ಸುಕುಮಾರ ಆಲಂಪಾಡಿ | Feb 08, 2013
ಧಾತು ಮತ್ತು ಮಾತುಗಳ ಪರಿಪಕ್ವ ಮೇಳ ಒಂದು ಕಛೇರಿಯ ಸರ್ವಾಂಗೀಣ ಯಶಸ್ಸಿಗೆ ಮಹತ್ವದ ಭೂಮಿಕೆಯನ್ನು ಒದಗಿಸುತ್ತದೆ. 28ನೇ ಆಲಂಪಾಡಿ ವೆಂಕಟೇಶ ಶಾನುಭಾಗ ಸ್ಮಾರಕ ಸಂಗೀತೋತ್ಸವದಲ್ಲಿ ಪ್ರಧಾನ ಕಛೇರಿಯನ್ನು ನಡೆಸಿಕೊಟ್ಟ ಚೇರ್ತಲ ರಂಗನಾಥ ಶರ್ಮಾ ಅವರ ಪ್ರಸ್ತುತಿ ಈ ಅಂಶವನ್ನು ಮತ್ತೂಮ್ಮೆ ಶ್ರುತ ಪಡಿಸಿತು. ಮಧುರೆಯ ಸದ್ಗುರು ಸಂಗೀತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಚೇರ್ತಲ ತಮ್ಮ ಘನವಾದ ಶಾರೀರವನ್ನು ಭಾವಗಾಂಭೀರ್ಯದೊಂದಿಗೆ ಮೇಳೈಸಿ ದುಡಿಸಿಕೊಳ್ಳುತ್ತಾ ರಸಿಕರಿಗೆ ಸಂತೃಪ್ತಿಯ ಕ್ಷಣಗಳನ್ನು ಒದಗಿಸಲು ಶಕ್ತರಾದರು.
ಲಾಲ್ಗುಡಿಯವರ ಚಾರುಕೇಶಿ ವರ್ಣದೊಂದಿಗೆ ಕಛೇರಿ ಆರಂಭಿಸಿದ ಶರ್ಮಾ ಪ್ರಣತೋಸ್ಮಿಯ ನಾಟದಲ್ಲಿ ಕಛೇರಿಗೆ ಒಂದು ಲಾಲಿತ್ಯದ ಸುದೃಢ ಅಡಿಪಾಯ ಹಾಕಿಕೊಟ್ಟರು. ಪುರಂದರದಾಸರ ಸ್ಮರಣೆಯೊಂದೇ ಸಾಲದೆ (ಮಲಯಮಾರುತ, ಆದಿತಾಳ) ಸುಂದರವಾದ ಮನೋಧರ್ಮದಲ್ಲಿ ಮೂಡಿ ಬಂತು. ಸಿಂಹೇಂದ್ರ ಮಧ್ಯಮದ ಮುತ್ತಯ್ಯ ಭಾಗವತರ ಕೃತಿ ಶರಣಂ ವಿಜಯದ ಬಳಿಕ ಪರಾಕು (ಖರಹರಪ್ರಿಯ, ಆದಿತಾಳ ) ಎತ್ತಿಕೊಂಡು ವಿಸ್ತಾರವಾಗಿ ಪೋಷಿಸಿದರು. ಲತಾಂಗಿಯ ವೆಂಕಟರಮಣ ವಿಸ್ತಾರವಾದ ಆಲಾಪನೆ, ಸ್ವರ ಪ್ರಸ್ತಾರಗಳಲ್ಲಿ ಸುಂದರವಾದ ಮನೋಧರ್ಮದಿಂದ ಮೂಡಿಬಂತು. ಬೇಗಡೆಯನ್ನು ಹಾಡಿದ ಬಳಿಕ ಪ್ರಧಾನ ಪ್ರಸ್ತುತಿಯಾಗಿ ಮೋಹನದಲ್ಲಿ ಮೋಹನ ರಾಮವನ್ನು ಎತ್ತಿಕೊಂಡರು. ಈ ಕೃತಿಯಲ್ಲಿ ಅವರು ಪೋಣಿಸಿದ ಸರ್ವಲಘುಗಳ ಸ್ವರ ಪ್ರಸ್ತಾರದ ಝೇಂಕಾರಗಳು ಶಮ್ಮಂಗುಡಿ ಬಾನಿಯನ್ನು ಸಾಕ್ಷಾತ್ಕರಿಸಿದವು. ಆಲಾಪನೆ, ನೆರವಲ್, ಸ್ವರಪ್ರಸ್ತಾರಗಳೆಲ್ಲವೂ ವಿಭಿನ್ನ ಆಯಾಮಗಳಲ್ಲಿ ಮೂಡಿ ಬಂದು ಕೃತಿ ಸರ್ವಾಂಗ ಸುಂದರವಾಗಿ ರಂಜಿಸಿತು.
ಡಾ| ಶಂಕರರಾಜ್ ಮೃದಂಗದಲ್ಲಿ, ಮಾಞೂnರ್ ಉಣ್ಣಿಕೃಷ್ಣನ್ ಘಟದಲ್ಲಿ ಒಂದು ಸೊಗಸಾಗಿ ಮೇಳೈಸಿದ ತನಿ ಆವರ್ತನವನ್ನಿತ್ತರು. ಮಧು ವಂಶಿ (ನರಜನ್ಮ ಬಂದಾಗ - ಪುರಂದರ ದಾಸ). ಕಾಪಿ (ಜಗದೋದ್ಧಾರನ)ಗಳ ಬಳಿಕ ಮಿಶ್ರ ಪಹಾಡಿಯ ಮಿಶ್ರ ಛಾಪು ತಿಲ್ಲಾನದೊಂದಿಗೆ ಚೇರ್ತಲ ಮಂಗಲ ಹಾಡಿದರು. ವಯಲಿನ್‌ನಲ್ಲಿ ಎ.ಎಲ್. ಅನಂತ ಪದ್ಮನಾಭ ಉತ್ತಮವಾಗಿ ಸಹಕರಿಸಿದರು.
ಇದಕ್ಕೂ ಮೊದಲು ನಡೆದ ಸಂಗೀತಾರಾಧನಾ ಕಾರ್ಯಕ್ರಮದಲ್ಲಿ ರಾಧಾ ಮುರಳೀಧರ್, ಶೋಭಿತಾ ಸತೀಶ್, ಕುಂಜಾರು ಪ್ರಭಾಕರ, ಹರಿ ನಾರಾಯಣ ಸರಳಾಯ, ಪುರುಷೋತ್ತಮ ಪುಣಿಂಚಿತ್ತಾಯ, ಗೋವಿಂದನ್ ನಂಬಿಯಾರ್, ಪೈಕ ಸೂರ್ಯನಾರಾಯಣ ಮೊದಲಾದ ಕಲಾವಿದರು ಭಾಗವಹಿಸಿ ಉತ್ಸವದ ಕಳೆಯನ್ನು ಮೂಡಿಸಿದರು.