Tuesday, May 21, 2013
Last Updated: 11:50:31 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಔಚಿತ್ಯವನ್ನು ಮೀರಿಯೂ ಮೀರದ ವಿಟ್ಲ ಜೋಯಿಸರು
      • ಎಂ. ಅನಂತಕೃಷ್ಣ ಹೆಬ್ಟಾರ್‌ | Feb 01, 2013

        ರಸಗಳ ಪಟ್ಟಿಯಲ್ಲಿ ಎರಡನೇ ಹೆಸರೇ ಹಾಸ್ಯ. ಶೃಂಗಾರ ರಸಗಳ ರಾಜನಾದರೆ, ಹಾಸ್ಯ ಯುವರಾಜ.  ಹಾಸವೇ ಹಾಸ್ಯಕ್ಕೆ ಸ್ಥಾಯೀಭಾವ. ಅಂದರೆ ನಗುವೇ ಹಾಸ್ಯದ ಪ್ರಧಾನ ಲಕ್ಷಣ. ಹಾಸ್ಯ ಹೇಗೆ ಹುಟ್ಟುತ್ತದೆ? ಅದನ್ನೇ ವಿಭಾವವೆಂದು ಕರೆದಿದ್ದಾರೆ ನಮ್ಮ ಮೀಮಾಂಸಕರು. ವಿಕೃತ ವೇಷ, ವಿಕೃತ ಅಲಂಕಾರ, ಅಪ್ರಾಸಂಗಿಕತೆ, ಅಸಂಬದ್ಧ ದೃಷ್ಟಾಂತ  -ಇತ್ಯಾದಿಗಳಿಂದ ಹಾಸ್ಯ ಹುಟ್ಟುತ್ತದೆ. ಒಟ್ಟಿನಲ್ಲಿ ಅನೌಚಿತ್ಯವೇ ಹಾಸ್ಯದ ಮೂಲ. ಔಚಿತ್ಯ ಮೀರಿ ವರ್ತಿಸಿದಾಗ ಹಾಸ್ಯ ಹುಟ್ಟುತ್ತದೆ ಎಂದು ಅಭಿನವ ಗುಪ್ತಾಚಾರ್ಯರು ಹೇಳಿದ್ದಾರೆ. ಇಷ್ಟೆಲ್ಲವನ್ನು ಹೇಳಲಿಕ್ಕೆ ಕಾರಣ ಔಚಿತ್ಯವನ್ನು ಮೀರದಿದ್ದರೆ ಹಾಸ್ಯ ಹುಟ್ಟುವುದೇ ಇಲ್ಲ ಎಂಬುದು. ಈ ಮೀರುವುದರಲ್ಲೂ ಒಂದು ಔಚಿತ್ಯವಿದೆ ಎಂದು ಬಲ್ಲವರೇ ಶ್ರೇಷ್ಠ ಹಾಸ್ಯಗಾರರು. ಎಷ್ಟು ಮೀರಬಹುದು ಎಂಬ ಗುಟ್ಟನ್ನು ತಿಳಿದವರು ಸಂಖ್ಯೆಯಲ್ಲಿ ಕಡಿಮೆ. ರಸಿಕರತ್ನ ವಿಟ್ಲ ಗೋಪಾಲಕೃಷ್ಣ ಜೋಷಿಯವರು ಇಂತಹ ಕಡಿಮೆ ಸಂಖ್ಯೆಯವರಲ್ಲಿ ಒಬ್ಬರು.

