ರಮ್ಯಾ ಕೊನೆವರೆಗೂ 'ನೀರುದೋಸೆ' ಉಯ್ಯುತ್ತಾರಾ? -ಹೀಗೊಂದು ಅನುಮಾನ ಆರಂಭದಿಂದಲೂ ಗಾಂಧಿನಗರಕ್ಕೆ ಇದ್ದೇ ಇತ್ತು. ಈಗ ಆ ಅನುಮಾನ ನಿಜವಾಗಿದೆ. ರಮ್ಯಾ 'ನೀರುದೋಸೆ' ಚಿತ್ರದಿಂದ ಅದೊಂದು ಒಳ್ಳೇ ದಿನ ನೋಡಿ ಕಾಲು ಹೊರಗಿಟ್ಟಿದ್ದಾರೆ. ಅಲ್ಲಿಗೆ ರಮ್ಯಾಗೂ ನೀರುದೋಸೆಗೂ ಆಗಿಬರುವುದಿಲ್ಲ ಎಂಬುದು ಸಾಬೀತಾಗಿದೆ. 'ನೀರುದೋಸೆ' ಚಿತ್ರದ ನಾಯಕಿ ಪಟ್ಟದಿಂದ ರಮ್ಯಾ ಹೊರಬಂದಿರುವ ಸುದ್ದಿಯನ್ನು ಸ್ವತಃ ಅವರೇ ಟ್ವಿಟ್ ಮಾಡಿ ಸ್ಪಷ್ಟಪಡಿಸಿದ್ದಾರೆ. 'ನೀರುದೋಸೆಯ ಸ್ಕ್ರಿಪ್ಟ್ ಚೆನ್ನಾಗಿದೆ. ಆದರೆ ನಾನು ಅದರಿಂದ ಹೊರಬಂದಿದ್ದೇನೆ. ನನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತೇನೆಂಬ ನಂಬಿಕೆ ನನಗಿಲ್ಲ' ಎಂದು ಎಂದು ರಮ್ಯಾ ಟ್ವಿಟ್ ಮಾಡುವ ಮೂಲಕ ವಿಜಯ್ ಪ್ರಸಾದ್ ನಿರ್ದೇಶನದ 'ನೀರುದೋಸೆ'ಗೆ ಬೆನ್ನು ಹಾಕಿದ್ದಾರೆ. ಅಷ್ಟಕ್ಕೂ 'ಆ ಪಾತ್ರಕ್ಕೆ ನ್ಯಾಯ ಒದಗಿಸುವ ನಂಬಿಕೆ ಇಲ್ಲ' ಎಂದಿದ್ದಾರೆ ರಮ್ಯಾ. ಹಾಗಾದರೆ ಆ ಪಾತ್ರ ಎಂಥದ್ದು. ಮೂಲಗಳ ಪ್ರಕಾರ, ಇಲ್ಲಿ ರಮ್ಯಾ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಮೊದಲು ಒಪ್ಪಿಕೊಂಡ ರಮ್ಯಾ ಈಗ ಆ ಪಾತ್ರ ಮಾಡಲ್ಲ ಅಂದಿದ್ದಾರೆ. ರಮ್ಯಾ ಆ ಪಾತ್ರದಿಂದ ಹೊರಬಂದ ಕೂಡಲೇ ಗಾಂಧಿನಗರ ಒಂದಷ್ಟು ಲೆಕ್ಕಾಚಾರದಲ್ಲಿ ತೊಡಗಿದೆ. ಗಾಂಧಿನಗರದ ಪಂಡಿತರ ಪ್ರಕಾರ, ರಮ್ಯಾ ಕಾಂಗ್ರೆಸ್ ಅಭ್ಯರ್ಥಿ. ಇತ್ತ ಚುನಾವಣೆ ಸಮೀಪಿಸುತ್ತಿದ್ದೆ. ಈ ಬಾರಿ ಅವರು ಸ್ಪರ್ಧಿಸುವುದು ಬಹುತೇಕ ಖಚಿತ. ಹೀಗಿರುವಾಗ ರಮ್ಯಾ ಇಂತಹ ಪಾತ್ರ ಮಾಡಿದರೆ ಅವರ ಪಾಲಿಟಿಕಲ್ ಕೆರಿಯರ್‌ಗೆ ಧಕ್ಕೆಯಾಗಬಹುದೆಂಬ ಕಾರಣಕ್ಕೆ ರಮ್ಯಾ 'ದೋಸೆ' ಬೇಡ ಎಂದಿದ್ದಾರೆ. ಅಂದಹಾಗೆ, ಚಿತ್ರದಲ್ಲಿ ಜಗ್ಗೇಶ್ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತುಂಬಾ ಒಳ್ಳೆಯ ಮತ್ತು ರಿಯಲಿಸ್ಟಿಕ್ ಆಗಿರುವಂತಹ ಪಾತ್ರವಾದ್ದರಿಂದ ಜಗ್ಗೇಶ್ ತಮ್ಮ ಪಾತ್ರಕ್ಕಾಗಿ ತಲೆಕೂಡ ಬೋಳಿಸಲಿದ್ದಾರಂತೆ. ಅದೇನೇ ಇದ್ದರೂ ಈಗ ರಮ್ಯಾ ಮಾತ್ರ ನೋ ಎಂದಿದ್ದೇ ಸುದ್ದಿ. ರಮ್ಯಾ ಇತ್ತೀಚೆಗೆ ಕೆಲವು ಸಿನಿಮಾ ವಿಷಯದಲ್ಲಿ ಮೊದಲು ಒಪ್ಪಿಕೊಂಡು 'ನನ್ನ ಪಾತ್ರ ತುಂಬಾ ಚೆನ್ನಾಗಿದೆ' ಎಂದು ಟ್ವಿಟ್ ಮಾಡಿಕೊಂಡು ಕೊನೆಗೆ ಆ ಸಿನಿಮಾದಿಂದ ಹೊರಬಂದಿದ್ದನ್ನೂ ಅವರೇ ಟ್ವಿಟ್ ಮಾಡುತ್ತಿದ್ದಾರೆ. ಈ ಹಿಂದೆ 'ನಾನು ನನ್ನ ಕನಸು' ಚಿತ್ರವನ್ನು ಮೊದಲು ಒಪ್ಪಿಕೊಂಡ ರಮ್ಯಾ ನಂತರ, 'ನೋ' ಎಂದು ಎಡಗಾಲಿಟ್ಟು ಹೊರಬಂದರು. ಕೆಲ ತಿಂಗಳ ಹಿಂದೆ 'ಚಂದ್ರ' ಸಿನಿಮಾವನ್ನೂ ಹೀಗೆ ಮಾಡಿದರು. ಅದ್ಯಾಕೋ ರಮ್ಯಾಗೆ ಮೊದಲು ಇಷ್ಟವಾಗಿದ್ದು ನಂತರ ಇಷ್ಟವಾಗೋದಿಲ್ವೇನೋ.... ಎಲ್ಲಾ ಓಕೆ, ಈಗ 'ನೀರುದೋಸೆ' ಉಯ್ಯೋರು ಯಾರು?