ತುಂಬಾ ದಟ್ಟವಾದ ಹಸಿರು ತುಂಬಿದ ಕಾಡು... ಹುಲಿಗಳು ಇಂದಿಗೂ ಓಡಾಡುತ್ತವೆ ಅಂತ ತಿಳಿದುಕೊಂಡು ಅವುಗಳಿಗಾಗಿಯೇ ಉಂಬಳಿ ಬಿಟ್ಟ ಮೂರೂವರೆ ಸಾವಿರ ಚದರ ಕಿಲೋಮೀಟರ್‌ನಷ್ಟು ಹರಡಿಕೊಂಡಿರುವ ರಕ್ಷಿತಾರಣ್ಯ. ಇವುಗಳ ನಡುವೆ ಒಂದೇ ಒಂದು ಹಾದಿ ಹಾವಿನಂತೆ ಸುತ್ತುತ್ತ ಸೇರುವುದು ಶ್ರೀಶೈಲವನ್ನು. ಅದೇ ನಾನು ಶಾಲೆಯಲ್ಲಿ ಓದುತ್ತಿರುವಾಗ ಉರು ಹೊಡೆದ ವಚನಗಳ ಅಕ್ಕನ ಶ್ರೀಶೈಲ... ಗಿಡಮರ ತರುಲತೆಗಳನ್ನೆಲ್ಲ ನನ್ನ ಮಲ್ಲಿಕಾರ್ಜುನ ಎಲ್ಲಿ... ಎಂದು ಪದೇಪದೇ ಕೇಳುತ್ತ ಹುಡುಕಿದ ಇದೇ ಶ್ರೀಶೈಲವನ್ನು... ಮುಂಜಾನೆ ಹೈದರಾಬಾದ್‌ನಿಂದ ಶ್ರೀಶೈಲಕ್ಕೆಂದು ಬಸ್ಸು ಏರಿದವಳು ಕಿಟಿಕಿ ಬದಿಯ ಸೀಟು ಹಿಡಿದು ಗಾಜಿಗೆ ಮುಖವಂಟಿಸಿ ಕುಳಿತುಬಿಟ್ಟಿ. ಎತ್ತ ನೋಡಿದರೂ ಅದೇ ಹಸಿರು... ದಟ್ಟವಾಗಿ ಕತ್ತಲು ತುಂಬಿದಂತಿದ್ದ ಹಸಿರು... ಆಳೆತ್ತರಕ್ಕೆ ಬೆಳೆದುಕೊಂಡಿದ್ದ ಹುತ್ತಗಳು ಅಲ್ಲಲ್ಲಿ ಹೆಜ್ಜೆಹೆಜ್ಜೆಗೂ ಇದ್ದವು..... ಅಕ್ಕನಿಗೆ ಸಂಬಂಧಿಸಿದ ಚಿತ್ರಗಳ ಆಕೆ ಪೂಜಿಸಿದ ಶಿವಲಿಂಗದ ಬೆಂಗೆಡೆಯಲ್ಲಿ ಈ ಹುತ್ತದ ಚಿತ್ರವನ್ನ ನೋಡಿ... ಅವೆಲ್ಲ ಇಲ್ಲಿ ಒಂದೇ ಕಡೆ ಬಂದು ಸೇರಿವೆಯಲ್ಲ ಎಂದು ನನಗೆ ಅಚ್ಚರಿ. ಇವೆಲ್ಲದರ ನಡುವೆ ಸಾಗುತ್ತಿದ್ದ ನನ್ನ ತಲೆಯ ತುಂಬಾ ಅಕ್ಕನದೇ ನೆನಪು... ಆಕೆ ಹೇಗಿದ್ದಿರಬೇಕು... ಎಲ್ಲವನ್ನೂ ಹಿಂದೆ ಬಿಟ್ಟು ತನ್ನ ಮಲ್ಲಿಕಾರ್ಜುನನನ್ನು ಹುಡುಕುತ್ತ ಈ ಕಾಡಿನೊಳಗೆ ಅಲೆದಾಡುತ್ತಿದ್ದ ಆಕೆಯ ತುಡಿತ ಏನಿದ್ದಿರಬೇಕು! ಎಂದೆ ಕಲ್ಪಿಸಿಕೊಳ್ಳುತ್ತಿ. ಮುಂಜಾನೆ ಹೊರಟು ಸಂಜೆ ಶ್ರೀಶೈಲ ಸೇರುವವರೆಗೂ ಇದನ್ನೇ ಕನವರಿಸುತ್ತಿ.