Monday, May 20, 2013
Last Updated: 12:49:33 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಇಂದು ಮೂರನೇ ದಿನ
    • ಧಾರವಾಡ ಸಾಹಿತ್ಯ ಸಂಭ್ರಮ
      • ಗಿರಡ್ಡಿ ಗೋವಿಂದರಾಜ | Jan 28, 2013

        ಕಳೆದ ವರ್ಷ ಜನವರಿ 20ರಿಂದ 24ರ ವರೆಗೆ ನಡೆದ ಜೈಪುರ ಲಿಟರೇಚರ್‌ ಫೆಸ್ಟಿವಲ್‌ ನೋಡಲೆಂದು ಧಾರವಾಡದಿಂದ ನಾವು ನಾಲ್ಕು ಜನ - ನಾನು, ರಮಾಕಾಂತ ಜೋಶಿ, ಲೋಹಿತ ನಾಯ್ಕರ್‌ ಮತ್ತು ಶಶಿಧರ ನರೇಂದ್ರ  ಜೈಪುರಕ್ಕೆ ಹೋಗಿದ್ದೆವು. ನಾವು ಮೊದಲ ಮೂರು ದಿನ ಅಲ್ಲಿದ್ದೆವು. ಅಲ್ಲಿ ಕನ್ನಡ ಸಾಹಿತ್ಯವನ್ನು ಪ್ರತಿನಿಧಿಸಿದ ಸಾಹಿತಿಗಳು ಇಬ್ಬರೇ- ಗಿರೀಶ ಕಾರ್ನಾಡ ಮತ್ತು ಎಚ್‌. ಎಸ್‌. ಶಿವಪ್ರಕಾಶ್‌. ಆ ಉತ್ಸವದಲ್ಲಿ ಅದರ ನಿರ್ದೇಶಕರು "ಭಾರತೀಯ ಮತ್ತು ಅಂತಾರಾಷ್ಟ್ರೀಯ ಬರವಣಿಗೆಯ ಕುಂಭಮೇಳ' ಎಂದು ಕರೆದುಕೊಂಡದ್ದು ಸರಿಯಾಗಿಯೇ ಇತ್ತು. ಬೇರೆಬೇರೆ ಭಾರತೀಯ ಮತ್ತು ಪರದೇಶಗಳ ಅನೇಕ ಬರಹಗಾರರು ಅದರಲ್ಲಿ ಪಾಲ್ಗೊಂಡಿದ್ದರು. ಕೋಟ್ಯಂತರ ರೂಪಾಯಿಗಳ ವ್ಯವಹಾರ ! ಸಹಜವಾಗಿಯೇ ಉತ್ಸವದ ನಡವಳಿಕೆಗಳೆಲ್ಲ ಇಂಗ್ಲೀಷಿನಲ್ಲಿ ನಡೆದವು. ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದ ಮತ್ತು ಓದುತ್ತಿದ್ದ ತರುಣರ ಮತ್ತು ಹುಡುಗರ ಹಿಂಡುಗಳು ಅಲ್ಲಿ ಅಲೆದಾಡಿಕೊಂಡಿದ್ದವು. ಐದು ವೇದಿಕೆಗಳಲ್ಲಿ ಏಕಕಾಲಕ್ಕೆ ಗೋಷ್ಠಿಗಳು ನಡೆಯುತ್ತಿದ್ದವು. ಕೂತೂಹಲಿಗಳು ಅಲ್ಲಿಷ್ಟು ಇಲ್ಲಿಷ್ಟು ಓಡಾಡಿಕೊಂಡಿದ್ದರು. ಭಾರತೀಯ ಭಾಷೆಗಳು ಅಲ್ಲಿ ಬಾಯಿ ಕಳೆದುಕೊಂಡಿದ್ದವು.
