ಆರ್ಕಿಟೆಕ್ಟ್ ಕೆ. ಜಯರಾಮ್ | Feb 05, 2013
ಸ್ವಂತಕ್ಕೆ ಮನೆ ಕಟ್ಟುವುದು ಕನಸು. ಈ ಕನಸು ನನಸು ಮಾಡಿಕೊಳ್ಳಲು ಹೋಗಿ ಎಡವಿದವರೂ ಸಾಕಷ್ಟು ಜನರಿದ್ದಾರೆ. ಅದಕ್ಕಾಗೆ ಕೆಲವರು ಮನೆ ಕಟ್ಟಿಸಿದರೂ ತುಂಬಾ ಸೇಫ್ ಆದ ನಡೆಯಾಗಿ ಮನೆಯನ್ನು ಬಾಡಿಗೆಗೆ ಬಿಡುವವರಿದ್ದಾರೆ. ಬಾಡಿಗೆಗೆ ಮನೆ ಕೊಡುವುದು ಹೂಡಿಕೆ. ಹಾಗಾದರೆ ಬಾಡಿಗೆ ಮನೆ ಹೇಗಿರಬೇಕು? ಅದನ್ನು ಹೇಗೆ ಕಟ್ಟಬೇಕು. ಇಲ್ಲಿದೆ ಮಾಹಿತಿ.
ಸ್ವಂತಕ್ಕೆ ಮನೆ ಕಟ್ಟಿಕೊಂಡಮೇಲೆ ಅನೇಕರಿಗೆ ಬಾಡಿಗೆಗೆ ಒಂದು ಕಟ್ಟಿದರೆ ಹೇಗೆ? ಎಂಬ ಆಲೋಚನೆ ಬರುವುದು ಸಹಜ. ಹಣದ ಮೌಲ್ಯ ಪ್ರತಿ ವರ್ಷ ಕಡಿಮೆಯಾಗುತ್ತಲೇ ಇರುತ್ತದೆ. ಇಂದು ಒಂದು ಲಕ್ಷಕ್ಕೆ ಒಂದು ಚದರ ಕಟ್ಟಬಹುದಾದರೆ ಇನ್ನೆರಡು ಮೂರು ವರ್ಷದಲ್ಲಿ ಅರ್ಧ ಚದರ ಕೂಡ ಕಟ್ಟಲು ಸಾಧ್ಯವಾಗು ವುದಿಲ್ಲ.
ಆ ಮಟ್ಟದಲ್ಲಿ ಕಟ್ಟಡ ಸಾಮಗ್ರಿಗಳ ಬೆಲೆ ಏರಿ ದುಬಾರಿಯಾಗುತ್ತದೆ. ಹಾಗೆಯೇ ಇಂದು ಇರುವ ಬಾಡಿಗೆ, ಕೆಲವೇ ವರ್ಷಗಳಲ್ಲಿ ಡಬಲ್ ಆದರೂ ಆಶ್ಚರ್ಯವಿಲ್ಲ. ನೀವು ಯಾವುದೇ ರೀತಿಯ ಉಳಿತಾಯ ಮಾಡಿದರೂ ನಿಯಮಿತವಾಗಿ ಬಾಡಿಗೆ ಬರುವ ರೀತಿಯಲ್ಲಿ ರಿಟನ್ಸ್ ಕೊಡುತ್ತಲೇ ಮೌಲ್ಯ ವೃದ್ಧಿ ಮಾಡಿಕೊಳ್ಳುವ ಯೋಜನೆಗಳು ಕಡಿಮೆ ಸಿಗುತ್ತದೆ. ಹಾಗಾಗಿ ಅನೇಕ ರೀತಿಯ ಹೂಡಿಕೆಗಳಿಗೆ ಹೋಲಿಸಿದರೆ ಬಾಡಿಗೆ ಮನೆ ಒಂದು ಉತ್ತಮ ಇನ್ವೆಸ್ಟ್‌ಮೆಂಟ್!
ಬಾಡಿಗೆ ಮನೆ ಹೇಗೆ ಕಟ್ಟಬೇಕು?