ಶ್ರೀಶೈಲ ಮುಟ್ಟಿದ್ದೇ ಗೆಸ್ಟ್ ಹೌಸ್ ಸೇರಿ ಬ್ಯಾಗ್ ಎಸೆದು ಅಲ್ಲಿಯ ಹಳೆಯ ದೇವಸ್ಥಾನದತ್ತ ಹೆಜ್ಜೆ ಹಾಕಿ. ಮೈಲುದ್ದದ ಸರದಿ ಸಾಲಿನಲ್ಲಿ ಸೇರಿದರೆ ಮತ್ತೆ ಅಲ್ಲಿ ಅಕ್ಕನದೇ ಯೋಚನೆ. ಇಲ್ಲಿಯ ದೇವಸ್ಥಾನ... ಪೂಜೆ... ಭಕ್ತ ಜನ.. ನೂಕುನುಗ್ಗಲು ಇವೆಲ್ಲದರ ನಡುವೆ ಅದ್ಯಾಕೋ ಅಕ್ಕ ಹೊಂದಿಕೊಳ್ಳುತ್ತಿರಲಿಲ್ಲ... ಈ ಯೋಚನೆಯನ್ನು ಬದಿಗೆ ಸರಿಸಿ ಮತ್ತೆ ಸರದಿ ಸಾಲಿನಲ್ಲಿ ಸೇರಿ ಹೋದೆ. ನಿಧಾನ ಗತಿಯ ಸಾಲಿನಲ್ಲಿ ಸುಮಾರು ಎರಡು ಗಂಟೆ ಕಾಲ ಕಳೆದು ಗರ್ಭಗುಡಿಯ ಎದುರು ಬಂದು ನಿಂತೆ. ಪುಟ್ಟ ಶಿವಲಿಂಗ... ಹಿಂದೆ ದೊಡ್ಡ ಹುತ್ತದ ರಚನೆ ಎಲ್ಲವೂ ಚಿನ್ನದ ತಗಡು ಹೊದೆಸಿಕೊಂಡು ಫಳಫಳನೆ ಹೊಳೆಯುತ್ತಿತ್ತು. ಮತ್ತೂಮ್ಮೆ ಕಣ್ಣು ಹಾಯಿಸುವಷ್ಟರಲ್ಲಿ ಯಾರದೋ ಕೈ, ಸಾಕಿನ್ನು... ನೋಡಿದ್ದು ಎಂದು ಅವಸರಿಸಿ ನನ್ನನ್ನು ಅತ್ತ ನೂಕಿ ಬಿಟ್ಟಿತ್ತು. ಮನಸ್ಸು ಸಮಾಧಾನಗೊಳ್ಳಲೇ ಇಲ್ಲ... ಮತ್ತೆ ಹಿಂತಿರುಗೋ ಅವಕಾಶವಿಲ್ಲದ್ದಕ್ಕೆ ಮುಂದಕ್ಕೆ ಸಾಗಿ ಹೋದೆ. ಎರಡು ಗಂಟೆ ಸರತಿಯಲ್ಲಿ ನಿಂತಿದ್ದ ನಾನು ಹತ್ತೇ ನಿಮಿಷದಲ್ಲಿ ದೇಗುಲದಿಂದ ಹೊರ ಬಂದಿ¨... ಅಕ್ಕನ ಹೆಜ್ಜೆಗಳು ಇಲ್ಲ!ದೇಗುಲದ ಹೊರಗಿನ ಪ್ರಾಕಾರ ಎಂಬುದು ಕೋಟೆಯ ಗೋಡೆಯಂತೆ ಎತ್ತರವಾಗಿ ನಿಂತಿತ್ತು. ಅದರ ತುಂಬಾ ಶಿವ ಪುರಾಣದ ಉಬ್ಬು ಚಿತ್ರಗಳು. ಮೂರು ಸುತ್ತಲೂ ತುಂಬಾ ಸುಂದರವಾಗಿ ಮನಸೆಳೆಯುತ್ತಿತ್ತು... ಎಲ್ಲ ನೋಡಿಕೊಂಡು ವಾಪಸಾಗುತ್ತಿದ್ದ ನನಗೆ ಮರುದಿನ ಅಕ್ಕನ ಗವಿಗೆ ಹೋಗೋ ಆತುರವಾಗುತ್ತಿತ್ತು. ನಾನು ಉಳಿದುಕೊಂಡಿದ್ದಲ್ಲಿಂದ ನೇರ ರಸ್ತೆ ಸೇರೋದೇ ಪಾತಾಳ ಗಂಗಾ ಎಂಬ ಸ್ನಾನ ಘಟ್ಟಕ್ಕೆ. ಮುಂಜಾನೆ ಮೂರು ಗಂಟೆಗೇ ಜನರ ಗುಂಪು ನದೀನೀರು ಹರಿದುಕೊಂಡು ಹೋದಂತೆ ರಸ್ತೆಯಲ್ಲಿ ಸಾಗುತ್ತಿತ್ತು. ಈ ಸ್ನಾನ ಘಟ್ಟಕ್ಕೆ ಮೆಟ್ಟಿಲು ಇಳಿದೂ ಸಾಗಬಹುದು... ಇಲ್ಲವೇ ರೋಪ್‌ವೇ ಮೂಲಕವೂ ಇಳಿಯಬಹುದು. ಇಲ್ಲಿಂದ ಅಕ್ಕನ ಗವಿಗೆ ಹೋಗಲು ದೋಣಿಯ ವ್ಯವಸ್ಥೆ ಇದೆ. ದಿನಕ್ಕೆ ಕೇವಲ ಇಪ್ಪತ್ತು ಜನರಿಗೆ ಇಲ್ಲಿ ಅವಕಾಶ. ಮುಂಜಾನೆದ್ದು ಕೌಂಟರ್ ತೆರೆಯುವುದಕ್ಕೆ ಮೊದಲೇ ಕಾದು ಟಿಕೆಟ… ತಗೊಂಡೆ. ರೋಪ್ ವೇನಲ್ಲಿ ಕುಳಿತು ಪಾತಾಳಗಂಗೆ ಸೇರಿದೆ. ಇಲ್ಲಿಂದ ಶುರು ಕನಸಿನ ಪಯಣ. ಸುಮಾರು ಮೂರು ಗಂಟೆಯ ಹಾದಿ. ನಾಗಾರ್ಜುನ ಸಾಗರ ಅಣೆಕಟ್ಟಿನಿಂದಾಗಿ ಎಂದೋ ಕಾಡಿನ ಹಾದಿಯಾಗಿದ್ದ ಇದು ಇಂದು ನೀರು ತುಂಬಿ ದೊಡ್ಡ ನದಿಯಾಗಿ ಹರಿಯುತ್ತಿದೆ. ನೀರ ಮೇಲಿಂದ ಗಾಳಿ ತಂಪಾಗಿ ಮೈ ಸವರುತ್ತ ಇತ್ತು. ನಡುವೆ ಅಗಲವಾದ ನದಿ.. ಅತ್ತಿತ್ತ ಎರಡೂ ಕಡೆ ಕೋಟೆಯ ಗೋಡೆಯಂತೆ ಎತ್ತರಕ್ಕೆ ಏರಿ ನಿಂತ ಗುಡ್ಡ ಬೆಟ್ಟ... ಅದರ ತುಂಬೆಲ್ಲ ಹಸಿರು. ಒಂದೆರಡು ಕಡೆ ನದಿ ತಟದಲ್ಲಿ, ಗುಡ್ಡದ ಬುಡದಲ್ಲಿ ಎರಡು ಮೂರು ಹರುಕು ಮುರುಕು ಗುಡಿಸಲುಗಳು... ಒರಗಿಸಿಟ್ಟ ಹರಿಗೋಲುಗಳು. ಆಟವಾಡಿದಂತೆ ಹರಿಗೋಲು ತಿರುಗಿಸುತ್ತ ಬಂದ ಪುಟ್ಟ ಮಕ್ಕಳು... ಮಕ್ಕಳ ಮುಖದಲ್ಲಿ ಇನ್ನಿಲ್ಲದ ಮುಗ್ಧತೆ ತುಂಬಿದ ನಗು... ಇವೆಲ್ಲವನ್ನೂ ದಾಟುತ್ತ ಬಂದೇಬಿಟ್ಟಿತು ಅಕ್ಕನ ಗವಿ.