ಲ್ಯಾಪ್‌ಟಾಪ್ ಶಟ್‌ಡೌನ್ ಮಾಡಿ. ಸ್ಮಾರ್ಟ್‌ಫೋನ್ ಟರ್ನ್ ಆಫ್ ಮಾಡಿ. ಜೋರಾಗಿ ಉಸಿರಾಡಿ. ಸುಮ್ಮನೆ ನಕ್ಕುಬಿಡಿ. ಹೀಗೆ ಹೇಳುವುದಲ್ಲದೇ ಬೇರೇನಾದರೂ ಹೇಳುವುದಿದ್ರೆ ಹೇಳಿಕೊಳ್ಳಬಹುದು. ಮಾಡಬೇಕಾದ, ಮಾಡಬಹುದಾದ ಕೆಲಸಗಳ ಪಟ್ಟಿಯಲ್ಲಿ ಏನು ಬೇಕಾದರೂ ಸೇರಿಸಿಕೊಳ್ಳಬಹುದು. ಸೇರಿಸಿಕೊಂಡ ನಂತರ ಅವೆಲ್ಲವನ್ನೂ ಸುಮ್ಮನೆ ಮರೆತುಹೋಗುವುದಿದ್ದರೆ ಅದಕ್ಕೂ ಅಭ್ಯಂತರವಿಲ್ಲ. ಜೀವನ ನಿಮ್ಮದು. ಕಾಲು ನಿಮ್ಮದೂ. ಶೂ ಕೂಡ ನಿಮ್ಮದೇ. ವರ್ಷ ಶುರುವಾಗಿ ತಿಂಗಳು ಮುಗಿದಿದೆ. ರೆಸೆಲ್ಯೂಷನ್ ಪಟ್ಟಿ ಮೂಲೆ ಸೇರಿದೆ. ಇಂತದ್ದರಲ್ಲಿ ಒಂದಷ್ಟು ಒಳ್ಳೆ ಕೆಲಸ ಯಾರಾದರೂ ಮಾಡಿದ್ದಾರಾ ಅಂತ ಕೇಳಿದರೆ ಒಂದಷ್ಟು ಮಂದಿ ಇಂಟರೆಸ್ಟಿಂಗ್ ದಿನಚರಿಯನ್ನು ಹೇಳಿಕೊಂಡರು. ನಿಮಗೂ ಸ್ಫೂರ್ತಿಯಾಗಬಹುದಾದ ಆ ಒಳ್ಳೆ ಕೆಲಸಗಳ ಲಿಸ್ಟು ಇಲ್ಲಿದೆ. ಹತ್ತು ಗಂಟೆಗೆ ಏಳುತ್ತಿದ್ದೆ. ಎದ್ದಾಗ ಒಂಥರಾ ಅನ್ನಿಸುತ್ತಿತ್ತು. ಈಗ ಬೆಳ್ಳಂಬೆಳಗ್ಗೆ ಐದು ಗಂಟೆಗೆ ಏಳುತ್ತಿದ್ದೇನೆ. ಜಗತ್ತು ಬದಲಾದಂತೆ ಕಾಣಿಸುತ್ತಿದೆ. ಬೆಳಗ್ಗಿನ ಚಳಿ, ಮಂಜು ಎಲ್ಲವನ್ನೂ ಸವಿಯುತ್ತಿದ್ದೇನೆ. ಜಗತ್ತು ಬದಲಾಗುವುದು ಹೀಗೇ ತಾನೇ. ನಾನು ಬದಲಾಗಬೇಕು. ಎಲ್ಲವೂ ಬದಲಾದಂತೆ ಕಾಣುತ್ತದೆ. ಬದಲಾಗಿದ್ದು ಸುಂದರವಾಗಿದೆ. ನಿಮ್ಮ ಜಗತ್ತೂ ಬದಲಾಗುತ್ತದೆ. ಒಂಚೂರು ಬೇಗ ಎದ್ದು ನೋಡಿ. - ಶಿಬಾನಿ ಶರ್ಮಾ ಯಾರೋ ಏನೋ ಹೇಳುತ್ತಾರೆ ಅನ್ನೋ ಗಾಬರಿಯಲ್ಲಿದ್ದೆ ಕಳೆದ ವರ್ಷ. ಅದರಿಂದ ನನಗೆ ಮಾಡಬೇಕಿದ್ದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ವರ್ಷ ಕಷ್ಟಪಟ್ಟು ಬದಲಾಗಿದ್ದೇನೆ. ನನಗೆ ಏನು ಏಕೋ ಅದನ್ನು ಮಾಡುತ್ತಿದ್ದೇನೆ. ನನ್ನ ಮನಸ್ಸಿಗೆ ಬಂದ ಕೆಲಸಗಳನ್ನು ಯಾವುದೇ ಮುಲಾಜಿಲ್ಲದೆ ಮಾಡುತ್ತೇನೆ. ಈಗ ಖುಷಿಯಾಗಿದ್ದೇನೆ. ಜಗತ್ತು ಬದಲಾಗಿದೆ. - ಅಭಿಷೇಕ್ ನಾಯರ್ ಸಿಕ್ಕಾಪಟ್ಟೆ ಸೋಷಿಯಲ್ ನೆಟ್‌ವರ್ಕ್ ಸೈಟುಗಳಿಗೆ ಅಡಿಕ್ಟ್ ಆಗಿದ್ದೆ. ಒಂದು ಸ್ಟೇಟಸ್ ಅಪ್‌ಡೇಟ್ ಮಾಡುವುದು. ಕಮೆಂಟ್ ಬಂದಿದೆಯಾ ಅಂತ ಚೆಕ್ ಮಾಡುವುದು. ಇದರಲ್ಲೇ ದಿನ ಕಳೆದುಹೋಗುತ್ತಿತ್ತು. ಅಂದುಕೊಂಡ ಕೆಲಸ ಯಾವುದೂ ಆಗುತ್ತಿರಲಿಲ್ಲ. ವರ್ಷದ ಆರಂಭಕ್ಕೆ ಫೇಸ್‌ಬುಕ್ ಅಕೌಂಟ್ ಡಿಲೀಟ್ ಮಾಡಿದೆ. ಈಗ ಯಾವ ಆತಂಕ ಇಲ್ಲ. ಯಾವ ಅನುಮಾನವಿಲ್ಲ. ತುಂಬಾ ಸಮಯವಿದೆ. ಸಂತೋಷ ತುಂಬಿ ತುಳುಕುತ್ತಿದೆ. - ವಿದ್ಯಾ ಆರ್. ಯಾರಾರೋ ಏನೇನೋ ಹೇಳುವುದಕ್ಕೆಲ್ಲಾ, ಬೈದಿದ್ದಕ್ಕೆಲ್ಲಾ ತಲೆಕೆಡಿಸಿಕೊಳ್ಳುತ್ತಿದೆ. ಮನಸ್ಸು ಹಾಳಾಗುತ್ತಿತ್ತು. ಸಿಟ್ಟಲ್ಲಿ ಒದ್ದಾಡುತ್ತಿದ್ದೆ. ಈಗೀಗ ರಿಯಾಕ್ಟ್ ಮಾಡುವುದನ್ನು ಬಿಟ್ಟಿದ್ದೇನೆ. ಅವರು ಏನಾದರೂ ಹೇಳುತ್ತಿರುತ್ತಾರೆ. ನನಗೆ ಬೇಕು ಅನ್ನಿಸಿದರೆ ಮಾತ್ರ ಮನಸ್ಸಿಗೆ ಹಚ್ಚಿಕೊಳ್ಳುತ್ತೇನೆ. ಬೇಕಾದ್ದು ಮಾತ್ರ ಚಿಂತೆ ಮಾಡುವುದರಿಂದ ಮನಸ್ಸು ನಿರಾಳ. ಬದುಕು ಚೆನ್ನಾಗಿದೆ. ಆಶು ಕಾರಂತ್