Sunday, May 19, 2013
Last Updated: 1:09:48 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕೃಷಿ-ವಾಣಿಜ್ಯ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ತೆಂಗು, ಕಂಗು ನಡುವೊಬ್ಬಳು ತಂಗಿ
    • ಶುಂಠಿ ತೋಟ
    • ಕೃಷ್ಣಯ್ಯ ಶೆಟ್ಟಿ ಅಡಿಕೆ-ತೆಂಗಿನ ತೋಟದಲ್ಲಿ ಶುಂಠಿ ಕೃಷಿ ನಡೆಸಿ ಪರಿಶ್ರಮದ ಬೇಸಾಯದಲ್ಲಿ ತಲ್ಲೀನರಾಗಿದ್ದಾರೆ

      • ಎನ್‌.ಡಿ.ಹೆಗಡೆ ಆನಂದಪುರಂ | Feb 05, 2013

        ಅಡಿಕೆ, ತೆಂಗು ನೆಟ್ಟು ಸುಮ್ಮನೆ ಕೂರಿದರೆ ಆದಾಯಕ್ಕೆ ಕಾಯಬೇಕು. ಇದು ವಾಣಿಜ್ಯ ಬೆಳೆಯಾಗಿರಬಹುದು. ಆದರೆ ಅಡಿಕೆ, ತೆಂಗು ಫ‌ಸಲು ನೀಡಲು ವರ್ಷಗಟ್ಟಲೇ ಹಿಡಿಯುತ್ತದೆ. ಈ ಮಧ್ಯೆ ಆದಾಯಕ್ಕೆ ಶುಂಠಿ ಬೆಳೆಸಿದರೆ ಹೇಗೆ? ಇಲ್ಲಿದೆ ನೋಡಿ ಯಶೋಗಾಥೆ.

        ಮಲೆನಾಡಿನಲ್ಲಿ ಅಡಿಕೆ ಮತ್ತು ತೆಂಗಿನ ತೋಟ ಸರ್ವೆ ಸಾಮಾನ್ಯ. ಭತ್ತದ ಬೆಳೆಯುವ ತರಿಗದ್ದೆ, ಖುಷ್ಕಿ ಮತ್ತು ಒಣಭೂಮಿಯಾದ ಬ್ಯಾಣ ಮತ್ತು ಹಕ್ಕಲು ಪ್ರದೇಶಗಳಲ್ಲಿ ಈಗ ತೋಟ ತಲೆ ಎತ್ತಿ ನಿಲ್ಲುತ್ತಿದೆ. ಅಡಿಕೆ, ತೆಂಗಿನಂಥ ಬಹು ವಾರ್ಷಿಕ ವಾಣಿಜ್ಯ ಬೆಳೆ ಕೃಷಿ ಆರಂಭಿಸಿದ ಬಹುತೇಕ ರೈತರು ಮುಂದಿನ ದಿನಗಳ ಸಮೃದ್ಧ ಫ‌ಸಲು ಮತ್ತು ಆದಾಯದ ಗುಂಗಿನಲ್ಲಿ ಕಾಲಕಳೆಯುತ್ತಾರೆ.  ಆದರೆ ಕೆಲವರು ಈ ತೋಟದ ನಡುವೆಯೂ ಹಲವು ಅಂತರ್‌ ಬೇಸಾಯದ ಬೆಳೆ ಬೆಳೆದು ಆದಾಯಗಳಿಸುತ್ತಾರೆ.
        ಹೊಸನಗರ ತಾಲೂಕಿನ ಕೋಟೆತಾರಿಗ ಗ್ರಾಮದ ಶೆಟ್ಟಿಬೀಡು ಕೃಷ್ಣಯ್ಯ ಶೆಟ್ಟಿ ಅಡಿಕೆ-ತೆಂಗಿನ ತೋಟದಲ್ಲಿ ಶುಂಠಿ ಕೃಷಿ ನಡೆಸಿ ಪರಿಶ್ರಮದ ಬೇಸಾಯದಲ್ಲಿ ತಲ್ಲೀನರಾಗಿದ್ದಾರೆ. ಶಿವಮೊಗ್ಗ-ಹೊಸನಗರ ರಾಜ್ಯ ಹೆದ್ದಾರಿಗೆ ತಾಗಿಕೊಂಡಂತೆ ಇವರ ತೋಟವಿದೆ. ಸುಮಾರು 1.5 ಎಕರೆ ವಿಸ್ತೀರ್ಣದ ಈ ಹೊಲದಲ್ಲಿ ಮೂರು ವರ್ಷಗಳ ಹಿಂದೆ ಅಡಿಕೆ ಮತ್ತು ತೆಂಗಿನ ಗಿಡಗಳನ್ನು ನೆಟ್ಟಿದ್ದರು. ಗಿಡದಿಂದ ಗಿಡಕ್ಕೆ 15 ಅಡಿ ಅಂತರದಲ್ಲಿ ಒಟ್ಟು 250 ಅಡಿಕೆ ಸಸಿ ಹಾಗೂ ಗಿಡದಿಂದ ಗಿಡಕ್ಕೆ 20 ಅಡಿ ಅಂತರದಲ್ಲಿ ಒಟ್ಟು 80 ತೆಂಗಿನ ಸಸಿಗಳನ್ನು ನೆಟ್ಟಿದ್ದಾರೆ.  ಎತ್ತರದ ಬ್ಯಾಣ ಪ್ರದೇಶವಾದ ಕಾರಣ ಕೊಳವೆ ಬಾವಿ ಮೂಲಕ ಈ ತೋಟಕ್ಕೆ ಸ್ರಿ³ಂಕ್ಲರ್‌ ಅಳವಡಿಸಿದ್ದಾರೆ.