        ಪರೋಕ್ಷವಾಗಿ ಅಷ್ಟಿಷ್ಟು ಮಾತ್ರ ಭಾರತೀಯ ಸಾಹಿತ್ಯಗಳ ಪ್ರಸ್ತಾಪ ಆಗುತ್ತಿತ್ತು. ಇದನ್ನೆಲ್ಲ ನೋಡಿ, ಒಂದು ಬಗೆಯ ಪರಕೀಯ ಭಾವನೆ, ನಮ್ಮದಲ್ಲದ ಯಾವದನ್ನೋ ದೂರದಲ್ಲಿ ನೋಡಿದ ಅನುಭವ ನಮಗಾಯಿತು. ಇಂಥ ಕುಂಭಮೇಳಗಳಲ್ಲಿ ಭಾರತೀಯ ಭಾಷೆ-ಸಾಹಿತ್ಯಗಳ ಸ್ಥಾನ ಏನು ಎಂಬ ಸಂಶಯ ನಮ್ಮನ್ನು ಕಾಡಿತು.

        ತಿರುಗಿ ಬರುತ್ತ, ನಾವೂ ಇಂಥದೊಂದು ಉತ್ಸವವನ್ನು ಹಮ್ಮಿಕೊಳ್ಳಬಾರದೇಕೆ ಎಂಬ ವಿಚಾರ ತಲೆಯಲ್ಲಿ ಸುಳಿದಾಡತೊಡಗಿತು. ಅದು ಧಾರವಾಡದಲ್ಲಿ ನಡೆಯಬೇಕು ಮತ್ತು ಕನ್ನಡ ಸಾಹಿತ್ಯಕ್ಕೆ ಸೀಮಿತವಾಗಿರಬೇಕು ಎಂದು ನಿರ್ಧರಿಸಿದೆವು. "ಜೈಪುರ ಲಿಟರೇಚರ್‌ ಫೆಸ್ಟಿವಲ್‌' ಒಂದು ರೀತಿಯಲ್ಲಿ ನಮಗೆ ಪ್ರೇರಣೆ ನೀಡಿದ್ದು ನಿಜ. ಆದರೆ, ನಮ್ಮ ಉತ್ಸವ ಹೇಗಿರಬೇಕು ಮತ್ತು ಹೇಗಿರಬಾರದು ಎಂಬುದಕ್ಕೆ ಅದು ಒಂದು ಮಾದರಿಯನ್ನು ಒದಗಿಸಿತು.

        ಈ ವಿಚಾರ ತಲೆಯಲ್ಲಿ ಹೊಕ್ಕೊಡನೆ ಅದನ್ನು ಕೈಗೆತ್ತಿಕೊಂಡು, ಉತ್ಸವ ವನ್ನು ನಡೆಸಿಯೇ ಬಿಡೋಣವೆಂದು ಧಾರವಾಡದ ಪ್ರಮುಖ ಸಾಹಿತಿಗಳನ್ನೆಲ್ಲ ಒಂದೆಡೆ ಕೂಡಿಸಿ, ನಮ್ಮ ಯೋಜನೆಯನ್ನು ಅವರ ಮುಂದೆ ಇಟ್ಟೆವು. ಚೆನ್ನವೀರ ಕಣವಿ, ಜಿ.ಎಸ್‌. ಆಮೂರ, ಎಂ. ಎಂ. ಕಲಬುರ್ಗಿ, ವೀಣಾ ಶಾಂತೇಶ್ವರ, ಸಿದ್ಧಲಿಂಗ ಪಟ್ಟಣಶೆಟ್ಟಿ , ಲೋಹಿತ ನಾಯ್ಕರ ಮೊದಲಾದವರು ಈ ಸೂಚನೆಯನ್ನು  ಉತ್ಸಾಹದಿಂದ ಸ್ವಾಗತಿಸಿದರು. ಅದರ ಪರಿಣಾಮವೇ ಧಾರವಾಡ ಸಾಹಿತ್ಯ ಸಂಭ್ರಮ. ಇದನ್ನೊಂದು ಖಾಯಂ ಸಂಸ್ಥೆಯಾಗಿ  ಮಾಡಿ, ಅದರ ಮೂಲಕ ಪ್ರತಿವರ್ಷವೂ ಒಂದು ಉತ್ಸವವನ್ನು ನಡೆಸಬೇಕೆಂಬ ಉದ್ದೇಶದಿಂದ "ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌' ಹೆಸರಿನಿಂದ ಅದನ್ನು ನೋಂದಾಯಿಸಲಾಯಿತು.
        ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿರುವ ಧಾರವಾಡ ನಗರ ಅನೇಕ ಜನ ಪ್ರಸಿದ್ಧ ಸಾಹಿತಿಗಳ, ಸಂಗೀತಗಾರರ, ಚಿತ್ರಕಲಾವಿದರ, ಕನ್ನಡ ಹೊರಾಟಗಾರರ ನೆಲೆಯೂ ಆಗಿ ಪ್ರಸಿದ್ಧವಾಗಿದೆ.
        ಈಗ ಧಾರವಾಡದಲ್ಲಿ ಅನೇಕ ಸುಸಜ್ಜಿತ ಸಭಾಂಗಣಗಳು ನಿರ್ಮಾಣವಾಗಿವೆ. ಅನೇಕ ಕಡೆ ಏಕಕಾಲಕ್ಕೆ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ದ. ರಾ. ಬೇಂದ್ರೆ, ಆಲೂರ ವೆಂಕಟರಾವ್‌ ಅವರ ಹೆಸರಿನಲ್ಲಿ ಕರ್ನಾಟಕ ಸರಕಾರ ಆರಂಭಿಸಿರುವ ಪ್ರತಿಷ್ಠಾನಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಕರ್ನಾಟಕ ವಿದ್ಯಾವರ್ಧಕ ಸಂಘವಂತೂ ಸಾಂಸ್ಕೃತಿಕ ಕಾರ್ಯಕ್ರಮಗಳ ಕೇಂದ್ರವೇ ಆಗಿದೆ. ಹೀಗೆ, ತನ್ನದೇ ಆದ ಸಾಂಸ್ಕೃತಿಕ ಅಸ್ಮಿತೆಯನ್ನು ಗಳಿಸಿಕೊಂಡಿರುವ ಧಾರವಾಡ ತನ್ನ ಹಿರಿಯ ಪರಂಪರೆಯನ್ನು ಇಂದಿಗೂ ಕ್ರಿಯಾಶೀಲವಾಗಿ ಮುಂದುವರಿಸಿಕೊಂಡು ಬಂದಿದೆ. ಪ್ರತಿದಿನವೂ ಇಲ್ಲಿ ನಡೆಯುವಷ್ಟು ಕಾರ್ಯಕ್ರಮಗಳು ರಾಜ್ಯದ ಬೇರೆ ಯಾವ ಊರಲ್ಲಿಯೂ ನಡೆಯುತ್ತಿರಲಿಕ್ಕಿಲ್ಲ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು. ಅನೇಕ ಬಗೆಯ ಸಾಂಸ್ಕೃತಿಕ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿ, ಹೊಸ ಹೊಸ ಮಾದರಿಗಳನ್ನು ಒದಗಿಸಿರುವ ಹೆಗ್ಗಳಿಕೆ ಧಾರವಾಡಕ್ಕಿದೆ. ಅಖೀಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಆರಂಭಿಸಿದ ಗೋಕಾಕ ಚಳುವಳಿ,  21 ವೇದಿಕೆಗಳಲ್ಲಿ ವೈವಿಧ್ಯಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಡೆಸಿದ ಧಾರವಾಡ ಉತ್ಸವ ತೀರ ಇತ್ತೀಚಿನ ಅಂಥ ಮಹತ್ವದ ಪ್ರಯೋಗಗಳು.

        ಧಾರವಾಡ ಇದೀಗ ಅಂಥ ಇನ್ನೊಂದು ಮಹತ್ವದ ಪ್ರಯೋಗಕ್ಕೆ ಮುಂದಾಗಿದೆ. ಕಳೆದ ಎರಡು ದಿನಗಳಲ್ಲಿ ಮತ್ತು ಇಂದು- ಒಟ್ಟು ಮೂರು ದಿನಗಳಲ್ಲಿ ನಡೆಯುತ್ತಿರುವ ಧಾರವಾಡ ಸಾಹಿತ್ಯ ಸಂಭ್ರಮ.
        ಇದು ಸಾಹಿತ್ಯ ಸಮ್ಮೇಳನ, ಮಾಮೂಲಿ ವಿಚಾರಸಂಕಿರಣಗಳಿಗಿಂತ ಭಿನ್ನವಾದ ಉತ್ಸವವಾಗಿರಬೇಕೆಂದು ನಮ್ಮ ಉದ್ದೇಶವಾಗಿತ್ತು. ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳನ್ನು ಹೊರತುಪಡಿಸಿದರೆ, ಉಳಿದ ಹಲವು ಗೋಷ್ಠಿಗಳಲ್ಲಿ ಓದು, ಸಂಭಾಷಣೆ, ಸಂವಾದ, ಮಾತುಕತೆ, ಚರ್ಚೆ, ಪ್ರಶ್ನೋತ್ತರಗಳೇ ಇಲ್ಲಿ ಮುಖ್ಯವಾಗಿವೆ. ಇಂದಿನ ಕನ್ನಡ ಸಾಹಿತ್ಯದಲ್ಲಿ ತಮ್ಮನ್ನು ಅರ್ಥಪೂರ್ಣವಾಗಿ ತೊಡಗಿಸಿಕೊಂಡಿರುವ 60 ಜನ ಸಾಹಿತಿಗಳು ಈ ಗೋಷ್ಠಿಗಳಲ್ಲಿ ಪಾಲುಗೊಳ್ಳುತ್ತಿದ್ದಾರೆ. ಜೊತೆಗೆ ಇನ್ನು 50 ಜನ ಸಾಹಿತಿಗಳು ವಿಶೇಷ ಆಹ್ವಾನಿತರಾಗಿ ಬಂದಿದ್ದಾರೆ. ಸುಮಾರು 300 ಜನ ಸಾಹಿತಿ ಮತ್ತು ಸಾಹಿತ್ಯಾಸಕ್ತರು ಪ್ರತಿನಿಧಿಗಳಾಗಿ ಭಾಗವಹಿಸುತ್ತಿದ್ದಾರೆ.

        ಇಂದಿನ ಕನ್ನಡ ಸಾಹಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸುವದು, ಹಿಡಿದಿರುವ ಹಾದಿಗಳನ್ನು ಗುರುತಿಸುವದು, ಹೊಸ ತಾಂತ್ರಿಕತೆ ಒದಗಿಸಿರುವ ಸೌಲಭ್ಯಗಳನ್ನು ಸಾಹಿತ್ಯದ ಬೆಳವಣಿಗೆಗೆ ಅರ್ಥಪೂರ್ಣವಾಗಿ ಬಳಸಿಕೊಳ್ಳುವದು ಇತ್ಯಾದಿ ವಿಷಯಗಳು ಈ ಸಾಹಿತ್ಯ ಸಂಭ್ರಮದಲ್ಲಿ ಮುಖ್ಯವಾಗಿ ಬಿಂಬಿತವಾಗಿವೆ.

        ಕನ್ನಡ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಾಹಿತ್ಯಾಸಕ್ತರಿಗೆ ಉಪಯೋಗವಾಗುವ ರೀತಿಯಲ್ಲಿ ಸಂಭ್ರಮದ ಗೋಷ್ಠಿಗಳನ್ನು ಆಯೋಜಿಸಲಾಗಿರುವುದು ವಿಶೇಷ. ಇತ್ತೀಚಿನ ಆತ್ಮಕಥೆಗಳ ಆಯ್ದ ಭಾಗಗಳ ಓದು, ಕಾವ್ಯವಾಚನ, ಪ್ರಾಚೀನ ಕಾವ್ಯಗಳ ಆಯ್ದ ಭಾಗಗಳ ಓದು, ಕಾರ್ಪೊರೇಟ್‌ ಜಗತ್ತು ಮತ್ತು ಕನ್ನಡ ಸಾಹಿತ್ಯ, ಇಂದಿನ ವಿಮರ್ಶೆ ತೊಡಕು-ತೊಡಕಾಗುತ್ತಿದೆಯೇಕೆ?, ಸಾಹಿತಿ-ವಿಮರ್ಶಕ-ಓದುಗರು, ಕಥೆ ಹುಟ್ಟುವ ರೀತಿ, ಪ್ರಶಸ್ತಿಗಳ ಹಾವಳಿ ಹೆಚ್ಚಾಗಿದೆಯೆ? ಅಂತರ್‌ಜಾಲದಲ್ಲಿ ಕನ್ನಡ, ಲೇಖಕರೊಂದಿಗೆ ಪ್ರಶ್ನೋತ್ತರ, ಕಥೆ ಹೇಳುವ ಕಲೆ ಇತ್ಯಾದಿ 15 ಗೋಷ್ಠಿಗಳಿರುತ್ತವೆ. 60ಜನ ಲೇಖಕರು ಈ ಗೋಷ್ಠಿಗಳಲ್ಲಿ ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಸಾಹಿತಿ-ಸಾಹಿತಿಗಳ ನಡುವೆ ಮತ್ತು ಲೇಖಕ-ಓದುಗರ ನಡುವೆ ಆತ್ಮೀಯ ಸಂಬಂಧಗಳನ್ನು ಬೆಳೆಸುವ ಉದ್ದೇಶವೂ ಈ ಸಂಭ್ರಮಕ್ಕಿದೆ. ಅನೇಕ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಸಾಹಿತ್ಯೋತ್ಸವಗಳು ದೇಶದ ಅನೇಕ ಕಡೆ ನಡೆಯುತ್ತಿವೆ. ಆದರೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ಕೇಂದ್ರವಾಗಿಟ್ಟುಕೊಂಡು ನಡೆಯುವ ವಿಶಿಷ್ಟ ಉತ್ಸವ ಇದೊಂದೇ ಆಗಿದೆ. ಕನ್ನಡದ ಪ್ರಸಿದ್ಧ ಸಾಹಿತಿಗಳೆಲ್ಲ ಈ ಸಂಭ್ರಮದಲ್ಲಿ ಪಾಲುಗೊಳ್ಳುತ್ತಿದ್ದಾರೆ.

        ಇವೆಲ್ಲದರ ಮಧ್ಯೆ ಈ ಸಂಭ್ರಮದ ಕುರಿತು ಕೆಲ ಭಿನ್ನಧ್ವನಿಗಳು ಕೇಳಿ ಬಂದದ್ದಿದೆ. ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸಮ್ಮೇಳನಗಳನ್ನು ಆಯೋಜಿಸುವಾಗ ಶಿಸ್ತನ್ನು ಕಾಪಾಡಿ ಕೊಳ್ಳುವ ಉದ್ದೇಶದಿಂದ ಕೆಲ ನಿಬಂಧನೆಗಳನ್ನು ವಿಧಿಸಿದ್ದು ಸ್ವಾಭಾವಿಕ. ಇವುಗಳನ್ನು ತೀರ ಗಂಭೀರ ವಾಗಿ  ತೆಗೆದುಕೊಂಡು ಟೀಕೆ, ಅಪಹಾಸ್ಯಗಳನ್ನು ಮಾಡುತ್ತಿದ್ದುದು ನಿಜಕ್ಕೂ ವಿಷಾದ ನೀಯ. ಪ್ರತಿಯೊಂದು ಗೋಷ್ಠಿಯೂ ಕಾಲಬದ್ಧವಾಗಿ ನಡೆದು, ಸೀಮಿತ ಅವಧಿಯಲ್ಲಿ ನಡೆಯಬೇಕಾಗಿರುವುದರಿಂದ ಲಿಖೀತ ಪ್ರಶ್ನೆಗಳನ್ನು ಕಳಿಸಲು ಕೇಳಿಕೊಳ್ಳಲಾಗಿದ್ದನ್ನು ಕೂಡ ಅಪಾರ್ಥ ಮಾಡಿಕೊಂಡು ಬೇರೆ ಬಣ್ಣ ಕೊಟ್ಟದ್ದು ಕೂಡ ದುರ್ದೈವದ ಸಂಗತಿ.
