ನೇಮಿಚಂದ್ರ | Feb 03, 2013
ಸಂಕ್ರಾಂತಿ ಹಬ್ಬದ ದಿನ ಆಟೋ ಅಪಘಾತ. ಸಣ್ಣ ಹೇರ್‌ಲೈನ್ ಕ್ರಾಕ್, ಬಲಗೈಯನ್ನು ಸ್ಲಿಂಗ್‌ನಲ್ಲಿ ತೂಗಿಸಿಕೊಂಡು ಕಾರ್ಖಾನೆಗೆ ಹೊರಟು ಬಿಡುವೆ ಎಂದುಕೊಂಡಿದ್ದೆ. ಹಬ್ಬದ ದಿನ ಡ್ನೂಟಿ ಡಾಕ್ಟರ್ ಮಾತ್ರ ಸಿಕ್ಕಿದ್ದರು. ಆದರೆ ಮರುದಿನ ತಜ್ಞ ಆಥೋìಪೀಡಿಕ್ ಸರ್ಜನ್ ಅವರ ಬಳಿಗೆ ಹೋದೆ. ಎಕ್ಸ್‌ರೇ ನೋಡಿದರು. ಬಲಭುಜವನ್ನು ಅಲ್ಲಲ್ಲಿ ಅಮುಕಿದಂತೆ ನಾನು ಚೀರಿಟ್ಟೆ. ಮೂಳೆ ಮುರಿದಿದೆ ಎಂದು ತಿಳಿಸಿದರು. ಬೆನ್ನಿಗೆ ಇಮ್ಮೊಬಲೈಸರ್ ಬಿಗಿದರು. ಅದು ಭುಜವನ್ನು ಹಿಂದಕ್ಕೆ ಎಳೆದಿಟ್ಟು ನೇರವಾಗಿ ಮೂಳೆ ಕೂರಲು ಸಹಾಯಕವಾಗುತ್ತದೆ. ಬಲಗೈಗೆ ಸ್ಲಿಂಗ್ ತೂಗಿಸಿದರು. ನನ್ನ ಐವತ್ತು ದಾಟಿದ ವಯಸ್ಸಿನ ಕಾರಣ ಎಚ್ಚರದ ಅಗತ್ಯವಿತ್ತು, ಮಕ್ಕಳಲ್ಲಿ ಮೂಳೆ ಕೂಡಿದಷ್ಟು ಇದು ಸುಲಭವಲ್ಲ.
ಬೆನ್ನ ಮೇಲೆ ಮಣ ಭಾರ ಹೇರಿದಂತಿತ್ತು. ಸ್ಲಿಂಗ್‌ನಲ್ಲಿ ಜೋತು ಬಿದ್ದ ನನ್ನ ಕೈಯೂ ಕುತ್ತಿಗೆಯನ್ನು ಜಗ್ಗಿ ಹಿಡಿದಿತ್ತು. ಮನೆಗೆ ಬಂದಾಗ ಮನಸ್ಸು ಖನ್ನತೆಗೆ ಜಾರಿತ್ತು. ಮೂರು ವಾರ ಕಛೇರಿಯಿಂದ ರಜೆ ತೆಗೆದುಕೊಳ್ಳಬೇಕೆಂದು ವಿಧಿಸಿದ್ದರು. ಅಷ್ಟು ದಿನಗಳ ರಜೆ ತೆಗೆದುಕೊಂಡು ಮನೆಯಲ್ಲಿ ಕುಳಿತದ್ದು ಒಮ್ಮೆ ಮಾತ್ರ, ಮೇಘಾ ಪುಟ್ಟಿ ಹುಟ್ಟಿದಾಗ. ದೇಹ ಮನಸ್ಸು ಸ್ವಸ್ಥವಿದ್ದಾಗ, ಒಂದೇ ಒಂದು ದಿನದ ರಜೆಗೆ ಕಾತುರದಿಂದ ಕಾಯುತ್ತೇವೆ. ಆದರೆ, ಅವೆರಡೂ ಇಲ್ಲದ ಈ ಹೊತ್ತು ಈ ಗೃಹಬಂಧನ ಹಿಂಸೆಯಾಗಿಬಿಡುತ್ತದೆ.

ಹೇಗಾದರೂ ಮನಸ್ಸನ್ನು ಸಮಾಧಾನ ಮಾಡಿಕೊಳ್ಳಬೇಕಿತ್ತು. ಅರೆ ನಮ್ಮೂರಲ್ಲಿದ್ದಾಗಲೇ ಆದ ಅಪಘಾತ. ಕಳೆದ ವರ್ಷಗಳು ಹೆಲಿಕಾಪ್ಟರ್ ಸಂಶೋಧನಾ ವಿಭಾಗದಲ್ಲಿದ್ದಾಗ, ಎಷ್ಟೆಲ್ಲ ಓಡಾಟದಲ್ಲಿದ್ದೆ.
ಅಸ್ತ್ರಶಸ್ತ್ರಗಳನ್ನು ಪೇರಿಸಿಕೊಂಡ ರುದ್ರ - ನಮ್ಮ ಅತ್ಯಾಧುನಿಕ ಹಗುರ ಹೆಲಿಕಾಪ್ಟರಿನ ಪರೀಕ್ಷಣಾ ಹಾರಾಟಕ್ಕೆ ಒರಿಸ್ಸಾಗೆ ಅಲೆದದ್ದೆಷ್ಟು ಬಾರಿ. ಪದೇ ಪದೇ ಮೀಟಿಂಗ್‌ಗೆಂದು ದಿಲ್ಲಿಗೆ ಮತ್ತು ನಾಸಿಕ್‌ಗೆ ಹೋಗಿದ್ದೆ. ಮತ್ತೆ ಇಸ್ರೇಲ್, ಸ್ವೀಡನ್, ಜರ್ಮನಿ ಎಂದು ಅಲೆದಿದ್ದೆ. ಹಾಗೆ ಎಲ್ಲಿಯೋ ಜವಾಬ್ದಾರಿ ಹೊತ್ತು ಕೆಲಸದ ಮೇಲೆ ಅಲೆಯವಾಗ ಅಪಘಾತ ಆಗಿದ್ದರೆ, ಎಷ್ಟು ಕಷ್ಟವಾಗುತ್ತಿತ್ತು. ಇಲ್ಲಿ, ಈಗ ಆದದ್ದೇ ಒಳ್ಳೆಯದು, ಎಂದುಕೊಂಡೆ. ಅಪಘಾತಕ್ಕೂ ಸರಿಯಾದ ಸಮಯ, ಸ್ಥಳ ಇರುತ್ತದೆಯೆ?- ಎಂದು ನಗಬೇಡಿ.