ನಮಗೆ ಅಂತ ಸ್ವಂತಕ್ಕೆ ಕಟ್ಟಿಕೊಳ್ಳುವುದಕ್ಕೂ ಬಾಡಿಗೆಗೆಂದೇ ಕಟ್ಟುವುದಕ್ಕೂ ಕೆಲ ವ್ಯತ್ಯಾಸಗಳಿರುತ್ತದೆ. ಬಾಡಿಗೆ ಮನೆಗಾದರೆ ಮುಖ್ಯವಾಗಿ ಅನಗತ್ಯವಾಗಿ ದುಬಾರಿ ವಸ್ತುಗಳ ಆಯ್ಕೆಯನ್ನು ಮಾಡಬೇಡಿ. ನಾವು ಹಾಕಿದ ಕಾಸಿಗೆ ಸೂಕ್ತ ರಿಟನ್ಸ್ ಬರುವಹಾಗೆ ಬಹುಕಾಲ ಬಾಳಿಕೆ ಬರುವಂಥ ಒಳ್ಳೆಯ ವಸ್ತುಗಳನ್ನು ಹಾಕಿದರೆ, ಬಾಡಿಗೆ ಬರುವವರಿಗೂ ಅನುಕೂಲ ಹಾಗೆಯೇ ಮಾಲೀಕರಿಗೂ ತಲೆನೋವು ಕಡಿಮೆ.
ಪ್ರ„ವೆಸಿ ಕಾಯ್ದುಕೊಳ್ಳಿ
ನಮ್ಮ ಕಟ್ಟಡದಲ್ಲೇ ಇನ್ನೊಂದು ಸಂಸಾರ ಇರುವುದು ನಗರದ ಹೊರವಲಯದಲ್ಲಾದರೆ ಕಳ್ಳಕಾಕರ ಭೀತಿಯಿಂದ ರಕ್ಷಣೆ ಸಿಗುತ್ತದೆ ಎಂಬುದು ನಿಜವಾದರೂ ಬಾಡಿಗೆ ಇರುವವರೊಂದಿಗೆ, ಕೆಲವೊಮ್ಮೆ ಘರ್ಷಣೆಗಳಾಗುವ ಸಾಧ್ಯತೆಗಳೂ ಇರುತ್ತದೆ. ಹಾಗಾಗಿ ನಿಮ್ಮ ಮನೆಗೂ ಬಾಡಿಗೆ ಮನೆಯನ್ನೂ ಪ್ರತ್ಯೇಕವಾಗಿ ಇಟ್ಟುಕೊಳ್ಳುವುದು ಉತ್ತಮ.
ರಸ್ತೆ ಎನ್ನುವುದು ಎಲ್ಲರಿಗೂ ಸೇರಿದ್ದಾದರೂ, ಒಮ್ಮೆ ಗೇಟು ದಾಟಿ ಒಳಗೆ ಬಂದವೆಂದರೆ ಅದು ನಮ್ಮದೇ ಆದ ಖಾಸಗಿ ಸ್ಥಳವಾಗಿರುತ್ತದೆ. ಹಾಗೆಯೇ ಬಾಡಿಗೆದಾರರಾದರೂ ಅವರಿಗೂ ಒಂದು ಮಟ್ಟದ ಪ್ರ„ವಸಿಯ ಅಗತ್ಯವಿರುತ್ತದೆ. ಬಂದು ಹೋಗುವ ದಾರಿಯ ಜೊತೆಗೆ ಅವರಿಗೆಂದೇ ಸಣ್ಣ ಸೈಟಿನಲ್ಲಿ ಕಾರ್ ಪಾಕ್ ì ಕೊಡಲು ಸಾಧ್ಯವಿರದಿದ್ದರೂ ಒಂದು ಸ್ಕೂಟರ್‌ಗಾದರೂ ಸ್ಥಳಾವಕಾಶ ಮಾಡಿಕೊಡುವುದು ಉತ್ತಮ. ಇದಕ್ಕೆ ಹೆಚ್ಚಿನ ಸ್ಥಳವೇನೂ ಬೇಡ, 3ಅಡಿಗೆ ಆರು ಅಡಿ ಇದ್ದರೂ ಸಾಕು.
