ನನ್ನ ಮದುವೆಯಾಗಿ ಹತ್ತು ವರ್ಷಗಳಾಗಿವೆ. ನಾನು ನನ್ನ ಗಂಡ ಇಬ್ಬರೂ ವಿದ್ಯಾವಂತರು ಹಾಗೂ ನೌಕರಿಯಲ್ಲಿದ್ದೇವೆ. ನಮ್ಮಲ್ಲಿ ಮುಂಚೆಯಿಂದಲೂ ಹೊಂದಾವಣಿಕೆ ಕಡಿಮೆ.ಇತ್ತೀಚೆಗೆ ಅದು ವಿಪರೀತಕ್ಕೆ ಹೋಗಿ ವಿಚ್ಛೇದನ ತೆಗೆದುಕೊಳ್ಳಲು ತೀರ್ಮಾನಿಸಿದ್ದೇವೆ.ನಮಗೆ ಇಬ್ಬರು ಗಂಡು ಮಕ್ಕಳು. ನನಗೆ ಯಾರೊಬ್ಬರನ್ನೂ ಬಿಟ್ಟಿರಲು ಸಾಧ್ಯವಿಲ್ಲ. ಆದರೆ ನನ್ನ ಗಂಡ ವಿಚ್ಛೇದನವಾದರೆ ನನ್ನ ದೊಡ್ಡ ಮಗನನ್ನು ತಾನು ಇಟ್ಟುಕೊಳ್ಳುವುದಾಗಿ ಸಣ್ಣ ಮಗನನ್ನು ನಾನು ಇಟ್ಟುಕೊಳ್ಳಬೇಕೆಂದು ಕರಾರು ಹಾಕುತ್ತಿದ್ದಾನೆ. ಅವನಿಗೆ ಸಣ್ಣ ಮಗ ಬೇಡ. ಆದರೆ ನನಗೆ ಇಬ್ಬರೂ ಬೇಕು. ಇಲ್ಲವಾದಲ್ಲಿ ವಿಚ್ಛೇದನ ನೀಡುವುದಿಲ್ಲ ಎನ್ನುತ್ತಾನೆ. ನನಗೆ ಏನು ಮಾಡಲು ತೋಚುತ್ತಿಲ್ಲ. ನಾನೇನು ಮಾಡಬಹುದು. ಸುಮತಿ ಮುಂಬೈ ವಿಚ್ಛೇದನದಿಂದ ಆಗುವ ಬಹುದೊಡ್ಡ ಸಮಸ್ಯೆಯೆಂದರೆ ಯಾವುದೇ ತಪ್ಪು ಮಾಡದ ಮಕ್ಕಳು ತಂದೆ ತಾಯಿಯರಲ್ಲಿ ಒಬ್ಬರನ್ನು ಜೀವಂತ ಇರುವಾಗಲೇ ಕಳೆದುಕೊಳ್ಳುವುದು.ನಿಜಕ್ಕೂ ಇದು ವಿಷಾದದ ಸಂಗತಿ. ಆದರೆ ಕೆಲವೊಮ್ಮೆ ಅನಿವಾರ್ಯವಾಗುತ್ತದೆ.ವಿಚ್ಛೇದನಕ್ಕೆ ಮುಂಚೆ ಕಡೇಪಕ್ಷ ಮಕ್ಕಳಿಗಾಗಿಯಾದರೂ ಹೊಂದಾಣಿಕೆ ಮಾಡಿಕೊಂಡು ಇರುವ ಪ್ರಯತ್ನ ಮಾಡಿರಿ.ಇನ್ನು ಸಾಧ್ಯವೇ ಇಲ್ಲ ಎಂಬಲ್ಲಿ ಇಬ್ಬರೂ ಮಕ್ಕಳನ್ನು ಪಾಲು ಮಾಡಿಕೊಳ್ಳಲೇಬೇಕಾದ ಪರಿಸ್ಥಿತಿ ಬಂದಲ್ಲಿ ವಾರಕ್ಕೊಮ್ಮೆ ಮತ್ತು ಬೇಸಿಗೆ ರಜೆಯಲ್ಲಿ ಮಕ್ಕಳಿಬ್ಬರೂ ಒಟ್ಟಿಗೆ ನಿಮ್ಮಬ್ಬರ ಜೊತೆಯಲ್ಲೂ ಇರುವಂತೆ ನೋಡಿಕೊಳ್ಳಿ. ಇದರಿಂದ ಮಕ್ಕಳನ್ನು ಪರಸ್ಪರ ದೂರ ಮಾಡದಂತೆ ನೋಡಿಕೊಳ್ಳಿ. ಇದರಿಂದ ಮಕ್ಕಳನ್ನು ಪರಸ್ಪರ ದೂರ ಮಾಡದಂತೆ ಹಾಗೂ ನಿಮ್ಮಿಬ್ಬರಿಗೂ ಎರಡೂ ಮಕ್ಕಳ ಪರಸ್ಪರ ಪ್ರೀತಿ ವಿಶ್ವಾಸ ದೊರೆಯುವ ವ್ಯವಸ್ಥೆ ರೂಪಿಸಿಕೊಳ್ಳಿ.ಮುಂದೆ ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದಾಗ ಅವರಿಗೆ ನಿಮಗೆ ಇಬ್ಬರಿಗೂ ಅನುಕೂಲವಾಗುತ್ತದೆ. ಹಾಗೂ ಆತ್ಮೀಯತೆ, ಪ್ರೀತಿ ವಿಶ್ವಾಸಗಳು, ಭದ್ರತೆ ಹೆಚ್ಚುತ್ತವೆ. ಮುಂದೊಂದಿನ ನೀವು ಗಂಡ ಹೆಂಡಿಗೂ ಸಹ ಒಟ್ಟಾಗುವ ಸಾಧ್ಯತೆಗಳನ್ನು ಸಹ ಇರುತ್ತವೆ.ಸಾಧ್ಯವಾದಷ್ಟು ಯಾವುದೇ ಸಂದರ್ಭದಲ್ಲಿ ಮಕ್ಕಳಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸಿ, ಮುಂದೆ ನೀವಿರದ ಕಾಲದಲ್ಲಿ ಅವರೇ ಒಬ್ಬರಿಗೊಬ್ಬರು ಆಗಬೇಕಾಗುತ್ತದೆ. ಎಷ್ಟಾದರೂ ಅಣ್ಣತಮ್ಮಂದಿರು ಅಣ್ಣತಮ್ಮಂದಿರಾಗೇ ಬೆಳೆಸಬೇಕು, ದಾಯಾದಿಗಳಾಗದಂತೆ ನೋಡಿಕೊಳ್ಳಬೇಕು. ನನ್ನ ಮದುವೆಗಾಗಿ ಹನ್ನೆರಡು ವರ್ಷಗಳಾಗಿವೆ. ನನಗೆ ಇಬ್ಬರು ಮಕ್ಕಳು, ನಮ್ಮ ಸಂಸಾರ ಬಡತನವಿದ್ದರೂ ನೆಮ್ಮದಿಯಿಂದ ಸಾಗುತ್ತಿತ್ತು. ಆದರೆ ಇತ್ತೀಚೆಗೆ ನನ್ನ ಗಂಡನಿಗೆ ಕುಡಿತದ ಚಟ ಹತ್ತಿ ಮನೆ ರಣರಂಗವಾಗಿದೆ ಮತ್ತು ನರಕವಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ನಾನು ಹೊರಗೆ ಹೋಗಿ ದುಡಿದು ತಂದ ಹಣವೂ ನನಗೆ ಉಳಿಯದಂತೆ ಆಗಿದೆ. ಈ ಪರಿಸ್ಥಿತಿಯಲ್ಲಿ ನಾನು ಮಕ್ಕಳೊಡನೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನೇಕ ಬಾರಿ ತೀರ್ಮಾನಿಸಿದ್ದೇನೆ. ಆದರೆ ಅದಕ್ಕೂ ಸಹ ಧೈರ್ಯವಿಲ್ಲ. ಬದುಕಲೂ ಆಗುತ್ತಿಲ್ಲ. ನಾನೇನು