        ಒಟ್ಟಾರೆ ಉತ್ಸವದ ಧ್ಯೇಯೋದ್ದೇಶಗಳನ್ನು ಸರಿಯಾಗಿ ಅರ್ಥೈಸಿಕೊಂಡು, ಇಂತಹ ಅಪರೂಪದ ಉತ್ಸವವಕ್ಕೆ ಎಲ್ಲ ಆಸಕ್ತರೂ, ಸಂಘಟನೆಗಳು ಸಹಕರಿಸಿದ್ದನ್ನು ಎಂದಿಗೂ ಮರೆಯುವ ಹಾಗಿಲ್ಲ. ಈ ಸಂಭ್ರಮವನ್ನು ಮೊದಲ ಪ್ರಯೋಗವಾಗಿ ಹಮ್ಮಿಕೊಳ್ಳಲಾಗಿದ್ದು ಚರ್ಚಿಸ ಬೇಕಾಗಿರುವ ಇನ್ನೂ ಸಾಕಷ್ಟು ವಿಷಯಗಳನ್ನು ಮುಂಬರುವ ಸಂಭ್ರಮಗಳಲ್ಲಿ ಎತ್ತಿಕೊಳ್ಳಲು ಅವಕಾಶ ಇದ್ದೇ ಇದೆ.

        ಸುಮಾರು 100 ಜನ ಸಾಹಿತಿಗಳು ಆಮಂತ್ರಿತರಾಗಿ ಗೋಷ್ಠಿಗಳಲ್ಲಿ ಪಾಲ್ಗೊಳ್ಳಲು ಬರುತ್ತಿರು ವದರಿಂದ  ಹಾಗೂ 300 ಜನ ಪ್ರತಿನಿಧಿಗಳು ಸಮಾವೇಶಗೊಳ್ಳುತ್ತಿರುವುದರಿಂದ ಈ ಸಂಭ್ರಮದ ಖರ್ಚು ವೆಚ್ಚಗಳನ್ನು ನಿಭಾಯಿಸಲು ಪ್ರತಿನಿಧಿ ಶುಲ್ಕ ವಿಧಿಸಲಾಗುತ್ತಿದೆಯೇ ವಿನಾ ಯಾವುದೇ ಹಣ ಮಾಡುವ ಉದ್ದೇಶ ಖಂಡಿತ ಈ ಸಂಭ್ರಮದ ಸಂಘಟಕರಿಗಿಲ್ಲ. ಸಂಭ್ರಮದ ಅಂದಾಜು ವೆಚ್ಚ ಸುಮಾರು 16 ರಿಂದ 18 ಲಕ್ಷ ಆಗಬಹುದೆಂದು ಇಂದಿನವರೆಗಿನ ಸ್ಥೂಲ ಸಮೀಕ್ಷೆ. ಆದರೆ, ಕೆಲವರು ಇದರ ವೆಚ್ಚ 40 ಲಕ್ಷ ಎಂದು ಅತಿರಂಜಿತ ಮಾಡುತ್ತಿದ್ದುದು ಖೇದಕರ. ಇನ್ನು ಕೆಲವೇ ದಿನಗಳಲ್ಲಿ ಇದರ ಖರ್ಚು ವೆಚ್ಚವನ್ನು ಪಾರದರ್ಶಕವಾಗಿ ಪ್ರಕಟಿಸಲಾಗುವುದು.

        ನಾಡಿನ ಹಿರಿಯ ಸಾಹಿತಿಗಳು ಪಾಲ್ಗೊಳ್ಳುತ್ತಿರುವ ಈ ಸಂಭ್ರಮದಲ್ಲಿ ಯಾವುದೇ ಹಣದ ಅಪವ್ಯಯಕ್ಕೆ ಆಸ್ಪದವಿಲ್ಲ. ಈ ಎರಡೂ ದಿನಗಳಲ್ಲಿ ಅದು ಸಂಭವಿಸಲೂ ಇಲ್ಲ ಎಂಬುದು ಗಮನಾರ್ಹ. ಆದರೆ, ಕೆಲವು ವಿಶಿಷ್ಟ ಹಿತಾಸಕ್ತಿಗಳು ಈ ಸಂಭ್ರಮದ ವಿರುದ್ಧ ಅಪಪ್ರಚಾರ ಮಾಡುತ್ತಿರುವದು ಧಾರವಾಡ ಸಾಂಸ್ಕೃತಿಕ ಪರಿಸರಕ್ಕೆ ಮಾಡುತ್ತಿರುವ ದೊಡ್ಡ ಅಪಚಾರವೆಂದೇ ಭಾವಿಸಿದ್ದೇನೆ. ಪ್ರಜಾnವಂತರು ಇಂತಹ ಅಪಸ್ವರಗಳಿಗೆ ಕಿವಿಗೊಡದುಳಿದಿರುವುದು ಸಮ್ಮೇಳನ ಈ ಎರಡು ದಿನಗಳಲ್ಲಿ ಯಶಸ್ವಿಯಾಗಿರುವುದಕ್ಕೆ ಸಾಕ್ಷಿ.

        ಇಂದಿನವರೆಗೂ ಪುಸ್ತಕ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಪುಸ್ತಕಗಳ ಮಾರಾಟ ನಡೆಯುತ್ತಿದೆ. ಕುಂ. ವೀರಭದ್ರಪ್ಪ ಅವರ ಕಥೆಯನ್ನಾಧರಿಸಿದ, ಗಿರೀಶ ಕಾಸರವಳ್ಳಿಯವರು ನಿರ್ದೇಶಿಸಿದ "ಕೂರ್ಮಾವತಾರ' ಚಲನಚಿತ್ರ ಈಗಾಗಲೇ ಪ್ರದರ್ಶಿತವಾಗಿದೆ. ನಿನ್ನೆ ಗಿರೀಶ ಕಾರ್ನಾಡರ ಹೊಸ ನಾಟಕ "ಬೆಂದ ಕಾಳು ಆನ್‌ ಟೋಸ್ಟ್‌' "ಕೇಳು ನಾಟಕ'ದ ಹೊಸ ರೀತಿಯ ಪ್ರಯೋಗವೂ ನಡೆದಿದೆ.  ಕರ್ನಾಟಕ ಕಾಲೇಜಿನ ಆವರಣದಲ್ಲಿರುವ "ಸೃಜನಾ' ರಂಗಮಂದಿರಲ್ಲಿ ಭಾರತೀಯ ಸಂಗೀತ ವಿದ್ಯಾಲಯದವರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳು ನಡೆಯುತ್ತಿವೆ. ಒಟ್ಟಿನಲ್ಲಿ ಮೂರನೇ ದಿನವಾದ ಇಂದು ಕೂಡ "ಸಂಭ್ರಮ' ನಿಜವಾದ ಅರ್ಥವನ್ನು ಪಡೆದಿರುವುದು ನಮಗೆಲ್ಲ ಧನ್ಯತೆಯನ್ನು ಕೊಟ್ಟಿದೆ. 


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      image
      • Copyright @ 2009 Udayavani.All rights reserved.
      • Designed & Hosted By 4cplus