         ಅಡಿಕೆ ಮತ್ತು ತೆಂಗಿನ ಸಸಿಗಳ ಖರೀದಿ, ಗಿಡ ನೆಡುವ ಗುಂಡಿ ನಿರ್ಮಾಣದ ಕೂಲಿ, ಸಗಣಿ ಗೊಬ್ಬರ ಖರೀದಿ, ನೀರಾವರಿ ವ್ಯವಸ್ಥೆಯ ವೆಚ್ಚ ಹೀಗೆ ಸಾಕಷ್ಟು ಹಣ ವ್ಯಯಿಸಿರುವ ಇವರು ಅಡಿಕೆ ಫ‌ಸಲು ಬರುವವರೆಗೆ ಆದಾಯಗಳಿಸಲು ಅಂತರ್‌ ಬೆಳೆಗೆ ಮೊರೆಹೋಗಿದ್ದಾರೆ. ಮೊದಲ ವರ್ಷ ಸುವರ್ಣಗಡ್ಡೆ, ಎರಡನೇ ವರ್ಷ ಅರಿಶಿನ ಕೃಷಿ ನಡೆಸಿರುವ ಇವರು ಈ ವರ್ಷ ಈ ತೋಟದ ನಡುವೆ ಶುಂಠಿ ಕೃಷಿ ಕೈಗೊಂಡಿದ್ದಾರೆ.  ಅಡಿಕೆ ಮತ್ತು ತೆಂಗಿನ ಗಿಡದಿಂದ ಸುಮಾರು ಅಡಿ ಅಂತರದಲ್ಲಿ ಶುಂಠಿ ಪಟ್ಟೆ ನಿರ್ಮಿಸಿದ್ದಾರೆ.

        ಸುಮಾರು 12 ಅಡಿ ಉದ್ದ ಒಂದುವರೆ ಅಡಿ ಎತ್ತರದ ಶುಂಠಿ ಪಟ್ಟೆ ನಿರ್ಮಿಸಿ ಶುಂಠಿ ಬೀಜ ಹಾಕಿದ್ದಾರೆ.  ಇವರು ಈ ತೋಟದಲ್ಲಿ 10 ಕ್ವಿಂಟಾಲ್‌ ಶುಂಠಿ ಬೀಜ ಹಾಕಿದ್ದು ನೆಡುವಾಗ ಸಗಣಿ ಗೊಬ್ಬರ ಹಾಕಿ ತರಗೆಲೆ ಮತ್ತು ಹಸಿರೆಲೆಯನ್ನು ಮುಚ್ಚಿದ್ದರು. ಬೀಜ ಮೊಳಕೆಯೊಡೆದು ಎಲೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಅಂದರೆ ಸುಮಾರು 25 ದಿನಕ್ಕೆ  ಪ್ರತಿ ಗಿಡಕ್ಕೆ ಸರಾಸರಿ 30 ಗ್ರಾಂ.ಸಿಗುವಂತೆ ಡಿ.ಎ.ಪಿ.ಗೊಬ್ಬರ ನೀಡಿದ್ದಾರೆ. ನಂತರ ಪ್ರತಿ 25 ದಿನಕ್ಕೆ ಒಮ್ಮೆಯಂತೆ ಎರಡು ಸಲ ಸರಾಸರಿ 20 ಗ್ರಾಂ.ನಷ್ಟು ಪೊಟ್ಯಾಷ್‌ ಹಾಗೂ ಒಂದು ಸಲ 19:19  ಕಾಂಪ್ಲೆಕ್ಸ್‌ ಗೊಬ್ಬರ ನೀಡಿದ್ದಾರೆ. ಶುಂಠಿ ಸಸ್ಯಗಳ ನಡುವೆ ಬೆಳೆದ ಕಳೆಗಳನ್ನು ಕೂಲಿಯಾಳುಗಳ ನೆರವಿನಿಂದ ಮೂರು ಸಲ ಕಳೆ ತೆಗೆಸಿದ್ದರಿಂದ ಈಗ ಶುಂಠಿ ಹುಲುಸಾಗಿ ಬೆಳೆದಿದೆ.
        ಈ ವರ್ಷ ಮಳೆ ಪ್ರಮಾಣ ಕಡಿಮೆಯಾದ ಕಾರಣ ಇವರು ಕೊಳವೆ ಬಾವಿಯಿಂದ ತೋಟಕ್ಕೆ ಅಳವಡಿಸಿದ ಸ್ಪ್ರಿಂಕ್ಲರ್‌ ನೀರನ್ನು ಹಾಯಿಸಿದ್ದ ಶುಂಠಿ ಕೊಂಬೆಗಳು ನೆಲದ ಪಟ್ಟೆಯೊಳಗೆ  ಹೆಚ್ಚು ವಿಸ್ತಾರವಾಗಿ ಹರಡಿಕೊಳ್ಳಲು ಸಾಧ್ಯವಾಗಿದೆ. 10 ಕ್ವಿಂಟಾಲ್‌ ಶುಂಠಿ ಬೀಜದ ಈ ಕೃಷಿಯಿಂದ ಸುಮಾರು 90 ಕ್ವಿಂಟಾಲ್‌ ಫ‌ಸಲು ಪಡೆಯುವ ನಿರೀಕ್ಷೆ ಅವರದಾಗಿದ್ದು,  ಕ್ವಿಂಟಾಲ್‌ ಒಂದಕ್ಕೆ 1,500ರೂ. ಧಾರಣೆ ದೊರೆತರೂ 1 ಲಕ್ಷದ 25 ಸಾವಿರ ರೂ ಆದಾಯ ಇವರ ಪಾಲು.  ಶುಂಠಿ ಕೃಷಿಗಾಗಿ ಮಾಡಿದ ಖರ್ಚು ಸುಮಾರು 55 ಸಾವಿರ ರೂ.ಕಳೆದರೂ ಅವರಿಗೆ ನಿವØಳ  70 ಸಾವಿರ ಲಾಭ ದೊರೆಯಲಿದೆ.

        ಅಡಿಕೆ ಮತ್ತು ತೆಂಗಿನ ತೋಟದ ಕೃಷಿ ಆರಂಭಿಸಿದಾಗ ಫ‌ಸಲು ಬರುವವರೆಗೆ ಸಾಕಷ್ಟು ಆದಾಯಗಳಿಸಬಹುದೆಂದು ಇವರು ಸಾಬೀತು ಪಡಿಸಿರುವುದು ಸುತ್ತಮುತ್ತಲ ರೈತರಿಗೆ ಸ್ಪೂರ್ತಿಯಾಗಿದೆ.
        ಮೊಬೈಲ್‌ ಸಂಖ್ಯೆ 9740200872 

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus