Wednesday, June 19, 2013
Last Updated: 12:47:20 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನನ್ನ ಸರದಿ
    • ನನ್ನ ಸರದಿ

      • ಭಾರತಿ ಹುಡದಳ್ಳಿ | Feb 10, 2013

        (ಕಳೆದ ರವಿವಾರದಿಂದ)

        ಎಲ್ಲವೂ ಸರಿ ಹೋಗುತ್ತೆ. ರವಿಯ ಅದೇ ಮಾತು. ಅದೇ ತಾನು ಬಿಡದಂತಹ ಶಬ್ದ. ಅಲ್ಲಿಗೆ ಎಲ್ಲವೂ ಅವನಂದಂತೆಯೇ ನಡೆಯಬೇಕು ಅಷ್ಟೇ. ಆಶಾಳ ಉತ್ತರಕ್ಕೆ ಅವನೆಂದೂ ಕಾಯುತ್ತಿರಲಿಲ್ಲ. ತನ್ನ ಅಭಿಪ್ರಾಯ ತಿಳಿಸಿದರೆ ಅಲ್ಲಿಗೆ ಅದು ಮುಗಿಯಿತು. ಅವನಂದಂತೆ ನಡೆಯಬೇಕು. ಮೊದಲಿನಿಂದಲೂ ಅವನು ಅದೇ ತರಹ ನಡೆದುಕೊಂಡು ಬಂದಿದ್ದನಲ್ಲಾ. ಈಗಲೂ ಹಾಗೆಯೇ. ನೀನೇನಂತಿ? ಎಂದು ಒಮ್ಮೆಯೂ ಕೇಳಿರಲಿಲ್ಲ. ಇದು ಹೀಗಾಗಬೇಕು, ಆಗಬೇಕು ಅಷ್ಟೇ ಎಂಬಂತಿತ್ತು ಅವನ ಧೋರಣೆ. ಇದೇನು ಹೊಸತಲ್ಲ. ಸರಿ, ಬಂದ ಪರಿಸ್ಥಿತಿಗೆ ತಲೆಬಾಗಿದ್ದಳು ಆಶಾ. ಮಗನಿಗೆ, ಗಂಡನಿಗೆ, ಸೊಸೆಗೆ ಹುಷಾರಿಲ್ಲದಾಗ ಮನೆಯ ಎದುರಿನ ಗುಡಿಯ ಗೋಪುರಕ್ಕೆ ಹೋಗಿ ತನ್ನಾಸೆಯನ್ನು ಕೇಳಿಕೊಳ್ಳುತ್ತಿದ್ದಳು. ಅಂತೆಯೇ ಈ ದಿನವು ಗೋಪುರ ಕಂಡು ಕೇಳಿದ್ದಳು, ""ಮೊಮ್ಮಗ ಅಭಿ ಚೆನ್ನಾಗಿ ಬೆಳೆಯಲಿ. ಯಾವ ತೊಂದರೆಯು ಬಾರದಿರಲಿ' ಗೋಪುರ ನಕ್ಕಂತಾಯಿತು. ಅವಳಿಗೆ ಉತ್ತರ ದೊರೆತಂತೆ ಅನುಭವ. ದಿನವುರುಳುತ್ತಿತ್ತು.

        ಪತಿ, ಮಗ, ಸೊಸೆ ಎಲ್ಲರನ್ನು ಕಳಿಸಿ ಗೇಟ್‌ ಹಾಕುವಾಗ ಪತಿ ರವಿ ಅಂದಿದ್ದ ""ಆಯಿತಲ್ಲ, ಮನೆಗೆ ಇನ್ನೇನು ರಾಣಿ ನೀನೊಬ್ಬಳೇ. ಮೊಮ್ಮಗನಿಗೆ ಹಾಲು ಕುಡಿಸಿ ಮಲಗಿಸಿದರಾಯಿತು. ನಿನ್ನದೇ ಕಿಂಗ್‌ಡಮ್‌. ನೋಡು ನಾವೆಲ್ಲಾ ಸಾಯಂಕಾಲದವರೆಗೆ ಕತ್ತೆ ತರಹ ನೌಕರಿ ಮಾಡಬೇಕು' ಎಂದು ಹೇಳಿಹೋಗಿದ್ದ. ನಿಜ.
