ಚೆನ್ನೈ, ಜ. 28: ಮೇರುನಟ ಕಮಲ್ ಹಾಸನ್ ಅವರ 'ವಿಶ್ವರೂಪಂ' ಸಿನೆಮಾವನ್ನು ತಮಿಳು ನಾಡಿನಲ್ಲಿ ಪ್ರದರ್ಶಿಸುವುದಕ್ಕೆ ನಿಷೇಧ ವಿಧಿಸಿರುವ ವಿವಾದಕ್ಕೆ ಸಂಬಂಧಿಸಿ, ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಲು ಎಲ್ಲ ಪರ್ಯಾಯಗಳನ್ನು ಪರಿಶೋಧಿಸುವುದಕ್ಕೆ ಅವರಿಗೆ ಮದ್ರಾಸ್ ಉಚ್ಚ ನ್ಯಾಯಾಲಯ ಸಲಹೆ ನೀಡಿದೆ. ಸಿನೆಮಾ ಬಿಡುಗಡೆಗೆ ತಮಿಳು ನಾಡು ಸರಕಾರ ವಿಧಿಸಿರುವ ನಿಷೇಧವನ್ನು ಪ್ರಶ್ನಿಸಿದ ಕಮಲ್ ಹಾಸನ್ ಅವರ ಮನವಿ ಮೇಲಿನ ತನ್ನ ಆದೇಶವನ್ನು ಮಂಗಳವಾರಕ್ಕೆ ನ್ಯಾಯಾಲಯ ಮುಂದೂಡುವ ವೇಳೆ ಈ ಸಲಹೆಯನ್ನು ನೀಡಿತು. ಈ ಸಿನೆಮಾಕ್ಕೆ ಮುಸ್ಲಿಂ ಗುಂಪುಗಳು ವಿರೋಧ ವ್ಯಕ್ತಪಡಿಸಿವೆ. ಮನವಿ ಕುರಿತು ನಿರ್ಧರಿಸಲು ನ್ಯಾಯಾಲಯ ಸೋಮವಾರ ಬೆಳಗ್ಗೆ ಸೇರುತ್ತಿರುವಂತೆಯೇ, ಜಿಲ್ಲಾಧಿಕಾರಿಗಳು ಸಿಆರ್‌ಪಿಸಿ ವಿಧಿ 144ರ ಅನ್ವಯ ರಾಜ್ಯಾದ್ಯಂತ ಪ್ರತಿಬಂಧಕಾಜ್ಞೆಗಳನ್ನು ವಿಧಿಸಿರುವುದನ್ನು ಪ್ರಶ್ನಿಸಿದ ಅರ್ಜಿಗಳನ್ನು ಕಮಲ್ ಹಾಸನ್ ಅವರ ನ್ಯಾಯವಾದಿ ಸಲ್ಲಿಸಿದರು ಮತ್ತು ಮುಖ್ಯ ಪ್ರಕರಣದ ಜತೆಯಲ್ಲಿ ಇದರ ವಿಚಾರಣೆಯನ್ನು ಕೂಡ ನಡೆಸಬೇಕೆಂದು ಕೋರಿದರು. ನ್ಯಾಯಮೂರ್ತಿ ಕೆ. ವೆಂಕಟರಾಮನ್ ಅವರು ವಿಷಯವನ್ನು ಮಂಗಳವಾರಕ್ಕೆ ಮುಂದೂಡಿದರು ಮತ್ತು ಸರಕಾರದೊಂದಿಗೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸಲಹೆ ನೀಡಿದರು. ಅವರು ಶನಿವಾರ ಸಿನೆಮಾವನ್ನು ವೀಕ್ಷಿಸಿದ್ದರು. ದೇಶದ ಕಾನೂನು ಮತ್ತು ವ್ಯವಸ್ಥೆಯ ಪರಿಸ್ಥಿತಿ, ದೇಶದ ಏಕತೆಯನ್ನು ಅರ್ಜಿದಾರರು ಗಮನದಲ್ಲಿ ಇರಿಸಿಕೊಳ್ಳಬೇಕು. ಏಕೆಂದರೆ ಇದರಿಂದಾಗಿ ಸಮುದಾಯಗಳ ನಡುವೆ ಸೌಹಾರ್ದಕ್ಕೆ ಕುಂದು ಉಂಟಾಗಬಾರದು. ಇದುವೇ ಪ್ರಮುಖ ಪರಿಗಣನೆಯಾಗಿದೆ ಎಂದು ನ್ಯಾಯಾಧೀಶರು ಹೇಳಿದರು.