Udayavani | Jan 28, 2013
ಜಗತ್ತು ಅಚ್ಚರಿಗಳ ಸಂತೆ. ಇವತ್ತಿದ್ದಂತೆ ನಾಳೆ ಇಲ್ಲ. ನಾಳಿದ್ದಿನ ಜಗತ್ತು ನಾಳೆಯಂತೆ ಕಾಣಿಸುವುದಿಲ್ಲ. ಏನೋ ಹೊಸತು ನಡೆಯುತ್ತದೆ. ಏನೋ ವಿಸ್ಮಯ ಜರುಗುತ್ತಿರುತ್ತದೆ. ಆ ಹೊಸತು ಅನ್ನೋ ವಿಭಾಗದಲ್ಲಿ ಉದ್ಯೋಗಗಳಿವೆ, ಕೋರ್ಸುಗಳಿವೆ, ಕನಸುಗಳಿವೆ. ಯಾವುದೋ ಒಂದು ಗೊತ್ತಿಲ್ಲದ ಊರಿನಲ್ಲಿ ಇರುವ ಹುಡುಗ, ಹುಡುಗಿಯರಿಗೆ ಮುಂದೆ ಏನು ಮಾಡಬೇಕೆಂದೇ ತಿಳಿದಿರುವುದಿಲ್ಲ. ಏನಾದರೂ ಮಾಡಬೇಕೆಂದುಕೊಂಡರೂ ಹೇಗೆ ಅನ್ನೋದು ಗೊತ್ತಾಗುವುದಿಲ್ಲ. ಇಂಥಾ ಹೊತ್ತಲ್ಲಿ ಕೋರ್ಸುಗಳ ಸಂಖ್ಯೆ ಬೆಳೆಯುತ್ತಲೇ ಇದೆ. ಉದ್ಯೋಗಾವಕಾಶ ಜಾಸ್ತಿಯಾಗುತ್ತಲೇ ಇವೆ. ನೋಡುವ ಕಣ್ಣು ಬೇಕಷ್ಟೇ. ಹೋಗುವ ದಾರಿ ಗೊತ್ತಿರಬೇಕಷ್ಟೇ. ಇಲ್ಲಿ ಮೂರು ದಾರಿಗಳಿವೆ. ಎಲ್ಲವೂ ಆಧುನಿಕ ಜಗತ್ತಿನ ಹೊಸ ಕನಸುಗಳು. ಬೇಕೆಂದರೆ ಆರಿಸಿಕೊಳ್ಳಿ. ಬೇಡವೆಂದರೆ ಬೇಕಾದಿರುವವರಿಗೆ ದಾರಿ ತೋರಿಸಿ.
ಮೂರು ಕೋರ್ಸುಗಳು
ಹೇರ್ ಸ್ಟೈಲಿಸ್ಟ್
ಸೆಲೂನ್‌ಗೆ ಹೋಗೋದು ಕಾಮನ್. ಬ್ಯೂಟಿಪಾರ್ಲರ್ ವಿಸಿಟ್ ಕೊಡೋದು ದೊಡ್ಡ ವಿಷಯವೇನೂ ಅಲ್ಲ. ಚಿಕ್ಕವರಿರುವಾಗ ಅಪ್ಪ ಸೆಲೂನ್‌ಗೆ ಕರೆದುಕೊಂಡು ಹೋಗಿ ಕೂದಲನ್ನು ತುಂಬಾ ಶಾರ್ಟ್ ಕಟ್ ಮಾಡಿಸುತ್ತಿದ್ದರು. ಎದುರು ಮಾತಾಡುವಂತಿರಲಿಲ್ಲ. ಆದರೂ ಒಂದು ಆಸೆ. ಯಾವತ್ತಾದರೊಂದು ದಿನ ತಾವೂ ಸಿನಿಮಾ ಹೀರೋಗಳ ಥರ ಕ್ರಾಪ್ ಬಿಡಬೇಕು ಅಂತ. ಆಗ ಹಾಗೇನಿಲ್ಲ. ಸೆಲೂನ್‌ಗಳು ಬದಲಾಗಿವೆ. ಅಂದಹಾಗೆ ಹೊಸ ಪ್ರೊಫೆಷನ್ ಹುಟ್ಟಿಕೊಂಡಿದೆ. ಅದರ ಹೆಸರು ಹೇರ್ ಸ್ಟೈಲಿಸ್ಟ್.