        ಅಂಗಳಕ್ಕೆ ಕಾಲಿಟ್ಟರೆ ಕಸ, ರಂಗೋಲಿ, ಹಾಲ್‌ಗೆ ಕಾಲಿಟ್ಟರೆ ಅಂದಿನ ಪೇಪರ್‌ ಓದಿ ಬಿಸಾಡಿದ್ದನ್ನು ಎತ್ತಿಟ್ಟು , ಡಸ್ಟಿಂಗ್‌ ಮುಗಿಸಿ ಕಸ ತೆಗೆದು ಮಗನ ರೂಮ್‌ಗೆ ಹೋದರೆ ಸೊಸೆಯ ನೈಟಿ, ಪಾಪುವಿನ ಬಟ್ಟೆ , ನ್ಯಾಪ್‌ಕಿನ್‌ ಎಲ್ಲ ಹೊಂದಿಸಿ ಅವರ ರೂಮ್‌ ಕ್ಲೀನ್‌ ಮಾಡಿ, ಡೈನಿಂಗ್‌ ರೂಮ್‌ಗೆ ಬಂದರೆ ಡೈನಿಂಗ್‌ ಟೇಬಲ್‌ ಮೇಲೆ ಕಾಫಿ ಕಪ್‌ನಿಂದ ಹಿಡಿದು, ಬ್ರೇಕ್‌ಫಾಸ್ಟ್‌ ಮಾಡಿದ ಪ್ಲೇಟ್‌, ನೀರಿನ ಗ್ಲಾಸ್‌ ಎಲ್ಲವೂ ಜೊಮ್‌ ಎಂದಿತ್ತು. ಅವೆಲ್ಲವನ್ನು ಕ್ಲೀನ್‌ ಮಾಡಿ ತನ್ನ ಬೆಡ್‌ರೂಮ್‌ಗೆ ಬಂದಾಗ ಗಂಡನ ಲುಂಗಿ, ಶರ್ಟ್‌ ಬಿಸಾಡಿದ್ದನ್ನು ಎತ್ತಿ, ಸ್ನಾನ ಮಾಡಲು ಬಾತ್‌ರೂಮ್‌ಗೆ ಹೋದರೆ ಅಲ್ಲೊಂದು ಮೂಟೆ ಬಟ್ಟೆ . ಬಟ್ಟೆ ಒಗೆದು ಅಡುಗೆ ಮನೆಗೆ ಹೋದರೆ ಸಿಂಕಿನ ತುಂಬಾ ಹಿಂದಿನ ರಾತ್ರಿಯ ಊಟದ ಎಂಜಲು ಪ್ಲೇಟ್‌ಗಳು. ಎಲ್ಲವನ್ನು ಕ್ಲೀನ್‌ ಮಾಡಿ, ಬಾತ್‌ರೂಮ್‌ ತೊಳೆದು, ಸ್ನಾನ ಮಾಡಿ, ದೇವರ ಪೂಜೆ ಮಾಡಿ ಮುಗಿಸುವಷ್ಟರಲ್ಲಿ 12 ಗಂಟೆ. ಇನ್ನೊಂದಿಷ್ಟು ಹೊಟ್ಟೆಗೆ ಏನಾದರೂ ಹಾಕೋಣ ಎಂದಾಗ ಅಭಿ ಮಲಗಿದ್ದವನು ಎದ್ದು ಆಂ ಆಂ ಎಂದು ತನ್ನ ಇರುವನ್ನು ತೋರಿಸಲು ಶುರುಮಾಡಿದಾಗ ಮಗುವಿಗೆ ಹಾಲು ಕುಡಿಸಿ, ಬಾಟಲ್‌ ಪಕ್ಕಕ್ಕಿಟ್ಟಾಗ ಹೊಟ್ಟೆ ಹಸಿದು, ತೊಳೆಸಿ ವಾಂತಿ ಬಂದಂತಹ ಅನುಭವ. ಏನಾದರೂ ತಿಂದು ಮಲಗಿದರೆ ಸಾಕಪ್ಪ ಎನಿಸಿದಾಗ ಅಭಿಯ ಗುಗೂ ಆಟ ಶುರುವಾಗುತ್ತಿತ್ತು. ಆಗ ನೆನಪಾಗಿದ್ದು ಆಶಾಳಿಗೆ ತನ್ನ ರಾಣಿ ಬದುಕು.
        ಇದೇ ತನ್ನ ಸಿರಿತನದ ಬದುಕು. ತಾನಿಲ್ಲಿ ರಾಣಿ. ಯಾರೂ ಕೇಳುವವರಿಲ್ಲ. ತಾನೊಬ್ಬಳು ಅರಮನೆಯಲ್ಲಿರೋ ಭಿಕ್ಷುಕಿ. ಉಪ್ಪರಿಗೆಯ ಮೇಲಿರೋ ಭಿಕಾರಿ. ತನಗೆಲ್ಲರೂ ಇದ್ದಾರೆ, ಆದರೆ ಯಾರು ಇಲ್ಲ. ಇದೆಂತಹ ಬದುಕು? ಹೌದು. ಈ ಬದುಕಿಗೊಂದು ಅರ್ಥ ಇದೆ ಎಂದು ಬದುಕುವುದೇ ಒಂದರ್ಥ.

        ಅದರ ಅರ್ಥ ಹುಡುಕೋದಕ್ಕೆ ಪ್ರಯತ್ನಪಟ್ಟೆಯಾದರೆ ಬದುಕು ಅನರ್ಥ. ""ಅರ್ಥ ಅನರ್ಥದ ತಾಕಲಾಟದಲ್ಲಿ ಬದುಕಾಗಲಿ ಸಾರ್ಥಕ' ಎಂಬ ಸ್ವಾಮಿಯವರ ವಾಕ್ಯ ಈ ದಿನ ಕಿವಿಗಪ್ಪಳಿಸಿದಂತಹ ಅನುಭವ. ಈ ಏರಿಳಿತದ ಬಂಡಿಯ ನಡುವೆ ಬಾಳು ಸಾಗುತ್ತಿದ್ದಾಗ ಅಂಕುಶ ಒಂದು ದಿನ ತಾಯಿಗೆ ಹೇಳಿದ್ದು, ""ಅಮ್ಮ ನಾನು ಕಟ್ಟಿಸುತ್ತಿರುವ ಮನೆ ಮುಗಿಯುತ್ತೆ. ಅದಕ್ಕೆ ಅಭಿ ಎಂದು ಹೆಸರಿಟ್ಟಿರುವೆ. ಮುಂದಿನ ತಿಂಗಳು ಹೊಸ ಮನೆಗೆ ಪ್ರವೇಶ. ಅಂತೂ ನಿನ್ನದು ಹೊಸ ಮನೆಯಲ್ಲಿ ಮತ್ತೆ ಹೊಸ ಬದುಕು' ಅಂದಿದ್ದ ನಗುತ್ತಾ. ಅಂತೂ ತಂದೆ ಮನೆ ಕಟ್ಟಿದ. ಮಗನ ಹೆಸರಿಟ್ಟ . ಮಗ‌ ಮನೆ ಕಟ್ಟಿದ. ತನ್ನ ಮಗನ ಹೆಸರಿಟ್ಟ. ಹೀಗೆಯೇ ಅರಸರ ಅಂತಪುರ ದೊಡ್ಡದಾಗುತ್ತಾ ಹೋಗುತ್ತೆ ಅರಸಿಯರ ಗೋರಿಯ ಮೇಲೆ. ಅಂತಪುರ ಬೆಳೆಯುತ್ತಾ ಹೋಗುತ್ತೆ. ಅರಸಿಯೆಂದೂ ಎಲೆಮರೆಯ ಕಾಯಾಗಿ ಕರಗುತ್ತಲೇ ಹೋಗುತ್ತಾಳೆ. ದೀಪದ ಕೆಳಗಿನ ಕತ್ತಲೆಯಂತೆ. ಮೇಣ ಕಾವಿಗೆ ಕರಗುತ್ತೆ. ಬತ್ತಿ ಮೇಣದ ಎಣ್ಣೆಯಿಂದ ಉರಿಯುತ್ತಾ ಹೋಗುತ್ತೆ. ಇಂತಿರುವ ಬದುಕಿಗೆ ಸ್ವಾರ್ಥದ ಲೇಪ. ಹೆಣ್ಣೇ ಸ್ವಾರ್ಥಿಯೆಂದು ಆಶಾ ನಿಧಾನವಾಗಿ ನಕ್ಕಿದ್ದು, ಇಲ್ಲಿ ಸ್ವಾರ್ಥಿಯೇ ನಾನು? ಎಲ್ಲರನ್ನು ತೊರೆದು ನದಿ ಸಮುದ್ರ ಸೇರಿದಂತೆ, ಇವರೆಲ್ಲರೊಡನೆ ಬಂದಾಗ ಇವರ ಬಾಳ ಬಳ್ಳಿ ಬೆಳಗುವಂತೆ ಮಾಡಿ, ಈ ಮಕ್ಕಳಿಗಾಗಿ ಜೀವ ತೇಯ್ದ ನಾನು ಸ್ವಾರ್ಥಿಯೇ? ರವಿ ತನ್ನವರ್ಯಾರನ್ನು ತೊರೆಯಲಿಲ್ಲ. ತನ್ಯಾವ ಆಶೆಗಳಿಗೆ ಲಗಾಮು ಹಾಕಲಿಲ್ಲ. ತನ್ನ ಮನೆ ಬೆಳಗಿಸಿಕೊಂಡ ತನ್ನಾಸೆೆಯಂತೆ ಬದುಕು ಕಲ್ಪಿಸಿಕೊಂಡ ಮಗನ ಮುಂದೆ ತಂದೆಯ ಹೆಸರು. ರವಿ ಇಲ್ಲಿ ಸ್ವಾರ್ಥಿಯಾಗಿ ಕಂಡ ಆಶಾಳಿಗೆ ನಿಜಾ, ಮಗನಿಗೆ ಅಪ್ಪನ ಹೆಸರು. ಅಪ್ಪನ ಊರು ಸ್ವಂತ. ಆದರೆ ತನಗಾರು ಸ್ವಂತ? ತನಗೆ ಗಂಡ ಸ್ವಂತ.
        ಗಂಡ ಮಕ್ಕಳಿಗೂ ಸ್ವಂತ. ಆದರೆ ತನಗಾರು ಸ್ವಂತ ಇಲ್ಲ. ಕೇವಲ ನನಗಾಗಿಯೇ ಎಂಬ ಸ್ವಂತಿಕೆ ಇಲ್ಲ.
        ಹೆಣ್ಣಿಗೆ ಬಾಲ್ಯದಲ್ಲಿ ತಂದೆ ಸ್ವಂತ. ಮದುವೆ ಆದ ಮೇಲೆ ಪತಿ ಸ್ವಂತ. ಮುಂದೆ ಮಗ ಸ್ವಂತವೇ ಆದರೂ ಪತಿಯ ಹೆಸರು ನಿರಂತರ (ಸಾಯುವವರೆಗೆ) ಮುಂದೆ. ಹಾಗಾದರೆ ತಾನೆಂದು ಮುಂದು? ಬರಲಿಲ್ಲ ಅವಳ ಸರದಿ. ಅವಳದೇನಿದ್ದರೂ ಬದುಕಿನ ಪರಿಧಿ ಪರದೆ. ಇಲ್ಲಿಯೂ ಅಂತೆಯೇ ಆಶಾಳ ಬದುಕಿಗೆ ಸ್ವಂತಿಕೆ ಇಲ್ಲ.

