Udayavani | Jan 30, 2013
ಈಗ ಇಂಥ ಆಧುನಿಕತೆಯ, ಇಷ್ಟೊಂದು ಮುಂದುವರಿದ ಕಾಲದಲ್ಲೂ ನಾಗ ದೋಷವನ್ನು ನಂಬುವುದೇ ಎಂಬ ಪ್ರಶ್ನೆ ಸಹಜ. ಆದರೆ ನಾಗದೋಷದ ಕುರಿತಂತೆ ನೂರಾರು ಜನ, ನೂರಾರು ರೀತಿಯ ಪ್ರಶ್ನೆಗಳನ್ನ ಪ್ರತಿ ದಿನ ಎಂಬಂತೆ ಕೇಳುತ್ತಿರುತ್ತಾರೆ. ಅಂದರೆ ನಾಗರ ದೋಷದ ಬಗ್ಗೆ ಜನರಲ್ಲಿ ಭಯವಿದೆ. ಭಯ ಪಡಬೇಕಾದ ಪ್ರಾರಬ್ಧದ ಅಂಶಗಳು ನಾಗ ದೋಷದಲ್ಲಿ ಇದ್ದಿರುತ್ತದೆ. ಇದು ಸತ್ಯ.
ಆದರೆ ಭಯವನ್ನೇ ಹೊತ್ತು ತಲೆಯ ತುಂಬ ಅದನ್ನೇ ಯೋಚಿಸಿಕೊಂಡಿರುವುದರಲ್ಲಿ ಅರ್ಥವಿಲ್ಲ. ಹೆದರುವವರನ್ನು ಇನ್ನಿಷ್ಟು ಹೆದರಿಸಲು ದೊಡ್ಡ ದಂಡೇ ಇದೆ. ಹಾಗೆಂದು ಹೆದರಿಸಿದ್ದನ್ನೆಲ್ಲ ಕೇಳಿ ಹೌಹಾರಬೇಕಾಗಿಲ್ಲ. ಒಟ್ಟಿನಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಧಾರ್ಮಿಕ ಪದ್ಧತಿಗಳು, ಭಾರತೀಯ ಜ್ಯೋತಿಷ್ಯ ಶಾಸ್ತ್ರ ನಾಗದೋಷಕ್ಕೆ ಬಲವಾದ ಒತ್ತು ನೀಡಿ, ವಿವಿಧ ವಿಧಾನಗಳಲ್ಲಿ ನಾಗಾರಾಧನೆಗೆ ಅವು ಪ್ರತಿಪಾದಿಸುತ್ತದೆ. ನಿರಂತರವಾದ ಕಿರಿಕಿರಿ, ಖನ್ನತೆ ಮನೋವಿಕಾರ, ಯಾವುದರಿಂದಲೂ ಏಳ್ಗೆ ಆಗದಿರುವುದು, ಹಣಕಾಸಿನ ವಿಚಾರದಿಂದಾಗಿ ಅನೇಕ ಪಡಿಪಾಟಲುಗಳನ್ನು ಎದುರಿಸುವುದು ಇತ್ಯಾದಿ. ಈ ತೊಂದರೆಗಳೆಲ್ಲ ಸಾಲದೆಂಬಂತೆ ಸಂತಾನ ಹೀನತೆ, ಸಂತಾನ ಇದ್ದೂ ವ್ಯಾಕುಲತೆ, ಗಂಡ ಹೆಂಡಿರ ನಡುವಿನ ಭಿನ್ನಾಭಿಪ್ರಾಯ, ಒಬ್ಬ ವ್ಯಕ್ತಿಯು ನೀಡುವ ಪ್ರಬಲ ಅಡತಡೆಗಳು, ಸದಾ ಎದುರಾಗುವ ಅಡ್ಡಿ ಆತಂಕಗಳು ನಾಗದೋಷದ ಬಳುವಳಿಗಳೇ ಆಗಿರುತ್ತವೆ. ನಿರ್ಲಜ್ಜತೆ, ಕಾಮಾತುರತೆ, ಅತ್ಯಾಚಾರ, ಪರಧನ ದರೋಡೆಗಳಂಥದನ್ನು ನಡೆಸಿ ದಕ್ಕಿಸಿಕೊಳ್ಳಲಾಗದೆ, ಈ ಜನ್ಮದಲ್ಲೇ ಈ ಜನ್ಮದ ಪಾಪಕ್ಕೆ ಶಿಕ್ಷೆ ಅನುಭವಿಸುವವರು ರಾಹು ಅಥವಾ ನಾಗ ದೋಷದ ಕಾರಣದಿಂದಾಗಿಯೇ ನತಮಸ್ತಕರಾಗುತ್ತಾರೆ. ಅಂದರೆ ನಾಗದೋಷ ಪಾಪಿಗಳಿಗೆ ಶಿಕ್ಷೆ ಸಿಗುವಂತೆಯೂ ನೋಡಿಕೊಳ್ಳುತ್ತದೆ. ಅನೇಕ ಅಮಾಯಕರನ್ನೂ ನಾಗ ದೋಷ, ನಾಗ ಶಾಪಾದಿಗಳು ಕ್ರೂರವಾಗಿ ಬಾಧಿಸುವುದುಂಟು.