ಕೂದಲನ್ನು ತುಂಬಾ ಚೆಂದಗೊಳಿಸುವ ಪ್ರೊಫೆಷನ್. ಈ ಸೆಲೆಬ್ರಿಟಿಗಳೆಲ್ಲಾ ತಮ್ಮ ಪರ್ಸನಲ್ ಹೇರ್ ಸ್ಟೈಲಿಸ್ಟ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಅವರಿಗೆ ಹೀರೋಗಳ ಕೂದಲನ್ನು ಚೆಂದ ಕಾಣಿಸುವುದಷ್ಟೇ ಕೆಲಸ.
ಅರ್ಹತೆ
ನೀವು ಇಂತದ್ದೇ ಪದವಿ ಪಡೆದಿರಬೇಕು ಅಂತೇನಿಲ್ಲ. ಯಾವುದೇ ವಿದ್ಯಾಭ್ಯಾಸ ಪಡೆದಿದ್ದರೂ ಹೇರ್ ಸ್ಟೈಲಿಸ್ಟ್ ಆಗಬಹುದು. ಕ್ರಿಯೇಟಿವಿಟಿ ಇದ್ದರೆ ಸಾಕು. ಆಮೇಲೆ ಸ್ವಲ್ಪ ಗಣಿತ ಮತ್ತು ಕೆಮಿಸ್ಟ್ರಿ ಹಿನ್ನೆಲೆ ಇದ್ದರೆ ಸಾಕಷ್ಟಾಯಿತು.
ಇನ್‌ಸ್ಟಿಟ್ಯೂಟ್‌ಗಳು
ಹಬೀಬ್ಸ್ ಹೇರ್ ಅಕಾಡೆಮಿ, ನ್ಯೂಡೆಲ್ಲಿ.
ಟೋನಿ ಆ್ಯಂಡ್ ಗೈ ಅಕಾಡೆಮಿ, ಮುಂಬೈ.
ಲೋರಿಯಲ್ ಪ್ರೊಷಫೆಷನಲ್ ಇಂಟರ್‌ನ್ಯಾಷನಲ್ ಹೇರ್ ಡ್ರೆಸ್ಸಿಂಗ್ ಅಕಾಡೆಮಿ, ಮುಂಬೈ.
ಅಕಾಡೆಮಿ ಆಫ್ ಸ್ಕಿಲ್ ಆ್ಯಂಡ್ ನಾಲೆಜ್ ಅಕಾಡೆಮಿ.
ಇಂಟೀರಿಯರ್ ಡಿಸೈನರ್
ಅದೆಷ್ಟೋ ಹುಡುಗ, ಹುಡುಗಿಯರಿಗೆ ಇಂಟೀರಿಯರ್ ಡಿಸೈನರ್ ಆಗಬೇಕು ಅನ್ನೋ ಆಸೆ ಇರುತ್ತದೆ. ಆದರೆ ಹೇಗೆ, ಏನು ಅನ್ನೋದು ತಿಳಿದಿರಲ್ಲ. ಹೇಳುವವರೂ ಇರುವುದಿಲ್ಲ. ಇದೊಂದು ಕಲಾತ್ಮಕ ಉದ್ಯೋಗ. ಕಲ್ಪನೆಯಿದ್ದರೆ ಅದ್ಭುತ ಇಂಟೀರಿಯರ್ ಡಿಸೈನರ್ ಆಗಲು ಸಾಧ್ಯ. ಮೆಟ್ರೋಪಾಲಿಟನ್ ಸಿಟಿಗಳಲ್ಲಿ ತಮ್ಮ ಮನೆ ಹೇಗಿರಬೇಕು ಅಂತ ಯೋಚನೆ ಮಾಡಿಕೊಳ್ಳಲು ಯಾರಿಗೂ ಪುರುಸೊತ್ತಿಲ್ಲ. ಪುರುಸೊತ್ತಿದ್ದರೂ ಒಬ್ಬ ಪರಿಣತ ಡಿಸೈನರ್‌ನ ಸಹಾಯ ಬೇಕಾಗುತ್ತದೆ. ಆದುದರಿಂದ ಇಂಟೀರಿಯರಿಂಗ್ ಡಿಸೈನಿಂಗ್‌ಗೆ ತುಂಬಾ ಬೇಡಿಕೆ ಇದೆ.
ಅರ್ಹತೆ
ಇಂಟೀರಿಯರ್ ಡಿಸೈನಿಂಗ್ ಕೋರ್ಸು ಸೇರುವ ಮುಂಚೆ ಇಂಜಿನಿಯರಿಂಗ್ ಅಥವಾ ಆರ್ಕಿಟೆಕ್ಚರ್ ಪದವಿ ಪಡೆದರೆ ತುಂಬಾ ಅನುಕೂಲ. ಆಮೇಲೆ ಇಂಟೀರಿಯರ್ ಡಿಸೈನಿಂಗ್ ಕೋರ್ಸು ಸೇರಿ ಒಬ್ಬ ಅದ್ಭುತ ಇಂಟೀರಿಯರ್ ಡಿಸೈನರ್ ಆಗಬಹುದು. ಕಲ್ಪನಾಶಕ್ತಿ ಚೆನ್ನಾಗಿರಬೇಕು. ಅಟೋ ಕ್ಯಾಡ್, 3ಡಿ ಮ್ಯಾಕ್ಸ್ ಸಾಫ್ಟ್ವೇರ್ ತಿಳಿದುಕೊಂಡರೆ ಒಳ್ಳೆಯದು.
ಇನ್‌ಸ್ಟಿಟ್ಯೂಟ್‌ಗಳು
ಇನ್‌ಸ್ಟಿಟ್ಯೂಟ್ ಆಫ್ ಇಂಟೀರಿಯರ್ ಡಿಸೈನ್, ನ್ಯೂಡೆಲ್ಲಿ.
ಇನ್‌ಸ್ಟಿಟ್ಯೂಟ್ ಆಫ್ ಇಡಿಯನ್ ಇಂಟೀರಿಯರ್ ಡಿಸೈನರ್ಸ್, ನ್ಯೂಡೆಲ್ಲಿ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ನ್ಯೂ ಡೆಲ್ಲಿ.
ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ನ್ಯೂಡೆಲ್ಲಿ.
ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್
ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಹೇಗೆ ಬೇಕಾದರೂ ನೋಡಬಹುದು. ಗ್ರೇಟ್ ಅನ್ನುವಂತೆ, ಕಡಿಮೆ ಅನ್ನುವಂತೆ, ಹಾಸ್ಯ ಎಂಬಂತೆ ನೀವು ಹೇಗೆ ನೋಡುತ್ತೀರಿ ಅನ್ನೋದು ನಿಮಗೆ ಬಿಟ್ಟಿದ್ದು. ಆದರೆ ರಿಯಲ್ ಎಸ್ಟೇಟ್ ಫೀಲ್ಡ್ ಸುಮ್ಮನೆ ಅಲ್ಲ. ಅಲ್ಲೂ ಒಂದು ಇಂಟರೆಸ್ಟಿಂಗ್ ಕೆಲಸ ಇದೆ. ಅದು ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್.
ಈತನಿಗೆ ಯಾವ ಜಾಗ ಕೊಂಡರೆ ಏನಾಗುತ್ತದೆ, ಅಲ್ಲಿ ಜಾಗಕ್ಕೆ ಎಷ್ಟು ಬೆಲೆ ಇದೆ, ಕಾನೂನು ಏನು ಹೇಳುತ್ತದೆ ಇತ್ಯಾದಿ ಅಗತ್ಯ ಮಾಹಿತಿಗಳೆಲ್ಲಾ ತಿಳಿದಿರುತ್ತದೆ. ಯಾವುದೇ ಜಾಗವನ್ನು ಕಣ್ಣು ಮುಚ್ಚಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಯೋಚಿಸಿ, ಚಿಂತಿಸಿ ಕೊನೆಗೆ ತಮಗೆ ಒಪ್ಪಿಗೆಯಾದ ನಂತರವೇ ಖರೀದಿಸಬೇಕು. ಹಾಗೆ ಖರೀದಿಸಲು ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್‌ನ ಸಹಾಯ ಬೇಕು. ಇಲ್ಲದಿದ್ದರೆ ಸಮಸ್ಯೆ ಉಂಟಾಗಬಹುದು.
ಅರ್ಹತೆ
ಬ್ಯುಸಿನೆಸ್ ಮ್ಯಾನೇಜ್‌ಮೆಂಟ್, ಕಮ್ಯುನಿಕೇಷನ್ ಮ್ಯಾನೇಜ್‌ಮೆಂಟ್ ಇತ್ಯಾದಿ ಕೋರ್ಸು ಕಲಿತಿದ್ದರೆ ತುಂಬಾ ಒಳ್ಳೆಯದು. ಆಗ ಈ ಕೆಲಸದ ಕುರಿತು ಸ್ವಲ್ಪ ತಿಳಿದಿರುತ್ತದೆ.
ಇನ್‌ಸ್ಟಿಟ್ಯೂಟ್
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕನ್‌ಸ್ಟ್ರಕ್ಷನ್ ಮ್ಯಾನೇಜ್‌ಮೆಂಟ್ ಆ್ಯಂಡ್ ರಿಸರ್ಚ್.
ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ರಿಯಲ್ ಎಸ್ಟೇಟ್, ಪುಣೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಿಯಲ್ ಎಸ್ಟೇಟ್ ಮ್ಯಾನೇಜ್‌ಮೆಂಟ್, ನ್ಯೂಡೆಲ್ಲಿ.