        ಅಭಿ ಎಂದು ನಾಮಾಂಕಿತವಾದ ಹೊಸ ಮನೆಗೆ ಪ್ರವೇಶವೂ ಆಗಿತ್ತು. ಎಲ್ಲವೂ ಆಧುನಿಕ. ಸುಸಜ್ಜಿತವಾದ ಮನೆ. ಆಶಾ ಎಲ್ಲದಕ್ಕೂ ಹೊಂದಿಕೊಂಡಿದ್ದಳು. ಮನೆಯ ಪಕ್ಕದ ಬೀದಿಯಲ್ಲಿಯೇ ದೇವಸ್ಥಾನ. ಆಗೊಮ್ಮೆ ಈಗೊಮ್ಮೆ ಹೋಗಿಬರಬಹುದೆಂಬ ಲೆಕ್ಕಾಚಾರ ಹಾಕಿದ್ದಳು. ದೇವಸ್ಥಾನ ನೆನಪಾದೊಡನೆ, ಪಕ್ಕನೆ ಅವಳಿಗೆ ಮನೆದೇವರ ನೆನಪಾಯಿತು. ಮಗನ ಮದುವೆಯಾದ ಮೇಲೆ ಹೋಗಿದ್ದು ಮನೆದೇವರಿಗೆ. ಅತ್ತೆಯ ಕಾಲದಲ್ಲಿ ವರ್ಷಕ್ಕೊಮ್ಮೆಯಾದರೂ ಮನೆದೇವರಿಗೆ ಹೋಗೋ ವಾಡಿಕೆ. ಇಲ್ಲಿಗೆ ಬರುವಾಗ ಹೋಗಿದ್ದು. ಮತ್ತೆ ಮನೆದೇವರಿಗೆ ಹೋದದ್ದೆ ಇಲ್ಲ. ಈಗ ಮೊಮ್ಮಗ ಬಂದು, ಹೊಸ ಮನೆಗೆ ಬಂದು ಆಗಿದೆ.

        ಈಗಲಾದರೂ ಮನೆದೇವರಿಗೆ ಹೋಗಬೇಕೆಂದು ನೆನೆದು, ಆಶಾ ಆ ದಿನ ಸಾಯಂಕಾಲ ಎಲ್ಲರ ಮುಂದೆ ತನ್ನ ಮನದಾಸೆ ಹೇಳಿದ್ದಳು. ಅಂಕುಶ ಅಂದಿದ್ದ ""ಅಮ್ಮ ಹೊಸ ಕಾರ್‌ ತೆಗೆದುಕೊಂಡ ಮೇಲೆ ಕೇರಳ ಟೂರ್‌ಗೆಂದು ಒಂದು ವಾರ ರಜೆ ಹಾಕಿದೆ. ಈ ಮನೆ ಓಪನಿಂಗೆಂದು ಒಂದು ವಾರ ರಜೆ ಹಾಕಿದೆ. ನನಗಿನ್ನು ರಜೆ ಇಲ್ಲ'. ರವಿಯಂತೂ ""ಅದೇನು ದೇವರು, ದೇವರು ಅಂತಿಯೇ, ಹೋಗೋದಕ್ಕೆ ಎರಡು ದಿನ, ಬರೋದಕ್ಕೆ 1 ದಿನ. ಒಟ್ಟಿನಲ್ಲಿ 4 ದಿನ ದೇವರಿಗೆ ಅಭಿಷೇಕ. ಅದು ಇದು ಎಂದು ಅಲ್ಲಿ ಎರಡು ಬಿಟ್ಟು ಒಂದು ವಾರ ಬೇಕಾಗುತ್ತೆ. ನನ್ನ ಹತ್ತಿರ ರಜೆ ಇಲ್ಲ. ಇನ್ನು ಒಬ್ಬಳನ್ನೇ ಕಳಿಸಲು ಆಗೋದಿಲ್ಲ. ಶಿವಾನಿ ನೌಕರಿಗೆ ಹೋದರೆ ಅಭಿಯನ್ನು ನೋಡಿಕೊಳ್ಳೋರು ಯಾರು? ಸುಮ್ಮನೆ ಇರು ಮತ್ತೆಂದಾದರೂ ಹೋದರಾಯಿತು' ಶಿವಾನಿ ಮೂಕ ಪ್ರೇಕ್ಷಕಿಯಂತೆ ಮೌನಿಯಾಗಿದ್ದಳು. ಆಶಾಳಿಗೆ ಅದೇಕೊ ತಡೆಯಲಾಗಲಿಲ್ಲ. ""ಅಲ್ಲಾ ವರ್ಷವಿಡೀ ನಮಗಾಗಿ ಬದುಕುತ್ತೇವೆ. ಒಂದು ದಿನವಾದರೂ ದೇವರ ಸೇವೆ ಮಾಡೋದು ತಪ್ಪಾ? ಒಂದೇ ಒಂದು ದಿನ ನಾವು ಆ ದೇವರ ಸೇವೆ ಮಾಡದಿದ್ದರೆ ಹೇಗೆ? ಹೇಗೋ ಶಿವಾನಿ ಮಮ್ಮಿ ಬರುವವರಿದ್ದಾರೆ. ಅವರು ಅಭಿಯನ್ನು ನೋಡಿಕೋತಾರೆ. ನಾನು ಹೋಗಿ ಬರುತ್ತೇನೆ' ಎಂದಾಗ ಶಿವಾನಿ ಬಾಯಿಬಿಟ್ಟಿದ್ದಳು ""ಅಲ್ಲಾ ನನ್ನ ಮಮ್ಮಿ ಬರುತ್ತಿರುವುದು ಇಲ್ಲಿ ಒಂದು ತಿಂಗಳ ರೆಸ್ಟ್‌ಗೆ.

