Thursday, May 23, 2013
Last Updated: 9:14:34 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಅಬ್ಬಕ್ಕಬ್ಬೆಯರಿಗೆ ದಶಮಾನ ಪ್ರಶಸ್ತಿ
      • ಭಾಸ್ಕರ ರೈ ಕುಕ್ಕುವಳ್ಳಿ | Feb 08, 2013

        "ಬನ್ನಿ ಅಬ್ಬಕ್ಕನ ನಾಡಿಗೆ! ಧರ್ಮ ಸಮನ್ವಯದ ಬೀಡಿಗೆ! ಹೆಮ್ಮೆಯ ತುಳುನಾಡಿಗೆ!' ಈ ಘೋಷ ವಾಕ್ಯದೊಂದಿಗೆ ಉಳ್ಳಾಲದ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿಯು ಒಂಬತ್ತು ಉತ್ಸವಗಳನ್ನು ನೆರವೇರಿಸಿ ಈಗ ದಶಮಾನೋತ್ಸವದ ಸಂಭ್ರಮದಲ್ಲಿದೆ. 1997ರಲ್ಲಿ ಆರಂಭವಾದ ವೀರ ರಾಣಿ ಅಬ್ಬಕ್ಕ ಉತ್ಸವ ಅನೇಕ ಏಳುಬೀಳುಗಳ ನಡುವೆಯೂ ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಸೇನಾನಿಯೊಬ್ಬಳು ತುಳು ನೆಲದಲ್ಲಿ ಮಾಡಿದ ಸಾಹಸಗಾಥೆಯನ್ನು ಸ್ಮರಿಸುವ ಮಹಾಪರ್ವವಾಗಿ ಆಚರಿಸಲ್ಪಡುತ್ತಿದೆ. ಆರ್ಥಿಕ ಅಡಚಣೆಯಿಂದಾಗಿ ಉತ್ಸವದ ನಿರಂತರತೆಯನ್ನು ಕಾಯ್ದುಕೊಳ್ಳಲಾಗದ ಸ್ಥಳೀಯ ಸಮಿತಿ, ಕಳೆದ ಮೂರು ವರ್ಷಗಳಿಂದ ಸರಕಾರದ ಅನುದಾನ ದೊರೆಯುತ್ತಿರುವ ಕಾರಣ ಕೊಂಚ ನಿರಾಳವಾಗಿದೆ.

        ವೀರರಾಣಿ ಅಬ್ಬಕ್ಕ ಉತ್ಸವ ವೇದಿಕೆಯಲ್ಲಿ ಪ್ರತಿ ವರ್ಷ ನೀಡುವ ಎರಡು ಪ್ರತಿಷ್ಠಿತ ಪ್ರಶಸ್ತಿಗಳು ಅಬ್ಬಕ್ಕಬ್ಬೆ ಯರಿಗೆ ಅಂದರೆ ಮಹಿಳೆಯರಿಗೇ ಮೀಸಲಾಗಿದೆ. ತುಳು ಭಾಷೆ, ಸಾಹಿತ್ಯ, ಸಂಶೋಧನಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದವರಿಗೆ ಪ್ರಶಸ್ತಿ ಹಾಗೂ ಕಲೆ, ಕ್ರೀಡೆ, ಸಮಾಜ ಸೇವೆ ಇತ್ಯಾದಿ ಅನ್ಯಾನ್ಯ ಕ್ಷೇತ್ರಗಳ ಸಾಧಕಿ ಯರಿಗೆ ಪುರಸ್ಕಾರ ನೀಡಲಾಗುತ್ತಿದೆ. ಅದರಂತೆ ಈ ಬಾರಿಯ ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ತುಳು-ಕನ್ನಡ ಲೇಖಕಿ ಜಯಂತಿ ಎಸ್‌. ಬಂಗೇರ ಮತ್ತು ರಾಣಿ ಅಬ್ಬಕ್ಕ ಪುರಸ್ಕಾರಕ್ಕೆ ಜಾನಪದ ಕಲಾವಿದೆ ಕರ್ಗಿ ಶೆಡ್ತಿ ಆಯ್ಕೆಯಾಗಿದ್ದಾರೆ.

        ಜಯಂತಿ ಎಸ್‌. ಬಂಗೇರ 

        ಕನ್ನಡ ಮತ್ತು ತುಳು ಬರಹಗಾರ್ತಿಯಾಗಿರುವ ಜಯಂತಿ ಎಸ್‌. ಬಂಗೇರ ಮೂಡಬಿದಿರೆಯ ದಿ| ಲೋಕು ಸಾಲಿಯಾನ್‌ ಮತ್ತು ಭಾಗೀರಥಿ ದಂಪತಿಯ ಮಗಳಾಗಿ ಮಾರ್ಚ್‌ 15, 1957 ರಂದು ಜನಿಸಿದರು, ಏಳನೇ ತರಗತಿಗೇ ವಿದ್ಯಾಭ್ಯಾಸ ಮೊಟಕುಗೊಳಿಸಿದ ಇವರು ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡು ತನ್ನ 18ರ ಹರೆಯದಲ್ಲೇ ನಾಟಕ ರಚನೆಗೆ ತೊಡಗಿದ್ದರು. ಎನ್ನಂದಿ ಭಾಗ್ಯ, ಅರ್ಥ ಅವಂದಿ ಪಾತೆರ, ಸವಿತನ ಮದೆ¾, ರಾಪುನ ಪಾಂತೆ, ಸತ್ಯನೆಗಪುನಗ, ಮಾಯದ ಪುಣ್ಣಮೆ, ಪೂಜೆದ ಪೂ, ಬಿನ್ನರೆ ಗೌಜಿ, ಮಾಪು ಮಲ್ಪುಲೇ - ಹೀಗೆ ಇವರು ಬರೆದ ತುಳು ನಾಟಕಗಳೆಲ್ಲ ರಂಗದಲ್ಲಿ ಪ್ರದರ್ಶನಗೊಂಡು ಯಶಸ್ವಿಯಾಗಿವೆ. ತುಳುಕೂಟ, ತುಳುವೆರೆಬಂಧು, ತುಳು ಬೊಳ್ಳಿ, ತುಳುವೆರೆ ತುಡರ್‌ ಪತ್ರಿಕೆಗಳಲ್ಲಿ ಇವರ ಸಣ್ಣ ಕತೆಗಳು ಪ್ರಕಟವಾಗಿವೆ. ಗೋರಿ, ಸೊರೆಗೆದ ಪೂ ಕಾದಂಬರಿಗಳಲ್ಲದೆ ಮಿಡಿದ ಕಂಬನಿ ಎಂಬ ಕನ್ನಡ ಕಾದಂಬರಿಯನ್ನೂ ಬರೆದಿದ್ದಾರೆ.

        ಉತ್ತಮ ನಟಿಯಾಗಿರುವ ಜಯಂತಿಯವರಿಗೆ ನೆತ್ತರಾ-ನೀರಾ ನಾಟಕದ ನಾಯಕಿ ಹಾಗೂ ಉಳ್ಳಾಲದ ರಾಣಿ ಅಬ್ಬಕ್ಕದ ಲಕ್ಷ್ಮಪ್ಪಬಂಗರಸನ ಪಾತ್ರಗಳು ಹೆಸರು ತಂದುಕೊಟ್ಟಿವೆ. 2009ರಲ್ಲಿ ಬಂದೆ ಬರುತಾವ ಕಾಲ ಈ ಟಿ.ವಿ. ಕಿರುತೆರೆ ಧಾರಾವಾಹಿಯಲ್ಲೂ ನಟಿಸಿ ದ್ದಾರೆ. ನಾಟಕ ಹಸ್ತಪ್ರತಿಗಾಗಿ ಮಂಗಳೂರಿನ ತುಳು ಕೂಟದಿಂದ 1998, 2000 ಮತ್ತು 2004ರಲ್ಲಿ ಸತತ ಮೂರು ಬಾರಿ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಪಡೆದಿರುವ ಇವರು 1998ರಲ್ಲಿ ಮನಸ್‌ ಬದಲಾನಗ ಕಥಾಸಂಕಲನ ಹಾಗೂ 2001ರಲ್ಲಿ ಸತ್ಯ ನೆಗಪುನಗ ನಾಟಕಗಳಿಗೆ ಎರಡು ಬಾರಿ ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನವನ್ನು ಗಳಿಸಿದ್ದಾರೆ. ಸೊರೆಗೆದ ಪೂ ತುಳು ಕಾದಂಬರಿಗೆ ಉಡುಪಿ ತುಳುಕೂಟದಿಂದ ಪಣಿಯಾಡಿ ಪ್ರಶಸ್ತಿ (2002), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ (2004), ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2006) ಇತ್ಯಾದಿ ಗೌರವಗಳು ಅವರಿಗೆ ಲಭಿಸಿವೆ.

        ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆಯಾಗಿರುವ ಜಯಂತಿ ಎಸ್‌. ಬಂಗೇರ ಅಖೀಲ ಭಾರತ ತುಳು ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಹಾಗೂ ಮೂಡಬಿದಿರೆ ತುಳು ಕೂಟದ ಉಪಾಧ್ಯಕ್ಷೆ ಯಾಗಿ ದುಡಿಯುತ್ತಿದ್ದಾರೆ. ಪ್ರಸ್ತುತ ಉಡಲ್‌ ಎಂಬ ತುಳು ತ್ರೆ„ಮಾಸಿಕ ಪತ್ರಿಕೆಯನ್ನು ನಡೆಸುತ್ತಿದ್ದಾರೆ. 1980 ರಿಂದ 86ರವರೆಗೆ ಬೆಂಗಳೂರಿನ ರಫ್ತು ಉದ್ಯಮ ವೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು 1986ರಲ್ಲಿ ಸದಾಶಿವ ಬಂಗೇರರನ್ನು ವಿವಾಹವಾಗಿ ಮೂಡ ಬಿದಿರೆಯಲ್ಲಿ ಸುಖೀ ಸಂಸಾರ ಸಾಗಿಸುತ್ತಿದ್ದಾರೆ.

        ಕರ್ಗಿ ಶೆಡ್ತಿ

         ಬೆಳ್ತಂಗಡಿ ತಾಲೂಕಿನ ಒಬ್ಬೆದೊಟ್ಟು ರಾಮಣ್ಣ ಶೆಟ್ಟಿ ಮತ್ತು ಸುಂದರಿ ದಂಪತಿಗೆ ಜೂನ್‌ 20, 1952ರಲ್ಲಿ ಜನಿಸಿದ ಕರ್ಗಿ ಶೆಡ್ತಿ ಅವರು ಕಲಿತದ್ದು ಮೂರನೇ ತರಗತಿ. ತಮ್ಮ 14ನೇ ವಯಸ್ಸಿನಿಂದ ಅತ್ರಿಜಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿರಿದರ್ಶನ ಪಾತ್ರಿ ಯಾಗಿರುವುದಲ್ಲದೆ, ಜಾನಪದ ಕಲಾವಿದೆಯಾಗಿ ಹಲವು ಸಂದಿ-ಪಾಡªನಗಳನ್ನು ಕಂಠಪಾಠ ಒಪ್ಪಿಸುವ ಸಮಥೆì. ಹೆಸರಾಂತ ನಾಟಿ ವೈದ್ಯೆಯಾಗಿರುವ ಕರ್ಗಿ ಅವರು ಸುಮಾರು ನಾಲ್ಕು ನೂರು ಹೆರಿಗೆಗಳನ್ನು ಮಾಡಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಹಲವು ಸಂಘ-ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿವೆ.

        ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಜಿಲ್ಲಾ ಸಾಹಿತ್ಯ ಪರಿಷತ್‌ ಮಂಡ್ಯ ವತಿಯಿಂದ ತಾಯಮ್ಮ ಎಸ್‌. ಮಲ್ಲಯ್ಯ ಜಾನಪದ ಕಲಾವಿದೆ ಪ್ರಶಸ್ತಿ-2007, ಬೆಂಗಳೂರು ಕರ್ನಾಟಕ ಜಾನಪದ ಕಂಸಾಳೆ ಸಂಘದ ಜಾನಪದ ಲೋಕ ಪ್ರಶಸ್ತಿ-2010, ಕರ್ನಾಟಕ ಜಾನಪದ ಅಕಾಡೆಮಿಯ ಜಾನಪದ ಪ್ರಶಸ್ತಿ-2011 ಇತ್ಯಾದಿ ಗೌರವಗಳಿಗೆ ಪಾತ್ರರಾಗಿರುವ ಕರ್ಗಿ ಶೆಡ್ತಿ ಡಾ| ಅಶೋಕ ಆಳ್ವರ ಸಿರಿ ಕಾವ್ಯಲೋಕ ಗ್ರಂಥಕ್ಕೆ ಹಾಡಿದ್ದಾರೆ. 2011ರಲ್ಲಿ ಅಸೈಗೋಳಿಯಲ್ಲಿ ಜರಗಿದ 8ನೇ ವೀರರಾಣಿ ಅಬ್ಬಕ್ಕ ಉತ್ಸವದದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದ್ದಾರೆ. ತಮ್ಮ 13ನೇ ವಯಸ್ಸಿನಲ್ಲಿ ನಾರಾಯಣ ಶೆಟ್ಟಿಯವರನ್ನು ವಿವಾಹವಾಗಿರುವ ಕರ್ಗಿ ಶೆಡ್ತಿ ನಾಲ್ವರು ಮಕ್ಕಳನ್ನು ಹೊಂದಿದ್ದು, ಪ್ರಸ್ತುತ ಅಳದಂಗಡಿ ಸಮೀಪ ಬಡಾ ಕಾರಂದೂರು ಗ್ರಾಮದಲ್ಲಿ ಸುಖೀ ಜೀವನ ಸಾಗಿಸುತ್ತಿದ್ದಾರೆ.

        ವೀರರಾಣಿ ಅಬ್ಬಕ್ಕ  ಪ್ರಶಸ್ತಿ ಮತ್ತು ಪುರಸ್ಕಾರ ಗಳು ತಲಾ ರೂ. 5000 ನಗದು ಮತ್ತು ಪ್ರಶಸ್ತಿ ಫ‌ಲಕ ಗಳನ್ನೊಳಗೊಂಡಿದೆ. ಕಳೆದ ಒಂಬತ್ತು ಉತ್ಸವಗಳಲ್ಲಿ ಈ ಪ್ರಶಸ್ತಿ ಸಾಧಕ ಮಹಿಳೆಯರಾದ ಡಾ| ಸುಶೀಲಾ ಉಪಾಧ್ಯಾಯ, ಡಾ| ಸುನೀತಾ ಎಂ. ಶೆಟ್ಟಿ, ಕೆ. ಲೀಲಾವತಿ, ಗಿಡಿಗೆರೆ ರಾಮಕ್ಕ ಮುಗೇರಿ¤, ಯಜ್ಞಾವತಿ ಕೇಶವ ಕಂಗನ್‌, ಪ್ರಮೋದಾ ಕೆ. ಸುವರ್ಣ, ಎಚ್‌. ಶಕುಂತಳಾ ಭಟ್‌, ಜಾನಕಿ ಬ್ರಹ್ಮಾವರ, ಲಲಿತಾ ರೈ (ಅಬ್ಬಕ್ಕ ಪ್ರಶಸ್ತಿ); ಭಾನುಮತಿ ಮೆಂಡನ್‌, ಶಶಿಕಲಾ ಶೆಟ್ಟಿ, ಕೆ. ಸರೋಜಿನಿ ಶೆಟ್ಟಿ, ಪೊಡಿಮ್ಮ ಇಂಞ, ಲೀಲಾವತಿ ಬೈಪಾಡಿತ್ತಾಯ, ಹೊನ್ನಮ್ಮ, ಗೀತಾ ಬಾಯಿ, ಸಿಸ್ಟರ್‌ ಒಲಿಂಡಾ ಪಿರೇರಾ, ಜಯಶೀಲ (ಅಬ್ಬಕ್ಕ ಪುರಸ್ಕಾರ)- ಇವರಿಗೆ ಸಂದಿದೆ.

        ಇದೇ ಫೆಬ್ರವರಿ 9 ಮತ್ತು 10ರಂದು ಉಳ್ಳಾಲದಲ್ಲಿ ಜರಗುವ ವೀರರಾಣಿ ಅಬ್ಬಕ್ಕ ದಶಮಾನೋತ್ಸವದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಪ್ರಶಸ್ತಿ ಪ್ರದಾನ ಮಾಡು ವರು. ಇದೇ ವೇಳೆ ಅಬ್ಬಕ್ಕಬ್ಬೆಯರಿಗೆ ಬಿನ್ನವತ್ತಳೆ ಎಂಬ ವಿಶಿಷ್ಟ ಕಾರ್ಯಕ್ರವನ್ನು ಅಳವಡಿಸಿಕೊಂಡಿದ್ದು ಇದುವರೆಗೆ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತರಾದವರಿಗೆ ಉತ್ಸವದ ಸಮಾರೋಪ ವೇದಿಕೆಯಲ್ಲಿ ಬಿನ್ನವತ್ತಳೆ ನೀಡಿ ಗೌರವಿಸಲಾಗುವುದು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus