Monday, May 20, 2013
Last Updated: 12:51:50 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮೂವತ್ತರ ಸಂಭ್ರಮದಲ್ಲಿ ಸನಾತನ ನಾಟ್ಯಾಲಯ
    • ರಾಧಿಕಾ ಶೆಟ್ಟಿ ಅವರು ಜಗನ್ಮೋಹನನೆ ಕೃಷ್ಣ ಎಂಬ ದೇವರನಾಮವನ್ನು ಅತ್ಯಂತ ಮನೋಜ್ಞವಾಗಿ ಅಭಿನಯಿಸಿದರು.

      • Udayavani | Feb 08, 2013

        ಮಂಗಳೂರಿನಲ್ಲಿ ಇತ್ತೀಚೆಗೆ ಎರಡು ದಿನಗಳ ನೃತ್ಯ ಕಾರ್ಯಕ್ರಮ ನಡೆದಿತ್ತು. ಅದು ಸನಾತನ ನಾಟ್ಯಾಲಯದ ತ್ರಿದಶ ವರ್ಷಾಚರಣೆಯ ಸಂಭ್ರಮದ ಸರಣಿ ನೃತ್ಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ. ಕಿಕ್ಕಿರಿದ ಸಭಾಂಗಣದಲ್ಲಿ ನಾಟ್ಯಾಲಯದ ವಿದ್ಯಾರ್ಥಿಗಳು ಪುಷ್ಪಾಂಜಲಿಯನ್ನು ಪ್ರಸ್ತುತ ಪಡಿಸುವುದರೊಂದಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅನಂತರ ಶಿವಸ್ತುತಿಯನ್ನು ಪ್ರದರ್ಶಿಸಲಾಯಿತು. ಬಳಿಕ ನಾಟ್ಯಾಲಯದ ಹೆಮ್ಮೆಯ ಕಲಾವಿದೆ ರಾಧಿಕಾ ಶೆಟ್ಟಿ ಅವರು ಜಗನ್ಮೋಹನನೆ ಕೃಷ್ಣ ಎಂಬ ದೇವರನಾಮವನ್ನು ಅತ್ಯಂತ ಮನೋಜ್ಞವಾಗಿ ಅಭಿನಯಿಸಿದರು. ಕಾರ್ಯಕ್ರಮದ ಮುಂದುವರಿಕೆಯ ಭಾಗವಾಗಿ ಸನಾತನ ನಾಟ್ಯಾಲಯವು ವಿಶೇಷ ನೃತ್ಯ ವನ್ನೇ ಆಯೋಜಿಸಿತ್ತು. ವಿವೇಕಾನಂದರ ಚಿಂತನೆಗಳನ್ನೊಳಗೊಂಡ ಹಾಡಿಗೆ ಸುಮಾರು 40 ವಿದ್ಯಾರ್ಥಿಗಳು ನರ್ತಿಸಿದರು. ಸುಂದರ ವಾದ ನೃತ್ಯಜೋಡಣೆ, ವಿವೇಕಾನಂದರ ತತ್ವ ಗಳನ್ನೊಳಗೊಂಡ ಹಾಡು, ರಾಷ್ಟ್ರಾಭಿಮಾನ ವನ್ನೊಳಗೊಂಡ ಚಿಂತನೆಯ ಈ ಸಾಮೂಹಿಕ ನೃತ್ಯ ಪ್ರದರ್ಶನಕ್ಕೆ ಕಾರ್ಕಳದ ಆದರ್ಶ ಗೋಖಲೆ ಇವರ ಉತ್ತಮವಾದ ನಿರೂಪಣೆ ಇದ್ದುದರಿಂದ ನೃತ್ಯವು ಜನರಿಗೆ ಇನ್ನಷ್ಟು ಆಪ್ತವಾಗುವುದಕ್ಕೆ ಸಾಧ್ಯವಾಯಿತು.

        ಎರಡನೇ ದಿನ ಏಕವ್ಯಕ್ತಿ ಪ್ರದರ್ಶನಕ್ಕೆ ಒತ್ತುಕೊಡುವ ದೃಷ್ಟಿಯಿಂದ ನಾಟ್ಯಾಲಯದ ಮೂವರು ವಿದ್ಯಾರ್ಥಿಗಳ ಏಕವ್ಯಕ್ತಿ ಪ್ರದರ್ಶನಕ್ಕೆ ಅವಕಾಶವನ್ನು ಮಾಡಿಕೊಡಲಾಗಿತ್ತು. ಹೊಸ ತಲೆಮಾರಿನ ಕಲಾವಿದೆಯರಾದ ಶಾಶ್ವತಿ ಜೈನ್‌, ಅಶ್ವಿ‌ನಿ ಕೊಟ್ಟಾರಿ, ದೀಕ್ಷಾ ರಾವ್‌ ಎಕ್ಕೂರು ಆ ದಿನದ ನೃತ್ಯ ಕಾರ್ಯಕ್ರಮಕ್ಕೆ ಕಳೆ ತರುವ ಪ್ರಯತ್ನ ನಡೆಸಿದರು. ಗಣಪತಿ ಕೌತ್ವಂ ನೊಂದಿಗೆ ತಮ್ಮ ಪ್ರದರ್ಶನವನ್ನು ಆರಂಭಿಸಿದ ಕಲಾವಿದೆಯರು ಶ್ರೀಕೃಷ್ಣನ ಕತೆಯನ್ನಾಧರಿಸಿದ ಕಲ್ಯಾಣಿ ರಾಗದ ಪದವರ್ಣವನ್ನು ಪ್ರದರ್ಶಿಸಿದರು. ವೈಯಕ್ತಿಕವಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಕಲಾವಿದೆಯರಿಗೆ ಇದು ಒಳ್ಳೆಯ ವೇದಿಕೆಯಾಗಿತ್ತು. ದೀಕ್ಷಾ ರಾವ್‌ ದೇವೀಸ್ತುತಿಯನ್ನು, ಶಾಶ್ವತಿ ಜೈನ್‌ ತುಳಸೀದಾಸ್‌ ಭಜನ್‌ ಹಾಗೂ ಅಶ್ವಿ‌ನಿ ಕೊಟ್ಟಾರಿ ದೇವರನಾಮವನ್ನು ಅಭಿನಯಿಸಿದರು. ಶಿವಸ್ತುತಿಯನ್ನು ಸಾಮೂಹಿಕ ವಾಗಿ ಪ್ರದರ್ಶಿಸಿದ ಇವರು ಮಿಶ್ರರಂಜಿನಿ ರಾಗದ ತಿಲ್ಲಾನದೊಂದಿಗೆ ಕಾರ್ಯಕ್ರಮ ಕೊನೆಗೊಳಿಸಿದರು. ಇದೇ ರೀತಿಯ ತನ್ಮಯತೆಯನ್ನು ತಮ್ಮ ಅಭ್ಯಾಸದಲ್ಲಿ ಮುಂದುವರಿಸಿಕೊಂಡು ಬಂದಲ್ಲಿ ಖಂಡಿತ ಈ ಮೂವರು ಕಲಾವಿದೆಯರು ಭವಿಷ್ಯದ ಉತ್ತಮ ನೃತ್ಯ ಕಲಾವಿದೆಯರಾಗಿ ಬೆಳೆಯಬಹುದು.

        ಎರಡು ದಿನಗಳ ಕಾರ್ಯಕ್ರಮಕ್ಕೆ ನಟುವಾಂಗದಲ್ಲಿ ಗುರು ವಿ| ಶಾರದಾಮಣಿ ಶೇಖರ್‌, ಹಾಡುಗಾರಿಕೆಯಲ್ಲಿ ಪ್ರವೀಣ್‌ ಪಾಕಂ ಕಾಂಞಂಗಾಡ್‌ ಹಾಗೂ ವಸಂತ ಗೋಸಾಡ, ಕೊಳಲಿನಲ್ಲಿ ನಿತೀಶ್‌ ಅಮ್ಮಣ್ಣಾಯ ಉಡುಪಿ, ಮೃದಂಗದಲ್ಲಿ ಮನೋಹರ್‌ ರಾವ್‌ ಮಂಗಳೂರು ಸಹಕರಿಸಿದರು.

        ತ್ರಿದಶ ವರ್ಷಾಚರಣೆಯ ಪ್ರಯುಕ್ತ ಸರಣಿ ನೃತ್ಯ ಕಾರ್ಯಕ್ರಮವನ್ನು ನಡೆಸಲು ಉದ್ದೇಶಿಸಿರುವ ಸನಾತನ ನಾಟ್ಯಾಲಯದಿಂದ ಇನ್ನಷ್ಟು ಪ್ರತಿಭೆಗಳು ಹುಟ್ಟಬಹುದು ಎಂಬ ನಿರೀಕ್ಷಿಸಿದರೆ ತಪ್ಪಾಗದು. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗೆ ಅಭಿನಂದನೆಗಳು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      image
      • Copyright @ 2009 Udayavani.All rights reserved.
      • Designed & Hosted By 4cplus