ಇವೆಲ್ಲ ಹುಚ್ಚು ಯೋಚನೆಗಳು ಎಂದು ಗೊತ್ತೇ ಇತ್ತು. ಆದರೆ ಕೈತುಂಬಾ ಸಮಯ, ಏಳುವುದು ಕಷ್ಟ ಕೂರುವುದು ಕಷ್ಟ, ಬೆನ್ನ ಮೇಲೆ ಭಾರ, ಕುತ್ತಿಗೆ ಕುಸಿದ ಈ ಅವಸ್ಥೆಯಲ್ಲಿ ಮನಸ್ಸನ್ನು ಸಮಾಧಾನ ಮಾಡಿಕೊಳ್ಳಲು ಇಂಥ ಯೋಚನೆಗಳು ಸಹಾಯಕವಾಗುತ್ತವೆ.
ಮನಸ್ಸನ್ನು ಲವಲವಿಕೆಗೆ ತರಲು ಈ ಕಡ್ಡಾಯದ ಗೃಹಬಂಧನದ ಲಾಭಗಳನ್ನು ಹುಡುಕಬೇಕಿತ್ತು. ನನ್ನ ಹೊಸ ಪುಸ್ತಕದ ಕಪಾಟಿನ ಎದುರಿಗೆ ನಿಂತೆ. ಅದರ ತುಂಬ ಆರೋಗ್ಯವನ್ನು ಕುರಿತಂತೆ ಕಳೆದ ದಶಕದಲ್ಲಿ ವಿಶೇಷವಾಗಿ ಆಸಕ್ತಿ ವಹಿಸಿ ಸಂಗ್ರಹಿಸಿದ ನೂರಾರು ಪುಸ್ತಕಗಳು. ಅವುಗಳಲ್ಲಿ ಬಹಳಷ್ಟನ್ನು ಓದಲು ಸಾಧ್ಯವಾಗಿರಲಿಲ್ಲ. ನಾಲ್ಕೈದು ಪುಸ್ತಕಗಳನ್ನು ಆರಿಸಿ, ಕಪಾಟಿನಿಂದ ಕೆಳಗಿಳಿಸಿ ಹಾಸಿಗೆಯ ತುಂಬಾ ಹರಡಿಕೊಂಡಾಗ ಮನಸ್ಸು ಸ್ವಲ್ಪ$ಚೇತರಿಸಿಕೊಂಡಿತು.

ಸದ್ಯಕ್ಕೆ ಒಂದಿಷ್ಟು ಅಧಿಕ ಮೊತ್ತದಲ್ಲಿ ಕ್ಯಾಲ್ಸಿಯಂ ಸೇವಿಸುವುದು ಒಳ್ಳೆಯದಾದ ಕಾರಣ, ಕ್ಯಾಲ್ಸಿಯಂ ಇರುವ ಆಹಾರಗಳ ಬಗ್ಗೆ ಮತ್ತೂಮ್ಮೆ ಓದಿ ಪಟ್ಟಿ ಮಾಡಿದೆ.
ಕ್ಯಾಲ್ಸಿಯಂ ಅನ್ನು ಬಲು ಸುಲಭವಾಗಿ ನಮ್ಮ ಆಹಾರದಿಂದ ನಾವು ಪಡೆಯಬಹುದು. ವಯಸ್ಕರಿಗೆ ದಿನವೊಂದಕ್ಕೆ 1000 ಮಿ. ಗ್ರಾಂ. ಕ್ಯಾಲ್ಸಿಯಂ ಅಗತ್ಯವಿದೆ. ಸರಿಯಾಗಿ ಸಂಕ್ರಾಂತಿಗೆ ಕೈಮುರಿದುಕೊಂಡಿದ್ದೆ. ಎಳ್ಳು ಬೆಲ್ಲದಲ್ಲಿಯೇ ಕ್ಯಾಲ್ಸಿಯಂ ಸಾಕಷ್ಟಿದೆ.
ಅಂಗಡಿಯಿಂದ ತಂದ ಎಳ್ಳು ಬೆಲ್ಲದಲ್ಲಿ, ಬೆಲ್ಲಕ್ಕಿಂತ ಸಕ್ಕರೆ ಉಂಡೆಗಳೇ ಹೆಚ್ಚಿದ್ದು ಕಿರಿಕಿರಿಯಾಯಿತು. ಸೀದಾ ಸಾದಾ ಕರಿ ಎಳ್ಳು ತರಿಸಿ, ಬೆಲ್ಲದ ಜೊತೆ ತಿನ್ನತೊಡಗಿದೆ.
ಹಸಿಯಾದ ಎಳ್ಳಿನಲ್ಲಿ ಕ್ಯಾಲ್ಸಿಯಂ ಯಥೇತ್ಛವಾಗಿದೆ. 100 ಗ್ರಾಂ. ಎಳ್ಳಿನಲ್ಲಿ ಸುಮಾರು 1000 ಮಿ. ಗ್ರಾಂ. ಕ್ಯಾಲ್ಸಿಯಂ ಇದೆ. ನೆನಪಿಸಿಕೊಳ್ಳಿ, ಎಳ್ಳುಬೆಲ್ಲದ ಉಂಡೆ ಹೆಣ್ಣುಮಕ್ಕಳಿಗೆ ಪ್ರೀತಿಯಿಂದ ಮಾಡಿ ತಿನ್ನಿಸುತ್ತಿದ್ದ ಆ ಕಾಲವನ್ನು. ಕರಿ ಎಳ್ಳು, ಗಾಢ ಕಂದು ಬಣ್ಣದ ಬೆಲ್ಲ ಬಳಸುತ್ತಿದ್ದರು.
ದಿನನಿತ್ಯ ಸೇವಿಸುವ ಹಾಲಿನಲ್ಲಿ ಕ್ಯಾಲ್ಸಿಯಂ ಇದೆ. ಹಾಲಿನಿಂದ ತಯಾರಿಸುವ ಸರಳ ಸಾಧಾರಣ ಮೊಸರಿನಲ್ಲಿ ಕ್ಯಾಲ್ಸಿಯಂ ಸಾಕಷ್ಟು ಇದೆ. 400 ಗ್ರಾಂ. ಮೊಸರಿನಲ್ಲಿ ಸುಮಾರು 450 ಮಿ. ಗ್ರಾಂ. ಕ್ಯಾಲ್ಸಿಯಂ ಇದೆ.

ಗಾಢ ಹಸಿರು ಬಣ್ಣದ ಸೊಪ್ಪುಗಳು ಕ್ಯಾಲ್ಸಿಯಂನ ಆಗರ. ಅಕ್ಕ ಸೊಪ್ಪು$ ತಂದು ಬಸ್ಸಾರು ಮಾಡಿ, ಹದವಾಗಿ ಬೆಂದ ಸೊಪ್ಪು$ಹಾಗೂ ಬೇಳೆಯನ್ನು ಬೇರೆಯಾಗಿಸಿ ರುಚಿಕರವಾಗಿ ಒಗ್ಗರಣೆ ಹಾಕಿ ಕೊಡುತ್ತಿದ್ದಾರೆ.
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ "ಸಿ' ಅಲ್ಲದೆ ಕ್ಯಾಲ್ಸಿಯಂ ಕೂಡಾ ಇದೆ.
ಒಣ ಅಂಜೂರ ಕೂಡಾ ಕ್ಯಾಲ್ಸಿಯಂನ ಆಗರ. ಐದು ಒಣ ಅಂಜೂರ 135 ಮಿಲಿಗ್ರಾಂ ಕ್ಯಾಲ್ಸಿಯಂ ನೀಡಬಲ್ಲವು.
ಬಾದಾಮಿಯಲ್ಲಿ ಕ್ಯಾಲ್ಸಿಯಂ ಯಥೇತ್ಛವಾಗಿದೆ. ರಾತ್ರಿ ನೀರಿನಲ್ಲಿ ಬಾದಾಮಿಯನ್ನು ನೆನೆಸಿ ಬೆಳಗ್ಗೆ ಹಸಿಯಾಗಿ ತಿನ್ನತೊಡಗಿದೆ. ಅಂದ ಹಾಗೆ ದಿನವೂ ಬಾಳೆಹಣ್ಣು ತಿನ್ನುವುದನ್ನು ಮರೆಯಲಿಲ್ಲ. ಬಾಳೆಹಣ್ಣು ಕ್ಯಾಲ್ಸಿಯಂ ಹೀರಿಕೊಳ್ಳುವುದರಲ್ಲಿ ಮತ್ತು ಮೂಳೆಗಳು ಗಟ್ಟಿಯಾಗುವುದರಲ್ಲಿ ಸಹಾಯಕ.
ಇವೆಲ್ಲವೂ ಕೈ ಮುರಿದುಕೊಳ್ಳದೆ ಇದ್ದಾಗಲೂ ಮಾಡಬೇಕಾದ ಆರೋಗ್ಯದ ವಿಧಾನಗಳು. ಆದರೆ, ಕೈ ಮುರಿದ ನೆಪಕ್ಕಾದರೂ ನನ್ನ ಗಮನ ಈ ಸಹಜ ಸುಲಭ ಆಹಾರಗಳತ್ತ ಹೊರಳಿತು. ಮರೆತ ಪಾಠವನ್ನು ಮತ್ತೆ ಕಲಿಯುವಂತೆ ಮಾಡಿತ್ತು.
ಹಿಂದೆ ತೀವ್ರ ಅನೀಮಿಯಾಗೆ ನಾನು ಒಳಗಾದಾಗ, ನನ್ನ ಗಂಡ ರಾಗಿ ದೋಸೆ ಮತ್ತು ಮೆಂತ್ಯ ಸೊಪ್ಪು$ಮಾಡುವುದರಲ್ಲಿ ಪ್ರವೀಣರಾದರು. ರಾಗಿ ತಿನ್ನುವ ಅಭ್ಯಾಸವನ್ನು ಮನೆಮಂದಿಯೆಲ್ಲ ಬಿಡದೆ ಮುಂದುವರೆಸಿಕೊಂಡು ಬಂದಿದ್ದೇವೆ. ರಾಗಿಯಲ್ಲಿ ಕ್ಯಾಲ್ಸಿಯಂ ಅಲ್ಲದೆ ಪ್ರೊಟೀನ್ ಕೂಡಾ ಯಥೇತ್ಛವಾಗಿದೆ. 100 ಗ್ರಾಂ ರಾಗಿಯಲ್ಲಿ 350 ಮಿಲಿಗ್ರಾಂ ಕ್ಯಾಲ್ಸಿಯಂ ಇದೆ.
ಮೆಂತ್ಯದ ಕಾಳಿನಲ್ಲಿ ಕ್ಯಾಲ್ಸಿಯಂ ಒಂದೇ ಅಲ್ಲ, ಪೊಟಾಷಿಯಮ್, ಫಾಸ್ಫರಸ್, ಮೆಗ್ನಿàಷಿಯಂ ಮತ್ತು ಕಬ್ಬಿಣ ಸಾಕಷ್ಟು ಇದೆ. ಮೆಂತ್ಯದ ಕಾಳನ್ನು ಮೊಳಕೆ ಒಡೆಸಿಯೂ ತಿನ್ನಿ, ಆರೋಗ್ಯದ ಆಗರವದು. ಅಚ್ಚರಿ ಎಂದರೆ ಮೆಂತ್ಯದ ಕಾಳು ಕಹಿ, ಆದರೆ ಚೆನ್ನಾಗಿ ಮೊಳಕೆ ಒಡೆದ ಮೆಂತ್ಯದ ಕಾಳಿನಲ್ಲಿ ಕಹಿ ಅಷ್ಟಿರುವುದಿಲ್ಲ, ತಿನ್ನಲು ಸೊಗಸು. ಒಂದಿಷ್ಟು ನಿಮಗೆ ಇಷ್ಟವಾದ ಹಸಿ ತರಕಾರಿ ಬೆರೆಸಿ ಸಲಾಡ್ ತರಹ ತಿನ್ನಬಹುದು. ಮೆಂತ್ಯದ ಕಾಳಿಗೆ ಕೆಟ್ಟ ಕೊಲೆಸ್ಟ್ರಾಲ್ "ಎಲ್.ಡಿ.ಎಲ್.' ಅನ್ನು ತಗ್ಗಿಸುವ ಗುಣವಿದೆ. ಇದರಲ್ಲಿ ರಕ್ತವನ್ನು ತೆಳುವಾಗಿಸುವ ಗುಣವೂ ಇದ್ದು, ರಕ್ತದ ಅಸಹಜ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಮೆಂತ್ಯದ ಕಾಳಿನಲ್ಲಿ "ಸಾಲ್ಯುಯೇಬಲ್ ಡಯಟರಿ ಫೈಬರ್' ಇದೆ. ಮೆಂತ್ಯದ ಕಾಳಿನಲ್ಲಿರುವ "ನಾನ್ ಸ್ಟಾರ್ಚ್ ಪಾಲಿಸ್ಯಾಕರೈಡ್ಸ್' (ಇದು ಕಾಳಿನಲ್ಲಿರುವ ಫೈಬರ್‌ಗೂ ಕಾರಣ) ಆಹಾರದಲ್ಲಿರುವ ಟಾಕ್ಸಿಕ್‌ಗಳನ್ನು ದೇಹದಿಂದ ಹೊರಹಾಕಿ, ಹೆಗ್ಗರುಳಿನ ಮ್ಯೂಕಸ್ ಪದರವನ್ನು ಕ್ಯಾನ್ಸರಿನಿಂದ ರಕ್ಷಿಸಲು ಸಹಾಯಕವಾಗುತ್ತದೆ.
ಮೆಂತ್ಯದ ಕಾಳು ನಮ್ಮ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ಮೆಂತ್ಯದ ಕಾಳಿನಲ್ಲಿರುವ "ಅಮೈನೋ ಆಸಿಡ್4-ಹೈಡ್ರೋಕ್ಸಿ ಐಸೊಲೆಸಿನ್' ಎಂಬ ಪದಾರ್ಥ ಹೆಚ್ಚು ಇನ್ಸುಲಿನ್ ಉತ್ಪತ್ತಿಯಾಗುವಲ್ಲಿ ಸಹಾಯಕವಾಗಿದೆ. ಸಿಹಿಮೂತ್ರ ರೋಗಿಗಳಿಗೆ ಮತ್ತು ಹೃದ್ರೋಗಿಗಳಿಗೆ ಕೊಂಚ ಮೆಂತ್ಯದ ಕಾಳು ಆಹಾರದ ಭಾಗವಾಗುವುದು ಬಲು ಒಳ್ಳೆಯದು.
ಇವೆಲ್ಲವುಗಳನ್ನು ಮಿತವಾಗಿ ಹಿತವಾಗಿ ಆಹಾರದ ಭಾಗವಾಗಿಸಿಕೊಂಡು ಮತ್ತೂಮ್ಮೆ ಅಳವಡಿಸಿಕೊಂಡೆ. ಇದರಿಂದ "ಕ್ಯಾಲ್ಸಿಯಂ ಕೊರತೆ'ಯ ತೊಂದರೆ ಇರುವುದಿಲ್ಲ. ಇನ್ನು ಮೂಳೆ ಗಟ್ಟಿಯಾಗಲು ಅಗತ್ಯವಿರುವ ವಿಟಮಿನ್ "ಡಿ'ಗೆ ಚಿಂತೆಯೇ ಇಲ್ಲ. ದಿನವೂ ಬಾಲ್ಕನಿಯಲ್ಲಿ 20 ನಿಮಿಷ ಬಿಸಿಲಿಗೆ ಕುಳಿತುಕೊಳ್ಳುತ್ತಿದ್ದೇನೆ.
ಐವತ್ತು ದಾಟಿದ ನನ್ನ ವಯಸ್ಸಿನ ಮಹಿಳೆಯರಿಗೆ ಕ್ಯಾಲ್ಸಿಯಂ ಅಗತ್ಯ ಹೆಚ್ಚಿರುತ್ತದೆ. ಮೂರು ವರ್ಷದ ಹಿಂದೆ ಮಹಿಳೆಯರ ಬದುಕಿನ "ಋತು ಬಿಡುಗಡೆಯ' ಆ ಹಂತಕ್ಕೆ ನಾನು ತಲುಪಿದಾಗ, ಕ್ಯಾಲ್ಸಿಯಂ ಇರುವ ಆಹಾರಗಳ ಪಟ್ಟಿ ಮಾಡಿದ್ದೆ. ನನ್ನ ಅನೇಕ ಗೆಳತಿಯರು ಕ್ಯಾಲ್ಸಿಯಂ ಸಪ್ಲಿಮೆಂಟ್ ತೆಗೆದುಕೊಳ್ಳಲು ಹೇಳಿದ್ದರು. ಎಲ್ಲಕ್ಕೂ ಗುಳಿಗೆ ನುಂಗುವುದು ನನಗೆ ಹಿತವಿರಲಿಲ್ಲ. ರೋಗ ಬಂದಾಗ ಗುಳಿಗೆ ನುಂಗುವುದು ಅನಿವಾರ್ಯ, ಆದರೆ, ಮೆನೋಪಾಸ್ ರೋಗವಲ್ಲ. ಕ್ಯಾಲ್ಸಿಯಂ ಅನ್ನು ನಮ್ಮ ಸಮತೂಕ ಆಹಾರದ ಭಾಗವಾಗುವಂತೆ ಮಾಡಿಕೊಳ್ಳಬಹುದಲ್ಲ. ಆಹಾರದಲ್ಲಿನ ಕ್ಯಾಲ್ಸಿಯಂ ಅನ್ನು ನಮ್ಮ ದೇಹ ಸುಲಭವಾಗಿ ಹೀರಿಕೊಳ್ಳುತ್ತದೆ.
ಯೋಚಿಸಿ ! ಸೊಪ್ಪು$, ರಾಗಿ, ಮೊಸರು, ಎಳ್ಳು, ಬೆಲ್ಲ, ಬಾದಾಮಿ ಅಂಜೂರದಂತಹ ಕ್ಯಾಲ್ಸಿಯಂ ಆಗರಗಳಿರುವಾಗ, ಅನುಕೂಲವೆಂದು ಗುಳಿಗೆ ನುಂಗುವುದೇಕೆ? "ಜೀವಮಾನವಿಡೀ ಗುಳಿಗೆ ನುಂಗುವುದರ ಅಡ್ಡ ಪರಿಣಾಮಗಳಿಲ್ಲವೆ' ಎಂಬ ಯೋಚನೆಯೂ ಮನಸ್ಸಿಗೆ ಬಂದಿತ್ತು.
2012, ಮೇ ತಿಂಗಳು, "ದೀರ್ಘಕಾಲ ಕ್ಯಾಲ್ಸಿಯಂ ಗುಳಿಗೆ ತೆಗೆದು ಕೊಳ್ಳುವುದು ಹೃದಯಾಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ' ಎಂದು ಪತ್ರಿಕೆಗಳಲ್ಲಿ ವರದಿ ಕಾಣಿಸಿಕೊಂಡಿತು. ನಂತರ ಹಾರ್ಟ್ ಎಂಬ ಜರ್ನಲ್‌ನಲ್ಲಿ, 24,000 ಜನರನ್ನು ಒಳಗೊಂಡ ಈ ಅಧ್ಯಯನದ ವಿವರಗಳನ್ನು ಓದಿದೆ. ಮತ್ತೂಮ್ಮೆ ಅನಿಸಿತ್ತು, "ಕ್ಯಾಲ್ಸಿಯಂ ಅನ್ನು ನಮ್ಮ ಸಮತೂಕ ಆಹಾರದ ಭಾಗವಾಗಿ ನೋಡಬೇಕೆ ವಿನಾ, ಮುಟ್ಟುನಿಂತ ನಂತರದ ತೊಂದರೆಗಳಿಗೆಲ್ಲ ಅಗ್ಗದ ಪರಿಹಾರವೆನಿಸುವ ಗುಳಿಗೆಯಾಗಿ ಅಲ್ಲ'.
.
ತಾವು ಗಮನಿಸಿರಬಹುದು, ಔಷಧಿ ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ "ಮುಟ್ಟು ನಿಲ್ಲುವುದನ್ನೂ' ಒಂದು ದೊಡ್ಡ ರೋಗವೆಂಬಂತೆ ಬಿತ್ತರಿಸುತ್ತ, ಅದಕ್ಕೆ ಜೀವಮಾನವಿಡೀ "ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ' ಬೇಕೆಂದು ಸಾರುತ್ತಿವೆ. ನಮ್ಮಜ್ಜಿ, ನಮ್ಮಮ್ಮರ ಮುಟ್ಟು ನಿಲ್ಲುವ ಸಮಯದ ತೊಂದರೆಗಳು ದೊಡ್ಡ ಸಮಸ್ಯೆಗಳೇ ಆಗಿರಲಿಲ್ಲ. ಬಸಿರು, ಬಾಣಂತನ, ಮುಟ್ಟು ನಿಲ್ಲುವ ಸಮಯದ ತಾತ್ಕಾಲಿಕ ಸಮಸ್ಯೆಗಳನ್ನು ಪರಸ್ಪರರಲ್ಲಿ ಹೇಳಿಕೊಂಡು, ಒಂದಿಷ್ಟು ಗೊಣಗಿಕೊಂಡೇ ಅನುಭವಿಸಿ, ಆ ಹಂತವನ್ನು ದಾಟಿ ಮುಗಿಸುತ್ತಿದ್ದರು. ಇಂದು ನಲವತ್ತು ದಾಟಿದ ಹೆಂಗಸರು ಇಂತಹ ಸಮಸ್ಯೆಗಳಿಗೆ ವೈದ್ಯಕೀಯ ಸಹಾಯ ಬೇಡಿ ಹೋದಾಗ, ಅಗತ್ಯವೋ, ಅನಗತ್ಯವೋ, "ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆೆರಪಿ' ಸೂಚಿಸುವುದು ಸಾಮಾನ್ಯವಾಗುತ್ತಿದೆ. ತಿಳಿದಂತಹ ಅನೇಕ ವೈದ್ಯರು "ಅದೆಲ್ಲ ಬೇಡಮ್ಮ' ಎಂದು ರೋಗಿಗೆ ಬುದ್ಧಿ ಹೇಳಿದರೂ, ಜಾಹೀರಾತುಗಳಿಂದ ಪ್ರಭಾವಿತರಾಗಿ, "ಬೇಕೇಬೇಕು' ಎಂದು ಹಟ ಹಿಡಿಯುತ್ತಿರುವ ಕೆಲವು ಗೆಳತಿಯರನ್ನೂ ನೋಡಿದ್ದೇನೆ. ಅವರೆಲ್ಲರಿಗೂ ನಾನು ಓದಲು ಕೊಡುವ ಪುಸ್ತಕ, ಮೂವತ್ತು ವರ್ಷಗಳು ವೈದ್ಯರಾಗಿ ದುಡಿದಿರುವ ಅಮೆರಿಕದ ಡಾ. ರೇ. ಡಿ. ಸ್ಟ್ರಾಂಡ್ ಅವರು ಬರೆದಿರುವ ಡೆತ್ ಬೈ ಪ್ರಿಸ್ಕ್ರಿಪ್ಷನ್.
ಈ ಪುಸ್ತಕದಲ್ಲಿ ಡಾ. ರೇ ಉಲ್ಲೇಖೀಸುವ ಈ ಸತ್ಯ ಘಟನೆಯಿದು.
.
ಸಿಯಾಂತಾ ತನ್ನ ವಾರ್ಷಿಕ "ಗೈನಕಾಲಜಿ' ತಪಾಸಣೆಗೆ ಬಂದಿದ್ದಳು. ನಲವತ್ತೆಂಟು ವರ್ಷದ ಸಿಯಾಂತಾಳದು ಸುಖೀ ಕುಟುಂಬ. ಆರೋಗ್ಯದ ಬಗ್ಗೆ ಬಲು ಮುತುವರ್ಜಿ ವಹಿಸಿದ್ದ ಸಿಯಾಂತಾ ಆರೋಗ್ಯವಂತಳಿದ್ದಳು. ಆದರೆ, ಕಳೆದ ಆರು ತಿಂಗಳಿಂದ ಸಿಯಾಂತಾಗೆ ರಾತ್ರಿ ಏಕಾಏಕಿ ಬೆವರುತ್ತಿತ್ತು, ಇವು ಮುಟ್ಟು ನಿಲ್ಲುವ ಸಮಯದ ಸೂಚನೆಗಳು ಎಂದು ತಿಳಿದ ಸಿಯಾಂತಾ ತನ್ನ ವೈದ್ಯರೊಡನೆ ಚರ್ಚಿಸಲು ಇಚ್ಛಿಸಿದ್ದಳು.
ವೈದ್ಯರು ಸಿಯಾಂತಾಳ ತಪಾಸಣೆ ಮಾಡಿದರು. ಸಿಯಾಂತಾ ಮುಟ್ಟುನಿಲ್ಲುವ ಹಂತವನ್ನು ಪ್ರವೇಶಿಸಿದ್ದಾಳೆಂದು ದೃಢಪಡಿಸಿದರು. ಆಕೆ "ಹಾರ್ಮೋನ್ ರಿಪ್ಲೇಸ್‌ಮೆಂಟ್ ತೆರಪಿ' ತೆಗೆದುಕೊಳ್ಳುವಂತೆ ಗಟ್ಟಿಯಾಗಿ ಸಲಹೆ ಮಾಡಿದರು. "ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟಿನ್' ಮೂಲಕ ಥೆರಪಿ ಆರಂಭಿಸಲು ಒತ್ತಾಯಿಸಿದರು. ಈ ಥೆರಪಿಯ ಅಗಾಧ ಲಾಭಗಳ ಬಗ್ಗೆ ಹೇಳಿದರು. ಈಸ್ಟ್ರೋಜೆನ್ ಮುಟ್ಟು ನಿಲ್ಲುವ ಸಮಯದ "ಮೆನೋಪಾಸಲ್' ಲಕ್ಷಣಗಳನ್ನು ಸುಧಾರಿಸುವುದೆಂದು ಭರವಸೆ ಕೊಟ್ಟರು. ಅಷ್ಟೇ ಅಲ್ಲ, "ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆೆರಪಿ', ಸಿಯಾಂತಾಳನ್ನು "ಓಸ್ಟಿಯೋಪೋರೊಸಿಸ್', "ಆಲ್ಜಮೀರ್ ಡಿಮೆನ್ಷಿಯಾ', "ಹೃದಯಾಘಾತ', "ಪಾರ್ಶ್ವವಾಯು' ಮುಂತಾದ ರೋಗಗಳಿಗೆ ಬಲಿಯಾಗುವ ಅಪಾಯವನ್ನು ತಗ್ಗಿಸುವುದೆಂದೂ, ಅವಳ ಲೈಂಗಿಕ ಜೀವನವನ್ನು ಸುಧಾರಿಸುವುದೆಂದೂ ತಿಳಿಸಿದರು.
"ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ'ಯಿಂದ ಏನಾದರೂ ಅಡ್ಡ ಪರಿಣಾಮಗಳಿವೆಯೆ ಎಂದು ವೈದ್ಯರನ್ನು ಸಿಯಾಂತಾ ಕೇಳಿದಳು. ಜೀವಮಾನವಿಡೀ ಯಾವುದೇ ಔಷಧಿಯನ್ನು ತೆಗೆದುಕೊಳ್ಳುವುದು ಸಿಯಾಂತಾಗೆ ಸುತರಾಂ ಇಷ್ಟವಿರಲಿಲ್ಲ. ಆಕೆಯ ವೈದ್ಯರು "ಪ್ರತಿ ಮಹಿಳೆಗೂ ಈ ಥೆೆರಪಿ ಬೇಕೆಂದು'
ಒತ್ತಾಯಪೂರ್ವಕವಾಗಿ ಹೇಳಿದರು. ಈ ಥೆರಪಿಯಿಂದ ಸ್ತನದ ಕ್ಯಾನ್ಸರ್ ಬರುವ ಅಪಾಯ ಕೊಂಚ ಇರುವುದಾದರೂ, "ಅದಿನ್ನೂ ಸಾಬೀತಾಗಿಲ್ಲ. ಇದರ ಬಗ್ಗೆ ಮೆಡಿಕಲ್ ಲಿಟರೇಚರ್‌ನಲ್ಲಿ ವಿರುದ್ಧವಾದ ರಿಪೋರ್ಟ್‌ಗಳಿವೆ, ಕ್ಯಾನ್ಸರಿನ ಅಪಾಯ ಇದೆಯೆಂಬುದು ದೃಢಪಟ್ಟಿಲ್ಲ' ಎಂದು ಸಮಾಧಾನ ಮಾಡಿದರು.
"ಈ ಥೆರಪಿಯ ಲಾಭಗಳು ಇಂತಹ ಸಣ್ಣ ಅಪಾಯಗಳನ್ನು ಮೀರಿಸುವಂತಿವೆ' ಎಂದೂ ಒತ್ತಿ ಹೇಳಿದರು.
ಥೆರಪಿ ತೆಗೆದುಕೊಳ್ಳದಿದ್ದರೇ ಹೆಚ್ಚು ಅಪಾಯ ಎನ್ನುವಂತೆ ಹೆದರಿದ ಸಿಯಾಂತಾ, ಕೊನೆಗೆ ಥೆೆರಪಿಗೆ ಒಪ್ಪಿಕೊಂಡಳು. ತನ್ನ ಆರೋಗ್ಯವನ್ನು ಎಲ್ಲ ರೀತಿಯಲ್ಲೂ ಉಳಿಸಿಕೊಳ್ಳಲು ಬಯಸಿದ್ದಳು. ಪ್ರತಿದಿನವೂ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟಿನ್ ತೆಗೆದುಕೊಳ್ಳಲು ಆರಂಭಿಸಿದಳು. ಮೆನೋಪಾಸಿನ ಲಕ್ಷಣಗಳು ಮಾಯವಾದವು.
ಕೆಲವು ತಿಂಗಳು ಕಳೆಯಿತು. ಆ ದಿನ ಸಿಯಾಂತಾ ಉತ್ಸಾಹದಿಂದ ಎದ್ದಿದ್ದಳು, ಮನೆಯೆಲ್ಲ ಸ್ವತ್ಛ ಮಾಡುವ ಯೋಜನೆ ಆಕೆಯದಾಗಿತ್ತು. ತಟ್ಟನೆ ಸಿಯಾಂತಾಳ ಎದೆಯಲ್ಲಿ ಕಿವುಚುತ್ತಿರುವಂತಹ,
ಅಮುಕುತ್ತಿರುವಂತಹ ಭಾವ. ಉಸಿರಾಡುವುದು ಕಷ್ಟವಾಯಿತು, ಎಲಿಲ್ಲದ ಹಾಗೆ ಬೆವರಿದಳು. ಎದೆಯ ಅಸ್ವಸ್ಥತೆ ಮೊದಲು ಎಡಭಾಗದ ಭುಜಕ್ಕೆ ಹಬ್ಬಿ , ಎಡಗೈ ಕೆಳಭಾಗಕ್ಕೆ ತಲುಪಿತು. ಪತಿ ಮನೆಯಲ್ಲಿರಲಿಲ್ಲ, ಅತ್ಯಂತ ಕಷ್ಟದಿಂದ ಫೋನ್ ಬಳಿಗೆ ತೆವಳಿ ತುರ್ತು ಸಂಖ್ಯೆಗೆ ಡಯಲ್ ಮಾಡಿದಳು. ಹದಿನೈದು ನಿಮಿಷದಲ್ಲಿ ಸಹಾಯ ತಲುಪಿ, ಆಸ್ಪತ್ರೆ ಸೇರಿದ್ದಳು. ಪತಿ ಫಿಲ್ ತಲುಪಿದಾಗ, ಸಿಯಾಂತಾ ಹೆಣವಾಗಿದ್ದಳು. ಕೇವಲ ಎರಡು ಗಂಟೆಗಳ ಹಿಂದೆ ಲವಲವಿಕೆಯಿಂದಿದ್ದ ಪತ್ನಿ ಈಗಿಲ್ಲ ಎಂದರೆ ಫಿಲ್‌ಗೆ ನಂಬಲು ಸಾಧ್ಯವಾಗಲಿಲ್ಲ.
ಪತಿ ಆಟೋಪ್ಸಿಗೆ ಒಪ್ಪಿಗೆ ನೀಡಿದ. ಆಟೋಪ್ಸಿ ಸಿಯಾಂತಾ "ಅಕ್ಯೂಟ್ ಕರೋನರಿ ಥಾÅಂಬೋಸಿಸ್' - ಹೃದಯಾಘಾತದಿಂದ ಸಾವು ಸಂಭವಿಸಿದ್ದನ್ನು ತಿಳಿಸಿತು. ಇದು ಮತ್ತೂ ಆಘಾತಕಾರಿ ಸುದ್ದಿಯಾಗಿತ್ತು. ಕಾರಣ ಸಿಯಾಂತಾ ಹೃದಯಾಘಾತವಾಗುವಂತಹ ಅಪಾಯದ ಗುಂಪಿಗೆ ಸೇರಿರಲಿಲ್ಲ.
ದೈಹಿಕವಾಗಿ ಚಟುವಟಿಕೆಯಿಂದಿದ್ದ, ತನ್ನ ಆಹಾರದ ಮೇಲೆ ಪೂರ್ಣ ಗಮನವಿದ್ದ ಸಿಯಾಂತಾಳ ಕುಟುಂಬದಲ್ಲಿ ಯಾರಿಗೂ ಹೃದ್ರೋಗದ ಚರಿತ್ರೆ ಇರಲಿಲ್ಲ. ಕೊಲೆಸ್ಟ್ರಾಲ್ ಪ್ರಮಾಣ ನಾರ್ಮಲ್ ಇದ್ದ ಸಿಯಾಂತಾ, ಹೃದಯಾಘಾತಕ್ಕೆ ಬಲಿಯಾದದ್ದು ಹೇಗೆ? ಪತಿ ಹೃದಯತಜ್ಞರನ್ನು ಕೇಳಿದಾಗ, ಅವರು ಸಿಯಾಂತಾಳ ಹೃದಯಾಘಾತಕ್ಕೆ ಕೆಲವು ತಿಂಗಳ ಹಿಂದೆ ಸಿಯಾಂತಾ ಆರಂಭಿ ಸಿದ "ಹಾರ್ಮೋನಲ್ ರಿಪ್ಲೇಸ್‌ಮೆಂಟ್ ಥೆರಪಿ' ಕಾರಣವಿದ್ದೀತೆಂದು ಅಭಿಪ್ರಾಯ ವ್ಯಕ್ತಪಡಿಸಿದರು. "ಈಸ್ಟ್ರೊಜೆನ್ ರಕ್ತದ ಹೆಪ್ಪುಗಟ್ಟುವಿಕೆಗೆ (ಬ್ಲಿಡ್ ಕ್ಲಾಟ್ಸ್) ಕಾರಣವಾಗುವ ಹೆಚ್ಚಿನ ಅಪಾಯಕ್ಕೆ ಗುರಿಮಾಡುತ್ತದೆ' ಎಂದು ತಿಳಿಸಿದರು. "ಇತ್ತೀಚಿನ ಕ್ಲಿನಿಕಲ್ ಅಧ್ಯಯನಗಳು ಈ ಥೆರಪಿ ಆರಂಭಿ ಸಿದ ಮೊದಲ ವರ್ಷದಲ್ಲಿ, ಹೃದಯಾಘಾತ ಮತ್ತು ಪಾರ್ಶ್ವವಾಯು ಸಾಧ್ಯತೆಯ ಹೆಚ್ಚುವ ಅಪಾಯ ವನ್ನು ತೋರಿವೆಯೆಂದು' ತಿಳಿಸಿದರು. ಯಾವ ಹೃದಯಾಘಾತದ ಅಪಾಯದಿಂದ ಥೆರಪಿ ನಿಮ್ಮನ್ನು ತಪ್ಪಿಸುತ್ತದೆ ಎಂದು ಸಿಯಾಂತಾಳ ವೈದ್ಯರು ಆಶ್ವಾಸನೆ ನೀಡಿದ್ದರೋ, ಅದೇ ಹೃದಯಾಘಾತದ ಅಪಾಯವನ್ನು ಥೆರಪಿ ಹೆಚ್ಚಿಸಿತ್ತು. "ಇದು ಕಳೆದ ಒಂದು ವರ್ಷದಿಂದ ವೈದ್ಯ ಜಗತ್ತಿಗೆ ತಿಳಿದಿತ್ತು. ಆದರೆ ಯಾರಿಗೆ ನಿಜವಾಗಿ ತಿಳಿದಿತ್ತು, ಔಷಧಿ ಕಂಪನಿಗಳಿಗೆ? ಥೆರಪಿಯನ್ನು ಒತ್ತಾಯಿಸಿದ ವೈದ್ಯರಿಗೆ? ತನಗೆ ಮತ್ತು ಸಿಯಾಂತಾಗೆ ಏಕೆ ತಿಳಿಸಲಿಲ್ಲ?' ಫಿಲ್‌ನ ಪ್ರಶ್ನೆಗಳಿಗೆ ಉತ್ತರಿಸುವವರಿರಲಿಲ್ಲ.
.
ಸಿಯಾಂತಾಗೆ ಥೆರಪಿಯಿಂದ ಹೃದಯಾಘಾತದ ಅಪಾಯ ಹೆಚ್ಚಬಹುದು ಎಂದು ತಿಳಿದಿದ್ದರೆ ಸಿಯಾಂತಾ ಥೆರಪಿಯನ್ನು ತೆಗೆದುಕೊಳ್ಳುತ್ತಲೇ ಇರಲಿಲ್ಲ. "ಮೆನೋಪಾಸ್' ಕಾಯಿಲೆಯೇನೂ ಅಲ್ಲವಲ್ಲ, ಬದುಕಿನ ಒಂದು ಹಂತವಷ್ಟೆ , ಥೆರಪಿಯ ಸಹಾಯವಿಲ್ಲದೆಯೂ ಸಿಯಾಂತಾ ಅದನ್ನು ದಾಟುತ್ತಿದ್ದಳು. ನಿಜ, ಥೆರಪಿಯ ಈ ಅಡ್ಡ ಪರಿಣಾಮ ಬಹಳ ಬಾರಿ ಆದದ್ದಿಲ್ಲ. ಆದರೆ ನಮಗೆ ಆದಾಗ, ಎಷ್ಟು ಜನಕ್ಕೆ ಆಗಿತ್ತು, ಎಷ್ಟು ಜನಕ್ಕೆ ಆಗಿಲ್ಲ ಎಂಬುದು ಮುಖ್ಯವಾಗುವುದಿಲ್ಲ, ಕಾರಣ, ನಮ್ಮ ಆಪ್ತರ ಸಾವು ಶೇಕಡಾ ನೂರರಷ್ಟು ನಮ್ಮ ಬದುಕನ್ನು ಬದಲಿಸುತ್ತದೆ.
ಒಂದು ಕಾಲಕ್ಕೆ ಔಷಧಿ ತಯಾರಿಕೆ ಅತ್ಯಂತ ಉದಾತ್ತ ಉದ್ದೇಶದಿಂದ ಕೂಡಿತ್ತು. ರೋಗ ನಿವಾರಣೆಯ ಪಣತೊಟ್ಟ ಮಾನವೀಯ ಸಂಕಲ್ಪವಾಗಿತ್ತು. ಇಂದು ಎಲ್ಲವೂ ವ್ಯಾಪಾರವಾಗಿ, ಅಧಿಕ ಲಾಭವೇ ಮುಖ್ಯ ಧ್ಯೇಯವಾಗಿ ತಮ್ಮ ಮಾರಾಟವನ್ನು ಏರಿಸಿಕೊಳ್ಳುವುದೇ ಪರಮಗುರಿಯಾಗಿ, ನಮ್ಮ ಬದುಕು ಉಳಿಸುವ ದಾವಾ ಮಾಡುವ ಔಷಧಿಗಳೇ ನಮ್ಮ ಬದುಕನ್ನು ಮುಗಿಸಬಲ್ಲವು. ಡಾ. ರೇ ಅವರ ಪುಸ್ತಕ ಕಣ್ಣು ತೆರೆಸುವಂತಹುದು.