Thursday, May 23, 2013
Last Updated: 1:03:06 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಒಂದು ವಿಶ್ವವಿದ್ಯಾನಿಲಯದ ಹೆಸರಿನ ಸುತ್ತಮುತ್ತ
    • ಒಂದು ವಿಶ್ವವಿದ್ಯಾನಿಲಯದ ಹೆಸರಿನ ಸುತ್ತಮುತ್ತ

      • ರಾಜಾರಾಮ ಹೆಗಡೆ | Feb 03, 2013

        ಇಂದು ಕರ್ನಾಟಕದಲ್ಲಿ ಚರ್ಚೆಗೊಳಗಾದ ಒಂದು ವಿಷಯವೆಂದರೆ ಶ್ರೀರಂಗಪಟ್ಟಣದಲ್ಲಿ ಸ್ಥಾಪಿತವಾಗುವ ಇಸ್ಲಾಂ ವಿಶ್ವವಿದ್ಯಾಲಯಕ್ಕೆ ಟಿಪ್ಪು ಸುಲ್ತಾನನ ಹೆಸರಿಡಬೇಕೊ ಬೇಡವೊ ಎಂಬುದು.
        ವಿಶ್ವವಿದ್ಯಾಲಯಗಳಿಗೆ ಹೆಸರಿಡುವ ಕುರಿತು ನಮ್ಮ ಬುದ್ಧಿಜೀವಿಗಳು ಬಹಳ ತಲೆಕೆಡಿಸಿಕೊಂಡಿದ್ದಾರೆ. ಟಿಪ್ಪು ಒಬ್ಬ ಮುಸ್ಲಿಂ ಮತಾಂಧ ರಾಜನಾದುದರಿಂದ ಅವನ ಬದಲು ಸಂತ ಶಿಶುನಾಳ ಶರೀಫ‌ರ ಹೆಸರನ್ನು ಇಡಬೇಕೆಂಬುದಾಗಿ ಚಿದಾನಂದ ಮೂರ್ತಿಯವರು ಆಗ್ರಹಿಸಿದ್ದಾರೆ. ಟಿಪ್ಪು ವಸಾಹತು ಸರ್ಕಾರದ ವಿರುದ್ಧ ಹೋರಾಡಿದ ಕರ್ನಾಟಕದ ಹೆಮ್ಮೆಯ ಪುತ್ರ, ಹಾಗಾಗಿ ಅವನ ಹೆಸರನ್ನೇ ಇಡಬೇಕೆಂಬುದಾಗಿ ಸೆಕ್ಯುಲರ್‌ ಬುದ್ಧಿಜೀವಿಗಳು ಒತ್ತಾಯ ತರುತ್ತಿದ್ದಾರೆ.

        ಇದು ಒಂದು ಐತಿಹಾಸಿಕ ವಿವಾದ. ಒಂದೇ ವಿಶ್ವವಿದ್ಯಾಲಯಕ್ಕೆ ಎರಡು ಅಥವಾ ಹೆಚ್ಚು ಹೆಸರುಗಳು ಬಂದಾಗ ಕದನದ ವಾತಾವರಣ ಹುಟ್ಟುವುದು ಸಾಮಾನ್ಯ. ಅದು ಐತಿಹಾಸಿಕ ಪುರುಷರ ಕದನವೇ ಆಗಿ, ಇತಿಹಾಸದ ಸಮಸ್ಯೆಯಾಗಿ ಮಾರ್ಪಡುತ್ತದೆ. ಈ ಹೆಸರುಗಳು ಕೇವಲ ಹೆಸರುಗಳಾಗಿರದೇ ಈಗ ಇರುವ ಸಮುದಾಯಗಳ ಅಥವಾ ಐಡಿಯಾಲಜಿ ಗಳ ಪ್ರತಿಷ್ಠೆಯ ಸಂಕೇತಗಳಾಗಿರುವುದರಿಂದ ಆಯಾ ಗುಂಪುಗಳು ಇಂಥ ಹೋರಾಟವನ್ನು ನಡೆಸುತ್ತವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

        ಸಿದ್ಧಾಂತಗಳ ಕಾರಣಗಳಿಗಾಗಿ ಕೂಡ ಹೊಸ ವಿಶ್ವವಿದ್ಯಾಲಯಗಳು ವಿವಾದಕ್ಕೆ ಗ್ರಾಸವಾಗುತ್ತವೆ. ಸಂಸ್ಕೃತ ವಿಶ್ವವಿದ್ಯಾಲಯವನ್ನು ಸುತಾರಾಂ ತೆರೆಯಬಾರದೆಂದು ಪ್ರಗತಿಪರರೆಲ್ಲ ಹಟಹಿಡಿದಿದ್ದರು. ಅದು ಬ್ರಾಹ್ಮಣ ಪುರೋಹಿತಶಾಹಿಯನ್ನು ಗಟ್ಟಿ ಮಾಡುವುದರ ಮೂಲಕ ಜಾತಿ ವ್ಯವಸ್ಥೆ ಹಾಗೂ ಅದರ ಅನಿಷ್ಠಗಳೆಲ್ಲಕ್ಕೂ ಪೋತ್ಸಾಹ ನೀಡುತ್ತದೆ ಎಂಬುದು ಅವರ ಇಂಗಿತ. ಅಲ್ಪಸಂಖ್ಯಾಕರ ವಿಶ್ವವಿದ್ಯಾಲಯವನ್ನು ತೆರೆದರೆ ಸೆಕ್ಯುಲರ್‌ ಆದರ್ಶ ಈಡೇರುತ್ತ‌ದೆಯಾದ್ದರಿಂದ ಅದನ್ನು ಅವರೆಲ್ಲ ಸ್ವಾಗತಿಸುತ್ತಾರೆ. ಆದರೆ, ಶ್ರೀರಂಗಪಟ್ಟಣದ ಅಲ್ಪಸಂಖ್ಯಾಕರ ವಿಶ್ವವಿದ್ಯಾಲಯವನ್ನು ತೆರೆಯುವುದಕ್ಕೆ ತನ್ನ ವಿರೋಧವಿದೆಯೆಂಬುದಾಗಿ ಬಿಜೆಪಿ ಹೇಳಿಕೆ ನೀಡಿದೆ, ಅದು ಅಲ್ಪಸಂಖ್ಯಾಕರ ಪ್ರತ್ಯೇಕತೆಯನ್ನು ಪ್ರೋತ್ಸಾಹಿಸುವುದರಿಂದ ಸೆಕ್ಯುಲರಿಸಂಗೆ ಧಕ್ಕೆ ತರುತ್ತದೆ ಎಂಬುದು ಅವರ ಆಕ್ಷೇಪ.

        ಇಂಥ ವಿವಾದಗಳಲ್ಲಿ ಯಾರು ಸರಿ ಯಾರು ತಪ್ಪು$ಎಂಬುದನ್ನು ಇತ್ಯರ್ಥ ಮಾಡಲಿಕ್ಕೆ ನಿಂತಿರೊ,  ದಾರಿ ತಪ್ಪಿದಿರಿ ಅಂತಲೇ ಅರ್ಥ. ಇಂಥ ವಿವಾದಗಳೆಲ್ಲ ಇತ್ತೀಚೆಗೆ ಪದೇಪದೇ ಏಳುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ ಹೊಸ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ. ವಿಶ್ವವಿದ್ಯಾಲಯಗಳ ಸಂಖ್ಯೆಯನ್ನು ಏಕೆ ಹೆಚ್ಚಿಸಬೇಕೆಂದರೆ ನಮ್ಮ ದೇಶವು ಉನ್ನತ ಶಿಕ್ಷಣದಲ್ಲಿ ಜಗತ್ತಿನ ರಾಷ್ಟ್ರಗಳ ಪಟ್ಟಿಯಲ್ಲಿ ಬಹಳ ಹಿಂದೆ ಬಿದ್ದಿದೆ. ಉಳಿದ ಅನೇಕ ದೇಶಗಳ ಜನಸಂಖ್ಯೆಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಇನ್ನೂ ಬಹಳ ವಿಶ್ವವಿದ್ಯಾಲಯಗಳನ್ನು ತೆರೆಯಬೇಕು ಎಂಬುದು ಸರ್ಕಾರದ ಶಿಕ್ಷಣ ತಜ್ಞರ ಅಭಿಪ್ರಾಯ. ನಮ್ಮಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳು, ರಾಜ್ಯದ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವ ವಿದ್ಯಾಲಯಗಳು ಎಂಬ ಪ್ರಕಾರಗಳಿವೆ. ಅವೆಲ್ಲವುಗಳ ಸಂಖ್ಯೆಯೂ ಕಳೆದ ಹತ್ತು ವರ್ಷಗಳಲ್ಲಿ ಗಣನೀಯವಾಗಿ ಏರಿದೆ.