ಕೆಳಗೆ ದೊಡ್ಡದಾಗಿ ಸ್ವಂತಕ್ಕೆ ಕಟ್ಟಿಕೊಂಡಮೇಲೆ ಮಹಡಿಯಲ್ಲಿ ಚಿಕ್ಕದಾಗಿ ಬಾಡಿಗೆಗೆ ಕಟ್ಟುವುದು ವಾಡಿಕೆ. ಮನೆಯ ವಿವಿಧ ಕೊಠಡಿಗಳು ದಿನದ ಬೇರೆಬೇರೆ ಕಾಲದಲ್ಲಿ ಹೆಚ್ಚು ಬಳಕೆಯಲ್ಲಿರುತ್ತದೆ. ಹಾಗಾಗಿ ಬಾಡಿಗೆ ಮನೆ ವಿನ್ಯಾಸ ಮಾಡಬೇಕಾದರೆ ಯಾವುದೇ ಕಾರಣಕ್ಕೂ ಕಿಚನ್ ನಿಮ್ಮ ಬೆಡ್ ರೂಮಿನ ಮೇಲೆ ಬರದಂತೆ ನೋಡಿಕೊಳ್ಳಿ. ಬೆಳ್ಳಂಬೆಳಗ್ಗೆ ಉಪಯೋಗಿಸುವ ಸ್ಥಳ ಕಿಚನ್. ಮನೆಯ ಇತರರು ಅದರಲ್ಲೂ ಹಿರಿಯರು ಹಾಗೂ ಸಣ್ಣ ಮಕ್ಕಳು ಇನ್ನೂ ನಿದ್ರಾವಸ್ಥೆಯಲ್ಲಿಯೇ ಇರುವಾಗಲೇ ಮೇಲುಗಡೆಯಿಂದ ಶಬ್ದ ಶುರುವಾಗಬಹುದು. ಸಣ್ಣ ಪುಟ್ಟ ಶಬ್ದ ಕೇಳಿಬಂದರೂ ಬೆಳಗಿನ ಜಾವದ ನಿದ್ರೆಗೆ ಭಂಗ ಬಂದು, ತಲೆಯ ಮೆಲೆಯೇ ಮಸಾಲೆ ಅರೆದಂತೆ ಭಾಸವಾಗುತ್ತದೆ. ಆದಷ್ಟೂ ಅಡುಗೆ ಮನೆ ಮೇಲೆ ಅಡುಗೆ ಮನೆ ಹಾಗೆಯೇ ಬೆಡ್ ರೂಮ್ ಮೇಲೆ ಬೆಡ್ ರೂಮ್ ಬರುವಂತೆ ವಿನ್ಯಾಸ ಮಾಡಿದರೆ ಉತ್ತಮ.
ಎಷ್ಟು ದೊಡ್ಡದಿರಬೇಕು?
ನೀವು ಸಾಲ ತೆಗೆದುಕೊಂಡು ಬಾಡಿಗೆ ಮನೆ ಕಟ್ಟುತ್ತಿದ್ದರೆ ಮಾಸಿಕ ಕಂತುಗಳ ಬಗ್ಗೆ ಬ್ಯಾಂಕ್‌ಗಳಲ್ಲಿ ವಿಚಾರಿಸಿ. ಸಾಮಾನ್ಯವಾಗಿ ಒಂದು ಲಕ್ಷಕ್ಕೆ ತಿಂಗಳಿಗೆ ಒಂದು ಸಾವಿರದ ನೂರು ರೂಪಾಯಿಯ ಆಸುಪಾಸಿನಲ್ಲಿ ಬಡ್ಡಿ ಹಾಗೂ ಸಾಲ ತೀರುಸುವ ಮೊತ್ತ ಸೇರಿ ಬರಬಹುದು. ಈಗಿರುವ ಚದರ ಅಡಿಗೆ ಲಕ್ಷರೂ. ನ ಲೆಕ್ಕಾಚಾರದಲ್ಲಿ, ನೀವು 1000 ಚದುರ ಅಡಿ ಬಾಡಿಗೆ ಮನೆ ಕಟ್ಟಿದರೆ ಸುಮಾರು ಹನ್ನೆರಡು ಲಕ್ಷ ರೂಪಾಯಿ ಖರ್ಚಾಗಬಹುದು. ನಿಮಗೆ ತಿಂಗಳಿಗೆ ಹನ್ನೆರಡು ಸಾವಿರ ರೂಪಾಯಿಯಾದರೂ ಬಾಡಿಗೆ ಬಂದರೆ, ಹೆಚ್ಚಿನ ಹೊರೆಯಿಲ್ಲದೆ ಇ ಎಮ್ ಐ ಕಟ್ಟಿಬಿಡಬಹುದು. ಯಾವುದೇ ಮನೆ ಮೊದಲ ಐದು ವರ್ಷ ಲಾಭದಾಯಕವಲ್ಲ.
10 ಅಡಿಗೆ 12 ಅಡಿ ಗಾತ್ರದ ಎರಡೆರಡು ಬೆಡ್ ರೂಮ್ ಲಿವಿಂಗ್ ಡೈನಿಂಗ್ ಕಿಚನ್ ಟಾಯ್ಲೆಟ್ ಮನೆಯನ್ನು ಮಿತವಾಗಿ 6 -7 ಚದುರ ಅಡಿಗಳಲ್ಲೂ ವಿನ್ಯಾಸಮಾಡುವುದು ಸಾಧ್ಯ. ಸಾಮಾನ್ಯವಾಗಿ ಎರಡು ಬೆಡ್ ರೂಮ್ ಮನೆಗೆ ಹೆಚ್ಚು ಬಾಡಿಗೆ ಬರುತ್ತದೆ. ಸಣ್ಣದಾದರೂ ಎರಡಿದ್ದರೆ ಒಳ್ಳೆಯದು. ಬಾಡಿಗೆಗೆ ಕೊಡುವಾಗ ತೀರ ಹೆಚ್ಚು ಸಾಲ ಮಾಡಿ ಮಾಸಿಕ ಕಂತು ತೀರಿಸಲು ಆಗದೆ ಕೈಯಿಂದ ಹಾಕುವ ರೀತಿಯಲ್ಲಿ ಆಗದಂತೆ ನೋಡಿಕೊಳ್ಳಿ. ನೆನಪಿರಲಿ, ಮನೆಯನ್ನು ಚಿಕ್ಕದಾಗಿ, ಚೊಕ್ಕದಾಗಿ ಕಟ್ಟಿದಷ್ಟೂ ಕಡಿಮೆ ಖರ್ಚು ಹಾಗೂ ಹೆಚ್ಚು ಬಾಡಿಗೆ ಬರುತ್ತದೆ.
ಬಾಡಿಗೆಗೆ ಬರುವವರು ಏನನ್ನು ಅಪೇಕ್ಷಿಸುತ್ತಾರೆ ಎಂಬುದನ್ನು ಗಮನಿಸಿ ತಕ್ಕ ಅನುಕೂಲ ಮಾಡಿಕೊಟ್ಟರೆ, ನಿಮ್ಮ ಮನೆಗೆ ಬೇಗನೆ ಬಾಡಿಗೆದಾರರು ಸಿಗುತ್ತಾರೆ.ಬಾಡಿಗೆ ಮನೆಗೆ ಬರುವವರು ಕೆಲವೊಂದು ಪರಿಕರಗಳನ್ನು ಹೊಂದಿರುತ್ತಾರೆ. ಸಾಮಾನ್ಯವಾಗೇ ಮರದ ಇಲ್ಲ ಗೋದ್ರೇಜ್ ಮಾದರಿಯ ಸ್ಟೀಲ್ ಕಬರ್x, ಬುಕ್ ಶೆಲ್ಫ್ ಇತ್ಯಾದಿಗಳನ್ನು ಅವರೇ ತರುವ ಕಾರಣ ಈ ಪರಿಕರಗಳಿಗೆ ಸಾಕಷ್ಟು ಜಾಗ ವಿನ್ಯಾಸ ಮಾಡಿದರೆ, ಬಂದವರಿಗೆ ಕಿರಿಕಿರಿಯಾಗದಂತೆ ಹೊಸ ಮನೆಗೆ ಹೊಂದಿಕೊಳ್ಳಲು ಸುಲಭವಾಗುತ್ತದೆ.
ಬಾಡಿಗೆ ಮನೆಯಲ್ಲಿ ಉಳಿತಾಯ ಹೇಗೆ?
ನೀವು ಈಗಾಗಲೇ ಕಟ್ಟಿರುವ ಮನೆಯ ಪಾಯ ಹಾಗೂ ಗೋಡೆಗಳು, ಮೇಲಿನ ಮನೆಯ ಭಾರ ಹೊರುವಷ್ಟು ಗಟ್ಟಿಯಿದೆಯೇ? ಎಂಬುದನ್ನು ನುರಿತ ಆರ್ಕಿಟೆಕ್ಟ್ ಇಂಜಿನಿಯರ್‌ಗಳಿಂದ ಪರಿಶೀಲಿಸಿಕೊಂಡು ಮುಂದುವರಿಯಿರಿ. ಕಾಲಂ ಬೀಮ್ ಹಾಕಿರುವ ಮನೆಯಾದರೆ ಸಾಮಾನ್ಯವಾಗಿ ಒಂದೆರಡು ಮಹಡಿ ಕಟ್ಟುವಂತೆಯೇ ವಿನ್ಯಾಸ ಮಾಡಿರುತ್ತಾರೆ. ಬಾಡಿಗೆ ಮನೆಯ ಗೋಡೆಗಳು ಆದಷ್ಟೂ ಬೀಮ್‌ಗಳ ಮೇಲೆಯೇ ಬರುವಂತೆ ವಿನ್ಯಾಸ ಮಾಡಿದರೆ ಉತ್ತಮ.
ಸಾಧ್ಯವಾದಷ್ಟೂ ನೀರಿನ ಹಾಗೂ ಸ್ಯಾನಿಟರಿ ಪೈಪ್ ಲೈನ್‌ಗಳು ಹೆಚ್ಚು ದೂರ ಸುತ್ತಿ ಬಳಸಿ ಬರದಂತೆ ಟಾಯ್ಲೆಟ್ ಮೇಲೆಯೇ ಮಹಡಿಯ ಟಾಯ್ಲೆಟ್ ಕೂಡ ಬರುವಂತೆ ಮಾಡಿದರೆ ಸಾಕಷ್ಟು ಉಳಿತಾಯ ಮಾಡಬಹುದು.
ಬ್ಯಾಂಕಿನಲ್ಲಿ ಹಣ ಇಟ್ಟರೆ ಅದರ ಮೌಲ್ಯ ಕೆಲವೇ ವರ್ಷಗಳಲ್ಲಿ ಅರ್ಧಕ್ಕೆ ತಲುಪುತ್ತದೆ. ಚಿನ್ನ ಬೆಳ್ಳಿಯ ಮೇಲೆ ಹೂಡಿದರೆ ಕಳ್ಳಕಾಕರ ಬೀತಿ. ಹಾಗೆಯೇ ತಿಂಗಳಾದರೆ ಸಂಬಳದಂತೆ ಮನೆಗೇ ಹಣ ಬರುವುದಿಲ್ಲ. ಹಣದುಬ್ಬರದ ಈ ದುಬಾರಿ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಹಣ ಕೊಡುವ ಖಾತರಿ ಹೂಡಿಕೆ ಬಾಡಿಗೆ ಮನೆ.
ಆದರೆ ಕಟ್ಟಬೇಕಾದರೆ ಹೆಚ್ಚಿಗೆ ಹಣ ಸುರಿಯಬೇಡಿ.
ಹೆಚ್ಚಿನ ಮಾಹಿತಿಗೆ: 9844132826