Monday, December 22, 2014
Last Updated: 8:34:29 PM IST
 • ನಾನೆಲ್ಲಿರುವೆ:
 • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ತಲೆ ಕೊರೆಯುವುದು
  • ತಲೆ ಕೊರೆಯುವುದು

   • ಎಸ್‌. ಜಿ. ಶಿವಶಂಕರ್‌ | Feb 10, 2013

    ಆಹಾ! ಇಂದಿನ ಲೇಖಕರಿಗೆ ಬರೆಯಲು ಏನೆಲ್ಲಾ ವಿಷಯಗಳು ಹೊಳೆಯುತ್ತವೆ ಎಂದು ಮೂಗೆಳೆಯಬೇಡಿ! ಈ ವಿಷಯದ ಬಗ್ಗೆ ನಲವತ್ತೆ„ದು ವರ್ಷಗಳಷ್ಟು ಕಾಲ ನಾನು ತಲೆಕೆಡಿಸಿಕೊಂಡೇ ಇರಲಿಲ್ಲ! (ಈಗೇಕೆ ಎಂದು ಕೇಳಬೇಡಿ!)

    ಇದೀಗ ಹದಿಹರೆಯಕ್ಕೆ ಬರುತ್ತಿರುವ ನನ್ನ ಮಗಳು ಪದೇಪದೇ ಈ ಪದವನ್ನು ಪ್ರಯೋಗಿಸಲು ತೊಡಗಿದಾಗ ನಾನು ಈ "ತಲೆ ಕೊರೆಯುವ' ವಿಷಯದ ಬಗೆಗೆ ಗಂಭೀರ ಚಿಂತನೆಯಲ್ಲಿ ತೊಡಗಿದೆ.
    ಚಿಂತನೆಯ ಆಳಕ್ಕಿಳಿಯುತ್ತ ಇದರ ವ್ಯಾಪಕತೆಯ ಬಗೆಗೆ ವಿಸ್ಮಯಗೊಂಡೆ! ಸಾಮಾನ್ಯವಾಗಿ ಎಲ್ಲರೂ ಚಿಂತನೆಯ ಆಳಕ್ಕಿಳಿಯುವುದು ಜಳಕ ಮಾಡುವಾಗ ಅಂದರೆ ಸ್ನಾನಮಾಡುವಾಗ ! ಆಗಲೇ... ಎಲಾ...!? ತಲೆ ಕೊರೆಯುವಿಕೆ ಇಷ್ಟು ವಿಶಾಲವೂ, ವೈವಿಧ್ಯಮಯವೂ ಆಗಿದೆಯಲ್ಲ ಎಂದು ಜಳಕ ಮಾಡುತ್ತಲೇ ಪುಳಕಗೊಂಡೆ!

    ಮೊದಲಿಗೆ ತಲೆ ಕೊರೆಯುವ ಪದದ ಬಗೆಗೆ ಪರಿಚಯ ಮಾಡಿಕೊಟ್ಟು ನನ್ನ ಮಗಳಿಗೆ ಕೃತಜ್ಞತೆ ಅರ್ಪಿಸುವುದು ನನ್ನ ಕರ್ತವ್ಯ ಎಂದು ತಿಳಿಯುವೆ. ಬಾಲ್ಯ ಮುಗಿಯದ, ಯೌವನ ಬಾರದ ಎಡಬಿಡಂಗಿ ವಯಸ್ಸಿನಲ್ಲಿರುವವರ ಕ್ರಿಯಾಶೀಲತೆಯ ಬಗ್ಗೆ ಒಂದೆರಡು ಮಾತುಗಳನ್ನಿಲ್ಲಿ ಹೇಳದೆ ಮುಂದುವರಿಯುವುದು ಸೂಕ್ತವೆನಿಸುವುದಿಲ್ಲ. ಮುಂದೆ ನಾನು ಹೇಳಲಿರುವ ಮಾತುಗಳನ್ನು ಎಲ್ಲ ತಂದೆ-ತಾಯಿಯರೂ ಒಪ್ಪುವರೆಂದು ನನ್ನ ಖಚಿತ ನಂಬಿಕೆ. ನಮ್ಮ ಮುಂದೆಯೇ ನಮ್ಮ ಮಕ್ಕಳು ಆಕಾರದಲ್ಲಿ ಬೆಳೆಯುತ್ತಾ, ನಮ್ಮ ಹಿತನುಡಿಗೆ ಮುಖ ಸಿಂಡರಿಸಿಕ್ಕೊಳ್ಳುವ ಕಾಲವೇ ಅವರ ಬದುಕಿನಲ್ಲಿ ತುಂಬಾ ಕ್ರಿಯಾಶೀಲ ಎನ್ನುವುದು ನನ್ನ ಖಚಿತ ಅಭಿಪ್ರಾಯ! ನಮ್ಮ ಬುದ್ಧಿ ಮಾತುಗಳನ್ನು ಲದ್ದಿ ಮಾತುಗಳಂತೆ ಅಸಹಿÂಸಿಕೊಳ್ಳುವುದು ಶುರುವಾದಾಗ ಎಲ್ಲ ತಂದೆ-ತಾಯಿಯರೂ ಎಚ್ಚರಿಕೆಯಿಂದ ತಮ್ಮ ಮಕ್ಕಳನ್ನು ಗಮನಿಸಬೇಕು. ಈ ಸ್ಥಿತ್ಯಂತರದ ಕಾಲದ ಅವರನ್ನು ಮತ್ತು ಅವರ ಕ್ರಿಯೆಗಳನ್ನು ಗಮನಿಸುತ್ತಾ, ತಪ್ಪು$ ಕಂಡಾಗ ಎಚ್ಚರಿಸುತ್ತಾ, ಗದರಿಸುತ್ತ ಅವರು ಕೇಳದೆ ಮುಖ ಮುರಿದರೂ ಸಹ ಹಿತವಚನಗಳನ್ನು ಹೇಳುವುದು ತೀರಾ ಆವಶ್ಯಕ.