        ಅಂದರೆ ಹೊಸ ವಿಶ್ವವಿದ್ಯಾಲಯಗಳನ್ನು ತೆರೆಯುವಾಗ ಉನ್ನತ ಶಿಕ್ಷಣಕ್ಕೂ ಒಂದು ಸಮಾಜದ ಅಭಿವೃದ್ಧಿಗೂ ಒಂದು ಮೂಲಭೂತವಾದ ಸಂಬಂಧವನ್ನು ಭಾವಿಸಿಕೊಳ್ಳಲಾಗಿದೆ. ಒಂದು ದೇಶದ ಎಷ್ಟು ಶೇಕಡಾವಾರು ಜನರು ಉನ್ನತ ಶಿಕ್ಷಣ ಪಡೆಯುತ್ತಾರೆ ಎಂಬುದರ ಮೇಲೆ ಅದು ಎಷ್ಟು ಅಭಿವೃದ್ಧಿ ಹೊಂದಿದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಈ ಅಭಿವೃದ್ಧಿಗೂ ಶಿಕ್ಷಣಕ್ಕೂ ಕಲ್ಪಿಸಲಾಗಿರುವ ಸಂಬಂಧ ಎಷ್ಟರ ಮಟ್ಟಿಗೆ ಸರಿ? ಎನ್ನುವ ಗೋಜಲನ್ನು ಸದ್ಯಕ್ಕೆ ಪಕ್ಕಕ್ಕಿಡೋಣ. ಉನ್ನತ ಶಿಕ್ಷಣ ಕಾರ್ಯಕ್ರಮವನ್ನು ಸಾಮಾಜಿಕ ಅಭಿವೃದ್ಧಿಯ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ ಎಂಬ ತಿರುಳಷ್ಟೇ ಸದ್ಯಕ್ಕೆ ನಮಗೆ ಸಾಕು. ಆದರೆ ಈ ಉದ್ದೇಶಕ್ಕೂ ಈಗ ವಿಶ್ವವಿದ್ಯಾಲಯಗಳ ಸ್ಥಾಪನೆ ಹಾಗೂ ಅವುಗಳ ಕುರಿತು ಇರುವ ವಿವಾದಗಳಿಗೂ ಏನಾದರೂ ಸಂಬಂಧವಿದೆಯೆ ಎಂಬುದನ್ನು ಗಮನಿಸೋಣ.

          ವಿಶ್ವವಿದ್ಯಾಲಯದ ಸ್ಥಾಪನೆಗೆ ಏನೇನು ಕಾರಣಗಳನ್ನು ನಮ್ಮ ಜನರು ಗುರುತಿಸುತ್ತಾರೆ? ಸಂಯೋಜಿತ ಕಾಲೇಜುಗಳ ಸಂಖ್ಯೆ ಸಾಕಷ್ಟಿರಬೇಕು, ಜಾಸ್ತಿಯಾದರೆ ಎರಡು ಮಾಡಬಹುದು. ಹಳೆಯ ವಿಶ್ವವಿದ್ಯಾಲಯಗಳ  ಸ್ನಾತಕೋತ್ತರ ಕೇಂದ್ರಗಳು ಕಾಲಾಂತರದಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯಗಳಾಗಲಿಕ್ಕೆ ಪ್ರಾದೇಶಿಕ ಒತ್ತಡಗಳು ಇರುತ್ತವೆ.     ಕಳೆದ ಕೆಲವು ವರ್ಷಗಳಿಂದ  ಅನೇಕ ಸರ್ಕಾರಿ ಕಾಲೇಜುಗಳಿಗೆ ಸ್ನಾತಕೋತ್ತರ ವಿಭಾಗಗಳನ್ನು ಮಂಜೂರು ಮಾಡಿ ಪ್ರಾರಂಭಿಸಲಾಗಿದೆ.
        ಕಾರಣವೆಂದರೆ, ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಶಿಕ್ಷಣ ಸಿಗಬೇಕು ಎಂಬುದು. ಆದರೆ ಸ‌ಮರ್ಪಕ ಶಿಕ್ಷಕರಿದ್ದಾರೆಯೆ? ಸವಲತ್ತುಗಳಿವೆಯೆ? ಎಂಬ ಯಾವ ಕಾಳಜಿಗಳೂ ಮಹತ್ವಪಡೆದಂತೆ ಕಾಣುವುದಿಲ್ಲ.
        ಇಂದು ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ತುಂಬದೇ ಬೋಧನಾ ಕಾರ್ಯವು ಬಹುತೇಕ ಅತಿಥಿ ಉಪನ್ಯಾಸಕರ ಮೇಲೆ ನಿಲ್ಲುವಂತಾಗಿದೆ. ಸಮರ್ಥ ಬೋಧಕರು ನೇಮಕವಾಗುತ್ತಿಲ್ಲ. ಈ ಸಂಗತಿಯ ಕುರಿತು ಎಲ್ಲೂ ಚರ್ಚೆಗಳೆದ್ದಿಲ್ಲ.

        ಸಂಗೀತ, ಜಾನಪದ, ಸಂಸ್ಕೃತ ಇತ್ಯಾದಿ ಪ್ರತ್ಯೇಕ ವಿಷಯಗಳ ಅಭಿವೃದ್ಧಿಗೆ ವಿಶ್ವವಿದ್ಯಾಲಯಗಳಾಗಿವೆ. ಪ್ರಾದೇಶಿಕ ಭಾಷೆಯ ಅಭಿವೃದ್ಧಿಗೆ ಕನ್ನಡ, ತೆಲುಗು, ಇತ್ಯಾದಿ ವಿಶ್ವವಿದ್ಯಾಲಯಗಳಾಗಿವೆ. ಮಹಿಳೆಯರ ಪ್ರಾತಿನಿಧ್ಯಕ್ಕೆ, ಅಲ್ಪಸಂಖ್ಯಾತರ ಪ್ರಾತಿನಿಧ್ಯಕ್ಕೆ, ಇತ್ಯಾದಿ ಕಾರಣಗಳಿಗಾಗಿಯೂ ಅವು ಸ್ಥಾಪನೆಯಾಗಿವೆ. ಸ್ಥಾಪನೆಯಾದ ನಂತರ ಇಂಥ ವಿಶ್ವವಿದ್ಯಾಲಯಗಳು  ತಮ್ಮ ಉದ್ದೇಶವನ್ನು ಈಡೇರಿಸಲಿಕ್ಕೆ ಹೇಗೆ ಹೆಜ್ಜೆಯಿಡಬೇಕೆಂಬುದು ಸ್ಪಷ್ಟವಿಲ್ಲ. ಅದೇ ಎಂ.ಎ., ಎಂ.ಫಿಲ್‌. ಪಿಎಚ್‌ಡಿ, ಡಿ.ಲಿಟ್‌ ಕೋರ್ಸು ಗಳು.
        ಅದರಲ್ಲೂ, ವಿಷಯಗಳು ಈಗ ಇರುವ ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇತ್ಯಾದಿಗಳೇ. ಅವುಗಳ ಪಾಠಕ್ರಮಗಳೂ ಏನೂ ಬದಲಾವಣೆ ಇರುವುದಿಲ್ಲ. ಮಹಿಳೆ, ಅಲ್ಪಸಂಖ್ಯಾತ, ಪ್ರಾದೇಶಿಕತೆ ಇತ್ಯಾದಿ ಪ್ರಭೇದಗಳೇನೂ ಅವುಗಳ ಮೇಲೆ ಪರಿಣಾಮ ಬೀರಿದಂತಿರುವುದಿಲ್ಲ. ಇಂಥ ಯಾವ ವಿಶ್ವವಿದ್ಯಾಲಯಗಳೂ ತಮ್ಮ ವಿಶೇಷ ಕ್ಷೇತ್ರಕ್ಕೆ ಸಂಬಂಧಿಸಿದಂತೆ  ಚಾಲ್ತಿಯಲ್ಲಿರುವ ಸಿದ್ಧಾಂತಗಳನ್ನು ಪುನರುತ್ಪಾದಿಸುವುದನ್ನು ಬಿಟ್ಟು ಹೊಸ ಸಿದ್ಧಾಂತಗಳನ್ನು ಬೆಳೆಸಿದ ಸುದ್ದಿಯಿಲ್ಲ, ಅವು ಚರ್ಚೆಗೂ ಬಂದಿಲ್ಲ.
        ನಮ್ಮ ವಿಶ್ವವಿದ್ಯಾಲಯಗಳ ಸುಧಾರಣೆಗೆ ಸಂಬಂಧಿಸಿದಂತೆ ಸರ್ಕಾರದ ಶಾಸನಗಳು ಯಾವುದನ್ನು ಮಹತ್ವವೆಂದು ಪರಿಗಣಿಸಿವೆ?

        ಇತ್ತೀಚೆಗೆ ಕುಲಪತಿಗಳ ಕನಿಷ್ಠ ವಯಸ್ಸನ್ನು , ನಿವೃತ್ತಿ ವಯಸ್ಸನ್ನು ತಿದ್ದುಪಡಿಮಾಡುವ ಮಸೂದೆಗಳು ಚರ್ಚೆಯಲ್ಲಿವೆ. 90ರ ದಶಕದಲ್ಲಿ ದೊಡ್ಡದೊಂದು ತಿದ್ದುಪಡಿಯಾಗಿ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕದಿಂದ ಹಿಡಿದು, ಸೆನೆಟ್‌ಗಳನ್ನು ರದ್ದುಮಾಡುವವರೆಗೆ ವಿಶ್ವವಿದ್ಯಾಲಯದ ಆಡಳಿತದ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರಲಾಯಿತು. ಅವುಗಳನ್ನು ನಿರ್ವಹಿಸುವ ಸಲುವಾಗಿ ಆದಷ್ಟೂ ತಮ್ಮ ಸಂಪನ್ಮೂಲಗಳನ್ನು ತಾವೇ ಯೋಜಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಲಾಗಿದೆ. ಹಾಗಾ‌ಗಿ ನಮ್ಮ ಬಹಳಷ್ಟು ವಿಶ್ವವಿದ್ಯಾಲಯಗಳು ದೂರ ಶಿಕ್ಷಣ ವಿಭಾಗಗಳನ್ನು ತೆರೆದವು. ಇತ್ತೀಚೆಗೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೂ ಸಾಮಾನ್ಯ ಪ್ರವೇಶ, ಸಾಮಾನ್ಯ ಪಠ್ಯ ಇತ್ಯಾದಿಗಳನ್ನು ಅಳವಡಿಸಿ ಈಗ ಇರುವ  ಗೊಂದಲಗಳನ್ನು ಪರಿಹರಿಸುವ ಪ್ರಯತ್ನಗಳೂ ನಡೆದವುಇನ್ನು ನಮ್ಮ ವಿಶ್ವದ್ಯಾಲಯಗಳ ಕುರಿತು ಸಾರ್ವಜನಿಕರ ಹಿತಾಸಕ್ತಿ ಯಾವ ಸ್ವರೂಪದಲ್ಲಿ ವ್ಯಕ್ತವಾಗುತ್ತದೆ ಎನ್ನುವುದನ್ನು ಗಮನಿಸಿ.
        ವಿಶ್ವವಿದ್ಯಾಲಯದ ಕುಲಪತಿಗಳು ಯಾವ ಕೋಮಿನವರಾಗಬೇಕು ಎಂಬುದಷ್ಟೇ ಮುಂದಾಳುಗಳ ಆಶೋತ್ತರಗಳೆಂಬಂತೆ ಕಾಣಿಸುತ್ತದೆ. ವಿಶ್ವವಿದ್ಯಾಲಯಗಳ ಶುಲ್ಕಗಳನ್ನು ಹೆಚ್ಚಿಸಿರುವ ಕುರಿತು ಕೆಲವು ವಿದ್ಯಾರ್ಥಿ ಸಂಘಟನೆಗಳು ಹೋರಾಡುತ್ತಿವೆ. ದಲಿತ ಹಿಂದುಳಿಗ ವರ್ಗಗಳ ಹೋರಾಟಗಾರರು ಮೀಸಲಾತಿಯನ್ನು ಸರಿಯಾಗಿ ಪಾಲಿಸಿಲ್ಲ ಎಂಬ ಕುರಿತೇ ಗಮನವಿಟ್ಟಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಾಗ ಸಂಬಂಧಪಟ್ಟವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಮಹಿಳಾ ಸಂಘಟನೆಗಳು ಜಾಗೃತವಾಗಿವೆ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಎಡ ಅಥವಾ ಬಲ ಪಂಥೀಯ ಐಡಿಯಾಲಜಿಗಳು ಮೇಲುಗೈ ಸಾಧಿಸಿವೆ ಎಂಬುದಾಗಿ  ಬಲ ಅಥವಾ ಎಡ ಪಂಥೀಯರು ತಕರಾರು ಎತ್ತುತ್ತಾರೆ.

        ಇಂಥ ನಿರಂತರ ಚರ್ಚೆಗಳು ವಿಶ್ವವಿದ್ಯಾಲಯಗಳ ಗುಣಮಟ್ಟದ ಮೇಲೆ ಏನಾದರೂ ಪರಿಣಾಮ ಬೀರುತ್ತಿವೆಯೆ? ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವ ಯಾವ ಸಮಸ್ಯೆಗಳನ್ನು ತಜ್ಞರು ಗುರುತಿಸುತ್ತಾರೆ ಎಂಬುದನ್ನು ನೋಡೋಣ: ಇಂದಿನ ವಿದ್ಯಾರ್ಥಿಗಳಿಗೆ ಸಂಶೋಧನೆಯು ಕಟ್ಟಕಡೆಯ ಆಯ್ಕೆ. ಅದರಲ್ಲೂ ಸಮಾಜ ವಿಜಾnನಗಳು ಮತ್ತೂ ಕೊನೆಗೆ ಬರುತ್ತವೆ. ಇಂಥ ಪರಿಸ್ಥಿತಿಯಲ್ಲಿ ಸಮಾಜದ ಕುರಿತ ಸಂಶೋಧನೆ ಪಾತಾಳವನ್ನು ಮುಟ್ಟಿದೆ. ಬೋಧಕರ ಗುಣಮಟ್ಟ ಕುಸಿದಿದೆ. ಸಮಾಜವಿಜಾnನ ಹಾಗೂ ಮಾನವಿಕ ವಿಭಾಗಗಳಲ್ಲಿ ಹಿಂದಿನ ವಿದ್ವತ್ತು ಕಣ್ಮರೆಯಾಗುತ್ತಿದೆ. ಬೋಧನೆ ಹಾಗೂ ಸಂಶೋಧನೆಗಳು ವಿಧಿಯಾಚರಣೆಗಳ ಸ್ವರೂಪವನ್ನು ಪಡೆದುಕೊಳ್ಳುತ್ತಿವೆ. ಉನ್ನತ ಶಿಕ್ಷಣದಲ್ಲಿ ವರ್ಷದಿಂದ ವರ್ಷಕ್ಕೆ ಆಗುತ್ತಿರುವ ಪತನವನ್ನು ಯುಜಿಸಿ ಗುರುತಿಸುತ್ತದೆ. ಅದಕ್ಕೆ ಬಂದೋಬಸ್ತು ಮಾಡಲಿಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಕ್ಲಿಷ್ಟವಾದ ನಿಯಮಗಳನ್ನು ಜಾರಿಯಲ್ಲಿ ತರುತ್ತಿದೆ.
        ನಿಯಮಗಳ ಕ್ಲಿಷ್ಟತೆಯೇ ಗುಣಮಟ್ಟದ ಏಣಿ ಎಂಬುದಾಗಿ ಅದು ಭಾವಿಸಿಕೊಂಡಂತಿದೆ.

