Udayavani | Jan 29, 2013
ಹಲ್ಲಿದ್ರೆ ಕಡ್ಲೆ ಇಲ್ಲ ಕೆಲವೊಬ್ರಿಗೆ ಹಲ್ಲೇ ಇಲ್ಲ
ದೇವ್ರಾಣೆ ಹೇಳ್ತೀನಿ ಕೇಳಿ ದೇವರ ತಲೆ ಸರಿ ಇಲ್ಲ
ವಾಚೀನ ಮುಳ್ಳಿಗೆ ಮಾಡೋಕೆ ಕೆಲ್ಸ ಇಲ್ಲ
ನವ ಯುವಕ ಗ್ಯಾಪಲ್ಲಿ ಅಂಕಲ್ಲು ಆಗ್ತಾನಲ್ಲ
ಹೇಳ್ರಪ್ಪ ಏನು ಮಾಡೋಣ ...
ಹಾಗಂತ ಶ್ರೀನಗರ ಕಿಟ್ಟಿ ತಲೆ ಆಡಿಸುತ್ತಾ ಆಡಿಸುತ್ತಾ ಹಾಡುತ್ತಿದ್ದರೆ, ಪಕ್ಕದಲ್ಲಿದ್ದ ಆನೆಗಳು ತಲೆದೂಗುತ್ತಿದ್ದವು. ತಲೆ ಅಲ್ಲಾಡಿಸುತ್ತಾ ಮಜಾ ತೆಗೆದುಕೊಳ್ಳುತ್ತಿದ್ದವು. 'ಟೋನಿ' ಚಿತ್ರದ 'ಪಕ್ಕಾ ಪಾಪಿ ನಾನು ಪಾಪ ಮಾಡುವೆನು' ಹಾಡಿನ ಗಮ್ಮತ್ತೇ ಅದು. ಯೋಗರಾಜ್ ಭಟ್ಟರ ಸಾಹಿತ್ಯವನ್ನು ಪುನೀತ್ ಹಾಡಿರುವುದು ಹೊಸದೇನಲ್ಲ. ಆದರೆ, ಈ ಹಾಡಿನಲ್ಲಿ ಬೇರೆಯದೇ ಮಜಾ ಇದೆ. ಅದೇ ಕಾರಣಕ್ಕೆ 'ಟೋನಿ'ಚ ಚಿತ್ರತಂಡ ಬ್ಯಾಂಕಾಕ್‌ವರೆಗೂ ಹುಡುಕಿಕೊಂಡು ಬಂದು ಒಂದಿಷ್ಟು ಒಳ್ಳೆಯ ಮತ್ತು ಲೊಕೇಶನ್‌ಗಳಲ್ಲಿ ಈ ಹಾಡನ್ನು ಸೆರೆ ಹಿಡಿಯುತ್ತಿದೆ. ಅದು ನಿಮಗೂ ಗೊತ್ತು. ನಿನ್ನೆಯ ಬಾಲ್ಕನಿಯಲ್ಲಿ ಬ್ಯಾಂಕಾಕ್‌ನ ಟೈಗರ್ ಸಿಟಿಯಲ್ಲಿ ಹುಲಿಗಳ ಮಧ್ಯೆ ಇದೇ ಹಾಡಿನ ಒಂದಿಷ್ಟು ಎಕ್ಸ್‌ಕ್ಲೂಸಿವ್ ಚಿತ್ರಗಳನ್ನು ನೋಡಿದ್ದೀರಿ, ವಿಷಯಗಳನ್ನು ಓದಿದ್ದೀರಿ.
ಈಗ ಡೇ 2
ಹುಲಿಗಳ ಜೊತೆಗೆ ಸರಸವಾಡಿದ ಚಿತ್ರತಂಡ, ಈ ಬಾರಿ ಕಣ್ಣು ಹಾಕಿದ್ದು ಆನೆಗಳ ಮೇಲೆ. ಆನೆಗಳ ಮಧ್ಯೆ ಕಿಟ್ಟಿ ಕುಣಿದರೆ ಹೇಗೆ? ಹಾಡುತ್ತಾ ದೇವರ ಮೇಲೆ ಶಾಪ ಹಾಕಿದರೆ ಹೇಗೆ? ಇಂಥದ್ದೊಂದು ಐಡಿಯಾ ಬರುತ್ತಿದ್ದಂತೆಯೇ ಚಿತ್ರತಂಡ ಬಂದಿದ್ದು ಪಟ್ಟಾಯ ಸಿಟಿಯಿಂದ ಒಂದೂವರೆ ಗಂಟೆ ಕಿಲೋಮೀಟರ್ ದೂರವಿರುವ ಎಲಿಫೆಂಟ್ ಪಾರ್ಕ್‌ಗೆ. ವಿಶಾಲವಾದ ಜಾಗ. ಎಲ್ಲಿ ನೋಡಿದರೂ ಬಯಲು. ಆದರೆ, ಹೆಸರಿಗೆ ತಕ್ಕಂತೆ ಒಂದೇ ಒಂದು ಆನೆ ಕಾಣುತ್ತಿಲ್ಲ. ಆನೆಗಳು ಎಲ್ಲಿ ಹೋದವು ಎಂದು ಹುಡುಕುತ್ತಾ ಹೋದರೆ, ದೂರದಲ್ಲಿ ಒಂದಿಷ್ಟು ಆನೆಗಳು ಎದುರಾದವು. ಅವು ಶೂಟಿಂಗ್ ಸ್ಪಾ$ಟ್ ಕಡೆಗೇ ನಡೆದು ಬರುತ್ತಿದ್ದವು. ಈ ಕಡೆ ಛಾಯಾಗ್ರಾಹಕ ಜಾnನಮೂರ್ತಿ ಮತ್ತು ನೃತ್ಯ ನಿರ್ದೇಶಕ ಇಮ್ರಾನ್, ಯಾವ ಲೊಕೇಶನ್‌ನಲ್ಲಿ ಏನು ಮಾಡಬೇಕೆಂದು ಮಾತಾಡಿಕೊಳ್ಳುತ್ತಿದ್ದರು. ಕ್ಯಾಮೆರಾ ಮತ್ತು ಲೈಟಿಂಗ್ ಡಿಪಾರ್ಟ್‌ಮೆಂಟ್‌ನ ಹುಡುಗರು, ಅವರ ಕೆಲಸದಲ್ಲಿ ತಲೆ ಕೆಡಿಸಿಕೊಂಡಿದ್ದರು. ಅಷ್ಟರಲ್ಲಿ ಆನೆಗಳು ಒಂದರ ಹಿಂದೊಂದು ಸಾಲಾಗಿ ಬಂದು ಒಂದರ ಪಕ್ಕ ಒಂದು ನಿಂತವು. ಒಂದಿಷ್ಟು ಹೊತ್ತಿನ ಬಳಿಗೆ ಎಲ್ಲಾ ಸಿದ್ಧತೆಗಳಾದ ಮೇಲೆ ಕ್ಯಾಮೆರಾ ಹುಡುಗರು ತೆಂಗಿನಕಾಯಿ ಒಡೆದು ಚಿತ್ರೀಕರಣ ಶುರುವಾಯಿತು.
ಸೋಮವಾರವೇ ಇಮ್ರಾನ್ ಸರ್ದಾರಿಯಾ ಹುಲಿಯ ಮಧ್ಯೆ ಸಾಕಷ್ಟು ದೃಶ್ಯಗಳನ್ನು ಹೆಣೆದಿದ್ದರು. ಈಗ ಆನೆಗಳ ಮಧ್ಯೆ ಇನ್ನೊಂದಿಷ್ಟು ದೃಶ್ಯಗಳ ಚಿತ್ರೀಕರಣವಾಯಿತು. ಕಣ್ಣುಕುಕ್ಕುವ ಲೈಟ್‌ಗಳು, ಬಿಸಿಲ ಧಗೆ ಹಾಗೂ ಹಿಂಡು ಆನೆಗಳ ಮಧ್ಯೆ ಕಿಟ್ಟಿ, ತಲೆ ತೂರಾಡಿಸುತ್ತಾ 'ಹೇಳ್ಳೋಕೆ ಆಗದ ಕನಸೊಂದು ಉಂಟು ನಂಗೆ, ಮಾಡೋಕೆ ಆಗದ ಕೆಲಸಾನೆ ಬೇಕು ನಂಗೆ ...' ಎಂಬ ಸಾಲುಗಳಿಗೆ ಕುಣಿದು ಹೋದರು. ಆ ನಂತರ ಸಂಜೆಯವರೆಗೂ ಹಲವು ಪ್ರಮುಖ ಶಾಟ್‌ಗಳನ್ನು ಒಂದರ ಹಿಂದೊಂದು ಸೆರೆ ಹಿಡಿಯಲಾಯಿತು. ಅಲ್ಲಿಗೆ ಹಾಡಿನ ಪ್ರಮುಖ ದೃಶ್ಯಗಳನ್ನೆಲ್ಲಾ ಸೆರೆಹಿಡಿದಾಗಿದೆ.
ವರದಿ:ಚೇತನ್ ನಾಡಿಗೇರ್
ಚಿತ್ರಗಳು: ಡಿಜಿಟಲ್ ಶ್ರೀನಾಥ್