂದೆಡೆ ನಮ್ಮ ಆಹಾರ ಸಂಸ್ಕೃತಿಯೂ ಅದಕ್ಕೆ ಪೂರಕವಾಗಿ ಬೆಳೆಯುತ್ತಿರುವುದರ ಬಗ್ಗೆ ಏನೆನ್ನಬೇಕೋ ಗೊತ್ತಾಗುತ್ತಿಲ್ಲ. ಈ ಹಿಂದೆಲ್ಲ ವಿಶೇಷ ಕಾರ್ಯಕ್ರಮಗಳಲ್ಲಿ ಸಿಹಿಯೆಂದರೆ ಪಾಯಸ. ಅದರ ಜೊತೆಗೆ ಒಂದೆರಡು ಭಕ್ಷ್ಯಗಳು. ಲಡ್ಡು , ಜಿಲೇಬಿ ಇತ್ಯಾದಿಗಳು ಬರುವಾಗ ದೂರದಿಂದಲೇ ನೋಡಿ ಎಡಗೈಯನ್ನು ಎಲೆಯ ಮೇಲೆ ಆಡಿಸುತ್ತ ನಿರಾಕರಣೆಯ ಸೂಚನೆ ನೀಡಬಹುದು. ಕೆಲವರು ಸಿಹಿ ತಿನ್ನಲಾಗದ ಸಮಸ್ಯೆ ಇದ್ದರೂ ಸ್ವಲೂಪ ಪಾಯಸವನ್ನು ಎಲೆಯ ತುದಿಗೆ ಹಾಕಿಸಿಕೊಂಡು ಬೆರಳಿನಲ್ಲಿ ನೆಕ್ಕಿ ಊಟವನ್ನು ಸಮಾಪ್ತಿಗೊಳಿಸುತ್ತಾರೆ.
ಪಾಯಸವನ್ನು ನಿರಾಕರಿಸುವ ರೀತಿಯಲ್ಲಿಯೇ ಆತ ಮಧುಮೇಹಿಯೆಂದು ತಿಳಿದುಕೊಳ್ಳುವ ಸೂಕ್ಷ್ಮಜ್ಞತೆ ಬಡಿಸುವವನಿಗಿದ್ದರೆ ಮತ್ತು ಸೌಟನ್ನು ಬಾಗಿಸಿ ಎಲೆ ತುದಿಗೆ ಸ್ವಲೂಪವಷ್ಟೇ ಬೀಳಿಸುವ ಮಾಡುವ ಕೌಶಲವಿದ್ದರೆ ಅಂಥವರಿಗೆ ಇನ್ನಿನ್ನು ಸಭೆ ಸಮಾರಂಭಗಳಿಗೆ ವಿಶೇಷ ಬೇಡಿಕೆ ಬರಲಿದೆ.
ಕೆಲ ಆತ್ಮೀಯ ಸಮಾರಂಭಗಳಲ್ಲಂತೂ ಅತಿಥೇಯರು ಅತ್ಯಂತ ಪ್ರಿಯರಾದವರ ಬಳಿ ನಿಂತು ಪಾಯಸ ಹಾಕಿಸುವುದೊಂದು ಸಂಪ್ರದಾಯ. ಕೆಲವರಿಗೆ ಮಧುಮೇಹ ಇರುವುದಿಲ್ಲ. ಆದರೆ ಅವರು ಎರಡು ಸೌಟು ಪಾಯಸ ತಿಂದು ಏಳಬೇಕೆನ್ನುವಷ್ಟರಲ್ಲಿ ಯಜಮಾನನ ಆಗಮನವಾಗುತ್ತದೆ. "ಸಾವಕಾಶ ಸಾವಕಾಶ' ಎಂದು ಹೇಳುತ್ತ ""ಇವರಿಗೆರಡು ಸೌಟು ಹಾಕಪ್ಪ... ಆಹಾಂ ಇನ್ನೆರಡು...' ಎಂದು ಬಡಿಸುವವನಿಗೆ ಆರ್ಡರ್ ಮಾಡುತ್ತಾರೆ. ಯಜಮಾನರು ಹೇಳಿದ ಹಾಗೆ ಮಾಡದಿದ್ದರೆ ಅವರಿಗೆ ಸಿಟ್ಟು ಬಂದೀತು ಎಂಬ ಭಯ ಬಡಿಸುವವನಿಗೆ. ತಿನ್ನುವವರಿಗೆ ಇಷ್ಟವಿಲ್ಲದಿದ್ದರೂ ಅವರಿಗೆ ನಾಲ್ಕು ಸೌಟು ಪಾಯಸವನ್ನು ಎರೆಯಲೇಬೇಕಾಗುತ್ತದೆ! ""ಇವರಿಗೆ ಪಾಯಸ ಹಾಕಪ್ಪ...' ಎಂದು ಹೇಳುವ ಮಾತಿನ ಧ್ವನಿ ನಿಜವಾಗಿ ಬೇರೆಯೇ ಇರುತ್ತದೆ, ""ಇನ್ನೂ ಶುರುವಾಗಿಲ್ಲ ನೋಡು ಇವನಿಗೆ... ನಾಲ್ಕು ಸೌಟು ತಿನ್ನಲಿ... ಯಾಕೆ ಶುರುವಾಗಲಿಲ್ಲವೊ ನೋಡುತ್ತೇನೆ!'
