ವಾಷಿಂಗ್ಟನ್: ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರು ಸಾವನ್ನಪ್ಪಿ 10 ವರ್ಷಗಳು ಉರುಳಿದ ಬಳಿಕ ಇಲ್ಲಿವರೆಗೂ ರಹಸ್ಯವಾಗಿ ಕಾಪಾಡಿಕೊಂಡಿದ್ದ ವಿಷಯವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈಗ ಬಹಿರಂಗಪಡಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳುತ್ತಿದ್ದ ಕೊಲಂಬಿಯಾ ನೌಕೆ ಇನ್ನು ಕೆಲವೇ ಕ್ಷಣಗಳಲ್ಲಿ ದುರಂತಕ್ಕೆ ಈಡಾಗಲಿದೆ ಎಂಬುದು ಗೊತ್ತಿದ್ದರೂ ಅದರಲ್ಲಿದ್ದ ಕಲ್ಪನಾ ಚಾವ್ಲಾ ಸೇರಿ 7 ಗಗನಯಾತ್ರಿಗಳಿಗೆ ಆ ವಿಷಯ ತಿಳಿಸಿರಲಿಲ್ಲ ಎಂದು ನಾಸಾ ಹೇಳಿಕೊಂಡಿದೆ.16 ದಿನಗಳ ಯಾತ್ರೆ ಮುಗಿಸಿ ಕೊಲಂಬಿಯಾ ನೌಕೆ ಭೂಮಿಗೆ ಹಿಂತಿರುಗುತ್ತಿದ್ದಾಗ ಅದರಲ್ಲಿನ ಉಷ್ಣ ನಿರೋಧಕ ಕವಚಕ್ಕೆ ಹಾನಿಯಾಗಿತ್ತು. ಒಂದು ವೇಳೆ ಕೊಲಂಬಿಯಾ ನೌಕೆ ಏನಾದರೂ ಭೂಕಕ್ಷೆ ಪ್ರವೇಶಿಸಿದರೆ ಅತಿಯಾದ ಉಷ್ಣಾಂಶ ತಾಳಲಾರದೆ ಇಡೀ ನೌಕೆಯೇ ಭಸ್ಮವಾಗಲಿದೆ ಎಂಬುದು ನಾಸಾಗೆ ಗೊತ್ತಿತ್ತು. ಹೀಗಾಗಿ ಆ ಯೋಜನೆಯ ನಿಯಂತ್ರಣ ಹೊತ್ತಿದ್ದ ತಂಡಕ್ಕೆ 2 ಕಗ್ಗಂಟಿನ ಪ್ರಶ್ನೆಗಳು ಎದುರಾದವು. ಭೂಕಕ್ಷೆಗೆ ಹಿಂತಿರುಗಲು ಅನುಮತಿ ನೀಡಿ ಗಗನಯಾತ್ರಿಗಳು ಮರಣವನ್ನಪ್ಪಲು ಅವಕಾಶ ಕೊಡಬೇಕೆ? ಅಥವಾ ಆಮ್ಲಜನಕ ಖಾಲಿಯಾಗುವವರೆಗೂ ಬಾಹ್ಯಾಕಾಶದಲ್ಲೇ ಗಿರಕಿ ಹೊಡೆಯಲು ಸೂಚಿಸಬೇಕೆ? ನಾಸಾ ಮೊದಲನೆಯದ್ದನ್ನು ಆಯ್ಕೆ ಮಾಡಿಕೊಂಡಿತ್ತು.ಕೊಲಂಬಿಯಾ ನೌಕೆಗೆ ಆಗಿದ್ದ ಹಾನಿಯನ್ನು ಸರಿಪಡಿಸಲು ಯಾವುದೇ ಕಾರಣಕ್ಕೂ ಸಾಧ್ಯವಿರಲಿಲ್ಲ. ಏಕೆಂದರೆ, ಆ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬಹುದೂರ ಕ್ರಮಿಸಿತ್ತು. ಅಲ್ಲದೆ ನೌಕೆ ದುರಸ್ತಿಗೆ ಯಾಂತ್ರೀಕೃತ ಕೈ (ರೊಬೋಟಿಕ್ ಆರ್ಮ್) ಕೂಡ ಇರಲಿಲ್ಲ. ಹೋಗಲಿ, ಮತ್ತೂಂದು ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಕಲ್ಪನಾ ಚಾವ್ಲಾ ಸೇರಿ 7 ಮಂದಿಯನ್ನು ರಕ್ಷಿಸೋಣ ಎಂದರೆ, ಅದು ಕೂಡ ಸಾಧ್ಯವಿರಲಿಲ್ಲ ಎಂದು ನಾಸಾ ಅಧಿಕಾರಿಗಳು ತಿಳಿಸಿದ್ದಾರೆ.ಸಂತೋಷಕ್ಕೆ ಭಂಗ ಬೇಡ: 'ಆ ಕರಾಳ ದಿನದಂದು ಯೋಜನೆ ನಿರ್ವಹಣೆ ತಂಡವೊಂದು ಸಭೆ ಸೇರಿ, ಕೊಲಂಬಿಯಾ ನೌಕೆಗೆ ಆಗಿರುವ ಹಾನಿ ಕುರಿತು ಚರ್ಚೆ ನಡೆಸಿತು. ನೌಕೆಯ ಉಷ್ಣ ನಿರೋಧಕ ಕವಚಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಲು ಆಗುವುದೇ ಇಲ್ಲ. ಈ ವಿಷಯವನ್ನು ನೌಕೆಯಲ್ಲಿರುವವರೆಗೆ ತಿಳಿಸುವ ಬದಲು ಯಾತ್ರೆ ಮುಗಿಸಿದ ಸಂತೋಷದಲ್ಲಿರುವ ಅವರು ಅನಿರೀಕ್ಷಿತವಾಗಿ ಮರಣವನ್ನಪ್ಪಲು ಅವಕಾಶ ಕಲ್ಪಿಸುವುದೇ ಒಳಿತು ಎಂದು ಗಗನನೌಕೆ ನಿರ್ದೇಶಕ ಜೊನ್ ಹಾರ್ಪೊಲ್ಡ್ ತಮಗೆ ತಿಳಿಸಿದ್ದರು' ಎಂದು ದುರಂತದ ಬಳಿಕ ಗಗನನೌಕೆ ಯೋಜನೆ ವ್ಯವಸ್ಥಾಪಕರಾದ ವಾಯ್ನ ಹೇಲೆ ಅವರು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.ನಾಸಾದ ಈ ನಿರ್ಧಾರದ ಬಳಿಕ 2003ರ ಫೆ.1ರಂದು ಕಲ್ಪನಾ ಚಾವ್ಲಾ ಸೇರಿ 7 ಮಂದಿ ಗಗನಯಾತ್ರಿಗಳನ್ನು ಹೊತ್ತ ಕೊಲಂಬಿಯಾ ನೌಕೆ ಟೆಕ್ಸಾಸ್‌ನಲ್ಲಿ ಪತನಗೊಂಡಿತ್ತು.ಶ್ರದ್ಧಾಂಜಲಿ: ಕೊಲಂಬಿಯಾ ನೌಕೆ ಪತನಗೊಂಡು ಹತ್ತು ವರ್ಷವಾದ ಹಿನ್ನೆಲೆಯಲ್ಲಿ ಶುಕ್ರವಾರ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಾಸಾ ಹಮ್ಮಿಕೊಂಡಿತ್ತು. ಕಲ್ಪನಾ ಚಾವ್ಲಾ ಸೇರಿ ಎಲ್ಲ 7 ಗಗನಯಾತ್ರಿಗಳನ್ನು ಈ ವೇಳೆ ಸ್ಮರಿಸಲಾಯಿತು.
ಮಾನ್ಯರೇ, ಕಂಡವರ ಮಕ್ಕಳನ್ನು ಬಾವಿಗೆ ಹಾಕಿ ಆಳ ನೋಡಿದಂತಿದೆ.(ಅನ್ಯ ದೇಶದ ವಿಜ್ನಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಆಳ ನೋಡಿದಂತಾಯಿತು)