ವಿಜಯಲಕ್ಷ್ಮೀ ಕೆ. ಮಾರ್ಲ | Feb 01, 2013
ಭಾರತೀಯ ಸಂಸ್ಕೃತಿಯಲ್ಲಿ ಕೊಂಡಾಡಲ್ಪಡುವ 64 ಕಲೆಗಳಲ್ಲಿ ಗಮಕವೂ ಒಂದು. ರಾಮಾಯಣದ ಕಾಲದಿಂದಲೇ ಈ ಕಲೆಯು ಪ್ರಸಿದ್ಧಿಯಲ್ಲಿದೆ. ಆದರೆ ಕಾಲ ಗತಿಸಿದ ಹಾಗೆ ಈ ಕಲೆಯು ಮೂಲೆಗುಂಪಾಗುತ್ತಿರುವುದು ವಿಷಾದನೀಯ. ಹಿಂದೆ ರಾಜರ ಆಶ್ರಯದಲ್ಲಿ ಈ ಕಲೆಗೆ ಉನ್ನತ ಪ್ರೋತ್ಸಾಹವಿತ್ತು. ಕವಿ, ಗಮಕಿ, ವಾದಿ, ವಾಗ್ಮಿ ಎಂಬ ಪಂಡಿತರುಗಳಿಗೆ ರಾಜರ ಆಸ್ಥಾನದಲ್ಲಿ ವಿಶೇಷವಾದ ಸ್ಥಾನಮಾನವಿತ್ತು. ಇತ್ತೀಚೆಗೆ ಮತ್ತೆ ಗಮಕ ಕಲೆಯು ಅಲ್ಲಲ್ಲಿ ಚಿಗುರಿ ಬೆಳೆಯಲಾರಂಭಿಸಿದೆ. ಕಾವ್ಯ ರಸಪೂರ್ಣವಾಗಿ ಅರ್ಥ ಪಡೆಯಬೇಕಾದರೆ ಗಮಕದಲ್ಲಿ ಅದನ್ನು ಹಾಡಬೇಕು. ಆ ನೆಲೆಯಲ್ಲಿ ಗಮಕವು ಕಾವ್ಯದ ಉಸಿರು.

ಕರ್ನಾಟಕ ಗಮಕಕಲಾ ಪರಿಷತ್ತಿನ ದ.ಕ. ಜಿಲ್ಲಾ ಘಟಕವು ಜ.11 ಮತ್ತು 12ರಂದು ಮೂಡುಬಿದ್ರಿಯ ಶ್ರೀ ಮಹಾವೀರ ಕಾಲೇಜಿನಲ್ಲಿ ಗಮಕಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅವರ ಅಧ್ಯಕ್ಷತೆಯಲ್ಲಿ ದ್ವಿದಿನಗಳ ಗಮಕ ಸಮ್ಮೇಳನವನ್ನು ಆಯೋಜಿಸಿತ್ತು.
ಉದ್ಘಾಟನಾ ಸಮಾರಂಭದಲ್ಲಿ ""ನಮ್ಮದು ಧೀಮಂತ ಸಂಸ್ಕೃತಿ. ಸಂಗೀತ, ಸಾಹಿತ್ಯ, ಕಲೆಗೆ ಹೆಸರುವಾಸಿಯಾದ ದೇಶ. ಗಮಕ ಉತ್ತರ ಭಾರತದಲ್ಲಿ ಇಂದಿಗೂ ಪ್ರಚಲಿತದಲ್ಲಿದೆ. ಆದರೆ ಕನ್ನಡನಾಡಿ ನಲ್ಲಿ ಪ್ರಚಲಿತವಾಗಿರುವಷ್ಟು ಇಲ್ಲವೆಂದೇ ಹೇಳಬೇಕು' ಎಂಬ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅವರ ಮಾತು ಹಾಗೂ ""ಸಂಗೀತದಿಂದ ಮನುಷ್ಯನೊಬ್ಬ ಸಹೃದಯಿ, ವಿಚಾರವಂತನಾಗುತ್ತಾನೆ. ಮನಸ್ಸಿಗೆ ಹಿತವನ್ನು ಸಂಗೀತ ನೀಡುತ್ತದೆ. ಸಂಗೀತಗಾರನಿಗೆ ಯಾವುದೇ ರೀತಿಯ ಮಾನಸಿಕ ಒತ್ತಡವೂ ಇರುವುದಿಲ್ಲ' ಎಂಬ ಭಾರತ ಭೂಷಣ ಸ್ವಸ್ತಿ ಶ್ರೀ ಭಟ್ಟಾರಕ ಚಾರು ಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಯವರ ಮಾತು ಉಲ್ಲೇಖನೀಯ.
ಗಮಕದ ಸೌರಭವನ್ನು ಸೂಸುವ ಒಂದಕ್ಕಿಂತ ಒಂದು ಶ್ರೇಷ್ಠ ವಾದ ಆರು ಗೋಷ್ಠಿಗಳು ಈ ಸಮ್ಮೇಳನದಲ್ಲಿ ನಡೆದವು. ಕರಾವಳಿ ಯಲ್ಲಿ 15ನೇ ಶತಮಾನದಿಂದಲೇ ಕಾವ್ಯವಾಚನ ಪ್ರಚಲಿತದಲ್ಲಿದ್ದು, ಪುರುಷರಿಗಿಂತಲೂ ಮಹಿಳೆಯರೇ ಹೆಚ್ಚಾಗಿ ಕಾವ್ಯವಾಚನ ಮಾಡುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಈ ಮಾತಿನ ಸಾಕ್ಷಾತ್ಕಾರವು ಸಮ್ಮೇಳನದ ಮೊದಲ ಗೋಷ್ಠಿಯಲ್ಲಾಯಿತು. ಚಂದ್ರಕಲಾ ನಂದಾವರ ಇವರ ಅಧ್ಯಕ್ಷತೆಯಲ್ಲಿ ದೇವರನಾಮ, ವಚನಗಾಯನ, ನಳಚರಿತ್ರೆಯ ಭಾಗ, ಜೈಮಿನಿ ಭಾರತದ ಸೀತಾಪರಿತ್ಯಾಗ ಭಾಗ ಇವುಗಳ ವಾಚನ - ವ್ಯಾಖ್ಯಾನ ನಡೆಯಿತು. ಇದನ್ನು ನಡೆಸಿಕೊಟ್ಟವರು ಮಹಿಳೆಯರೇ ಎನ್ನುವುದು ವಿಶೇಷ.
ಪ್ರಸ್ತುತ ಹಿರಿಯ ತಲೆಮಾರಿನ ಕೆಲವರು ಗಮಕ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಅವರೆಲ್ಲರ ತರುವಾಯ ಮುಂದೆ ಯಾರು ಎಂಬ ಪ್ರಶ್ನೆ ಮೂಡು ವುದು ಸಹಜ. ಇದಕ್ಕೆ ಉತ್ತರವಾಗಿ ಮೂಡಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಗಮಕ ತರಬೇತಿಯ ತರಗತಿಗಳು ನಡೆಯುತ್ತಿ ರುವುದು ಉಲ್ಲೇಖಾರ್ಹ. "ಬೆಳೆಯುವ ಸಿರಿ ಮೊಳಕೆಯಲ್ಲಿ' ಎಂಬಂತೆ ದಿವಿತ್ ಕೋಟ್ಯಾನ್ ಮತ್ತು ಶರತ್ ಪೂಜಾರಿ ಬೇರೆ ಬೇರೆ ಕಾವ್ಯಗಳ ವಾಚನವನ್ನು ಎರಡನೆಯ ಗೋಷ್ಠಿಯಲ್ಲಿ ನಡೆಸಿ ಕೊಟ್ಟರು. ಹಳೆಗನ್ನಡ ಕಾವ್ಯಗಳನ್ನು ನಿರರ್ಗಳವಾಗಿ ವಾಚಿಸುವ ಅವರ ಪ್ರತಿಭೆ ಭವಿಷ್ಯಕ್ಕೆ ಹಿಡಿದ ಕನ್ನಡಿಯಂತಿತ್ತು.
ಮೂರನೆಯ ಗೋಷ್ಠಿ ಯಲ್ಲಿ ನಡೆದದ್ದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಬರೆದ "ಶ್ರೀ ರಾಮಾಯಣ ದರ್ಶನಂ' ಕೃತಿಯ "ಶಬರಿ ವೃತ್ತಾಂತ'ದ ಗಮಕ ರೂಪಕ. ರಗಳೆ ಪ್ರಕಾರವನ್ನು ಹಾಡು ವುದು ಕೊಂಚ ಮಟ್ಟಿಗೆ ಕಷ್ಟವಾದರೂ ಅದು ಸಾಧ್ಯವಿದೆ ಎಂಬು ದನ್ನು ತೋರಿಸಿಕೊಟ್ಟ ಗೋಷ್ಠಿ ಇದಾಗಿತ್ತು. ಇದರ ಮುಂದು ವರಿದ ಕಾರ್ಯಕ್ರಮವಾಗಿ ಡಿವಿಜಿಯವರ "ಮಂಕುತಿಮ್ಮನ ಕಗ್ಗ' ವನ್ನು ವಿಷ್ಣುಪ್ರಸಾದ್ ಕಲ್ಲೂರಾಯ ವಾಚನ ಮಾಡಿದರು. ಎಂಜಿನಿಯರಿಂಗ್ ಓದುತ್ತಿರುವಾಗಲೂ ವಿಷ್ಣುಪ್ರಸಾದ್ ಗಮಕ ಕಲೆಯ ನಂಟನ್ನು ಉಳಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಯಾಕೆಂದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಣ ಸಂಪಾದನೆ, ಉನ್ನತ ಹುದ್ದೆ ಪಡೆಯುವ ಮೂಲಕ ಭವಿಷ್ಯ ಸುಗಮ ಎಂದು ಭಾವಿಸುವ ಪೋಷಕರ ನಡುವೆ ಸಂಗೀತ ಕ್ಷೇತ್ರದ ಮೂಲಕವೂ ಭವಿಷ್ಯ ರೂಪಿಸುವುದು ಸಾಧ್ಯ, ಶಾಂತಿ - ನೆಮ್ಮದಿಯ ಜೀವನ ಸಾಧ್ಯ ಎಂದು ನಿರೂಪಿಸುತ್ತಿರುವ ಆ ವಿದ್ಯಾರ್ಥಿಯ ಹೆತ್ತವರು ನಿಜವಾಗಿಯೂ ಅಭಿನಂದನಾರ್ಹರು.
ಸಮ್ಮೇಳನದ ಎರಡನೆಯ ದಿನ ನಡೆದ ಮೊದಲ ಗೋಷ್ಠಿಯಲ್ಲಿ ""ಗಮಕವನ್ನು ಉಳಿಸಿ ಬೆಳೆಸುವ ಬಗ್ಗೆ ಸಮಾಲೋಚನೆ' ನಡೆಸಲಾಯಿತು. ಗಮಕ ಎನ್ನುವ ಕಲಾ ಪ್ರಕಾರ ಇಂದು ಕಣ್ಮರೆಯಾಗುತ್ತಿರುವುದು ನಿಜ. ಹಿಂದೆ ಮನುಷ್ಯ ಜೀವನದ ಪ್ರತಿಯೊಂದು ಹಂತ ದಲ್ಲಿಯೂ ಗಮಕ ಇತ್ತು. ಕುಮಾರವ್ಯಾಸನ, ಲಕ್ಷ್ಮೀಶನ ಕಾವ್ಯಗಳ ವಾಚನ ಪ್ರತಿ ಮನೆಯಲ್ಲೂ ಸಂಧ್ಯಾಕಾಲದಲ್ಲಿ ನಡೆಯುತ್ತಿತ್ತು. ಅಂತಹ ಸಂದರ್ಭ - ಸನ್ನಿವೇಶಗಳನ್ನು ಇಂದು ಎಫ್ಎಂ ರೇಡಿಯೋ, ಧಾರಾವಾಹಿ, ಸಿನೆಮಾ, ಸಿನೆಮಾ ಹಾಡುಗಳು ಆಕ್ರಮಿಸಿರುವುದು ವಿಷಾದ ನೀಯ. ಮನುಷ್ಯನನ್ನು ಸಂಸ್ಕಾರಯುಕ್ತನನ್ನಾಗಿ ಮಾಡು ವಲ್ಲಿ ಗಮಕದ ಪಾಲು ಬಹಳಷ್ಟಿದೆ. ಹೀಗಾಗಿ ಇಂತಹ ಗಮಕ ಕಲೆಯನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಡೆಯುವ ಕಾರ್ಯಕ್ರಮಗಳಲ್ಲಿ, ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗಮಕ ಕಲಾರಾಧನೆಗೆ ಅವಕಾಶವಿರಬೇಕು. ಗಮಕದ ಉಳಿವಿಗಾಗಿ ಗಮಕ ಪರಿಷತ್ತಿನ ಜೊತೆ ಸರಕಾರ, ಕನ್ನಡ ಸಾಹಿತ್ಯ ಪರಿಷತ್ತು, ವಿಶ್ವವಿದ್ಯಾನಿಲಯಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಕಲಾಭಿಮಾನಿಗಳು ಕೈಜೋಡಿಸಬೇಕು. ಹೀಗಾದಾಗ ಮಾತ್ರ ಗಮಕವನ್ನು ಕನ್ನಡನಾಡಿನಲ್ಲಿ ಉಳಿಸಿ ಬೆಳೆಸಲು ಸಾಧ್ಯ.
ಗಮಕ ವಾಚನ ಕೇವಲ ಕನ್ನಡ ಸಾಹಿತ್ಯಕ್ಕೆ ಮಾತ್ರ ಮೀಸಲು ಎಂಬುದು ನಿಮ್ಮ ಅನಿಸಿಕೆಯಾಗಿದ್ದರೆ ಅದು ತಪ್ಪು. ತುಳು ಭಾಷೆಯ ಕಾವ್ಯವನ್ನೂ ವಾಚನ ಮಾಡುವುದು ಸಾಧ್ಯವಿದೆ ಎನ್ನುವುದಕ್ಕೆ ಸಮ್ಮೇಳನದ 5ನೇ ಗೋಷ್ಠಿಯಲ್ಲಿ ನಡೆದ ಎಂ. ಪಿ. ಶೆಟ್ಟಿಯವರ "ತಪ್ಪುಗು ತರೆದಂಡ' ಕೃತಿಯ "ಭೀಮನ ಬಾಸೆ' ಭಾಗವೇ ಸಾಕ್ಷಿ. ಅನಂತರ ಗಮಕಿ ಚಂದ್ರಶೇಖರ ಕೆದಿಲಾಯರಿಂದ ನಡೆದ ಗಮಕ ವೈಭವ ನೆರೆದ ಸಭಿಕರನ್ನು ಅವ್ಯಕ್ತ ಲೋಕಕ್ಕೆ ಕರೆದೊಯ್ದಿತ್ತು. ಇಲ್ಲಿ ಚಂಪೂ ಕಾವ್ಯದಿಂದ ಮೊದಲ್ಗೊಂಡು ಹೊಸಗನ್ನಡ ನವ್ಯ ಕಾವ್ಯ ಪ್ರಕಾರದವರೆಗಿನ ಕಾವ್ಯ - ಕವನಗಳ ವೈವಿಧ್ಯಮಯ ರಾಗಗಳ ಸಂಗೀತ ಸುಧೆಯು ಹರಿಯಿತು.
ಸಮ್ಮೇಳನದ ಆರನೆಯ ಗೋಷ್ಠಿಯಾದ ಕಾವ್ಯರಸಾಯನ ಎಲ್ಲರನ್ನೂ ವಿಶೇಷವಾಗಿ ಬೆರಗುಗೊಳಿಸಿದ್ದಲ್ಲದೆ ಮುಂದೆ ಕಾವ್ಯದ ಬಗೆಗೆ ಕಾರ್ಯಕ್ರಮ ನಡೆಸುವವರಿಗೆ ಪ್ರೇರಣೆ, ಮಾರ್ಗ ದರ್ಶನ ನೀಡುವಂತಿತ್ತು. ಹಳೆಗನ್ನಡ ಕಾವ್ಯದ ಬೇರೆ ಬೇರೆ ಭಾಗಗಳನ್ನು ನಾಲ್ವರು ವಿದ್ವಾಂಸರು ತಮಗೆ ಕೊಟ್ಟಿರುವಂತಹ ವಿಭಾಗದಲ್ಲಿ ಪ್ರಸ್ತುತ ಪಡಿಸಬೇಕಿತ್ತು. ಗಮಕದಲ್ಲಿ ಜಯರಾಮ ಕುದ್ರೆತ್ತಾಯ, ಭಾವ ಗೀತೆಯಲ್ಲಿ ಸುಳ್ಯದ ಅನ್ನಪೂರ್ಣಾ, ಸಂಗೀತದಲ್ಲಿ ಮಧೂರು ವಿಷ್ಣು ಪ್ರಸಾದ್ ಕಲ್ಲೂರಾಯ, ಯಕ್ಷಗಾನ ಭಾಗವತಿಕೆಯಲ್ಲಿ ಎರ್ಮಾಳು ವಾಸುದೇವ ಭಟ್ ಪಾಲ್ಗೊಂಡಿ ದ್ದರು. ಚೆಂಡೆವಾದನದಲ್ಲಿ ದೇವಾನಂದ ಭಟ್ ಬೆಳುವಾಯಿ, ಮೃದಂಗ, ತಬಲ ಮತ್ತು ಮದ್ದಳೆ ಯಲ್ಲಿ ಚಂದ್ರಶೇಖರ ಆಚಾರ್ಯ ಸಹಕರಿಸಿದ್ದರು. ಪಂಪ, ಕುಮಾರವ್ಯಾಸ, ರಾಘವಾಂಕ ಮತ್ತು ಲಕ್ಷ್ಮೀಶ ಇವರ ಕಾವ್ಯಗಳ ಆಯ್ದ ಭಾಗಗಳನ್ನು ಕಲಾವಿದರು ಪ್ರಸ್ತುತಪಡಿಸಿದರು. ಸುಮಾರು ಒಂದೂವರೆ ತಾಸು ಕಾಲ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದ ಕಾವ್ಯ ರಸಾಯನ ಕಾರ್ಯಕ್ರಮವು ಪ್ರೊ| ಮಧೂರು ಮೋಹನ ಕಲ್ಲೂರಾಯರ ಸಂಯೋಜನೆ ಮತ್ತು ಮಾರ್ಗದರ್ಶನದಲ್ಲಿ ನಡೆಯಿತು.
ಅನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಎಂಟು ಮಂದಿ ಗಮಕಕಲಾ ಸಾಧಕರಿಗೆ ಪಾವಂಜೆ ಲಕ್ಷ್ಮೀನಾರಾಯಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲ್ಕೂರ ಪ್ರತಿಷ್ಠಾನ, ಮಂಗಳೂರು ಇವರು ಈ ಪ್ರಶಸ್ತಿಯನ್ನು ನೀಡಿ ಸಾಧಕರ ಬೆನ್ನುತಟ್ಟಿ ಪ್ರೋತ್ಸಾಹಿಸಿರುವುದು ಹೆಮ್ಮೆಯ ವಿಚಾರವಾಗಿದೆ.
ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇದರ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್, ಪ್ರಾಂಶುಪಾಲ ರಾದ ಡಾ| ಎನ್. ಹಾಲಾ ನಾಯ್ಕ, ಅಧ್ಯಾಪಕ- ಅಧ್ಯಾಪಕೇತರ ವೃಂದದವರ ಪ್ರೋತ್ಸಾಹ, ಬೆಂಬಲದೊಂದಿಗೆ ಸಮ್ಮೇಳನವು ಯಶಸ್ಸನ್ನು ಪಡೆಯಿತು.