ಲಕ್ಷ್ಮೀ ಮಚ್ಚಿನ | Feb 01, 2013
ಐದು ದಶಕಗಳಿಗೂ ಅಧಿಕ ಕಾಲ ರಂಗಸ್ಥಳದಲ್ಲಿ ವಿವಿಧ ಪಾತ್ರ ಗಳಲ್ಲಿ ಮಿಂಚಿ ಈಗ ತಮ್ಮ ಜೀವನದ ವಾರ್ಧಕ್ಯದ ಸವಿ ಅನುಭವಿಸುತ್ತಿರುವ ಕಾಂಚನ ಸಂಜೀವ ರೈಯವರ ಕಲಾಪ್ರೌಢಿಮೆಗೆ ಇನ್ನೂ ಮುಪ್ಪಡರಿಲ್ಲ. ಯಕ್ಷಗಾನಕ್ಕೆ ತುಳು ಪ್ರಸಂಗಗಳ ಪರಿಚಯವಾದ ಕಾಲಘಟ್ಟದಲ್ಲಿ ತುಳು ಭಾಷಿಕ ಪಾತ್ರಗಳಿಗೆ ಜೀವಂತಿಕೆ ತುಂಬಿ ಪಾತ್ರಗಳನ್ನು ಜನರ ಮನದಲ್ಲಿ ಅಚ್ಚೊತ್ತುವಂತೆ ಮಾಡಿದ ಕಲಾವಿದರ ಪೈಕಿ ಕಾಂಚನ ಸಂಜೀವ ರೈ ಮೊದಲ ಸಾಲಿನಲ್ಲಿದ್ದಾರೆ.
ಶುದ್ಧ ತುಳು, ಶುದ್ಧ ಕನ್ನಡ- ಎರಡರಲ್ಲೂ ಪ್ರಾವೀಣ್ಯ ಪಡೆದು ಅವೆರಡನ್ನು ಬೆರೆಯಿಸದೆ ಅಸ್ಖಲಿತವಾಗಿ ಮಾತನಾಡುವ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರ ಪೈಕಿ ಒಬ್ಬರಾದ ರೈಗಳು ಸದ್ಯ ಪುತ್ತೂರು ತಾಲೂಕಿನ ಕೊಣಾಲು ಗ್ರಾಮದ ಪಾತೃಪಾಡಿಯಲ್ಲಿ ವಾಸವಿದ್ದಾರೆ. 1942ರಲ್ಲಿ ಬಂಟ್ವಾಳ ತಾಲೂಕು ಸಜಿಪಮೂಡ ಗ್ರಾಮದ ಸಗ್ರಿಗುತ್ತುವಿನಲ್ಲಿ ಜನಿಸಿದ ಇವರು ಕಾಂಚನ ಶ್ರೀ ಲಕ್ಷ್ಮೀ ನಾರಾಯಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸುತ್ತಿದ್ದ ಹೊತ್ತಿನಲ್ಲಿಯೇ ಯಕ್ಷಗಾನದತ್ತ ಆಕರ್ಷಿತರಾಗಿ ನಾಟ್ಯಾಭ್ಯಾಸ ಆರಂಭಿಸಿದರು. ಈ ಶುಭಾರಂಭವೇ ಅವರ ಹೆಸರಿನಲ್ಲಿ ಕಾಂಚನದ ಉಲ್ಲೇಖವನ್ನು ಚಿರಸ್ಥಾಯಿಯಾಗಿಸಿದೆ. ಯಕ್ಷಗಾನ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಳೆಯ ಪ್ರಾಯದಲ್ಲಿಯೇ ಮಿಂಚುತ್ತಿದ್ದ ರೈಗಳು ಆರಂಭದ ದಿನಗಳಲ್ಲಿ ಸೀತಾಪಹಾರದ ರಾವಣ, ಅತಿಕಾಯ, ಶರಸೇತು ಬಂಧನದ ಅರ್ಜುನ ಮೊದಲಾದ ವೈವಿಧ್ಯ ಪಾತ್ರ ಗಳಲ್ಲಿ ಸೈ ಎನಿಸಿದರು. ಒಂದೇ ರೀತಿಯ ಪಾತ್ರಗಳಿಗೆ ಆತುಕೊಳ್ಳದಿದ್ದರೂ ರೈಗಳಿಗೆ ಪ್ರಮುಖ ಪಾತ್ರಗಳೇ ಅರಸಿ ಬಂದು ಆಸರೆಯಾದವು. ಪಾತ್ರ ಗಳಿಗೆ ಜೀವಸೆಲೆ ತುಂಬುವುದು ಸರಾಗ ವಾಯಿತು. ಸುಲಲಿತವಾಗಿ ಅರ್ಥ ಹೇಳು ವುದು ರೈಗಳಿಗೆ ಸಿದ್ಧಿಸಿತ್ತು.
ಕಲಾ ಬದುಕಿನಲ್ಲಿ ನೆಲೆ ಕಂಡುಕೊಳ್ಳಲು ನೋಡಿದ ರೈಗಳಿಗೆ ಸಂಗೀತ ವಿದ್ವಾನ್ ಕಾಂಚನ ವೆಂಕಟಸುಬ್ರಹ್ಮಣ್ಯ ಅಯ್ಯರ್ ಅವರ ಪ್ರೋತ್ಸಾಹ ದೊರೆಯಿತು. ಹದಿನೆಂಟರ ಪ್ರಾಯದಲ್ಲಿ ಮಾಣಂಗಾಯಿ ಕೃಷ್ಣ ಭಟ್ಟರ ಮಾರ್ಗದರ್ಶನದಲ್ಲಿ ರೈಗಳು ಸಮರ್ಥ ವೇಷಧಾರಿಯಾಗಿ ರಂಗದಲ್ಲಿ ಹೆಸರು ಮಾಡತೊಡಗಿ ದ್ದರು. 1961ರಲ್ಲಿ ಬಳ್ಳಂಬೆಟ್ಟು ಮೇಳದಲ್ಲಿ ತಿರುಗಾಟ ಪ್ರಾರಂಭಿಸಿದರು. ಆ ಬಳಿಕ ನಿರಂತರ 42 ವರ್ಷಗಳ ಕಾಲ ಯಕ್ಷ ತಿರುಗಾಟ ನಡೆಸಿದ್ದಾರೆ.
ಬಳ್ಳಂಬೆಟ್ಟು, ವೇಣೂರು, ದೇಲಂಪುರಿ, ಸುಬ್ರಹ್ಮಣ್ಯ, ಅರುವ, ಕದ್ರಿ, ಕಾಂತಾವರ, ಮಧೂರು, ಸುರತ್ಕಲ್, ಕರ್ನಾಟಕ, ಮಂಗಳಾದೇವಿ, ಪುತ್ತೂರು ಮೇಳಗಳಲ್ಲಿ ರೈಗಳಿಗೆ ತಿರುಗಾಟವಿದೆ. ಪುಂಡು ವೇಷಧಾರಿಯಾಗಿ ಕುಶ, ಬಭುವಾಹನ, ಶ್ವೇತಕುಮಾರ, ಮಾರ್ತಾಂಡ ತೇಜ, ಚಿತ್ರಕೇತು, ರಾಮ, ಕೃಷ್ಣ, ಅಯ್ಯಪ್ಪ, ಅರ್ಜುನ, ಕರ್ಣ ಮೊದಲಾದ ಪಾತ್ರಗಳಲ್ಲಿ ಪ್ರೇಕ್ಷಕರ ಮನಗೆದ್ದಿದ್ದಾರೆ. ತುಳು ಪ್ರಸಂಗಗಳಲ್ಲಿ ರೈಗಳು ಅಭಿನಯಿಸಿದ ಕೋಟಿ ಚೆನ್ನಯದ ಕೋಟಿ, ದೇವುಪೂಂಜ, ಕಾಂತುಪೂಂಜ, ಕಾಂತಬಾರೆ, ಬುದ್ಯಂತ ಮೊದಲಾದ ಪಾತ್ರಗಳು ತುಳುನಾಡಿನ ಜನಪದ ಜೀವಂತಿಕೆಯನ್ನು ಹಿಡಿದಿಟ್ಟು ತಮ್ಮದೇ ಛಾಪು ಮೂಡಿಸಿವೆ. ನಿರಂತರ ಅಧ್ಯಯನದ ಮೂಲಕ ಪಾತ್ರದ ವ್ಯಾಪ್ತಿಯನ್ನು ವಿಸ್ತರಿಸುವುದು ಸಂಜೀವ ರೈಗಳ ದೊಡ್ಡಗುಣ. ಯಕ್ಷವೇದಿಕೆಯ ಮೇಲೆ ಪೌರಾಣಿಕ ಲೋಕವನ್ನು ತೆರೆದಿಡುವ ಸಾಮರ್ಥ್ಯ ಅವರ ಅಭಿನಯಕ್ಕಿತ್ತು. ತುಳು ಪ್ರಸಂಗ ವಾದರೆ ಜನಪದದ ಶೈಲಿಯೇ ಮೈವೆತ್ತಂತಿರುತ್ತಿತ್ತು.
ಬಡತನವೇ ಯಕ್ಷಗಾನ ಕಲಾವಿದರ ಕಲೆಯ ಬಂಡವಾಳ ಎನ್ನುವ ಮಾತನ್ನು ಸಂಜೀವ ರೈಗಳು ಒಪ್ಪುವು ದಿಲ್ಲ. ಮನೆಯಲ್ಲಿ ಸಿರಿತನವಿದ್ದರೂ ಕಲೆಯ ಸಿರಿ ವಂತಿಕೆಯ ಮುಂದೆ ಅದು ಗೌಣವಾಯಿತು ಎಂದು ತಮ್ಮದೇ ಉದಾಹರಣೆ ನೀಡುವ ರೈಗಳು ವೇಷದ ಚೌಕಟ್ಟು ಮೀರಿ ನಗಿಸುವುದೇ ಉದ್ದೇಶ, ಜನರನ್ನು ಮರುಳು ಮಾಡುವುದೇ ಗುರಿ ಎಂಬ ಕಲಾವಿದರ ಸ್ವಭಾವ ಸರಿಯಲ್ಲ ಎನ್ನುತ್ತಾರೆ. ಕಿರಿಯ ಕಲಾವಿದರಿಗೆ ಪ್ರಸಂಗ ಮಾಹಿತಿ ನೀಡಿ, ಪಾತ್ರಗಳ ಸಮಗ್ರ ಚಿತ್ರಣ ಕೊಡುವ ಅವರ ಉಮೇದು ಇನ್ನೂ ಕಡಿಮೆಯಾಗಿಲ್ಲ.
ಪತ್ನಿ ಶುಭವತಿ, ಇಬ್ಬರು ಪುತ್ರಿಯರು, ಮೂವರು ಪುತ್ರರ ಸಂತೃಪ್ತ ಸಂಸಾರಿ. ಯಕ್ಷಗಾನದ ತಿರುಗಾಟ ಬಿಟ್ಟ ಬಳಿಕ ಈಗ ಕೃಷಿಯ ಖುಷಿ. 45ಕ್ಕೂ ಅಧಿಕ ಪುರಸ್ಕಾರಗಳನ್ನು ಪಡೆದಿರುವ ಕಾಂಚನ ಸಂಜೀವ ರೈಗಳು ಇದೀಗ ತೆಂಕುತಿಟ್ಟಿನ ಪ್ರಖ್ಯಾತ ಕಲಾವಿದ ಕೀರ್ತಿಶೇಷ ಅಳಿಕೆ ರಾಮಯ್ಯ ರೈಗಳ ನೆನಪಿನಲ್ಲಿ ನೀಡಲಾಗುವ ಪ್ರಶಸ್ತಿಗೆ ಭಾಜನರಾಗಿದ್ದು, ಫೆ.1ರಂದು ಅಸೌಖ್ಯದಿಂದ ವಿಶ್ರಾಂತಿಯಲ್ಲಿರುವ ರೈಗಳ ಮನೆಯಲ್ಲಿಯೇ ಪ್ರಶಸ್ತಿ ಪ್ರದಾನ ನಡೆಯಲಿದೆ.