        ಈ ಎಲ್ಲ ಚರ್ಚೆಗಳನ್ನು ಹಾಗೂ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿದಾಗ ಕೆಲವು ಸಂಗತಿಗಳು ಸ್ಪಷ್ಟವಾಗುತ್ತವೆ: ಇಂಥ ಚರ್ಚೆಗಳು ಉನ್ನತ ಶಿಕ್ಷಣದ ಅಧೋಗತಿಯನ್ನು ತಪ್ಪಿ$ಸಲು ಸಮರ್ಥವಾಗುತ್ತಿಲ್ಲ, ಬದಲಾಗಿ ಇಂಥ ಚರ್ಚೆಗಳೇ ಈ ವ್ಯವಸ್ಥೆಯ ಅಧೋಗತಿಯ ಲಕ್ಷಣಗಳು ಎಂಬುದಾಗಿಯೂ ಸತಾರ್ಕಿಕವಾಗಿ ವಾದಿಸಬಹುದು. ವಿಶ್ವವಿದ್ಯಾಲಯಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಈ ಚರ್ಚೆಗಳು ತೌಡು ಕುಟ್ಟುವ ಕೆಲಸಕ್ಕಿಂತ ಹೆಚ್ಚು ಆಸಕ್ತಿಕರವಾಗಿ ಕಾಣಿಸುವುದಿಲ್ಲ.

        ಪರಿಸ್ಥಿತಿ ಹೀಗಿರುವಾಗ, ವಿಶ್ವವಿದ್ಯಾಲಯಗಳ ಸಂಖ್ಯೆಯನ್ನು ಹೆಚ್ಚಿಸಿ ಏನು ಪ್ರಯೋಜನ? ಒಂದು ವಿಶ್ವವಿದ್ಯಾಲಯವು ಅಲ್ಪ$ ಸಂಖ್ಯಾತರಿಗಿರಬಹುದು, ಸಂಸ್ಕೃತಕ್ಕಿರಬಹುದು, ಜಾನಪದಕ್ಕಿರಬಹುದು, ಯಾವುದೋ ಪ್ರದೇಶಕ್ಕಿರಬಹುದು, ಅದಕ್ಕೆ ಸಂಬಂಧಿಸಿದಂತೆ ಹಿಂದೆ ಉಲ್ಲೇಖೀಸಿದ ಕಾಳಜಿಗಳಷ್ಟೇ ಮುಖ್ಯವಾಗುತ್ತವೆ ಎಂದಾದಲ್ಲಿ  ಯಾವುದೂ ಏನೂ ವ್ಯತ್ಯಾಸ ಮಾಡುವುದಿಲ್ಲ. ಏಕೆಂದರೆ ಯಾವುದೇ ವಿಷಯ, ಜಾತಿ, ಕೋಮು, ಪ್ರದೇಶ ಇರಬಹುದು, ಅದರ ಅಭಿವೃದ್ಧಿಗೆ ಎಲ್ಲ ಬಿಟ್ಟು ವಿಶ್ವವಿದ್ಯಾಲಯವೇ ಏಕೆ ಬೇಕು? ಆ ಕೆಲಸವನ್ನು ಪೂರೈಸಲಿಕ್ಕೆ ಇದಕ್ಕೂ ಒಳ್ಳೆಯ ಮಾರ್ಗಗಳು ಇಲ್ಲ ಎಂದು ಹೇಗೆ ಹೇಳುತ್ತೀರಿ? ಎಂಬ ಅಸಲಿ ಪ್ರಶ್ನೆಗಳು ಹಾಗೇ ಉಳಿಯುತ್ತವೆ. ಅದಕ್ಕೂ ಮೂಲಭೂತವಾದ ಪ್ರಶ್ನೆಯೊಂದಿದೆ: ಸಮಾಜದ ಯಾವ ಅಗತ್ಯಕ್ಕಾಗಿ ವಿಶ್ವವಿದ್ಯಾಲಯಗಳು ಬೇಕು? ಎಂಬುದು. ಇಂದು ಆ ಪ್ರಶ್ನೆಯ ಹತ್ತಿರ ಕೂಡ ನಮಗೆ ಹೋಗಲು ಸಾಧ್ಯವಾಗುತ್ತಿಲ್ಲ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      image
      • Copyright @ 2009 Udayavani.All rights reserved.
      • Designed & Hosted By 4cplus