Udayavani | Feb 03, 2013
ಪುಸ್ತಕದಂಗಡಿಯ ಸಹವಾಸವೇ ಮಜವಾಗಿರುತ್ತದೆ. ಅಂಕಿತ ಪುಸ್ತಕ ಹೆಚ್ಚು ಕಡಿಮೆ ಪ್ರತಿವಾರವೂ ಒಂದಲ್ಲ ಒಂದು, ಒಮ್ಮೊಮ್ಮೆ ಮೂರೋ ನಾಲ್ಕೋ ಪುಸ್ತಕಗಳನ್ನು ಪ್ರಕಟಿಸುವುದರಿಂದ, ಅಲ್ಲಿಗೆ ಎಡತಾಕುವ ಲೇಖಕರನ್ನು ಕವರ್ ಸ್ಟಾರ್ ರಘು ಅಪಾರ ಅಂಕಿತ ಉಗ್ರರು ಅಂತ ತಮಾಷೆಯಾಗಿ ಕರೆದಿದ್ದರು. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಅಂಕಿತ ಪ್ರಕಾಶನದ್ದು ಸರಾಸರಿ ವಾರಕ್ಕೊಂದು ಪುಸ್ತಕವಂತೂ ಬಿಡುಗಡೆ ಆಗುತ್ತದೆ. ಸಾವಿರಾರು ಆಹ್ವಾನ ಪತ್ರಿಕೆ ಮುದ್ರಿಸಿ, ಕಿಟ್ಟಿಯ ಸ್ವಾನ್ ಮುದ್ರಣಾಲಯಕ್ಕೂ ಅಂಗಡಿಗೂ ಓಡಾಡುತ್ತ, ಸಮಾರಂಭಕ್ಕೆ ಅತಿಥಿಗಳನ್ನು ಕರೆಯುವುದಕ್ಕೆ ಹೆಣಗಾಡುತ್ತ, ರಾತ್ರಿ ನಿದ್ದೆಗೆಟ್ಟು ಪೂಫ್ ತಿದ್ದುತ್ತ¤ ಪ್ರಕಾಶ್ ಪುಸ್ತಕಗಳ ನಡುವೆಯೇ ಜೀವಿಸುವವರು. ಅವರ ಹಾಗೂ ಪ್ರಭಾ ಕಣ್ತಪ್ಪಿಸಿ ಮುದ್ರಾರಾಕ್ಷಸ ಬಚಾವಾಗುವುದು ಕಷ್ಟವಿದೆ.
ನನ್ನ ಇಪ್ಪತ್ತು ಪುಸ್ತಕಗಳನ್ನು ಅಂಕಿತ ಪ್ರಕಟಿಸುವ ಹೊತ್ತಿಗೆ ಅವರೂ ಸಾಕಷ್ಟು ಹೆ„ರಾಣಾಗಿದ್ದರು. ಎಷ್ಟೋ ಕಾದಂಬರಿಗಳ ಕೊನೆಯ ಅಧ್ಯಾಯವನ್ನು ನಾನು ಬರೆದದ್ದು ಅಂಕಿತ ಪುಸ್ತಕದ ನೆಲಮಾಳಿಗೆಯಲ್ಲೇ.
ನಾನು ಕಷ್ಟಪಟ್ಟು ನುಗ್ಗಬಹುದಾದ ಕಿರಿದಾದ ಜಾಗದಲ್ಲಿ ಕುಳಿತುಕೊಂಡು ಬರೆಯುತ್ತಿದ್ದರೆ ಜಗತ್ತೇ ಮರೆತುಹೋಗುತ್ತದೆ. ಆಗೆಲ್ಲ ನಾನು ಕೂಡ ಸಲ್ಮಾನ್ ರಶಿªà ಅನ್ನಿಸುತ್ತಿತ್ತು. ಅವನೂ ಕೂಡ ಹಾಗೇ ಬಂಧನದಲ್ಲೇ ಕೂತು ಬರೆಯುತ್ತಿದ್ದಾನೆ ಅಂದುಕೊಳ್ಳುತ್ತಿದ್ದೆ.
ನಾನು ಕಾದಂಬರಿಯ ಕೊನೆಯ ಅಧ್ಯಾಯ ಕೊಡಲು ತಡಮಾಡಿದಾಗೆಲ್ಲ ಪ್ರಕಾಶ್, ಅದನ್ನು ತಾವೇ ಬರೆದುಬಿಡುವುದಾಗಿ ಹೆದರಿಸುತ್ತಿದ್ದರು. ತಾವು ಪ್ರಕಟಿಸುವ ಬಹುತೇಕ ಪುಸ್ತಕಗಳಿಗೆ ಅವರೇ ಸಂಪಾದಕರು ಕೂಡ. ಅದನ್ನು ತಿದ್ದಿ, ಕೆಲವೊಮ್ಮೆ ಕೆಲವು ಭಾಗಗಳನ್ನು ಕೈಬಿಟ್ಟು, ಮುಖಪುಟ ಹಾಗಿರಬೇಕು, ಹೀಗಿರಬಾರದು ಅಂತ ಹೇಳುತ್ತ¤, ಪುಸ್ತಕದ ಹೆಸರು ಮೇಲ್ಭಾಗದ ಲ್ಲಿರಲಿ, ಕತೆಗಾರನ ಹೆಸರು ಇಂಥ ಜಾಗದಲ್ಲೇ ಬರಬೇಕು ಅಂತ ಮುಖಪುಟ ವಿನ್ಯಾಸ ಮಾಡುವವರ ದ್ವೇಷ ಕಟ್ಟಿಕೊಳ್ಳುತ್ತ¤, ಆಗೊಮ್ಮೆ ಈಗೊಮ್ಮೆ ಲೇಖಕರನ್ನು ಅಂಗಡಿಗೇ ಕರೆಸಿ, ಅವರೊಂದಿಗೆ ಸಂವಾದ ಇಟ್ಟುಕೊಳ್ಳುತ್ತಾ ಪ್ರಕಾಶ್ ಕೂಡ ಗ್ರಂಥಸ್ಥರಾಗಿದ್ದಾರೆ. ಗ್ರಂಥಿಗೆ ಅಂಗಡಿ ಪ್ರಸಿದ್ಧವಾಗಿರುವ ಜಾಗದಲ್ಲಿ ಗ್ರಂಥ ಮಾರುವುದು ಕಷ್ಟವೇ. ಪ್ರಕಾಶ್ ಪಠ್ಯಪುಸ್ತಕಗಳನ್ನು ಮಾರುವುದಿಲ್ಲ. ಟಾಪ್ ಟೆನ್ ಪಟ್ಟಿಯಲ್ಲಿ ಅವರ ಪ್ರಕಾಶನದ ಪುಸ್ತಕಗಳನ್ನು ಒಂದು ಸಲಕ್ಕಿಂತ ಹೆಚ್ಚು ಹಾಕುವುದಿಲ್ಲ. ಪುಸ್ತಕ ಪ್ರಕಟವಾದ ದಿನವೇ ಲೇಖಕರಿಗೆ ಪ್ರತಿಗಳನ್ನೂ ಸಂಭಾವನೆಯನ್ನೂ ಕೊಡುತ್ತಾರೆ.
ಅವರ ಬಳಿ ಕನ್ನಡದ ಬಹುತೇಕ ಲೇಖಕರ ದಂತಕತೆಗಳಿವೆ, ಸ್ವಾರಸ್ಯಕರ ಪ್ರಸಂಗಗಳಿವೆ. ಅವನ್ನು ಬರೆದರೂ ಸಾಕು, ಸಾಹಿತ್ಯ ಜಗತ್ತಿನಲ್ಲಿ ಕ್ರಾಂತಿಯಾಗುತ್ತದೆ. ನನ್ನ ಪುಸ್ತಕ ಯಾಕೆ ಪ್ರಕಟಿಸುವುದಿಲ್ಲ ಎಂದು ಸಿಟ್ಟಾದವರು, ಕಾಯಿಸುತ್ತೀರಿ ಎಂದು ಬೇಸರ ಮಾಡಿಕೊಳ್ಳು ವವರು, ಹಸ್ತಪ್ರತಿ ತಂದುಕೊಟ್ಟು ಮರು ಮಾತಾಡದೇ ವರ್ಷಗಟ್ಟಲೆ ಕಾಯುತ್ತ ಕೂರುವವರು, ನಿಮ್ಮ ಪುಸ್ತಕ ಎರಡನೇ ಮುದ್ರಣ ಕಂಡಿತು ಎಂದು ತಾವಾಗಿಯೇ ಕರೆದು ದುಡ್ಡು ಕೊಟ್ಟಾಗ ಬೆರಗಾಗು ವವರು-ಹೀಗೆ ಥರಾವರಿ ಮಂದಿಯನ್ನು ಅವರು ನೋಡಿದ್ದಾರೆ. ಇತ್ತೀಚೆಗೆ ಯು. ಆರ್. ಅನಂತಮೂರ್ತಿ ಅವರ ಮನೆಗೆ ಹೋಗಿ ಪ್ರಕಾಶ್ ಐವತ್ತು ಸಾವಿರದ ಚೆಕ್ ಕೊಟ್ಟು ಬಂದರಂತೆ. ಅನಂತಮೂರ್ತಿ ಅವರಿಗೆ ಅದು ಅನಿರೀಕ್ಷಿತವಾಗಿತ್ತು. ನನ್ನ ಪುಸ್ತಕಗಳೂ ಚೆನ್ನಾಗಿ ಮಾರಾಟ ಆಗ್ತವೆ ಅಂತ ಗೊತ್ತಾಯ್ತು ಅಂತ ಅನಂತಮೂರ್ತಿ ಸಂಭ್ರಮದಿಂದ ಹೇಳಿಕೊಂಡಿದ್ದರು.
ನನ್ನ ಪುಸ್ತಕಗಳು ಪ್ರಕಟವಾಗತೊಡಗಿದ ನಂತರ ನಾನು ಗುಪ್ತವಾಗಿ ಅಂಕಿತ ಪುಸ್ತಕದಂಗಡಿಗೆ ಹೋಗಿ, ಮರೆಯಲ್ಲಿ ನಿಂತುಕೊಂಡು ಯಾರಾದರೂ ನನ್ನ ಪುಸ್ತಕಗಳನ್ನು ಕೊಳ್ಳುತ್ತಾರೋ ಎಂದು ಗಮನಿಸುತ್ತಿದ್ದೆ. ಪ್ರತಿ ಗಿರಾಕಿ ಬಂದಾಗಲೂ ಆತ ನನ್ನ ಪುಸ್ತಕ ಕೇಳುತ್ತಾನೆ ಅಂತ ಕಾಯುತ್ತಿದ್ದೆ. ಹೆಚ್ಚಿನವರು ಲಕ್ಷಿ$¾àಸಹಸ್ರನಾಮ, ಜಾತಕಫಲ ಕೊಳ್ಳಲು ಬರುತ್ತಿದ್ದರು. ನಾನು ಹೆಸರೇ ಕೇಳಿರದ ಎಷ್ಟೋ ಪುಸ್ತಕಗಳನ್ನು ಎಷ್ಟೋ ಮಂದಿ ಕೊಳ್ಳುತ್ತಿದ್ದರು. ಪಠ್ಯ ಪುಸ್ತಕಗಳು, ನೋಟ್ ಬುಕ್ಕುಗಳು, ಮ್ಯಾಪುಗಳು, ಮಕ್ಕಳ ಪುಸ್ತಕಗಳು, ಸೋಬಾನೆ ಹಾಡುಗಳು-ಹೀಗೆ ನಾವೆಲ್ಲ ಯಾವತ್ತೂ ಓದದ ಪುಸ್ತಕಗಳು ಮಾರಾಟವಾಗುವುದನ್ನು ನೋಡಿದ ನಂತರ ನನ್ನ ಭ್ರಮೆ ಇಳಿಯಿತೆಂದೇ ಹೇಳಬೇಕು.
ಒಮ್ಮೆ ನನಗಿಂತ ದಪ್ಪ ಎತ್ತರ ಇರುವವರೊಬ್ಬರು ಬಂದು, ಟೇಬಲ್ ಮೇಲಿಟ್ಟಿದ್ದ ನನ್ನ ಪುಸ್ತಕವನ್ನು ಎತ್ತಿಕೊಂಡರು. ಅದನ್ನು ಅವರು ಕೊಂಡುಕೊಳ್ಳುತ್ತಾರೆ ಎಂದು ನಾನು ಖುಷಿಯಾದೆ. ಅವರು ಆ ಪುಸ್ತಕವನ್ನು ಎತ್ತಿ ತೋರಿಸುತ್ತ ಬರೀ ಇಂಥ ಪುಸ್ತಕಾನೇನಾ ನೀವು ಮಾರೋದು ಅಂತ ಕೇಳಿದರು. ಅವರಿಗೆಂಥ ಪುಸ್ತಕ ಬೇಕು ಅನ್ನುವುದು ಕೊನೆಗೂ ನನಗೆ ಅರ್ಥವಾಗಿರಲಿಲ್ಲ.
ನನ್ನ ಪುಸ್ತಕಗಳ ಕುರಿತು ಯಾರೇನು ಹೇಳುತ್ತಾರೆ ಅನ್ನುವುದು ಗೊತ್ತಾಗಿದ್ದೂ ಪ್ರಕಾಶ್ ಅವರಿಂದಲೇ. ಹಿರಿಯರೊಬ್ಬರು ನಾನು ನೂರು ಪುಟಗಳ ಪುಸ್ತಕ ಬರೆದಾಗ ಸಿಟ್ಟಾಗಿ, ನನಗೆ ಫುಲ್ ಮೀಲ್ಸ್ ಬೇಕೂಂತ ಹೇಳಿÅà, ಈ ಪ್ಲೇಟ್ ಮೀಲ್ ಬೇಕಾಗಿಲ್ಲ ಅಂದಿದ್ದರಂತೆ. ಹಾಗೇ, ಆ ಲೇಖಕರ ಪುಸ್ತಕ ಚೆನ್ನಾಗಿಲ್ಲ, ಇವರದು ಚೆನ್ನಾಗಿದೆ, ಅದನ್ಯಾಕೆ ಪ್ರಿಂಟ್ ಮಾಡ್ತೀರಿ, ಇದ್ಯಾಕೆ ಬೇಕಿತ್ತು ಅಂತೆಲ್ಲ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಓದುಗರಿದ್ದಾರೆ. ಪ್ರಕಾಶ್ ಅವರನ್ನೆಲ್ಲ ನಿಭಾಯಿಸುವ ರೀತಿಯೇ ಆಶ್ಚರ್ಯಕರ.