ಮದುವೆ, ಮುಂಜಿಗಳಲ್ಲಿ ಈಗ ಪಂಚಭಕ್ಷ್ಯ ಪರಮಾನ್ನಗಿಂತಲೂ ಅಪಾಯಕಾರಿಯಾದ ತಿನಿಸೊಂದಿದೆ! ಅರೆ ಘನ ಅರೆ ದ್ರವ ಪದಾರ್ಥ. ಅತಿಯಾಗಿ ಬಡಿಸುವ ಉತ್ಸಾಹ ತೋರಿಸಿ ಅವಕಾಶ ಸಿಗದೆ ಒದ್ದಾಡುವ ಸಂಬಂಧಿಕನೋರ್ವ ಪಾಯಸ ಬರುವ ಮೊದಲೇ ಒಂದು ದೇವದಾರು ಮರದಲ್ಲಿ ತಯಾರಿಸಿದ ಪುಟ್ಟ ಚಮಚವನ್ನು ಎಲೆಯ ತುದಿಯಲ್ಲಿ ಇಟ್ಟುಕೊಂಡು ಹೋಗುವಾಗಲೇ ನಿಮಗೆ ಅಪಾಯದ ಅರಿವಾಗಿರುತ್ತದೆ. ಬಿಸಿಬಿಸಿ ಪಾಯಸ ತಿಂದ ಹೊಟ್ಟೆಗೆ ತಣ್ಣಗಿನ ಐಸ್‌ಕ್ರೀಂ ಸುರಿಯುವುದು ಹೀಗೆ? ಅದನ್ನು ನಮ್ಮ ಜಠರ ಸಹಿಸಿಕೊಂಡೀತೆ? ಅದರಲ್ಲೂ ಇದು ಹೋಲ್‌ಸೇಲ್ ಐಸ್‌ಕ್ರೀಂ! ಕೆಲವೊಮ್ಮೆ ದೊಡ್ಡ ಪಾರ್ಲರ್‌ಗಳಲ್ಲಿ ವಾರಗಟ್ಟಲೆ ಉಳಿದ ಐಸ್‌ಕ್ರೀಂನ್ನು ಸರ್ವರ್ ಸಪ್ಲೆ„ ಮಾಡಲು ಮುಂದಾದರೆ, ""ಬೇಡ ಅವರಿಗೆ ಅದನ್ನು ಕೊಡಬೇಡ. ಅದು ನಾಡಿದ್ದು ದುರ್ಗಾ ಕಲ್ಯಾಣ ಮಂಟಪದ ಮದುವೆಗೆ ಬೇಕು' ಎಂದು ಪಾರ್ಲರ್ ಯಜಮಾನ ಸೂಚಿಸುತ್ತಾನೆ ! ಆವರೆಗೆ ಶೀತಭಾದೆಯ ಅನುಭವವಿಲ್ಲದವರೂ ಮದುವೆ ಮನೆಯ ರಖಂ ಐಸ್‌ಕ್ರೀಂ ತಿಂದು ಸುರುಸುರು ಎಂದು ಮೂಗಿನಲ್ಲಿ ಸದ್ದು ಮಾಡುವುದು ನೋಡಿದರೆ ಇದರಲ್ಲೇನೋ ಔಷಧೀಯ ಗುಣಗಳಿರಬಹುದು ಎಂಬ ಸಂಶಯ ಮೂಡುತ್ತದೆ. ಅಲ್ಲದೆ, ಕಾಲಕಾಲಕ್ಕೆ ಜ್ವರ ಬಂದು ರಕ್ತದಲ್ಲಿರುವ ಟಾಕ್ಸಿಕ್ ಅಂಶಗಳನ್ನು ನಾಶಪಡಿಸುವ ಸಾಧ್ಯತೆಗಳು ಕಡಿಮೆ ಇರುವ ದೇಹ ಪ್ರಕೃತಿಯವರು ದೊಡ್ಡ ಸಮಾರಂಭಗಳಲ್ಲಿ ಎರಡು ಐಸ್‌ಕ್ರೀಂಗಳನ್ನು ತಿಂದರೆ ಸಾಕು, ಸಂಜೆಯೇ ತಲೆಭಾರವಾಗಿ ರಾತ್ರಿಗೆ ಮೈ ಬಿಸಿಯಾಗುತ್ತದೆ.
ಅಂತರಂಗದಲ್ಲಿ ಸಿಹಿ ಇದ್ದರಂತೂ ಐಸ್‌ಕ್ರೀಂನ ಸಿಹಿಯೂ ಹೆಚ್ಚಾಗಿ ಅವಾಂತರವಾಗುವ ಸಾಧ್ಯತೆ ಹೆಚ್ಚು. ಹಾಗಾಗಿ, ಅದನ್ನು ಅಲ್ಲಿಯೇ ಬಿಟ್ಟು ಓಡಲು ಪ್ರಯತ್ನಿಸಿದಿರೊ ಯಾರೋ ತಿಂದಾಗ ನೆಲಕ್ಕೆ ಸುರಿದ ಐಸ್‌ಕ್ರೀಂನ ಮೇಲೆ ನೀವು ಕಾಲಿಟ್ಟು ಜಾರಿ ಬೀಳುವುದು ಗ್ಯಾರಂಟಿ.