Tuesday, May 21, 2013
Last Updated: 2:12:50 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪಂಡಿತಾ ರಮಾಬಾಯಿ ಎಂಬ ಜ್ಞಾನಗಂಗೆಯ ಮೂಲ
      • ಮಂಜುನಾಥ ಬೋರ್ಗಲ್‌ಗ‌ುಡ್ಡೆ | Feb 02, 2013

         ಪಾರಂಪರಿಕ ಮತ್ತು ಆಧುನಿಕ ಮನೋಧರ್ಮಗಳ ಸಮಸಣ್ತೀದಲ್ಲಿ ಮಹಿಳಾ ಸ್ವಾತಂತ್ರ್ಯದ ಆವಶ್ಯಕತೆಯನ್ನು ಅರ್ಥಪೂರ್ಣವಾಗಿ ಪ್ರತಿಪಾದಿಸಿದ ಪಂಡಿತಾ ರಮಾಬಾಯಿಯವರ ಹೆಸರು ಅಜರಾಮರ. ಅವರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಎಂಬ ಗ್ರಾಮದ ಗಂಗಾಮೂಲ ಎಂಬಲ್ಲಿ. ಹಿಂದೂ ಧರ್ಮದ ಜ್ಞಾನಮೂಲಗಳನ್ನೆಲ್ಲ ಅಧ್ಯಯನ ಮಾಡಿದ ಜ್ಞಾನಸಂಪನ್ನೆಯಾಗಿಯೂ ವಿಚಾರವಾದಿಯಾಗಿಯೂ - 19ನೆಯ ಶತಮಾನದಲ್ಲಿ ಉತ್ತರಾರ್ಧದಲ್ಲಿ  ನಿರಂತರ ಕ್ರಿಯಾಶೀಲರಾಗಿರುವಾಗಲೇ ಕೈಸ್ತ ಧರ್ಮಕ್ಕೆ ಮತಾಂತರ ಹೊಂದಿ ಅಲ್ಲಿರುವ ಬೈಬಲನ್ನು ಮರಾಠಿ ಭಾಷೆಗೆ ಅನುವಾದಿಸಿ, ಅಮೆರಿಕ- ಇಂಗ್ಲೆಂಡ್‌ಗಳಲ್ಲಿಯೂ ಹೆಸರುವಾಸಿಯಾಗಿದ್ದರು.
        ಪಂಡಿತಾ ರಮಾಬಾಯಿ ಅವರ ಕುರಿತ ಪುಸ್ತಕವೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ಆ ಪುಸ್ತಕ ಒಂದು ಅಧ್ಯಾಯ ಇಲ್ಲಿದೆ...

        ಸಂಸ್ಕೃತದಲ್ಲಿ ಇದು ಔದುಂಬರ. ದೇವ ದತ್ತಾತ್ರೇಯನ ವಾಸಸ್ಥಾನ. ಶುಕ್ರವಾರ ಮುಸ್ಸಂಜೆ ಲಕ್ಷ್ಮೀ ಮಾತೆಯ ಪ್ರವೇಶ. ಸುಮಂಗಲಿಯರು ವಾರವಾರವೂ ಆ ಹೊತ್ತು ಮರದ ಬುಡದಲ್ಲಿ ದೀಪ ಬೆಳಗುವ ವಾಡಿಕೆ. ಚಿತ್ಪಾವನ ಬ್ರಾಹ್ಮಣರಲ್ಲಿ ಷೋಡಶ ಸಂಸ್ಕಾರಗಳಲ್ಲೊಂದಾದ ಸೀಮಂತದಲ್ಲಿ ಗರ್ಭಿಣಿಯ ಕೊರಳಿಗೆ ಅತ್ತಿಕಾಯಿಯ ಮಾಲೆ. ಕಾಯಿ ಇಲ್ಲವಾದರೆ ಎಲೆಯನ್ನಾದರೂ ಪೋಣಿಸಿ ಧರಿಸುವ ಸಂಪ್ರದಾಯ. ಯಜ್ಞ ಯಾಗಾದಿಗಳಲ್ಲಂತೂ ಅತ್ತಿಯ ಗೇಣುದ್ದದ ಸಮಿಧೆಗಳೇ ಪ್ರಮುಖ.
        ಇಂತಹ ಅತ್ತಿ ಮರ ಅಪರೂಪದ ವೃಕ್ಷವೇನಲ್ಲ. ಪ್ರತಿ ಹಳ್ಳಿಯಲ್ಲೂ ಕಾಣಬಹುದು. ಅದರ ಪಚ್ಚೆ ಕಾಯಿಯ ಪಲ್ಯ, ಹುರುಳಿ ಬೆರೆಸಿದರಂತೂ ಆ ರುಚಿ ಎಂದಿಗೂ ಮರೆಯಲಾಗದು. ಅಷ್ಟೊಂದು ಸ್ವಾದಿಷ್ಟ ಕಾಯಿಬಿಡುವ ಅತ್ತಿ ಮರಕ್ಕೆ ಹೂವಿಲ್ಲ. ತೊಗಟೆಯನ್ನೇ ಸೀಳಿ ಅತ್ತಿಕಾಯಿ ಹುಟ್ಟುತ್ತೆ ಅನ್ನುವವರೂ ಇದ್ದಾರೆ. ಮತ್ತೆ ಕೆಲವರು, ಅತ್ತಿ ಮರಕ್ಕೂ ಹೂವಿದೆ. ಆದರೆ ಅದು ಯಾರಿಗೂ ಕಾಣಸಿಗುವುದಿಲ್ಲ. ರಾತ್ರಿ ಹೊತ್ತು ಹುಟ್ಟುವ ಹೂವು. ಹೂ ಹುಟ್ಟುವಾಗ ಪ್ರಕಾಶಮಾನವಾದ ಬೆಳಕು ಬೀರುತ್ತದೆಯಂತೆ. ಆ ಸಮಯ ಅದು ಮರವಲ್ಲ . ದಿವ್ಯ ಬೆಳಕಿನ ಪುಂಜ. ಕತೆಯನ್ನು ಯಾರ ಜೊತೆಯೂ ಹೇಳುವಂತಿಲ್ಲ. ಹೇಳಿದರೆ ಸಾವು ಖಚಿತವಂತೆ. ಹೀಗೊಂದು ಜನಪದ.

        ಇದೊಂದು ಕಟ್ಟುಕತೆಯಾಗಿದ್ದರೂ ಬೆಳಕು ಕಾಣುವುದು ಮಾತ್ರ ಸುಳ್ಳಾಗಿರಲಿಕ್ಕಿಲ್ಲ . ಹಾಗಂತ ಅದು ಭಗವಂತನ ಪ್ರಭಾವಳಿಯಂತೂ ಅಲ್ಲವೇ ಅಲ್ಲ . ಬದಲು, ಸತೀಪದ್ಧತಿಗೆ ಅರ್ಪಣೆಯಾದ ನಮ್ಮೂರ ವಿಧವೆಯರ ಚಿತೆಯ ಉರಿಬೆಳಕು. ಅದೊಂದು ಸಂಪ್ರದಾಯವಿತ್ತು. ಸತಿಯನ್ನು ಸತ್ತ ಪತಿಯ ಜೊತೆ ಸುಟ್ಟ ಬಳಿಕ ಅಲ್ಲಿ ಅತ್ತಿ ಮರವನ್ನು ನೆಡುತ್ತಿದ್ದರು. ಸಮೀಪ ನೆಟ್ಟ ಅತ್ತಿ ಮರದ ಬೇರು ಮಣ್ಣ ಸೇರಿದ ಹೆಣ್ಣ ಬೂದಿಯ ಬಲದಲ್ಲೇ ಬೆಳೆದಿದೆ. ಆದರೆ, ಲೋಕಕ್ಕೆ ಉಸಿರು ಕೊಡುವ ಗಿಡವೇನು ಕ್ರೂರಿಯೇ. ಅಮಾಯಕ ಹೆಣ್ಣಿನ ನೋವಿಗೆ ಅತ್ತಿ ಮರವೂ ಮರುಗಿದೆ. ತನ್ನಷ್ಟಕ್ಕೇ ಅದು ಅತ್ತಿದೆ. ಸತಿಗೆ ಇಲ್ಲದ ಭಾಗ್ಯ ತನಗೇಕೆ ಎಂದೋ, ಹೆಣ್ಣು ಮನಸ್ಸಿನ ಹೂವು ಈ ಭೂಮಿಗೆ ಬರಬಾರದೆಂದೋ ತನ್ನೊಳಗೆ ಅಳುವನ್ನು ಅದುಮಿಟ್ಟಿದೆ. ಆದರೆ, ಪ್ರಕೃತಿ ಕೇಳುತ್ತದೆಯೇ ವಾಸ್ತವ ಮತ್ತು ಭಾವನೆಗಳ ಘರ್ಷಣೆಗೆ ಕಾಂಡವೇ ಒಡೆದು ಕಾಯಿ ಬೆಳೆಯುತ್ತದೆ, ಹೂವಿಲ್ಲದೆ.

        ಹೀಗೆ, ಅತ್ತಿ ಮರವೊಂದು ತನ್ನ ಕತೆ ಹೇಳಿದ್ದು ಮಾಳ (ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು) ಎಂಬ ಗ್ರಾಮದಲ್ಲಿ. ಅದು ವರಾಹ ಪರ್ವತದ ಪಶ್ಚಿಮದ ಇಳಿಜಾರಿನ ಊರು. ಗಂಗಾಮೂಲದಲ್ಲಿ ಕೇಳಿದ ಅಳು ಧ್ವನಿಯ ಸೆಳೆತಕ್ಕೆ ಸಿಲುಕಿ, ಮುಗಿಲ ಮೆಟ್ಟಿಲು ಇಳಿಯುತ್ತ ಬಂದಾಗ ಎದುರಾದ ಊರಿದು. ನೈಸರ್ಗಿಕ ಸಂಪತ್ತಿನ ಗಣಿಯೇ ಮಾಳಕ್ಕೆ ಲಭಿಸಿದೆ. ಆದರೆ, ಭಾರತದ ಇತರ ಹಳ್ಳಿಗಳಂತೆಯೇ ಪುರುಷ ಪ್ರಧಾನ ಸಮಾಜ ಮತ್ತು ಹೆಣ್ಣಿನ ಶೋಷಣೆ ಇಲ್ಲೂ ಸಾಮಾನ್ಯವಾಗಿತ್ತು. ಸ್ತ್ರೀಶಿಕ್ಷಣವಂತೂ ಬಹು ದೂರದ ಮಾತು. ಅದರಲ್ಲೂ ದೇವಭಾಷೆ ಸಂಸ್ಕೃತದ ಕಲಿಕೆ. ಪುರಾಣಗ್ರಂಥಗಳ ಪಠಣದ ಕುರಿತು ಮಹಿಳೆ ಕನಸು ಕಂಡರೂ ಅದು ಮಹಾಪಾಪವಾಗಿತ್ತು.

        ಅಂತಹ ವಾತಾವರಣದಲ್ಲಿ ಮಾಳ ಗ್ರಾಮದಲ್ಲೇ ಒಬ್ಬ ಪುಣ್ಯಾತ್ಮನ ಜನನ. ಆತನೋ ಪಯಣದಲ್ಲೇ ಪಯಣ ಮುಗಿಸಿದ ಸಂತ. ಚಿತ್ಪಾವನ ಬ್ರಾಹ್ಮಣ. ಬಲು ದೊಡ್ಡ ಸಂಸ್ಕೃತ ಪಂಡಿತ. ವೇದ ಶಾಸ್ತ್ರ ಪಾರಂಗತ. ಮಹಾನ್‌ ಮೇಧಾವಿ. ದೇಶ ಸುತ್ತಿದ ಅನುಭವಸ್ಥ. ರಾಜಮನೆತನಗಳಿಂದಲೂ ಗೌರವಾನ್ವಿತ. ಆದರೆ, ತಾನು ಸ್ತ್ರೀಯರಿಗೆ ಸಂಸ್ಕೃತ ಕಲಿಸಿದ್ದಕ್ಕಾಗಿ ಸ್ವಜನರಿಂದಲೇ ಬಹಿಷ್ಕಾರ. ಮಿತ್ರ ಬಾಂಧವರಿಂದಲೇ ವಿರೋಧ. ಅದಕ್ಕೆಲ್ಲ  ನೊಂದು, ತಲೆಕೆಡಿಸಿಕೊಂಡ ವ್ಯಕ್ತಿ ಆತನಲ್ಲ . ತನ್ನ ನಿಲುವನ್ನು ಒಂದಿನಿತು ಸಡಿಲಿಸಿದವನೂ ಅಲ್ಲ. ಆತ ಕನಸುಗಾರ. ದುರಂತಮಯ ಜೀವನದಲ್ಲೂ ಆಶಾವಾದಿ. ಸಂಬಂಧಗಳನ್ನು, ಸನ್ಮಾನಗಳನ್ನು ತೊರೆದು ಕಾರ್ಗತ್ತಲು ಕಾಡನ್ನು ಸೇರಿದ. ಒಂದೇ ಕಡೆ ನಿಲ್ಲದೆ ಸಂಚಾರದ ಬದುಕನ್ನೇ ಕೊನೆವರೆಗೂ ಆಯ್ದುಕೊಂಡ.

        ಅಂತಹ ಕಠಿಣ ಬದುಕಿನಲ್ಲಿ ಹಲವನ್ನು ಆತ ಕಳಕೊಂಡಿರಬಹುದು. ಆದರೆ ಆತನ ತ್ಯಾಗದ ಲಾಭವನ್ನಿಂದು ಇಡೀ ಭಾರತ ಅನುಭವಿಸುತ್ತಿದೆ. ಮಹಿಳಾ ಲೋಕವಂತೂ ಸದಾ ಕೃತಜ್ಞರಾಗಿರಲೇಬೇಕಾದ ರಮಾಬಾಯಿಯನ್ನು ಈ ಭೂಮಿಗೆ ಕೊಟ್ಟ ತಂದೆ ಆತ. ಪಂಡಿತಾಳನ್ನು ಕೆತ್ತಿದ ಶಿಲ್ಪಿ . ಅವರೇ ಅನಂತ ಶಾಸಿŒ ಡೋಂಗ್ರೆ. ಅವರ ಮಗಳು ರಮಾಬಾಯಿ ಮತ್ತು ಮೊಮ್ಮಗಳು ಮನೋರಮೆ...


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      pic"ಉದ್ಯೋಗ' ಎನ್ನುವುದು ಕೆಲವರಿಗೆ ತಮ್ಮ ಪ್ರತಿಭೆಯ ಅಭಿವ್ಯಕ್ತಿಗೆ, ಸ್ವಾತಂತ್ರ್ಯದ ಅಪೇಕ್ಷೆಗೆ ಪೂರಕವಾದರೆ ಇನ್ನು ಕೆಲವರಿಗೆ ತುತ್ತಿನ ಚೀಲ ತುಂಬಿಸಲು ಅನಿವಾರ್ಯ...
      • ಈ ವಿಭಾಗದಲ್ಲಿಯೂ ಇದೆ
      • ಏಕತಾರಿ ಮಿಡಿತ
        ಅವಳು ಒಂಟಿಯಾಗಿ ಕಾರ್ಯಕ್ರಮಕ್ಕೆ ಬಂದಳು, ಕಾರ್ಯಕ್ರಮ ಮುಗಿದ ನಂತರ ಒಂಟಿಯಾಗಿ ಬಸ್‌ನಲ್ಲಿ ಜೋತಾಡಿಕೊಂಡು ಹೋಗುತ್ತಿದ್ದಳು....
      image
      image
      • Copyright @ 2009 Udayavani.All rights reserved.
      • Designed & Hosted By 4cplus