ಪ್ರಕೃತಿಯ ಕೈಚಳಕ ಪ್ರಕೃತಿಯ ಅದ್ಭುತವೇ ಅಲ್ಲಿ ತುಂಬಿಕೊಂಡಂತಿದ್ದ ಜಾಗವದು. ದಟ್ಟ ಕಾಡಿನ ನಡುವೆ ದೊಡ್ಡದಾದ ನಿಸರ್ಗ ನಿರ್ಮಿತ ಕೊರಕಲು ಕಲ್ಲಿನ ಕಮಾನು. ಕಂಬಗಳಂತಿರುವ ನಿರ್ಮಿತಿಯ ನಡುವೆ ಇದ್ದ ಗುಹೆ. ತನ್ನ ತಾನು ಕೊರೆದ ಶಿಲ್ಪದಂತೆ ತಯಾರಾಗಿದ್ದ ಕಲ್ಲಿನ ವಿನ್ಯಾಸ. ಎಂತಹ ಜಾಗವನ್ನ ಹುಡುಕಿಕೊಂಡು ಬಂದಿದ್ದಳು ಅಕ್ಕ. ಬಂದವಳು ಅನವರತವಾಗಿ ತನ್ನ ಮಲ್ಲಿಕಾರ್ಜುನನ ನೆನವರಿಕೆಯಲ್ಲಿ ಅದೆಷ್ಟು ಕಾಲ ಕಳೆದಳ್ಳೋ. ದೋಣಿ ಇಳಿದು ಗುಡ್ಡವೇರುತ್ತ ಸಪೂರ ಹಾದಿಯಲ್ಲಿ ಇದೇ ಕಲ್ಪನೆಯಲ್ಲಿ ಸಾಗಿ ಗುಹೆಯ ಬಾಗಿಲಿಗೆ ಬಂದೆ. ಗುಹೆಯೊಳಗೆ ಕಾರ್ಗಾಣ ಕತ್ತಲೆಯ ಹಾದಿ. ಕೈಯಲ್ಲಿ ಮೋಂಬತ್ತಿಯ ಬೆಳಕು. ಕಾಲ ಕೆಳಗಿನ ಕೆಸರನ್ನು ಆದಷ್ಟು ತಪ್ಪಿಸಿಕೊಳ್ಳುತ್ತ ಹಾರಿಕೊಂಡು ಮುಂದೆ ಮುಂದೆ ಸಾಗಿ. ಮೊದಲು ಅಗಲವಾದ ಗುಹೆಯು ಬರಬರುತ್ತ ಕಿರಿದಾಗುತ್ತ ಬಂತು. ಹಲವು ಜನ ಸಾಗುವಷ್ಟಿದ್ದದ್ದು ಕೆಲವೇ ಜನ ಸಾಗುವ ಹಾದಿಯಾಯ್ತು. ಮತ್ತೆ ಮುಂದೆ ಮುಂದೆ ಸಾಗಿದಂತೆ ಒಬ್ಬಳೇ ಸಾಗಬಹುದಾದಷ್ಟು ಸಪೂರವಾಯ್ತು. ತಗ್ಗಿ... ಬಗ್ಗಿ... ಮೈಯನ್ನ ಅಂಕುಡೊಂಕಾಗಿಸಿ ಮುಂದೆ ಮುಂದೆ ಸಾಗಿದೆ. ಗುಹೆಯ ಕೊನೆಯಲ್ಲಿ ಅಕ್ಕ ತನ್ನ ದೈವವನ್ನು ಪ್ರತೀಕ ಮಾಡಿಕೊಂಡು ಪೂಜಿಸಿದ ಸ್ಥಳ. ನಿಲ್ಲಲೂ ಜಾಗವಿಲ್ಲದ... ಕೂರಲೂ ಸಾಧ್ಯವಾಗದ ಪುಟ್ಟ ಇಕ್ಕಟ್ಟಾದ ಜಗುಲಿಯಂತಹ ಜಾಗದಲ್ಲಿ ಪುಟ್ಟ ಶಿವಲಿಂಗ... ಮುಟ್ಟಿದೆ... ಬರೇ ತಂಪು ತಂಪು. ದಟ್ಟ ಅಂಧಕಾರದ ಇಕ್ಕಟ್ಟಾದ ಗಾಳಿಯಾಡದ ಗುಹೆಯ ಮೂಲೆಯ ಕೋಣೆಯೊಳಗೆ ಅಕ್ಕನಿಗೆ ಅಂತರ್ದರ್ಶನವಾಯೆ¤ ಎಂಬೆಲ್ಲ ಯೋಚನೆಗಳು ತಲೆ ತುಂಬಾ ಓಡಾಡಿದವು.ಇದೇ ಲಹರಿಯಲ್ಲಿ ತೇಲುತ್ತ ಗುಹೆಯಿಂದ ಹೊರ ಬಂದೆ. ಮೆಲ್ಲಮೆಲ್ಲನೆ ತಂಪಾದ ಕಾಡಿನ ಪರಿಮಳದ ಗಾಳಿ. ಒಳಗಿದ್ದ ಕಾರ್ಗಾಣ ಕತ್ತಲು ನಿಧಾನಕ್ಕೆ ಕರಗಿ ಬೆಳಕು ಬೆಳ್ಳಗಾಗುತ್ತ ಪೂರ್ತಿ ಆವರಿಸಿತು. ಪ್ರಕೃತಿಯ ಮಡಿಲಲ್ಲಿ ಮತ್ತೆ ಜೀವ ಸಂಚಾರವಾದ ಹಾಗೆ. ಗುಹೆಯೊಳಗೆ ಏಕಾಂತ ಪೂಜೆ.. ಧ್ಯಾನ.. ಸಮಾಧಿ.. ಹೊರಗೆ ಹಸಿರಿನ ತೊಟ್ಟಿಲೊಳಗೆ ಆತ್ಮ ಸಾûಾತ್ಕಾರ. ಅವರ್ಣನೀಯವಾದ ಖುಷಿ, ನೆಮ್ಮದಿ... ಅಂತರ್ದರ್ಶನವಿದ್ದರೆ ಅದು ಅಂತ ಅನಿಸಿತು. ಹೊರಗೆ ಬಂದವಳಿಗೆ ಸುತ್ತೆಲ್ಲ ಓಡಾಡಬೇಕು ಅಂತನ್ನಿಸಿ ಒಬ್ಬಳೇ ಬೆಟ್ಟವೇರುತ್ತ ನನ್ನಷ್ಟಕ್ಕೇ ಸಾಗತೊಡಗಿದೆ. ಬೆಟ್ಟವೇರುತ್ತಿದ್ದ ಹಾಗೇ ಮತ್ತೆ ವಿಧವಿಧದ ರೂಪ ಕಣ್ಣೆದುರು.. ಬೆಟ್ಟದ ತುದಿಯವರೆಗೆ ಬಂದಿ.. ಎಲ್ಲ ಮರೆಸುವ ಚಿತ್ರ ಅಲ್ಲಿ ನನ್ನೆದುರಿಗೆ.. ಹಚ್ಚಹಸಿರು ಕಾಡು.. ಆ ಅಗಾಧ ನೀರು.. ನೀಲವಾದ ಬಾನಿನಲ್ಲಿ ತೇಲುವ ಬಿಳಿ ಮೋಡ... ಹಕ್ಕಿಗಳ ಸಂಗೀತ.. ಗಾಳಿಯ ಹಿತವಾದ ತಂಪು... ಜೊತೆಗೆ ಕಾಡುಹೂವಿನ ಕಂಪು... ಮಂದ ಮಂದ ಬಿಸಿಲು... ಸುತ್ತಲೂ ಎಲ್ಲವೂ ಇದ್ದೂ ನಾನು ಮಾತ್ರ ಇಲ್ಲವಾದ ಅನುಭವ! ಶ್ರೀಶೈಲದ ಮಂದಿರದೊಳಗೆ ಕಣ್ಣೆದುರಿಗೆ ಬರಲು ನಿರಾಕರಿಸಿದವನು ಸಾತ್ಕಾರವಾದಂತೆ!ಹೀಗೆ, ಇಲ್ಲಿಯೇ ಕಳೆದುಹೋಗಿದ್ದ ಅಕ್ಕನನ್ನು ನೆನೆಯುತ್ತ ಬೆಟ್ಟವಿಳಿದು ಬಂದೆ. ವಾಪಸಾಗಲು ಸಮಯವಾಗುತಿತ್ತು. ಬೇಗ ಬೇಗ ಹೊರಡಿ ಎಂದು ಗೈಡು ಅವಸರಿಸುತ್ತಿದ್ದ. ಮತ್ತೆ ದೋಣಿ ಏರಿ¨ªಾಯ್ತು. ಹಿಂದಕ್ಕೆ ಬರುತ್ತ ದೂರದಲ್ಲಿ ಅÇÉೊಂದು ಕಡೆ ಬೆಟ್ಟದ ತಪ್ಪಲನ್ನು ನಿರ್ದಯವಾಗಿ ಅಗೆದು ಜೋರಾಗಿ ಏನೋ ಕೆಲಸ ನಡೆಯುತ್ತಿದ್ದಂತಿತ್ತು. ಅದೇನೆಂದು ಯೋಚಿಸುತ್ತಿ¨ªಾಗ ಗೈಡ್ ಹೇಳುತ್ತಿದ್ದ. ಅಕ್ಕನ ಗವಿಗೆ ನೇರವಾಗಿ ಸಾಗಲು ರಸ್ತೆಯ ಕಾಮಗಾರಿ ನಡೆಯುತ್ತಿದೆ. ಇನ್ನು ಮುಂದಕ್ಕೆ ಅದೊಂದು ದೊಡ್ಡ ಪ್ರವಾಸೀ ತಾಣವಾಗಲಿದೆ. ಎಂದೋ ತನಗೆ ದೊರಕಬಹುದಾದ ಅವಕಾಶವನ್ನು ಕಲ್ಪಿಸಿಕೊಂಡು ಹಸಿರು ಕಾಡು ಕಡಿದು ಗುಡ್ಡವನ್ನು ಬಗೆಯುತ್ತಿದ್ದುದು ಪ್ರಕೃತಿಯ ಎದೆಯನ್ನೇ ಬಗೆದಂತೆ ನನಗೆ ಕಾಣಿಸುತಿತ್ತು...ಇನ್ನು ಮುಂದಕ್ಕೆ ಹಾಗಾದರೆ ಈ ಪ್ರಶಾಂತತೆ.. ಶಾಂತಿ...ಸೌಂದರ್ಯವೆಲ್ಲ ನಿಧಾನವಾಗಿ ಮರೆಯಾಗೋದು ಖಂಡಿತ ಅಂತ ಅನ್ನಿಸಿತು... ಇಷ್ಟೆ ಆಗೋದಕ್ಕಿಂತ ಮೊದಲೇ ನಾ ದೇವತೆಯಂತಹ ಆ ಪ್ರಕೃತಿಯ ಚೆಂದವನ್ನ ಅನುಭವಿಸಿದ್ದು ನನ್ನ ಪಾಲಿನ ಪುಣ್ಯವೆಂದೇ ತಿಳಿದೆ. ಆ ಪುಣ್ಯವನ್ನು... ಅದರ ನೆನಪನ್ನು ನನ್ನೊಳಗೇ ಕಟ್ಟಿಹಾಕುವಂತೆ ಮತ್ತೆ ಮತ್ತೆ ಮೆಲುಕು ಹಾಕುತ್ತ ಅಲ್ಲಿಯೇ ಕಣ್ಣು ಮುಚಿ cಕೊಂಡು ಒರಗಿದೆ.. ದಡ ಸೇರಲು ಇನ್ನೂ ಎರಡು ಗಂಟೆಯಷ್ಟು ಸಮಯವಿತ್ತು.