ಪುನರ್ಜನ್ಮ, ಗತ ಜನ್ಮ, ಪ್ರಾರಬ್ದಾದಿಗಳು
ನಮ್ಮ ಹಿಂದಿನ ಅನೇಕಾನೇಕ ಜನ್ಮಗಳ ಕರ್ಮ ದೋಷಗಳನ್ನು ಒಬ್ಬನ/ಒಬ್ಬಳ ಜನ್ಮ ಕುಂಡಲಿಯ ಮರಣದ ಮನೆಯ ಭಾವದ ಮೇಲೆ, ಪೂರ್ವ ಪುಣ್ಯ ಭಾವದ ಮೇಲೆ ಹೇಗೆ ನಿರ್ಣಯಿಸಬಹುದೋ ಹಾಗೆ ರಾಹು (ನಾಗ) ಗ್ರಹದ ಶಕ್ತಿ ಹಾಗೂ ಮಿತಿಗಳ ಮೇಲಿಂದಲೂ ನಿರ್ಣಯಿಸಬಹುದಾಗಿದೆ. ನಮ್ಮ ಸಂದರ್ಭದ ಅನೇಕಾನೇಕ ಪ್ರಸಿದ್ಧರ ಜನ್ಮ ಕುಂಡಲಿಗಳನ್ನ ಗಮನಿಸಿದಾಗ ಸ್ಪಷ್ಟವಾಗುವ ಅಂಶ ಜಾತಕದೊಳಗಿನ ನಾಗದೋಷ. ಪ್ರಸಿದ್ಧಿ ಇದ್ದರೂ ಮಾನಸಿಕ ಯಾತನೆ ತಾಳಲಸಾಧ್ಯವಾದ ರೀತಿಯಲ್ಲಿರುತ್ತದೆ. ಇಲ್ಲಿ ಈ ನಿಟ್ಟಿನಲ್ಲಿ ಸಾವಿರ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಸಿದ್ಧ ವ್ಯಕ್ತಿಗಳ ಉದಾಹರಣೆ ನೀಡಬಹುದು.
ಜಾತಕ ಕುಂಡಲಿಯಲ್ಲಿ ರಾಹು ಗ್ರಹ ಸ್ಥಿತವಾದ ಮನೆಯಿಂದ ಆರನೇ ಹಾಗೂ ಎಂಟನೇ ಮನೆಯ ಅಧಿಪತಿಗಳು ರಾಹು ಗ್ರಹದ ಉಪಟಳಗಳ ಬಗ್ಗೆ ಜಾತಕದಲ್ಲಿ ಸೂಚನೆ ನೀಡುತ್ತಾರೆ.
ಭಾರತದ ಅಣುವಿಜ್ಞಾನದ ಪಿತಾಮಹ ಡಾ. ಹೋಮಿ ಜಹಾಂಗೀರ್ ಬಾಬಾ, ಪಾಕಿಸ್ತಾನದ ಝುಲ್ಫಿಕರ್ ಅಲಿ ಭುಟ್ಟೋ, ಭಾರತದ ಮಾಜಿ ಪ್ರಧಾನಿಗಳಾದ ಇಂದಿರಾ, ರಾಜೀವ್, ಭಾರತದ ರಾಷ್ಟ್ರಪಿತ ಮಹಾತ್ಮಗಾಂಧೀಜಿ, ಆಧುನಿಕ ಭಾರತಕ್ಕೆ ಮುನ್ನುಡಿ ಬರೆದ ಜವಾಹರಲಾಲ ನೆಹರೂ ಇವರೆಲ್ಲ ರಾಹು ದೋಷದಿಂದಾಗಿ ಅನೇಕ ತೊಂದರೆಗಳನ್ನು ಎದುರಿಸಿದವರೇ ಆಗಿದ್ದಾರೆ. ಜವಾಹರಲಾಲ್ ಅವರ ಜೀವನದ ದಾರುಣತೆ ಚೀನಾ ನಡೆಸಿದ ದಾಳಿಯಲ್ಲಿ ಭಾರತ ಎದುರಿಸಿದ ಹೀನಾಯ ಸೋಲಿನಲ್ಲಿತ್ತು. ಈ ಸೋಲಿನ ನಂತರ ನೆಹರೂ ಅವರು ಆರೋಗ್ಯದಲ್ಲೂ ನಾಯಕತ್ವದ ಪ್ರಭಾವಳಿಯಲ್ಲಿಯೂ ಮಂಕಾದರು. ಚೀನಾ ಯುದ್ಧ ನಡೆಸಿದ ಕೇವಲ 18 ತಿಂಗಳಲ್ಲಿ ನೆಹರು ನಿಧನರಾದರು.
ರಾಹು ದೋಷ ಜವಾಹರರ ಆವರೆಗಿನ ವರ್ಣರಂಜಿತ ಮೆರುಗಿಗೇ ಕಪ್ಪು ಚುಕ್ಕೆ ಅಂಟಿಸಿತ್ತು. ಹೋಮಿ ಜಹಾಂಗೀರ್ ಬಾಬಾ ವಿಮಾನ ದುರ್ಘಟನೆಯಲ್ಲಿ ನಿಗೂಢವಾಗಿ ನಿಧನರಾದರು. ಇಂದಿರಾ ರಕ್ಷಣಾ ಭಟರಿಂದಲೇ ಹತರಾದರು. ಒಟ್ಟಿನಲ್ಲಿ ರಾಹು ದೋಷದ ವಿಚಾರ ಸೂಕ್ಷ್ಮವಾದುದು.
ರಾಹು ದೋಷ ನಿಖರವಾಗಿ ತಿಳಿಯುವುದು ಹೇಗೆ?
ಕುಂಡಲಿಯಲ್ಲಿನ ಎಲ್ಲಾ ಭಾವಗಳನ್ನು ಪರಿಶೀಲಿಸಿದ ಮೇಲೆಯೇ ರಾಹು ದೋಷದ ಕುರಿತಾದ ಅಖೈರಿನ ನಿರ್ಣಯಕ್ಕೆ ಬರಬೇಕು. ರಾಹು ಧೈರ್ಯ ಸ್ಥಾನ, ಛಿದ್ರಸ್ಥಾನ, ಲಾಭ ಸ್ಥಾನಗಳಲ್ಲಿದ್ದಾಗ ಎಂದೂ ಬಾಧೆಗೆ ಕಾರಣವಾಗುವುದಿಲ್ಲ ಎಂಬ ಏಕೈಕ ನಿಯಮವನ್ನು ಗಟ್ಟಿಯಾಗಿ ಹಿಡಿದುಕೊಂಡು ಮಿಕ್ಕೆಲ್ಲ ಸ್ಥಳಗಳಲ್ಲಿ ರಾಹು ಇದ್ದುದನ್ನು ಪರಿಗಣಿಸಿ ರಾಹು ದೋಷವಿದೆ ಎಂದು ಹಲವು ಜ್ಯೋತಿಷಿಗಳು ಕೈ ತೊಳೆದುಕೊಂಡುಬಿಡುತ್ತಾರೆ. ನಮ್ಮ ಸಂದರ್ಭದ ಮಹೋನ್ನತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ನಾಗದೋಷಕ್ಕಾಗಿ ಪರಿಹಾರದ ಕೈಂಕರ್ಯ ನಡೆಸಿದ ವಿಚಾರಗಳನ್ನು ತಿಳಿದಿದ್ದೇವೆ. ವಾಸ್ತವವಾಗಿ ತೆಂಡೂಲ್ಕರ್ ರಾಹು ದಶಾದ ಕಾಲಾವಧಿಯಲ್ಲಿ ಯಶಸ್ಸಿನ ಏಣಿಯನ್ನ ಏರಿದ, ಸಾಧಿಸಿ ಗುಡ್ಡೆ ಹಾಕಿದ ರನ್ನುಗಳ, ದಾಖಲೆಗಳ ಯಾದಿ ಆಭೂತಪೂರ್ವವಾದದ್ದು. ಪೂರ್ವಪುಣ್ಯ ಸ್ಥಾನ ಸ್ಥಿತ ರಾಹುವನ್ನು ದೋಷಕಾರಕ ರಾಹುವನ್ನಾಗಿ ಗುರುತಿಸುವ ಸಂಪ್ರದಾಯ ಆತುರವಾದದ್ದು. ಏಕೆಂದರೆ ತೆಂಡೂಲ್ಕರ್ ಜಾತಕದಲ್ಲಿ ನೀಚ ಭಂಗ ರಾಜಯೋಗ ಪಡೆದು ಗುರು ಗ್ರಹ ರಾಹು ದೋಷವನ್ನು ಪೂರ್ತಿಯಾಗಿ ನಿಗ್ರಹಿಸುವ ಬಲವನ್ನು ಪಡೆದಿದ್ದಾನೆ. ಹೀಗಾಗಿ ರಾಹುವಿಗೆ ದುಷ್ಟನಾದ ಶನಿ ಮಹಾರಾಜನಿಗೆ ದೋಷ ನಿವಾರಣೆಯನ್ನು ಒದಗಿಸಿ ಈ ಎರಡೂ ಗ್ರಹಗಳೂ ಅದೃಷ್ಟ ತರುವ ಗ್ರಹಗಳನ್ನಾಗಿಸುವ ಶಕ್ತಿ ಪಡೆದಿರುತ್ತಾನೆ. ತೆಂಡೂಲ್ಕರ್ ಅವರಿಗೆ ರಾಹು ದೋಷದ ಅಂಟುವುದಿಲ್ಲ.
ವಾಸ್ತವಕ್ಕೂ ರಾಹು ದೋಷ ಇರುವ ಮಂದಿ ಯಶಸ್ಸಿನ ಮೆಟ್ಟಿಲೇರುವುದಕ್ಕೆ ಅಡತಡೆಗಳನ್ನು ಎದುರಿಸುತ್ತಾರೆ. ಯಶಸ್ಸನ್ನು ಸಂಪತ್ತು, ಸಾಧನೆಗಳ ಮೂಲಕ ಪಡೆದಿದ್ದರೂ ಜೀವನದ ಮಹತ್ವದ ಘಟ್ಟದಲ್ಲಿನ ಅವಘಡ, ಸಾಂಸಾರಿಕ ತಾಪತ್ರಯ, ಸ್ವಜನರಿಂದಲೇ ಬಾಧೆ, ಹೇಳಿಕೊಳ್ಳಲು ಅಸಾಧ್ಯವಾಗುವ ವೈಯಕ್ತಿಕ ತೊಂದರೆಗಳನ್ನು ಎದುರಿಸುತ್ತಿರುತ್ತಾರೆ. ಮಾನಸಿಕವಾದ ಖಾಯಿಲೆಗಳೂ ಕೂಡ ರಾಹುವಿನ ಉಪಟಳಗಳಿಂದ ಎದುರಾಗುವ ಸಂಭವ ಇರುತ್ತದೆ. ಕನ್ನಡ ಚಿತ್ರರಂಗದ ಖ್ಯಾಟ ನಟರೊಬ್ಬರು ಎದುರಿಸಿದ ಮಾನಸಿಕ ತಾಕಲಾಟಗಳು ರಾಹು ಸಂಬಂಧವಾದ ದೋಷದ ನೆರಳಲ್ಲಿಯೇ ಇತ್ತು. ಕನ್ನಡದ ಪ್ರಸಿದ್ಧ ನಿರ್ದೇಶಕರೊಬ್ಬರು ಅತ್ಯಂತ ದಾರುಣವಸ್ಥೆಯಲ್ಲಿ ಅಂತ್ಯ ಕಂಡಿದ್ದು ರಾಹು ದೋಷದ ಪರಿಣಾಮದಿಂದಲೇ.
ಅಭಿನಯ, ರೂಪ, ಯಶಸ್ಸು ಹಾಗೂ ಖ್ಯಾತಿಗಳಿದ್ದೂ ಏಕಾಂಗಿಗಳಾದ ನಟಿಮಣಿಗಳು, ಈಗ ಬದುಕಿಯೂ ಬಾಧೆ ಅನುಭವಿಸುತ್ತಿರುವ ಅನೇಕ ಜಾಗತಿಕ ಖ್ಯಾತಿಯ ಕ್ರೀಡಾಪಟುಗಳು, ನೇಪಥ್ಯಕ್ಕೆ ಸರಿದು ಅಸ್ತಂಗತರಾದ ವಿದ್ವಜ್ಜನರು ದೂರದ ಸೀಮೆಗಳ ಗಡಿಯಲ್ಲಿ ಹುಡುಕಾಡ ಬೇಕಿಲ್ಲ. ಕರ್ನಾಟಕದಲ್ಲೇ ಇಂಥವರ ದೊಡ್ಡ ಯಾದಿ ಇದೆ. ಯಶಸ್ಸಿನ ಏಣಿಯನ್ನು ಮತ್ತೆ ಸಂಪಾದಿಸುತ್ತೇವೆ ಎಂದು ಕರಗಿಹೋದ ತಮ್ಮ ಯಶಸ್ಸಿನ ಶಿಖರವನ್ನು ಹಿಂತಿರುಗಿ ಏರಲು ಹರಸಾಹಸ ಪಡುತ್ತಿರುತ್ತಾನೆ. ಆದರೆ ಅದು ಮರೀಚಿಕೆಯಾಗುತ್ತಲೇ ಹೋಗುತ್ತದೆ. ರಾಜಕಾರಣಿಗಳು ಈ ಗುಂಪಿನಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ವಿಧಿ ಬೇರೆಯದೇ ಆಟಗಳನ್ನು ಆಡುತ್ತಿರುತ್ತದೆ.
ವಾರದ ಪ್ರಮುಖ ದಿನಗಳು
ಜನವರಿ 31, ಗುರುವಾರ- ಕೀರ್ತನ ಬ್ರಹ್ಮ, ಅಧ್ಯಾತ್ಮಿಕ ಚೇತನ ಶ್ರೀ ತ್ಯಾಗರಾಜರ ಆರಾಧನಾ ದಿನ.
ಫೆಬ್ರವರಿ 2, ಶನಿವಾರ- ಭಾರತೀಯ ಅಧ್ಯಾತ್ಮ ಮೀಮಾಂಸೆಯನ್ನ ಪಾಶ್ಚಾತ್ಯ ಲೋಕದ ಜನ ಸರಳವಾಗಿ ಅರಿತುಕೊಳ್ಳಬಹುದಾದ ನಿಟ್ಟಿನಲ್ಲಿ ಜಾಗತಿಕ ಗಮನ ಸೆಳೆದ ಸ್ವಾಮಿ ವಿವೇಕಾನಂದರ ಜನ್ಮದಿನ. ನಿಸ್ಸಂಗ, ತ್ಯಾಗ, ಯೋಗಿತ್ವಗಳಲ್ಲಿ ಧಾರ್ಮಿಕ ಅನುಭೂತಿತ್ವ ಕಂಡ ಋಷಿ ಇವರು.
ಫೆಬ್ರವರಿ 4, ಸೋಮವಾರ- ಪ್ರಪಂಚದ ಅಸ್ತಿತ್ವವನ್ನೇ ಕ್ರೂರವಾಗಿ ಯಾತನಾಮಯಗೊಳಿಸುವ ಹಾಗೆ ಹಲವರನ್ನು ಕಾಡುವ ಮಹಾ ಮಾರಿ ಕ್ಯಾನ್ಸರ್. ಇಂದು ವಿಶ್ವ ಕ್ಯಾನ್ಸರಿನ ದಿನ.
ಫೆಬ್ರವರಿ 6, ಬುಧವಾರ- ಸರ್ವತ್ರ ಏಕಾದಶಿ ದಿನವಾಗಿದ್ದು ಹರಿ ಪ್ರೀತ್ಯರ್ಥ ಉಪವಾಸ ವ್ರತ ದಿನ.
ಪ್ರಶ್ನೋತ್ತರ
ರಾಗಿಣಿ ಅಣ್ಣಪ್ಪ, ಮುದ್ದೇಬಿರಾಹಳ
ಗುರೂಜಿ, ನನ್ನ ಮಗಳಿಗೆ ಯಾರೋ ಕೃತ್ರಿಮ ನಡೆಸಿ ವಾಮಾಚಾರ ಗೈದಿದ್ದಾರೆ. ಗೆಲುವಾಗಿಯೇ ಇದ್ದವಳು ಈಗ ಆರು ತಿಂಗಳಿನಿಂದ ಮಂಕಾಗಿದ್ದಾಳೆ. ಯಾಕೆ ಬದುಕು, ಏಕೆ ಬದುಕಿರಬೇಕು ಎಂದು ಪ್ರಶ್ನಿಸುತ್ತಿರುತ್ತಾಳೆ. ಏನು ತೊಂದರೆಯಾಗಿರಬಹುದು? ಏಕೆ ಮಂಕಾಗಿದ್ದಾಳೆ? ಇವಳ ನಿರುತ್ಸಾಹದ ಮಂಕು ಕವಿದ ಮುಖ ಕಂಡಾಗ ಯಾತನೆಯಾಗುತ್ತದೆ. ಮದುವೆ ಮಾಡಬೇಕೆಂದಿದ್ದೇವೆ. ಸಾಧ್ಯವೇ?
ನಿಮ್ಮ ಮಗಳಿಗೆ ಯಾವುದೇ ರೀತಿಯಲ್ಲೂ ವಾಮಾಚರದ ವಿಚಾರಗಳು ಬಾಧೆಯನ್ನು ಉಂಟು ಮಾಡಲು ಸಾಧ್ಯವೇ ಇಲ್ಲ. ಅಭಿಚಾರ ದೋಷಗಳು ನಡೆಯಲಾರವು. ಮುಖ್ಯವಾಗಿ ಕಳತ್ರ ಸ್ಥಾನ ದೋಷವಿದೆ. ಬಾಳ ಸಂಗಾತಿಯ ವಿಚಾರದಲ್ಲಿ ಮಾನಸಿಕ ವಿಪ್ಲವಗಳಿಗೆ ಅವಕಾಶವಿದೆ. ಮೊದಲು ಸೂಕ್ಷ್ಮವಾಗಿ ಮಗಳು ಕೆಲ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಗಮನಹರಿಸಿ. ಪ್ರೇಮ ಭಂಗವಾಗಿರುವ ಸಾಧ್ಯತೆ ಹೇರಳವಾಗಿದೆ. ಹೀಗಾಗಿ ಆತ್ಮೀಯ ಹಾಗೂ ಧೈರ್ಯ ತುಂಬುವ ಮಾತುಗಳ ಮೂಲಕ ಅಸಲೀ ವಿಷಯ ತಿಳಿದುಕೊಳ್ಳಿ. ಬರುವ ಜೂನ್ ಒಳಗಡೆ ಮದುವೆ ನಡೆಯುತ್ತದೆ. ಚೇತರಿಸಿಕೊಳ್ಳುತ್ತಾಳೆ. ಕನ್ನಿಕಾಪರಮೇಶ್ವರಿ ಅಷ್ಟೋತ್ತರ ಓದಿಸಿ.
ವಿಶ್ವನಾಥ ಸಾಲಿಯಾನ್, ಕುಂದಾಪುರ
ನನಗೆ ಈಗ ನಾಲ್ಕು ತಿಂಗಳುಗಳಿಂದ ಹೊಟ್ಟೆ ನೋವಿನ ದೊಡ್ಡ ಸಮಸ್ಯೆ ತೆಲೆದೋರಿದೆ. ಊಟ ಸೇರುತ್ತಿಲ್ಲ. ವೈದ್ಯಕೀಯ ಪರೀಕ್ಷೆಗಳೆಲ್ಲ ನಡೆದವು. ಸ್ಕ್ಯಾನಿಂಗ್ ಕೂಡಾ ಆಯಿತು. ಏನೇನೋ ಮಾತ್ರೆ, ದ್ರಾವಣಗಳನ್ನು ಸೇವಿಸಿದ್ದಾಯೆ¤à ವಿನಃ ನೋವಿನಿಂದ ಬಿಡುಗಡೆಯಾಗಿಲ್ಲ. ದಯಮಾಡಿ ತೊಂದರೆ ಏನೆಂಬುದನ್ನು ತಿಳಿಸುವಿರಾ?
ನಿಮ್ಮ ಜಾತಕ ಪರಿಶೀಲಿಸಲಾಗಿ ಅದರಲ್ಲಿ ಕಂಡ ದೋಷಗಳು ಚಂದ್ರ ಹಾಗೂ ಶನಿಯತ್ತ ಬೆರಳು ತೋರಿಸುತ್ತಿದೆ. ಪ್ರತಿ ದಿನದ ಮಲ ವಿಸರ್ಜನೆಯ ತೊಂದರೆಗಳು ಹೇಗಿವೆ? ಮತ್ತೂ ಒಮ್ಮೆ ಲಿವರ್ ಹಾಗೂ ಮಲದ್ವಾರದ ಸುತ್ತಮುತ್ತಲ ವಿಚಾರಗಳನ್ನು ಕೇಂದ್ರೀಕರಿಸಿ ಕೆಲ ಸ್ಕ್ಯಾನಿಂಗ್‌ಗಳಿಗೆ ವೈದ್ಯರ ಬಳಿ ಪ್ರಸ್ತಾಪ ಎತ್ತಿ. ಪ್ರತಿ ದಿನ ಕಾಲ ಭೈರವ ಅಷ್ಟೋತ್ತರ ಹಾಗೂ ಪ್ರತಿ ಮಂಗಳವಾರ ಗಕಾರ ಪೂರ್ವಕ ಗಣೇಶ ಸಹಸ್ರ ನಾಮಾವಳಿ ಪಠಿಸಿ. ಒಳ್ಳೆಯದಾಗಲಿದೆ.
ನನ್ನ ಮಗಳ ಮದುವೆಗಾಗಿ ಅನೇಕ ಪ್ರಯತ್ನಗಳನ್ನು ನಡೆಸಿದಾಗ್ಯೂ ಫಲ ಸಿಗುತ್ತಿಲ್ಲ. ಮದುವೆ ಯೋಗವಿದೆಯೇ? ಪರಿಹಾರ ತಿಳಿಸುತ್ತೀರಾ?
ಮೇ 23ನೇ ತಾರೀಖೀನ ನಂತರದಲ್ಲಿ ಅಕ್ಟೋಬರ್ ಅಂತ್ಯದೊಳಗೆ ಈವರ್ಷ ಮಗಳ ಮದುವೆ ನೆರವೇರುತ್ತದೆ. ಸರ್ವಾರ್ಥ ಸಾಧಿಕೆಯಾದ ಸನ್ಮಂಗಳೆ ಶ್ರೀ ದುರ್ಗಾಂಬಿಕಾ ಮೂಲ ಅಷ್ಟೋತ್ತರ ಸಿದ್ಧಿ ಮಂತ್ರ ಪಠಣ ಹಾಗೂ ಪ್ರಸನ್ನ ಗಣಪತಿ ಆರಾಧನೆ ಮಾಡಿ.