Udayavani | Jan 28, 2013
ನೀನು ಮತ್ತೆ ಮತ್ತೆ ಭೇಟಿ ನೀಡಲು ಬಯಸುವ ಜಾಗ ಯಾವುದು ಎಂದು ಕೇಳಿದರೆ, ನಾನು ಥಟ್ಟನೆ ಪುಸ್ತಕದಂಗಡಿ ಎಂದುಬಿಡುತ್ತೇನೆ. ಪುಸ್ತಕಗಳ ನಡುವೆ ಹೊತ್ತು ಕಳೆಯುವ ಸುಖವೇ ಬೇರೆ. ನಮ್ಮೂರಲ್ಲಿ ಪುಸ್ತಕದ ಅಂಗಡಿಗಳೇ ಇರಲಿಲ್ಲ. ಬಸ್ ನಿಲ್ದಾಣದ ಪಕ್ಕದಲ್ಲೇ ದೊಡ್ಡದೊಂದು ಕಟ್ಟಡದಲ್ಲಿ ಸರ್ಕಾರಿ ಗ್ರಂಥಾಲಯ ಒಂದಿತ್ತು. ಮನೆಗಿಂತ ಕಾಲೇಜಿಗಿಂತ ಹೆಚ್ಚಿನ ವೇಳೆಯನ್ನು ನಾನು ಕಳೆದದ್ದು ಅಲ್ಲಿಯೇ ಎಂದು ಹೇಳಬೇಕು.
ಮಂಗಳೂರಿನಲ್ಲಿ ಕೆಲಸಕ್ಕೆ ಸೇರಿದ ನಂತರ ದಿನಕ್ಕೊಮ್ಮೆ ಅತ್ರಿ ಬುಕ್ ಸೆಂಟರಿಗೆ ಹೋಗುವುದು ರೂಢಿಯಾಯಿತು. ಆದರೆ ಅಲ್ಲಿ ಹೆಚ್ಚು ಹೊತ್ತು ಕಳೆಯಲು ಧೆ„ರ್ಯವಾಗುತ್ತಿರಲಿಲ್ಲ. ಅಶೋಕವರ್ಧನರು ಗಂಭೀರವಾಗಿ ಕೂತು ಒಳಹೋಗುತ್ತಿದ್ದಂತೆ ಯಾವ ಪುಸ್ತಕ ಬೇಕು ಎಂದು ಕೇಳುತ್ತಿದ್ದರು. ಯಾವ ಪುಸ್ತಕ ಹೇಳಿದರೂ ಅದು ಮೂರನೇ ಕಪಾಟಿನ ಆರನೇ ಸಾಲಲ್ಲಿದೆ ಎಂದೋ, ಎಂಟನೇ ಕಪಾಟಿನ ಮೇಲಿನ ಸಾಲಲ್ಲಿದೆ ಎಂದೋ ಹೇಳುತ್ತಿದ್ದರು. ಅಲ್ಲಿ ಹೋಗಿ ಆ ಪುಸ್ತಕವನ್ನು ಹುಡುಕುವ ನೆಪದಲ್ಲಿ ಪೆಂಗ್ವಿನ್ ಪ್ರಕಾಶನದ ಪುಸ್ತಕಗಳನ್ನು ತಿರುವಿ ಹಾಕುತ್ತಿದ್ದೆ. ಆಗೆಲ್ಲ ಅವಕ್ಕೆ ಪೌಂಡ್ ಲೆಕ್ಕದಲ್ಲಿ ಬೆಲೆ. ಅದನ್ನು ಕೊಳ್ಳುವ ತಾಕತ್ತಂತೂ ಇರಲಿಲ್ಲ. ಹೀಗಾಗಿ ಪುಸ್ತಕದ ಬೆನ್ನಿನಲ್ಲಿ ಬರೆದ ಸಾಲುಗಳನ್ನಷ್ಟೇ ಓದಿ, ಅದು ಎಷ್ಟು ಚೆನ್ನಾಗಿರಬಹುದು ಎಂದು ಲೆಕ್ಕಹಾಕುವುದು, ಮುಂದೆ ಯಾವತ್ತಾದರೂ ಅದನ್ನು ಕೊಳ್ಳಬೇಕು ಎಂದು ಕನಸು ಕಾಣುವುದು ಬಿಟ್ಟರೆ ಬೇರೆ ದಾರಿಯಿರಲಿಲ್ಲ.
ಬೆಂಗಳೂರಿಗೆ ಬಂದ ನಂತರವೂ ಪದೇ ಪದೇ ಹೋಗುತ್ತಿದ್ದದ್ದು ಪುಸ್ತಕದಂಗಡಿಗಳಿಗೇ. ಗಾಂಧೀ ಬಜಾರಿನಲ್ಲಿರುವ ಬಾಕಿನ ಅವರ ಲಿಪಿ ಮುದ್ರಣ ಕೂಡ ಒಂಥರ ಪುಸ್ತಕದಂಗಡಿಯ ಥರವೇ ಇತ್ತು. ಹೊಸ ಹೊಸ ಪುಸ್ತಕಗಳು ಅಲ್ಲಿ ಓದಲು ಸಿಗುತ್ತಿದ್ದವು. ವೈಎನೆR ಅಲ್ಲಿಗೆ ಕರೆ ದೊಯ್ದು ಪರಿಚಯಿಸಿದ ಮೇಲೆ, ಅಲ್ಲಿಗೆ ಹೋಗುವುದಕ್ಕೆ ಆರಂಭಿಸಿದೆ. ಆ ಕಾಲಕ್ಕೆ ಬೆಂಗಳೂರಿನಲ್ಲೂ ಸಾಕಷ್ಟು ಪುಸ್ತಕದ ಅಂಗಡಿಗಳಿರಲಿಲ್ಲ.
ಆಗ ಹಳೆಯ ಪುಸ್ತಕಗಳನ್ನು ಬೀದಿ ಬದಿಯಲ್ಲಿ ಮಾರಾಟ ಮಾಡುತ್ತಿದ್ದರು. ಒಮ್ಮೊಮ್ಮೆ ಅಲ್ಲಿ ಅತ್ಯಮೂಲ್ಯ ಪುಸ್ತಕಗಳು ಸಿಗುತ್ತಿದ್ದವು. ನಮಗೆ ಬೇಕಾದ ಪುಸ್ತಕಗಳೆಲ್ಲ ಒಂದೇ ಕಡೆ ಸಿಗುವ ಜಾಗವೊಂದು ಇರಬಾರದೇ ಅನ್ನಿಸುತ್ತಿತ್ತು. ಈ ಮಧ್ಯೆ ಸಪ್ನ ಬುಕ್ ಹೌಸ್ ಕನ್ನಡ ಪುಸ್ತಕಗಳಿಗೆಂದೇ ಒಂದು ಮಳಿಗೆಯನ್ನು ಆರಂಭಿಸಿ ನಮ್ಮ ಅಗತ್ಯಗಳಿಗೆ ನೆರವಾಯಿತು. ಅದು ಬಿಟ್ಟರೆ ಬಳೇಪೇಟೆಯಲ್ಲಿರುವ ಸಾಹಿತ್ಯ ಭಂಡಾರ, ಮೈಸೂರಿಗೆ ಹೋದಾಗ ಗೀತಾ ಬುಕ್ ಹೌಸ್- ಮುಂತಾದ ಜಾಗಗಳು ಗೊತ್ತಾದವು. ಚರ್ಚ್ ಸಿc†àಟಿನಲ್ಲಿ ಮೂರ್ತಿಯವರ ಪ್ರೀಮಿಯರ್ ಬುಕ್ ಹೌಸ್ ಗುರುತಾಯಿತು. ಸ್ಟ್ರಾಂಡ್ ಮುಂತಾದ ಅಂಗಡಿಗಳು ಪರಿಚಯವಾದವು. ಅಲ್ಲಿ ಹಳೆಯ ಹೊಸ ಪುಸ್ತಕಗಳೆಲ್ಲ ಸಿಗುತ್ತಿದ್ದವು.
ಈ ಮಧ್ಯೆ ಅಂಕಿತ ಪುಸ್ತಕ ಆರಂಭವಾಯಿತು. ಅದು ನಮ್ಮ ಮನೆಗೆ ಸಮೀಪದಲ್ಲಿದ್ದುದರಿಂದ ಅಲ್ಲಿಗೆ ಹೋಗುವುದು ರೂಢಿಯಾಯಿತು. ಅಲ್ಲಿ ಪರಿಚಯವಾದವರು ಪ್ರಕಾಶ್ ಕಂಬತ್ತಳ್ಳಿ. ಅವರು ಆ ಕಾಲಕ್ಕೆ ಹೊಸ ಲೇಖಕರನ್ನು ಕೊಂಚ ಗುಮಾನಿಯಿಂದಲೇ ನೋಡುತ್ತಿದ್ದರು. ತುಂಬ ಹೊತ್ತು ನಿಂತಿದ್ದರೆ, ಈತ ಪುಸ್ತಕ ಪ್ರಕಟಿಸಿ ಎಂದು ಕೇಳುತ್ತಾನೇನೋ ಎಂಬ ಆತಂಕ ಅವರಲ್ಲಿ ಬೆಳೆಯುತ್ತಿದ್ದಂತೆ ಭಾಸವಾಗುತ್ತಿತ್ತು. ಹೀಗಾಗಿ ಅವರು ಪ್ರಶ್ನೆಗಳಿಗೆ ಎಷ್ಟು ಬೇಕೋ ಅಷ್ಟೇ ಉತ್ತರಿಸಿ ಸಾಗಹಾಕುತ್ತಿದ್ದರು.
ಆದಾದ ನಂತರ, ಪ್ರಕಾಶ್ ನನ್ನ ಪುಸ್ತಕಗಳನ್ನು ಪ್ರಕಟಿಸಿದರು. ಹೀಗಾಗಿ ಅಂಕಿತ ಪುಸ್ತಕ ನನ್ನ ನಿತ್ಯದ ಭೇಟಿಯ ತಾಣವಾಯಿತು. ಅಲ್ಲಿಗೆ ಹಿರಿಯ ಲೇಖಕರೆಲ್ಲ ಬರುತ್ತಿದ್ದರು. ನಾನು ಹೋದಾಗ ಒಬ್ಬರಲ್ಲ ಒಬ್ಬರು ಲೇಖಕರು ಅಲ್ಲಿ ಎದುರಾಗುತ್ತಿದ್ದರು. ಅನೇಕರು ಅವರ ಪುಸ್ತಕಗಳನ್ನು ಓದಿ, ಹೇಗಿದೆ ಹೇಳಿ ಎಂದು ಉಚಿತವಾಗಿಯೇ ಕೊಡುತ್ತಿದ್ದರು. ಹೀಗಾಗಿ ಅಲ್ಲಿಗೆ ಹೋದಾಗೆಲ್ಲ ಒಂದಷ್ಟು ಕಾಂಪ್ಲಿಮೆಂಟರಿ ಪ್ರತಿಗಳನ್ನು ಗಿಟ್ಟಿಸಿಕೊಳ್ಳಬಹುದು ಅನ್ನುವುದು ಗೊತ್ತಾಯಿತು. ಅದರ ಜೊತೆ ಪ್ರಕಾಶ್ ದಂಪತಿ ರುಚಿಯಾದ ಕಾಫಿಯನ್ನೂ, ಗಾಂಧೀಬಜಾರ್ ಮೂಲೆಯಲ್ಲಿ ಸಿಗುತ್ತಿದ್ದ ರುಚಿಯಾದ ಬೋಂಡವನ್ನೂ ಕೊಡಿಸುತ್ತಿದ್ದರು.
ಪುಸ್ತಕದಂಗಡಿಯ ಮೇಲಿನ ಪ್ರೀತಿ ಹೆಚ್ಚಲು ಇದೂ ಕಾರಣವಾಗಿರಬೇಕು.
.
ಪ್ರಕಾಶ್ ಕಂಬತ್ತಳ್ಳಿ ಎನ್‌ಜಿಇಎಫ್ ಸಂಸ್ಥೆಯಲ್ಲಿದ್ದರು. ಪಿಆರ್‌ಓ ಆಗಿದ್ದವರು. ಪತ್ರಿಕೆ ನಡೆಸುತ್ತಿದ್ದವರು. ನಂತರ ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕಿದ್ದರು. ಚಂದ್ರಶೇಖರ ಕಂಬಾರರ ಜೊತೆಗೆ ಕೆಲಸ ಮಾಡಿದರು. ಆಮೇಲೆ, ಟಿಎನ್ ಸೀತಾರಾಮ್ ಜೊತೆಗಿದ್ದವರು. ಅವರು ಮತ್ತು ಉಪನ್ಯಾಸಕಿ ಆಗಿದ್ದ ಪತ್ನಿ ಪ್ರಭಾ ಕಂಬತ್ತಳ್ಳಿ, ಉದ್ಯೋಗ ಬಿಟ್ಟು ಪುಸ್ತಕದಂಗಡಿ ಇಡಲು ತೀರ್ಮಾನಿಸುವ ಹೊತ್ತಿಗೆ, ಪುಸ್ತಕ ಪ್ರಕಾಶನ ಮತ್ತು ಮಾರಾಟ ಎಂದರೆ ಕೈ ಸುಟ್ಟುಕೊಳ್ಳುವ ವ್ಯಾಪಾರ ಎಂದೇ ಎಲ್ಲರೂ ನಂಬಿದ್ದರು. ಗಾಂಧೀಬಜಾರಿನಲ್ಲಿ ಪುಸ್ತಕದ ಅಂಗಡಿ ಇಟ್ಟಿದ್ದ ಸುಮತೀಂದ್ರ ನಾಡಿಗರು ನಷ್ಟ ಅನುಭವಿಸಿ, ನೊಂದು ಅಂಗಡಿ ಮುಚ್ಚಿದ್ದರು.
ಗಾಂಧೀಬಜಾರಿನ ಮಂದಿಗೆ ಬಜ್ಜಿ,ಬೋಂಡಾ ಮತ್ತು ಮಸಾಲೆದೋಸೆಯ ಮೇಲಿರುವ ಪ್ರೀತಿ ಪುಸ್ತಕಗಳ ಮೇಲಿಲ್ಲ ಅಂತ ಸಾಹಿತಿಗಳು ತಮಾಷೆ ಮಾಡುತ್ತಿದ್ದರು. ಅಂಥ ಹೊತ್ತಲ್ಲಿ ಪ್ರಕಾಶ್ ಕಂಬತ್ತಳ್ಳಿ ಪ್ರಕಾಶನ ಸಂಸ್ಥೆ ಆರಂಭಿಸಿದ್ದರು.
ಅದು ಶುರುವಾಗಿ ಹದಿನೈದು ವರ್ಷಗಳೇ ಆಗಿವೆ. ಗಾಂಧೀಬಜಾರಿನ ಅತ್ಯಂತ ಹಳೆಯ ಪುಸ್ತಕದಂಗಡಿ ಎಂಬ ಹೆಸರೂ ಅದಕ್ಕಿದೆ. ಪುಸ್ತಕಗಳನ್ನು ಬಲ್ಲ, ಪುಸ್ತಕಗಳ ಜೊತೆ ಒಡನಾಡುವ ಮಂದಿ ಅಲ್ಲಿದ್ದಾರೆ. ನೀವು ಯಾವುದೇ ಪುಸ್ತಕ ಕೇಳಿದರೂ, ಅದು ಎಲ್ಲಿದೆ, ಇದೆಯೋ ಇಲ್ಲವೋ ಅನ್ನುವುದು ಗೊತ್ತಿರುವ ಸಿಬ್ಬಂದಿಯಿದ್ದಾರೆ. ಇವತ್ತಿಗೂ ಅಲ್ಲಿಗೆ ಲೇಖಕರು ಬರುತ್ತಾರೆ. ಗಂಟೆಗಟ್ಟಲೆ ಹರಟೆಗೆ ಅದೊಂದು ತಾಣವೂ ಆಗಿದೆ. ಇತ್ತೀಚಿಗೆ ಅಲ್ಲಿಗೆ ಅರವಿಂದ್ ಅಡಿಗ ಬಂದಿದ್ದರು. ಅಂಕಿತ ಪುಸ್ತಕದ ಕುರಿತು ತಮ್ಮ ಅಂಕಣದಲ್ಲಿ ಪ್ರಸ್ತಾಪಿಸಿದ್ದರು. ಯಶವಂತ ಚಿತ್ತಾಲರ ಶಿಕಾರಿ ಕಾದಂಬರಿಯನ್ನು ಕೊಂಡೊಯ್ದು ಓದಿ, ಆ ಕಾದಂಬರಿಯ ಕುರಿತೂ ವಿಸ್ತಾರವಾದ ವಿಮರ್ಶೆ ಬರೆದಿದ್ದರು.