ಮಾಡಲಿ. ದಯವಿಟ್ಟು ಸಲಹೆ ನೀಡಿ. ಹೇಮಾವತಿ ಬೆಂಗಳೂರು ಇಂದು ನಮ್ಮ ದೇಶದ ಬಹಳಷ್ಟು ಮಹಿಳೆಯರು ಇಂತಹ ಪರಿಸ್ಥಿತಿಯಲಿ ಬೇಯುತ್ತಿದ್ದಾರೆ. ಕುಡಿತದ ಚಟದಿಂದ ಸಂಸಾರಗಳು ನಾಶವಾಗುತ್ತಿವೆ. ಈ ಚಟವನ್ನು ಸಂಪೂರ್ಣ ನಿರ್ಮೂಲನಗೊಳಿಸಬೇಕಾದ ಸರ್ಕಾರಗಳೇ ಅಸಹಾಯಕತೆಯಿಂದಲೋ ಅನಿವಾರ್ಯತೆಯಿಂದಲೋ ಕೈ ಕಟ್ಟಿ ಕುಳಿತಿವೆ. ಇತ್ತೀಚೆಗೆ ಅನೇಕ ಆಸ್ಪತ್ರೆಗಳಲ್ಲಿ ಈ ಕುಡಿತದ ಚಟ ಬಿಡಿಸುವ ಚಿಕಿತ್ಸೆ ನೀಡಲಾಗುತ್ತದೆ. ಅದನ್ನೊಮ್ಮೆ ನೀವು ಪ್ರಯತ್ನಿಸಿ. ಅದೂ ಸಾಧ್ಯವಾಗದಿದ್ದಲ್ಲಿ ಗಂಡನಿಂದ ವಿಚ್ಛೇದನ ಪಡೆದು ಅವನಿಂದ ದೂರ ಹೋಗಿ ನೀವು ಸ್ವತಂತ್ರ ಜೀವನವನ್ನು ನಡೆಸಿ ನಿಮ್ಮ ಮಕ್ಕಳ ವಿದ್ಯಾಭ್ಯಾಸ ಮುಂದುವರೆಯುವಂತೆ ನೋಡಿಕೊಳ್ಳಿ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಜೀವನವಿದ್ದು ಅದನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಕಷ್ಟಪಡಬೇಕಾಗುತ್ತದೆ. ಆದರೆ ಇಂದು ಪಟ್ಟ ಕಷ್ಟ ಮುಂದೆಂದೂ ವ್ಯರ್ಥವಾಗಿ ಹೋಗುವುದಿಲ್ಲ. ನಿಮ್ಮ ಮಕ್ಕಳು ವಿದ್ಯಾವಂತರಾಗಿ ಅವರ ಕಾಲ ಮàಲೆ ನಿಲ್ಲುವಂತಾದಾಗ ನಿಮ್ಮ ಶ್ರಮ ಸಾರ್ಥಕವಾಗುತ್ತದೆ. ಜೀವನದಲ್ಲಿ ನೆಮ್ಮದಿ ಸಿಗುತ್ತದೆ. ಯಾವುದೇ ಕಾಲಕ್ಕೂ ಸಾಯುವ ಯೋಚನೆ ಮಾಡಬೇಡಿ. ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಧೈರ್ಯ ತಂದುಕೊಳ್ಳಿ. ಧೈರ್ಯವೇ ಎಲ್ಲ ಸಾಧನೆಯ ಮೂಲ. ನನ್ನ ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ನನ್ನ ಗಂಡನ ಕಾರಣದಿಂದ ಇನ್ನೂ ಮಕ್ಕಳಾಗಿಲ್ಲ. ಆತನ ವೀರ್ಯದ ದೋಷದಿಂದ ಮಕ್ಕಳಾಗುವ ಸಂಭವ ಕಡಿಮೆ. ಆದರೆ ಸತತ ಚಿಕಿತ್ಸೆಯಿಂದ ಸುಧಾರಣೆಯಾಗುವ ಸಂಭವವಿದೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಈ ವಿಷಯ ತಿಳಿದ ನನ್ನ ಗಂಡ ಬಹಳ ಚಿಂತಾಕ್ರಾಂತರಾಗಿ ಮಂಕಾಗಿ ಬಿಟ್ಟಿದ್ದಾರೆ. ಜೀವನದಲ್ಲಿ ಉತ್ಸಾಹವನ್ನೇ ಕಳೆದುಕೊಂಡಂತಾಡುತ್ತಾರೆ. ನನಗೂ ಮನಸ್ಸಿನಲ್ಲಿ ಕೊರಗಿದ್ದರೂ ನಾನು ಅದನ್ನು ಹತ್ತಿಕ್ಕಿಕೊಂಡು ಮುಂದಿನ ದಾರಿಗೆ ಯೋಚಿಸುತ್ತಿದ್ದೇನೆ. ಈಗ ನನ್ನ ಗಂಡನನ್ನು ಸುಧಾರಿಸುವ ಬಗೆ ಹೇಗೆಂದು ತಿಳಿಯುತ್ತಿಲ್ಲ. ನಮಗೇನು ಪರಿಹಾರವಿದೆ ತಿಳಿಸಿ. ಶ್ರೇಯಾ ಮೈಸೂರು ಉತ್ತರ: ನೀವು ಸ್ವಲ್ಪವೂ ತಾಳ್ಮೆ ಕಳೆದುಕೊಳ್ಳದೆ ನಿಮ್ಮ ಗಂಡನನ್ನು ಸಮಾಧಾನಗೊಳಿಸಿ ನಿಮ್ಮ ಬಂಧು ಬಳಗದ ಹಿರಿಯರಿಂದ ಅವರಿಗೆ ಈ ಬಗ್ಗೆ ಮಾತನಾಡುವಂತೆ ತಿಳಿಸಿ. ವೈದ್ಯರೊಂದಿಗೂ ಸಹ ಚರ್ಚಿಸಿ ನಿಮ್ಮ ಗಂಡನಿಗೆ ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುವ ಯೋಜನೆಗೆ ಅವರನ್ನು ಸಿದ್ದಗೊಳಿಸಿ. ಇದೆಲ್ಲದರ ಜೊತೆಗೆ ಮಾನಸಿಕ ತಜ್ಞರನ್ನು ಸಹ ಸಂಪರ್ಕಿಸಿ. ಯಾವುದೇ ಕಾರಣಕ್ಕೂ ನೀವು ದೃತಿಗೆಡಬೇಡಿ. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಬಹುದು. ಇತ್ತೀಚೆಗಿನ ವೈದ್ಯಕೀಯ ಸಂಶೋಧನೆಯ ಬಹಳ ಮುಂದುವರೆದಿದ್ದು ಅವರು ನಿಮಗೆ ಚೆನ್ನಾಗಿ ಮಾರ್ಗದರ್ಶನ ಮಾಡಬಲ್ಲರು. ನಿಮ್ಮದು ಕಾನೂನಿನ ಸಮಸ್ಯೆಯಲ್ಲ. ವೈದ್ಯಕೀಯ ಸಲಹೆ ಸೂಚನೆ ಮಾರ್ಗದರ್ಶನ ನಿಮಗೆ ಅವಶ್ಯವಿದ್ದು ಆ ಬಗ್ಗೆ ಪ್ರಯತ್ನ ನಡೆಸಿ. ಮೀರಾಫಡೆR, ನ್ಯಾಯವಾದಿಗಳು 9620340618