ನಾರಾಯಣ ಎಂ. ಹೆಗಡೆ | Feb 08, 2013
ಸರಳತೆ, ಕ್ಲಪ್ತತೆ, ಪ್ರಾಮಾಣಿಕತೆ, ಬದ್ಧತೆಗೆ ಅಪರ್ಯಾಯ ಹೆಸರು ಎಸ್. ಗೋಪಾಲಕೃಷ್ಣ. ಯಾವ ಸದ್ದುಗದ್ದಲವಿಲ್ಲದೆ ಸಂಘಟನೆಯ ಮೂಲಕ ಕಲೆ, ಸಂಸ್ಕೃತಿ, ಸಮಾಜ ಸೇವೆ ಮಾಡುವಲ್ಲಿ ಸಂತೃಪ್ತಿ ಕಂಡವರು. ಸಣ್ಣ ಸಣ್ಣ ಕೆಲಸವನ್ನೂ ದೊಡ್ಡ ಪ್ರೀತಿಯಿಂದ ಮಾಡಿದವರು. ಅಕ್ಷರಶಃ ಕರ್ಮಯೋಗಿ.
ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರು. ಉಡುಪಿಗೆ ಬಂದು ಉದ್ಯೋಗಿಯಾಗಿ ಉಡುಪಿಯವರೇ ಆಗಿ ದ್ದರು. ಜೀವ ವಿಮಾ ನಿಗಮದಲ್ಲಿ ಸುಮಾರು ನಾಲ್ಕು ದಶಕಗಳ ಸೇವಾವಧಿಯಲ್ಲಿ ತಮ್ಮ ಸಮಯ ಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆಯಿಂದ ಸಹೋದ್ಯೋಗಿಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ದ್ದರು. ಸಾಯಿ ಮಂದಿರ ನಡೆಸುತ್ತಿದ್ದ ಆರೋಗ್ಯ ಶಿಬಿರಗಳಲ್ಲಿ ಕಾರ್ಯಕರ್ತರಾಗಿ ದುಡಿದವರು.
ಉದ್ಯೋಗದಲ್ಲಿರುವಾಗಲೇ
ಆಧ್ಯಾತ್ಮಿಕ, ಸಾಂಸ್ಕೃತಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡ ವರು. ನಿವೃತ್ತಿಯ ಅನಂತರ ಪೂರ್ಣವಾಗಿ ಆ ಸಂಸ್ಥೆಗಳಿಗೆ ತಮ್ಮನ್ನು ಸಮರ್ಪಿಸಿಕೊಂಡವರು. ಆಸ್ತಿಕ ಮನೋಭಾವದ ಅವರು ಭಜನೆ, ಧ್ಯಾನದಲ್ಲಿ ನೆಮ್ಮದಿಯ ಬದುಕು ರೂಪಿಸಿಕೊಂಡಿದ್ದರು. ಸತ್ಯಸಾಯಿ ಸಮಿತಿ ಉಡುಪಿ ಶಾಖೆಯ ಸಕ್ರಿಯ ಕಾರ್ಯಕರ್ತರಾಗಿ ದ್ದರು. ಕೆ.ಆರ್.ಕೆ. ಭಟ್ ಮೆಮೋರಿಯಲ್ ಟ್ರಸ್ಟಿನ ಕಾರ್ಯದರ್ಶಿಯಾಗಿ ಉಡುಪಿ ಸಾಯಿ ಮಂದಿರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಉಡುಪಿಯ ಯಕ್ಷಗಾನ ಕಲಾರಂಗದಲ್ಲಿ ಕಳೆದ 32 ವರ್ಷಗಳಿಂದ ಸಕ್ರಿಯ ಸದಸ್ಯರು. ನಿರಂತರ 28 ವರ್ಷಗಳಿಂದ ಸಂಸ್ಥೆಯ ಕೋಶಾಧಿಕಾರಿಯಾಗಿ ಅವರು ಸಲ್ಲಿಸಿದ ಸೇವೆ ಅಮೂಲ್ಯ. ಇಂದು ಪ್ರತಿಷ್ಠಿತ ಸಾಂಸ್ಕೃತಿಕ ಸಂಘಟನೆಯಾಗಿ ಜನಮನ್ನಣೆಗೆ ಪಾತ್ರವಾದ ಈ ಸಂಸ್ಥೆಯ ಯಶಸ್ಸಿನಲ್ಲಿ ಎಸ್. ಗೋಪಾಲಕೃಷ್ಣರ ಪಾತ್ರ ದೊಡ್ಡದು. ಈ ವಯಸ್ಸಿನಲ್ಲೂ ವರ್ಷಕ್ಕೆ ಸುಮಾರು 70-80 ಲಕ್ಷ ರೂ.ಗಳ ವಾರ್ಷಿಕ ವ್ಯವಹಾರದ ಸಂಸ್ಥೆಯ ಪರಿಶೋಧಿತ ಲೆಕ್ಕಪತ್ರವನ್ನು ಕ್ಲಪ್ತ ಸಮಯಕ್ಕೆ ಒಂದಿನಿತೂ ಲೋಪವಾಗದಂತೆ ಮಂಡಿಸುತ್ತಿದ್ದುದು ಅವರ ಕಾರ್ಯದಕ್ಷತೆಗೆ ಪ್ರತ್ಯಕ್ಷ ಸಾಕ್ಷಿ. ಕಲಾವಿದರ ಕ್ಷೇಮಚಿಂತನೆಯ ಯಕ್ಷನಿಧಿಯ ಪ್ರತಿನಿಧಿಗಳ ಸಭೆ, ಸಮಾವೇಶ ಸಂದರ್ಭದ ಪ್ರಯಾಣವೆಚ್ಚ, ಮೆಡಿಕ್ಲೈಂ ಹಣ ಪಾವತಿ ಯಾವುದೇ ಇರಲಿ- ತತ್‌ಕ್ಷಣ ವಿಲೇವಾರಿ ಮಾಡುತ್ತಿದ್ದರು. ಅವರ ಬೀಸು ನಡಿಗೆಯ ಹಾಗೆ ಅವರ ಕಾರ್ಯ ವೈಖರಿ ಇತ್ತು. ಅವರಿಗೆ ಕಲಾವಿದರ ಕುರಿತು ಅಪಾರ ಪ್ರೀತಿ ಅಭಿಮಾನವಿತ್ತು. ಎರಡು ವರ್ಷದ ಹಿಂದೆ ಯಕ್ಷಗಾನ ಕಲಾ ರಂಗ ಸಂಸ್ಥೆಯ ಕಾರ್ಯಕರ್ತರಿಗೆ ನೀಡುವ "ಯಕ್ಷ ಚೇತನ' ಪ್ರಶಸ್ತಿ ನೀಡಿ ಗೌರವಿಸಿತ್ತು.
ಕುಟುಂಬ ವತ್ಸಲರಾಗಿ ತಮ್ಮ ಕರ್ತವ್ಯ ವನ್ನು ಸಮರ್ಥವಾಗಿ ನಿರ್ವಹಿಸಿದವರು. ಆರ್ಥಿಕ ವಾಗಿ ಸಂಕಷ್ಟದಲ್ಲಿದ್ದ ತಮ್ಮ ಕುಟುಂಬದಲ್ಲಿ ಒಡಹುಟ್ಟಿದವರಿಗೆ ಸ್ವಂತ ನೆಲೆ ಕಲ್ಪಿಸಿಕೊಟ್ಟ ವರು. ಪತ್ನಿ ಸರಸ್ವತಿ, ಪುತ್ರಿ ಕಮಲಾ, ಪುತ್ರ ಗುರುದಾಸ, ಮೊಮ್ಮಕ್ಕಳಿಂದ ಕೂಡಿದ ಪ್ರೀತಿಯ ಕುಟುಂಬ. ಮಕ್ಕಳೂ ತಂದೆಯ ಆದರ್ಶವನ್ನೇ ಮೈಗೂಡಿಸಿಕೊಂಡವರು. ಮಗಳು ಸಂಗೀತ ವಿದುಷಿ. ಮಗ ನುರಿತ ತಬಲಾ ಕಲಾವಿದ.
ಇಂದು ನಮ್ಮೊಂದಿಗೆ ಅವರಿಲ್ಲ. ಅವರ ಜೀವನೋತ್ಸಾಹ, ಶ್ರದ್ಧೆ, ಸರಳತೆ, ಪ್ರಾಮಾಣಿಕತೆ, ಸಮಷ್ಟಿಯನ್ನು ಪ್ರೀತಿಸುವ ಸಮಚಿತ್ತ ಎಲ್ಲರಿಗೂ ಮಾದರಿ. ಇದು ಆ ಹಿರಿಯ ಚೇತನಕ್ಕೆ ಸಲ್ಲಿಸುವ ಅಕ್ಷರ ನಮನ.