Udayavani | Jan 30, 2013
ಚಿತ್ತಾಲರು ಮತ್ತೆ ಬಂದಿದ್ದಾರೆ, ಮತ್ತೂಂದು ಕಥಾ ಸಂಕಲನದೊಂದಿಗೆ.
ಚಿತ್ತಾಲರ ಅಬೋಲಿನಾ, ಸೇಲ್ಸ್‌ಮನ್, ಬೊಮ್ಮಿ, ಬುಡಾನ್‌ಸಾಬ್‌ರಂತೆ ಇಲ್ಲೂ ಒಂದಿಷ್ಟು ಪಾತ್ರಗಳು ನಿಮ್ಮನ್ನು ಭೇಟಿಯಾಗುತ್ತವೆ, ಅವರ ಸ್ಪಷ್ಟ ಕನ್ನಡ ಸ್ವಾಗತಿಸುತ್ತದೆ, ವಿಚಿತ್ರ ಪ್ರಯೋಗಗಳು ಉಲ್ಲಸಿತಗೊಳಿಸುತ್ತವೆ, ಮತ್ತೂಮ್ಮೆ ಚಿತ್ತಾಲರ ಒಳಗಿರುವ ಕತೆ ಕೇಳಿಸಿಕೊಳ್ಳುವುದಕ್ಕೆ ಈ ಪೀಠಿಕೆ ಸಾಕು.
ಚಿತ್ತಾಲರ ಭಾಷೆಯ ದೃಷ್ಟಿಯಿಂದ ಇದೊಂದು ಪ್ಯಾರಾ ಓದಿ:
'ರಾತ್ರಿ ನಿದ್ದೆ ಹೋಗುವ ಮೊದಲು ಕೇವಲ ಹೆಂಡತಿಯ ಸಮಾಧಾನಕ್ಕೆಂದು ಆಡಿದ ಮಾತು ತಾನು ಎಣಿಸಿಯೇ ಇರದ ರೀತಿಯಲ್ಲಿ ಪುಷ್ಠಿಗೊಂಡು ವಿಚಿತ್ರ ಹುಳದ ರೂಪ ಧರಿಸಿ ಹಾಸಿಗೆಯ ಮೇಲೇ ಕುಳಿತುಬಿಟ್ಟಿತು. ರಾತ್ರಿಯಿಡೀ ನಿದ್ದೆ ಮಾಡಲು ಬಿಡದೇ ಒಂದೇ ಸಮನೆ ಕಾಡಿದ ಧರಿದ್ರ ಜಂತು ನಸುಕಿನ ಜಾವ ಹೊರಟು ಹೋದ ಮೇಲೆಯೇ ತುಸು ಹೊತ್ತು ಕಣ್ಮುಚ್ಚುವುದು ಸಾಧ್ಯವಾಯಿತು.'
ಊರಲ್ಲಿ ಸುಂದರಿ ಎನ್ನುವವಳು ಸತ್ತಳು ಎನ್ನುವ ಸುದ್ದಿಯಿಂದ ಪ್ರಾರಂಭವಾಗುವ 'ಸುದ್ದಿ' ಕತೆ ತೆರೆಯುತ್ತಾ ಹೋದಂತೇ ಮತ್ತಾವುದೋ ಸಂಬಂಧಗಳ ಗೋಜಲಿನಿಂದ ಸುತ್ತಿಕೊಳ್ಳುತ್ತಾ ಬೇರೇನೋ ಒಂದು ಕತೆಯಾಗುತ್ತದೆ. ಕೋಳಿ ಕೂಗುವ ಮುನ್ನ ಕತೆಯೂ ಹಾಗೇ. ಕೋಳಿಯೊಂದು ಯಾಕೆ ಅವಧಿಗೆ ಮುನ್ನವೇ ಕೂಗಿತು ಅಂತ ಜಿಜ್ಞಾಸೆಯೊಂದಿಗೆ ಕತೆ ಪ್ರಾರಂಭವಾಗಿ ನಮ್ಮನ್ನು ಭೇಟಿಯಾಗುವ ವಿಚಿತ್ರ ಕಾಕತಾಳೀಯಗಳಂತೆ, ನಮಗೆ ಗೊತ್ತಿಲ್ಲದ ಸ್ವರೂಪದಲ್ಲಿ, ಆಘಾತದಲ್ಲಿ, ಅಚ್ಚರಿಯಲ್ಲಿ ಎದುರಾಗುವ ಅನಿರೀಕ್ಷಿತ ನಾಳೆಗಳಂತೆ ಗಂಡ-ಹೆಂಡಿರನ್ನು ಹಲವು ವಿಚಾರಗಳು ಸಂಧಿಸುತ್ತಾ ಹೋಗುತ್ತವೆ. ಚಿತ್ತಾಲರ ಕತೆಗಳ ಎಂದಿನ ನಿಗೂಢತೆ, 'ಆಟ' ಕತೆಯಲ್ಲಿ ಭೇಟಿಯಾಗುವ ಕಂಬಳಿ ಮನುಷ್ಯನಂತೆ, 'ಪಯಣ'ದಲ್ಲಿ ಸೇಲ್ಸ್‌ಮನ್‌ಗೆ ಕಾಣುವ ಮೈಯೆಲ್ಲಾ ಕೂದಲಿರುವ ನಿಗೂಢ ಮನುಷ್ಯನಂತೆ ಭೇಟಿಯಾಗುತ್ತಾ, ಬೇಟೆಯಾಡುತ್ತಾ ಹೋಗುತ್ತವೆ.
ಚಿತ್ತಾಲರ ಮುನ್ನುಡಿಯಲ್ಲಿನ 'ನನ್ನೊಳಗೆ ಇನ್ನೂ ಬಹಳ ಕತೆಗಳಿವೆ' ಎನ್ನುವ ಹೇಳಿಕೆಯ ನಿರೂಪಣೆ ಹಾಗೂ ಪುರಾವೆಯೇ ಈ ಸಂಕಲನ. ಆದರೆ ತನ್ನೊಳಗಿರುವ ಇನ್ನಷ್ಟು ಕತೆಗಳನ್ನು ಹೇಳುವುದಕ್ಕೆ ವಯಸ್ಸು ಬಿಟ್ಟಿàತೋ ಇಲ್ಲವೋ ಎನ್ನುವ ಅವರದೇ ಆತಂಕವನ್ನು ಮಾತ್ರ ಕಾಲ ಸುಳ್ಳು ಮಾಡಿ ಇನ್ನೂ ಒಂದಷ್ಟು ಬರೆಯುತ್ತಿರಲಿ.
ಕೋಳಿ ಕೂಗುವ ಮುನ್ನ/ಲೇ: ಯಶವಂತ ಚಿತ್ತಾಲ/ಪ್ರ: ಪ್ರಿಸಂ, ನಂ. 1865, 32ನೇ ಅಡ್ಡರಸ್ತೆ, 10ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-70 /ಪು: 104/ಬೆ: 120 ರೂ.
-ವಿಕಾಸ್