    ಉದಾಹರಣೆಗೆ ವಯಸ್ಸಿಗೆ ಬಂದ ಮಗನು ಒಮ್ಮೆಲೇ ಸಂಗೀತ ಪ್ರೇಮಿಯಾಗಿ, ಕೋಮಲತೆ ಕಳೆದುಕೊಂಡ ತನ್ನ ಒಡಕಲು ದನಿಯಲ್ಲಿ ಹಿಂದಿ ಇಲ್ಲವೇ ಇಂಗ್ಲಿಷ್‌ ಹಾಡುಗಳನ್ನು ಜೋರಾಗಿ ಹಾಡುವಾಗ ತಂದೆ-ತಾಯಿಗಳು ಅಕ್ಕಪಕ್ಕದ ಮನೆಯ ಕಡೆ ನೋಡಿ ಅರಿತುಕೊಳ್ಳಬೇಕಾದ ವಿಷಯವಿರುತ್ತದೆ. ಹೀಗೆ ಕಿರಿಚಿಕೊಳ್ಳುವುದು ಸನಿಹದಲ್ಲಿ ಹುಡುಗಿಯೊಬ್ಬಳು ಇದ್ದಾಗ ಎನ್ನುವುದನ್ನು ಶೀಘ್ರವೇ ಅರ್ಥಮಾಡಿಕೊಳ್ಳಬೇಕು! ಇಲ್ಲವಾದಲ್ಲಿ ಇದು ಮುಂದುವರಿದು ಪ್ರೇಮವಿವಾಹಕ್ಕೋ ಇಲ್ಲಾ ಪೊಲೀಸು ಕೇಸಿಗೋ ದಾರಿಮಾಡಿಕೊಡುತ್ತದೆ!

    ಹೆಣ್ಣುಮಕ್ಕಳ ವಿಷಯದಲ್ಲಿ ಹೇಳುವುದಾದರೆ, ಕನ್ನಡಿಯ ಮುಂದೆ ಹೆಚ್ಚುಹೆಚ್ಚು ಸಮಯ ಕಳೆಯಲು ಪ್ರಾರಂಭಿಸಿದಾಗಿನಿಂದ ತಂದೆ-ತಾಯಿಗಳು ಎಚ್ಚರಗೊಳ್ಳಬೇಕು! ಆಕೆ ಆಚೆ ನಿಂತು ಸರಿಯಾಗಿರುವ ತನ್ನ ಬಟ್ಟೆಗಳನ್ನೇ ಮತ್ತೆ ಸರಿ ಮಾಡಿಕೊಳ್ಳುವುದೋ, ಇಲ್ಲಾ ತನ್ನ ಗೆಳತಿಯ ಜೊತೆ ನಿಂತು ಮಾತನಾಡುವಾಗ ವಿನಾಕಾರಣ ನಗಲು ಪ್ರಾರಂಭಿಸಿದರೆ ಪಕ್ಕದ ಮನೆಯ ಹುಡುಗ ಹತ್ತಿರದಲ್ಲೆಲ್ಲೋ ಠಳಾಯಿಸುತ್ತಿದ್ದಾನೆ ಎಂದು ಅರ್ಥ ಮಾಡಿಕೊಳ್ಳಬೇಕು!

    ಕ್ಷಮಿಸಿ, ನಾನು ತಲೆ ಕೊರೆಯುವ ವಿಷಯದಿಂದ ದೂರ ಸರಿದಂತೆ ಕಾಣುತ್ತದೆ. ಅದಕ್ಕೇ ಈಗ ತಲೆಕೊರೆಯುವುದಕ್ಕೆ ಕ್ಷಮಿಸಿ, ತಲೆ ಕೊರೆಯುವ ವಿಷಯಕ್ಕೆ ಬರುತ್ತೇನೆ. ಮೊದಲಿಗೆ "ತಲೆ ಕೊರೆಯುವುದು' ಎಂದರೇನು ಎಂದು ಖಚಿತವಾಗಿ ತಿಳಿಯುವುದು ಆವಶ್ಯಕ.

    ತಲೆ ಕೊರೆಯುವಿಕೆಯ ಅರ್ಥ ಗ್ರಹಿಸಲು, ಅದರ ಪದಶಃ ಅರ್ಥ ತೆಗೆದುಕೊಳ್ಳಬಾರದು. ಹಾಗೆ ಅರ್ಥ ಮಾಡಿಕ್ಕೊಳ್ಳಲು ಹೊರಟರೆ ಭೌತಿಕವಾಗಿ ಯಾರಾದರೊಬ್ಬರ ತಲೆಯನ್ನು ಹಿಡಿದು ಡ್ರಿಲ್ಲಿಂಗ್‌ ಮೆಷಿನ್ನಿನಿಂದ ರಂಧ್ರ ಕೊರೆಯುವ ಚಿತ್ರ ನಮ್ಮ ಕಣ್ಮುಂದೆ ಬರುತ್ತದೆ. ಇದು ಅನರ್ಥಕ್ಕೆ ಎಡೆಯಾಗುತ್ತದೆ. ಇಂಥ ತಲೆ ಕೊರೆಯುವಿಕೆಯನ್ನು ನುರಿತ ಶಸ್ತ್ರ ವೈದ್ಯರೊಬ್ಬರು ಮಾತ್ರ ಮಾಡಲು ಸಾಧ್ಯ!

    ಹಾಗಾದರೆ ತೆಲೆಕೊರೆಯುವಿಕೆಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಇದಲ್ಲವೇ ಸಮಸ್ಯೆ. ಇದಕ್ಕೆ ಸಾರ್ವಜನಿಕವಾದ, ಸರ್ವಕಾಲಕ್ಕೂ ಅನ್ವಯವಾಗುವ ಅರ್ಥ ಹೀಗಿದೆ: ಒಬ್ಬರಿಗೆ ಇಷ್ಟವಾಗದ ವಿಷಯವನ್ನು  ಇನ್ನೊಬ್ಬರು ಅವರ ಕಿವಿಯ ಮೇಲೆ ನಿರಂತರವಾಗಿ ತುರುಕುವುದನ್ನು ತಲೆ ಕೊರೆಯುವುದು. ಇದು ವ್ಯಾಪಕವಾಗಿ ಬಳಕೆಯಲ್ಲಿದೆ. ಇಲ್ಲಿ ಮಾತು ಒಲ್ಲದವರನ್ನು ತಲೆಕೊರೆಸಿಕೊಳ್ಳುವವರೂ ಎಂದೂ, ಅತ್ಯುತ್ಸಾಹದಿಂದ ಮಾತಾಡುವವರನ್ನು ತಲೆ ಕೊರೆಯವವರು ಎಂದೂ ಕರೆಯಬಹುದು. ಈ ತಲೆ ಕೊರೆಯುವಿಕೆಗೆ ಜಾತಿ, ವರ್ಗ, ವರ್ಣ, ಗಂಡು-ಹೆಣ್ಣು ಎಂಬ ಭೇದವಿಲ್ಲ! ಇದು ಸರ್ವವ್ಯಾಪಕ ಮತ್ತು ಸಾರ್ವಕಾಲಿಕ!

    "ತಲೆ ಕೊರೆಯುವುದು' ಒಂದು ಭಾವನಾತ್ಮಕ ಪದ! ಒಲ್ಲದ ವ್ಯಕ್ತಿಯ ತಲೆಯಲ್ಲಿ ಮಾತುಗಳನ್ನು ತುರುಕುವ ಭಾವನಾತ್ಮಕವಾದ ಅರ್ಥವನ್ನಿಲ್ಲಿ ಗ್ರಹಿಸಲಾಗಿದೆ. "ತಲೆ ಕೊರೆಯುವುದು' ಪದಕ್ಕೆ ಪರ್ಯಾಯವಾದ ಅನೇಕ ಪದಗಳೂ ಇವೆ. ಇವಕ್ಕೆ ಆಯಾ ಪ್ರಾಂತ್ಯದ, ಪ್ರಾದೇಶಿಕತೆಗೆ ಅನುಗುಣವಾಗಿರುತ್ತವೆ. ಉದಾಹರಣೆಗೆ ಮೈಸೂರಿನಲ್ಲಿ ತಲೆ ಕೊರೆಯುವುದು ಎಂಬ ಪದ ಬಳಕೆಯಲ್ಲಿದ್ದರೆ, ಬೆಂಗಳೂರಿನಲ್ಲಿ ಅದು "ಭೈರಿಗೆ ಹಿಡಿಯುವುದು' ಅಥವಾ "ರೀಲು ಸುತ್ತುವುದು' ಆಗಿರಬಹುದು. ಕೆಲವು ವರ್ಷ ನಾನು ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಕೆಲಸ ಮಾಡಿದ್ದೆ. ಆಗ ಅಲ್ಲಿ "ಮೊಳೆ ಹೊಡೆಯುವುದು' ಎಂಬ ಪದವನ್ನು ಆಂಗಿಕ ಕ್ರಿಯೆಯೊಂದಿಗೆ ಉಪಯೋಗಿಸುತ್ತಿದ್ದೆವು. ಮಾತಾಡುವವನ ವೈಖರಿ ಕರ್ಕಶವಾಗಿದ್ದರೆ ಅದನ್ನು "ರಣಭೈರಿಗೆ' ಎಂದೂ ಕರೆಯಬಹುದು. ಇದೇ ಶಬ್ದ ದಕ್ಷಿಣಕನ್ನಡದ ಮಂಗಳೂರು ಕಡೆ "ಪಿರಿಪಿರಿ' ಆಗಿರಬಹುದು.

    ತಲೆ ಕೊರೆಯುವಿಕೆ ಪದಕ್ಕೆ ಪರ್ಯಾಯ ಪದಗಳು ಜಾಗದಿಂದ ಜಾಗಕ್ಕೆ, ಕಾಲದಿಂದ ಕಾಲಕ್ಕೆ, ಭಾಷೆಯಿಂದ ಭಾಷೆಗೆ ಬೇರೆಬೇರೆಯಾಗಿರುತ್ತವಾದರೂ ಅರ್ಥ ಮಾತ್ರ ಒಂದೇ ಇರುತ್ತದೆ.
    ಕೆಲವರು ತಲೆ ಕೊರೆದರೂ ತಡೆದುಕೊಳ್ಳಬಹುದು, ಇನ್ನು ಕೆಲವರ ತಲೆ ಕೊರೆತ ತಡೆಯಲಾಗದೆ ಆಸೊøà, ಅನಾಸಿನ್ನು ಕಂಪೆನಿಗಳ ವ್ಯಾಪಾರ ಹೆಚ್ಚಿಸಬೇಕಾಗುತ್ತದೆ. ಈ ತಲೆಕೊರೆಯುವವರಿಗೆ ತಮ್ಮ ಈ ಪ್ರವೃತ್ತಿ ತಿಳಿದಿರುತ್ತೋ, ಇಲ್ಲವೋ ಎಂದು ಒಮ್ಮೊಮ್ಮೆ ಅಚ್ಚರಿಯಾಗುತ್ತದೆ.

    ತಮ್ಮ ಮಾತು ಕೇಳುತ್ತಿರುವವರು ಬೇಸತ್ತು ಆಕಾಶ ನೋಡಿದರೂ, ಆಕಳಿಸಿದರೂ, ತಮಗೆ ಮಾತಿನಲ್ಲಿ ಇಷ್ಟವಿಲ್ಲ ಎಂಬುದನ್ನು ಅದೆಷ್ಟೇ ರೀತಿಯಲ್ಲಿ ವ್ಯಕ್ತಪಡಿಸಿದರೂ ಸಹ ತಲೆ ಕೊರೆಯುವಿಕೆಯನ್ನು ನಿಲ್ಲಿಸಲಾರರು - ಈ ರಣಕಲಿಗಳು!

    ಕಾಲೇಜಿನಲ್ಲಿ ಓದುತ್ತಿದ್ದ ಸಮಯದಲ್ಲಿ ನನ್ನ ಸ್ನೇಹಿತರಲ್ಲಿ ಕೆಲವರು ತಲೆಕೊರೆಯುವವರೂ ಇದ್ದರು. ಬರೀ ನನ್ನ ಸ್ನೇಹಿತರಲ್ಲೇ ಏಕೆ, ಎಲ್ಲರ ಸ್ನೇಹಿತರಲ್ಲೂ ತೆಲೆಕೊರೆಯುವವರು ಇದ್ದೇ ಇರುತ್ತಾರೆ.
    ಕಾಲೇಜು ದಿನಗಳ ನನ್ನ ಸ್ನೇಹಿತರಲ್ಲಿ ಒಬ್ಬನಾದ ರಾಮಚಂದ್ರನಿಗಂತೂ ನಾವು "ಮೊಳೆ' ಎಂಬ ಹೆಸರಿನಿಂದಲೇ ಕರೆಯುತ್ತಿದ್ದೆವು. ಹೀಗೆ ಕರೆಯುವುದರಿಂದ ಅವನಿಗೆ ವಿಲಕ್ಷಣವಾದ ಸಂತೋಷವಾಗುತ್ತಿತ್ತಂತೆ! ಅವನಂತೂ ಮಾತನಾಡಬೇಕೆಂದೇ ಮಾತನಾಡುತ್ತಿದ್ದ. ಇದರೊಟ್ಟಿಗೇ ಆಡಂಬರದ, ಅಲಂಕಾರದ ಪದಗಳನ್ನು ಉಪಯೋಗಿಸುವ ಚಟ ಬೇರೆ! ಆವಶ್ಯಕತೆಯಿರಲಿ ಇಲ್ಲದಿರಲಿ, "ಸಾಹಿತ್ಯಿಕ', "ಶೈಕ್ಷಣಿಕ', "ಸಾಮಾಜಿಕ ಕಳಕಳಿ', "ಮಣ್ಣಿನ ವಾಸನೆ', "ಅನನ್ಯ, ಉತ್ಕರ್ಷ'-ಮುಂತಾದ ಪದಗಳನ್ನು ಎಗ್ಗಿಲ್ಲದೆ, ಎಲ್ಲೆಂದರಲ್ಲಿ ಅರ್ಥಬಾರದಿದ್ದರೂ ಸಹ ಪ್ರಯೋಗಿಸುತ್ತಾ ದೊಡ್ಡ ಭೈರಿಗೆಯಾಗಿದ್ದ. ಕಳೆದ ಮೂರು ವರ್ಷಗಳಿಂದ ಅವನನ್ನು ಭೇಟಿಯಾಗಿಲ್ಲವಾದರೂ ಅವನು ತನ್ನ ಮೂಲಪ್ರವೃತ್ತಿಯನ್ನು ಬದಲಾಯಿಸದೆ ಸಿಕ್ಕಸಿಕ್ಕಲ್ಲಿ ಸಿಕ್ಕಸಿಕ್ಕವರಿಗೆ ಮೊಳೆ ಹೊಡೆಯುತ್ತಿದ್ದಾನೆ ಎಂದು ಖಡಾಖಂಡಿತವಾಗಿ ಹೇಳಬಲ್ಲೆ.

    ನನ್ನ ಸ್ನೇಹಿತರಲ್ಲಿ ಭೈರಿಗೆಗೆ ಹೆಸರಾದ ಇನ್ನೊಬ್ಬನೆಂದರೆ ಆನಂದ. ಇವನಿಗೂ ರಾಮಚಂದ್ರನಿಗೂ ಅಜಗಜಾಂತರ ವ್ಯತ್ಯಾಸ! ರಾಮಚಂದ್ರ ತಾನು ತಲೆ ಕೊರೆಯುತ್ತಿರುವೆ ಎಂದು ತಿಳಿದೇ ತಲೆ ಕೊರೆಯುವ ಭೂಪ! ಆದರೆ ಆನಂದ ತಾನು ರಸವತ್ತಾಗಿ, ಅರ್ಥಪೂರ್ಣವಾಗಿ ಮಾತಾಡುತ್ತಿರುವೆ ಎಂಬ ನಂಬಿಕೆಯಿಂದಲೇ ಮಾತಾಡುವ ಮನುಷ್ಯ! "ನಿನ್ನ ಮಾತು ರಣಭೈರಿಗೆ' ಎಂದು ನಾವೆಷ್ಟೇ ಹೇಳಿದರೂ ಅವನು ನಂಬುತ್ತಿರಲಿಲ್ಲ. ಈಗ ಅವನ ವಿಷಯ ಗೊತ್ತಿಲ್ಲ. "ಉದರ ನಿಮಿತ್ತಂ' ನಾವೆಲ್ಲರೂ ಪದವಿಗಳನ್ನು ಮುಗಿಸಿ ಹಲವು ಕಡೆ ಚದುರಿಹೋಗಿದ್ದೇವೆ.

    "ಒಲೆಹತ್ತಿ ಉರಿದೊಡೆ ನಿಲಬಹುದಲ್ಲದೆ, ನೆಲ ಹತ್ತಿ ಉರಿದೊಡೆ ನಿಲಬಹುದೆ ಅಯ್ನಾ?' ಎಂದು ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ಪ್ರಶ್ನಿಸಿದರು. ಹಾಗೆ, ತಲೆ ಕೊರೆಯುವವನು ಸ್ನೇಹಿತನೇ ಆದರೆ ನಮ್ಮ ಗತಿಯೇನು..? ತೀರಾ ಹತ್ತಿರದ ಸ್ನೇಹಿತನಾದರೆ ತಲೆಯ ಮೇಲೆ ಮೊಟಕಿ "ನಿನ್ನ ಬೈರಿಗೆ ನಿಲ್ಲಿಸು' ಎನ್ನಬಹುದು. ಅಪರಿಚಿತನಾದರೆ ತಲೆಯನ್ನು ಇನ್ನೊಂದು ಕಡೆ ತಿರುಗಿಸಿ ನಮ್ಮ ಕಿವಿಯನ್ನು ರಕ್ಷಿಸಿಕೊಳ್ಳಬಹುದು. ಆದರೆ ಉದರ ನಿಮಿತ್ತ ತಾಪೇದಾರಿಕೆಯಲ್ಲಿರುವಾಗ ನಮ್ಮ ಮೇಲಧಿಕಾರಿ, ಅರ್ಥಾತ್‌ ನಮ್ಮ ಬಾಸೇ ತಲೆಕೊರೆದರೆ ನಮ್ಮನ್ನು ರಕ್ಷಿಸುವವರು ಯಾರು..? ಬಹುಶಃ ಭಕ್ತಿ ಭಂಡಾರಿ ಬಸವಣ್ಣನವರಿಗೆ ಅವರ ಬಾಸ್‌ ಯಾನೆ ರಾಜ ಬಿಜ್ಜಳ ಈ ರೀತಿ ತಲೆಕೊರೆದಾಗ ಈ ವಚನ ಸೃಷ್ಟಿಯಾಯಿತೆ...? ಮೇಲಧಿಕಾರಿಯೇ ತಲೆಕೊರೆದರೆ ಬೇರೆ ದಾರಿಯಿಲ್ಲದ ವಿಧಿಯನ್ನು ಹಳಿಯುತ್ತಾ ಅವರ ಹಳೆಯ ಮೊಳೆಗಳಿಗೆ ನಮ್ಮ ಕಿವಿಯನ್ನೀಯಲೇಬೇಕು! ಒಮ್ಮೊಮ್ಮೆ ಈ ಬಾಸುಗಳ್ಳೋ ಎಂತೆಂಥಾ ವಿಷಯಗಳ ಬಗೆಗೆ ಮೊಳೆ ಹೊಡೆಯುತ್ತಾರೆಂದರೆ, ಅಲ್ಲಿಯೇ ಯಾವುದಾದ‌ರೊಂದು ಹಳೆಯ ಚಾಕು ಸಿಕ್ಕರೆ ಅದರಿಂದ ತಿವಿದುಕೊಂಡು ಸಾಯಬೇಕೆನಿಸುತ್ತದೆ. ಇದು ಬಹುಶಃ ನಿಮ್ಮ ಅನುಭವ ಕೂಡ ಆಗಿರಬಹುದು!!
    ಮೊನ್ನೆಯ ಮಾತನ್ನೇ ಹೇಳುತ್ತೇನೆ. ಬೆಳ್ಳಂಬೆಳಿಗ್ಗೆ ಅಂದರೆ ಸುಮಾರು ಒಂಬತ್ತು ಗಂಟೆೆಯ ಸಮಯ.
    ಇದೇನು ಬೆಳಿಗ್ಗೆ ಒಂಬತ್ತಕ್ಕೇ ಬೆಳ್ಳಂಬೆಳಿಗ್ಗೆ ಎನ್ನುತ್ತಾನಲ್ಲ ಎಂದು ನಿಮಗೆ ಅಚ್ಚರಿಯಾಗಬಹುದು.
    ನನ್ನೂರಾದ ಮೈಸೂರಿನ ಜನರೆಷ್ಟು ಸೋಮಾರಿಗಳೆಂದರೆ ಇವರಿಗೆ‌ ಸೂಯೊìàದಯವಾಗುವುದೇ ಎಂಟು ಗಂಟೆಗೆ! ಹಾಲಿನವ ನಿಮ್ಮ ಮನೆಯ ಕಾಲಿಂಗ್‌ ಬೆಲ್‌ ಒತ್ತುವುದೇ ಎಂಟಕ್ಕೆ! ದಿನಪತ್ರಿಕೆ ಬರುವುದೇ ಏಳೂವರೆಗೆ! ನಮ್ಮ ಕಾರ್ಖಾನೆಯ ಸಾಮಾನ್ಯ ಪಾಳಿ ಶುರುವಾಗುವುದು ಎಂಟಕ್ಕೆ.

    ಅಂದು ಬೆಳಿಗ್ಗೆ ಬಾಸು ಕರೆದಿದ್ದರು. ನಾನಲ್ಲಿಗೆ ಹೋದಾಗ ಇನ್ನೂ ಎರಡು ಸೆಕ್ಷನ್ನುಗಳ ಹೆಡ್ಡುಗಳು ಬಂದಿದ್ದರು. ಕಾರ್ಖಾನೆಗೆ ಸಂಬಂಧಿಸಿದ ವಿಷಯಗಳನ್ನು ತಿಳಿಸಿದರು, ಅದರ ಬಗೆಗೆ ಚರ್ಚೆ, ತೀರ್ಮಾನಗಳೂ ಅದುವು. ಮಧ್ಯೆ ಒಮ್ಮೆ ಕಾಫಿ ತರಿಸಿ ಕೊಟ್ಟರು. ಇದೆಲ್ಲಾ ಹದಿನೈದು ನಿಮಿಷಕ್ಕೆ ಮುಗಿಯಿತು. ಆಮೇಲೆ ಶುರುವಾಯಿತು ನೋಡಿ ತಲೆಕೊರೆಯುವುದು!! ಬಾಸಿಗೆ ಒಳ್ಳೇ ಮೂಡ್‌ ಬಂದಿತ್ತೆಂದು ಕಾಣುತ್ತದೆ. ನಮ್ಮ ಅಫಿಶಿಯಲ್‌ ವಿಷಯಗಳು ಮುಗಿದಿದ್ದರೂ ಬರೋಬ್ಬರಿ ಅರ್ಧ ಗಂಟೆ ಅಗತ್ಯವಿಲ್ಲದ ವಿಷಯಗಳನ್ನೆತ್ತಿ ಭೈರಿಗೆ ಹಿಡಿದರು! ಇಷ್ಟಾದರೂ ಅವರಿಗೆ ತೃಪ್ತಿಯಾಗಿರಲಿಲ್ಲ! ನಮ್ಮನ್ನು ಭೈರಿಗೆಯಿಂದ ಬಿಡುಗಡೆ ಮಾಡುವಂತೆ ಕಾಣಲಿಲ್ಲ.

    ಅವರ ತೆಲೆಕೊರೆಯುವಿಕೆ ಯಾವುದೋ ಜಪಾನಿನ ಕಂಪೆನಿಯ ಕೆಲಸದ ಸಂಸ್ಕೃತಿಯಿಂದ ಶುರುವಾದದ್ದು ದಿಕ್ಕು ತಪ್ಪಿ , ಎಲ್ಲೆಲ್ಲೋ ಹೋಗಿ, ಸಿನಿಮಾ, ಚಿತ್ರಕಲೆ, ಬಾಟಿಕ್‌ ಇನ್ನೂ ಹಲವಾರು ವಿಷಯಗಳ ಮೇಲೆ ಹರಿದು ಕೊನೆಗೆ ಅವರ ಶ್ರೀಮತಿಯವರ ಹವ್ಯಾಸಗಳ ಬಗ್ಗೆ ಸಾಗಿತ್ತು. ಅಲ್ಲಿ ನಾಲ್ಕು ಜನ ಸೆಕ್ಷನ್‌ ಹೆಡ್ಡುಗಳು ಹೆಡ್ಡರಾಗಿ ಕುಳಿತಿದ್ದೆವು. ಹೇಳೀಕೇಳಿ ಬಾಸು! ಬೇಸರಿಸುವಂತಿರಲಿಲ್ಲ! ಆಕಳಿಸುವಂತಿರಲಿಲ್ಲ! "ನಿಮ್ಮ ಭೈರಿಗೆ ಸಾಕು' ಅನ್ನುವಂತಿರಲಿಲ್ಲ! ಹೇಳಲಾರದ ಹಿಂಸೆ! ಬಿಡುಗಡೆಯಿಲ್ಲದ ಸ್ಥಿತಿ! ನಮ್ಮ ಸ್ಥಿತಿಗೆ ನಾವೇ ಮರುಗುತ್ತಿದ್ದೆವು. ಈ ರಣಭೈರಿಗೆಯಿಂದ ಮುಕ್ತಿ ನೀಡುವಂತೆ ಆ ದಯಾಮಯನನ್ನು ಮನಸ್ಸಿನಲ್ಲೇ ಪ್ರಾರ್ಥಿಸುತ್ತಿದ್ದೆವು. ಆ ಸಮಯಕ್ಕೇ ಭಗವಂತ ಒಂದು ದೂರವಾಣಿ ಕರೆಯನ್ನು ದಯಪಾಲಿಸಿದ. ಬಾಸಿಗೆ ಪೋನು ಬಂದಿತ್ತು! ಅದೂ ಸೂಪರ್‌ ಬಾಸಿನಿಂದ! ಆ ಸೂಪರ್‌ ಬಾಸು ನಮ್ಮ ಬಾಸಿಗೆ ತಲೆಕೊರೆಯುವುದು ಶುರುಮಾಡಿದಂತಿತ್ತು!

    ಅಂತ ಒಂದು "ಪವಾಡಕ್ಕೆ' ಕಾಯುತ್ತಿದ್ದ ನಾವು ಒಬ್ಬೊಬ್ಬರಾಗಿ ಎದ್ದು ಜಾಗ ಖಾಲಿ ಮಾಡಿದೆವು! ದೇವರಿಲ್ಲ ಎನ್ನುವ ನಾಸ್ತಿಕವಾದಿಗಳಿಗೆ ಇಲ್ಲಿದೆ ನನ್ನ ಉತ್ತರ! ಫೋನಿನ ಆ ಪವಾಡ ನಡೆಯದಿದ್ದರೆ ನಮ್ಮ ಕಿವಿಗಳ ಗತಿ ಏನಾಗುತ್ತಿತ್ತು! ನೀವೇ ಊಹಿಸಿ!

    ಇದೆಲ್ಲಾ ಓದಿದ ಮೇಲೆ ನಿಮಗೂ ಅನ್ನಿಸಿರಬೇಕು. ಈ ಲೇಖಕನೇನು ಸಾಮಾನ್ಯನಲ್ಲ. ತಲೆ ಕೊರೆಯುವ ವಿಷಯದಲ್ಲಿ ಇಷ್ಟೊಂದು ಕೊರೆದನಲ್ಲ ಎಂದು! ಇದು ತಲೆಕೊರೆತವಾಗಿದ್ದರೆ ಕ್ಷಮಿಸಿ! ನನ್ನ ಉದ್ದೇಶ ತಲೆಕೊರೆಯುವುದರ ಬಗೆಗೆ ಹೇಳುವುದಾಗಿತ್ತೇ ಹೊರತು ತಲೆಕೊರೆಯುವುದಲ್ಲ!

   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • Copyright @ 2009 Udayavani.All rights reserved.
   • Designed & Hosted By 4cplus