        ಔಚಿತ್ಯವನ್ನು ಮೀರುವ ಕಲೆ ಜೋಯಿಸರಿಗೆ ರಕ್ತಗತವಾಗಿತ್ತು. ಎಷ್ಟು ಮೀರಿದರೆ ಹಾಸ್ಯ, ಎಷ್ಟು ಮೀರಿದರೆ ಅಪಹಾಸ್ಯ, ಹಾಸ್ಯಾಸ್ಪದ, ಅಶ್ಲೀಲ ಎನ್ನುವ ಸಂಗತಿ ಅವರಿಗೆ ಸಂಸ್ಕಾರಬಲದಿಂದಲೇ ಸಿದ್ಧಿಸಿತ್ತು ಎನ್ನಬೇಕು. ಕೃಷ್ಣಲೀಲೆಯವಿಜಯ, ಚಂದ್ರಾವಳಿಯ ಅತ್ತೆ, ಬೇಡರ ಕಣ್ಣಪ್ಪದ ಮುದಿ ಸೂಳೆ ಮುಂತಾದ ಅವರ ಪಾತ್ರಗಳನ್ನು ನೋಡಿದವರಿಗೆ ನಾನು ಹೆಚ್ಚು ವಿವರಿಸಬೇಕಾಗಿಲ್ಲ.

        ಬಣ್ಣಗಾರಿಕೆಯಲ್ಲಿ ಜೋಯಿಸರದ್ದು ದೊಡ್ಡ ಹೆಸರು.  ನೂರಾರು ಉದಾಹರಣೆಗಳನ್ನು ಕೊಡಬಹುದಾದರೂ ಮೂಕಾಸುರನ ಒಂದು ಹೆಸರನ್ನು ಮಾತ್ರ ಹೇಳುತ್ತೇನೆ. ಕ್ಷಿಪ್ರವಾಗಿ ವೇಷ ಬದಲಾವಣೆ ಮಾಡುವ ಕಲೆ ಅವರಿಗೆ ಸಿದ್ಧಿಸಿದಷ್ಟು ಇನ್ಯಾರಿಗೂ ಸಿದ್ಧಿಸಿದ್ದನ್ನು ನಾನಂತೂ ನೋಡಿಲ್ಲ. ಒಂದು ಪ್ರಸಂಗ ದಲ್ಲಿ ಎಡಬದಿಯಿಂದ ನಿರ್ಗಮಿಸಿದ ಒಂದೆರಡು ನಿಮಿಷ ಗಳೊಳಗೆ ಬಲಗಡೆಯಿಂದ ಜೋಯಿಸರು ಇನ್ನೊಂದು ವೇಷ ದೊಂದಿಗೆ ಪ್ರವೇಶಿಸಿದಾಗ ಸ್ವಯಂ ಭಾಗವತರೇ ತಬ್ಬಿಬ್ಬುಗೊಂಡ ದ್ದುಂಟು. ಇಂತಹ ಅನೇಕ ಕತೆಗಳು ಜೋಯಿಸರ ಬಗ್ಗೆ ಹಬ್ಬಿವೆ. ಒಂದರ್ಥದಲ್ಲಿ ಅವರು ಜೀವಂತವಿ¨ªಾಗಲೇ ದಂತಕತೆಯಾದವರು.

        ಹೆಡ್ಡನಾಗಲಿಕ್ಕೆ ಬುದ್ಧಿವಂತಿಕೆ ಕಡಿಮೆ ಇದ್ದರೆ ಸಾಕು. ಆದರೆ ಹೆಡ್ಡನಂತೆ ನಟಿಸಲಿಕ್ಕೆ ಅಪಾರ ಜಾಣ್ಮೆ ಬೇಕು. ಪ್ರದರ್ಶನದಲ್ಲಿ ಉಳಿದ ರಸಗಳು ಸೋತರೆ ಅದು ಸೋಲು ಅಷ್ಟೆ. ಆದರೆ ಹಾಸ್ಯವು ಸೋತರೆ, ಅದು ಸಾಕ್ಷಾತ್‌ ಸಾವು. ಆದರೆ ಜೋಯಿಸರಿಗೆ ಸಾವು ಬಂದದ್ದು ಒಂದೇ ಸಲ. ಬದಲಿಗೆ ಅವರು ರಂಗಸ್ಥಳಕ್ಕೆ ಬಂದರೆಂದರೆ ಪ್ರೇಕ್ಷಕರಲ್ಲಿ ಜೀವಸಂಚಾರವಾಗುತ್ತಿತ್ತು. ಅವರ ಕಾಶಿಮಾಣಿ ಇದಕ್ಕೆ ಅತ್ಯುತ್ತಮ ಉದಾಹರಣೆ. ಚಂದಗೋಪನ ತಾಯಿಯ ಪಾತ್ರವೂ ಅವರ ಅದ್ಭುತ ಸೃಷ್ಟಿಗಳಲ್ಲಿ ಒಂದು. ಬಪ್ಪಬ್ಯಾರಿಯ ಜೊತೆಗಾರ ಉಸ್ಮಾನ್‌ ಪಾತ್ರವೂ ಅವರಿಗೆ ಅಪಾರ ಜನಮನ್ನಣೆಯನ್ನು ತಂದು ಕೊಟ್ಟಿದೆ. ಗೊತ್ತಿದ್ದವರಿಗೆ ಗೊತ್ತಿದೆ : ಆ ಪ್ರಸಂಗದಲ್ಲಿ ಬಪ್ಪನಿಗೆ ಮೂರು ಪದ್ಯಗಳಾದರೂ ಇವೆ. ಆದರೆ ಉಸ್ಮಾನನಿಗೆ ಒಂದೇ ಒಂದು ಪದ್ಯವೂ ಇಲ್ಲ. ಬಪ್ಪ-ಉಸ್ಮಾನ್‌ ಇಬ್ಬರೂ ಒಬ್ಬರು ಇನ್ನೊಬ್ಬರ ಘನತೆಯನ್ನು ಹೆಚ್ಚಿಸುತ್ತಾ ತಾವೂ ಘನತೆಯನ್ನು ಪಡೆಯುತ್ತಾ ಮೆರೆದ ಅಪೂರ್ವ ಪಾತ್ರಗಳು. ಶೇಣಿ-ಜೋಯಿಸರ ಕಾಲದ ಬಳಿಕ ಯಾರೇ ಈ ಪಾತ್ರಗಳನ್ನು ಮಾಡಿದರೂ ಇವರಿಬ್ಬರ ಜೊತೆಗೆ ಹೋಲಿಸುವುದನ್ನು ಕರಾವಳಿಯ ಜನರು ಎಂದೂ ಒಪ್ಪಲಾರರು.

        ಬಹಳ ಸಲ ಹಾಸ್ಯಗಾರನ ಹಾಸ್ಯ ಸಹಕಲಾವಿದರ ಮಾತಿನ ದಾರಿಯನ್ನು ಅವಲಂಬಿಸಿರುತ್ತದೆ. ಒಬ್ಬರಿಗೊಬ್ಬರು ಪೂರಕವಾಗಿ ¨ªಾಗ ಮಾತ್ರ ಅತ್ಯುತ್ತಮ ಹಾಸ್ಯ ಹುಟ್ಟುತ್ತದೆ (ಇದು ಕೇವಲ ಹಾಸ್ಯಕ್ಕೆ ಮಾತ್ರ ಸೀಮಿತವಾದ ಮಾತಲ್ಲ ಎಂಬುದು ಸೂಕ್ಷ್ಮಜ್ಞರಿಗೆ ಗೊತ್ತಿದೆ). ಇದಕ್ಕೆ ನಮ್ಮ ಶತಮಾನದ ಅತ್ಯುತ್ತಮ ಉದಾಹರಣೆ ಎಂದರೆ ಮತ್ತೆ ಶೇಣಿ-ಜೋಯಿಸರ ಜೋಡಿಯೇ. ಕೊನೆಕೊನೆಗೆ ತಾಳಮದ್ದಳೆಗಳಲ್ಲೂ ಇವರುಮಿಂಚುತ್ತಿದ್ದುದನ್ನು ನಮ್ಮ ಜನ ಕಂಡಿ¨ªಾರೆ. ಸುಭದ್ರಾ ಪರಿಣಯದಲ್ಲಿ ಬಲರಾಮ-ವನಪಾಲಕರ ಮಾತುಗಳು ಅತ್ಯುತ್ತಮ ಸರಸ ಸಂಭಾಷಣೆಗೆ ಮತ್ತೂಂದು ಹೆಸರೋ ಎಂಬಂತೆ ಆಗಿಹೋಗಿವೆ. ತಾಳಮದ್ದಳೆಗೂ ಹಾಸ್ಯಗಾರರ ಆವಶ್ಯಕತೆ ಇದೆ ಎಂಬುದು ನಮಗೆ ಗೊತ್ತಾದದ್ದು ಜೋಯಿಸರು ಕೂಟಗಳಲ್ಲಿ ಅರ್ಥ ಹೇಳಲು ತೊಡಗಿದ ಬಳಿಕವೇ .

        ನಾವು ಯಕ್ಷಗಾನ ಪ್ರಸಂಗಗಳನ್ನು ನೋಡಿದರೆ ಅಲ್ಲಿ ಹಾಸ್ಯವು ಪ್ರಧಾನ ಪಾತ್ರ ಆಗಿರಲೇ ಇಲ್ಲ ಎಂದು ತಿಳಿಯುತ್ತದೆ. ಪ್ರಧಾನ ಹೋಗಲಿ, ಒಂದು ಪದ್ಯವೂ ಇಲ್ಲದಿರುವ ಪ್ರಸಂಗಗಳೂ ಇಲ್ಲದಿಲ್ಲ. ಒಟ್ಟಿನಲ್ಲಿ ಶೃಂಗಾರ ವೀರಗಳಿಗೆ ಹೋಲಿಸಿದರೆ ಹಾಸ್ಯಕ್ಕೆ ಅವಕಾಶ ಕಡಿಮೆ. ಹಾಗಾಗಿಯೇ ಹಾಸ್ಯ ಕಲಾವಿದನು ತನ್ನ ಕಲ್ಪನೆಯನ್ನೇ ಆಶ್ರಯಿಸಿ ಪಾತ್ರವನ್ನು ಕಟ್ಟಬೇಕಾಗುತ್ತದೆ. ಇದರಿಂದಾಗಿ ಹಾಸ್ಯ ಪಾತ್ರಗಳು ಕಡಿವಾಣವಿಲ್ಲದ ಕುದುರೆಗಳಂತೆ ಲಂಗುಲಗಾಮು ಇಲ್ಲದೆ ಬೆಳೆದು ಬಿಟ್ಟಿರುವುದನ್ನು ನೋಡಬಹುದು. ಇದಕ್ಕೆ ಅಪವಾದವಾಗಿರುವ ಕಲಾವಿದರೂ ಇ¨ªಾರೆ. ಜೋಯಿಸರು ನಿಸ್ಸಂಶಯವಾಗಿಯೂ ಅಂತಹವರಲ್ಲಿ ಒಬ್ಬರು. ಇಂತಹವರ ಸಂಖ್ಯೆಯನ್ನು ಎಣಿಸಲು ಒಂದು ಕೈಯ ಬೆರಳುಗಳೂ ಪೂರ್ತಿ ಬೇಕಾಗುವುದಿಲ್ಲ ಎನ್ನುವುದು ಮಾತ್ರ ಬೇಸರದ ವಿಷಯ. ವಿರಳರಾಗುತ್ತಿರುವ ಇಂತಹವರನ್ನು ನೆನಪಿಸಿಕೊಳ್ಳುವುದು ಸಾಂಸ್ಕೃತಿಕವಾಗಿ  ಬರಡಾಗುತ್ತಿರುವ ಇಂದಿನ ದಿನಗಳಲ್ಲಿ ತುಂಬಾ ಅಗತ್ಯ.


        (ನಾಳೆ ಮತ್ತು ನಾಡಿದ್ದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿಟ್ಲ ಗೋಪಾಲಕೃಷ್ಣ ಜೋಶಿ ಸಂಸ್ಮರಣೆ ಕಾರ್ಯಕ್ರಮವಿದೆ. ಅಲ್ಲಿ ಬಿಡುಗಡೆಗೊಳ್ಳಲಿರುವ ಅಭಿನಂದನ ಗ್ರಂಥ "ರಸಿಕರತ್ನ'ದಿಂದ ಆಯ್ದ ಲೇಖನದ ಅಪೂರ್ಣ ಭಾಗ.)


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      image
      • Copyright @ 2009 Udayavani.All rights reserved.
      • Designed & Hosted By 4cplus