Sunday, May 26, 2013
Last Updated: 12:24:08 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸುಂದರ, ಶ್ರೀಮಂತ ಗಾಯನ
    • ಸಂಗೀತ ವಿದುಷಿ ಉಷಾ ಈಶ್ವರ ಭಟ್‌ ಅವರ ನೇತೃತ್ವದಲ್ಲಿ ಪ್ರತಿವರ್ಷ ನಡೆಯುವ ಕಾರ್ಯಕ್ರಮ

      • ವೀಜಿ ಕಾಸರಗೋಡು | Feb 01, 2013

        ಕಾಸರಗೋಡಿನ ಶ್ರೀ ಗೋಪಾಲ ಕೃಷ್ಣ ಸಂಗೀತ ವಿದ್ಯಾಲಯದ 16ನೇ ವಾರ್ಷಿಕೋತ್ಸವದ ಅಂಗವಾಗಿ ಜ.20ರಂದು ಲಲಿತಕಲಾ ಸದನದಲ್ಲಿ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ರಸಿಕರ ಮನದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದೆ.

        ಸಂಗೀತ ವಿದುಷಿ ಉಷಾ ಈಶ್ವರ ಭಟ್‌ ಅವರ ನೇತೃತ್ವದಲ್ಲಿ ಪ್ರತಿವರ್ಷ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರತಿಬಾರಿ ಯುವ ಪ್ರತಿಭಾವಂತ ಗಾಯಕರು ಭಾಗವಹಿಸುತ್ತಾರೆ.

        ಈ ಬಾರಿ ಚೆನ್ನೈಯ ಪ್ರಸಿದ್ಧ ಕಲಾವಿದೆ ಶ್ರೀರಂಜಿನಿ ಸಂತಾನ ಗೋಪಾಲನ್‌ ಅವರ ಸಂಗೀತ ಕಛೇರಿ ನಡೆದಿದ್ದು, ಅವರು ತಮ್ಮ ಪರಂಪರಾಗತ ಶ್ರೀಮಂತ ಮತ್ತು ಸುಂದರ ಗಾಯನ ಶೈಲಿಯಿಂದ, ವಿದ್ವತ್‌ಪೂರ್ಣ, ಇಂಪಾದ ಸ್ವರಮಾಧುರ್ಯದಿಂದ ಗಮನ ಸೆಳೆದರು.

        ದರ್ಬಾರ್‌ ವರ್ಣಕ್ಕೆ ಕಿರು ಆಲಾಪನೆ ಯನ್ನು ನೀಡಿ ಲವಲವಿಕೆಯಿಂದ ಆಕರ್ಷಕ ವಾಗಿ ಪ್ರಸ್ತುತಪಡಿಸಿದ ಕಲಾವಿದೆ ಆರಂಭದಲ್ಲೇ ಪ್ರೇಕ್ಷಕರನ್ನು ಸೆರೆಹಿಡಿದು ಕರತಾಡನಕ್ಕೆ ಪಾತ್ರ ರಾದರು.  ಪೂರ್ಣಚಂದ್ರಿಕೆ ರಾಗವನ್ನು ಅಪೂರ್ವ ರೀತಿಯಲ್ಲಿ ಸುದೀರ್ಘ‌ವಾಗಿ ವಿಸ್ತರಿಸಿ, ತ್ಯಾಗರಾಜರ ಪಲುಕವೇ... ಕೃತಿಯನ್ನು ವಿಶೇಷ ಪ್ರಯೋಗಗಳಿಂದ, ಮನೋಧರ್ಮ ಸ್ವರಗಳ ಜೋಡಣೆಯಿಂದ ಸಿಂಗರಿಸಿ ಉನ್ನತವಾಗಿಸಿದರು.

        ಪುರಂದರದಾಸರ ಸದಾ ಎನ್ನ ಹೃದಯ ದಲ್ಲಿ...ಕೀರ್ತನೆಯನ್ನು ಪಂತುವರಾಳಿ ರಾಗ, ರೂಪಕತಾಳದಲ್ಲಿ ಹಾಡಿದ್ದು, ಕೀರ್ತನೆಗೆ ಮೊದಲು ಭಾವಪೂರ್ಣವಾಗಿ ವಿಸ್ತರಿಸಿದ ರಾಗಾಲಾಪನೆ, ನೆರವಲ್‌ನಲ್ಲಿ ನೀಡಿದ ವೈವಿಧ್ಯಭಾವ ಪ್ರಯೋಗ ಮತ್ತು ಕಲ್ಪನಾ ಸ್ವರಜೋಡಣೆಗಳಿಂದ ರಸಿಕರಿಂದ ಅದ್ಭುತ ಚಪ್ಪಾಳೆ ಪಡೆದುಕೊಂಡರು.

        ಬಳಿಕ ಮೂಡಿಬಂದ ಮಿಶ್ರಛಾಪಿನ, ಬೇಗಡೆ ರಾಗದ ಸುಂದರ, ಶ್ರೇಷ್ಠ ಸ್ಥಾಯಿ ಯುಕ್ತ ಆಲಾಪನೆಯನ್ನು ಒಳಗೊಂಡ ತಮಿಳು ಕೃತಿ ಕಡೈ ಕಣ್ಣ... ಮನೋಧರ್ಮ ಸ್ವರಗಳಿಂದ ಮಧ್ಯಮ ಕಾಲದಲ್ಲಿ ಮೆರೆಯಿತು. ನಳಕಂಠ ಶಿವನ್‌ ವಿರಚಿತ ಎಂದ್ರುಕ್ಕು ಶಿವ ಕೃಪೈ... ಮುಖಾರಿ ರಾಗದಲ್ಲಿ ಮನೋಜ್ಞವಾಗಿ, ಇಂಪಾಗಿ ಪ್ರಸ್ತುತಗೊಂಡಿತು.

        ಕಲಾವಿದೆ ಪ್ರಧಾನವಾಗಿ ಆಯ್ದುಕೊಂಡದ್ದು ಬಿಲಹರಿ ರಾಗವನ್ನು. ಇದರಲ್ಲಿ ನೀಡಿದ ವಿಸ್ತಾರ ವಾದ ಸ್ಥಾಯಿತ್ವದ ವಿವಿಧ ಮಜಲುಗಳಲ್ಲಿನ ಶ್ರೇಷ್ಠ ಸಂಚಾರಗಳು ರಸಿಕರಿಗೆ ವಿಶೇಷ ಅನುಭವ ನೀಡಿದವು. ಬೆನ್ನಿಗೆ ಬಂದ ಚುಟುಕು ತಾನಂ ಲವಲವಿಕೆಯಿಂದ ಕೂಡಿತ್ತು. ಇದಕ್ಕೆ ಪೂರಕವಾದ ಚೌಕಕಾಲದ ಮೈಸೂರು ವಾಸುದೇವಾಚಾರ್ಯರ ಶ್ರೀ ಚಾಮುಂಡೇಶ್ವರಿ... ಕೃತಿಯನ್ನು ವಿದ್ವತ್‌ ಪೂರ್ಣವಾಗಿ ಪ್ರಸ್ತುತಪಡಿಸಿ, ಕಲ್ಪನಾ ಸ್ವರಗಳನ್ನು ಪೋಣಿಸಿದ ರೀತಿಯಂತೂ ಶ್ರೀಮಂತವಾಗಿತ್ತು.

        ತದನಂತರ ಮುಂದಿಟ್ಟ ಮರಾಠಿ ಅಭಂಗ ಭಕ್ತಜನ ವತ್ಸಲೆ... ವೃಂದಾವನ ಸಾರಂಗ ರಾಗದಲ್ಲಿ ಮೂಡಿಬಂದಿದ್ದು, ಅದರಲ್ಲಿನ ಗೋವಿಂದಾ ಹರೆ ಗೋಪಾಲ ಹರೆ... ಎಂಬ ಹಂತದಲ್ಲಿ ಪ್ರೇಕ್ಷಕರು ಪೂರ್ಣರೂಪದಲ್ಲಿ ತಲ್ಲೀನ ರಾದುದು ವಿಶೇಷವಾಗಿತ್ತು. ಅನಂತರ ರಂಜಿನಿ ಮೃದು ಪಂಕಜಲೋಚನಿ...  ನಾಲ್ಕು ರಾಗಗಳ ಕೃತಿಯನ್ನು ರಂಜನೀಯವಾಗಿ ಹಾಡಿ, ಲಾಲ್ಗುಡಿ ಅವರ (ಆದಿತಾಳ) ಕಮಾಸ್‌ ರಾಗದ ತಿಲ್ಲಾನ ವನ್ನು ಚುರುಕಾಗಿ ಮಂಡಿಸಿ ಸೈ ಎನಿಸಿದರು.   

        ಅಪೂರ್ವ ಸಂಸ್ಕೃತ ಶ್ಲೋಕ ಮತ್ತು ಕಸ್ತೂರಿ ತಿಲಕೆ... ಶ್ಲೋಕವನ್ನು ಶ್ಯಾಮಕಲ್ಯಾಣಿ ರಾಗದಲ್ಲಿ ಹಾಡಿ, ಜಯದೇವರ ಅಷ್ಟಪದಿ ಯನ್ನು ಮಧುರವಾಗಿ ಆಲಾಪಿಸಿ ಕಛೇರಿ ಯನ್ನು ಸಂಪನ್ನಗೊಳಿಸಿದರು.

        ಪಿಟೀಲಿನಲ್ಲಿ ತಿರುವನಂತಪುರಂನ ಎನ್‌.ಸಂಪತ್‌ ಪೂರಕವಾಗಿ ಸಮ್ಮಿಳಿತಗೊಂಡು ನುಡಿಸಿ ಗಮನಸೆಳೆದರು. ಮೃದಂಗದಲ್ಲಿ ಅಪೂರ್ವ ರೀತಿಯ ವಾದನ ಶೈಲಿಯಿಂದ ನಾಂಜಿಲ್‌ ಎ. ಆರ್‌. ಅರುಳ್‌ ಸಹಕರಿಸಿ ಮೆರೆದರು. ಘಟಂನಲ್ಲಿ ಮನ್ನೂರು ಉಣ್ಣಿಕೃಷ್ಣನ್‌ ಆಕರ್ಷಕವಾಗಿ ನುಡಿಸಿದರು.  ಇವರ ತನಿ ಆವರ್ತನ ಮನಸೆಳೆಯಿತು.

        ಇಂಥ ಅಪೂರ್ವ ಕಛೇರಿಯನ್ನು ನೀಡಿದ ಕಲಾವಿದರು ಮತ್ತು ಕಾರ್ಯಕ್ರಮ ಆಯೋಜಿಸಿದ ಸಂಘಟಕರು ಶ್ಲಾಘನೀಯರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus