Sunday, May 19, 2013
Last Updated: 9:55:43 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಯಜಮಾನ ಪಾರಂಪಳ್ಳಿ ಶ್ರೀಧರ ಹಂದೆ
    • ಯಕ್ಷಗಾನ ಮೇಳಗಳ ಯಜಮಾನರಾಗಿ, ಪೋಷಕರಾಗಿ, ಸಂಘಟಕರಾಗಿ ಗುರುತಿಸಿಕೊಂಡವರು ಯಜಮಾನ ಪಾರಂಪಳ್ಳಿ ಶ್ರೀಧರ ಹಂದೆಯವರು.

      • ಸುಜಯೀಂದ್ರ ಹಂದೆ ಎಚ್‌. | Feb 08, 2013

        ಕರಾವಳಿ ಜಿಲ್ಲೆಯಾದ್ಯಂತ ಹೆಸರು ಮಾಡಿದ, ಬಡಗು ತಿಟ್ಟಿನ ಯಕ್ಷಗಾನ ಮೇಳಗಳ ಯಜಮಾನರಾಗಿ, ಪೋಷಕರಾಗಿ, ಸಂಘಟಕರಾಗಿ ಗುರುತಿಸಿಕೊಂಡವರು ಯಜಮಾನ ಪಾರಂಪಳ್ಳಿ ಶ್ರೀಧರ ಹಂದೆಯವರು. ಸುಮಾರು 60-70ರ ದಶಕದಲ್ಲಿ ಯಕ್ಷಗಾನ ಪ್ರದರ್ಶನಗಳಿಂದ ದೂರ ಸರಿದಿದ್ದ ಪ್ರೇಕ್ಷಕ ಸಮುದಾಯವನ್ನು ಮತ್ತೆ ಕಲೆಯತ್ತ ಬರಮಾಡಿಕೊಳ್ಳುವಲ್ಲಿ ವ್ಯವಸ್ಥಿತ ಸಂಘಟನೆ ಅವರದು. ತೆಂಕು-ಬಡಗು ಉಭಯತಿಟ್ಟು ಗಳ ಕಲಾವಿದರನ್ನು ಒಂದೇ ಸಂಘಟನೆಯೊಳಗೆ ಪರಿಚಯಿಸಿದ ಕೀರ್ತಿ. ಬಯಲಾಟವಾಗಿದ್ದ ಮೇಳಗಳನ್ನು ಡೇರೆ ಮೇಳಗಳಾಗಿ ಪರಿವರ್ತಿಸಿ, ಕಲೆಯ ಪುನಶ್ಚೇತನಕ್ಕೆ ಕಾರಣರಾದ ಕಲಾಶಿಲ್ಪಿ. ಜಿಲ್ಲೆಯೊಳಗೆ ಮಾತ್ರ ತಿರುಗಾಟ ನಡೆಸುತ್ತಿದ್ದ ಮೇಳಗಳು ಜಿಲ್ಲೆಯ ಗಡಿದಾಟಿ ಕಾಸರಗೋಡು, ಮಲೆನಾಡು, ಶಿವಮೊಗ್ಗ, ಶೃಂಗೇರಿ, ಚಿಕ್ಕಮಗಳೂರು ಮೊದಲಾದೆಡೆ ಹೆಜ್ಜೆಯಿಡುವಲ್ಲಿ ತ್ರಿವಿಕ್ರಮ ಸಾಧನೆ ಹಂದೆಯವರದು. ನೂರಾರು ಕಲಾವಿದ ಬಂಧುಗಳಿಗೆ ಬದುಕಿನ ದಾರಿ ಮಾಡಿಕೊಟ್ಟ ಧನ್ಯತೆ ಅವರದು.

        ಉಡುಪಿ ತಾಲೂಕಿನ ಪಾರಂಪಳ್ಳಿಯ ಪದ್ಮನಾಭ ಹಂದೆ - ವಾಗೆªàವಿಯವರ ವಾತ್ಸಲ್ಯದ ಮಗನಾಗಿ ಡಿಸೆಂಬರ್‌ 2, 1928ರಂದು ಜಗದ ಬೆಳಕು ಕಂಡವರು. ಚಿಕ್ಕಂದಿನಿಂದ ಮನೆಯ ಸುತ್ತಮುತ್ತ ಕಣ್ಣು-ಕಿವಿಗಳಲ್ಲಿ ಅಯಾಚಿತವಾಗಿ ತುಂಬಿಕೊಳ್ಳುತ್ತಿದ್ದ ಯಕ್ಷಗಾನ, ಹರಿಕತೆ, ಭಜನೆ ಪ್ರಕಾರಗಳಿಂದ ಮೈಗೂಡಿಕೊಂಡ ಕಲಾಗಂಧ ಅವರನ್ನು ಆವರಿಸಿತು. ಕಲಿತದ್ದು ಕೇವಲ ಎಂಟನೇ ತರಗತಿ ಮಾತ್ರ. ದೂರದ ಸೋಲಾಪುರದಲ್ಲಿ ಕುಟುಂಬದ ಹಿರಿಯರು ಆಶ್ರಯಿಸಿಕೊಂಡಿದ್ದ ಹೊಟೇಲ್‌ ಉದ್ಯಮದತ್ತ ಪ್ರಯಾಣ. 1940ರಿಂದ ಹಿಂದೂಪುರ, ಧರ್ಮಾವರ, ಬೆಂಗಳೂರು ಮೊದಲಾದೆಡೆ ಹೊಟೇಲ್‌ ದುಡಿತದ ಕಾಯಕದೊಂದಿಗೆ ಕಲಾವಿದರನ್ನು, ಕಲಾಪ್ರಕಾರವನ್ನು ಯಕ್ಷಗಾನದ ಹೊಸ ಪ್ರೇಕ್ಷಕರಿಗೆ ಉಣಬಡಿಸಿದ ಯಕ್ಷಸಂಘಟನೆ.

        1969 ಬಡಗುತಿಟ್ಟಿನ ಯಕ್ಷಗಾನದ ಹೊಸ ಪರ್ವ. ಎರಡು ವರ್ಷಗಳ ಕಾಲಾವಧಿಯಲ್ಲಿ ಸಾಲಿಗ್ರಾಮ ಗುರು ಪ್ರಸಾದಿತ ಯಕ್ಷಗಾನ ಮೇಳದ ಉದಯ. ಪ್ರಥಮ ಬಾರಿಗೆ ಬಡಗುತಿಟ್ಟಿನ ಸುವ್ಯವಸ್ಥಿತ ಡೇರೆಮೇಳದ ಕಾಯಕಲ್ಪ. ಅಂದಿನಿಂದ ಹೆಸರಿನೊಂದಿಗೆ "ಯಜಮಾನ' ಎಂಬ ಬಿರುದಿನ ನಂಟು. ಮುಂದೆ 1972ರಿಂದ 1984ರವರೆಗೆ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದ ಯಶಸ್ವಿ ಯಕ್ಷ ತಿರುಗಾಟ. 1985ರಲ್ಲಿ ಕೋಟ ಹಿರೇಮಹಾಲಿಂಗೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಸ್ಥಾಪನೆ. ಆ ಮೂಲಕ ತೆಂಕುತಿಟ್ಟಿನ ಸಾಮಗ ಬಂಧುಗಳನ್ನು, ಬಡಾಬಡಗಿನ ಕೆರಮನೆ, ಕರ್ಕಿ ಕುಟುಂಬಗಳ ಕಲಾವಿದರ ಮೂಲಕ ಉತ್ತರದ ಎತ್ತರವನ್ನು ನಡುತಿಟ್ಟಿಗೆ ಪರಿಚಯಿಸಿಕೊಟ್ಟ ಹೆಗ್ಗಳಿಕೆ ಶ್ರೀಧರ ಹಂದೆಯವರದು. ಉತ್ತರದ ಕಲಾ ಕೂಸುಗಳಿಗೆ ಕುಂದಾಪುರ -ಬ್ರಹ್ಮಾವರದ ನೆಲ ತೊಟ್ಟಿಲಿದ್ದಂತೆ ಎಂಬ ಪದ್ಮಶ್ರೀ ಚಿಟ್ಟಾಣಿ ಯವರ ಮಾತು ಹಂದೆಯವರಿಗೆ ಸಲ್ಲುವ ದೊಡ್ಡ ಗೌರವ.

        ಸ್ವತಃ ಭೀಷ್ಮ, ಪರಶುರಾಮ, ಬಲರಾಮ, ಜಾಂಬವ, ಶಲ್ಯ, ಕರ್ಣ, ಅರ್ಜುನ ಮೊದಲಾದ ಪಾತ್ರಗಳಿಗೆ ವೇಷ ಕಟ್ಟಿ, ಗೆಜ್ಜೆಕಟ್ಟಿ, ಹೆಜ್ಜೆಯಿಟ್ಟವರು ಹಂದೆಯವರು. ತಾಳಮದ್ದಳೆ ಕೂಟಗಳಲ್ಲಿ ಸಮರ್ಥ ಅರ್ಥವಾದಿಯಾಗಿ, ಹಿರಿಯ ಕಲಾವಿದರೊಂದಿಗೆ ಸಮದಂಡಿಯಾಗಿ ಮಾತಿನ ಮಂಟಪ ಕಟ್ಟಿದ ಮೆರುಗು. 

        ಅತ್ತ ಹೋಟೆಲ್‌ ಉದ್ಯಮದಲ್ಲೂ ಕೈಸುಟ್ಟುಕೊಂಡ ಹಂದೆ ಯವರು, ಕಲಾಜೀವನದಲ್ಲೂ ಲಾಭ ಗಳಿಸಿದವರಲ್ಲ. ಕುಟುಂಬದ ಆಶಯಗಳಿಗಿಂತ, ಹೆಂಡತಿ-ಮಕ್ಕಳು ಎಂಬ ಮಮಕಾರಕ್ಕಿಂತ ಕಲೆಗಾಗಿ, ಕಲಾವಿದರಿಗಾಗಿ ತನ್ನನ್ನು ಪೂರ್ತಿ ಯಾಗಿ ಸಮರ್ಪಿಸಿಕೊಂಡ ಕಲಾಶ್ರೀಮಂತ.

        ಸಾಲಿಗ್ರಾಮ ಮಕ್ಕಳ ಮೇಳವು ಈಗಾಗಲೇ ಪಿ. ಶ್ರೀಧರ ಹಂದೆಯವರಿಗಾಗಿ ಯಜಮಾನ ಎಂಬ ಅಭಿನಂದನಾ ಗ್ರಂಥ ವನ್ನು ಪ್ರಕಟಿಸಿ ಅಭಿನಂದಿಸಿದೆ. ಉಡುಪಿಯ ಯಕ್ಷಗಾನ ಕಲಾರಂಗ, ಶಿವಪ್ರಭಾ ಯಕ್ಷಗಾನ ಕೇಂದ್ರ, ದೆಹಲಿ ಕನ್ನಡಿಗ ಪತ್ರಿಕೆ, ಕರ್ನಾಟಕ ಜಾನಪದ ಲೋಕ, ರಾಮ ನಗರ, ಕರಾವಳಿ ಯಕ್ಷಗಾನ ಸಮ್ಮೇಳನ- ಮಂಗಳೂರು, ರಾಗ ತರಂಗ- ಮಂಗಳೂರು, ಇಡಗುಂಜಿ ಕೆರಮನೆ ಕೇಂದ್ರ, ಉಡುಪಿ ಸಾಹಿತ್ಯ ಸಮ್ಮೇಳನ, ಮುಂಬೈ, ಮದ್ರಾಸು, ಬೆಂಗಳೂರು ಮೊದಲಾದೆಡೆ ಯಿಂದ ಹಂದೆಯವರು ಸಮ್ಮಾನ-ಪುರಸ್ಕಾರಕ್ಕೊಳಗಾಗಿದ್ದಾರೆ.

         ಯಜಮಾನ ಹಂದೆಯವರು ಈಗ ನಮ್ಮೊಂದಿಗಿಲ್ಲ. ಅವರ ನೆನಪು ಮಾತ್ರ. ಸಾರ್ವಜನಿಕ ಹೃದಯದಲ್ಲಿ ಅವರು ಸದಾ ವಿರಾಜಮಾನರಾಗಬೇಕು. ಆ ನೆಲೆಯಲ್ಲಿ ಕೋಟದ ರಂಗಬಳಗ ಸಾಂಸ್ಕೃತಿಕ ವೇದಿಕೆ ಕಳೆದ ಒಂದು ವರ್ಷದಿಂದ ಸಂಸ್ಮರಣಾ ರೂಪದಲ್ಲಿ ಸರಣಿ ತಾಳಮದ್ದಳೆ ಕೂಟವನ್ನು ಆಯೋಜಿಸುತ್ತಾ ಬಂದಿದೆ. ಫೆಬ್ರವರಿ 10, ಭಾನುವಾರದಂದು ಕೋಟದಲ್ಲಿ, ಸಮಾರೋಪ ಕಾರ್ಯಕ್ರಮವಾಗಿ ಬೆಳಗಿನಿಂದ ಸಂಜೆಯವರೆಗೆ ವಿವಿಧ ಗೋಷ್ಠಿಗಳನ್ನು, ತಾಳಮದ್ದಳೆ, ಬಯಲಾಟವನ್ನು ಆಯೋಜಿಸಿದೆ. ನಾಡಿನ ಹಿರಿಯ ವಿದ್ವಾಂಸರು, ಕಲಾವಿದರು, ಬಡಗಿನ ಎಲ್ಲ ಮೇಳಗಳ ಯಜಮಾನರು, ಸಹೃದಯೀ ಸಚಿವರು, ಕಲಾಪೋಷಕರು ಭಾಗವಹಿಸಲಿದ್ದಾರೆ. ಕಲಾಶ್ರೀಧರರಿಗೆ ಇದು ವೇದಿಕೆಯ ಕಲಾಂಜಲಿ.   

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      image
      • Copyright @ 2009 Udayavani.All rights reserved.
      • Designed & Hosted By 4cplus