Wednesday, June 19, 2013
Last Updated: 5:25:16 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಹೇಮಂತ ಹಬ್ಬದಲ್ಲಿ ಕದಂಬ ಕೌಶಿಕೆ
    • "ಸುಧಾಮ''ದಲ್ಲಿ ಹೇಮಂತ ಹಬ್ಬ-5ರಲ್ಲಿ ಪ್ರದರ್ಶಿಸಲ್ಪಟ್ಟ ಕದಂಬ ಕೌಶಿಕೆ ಯಕ್ಷಗಾನ.

      • ಪಾತಾಳ ವೆಂಕಟರಮಣ ಭಟ್‌ | Feb 01, 2013

        ಯಕ್ಷಗಾನಕ್ಕೆ ಉಳಿವಿಲ್ಲ... ಅಳಿವಿನಂಚಿಗೆ ಸಾಗುತ್ತಿದೆ... ಇತ್ಯಾದಿ ಕೂಗು ಗಳು ಯಕ್ಷಗಾನ ಗೋಷ್ಠಿಗಳಲ್ಲಿ, ಕಮ್ಮಟಗಳಲ್ಲಿ ಇತ್ತೀಚೆಗಿನ ದಿನಗಳಲ್ಲಿ ಸಾಮಾನ್ಯ ವಾಗಿದೆ. ಕೆಲವೊಂದು ಹವ್ಯಾಸಿ ಕೂಟದವರ ಪ್ರದರ್ಶನಗಳನ್ನು ಕಂಡಾಗ ಇವೆಲ್ಲ ಅರ್ಥಹೀನ ಎಂಬ ಅಭಿಪ್ರಾಯಕ್ಕೆ ಬರಬೇಕಾಗುತ್ತದೆ. ಇತ್ತೀಚೆಗೆ ಉಪ್ಪಿನಂಗಡಿ ಸಮೀಪದ ಡಾ| ತಾಳ್ತಜೆ ವಸಂತ ಕುಮಾರರ ಮನೆ "ಸುಧಾಮ'ದಲ್ಲಿ ಹೇಮಂತ ಹಬ್ಬ-5ರಲ್ಲಿ ಪ್ರದರ್ಶಿಸಲ್ಪಟ್ಟ ಕದಂಬ ಕೌಶಿಕೆ ಯಕ್ಷಗಾನ ನನ್ನ ಮೇಲಿನ ಮಾತಿಗೆ ಸಾಕ್ಷಿ!

        ಮಣಿಮಂಟಪದಲ್ಲಿ ನಡೆದ ಕದಂಬ ಕೌಶಿಕೆ ಮೂರು ಗಂಟೆಗಳ ಕಾಲ ಪ್ರೇಕ್ಷಕ ರನ್ನು ರಂಜಿಸಿತು; ನೋಡುಗರನ್ನು ಹಿಡಿದಿರಿಸಿತು. ಪುತ್ತೂರು ರಮೇಶ ಭಟ್ಟರ ಸೊಗಸಾದ ಭಾಗವತಿಕೆ, ಜಗನ್ನಿವಾಸ ರಾವ್‌ ಹಾಗೂ ರಾಮಪ್ರಸಾದ ವದ್ವ ಅವರ ಚೆಂಡೆ -ಮದ್ದಳೆಗಳ ಪೂರಕವಾದನದಿಂದ ಹಿಮ್ಮೇಳವು ಪರಿಪೂರ್ಣವಾಗಿತ್ತು. ಉಂಡೆಮನೆ ಕೃಷ್ಣ ಭಟ್ಟರ ಸಭಾಕ್ಲಾಸ್‌ ಸಹಿತವಾದ ದೇವೇಂದ್ರನ ಒಡ್ಡೋಲಗ ಒಳ್ಳೆಯ ಆರಂಭ ನೀಡಿತು. ಅಕ್ಷರ ಕಶ್ಯಪ್‌, ಅತುಲ ಕಶ್ಯಪ್‌, ಸುಧಾಂಶು ಕೂಡೂರು ದೇವತೆಗಳಾಗಿ, ತಮ್ಮ ಇತಿಮಿತಿಯೊಳಗೆ ಉತ್ತಮ ನಿರ್ವಹಣೆ ತೋರಿದರು. ಶಿವಶಂಕರ ಮಣಿಲ ಶುಂಭಾಸುರನಾಗಿ ತೆರೆಪಾರ್ಪಾಟು, ನಿತ್ಯವಿಧಿ - ಇತ್ಯಾದಿ ಸಾಂಪ್ರದಾಯಿಕ ಪ್ರದರ್ಶನ ನೀಡಿ, ಒಬ್ಬ ಒಳ್ಳೆಯ ಬಣ್ಣದ ವೇಷಧಾರಿಯಾಗಿ ಗುರುತಿಸಿಕೊಂಡರೂ, ಹತ್ತಿಯ ಬದಲು ಹಿಟ್ಟಿನ ಚುಟ್ಟಿ ಇಟ್ಟುಕೊಳ್ಳುತ್ತಿದ್ದರೆ ಚೆನ್ನಿತ್ತು. ಚಂಡ-ಮುಂಡರಾಗಿ ಶಶಾಂಕ ನೆಲ್ಲಿತ್ತಾಯ ಹಾಗೂ ಅರ್ಜುನ್‌ ಕಜೆ ವೈವಿಧ್ಯಮಯ ಹೆಜ್ಜೆಗಾರಿಕೆ, ಸ್ವಭಾವಗಳಿಂದ ವಿದ್ವಾಂಸರ ಮನ ಸೆಳೆದರು. ವೃತ್ತಿ ಕಲಾವಿದರಿಗಿಂತಲೂ ಹೆಚ್ಚು ಪಾತ್ರ ರಚನೆ, ಪೋಷಣೆಗಳಿಂದ ಜೀವ ತುಂಬಿದರು. ಧೂಮ್ರಾಕ್ಷನಾಗಿ ಉಳಿಯ ಸುಬ್ರಹ್ಮಣ್ಯ ಭಟ್ಟರು ಚೆನ್ನಾಗಿ ಅಭಿನಯಿಸಿದರು. ಕಥಾ ಹಿನ್ನೆಲೆಯನ್ನು ಪೂರ್ಣವಾಗಿ ಅರಿಯದೇ ರಂಗಪ್ರವೇಶಿಸಿದ್ದರಿಂದ ಮಾತಿನಲ್ಲಿ ಅಲ್ಪ ಪ್ರಮಾಣದಲ್ಲಿ ಎಡವಿದರು. ಕೌಶಿಕೆಯಾಗಿ ಅಭಿನಯಿಸಿದವರು ಹೆಸರಾಂತ ಸ್ತ್ರೀಪಾತ್ರಧಾರಿ ಕೊಕ್ಕಡ ಈಶ್ವರ ಭಟ್ಟರು. ಅನಾರೋಗ್ಯ ದಿಂದಾಗಿ ವೃತ್ತಿ ಬದುಕಿನಿಂದ ದೂರ ಉಳಿದಿದ್ದರೂ ತನ್ನಲ್ಲಿರುವ ಕಲಾವಂತಿಕೆ ಯನ್ನು ಚೆನ್ನಾಗಿ ಪ್ರಸ್ತುತ ಪಡಿಸಿದರು. ದೇವದೂತನಾಗಿ ರಮೇಶ್‌ ಕಜೆ ಅತ್ಯುತ್ತಮ ರೀತಿಯಿಂದ ಪಾತ್ರ ಗೌರವ, ಸಭಾ ಗೌರವಗಳನ್ನು ಉಳಿಸಿಕೊಂಡು ರಂಜಿಸಿದರು.

        ಇಡೀ ಪ್ರದರ್ಶನದಲ್ಲಿ ಪ್ರಥಮ ಸ್ಥಾನದಲ್ಲಿ ಕಂಗೊಳಿಸಿದ್ದು ಡಾ| ಗೋವಿಂದ ಪ್ರಸಾದ ಕಜೆಯವರ ರಕ್ತಬೀಜಾಸುರ. ವೇಷದಲ್ಲಿ ನಖ - ಶಿಖಾಂತ ಯಕ್ಷಗಾನದ ಸ್ವರೂಪವಿತ್ತು. ಪರಂಪರೆಯ ಮುಖ ವರ್ಣಿಕೆ, ಗೆಜ್ಜೆಯೊಂದಿಗೆ ಕಾಲ್ಗಡಗ, ಕಾಲ್ಮುಳ್ಳು ವಗೈರೆ ಪುರಾತನ ಆಭರಣಗಳು, ಉಲ್ಲನ್‌ ಮೀಸೆ - ಹೀಗೆ ಶಾಸ್ತ್ರೀಯ ಕಲಾ ಪೂರ್ಣ ವೇಷವಾಗಿತ್ತು. ಪಾತ್ರೋಚಿತ ಕುಣಿತ, ಹಾವಭಾವ, ವ್ಯಾಕರಣಬದ್ಧ, ಕಾವ್ಯರೂಪದ ಭಾಷೆ, ಹಿತಮಿತವಾದ ಮಾತುಗಾರಿಕೆಯಿಂದ ಪಾತ್ರದ ಹೃದಯ ಪ್ರಕಟವಾಗಿತ್ತು. ಶ್ರೀದೇವಿಯನ್ನು ತಿಳಿದ ರಕ್ಕಸನಾಗಿದ್ದು, ಒಟ್ಟಿನಲ್ಲಿ ವೃತ್ತಿ ಕಲಾವಿದ ರಿಗಿಂತ ಮೇಲ್ಮಟ್ಟದ್ದಾಗಿತ್ತು ಎಂದರೆ ತಪ್ಪಾಗದು. ದೇವಕಾನ ಕೃಷ್ಣ ಭಟ್ಟರ ವೇಷಭೂಷಣಗಳು ಪ್ರದರ್ಶನವನ್ನು ವೈಭವೀಕರಿಸುವುದಕ್ಕೆ ಸಹಕಾರಿ ಆಯ್ತು.

        ಯಕ್ಷಗಾನ ಪ್ರದರ್ಶನದ ಪೂರ್ವಭಾವಿಯಾಗಿ ನಡೆದ ಬೆಂಗಳೂರಿನ ಕಲಾವಿದ ಉದಯಕೃಷ್ಣ ಜಿ. ಅವರ ಗೀತಕುಂಚ, ಸಭಾ ಕಾರ್ಯಕ್ರಮ, ಸಮ್ಮಾನ, ಹೊಟ್ಟೆ ತಂಪಾಗಿಸಿದ ಊಟೋಪಚಾರ - ಹೀಗೆ ಡಾ| ತಾಳ್ತಜೆಯವರು ತಮ್ಮ ಪತ್ನಿ ದಿ| ಮಣಿಮಾಲಿನಿಯವರ ನೆನಪಿಗಾಗಿ ಸ್ಥಾಪಿಸಿದ ವಸುಧಾ ಪ್ರತಿಷ್ಠಾನದವರು ಹಮ್ಮಿಕೊಂಡ "ಹೇಮಂತ ಹಬ್ಬ-5' ಸ್ಮರಣೀಯವಾಗಿ, ಅರ್ಥಪೂರ್ಣವಾಗಿ ಮೂಡಿಬಂದಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus