Monday, May 20, 2013
Last Updated: 5:29:07 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮಾರ್ಗಾಯಾಸ
    • ಮಾರ್ಗಾಯಾಸ

      • ಐತರೇಯ | Feb 03, 2013

        ನಗರದ ಮಧ್ಯೆ ಬೇತಾಳಗಳಂತೆ ಮಲಗಿರುವ ರಸ್ತೆಗಳು ಇದ್ದಕ್ಕಿದ್ದಂತೆಯೇ ಅಗಲಗಲವಾಗಿ ಚಾಚಿಕೊಳ್ಳುತ್ತ ಪಾತ್ರ ಮೀರಿ ಹರಿಯುವ ನದಿಯಂತೆ ಊರನ್ನೆಲ್ಲ ಮಟ್ಟಸ ಮಾಡಿದ ಕನಸು ಕಂಡವನಾಗಿ ಗುಂಡ ಧಿಗ್ಗನೆ ಎದ್ದು ಕುಳಿತ. ಅವನು ಹಾಗೆ ಹೆದರುವುದಕ್ಕೂ ಕಾರಣವಿದೆ. ಹಗಲು ಗಬ್ಬು ಧೂಳು ಎದ್ದು ಸುತ್ತಮುತ್ತಲಿನ ಮನೆಯವರು ಬೊಬ್ಬೆ ಹೊಡೆಯುತ್ತಾರೆಂದು ರೋಡ್‌ ರಿಪೇರಿಯವರು ರಾತೋರಾತ್ರಿ ದೊಡ್ಡ ದೊಡ್ಡ ಹ್ಯಾಲೋಜನ್‌ ಲೈಟುಗಳನ್ನು ಹಾಕಿಕೊಂಡು, ಬುಲ್ಡೋಜರ್‌ನ್ನು "ಗೊಂಯೊ' ಅಂತ  ಸದ್ದಿನೊಂದಿಗೆ ಚಲಿಸುತ್ತ ಕೆಲಸ ಮಾಡುತ್ತಿದ್ದರು. ಸೂರ್ಯ ಮೂಡುವ ಮೊದಲು ಕೆಲಸ ಬಂದ್‌.
        ಬುಲ್ಡೋಜರ್‌ನ ಸದ್ದು ಕೂಡ ಬಂದ್‌. ರಾತ್ರಿಬೆಳಗಾಗುವಷ್ಟರಲ್ಲಿ ಹದಿನೈದಡಿ ಅಗಲದ ರಸ್ತೆ ಇಪ್ಪತ್ತಡಿಯಾಗಿ ವಿಸ್ತರಿಸಿಕೊಳ್ಳುತ್ತಿತ್ತು. ಒಂದು ಶುಭ ಮುಂಜಾನೆ ಗುಂಡನ ಮನೆಯ ಪ್ರಾಕಾರದ ಹೊರಗೆ ಅಂದಕ್ಕಾಗಿ ಬೆಳೆಸಿದ ಮೇಫ್ಲವರ್‌ನ ಸಾಲುಮರಗಳು ಹೇಳ ಹೆಸರಿಲ್ಲದೆ ನೆಲಕಚ್ಚಿದ್ದವು. "ಛೆ, ಇನ್ನು ನೆರಳಿಲ್ಲ... ಸುಡುಬಿಸಿಲು!' ಎಂದು ಹಲುಬುತ್ತ ಮರುದಿನ ಬೆಳಿಗ್ಗೆ ಎದ್ದು ನೋಡಿದರೆ ಮನೆಯ ಗೇಟೇ ಮಂಗಮಾಯ. ಅದನ್ನೆಲ್ಲೋ ಬುಲ್ಡೋಜರ್‌ ಎಂಬ ಆನೆಯಂತ್ರ ತನ್ನ ಸೊಂಡಿಲಿನಲ್ಲಿ ಎತ್ತಿಹಾಕಿತ್ತು.
        ಇನ್ನೇನು, ಅದರ ಸೊಂಡಿಲು ಅಂಗಳವನ್ನು ದಾಟಿ ಜಗಲಿಯತ್ತಲೂ ಚಾಚಿಕೊಳ್ಳುತ್ತದೆ ಎಂದು ಭ್ರಮಿಸುತ್ತ ಗುಂಡ ಆಗಾಗ ಕನಸಿನಲ್ಲಿಯೂ ಜಾಗೃತಿಯಲ್ಲಿಯೂ ಅದುರಿಬೀಳುತ್ತಿದ್ದ.

        ರಾತ್ರಿಯಿಡೀ ಬುಲ್ಡೋಜರ್‌ ತಾನು ಮಲಗಿದ್ದ ಮಂಚವನ್ನೇ ಎತ್ತಿಹಾಕಿದಂತೆ ಕನವರಿಸುತ್ತ ಎಗರಿ ಎಗರಿ ಬೀಳುತ್ತಿದ್ದ. ಊರಿಡೀ ರಸ್ತೆಯೇ ಹರಡಿಕೊಂಡು ಮನೆ, ಅಂಗಡಿ, ದೇವಸ್ಥಾನಗಳೆಲ್ಲ ರಸ್ತೆಯಡಿ ಬಿದ್ದುಹೋದಂತೆ  ತಲ್ಲಣಪಡುತ್ತಿದ್ದ. ಮನೆಯ ಮಾಳಿಗೆಯಿಂದೊಮ್ಮೆ ನಗರದತ್ತ ಕಣ್ಣು ಹಾಯಿಸಿದರೆ ಬಲೆಗಳಂತೆ ಹೆಣೆದುಕೊಂಡಿರುವ ವಿದ್ಯುತ್‌, ಫೋನ್‌ನ ತಂತಿಗಳು. ಕೆಳಗೆ ರಸ್ತೆಗಳ ನಿಬಿಡ ಜಾಲ. ಈ ಜಾಲದ ಮಧ್ಯೆ ಸಿಲುಕಿಕೊಂಡಾಯಿತು, ಇನ್ನು ಹೊರಬರಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಗೆ ಅವನು ತಲುಪಿದ್ದ.

        ಅದೊಂದು ದಿನ ಬೆಳಿಗ್ಗೆ ಕಣ್ಣು ತಿಕ್ಕುತ್ತ ಮುಂಬಾಗಿಲು ತೆರೆದಾಗ ಅಂಗಳದ ತುಂಬ,  ಜಗಲಿಯ ಮೇಲೆ ಮಣ್ಣು ರಾಶಿಬಿದ್ದಿತ್ತು. ಅಂಗಳಕ್ಕೆ ಸಮಾನಾಂತರವಾಗಿದ್ದ ಹಳೆಯ ರಸ್ತೆ ಇದ್ದಕ್ಕಿದ್ದಂತೆ ಹತ್ತಡಿ ಎತ್ತರಕ್ಕೇರಿ ಮನೆಯ ಛಾವಣಿಯ ಮಟ್ಟಕ್ಕೆ ಮುಟ್ಟಿತ್ತು. ಮನೆಯ ಹೊರಗೆ ಬರಬೇಕಾದರೆ ಏಣಿಯೇ ಬೇಕು. ಏಣಿ ಏರಿದ ಬಳಿಕ ನೇರವಾಗಿ ರೋಡಿಗೇ ಇಳಿಯಬೇಕು! ಗುಂಡ, ಬಾಗಿಲು ದಾಟಿ  ಹಳೆಯ ಏಣಿಯ ಮೂಲಕ ಆರೋಹಣ ಮಾಡಿ ರಸ್ತೆಗೆ ಹತ್ತಿ ನಿಂತಾಗ ಇದು ತನ್ನೂರು ಹೌದೋ ಅಲ್ಲವೊ ಎಂದು ದಿಗಿಲುಗೊಳ್ಳುವಂತಾಯಿತು. ರಸ್ತೆ ಬದಲಾಗಿ, ಊರಿನ ಚಹರೆಯೇ ಬದಲಾಗಿ ದೀರ್ಘ‌ಕಾಲದ ಬಳಿಕ ಪರವೂರಿನಿಂದ ಬರುವವರು ತಮ್ಮ ಹುಟ್ಟಿದ ಮನೆಯ ಬಳಿಯ ಬಸ್‌ಸ್ಟಾಪ್‌ನಲ್ಲಿ ಇಳಿಯದೆ ಮತ್ತೆಲ್ಲೋ ಇಳಿದು ಪೇಚಾಡಿದ ಘಟನೆಗಳು ಅಲ್ಲಲ್ಲಿ ನಡೆದಿದ್ದವು. ಆದರೆ, ಒಂದು ರಾತ್ರಿ ಕಳೆಯುವುದರೊಳಗೆ ಗುಂಡನೇ ಭ್ರಮೆಗೊಳಗಾಗಬೇಕಾದರೆ!

        ಅಭಿವೃದ್ಧಿಯ ಮಾಯೆಗೆ ಗುಂಡ ತಲೆದೂಗಿದ. ಅವನು ಹುಟ್ಟಿದ ಹಳ್ಳಿಯಲ್ಲಿದ್ದ ಹಳೆಯ ರೋಡಿಗೆ ಡಾಮರು ಬಂದು, ಅದರ ಜೊತೆಗೆ ಬಸ್ಸು ಬಂದೂ ಊರು ಬದಲಾದ ದಿನಗಳನ್ನು ನೆನಪಿಸಿಕೊಳ್ಳತೊಡಗಿದ. ತರಕಾರಿ ಬೆಳೆದು ಮಾರುವ ಸೀತಮ್ಮ ತಲೆಯಲ್ಲಿ ಬುಟ್ಟಿ ಇಟ್ಟುಕೊಂಡು ಬರುವಾಗ, ದಾರಿಯಲ್ಲಿ ಸಿಕ್ಕವರು ಯಾರಾದರೂ "ಅಲಸಂಡೆ ಇದೆಯಾ? ಬೆಂಡೆಕಾಯಿಗೆಷ್ಟು?' ಎಂದು ಕೇಳಿದರೆ, ಮೋರೆ ತಿರುಗಿಸಿ, ನೇರವಾಗಿ ಬಸ್‌ಸ್ಟಾಪ್‌ಗೆ ಬಂದು ಬಸ್ಸು ಹತ್ತಿ ಪೇಟೆಗೆ ಹೋಗಿಬಿಡುತ್ತಿದ್ದಳು. ಹಳ್ಳಿಯವರು ಅವಳಲ್ಲಿ ತರಕಾರಿಕೊಳ್ಳಬೇಕಾದರೆ ಬಸ್ಸಿನಲ್ಲಿ ಪೇಟೆಗೇ ಹೋಗಬೇಕಾಗಿತ್ತು. ಊರಿನವರೆಲ್ಲ ಒಂದು ಲೋಟ ಚಹಾಕ್ಕಾಗಿ ಬಸ್ಸು ಹತ್ತಿ ಪಟ್ಟಣಕ್ಕೆ ಬಂದುಹೋಗುತ್ತಿದ್ದುದರಿಂದ ಹತ್ತಿಪ್ಪತ್ತು ವರ್ಷಗಳಿಂದ ಇದ್ದ ಕಾಮತ್‌ ಹೊಟೇಲ್‌ನಲ್ಲಿ ಸೊಳ್ಳೆ ಹೊಡೆಯುಂತಾಯಿತು. ಒಂದು ರಸ್ತೆ ಊರಿಗೆ ಹೊಕ್ಕರೆ ಎಷ್ಟೆಲ್ಲ ಬದಲಾವಣೆ ತರುತ್ತದೆಂದು ಅನುಭವವಿದ್ದ ಗುಂಡನಿಗೆ ಈ ಮಹಾನಗರದಲ್ಲಿ ರಸ್ತೆಬದಿಯ ಮನೆಯಲ್ಲಿ ಯಾಕೆ ವಾಸಮಾಡತೊಡಗಿದೆನೊ ಎಂದು ವಿಷಾದವಾಯಿತು. ಈ ಹಿಂದೆಲ್ಲ ಒಂದು ಡೆಡ್‌ಎಂಡ್‌ನ‌ಲ್ಲಿ ನಿಂತ ರಸ್ತೆಯನ್ನು ಮತ್ತೂ ವಿಸ್ತರಿಸಲು ಮುಂದಿರುವ ಹೊಲ, ಮನೆ, ಕೆರೆ ಎಲ್ಲವನ್ನು ಆಕ್ರಮಿಸಲಾಗುತ್ತಿತ್ತು. ಈಗ ರಸ್ತೆ ಉದ್ದುದ್ದಕ್ಕೆ ಬೆಳೆಯುವ ಸಮಸ್ಯೆಯಿಲ್ಲ... ಬೆಳೆಯುವಷ್ಟು ಬೆಳೆದಾಗಿದೆ. ಸದ್ಯಕ್ಕೆ ಅಗಲಗಲಕ್ಕೆ ಚಾಚಿಕೊಳ್ಳಲು ಹವಣಿಸುತ್ತಿದೆ. ಈ ಬೆಳವಣಿಗೆಯನ್ನು ನೋಡುತ್ತ ರಸ್ತೆಯೆಂಬುದು ಬೇತಾಳವೇ ಆಗಿರಬೇಕೆಂಬ ಭಾವನೆ ಗುಂಡನಲ್ಲಿ ಬಲವಾಗತೊಡಗಿತು.

        ಗುಂಡ, ರಸ್ತೆಯಿಂದಲೇ ಪಕ್ಕದ ಶೀನಿಯ ಮನೆಯ ಮನೆಯತ್ತ ದೃಷ್ಟಿ ಹಾಯಿಸಿದ. ಅವನ ಮುಂಬಾಗಿಲು ಮಣ್ಣಿನ ರಾಶಿಯಲ್ಲಿ ಪೂರ್ಣಮುಚ್ಚಿಹೋಗಿ ಅವನು ಮನೆಯಿಂದ ಹೊರಗೆ ಬರಲಾಗದೆ ಒದ್ದಾಡುತ್ತಿರಬಹುದೆಂಬ ಯೋಚನೆ ಮನಸ್ಸಿಗೆ ಬಂದು ಅವನಿಗಿಂತ ತಾನೇ ಉತ್ತಮ ಎಂದು ಸ್ವಲ್ಪ ಸಮಾಧಾನವಾಯಿತು. 

        ""ಈ ರಸ್ತೆ ಅಗಲೀಕರಣವಾದರೂ ಏಕೆ ಮಾಡುತ್ತಾರೋ...' ಎಂದು ನೆರೆಮನೆಯ ಪಂಡಿತರಲ್ಲಿ ಗುಂಡ ಹೇಳಿದಾಗ ಅವರು ನಕ್ಕರು.

        ""ಅಗಲೀಕರಣ ಪದ ಸರಿಯಿಲ್ಲ... ಅದು ಸಂಧಿಯೂ ಸಮಾಸವೂ ಆಗುವುದಿಲ್ಲ' ಪಂಡಿತ ಉವಾಚ.
        ""ಸಂಧಿಯಾಗುವುದಿಲ್ಲ ನಿಜ, ರಸ್ತೆ ಬದಿಯ ಮನೆಗಳ ಮಂದಿಗೆ ಸಂಧಿಗ್ಧವಾದದ್ದಂತೂ ನಿಜ' ಎಂದ ಗುಂಡ.
        ""ಮಾರ್ಗ ವಿಸ್ತಾರವಾದಾಗಲೆಲ್ಲ ದೇಸಿ ತನ್ನಿಂತಾನೇ ಮುಳುಗಿಹೋಗಬೇಕಾಗುತ್ತದೆ' ಎಂದು ಪಂಡಿತರು ಮಾರ್ಗ- ದೇಸಿಗಳ ಹಿನ್ನೆಲೆಯಲ್ಲಿ ಅರ್ಥಪೂರ್ಣವಾಗಿ ಹೇಳಿದರು. ಅವರು ಹಾಗೆ ಹೇಳುವುದಕ್ಕೆ ಎರಡು ಕಾರಣಗಳಿವೆ. ಒಂದು, ಅವರು ಪ್ರಾಚೀನ ಸಾಹಿತ್ಯದ ಬಗ್ಗೆ ಅಪಾರವಾದ ಅನುಭವವನ್ನು ಹೊಂದಿದ್ದರು.
        ಎರಡು, ಅವರ ಮನೆ ಮತ್ತು ಅಗಲೀಕರಣಗೊಳ್ಳುತ್ತಿರುವ ರಸ್ತೆಯ ನಡುವೆ ಮೂರು ಮನೆಗಳಿದ್ದು ಮಾರ್ಗವಿಸ್ತಾರದ ಬವಣೆ ಅವರಲ್ಲಿಯವರೆಗೆ ತಟ್ಟುತ್ತಿರಲಿಲ್ಲ. ಬುಲ್ಡೋಜರ್‌ ಎಬ್ಬಿಸುವ ಧೂಳು ಸೈತಾ ಮೂರು ಮನೆಗಳನ್ನು ತನ್ನ ಮನೆಯಂಗಳಕ್ಕೆ ದಾಟಿ ಬರಲಾರದೆಂದು ಪಂಡಿತರಿಗೆ ಖಾತರಿ ಇತ್ತು.

        ""ಅದಕ್ಕೇಕೆ ಚಿಂತೆ ಮಾಡ್ತೀಯಾ ಗುಂಡ ? ರಸ್ತೆ ಅಗಲವಾದರೆ ಸಾರಿಗೆ ವ್ಯವಸ್ಥೆಯಲ್ಲಿ ಪ್ರಗತಿಯಾಗಿ ನಮ್ಮ ನಗರ ಮತ್ತಷ್ಟು ಉದ್ಧಾರವಾಗುತ್ತದೆ...' ಎನ್ನುತ್ತ ಪಂಡಿತರು, "ಒಂದು ಗ್ರಾಮದ ಉದ್ಧಾರಕ್ಕಾಗಿ ಒಂದು ಮನೆಯನ್ನು ಕೆಡವಬಹುದು...' ಎಂಬ ಶ್ರುತಿವಚನವನ್ನು ಪರೋಕ್ಷವಾಗಿ ಸಮರ್ಥಿಸಿದ್ದರು.
        ಗುಂಡ ಕೇಳಿದ, ""ಈ ರಸ್ತೆ ಮುಂದೆ ಹೈದರಾಬಾದ್‌ ಮೂಲಕ , ಮುಂಬಯಿಗೆ ಹೋಗಿ, ದೆಹಲಿಗೆ ಸಂಪರ್ಕವಾಗುತ್ತದೆ ಅಂತ ಹೇಳ್ತಾರೆ... ಆಮೇಲೆ ನಮಗೆ ಸುಲಭವಾಗಿ ದೆಹಲಿಗೆ
        ಹೋಗಬಹುದಂತೆ...ಹೌದಾ ಪಂಡಿತರೆ?'

        ""ರಸ್ತೆ ಎಲ್ಲಿಗೂ ಹೋಗುವುದಿಲ್ಲ... ನಾವೇ ಹೋಗಬೇಕು ಅಷ್ಟೆ !' ಬಹಳ ಆಧ್ಯಾತ್ಮಿಕ ಪ್ರಭೆಯಲ್ಲಿ ನಕ್ಕರು. ಗುಂಡ ನಗಲಿಲ್ಲ.

        ""ಹೋಗದಿದ್ದರೆ ಬಿದ್ದುಕೊಳ್ಳಲಿ... ಈ ರಸ್ತೆ ಎಲ್ಲಿಗೆ ಕೊನೆಗೊಳ್ಳುತ್ತದೆ ಅಂತ ಹೇಳಬಹುದೆ?'
        ""ಡೆಡ್‌ ಎಂಡ್‌ನ‌ಲ್ಲಿ ! ಡೆಡ್‌ ಆದ ಕೂಡಲೇ ಎಂಡ್‌ ಆಗುತ್ತದೆ. ಮತ್ತೆ ಪಯಣ ನಿಲ್ಲುತ್ತದೆ. ರಸ್ತೆ ಎಂಬುದು ಸ್ಥಿರ... ಚಲಿಸುವ ನಾವು ಮಾತ್ರ ಚರ. ಹಾಗಾಗಿ, ದೆಹಲಿಯಲ್ಲಿ ರಸ್ತೆ ಕೊನೆಗೊಳ್ಳುವುದೆಂದು ಹೇಗೆ ಹೇಳುವುದು? ನಾವು ನಿಂತಲ್ಲಿ ರಸ್ತೆಯೂ ನಿಲ್ಲುತ್ತದೆ...'

          ಅಷ್ಟರಲ್ಲಿ ಬುಲ್ಡೋಜಾರೊಂದು ಹಗಲಿನ ಅಪರವೇಳೆಯಲ್ಲಿ "ಗೊಂಯೊ' ಎಂದು ಸದ್ದು ಮಾಡುತ್ತ ಸಾಗಿಬಂತು. ಅದರ ಸೊಂಡಿಲು ಬೀಸಾಟಕ್ಕೆ ಪಂಡಿತರು ಪಕ್ಕನೆ ಕದಲಿ ನಿಂತರು. ಗಲಿಬಿಲಿಯಲ್ಲಿ ಪ್ರಪಾತಕ್ಕೆ ಬೀಳಬಹುದಾಗಿದ್ದ ಅವರನ್ನು ಗುಂಡ ಆಧರಿಸಿ ಹೇಳಿದ, ""ನಾನು ಆಧರಿಸಿ ಹಿಡಿಯದಿರುತ್ತಿದ್ದರೆ... ರಸ್ತೆ ಇಲ್ಲಿಗೇ ಕೊನೆಗೊಳ್ಳುತ್ತಿತ್ತು!!'

        ""ರಸ್ತೆಗೆ ಬೆಂಕಿ ಬೀಳಲಿ... ನನ್ನ ಜೀವ ಹೋಗುತ್ತಿತ್ತು' ಎಂದು ಪಂಡಿತರು ಅಲ್ಲಿಯೇ ಬಿದ್ದಿದ್ದ ಮರದ ಬೊಡ್ಡೆಯ ಮೇಲೆ ಕುಳಿತರು. ಅವರ ಮುಂದೆ ಹರಡಿರುವ ರಸ್ತೆ ಶಾಂತ ಸಾಗರದಂತೆ ಮೆಲ್ಲನೆ ಅಲುಗುತ್ತಿರುವಂತೆ ತೋರಿತು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      image
      • Copyright @ 2009 Udayavani.All rights reserved.
      • Designed & Hosted By 4cplus