ಪುಸ್ತಕದ ಅಂಗಡಿಗಳಿಗೆ ಕಷ್ಟಕಾಲ ಬಂದಿದೆ. ಇಂಗ್ಲಿಷ್ ಪುಸ್ತಕಗ ಳಂತೂ ಮಾರಾಟ ಆಗುವುದೇ ಇಲ್ಲ. ಎಲ್ಲರೂ ಆನ್ಲŒ„ನ್ ಮೊರೆ ಹೋಗು ತ್ತಾರೆ. ಕನ್ನಡ ಓದುವವರು ಕಡಿಮೆ ಆಗುತ್ತಿದ್ದಾರೆ. ಇನ್ನೊಂದು ಮೂರೋ ನಾಲ್ಕೋ ವರುಷ ಮಾತ್ರ ನಾವೂ ಈ ವೃತ್ತಿಯಲ್ಲಿ ಮುಂದುವರಿಯಬಹುದು. ಹೊಸ ಹುಡುಗರಿಗೆ ಕನ್ನಡವೇ ಗೊತ್ತಿಲ್ಲ ಅನ್ನುತ್ತಾರೆ ಪ್ರಕಾಶ್. ಹಾಗಂತ ಅವರು ಪುಸ್ತಕದಂಗಡಿಯಲ್ಲಿ ಗ್ರೀಟಿಂಗ್ ಕಾರ್ಡು, ಪಠ್ಯಪುಸ್ತಕ, ಸ್ಟೇಷನರಿ ಇಡುವುದಿಲ್ಲ. ಅದು ಕೇವಲ ಪುಸ್ತಕದ ಅಂಗಡಿ ಮಾತ್ರ. ಪುಸ್ತಕ ಕೊಂಡವರಿಗೆ ಚೆಂದದ ಬುಕ್ ಮಾರ್ಕರ್ ಕೂಡ ಕೊಡುತ್ತಾರೆ ಅವರು.
ಈ ಪುಟ್ಟ ಟಿಪ್ಪಣಿಗೆ ಕಾರಣ ಇಷ್ಟೆ. ಇದೀಗ ಅಂಕಿತ ಪುಸ್ತಕ ಪ್ರಕಟಿಸಿದ ಪುಸ್ತಕಗಳ ಸಂಖ್ಯೆ ಐನೂರು. ಐನೂರು ಪುಸ್ತಕಗಳನ್ನು, ಅದರಲ್ಲೂ ಓದಬಲ್ಲ, ಸಾಹಿತ್ಯ ಪ್ರೀತಿಯ ಪುಸ್ತಕಗಳನ್ನು ಪ್ರಕಟಿಸುವುದು ಸಣ್ಣ ಕೆಲಸ ಅಲ್ಲ. ಐನೂರು ಪುಸ್ತಕಗಳನ್ನು ಪ್ರಕಟಿಸಿದ ಅನೇಕ ಪ್ರಕಾಶನ ಸಂಸ್ಥೆಗಳು ಇರಬಹುದು. ಆದರೆ ಪ್ರತಿಯೊಂದು ಪುಸ್ತಕವನ್ನೂ ಓದಿ, ತಾವೇ ಅದರ ಅಚ್ಚಿನ ದೋಷಗಳನ್ನು ತಿದ್ದಿ, ಮುಖಪುಟ ಹೀಗಿರಲಿ ಎಂದು ಸಲಹೆ ಕೊಟ್ಟು, ಶೀರ್ಷಿಕೆ ಬದಲಾಯಿಸಿ, ಅತಿಥಿಗಳನ್ನು ಕರೆದು ಪುಸ್ತಕ ಬಿಡುಗಡೆ ಮಾಡಿ...
ಅದು ಸುಲಭದ ಕೆಲಸ ಅಲ್ಲ. ಅದಕ್ಕೆ ಪುಸ್ತಕ ಪ್ರೀತಿಯೂ ಬೇಕಾಗುತ್ತದೆ. ಇವತ್ತು ಲೇಖಕರು, ಹೊಸ ಬರಹಗಾರರು ಒಂದು ಪುಸ್ತಕವಾದರೂ ಅಂಕಿತದಿಂದ ಬರಲಿ ಅಂತ ಆಶೆಪಡುವುದಕ್ಕೆ ಕಾರಣ ಈ ಅಚ್ಚುಕಟ್ಟುತನ ಮತ್ತು ಪುಸ್ತಕ ಪ್ರೀತಿಯೇ.
ಕಂಬತ್ತಳ್ಳಿ ದಂಪತಿಗೆ ಅಭಿನಂದನೆ.