        ಮೊನ್ನೆಯಷ್ಟೇ ಮಮ್ಮಿ ಯಾತ್ರೆ ಮುಗಿಸಿಕೊಂಡು ದಣಿದು ಬಂದಿದ್ದಾಳೆ. ಅವಳಿಗೇನಿದ್ದರೂ ಒಂದು ತಿಂಗಳು ರೆಸ್ಟ್‌ ಬೇಕಂತೆ. ಅದಕ್ಕೆ ಅವಳು ನಾಳೆ ಬರುತ್ತಿದ್ದಾಳೆ. ಅಂತಹುದರಲ್ಲಿ ನೀವು ಹೀಗೆ ಹೋದರೆ ಹೇಗೆ? ಮಮ್ಮಿ ಕೈಯಿಂದ ಅಭಿಯನ್ನು ಹಿಡಿಯೋದು ಅಸಾಧ್ಯ. ಅವಳಿಗೆ ಕೂತರೆ ಏಳ್ಳೋದಕ್ಕೆ ಆಗಲ್ಲಾ. ಎದ್ದರೆ ಕೂಡಕ್ಕಾಗೋದಿಲ್ಲ. ಮುಂದೆ ಎಂದಾದರೂ ಮನೆದೇವರಿಗೆ ಹೋದರಾಯಿತು ಸದ್ಯಕ್ಕೆ ಬೇಡ' ಎಂದು ಹೇಳಿ ಮಾತು ಮುಗಿಸಿದ್ದಳು. ಆಶಾ ಬದುಕಿನ ಈ ದ್ವಂದ್ವದಲ್ಲಿ ಹತಾಶಳಾಗಿದ್ದಳು. ಕರ್ತವ್ಯ ಅವಳ ಹೆಗಲೇರಿತ್ತು.

        ದೂರದಲ್ಲಿ ಜೇಡರ ಬಲೆಯಲ್ಲಿ ಬಿದ್ದ ಹುಳು ಹೊರಗೆ ಬರಲಾಗದೆ, ತಾನೇ ಸುತ್ತಿದ ನೇಯ್ಗೆಯಲ್ಲಿ ವಿಲವಿಲ ಒದ್ದಾಡುವುದನ್ನು ಕಂಡ ಆಶಾ, ""ನಾನು ನಿನ್ನಂತೆಯೇ ಬದುಕಿನ ನೇಯ್ಗೆಯಲ್ಲಿ ಸಿಕ್ಕಿ ನಲುಗಿರುವೆ' ಎಂಬ ಭಾವ ಅವಳಲ್ಲಿ ಅರೇಕ್ಷಣ ಮೂಡಿ ಮಾಯವಾಗಿತ್ತು.

        ಮರುದಿನ ಸಂಡೇ ಯಾವುದೋ ಫ‌ಂಕ್ಷನ್‌ಗೆ ಮಗ, ಸೊಸೆ ಹೊರಡಲನುವಾಗಿದ್ದರು. ಅಷ್ಟರಲ್ಲಿ ರವಿ ನನ್ನನ್ನು ಆನ್‌ದಿವೇ ಡ್ರಾಪ್‌ ಮಾಡಿ ಎಂದು ಅವರಿಗೆ ಹೇಳುವುದು ಕೇಳಿತ್ತು ಆಶಾಳಿಗೆ. ಅದೇಕೊ ಎಂದಿನಂತೆ ಗೆಲುವಾಗಿರಲಿಲ್ಲ ಮಗನ ಮುಖ. ತುಂಬಾ ಸಪ್ಪೆಯಾಗಿತ್ತು. ಎಷ್ಟಾದರೂ ತಾಯಿಯ ಕರುಳು ಚುರ್ರೆಂದಿತ್ತು.
        ಅದೇಕೆ ಸಪ್ಪಗಾಗಿದ್ದಾನೆ ಮಗ ಎಂಬ ಯೋಚನೆ ಅವಳಿಗೆ ಚುಚ್ಚಿತ್ತು. ಅಂಕುಶ ಬಂದು ""ಅಮ್ಮಾ ನಾವೆಲ್ಲಾ ಫ‌ಂಕ್ಷನ್‌ಗೆ ಹೋಗ್ತಿದೀವಿ. ಅಭಿಯನ್ನು ಕರೆದುಕೊಂಡು ಹೋಗ್ತಿàವಿ. ರಾತ್ರಿ ಅಡುಗೆ ಮಾಡಬೇಡ. ಬರುವಾಗ ನಿನಗೂ ಊಟ ತಂದು ಬಿಡ್ತೀವಿ. ನಾವು ಬರೋದು ರಾತ್ರಿ 8.30, 9 ಗಂಟೆಯಾಗುತ್ತೆ. ಅಲ್ಲಿಯವರೆಗೆ ನೀನು ಬೇಕಾದರೆ ಪಕ್ಕದ ಬೀದಿಯ ದೇವಸ್ಥಾನಕ್ಕೆ ಹೋಗಿ ಬಾ. ಹಾಗೆ ಮೊಬೈಲ್‌ ಒಯ್ಯೋದು ಮರೀಬೇಡಾ' ಎಂದಿದ್ದ. ""ಆಯಿತಪ್ಪ' ಎಂದಳು ಆಶಾ. ಅಂಕುಶ, ಅಭಿ, ಶಿವಾನಿ, ಪತಿ ರವಿ ಎಲ್ಲರೂ ಕಾರ್‌ನಲ್ಲಿ ಹೊರಟ ಮೇಲೆ, ಮನೆ ಬಿಕೋ ಎಂಬಂತಾಗಿತ್ತು. ಅದೇಕೋ ಅಡುಗೆ ಮನೆಗೆ ಬಂದಾಗ, ಶಿವಾನಿ ಅಂದೆಕೋ ಅಡುಗೆ ಮನೆ ಕ್ಲೀನ್‌ ಮಾಡಿ, ಫ್ಲಾಸ್ಕ್ನಲ್ಲಿ ಅತ್ತೆಗೆ ಕಾಫಿ  ಕೂಡ ಮಾಡಿ ಇಟ್ಟಿದ್ದು ಕಂಡು ಆಶಾಳಿಗೆ ನಗು ಬಂದಿತ್ತು.

        ತನ್ನ ಬಗೆಗೆ ಇವರಿಗೂ ಕಾಳಜಿ ಇದೆ ಎಂದು, ಕಾಫಿ ಕುಡಿದ ಆಶಾ, ಸೀರೆ ಬದಲಾಯಿಸಿ, ಪಕ್ಕದ ಬೀದಿಯ ದೇವಸ್ಥಾನಕ್ಕೆ ಹೊರಟಿದ್ದಳು. ಮನೆಗೆ ಬೀಗ ಹಾಕಿ ಮಗ ಹೇಳಿದಂತೆ ಮೊಬೈಲ್‌ ಕೈಯಲ್ಲಿ ಹಿಡಿದು ಹೊರಟಳು. ಅದೇಕೋ ಮನೆದೇವರಿಗೆ ಹೋಗಲಾಗುತ್ತಿಲ್ಲ ಎಂಬ ಒಂದು ಕೊರಗು ಅವಳನ್ನು ಚುಚ್ಚುತ್ತಲೇ ಇತ್ತು.

        ಕೆಲಸದ ಒತ್ತಡದಲ್ಲಿದ್ದ ಮಗನಿಗೆ ನನ್ನ ಮನೆದೇವರಿಗೆ ಹೋಗುವ ಪ್ರಸ್ತಾಪ ಬಿಸಿ ತುಪ್ಪವಾಯಿತೋ ಏನೋ ಪಾಪ. ನನಗೆ ಬೇಡ ಎನ್ನಲೂ ಆಗದೆ, ಅತ್ತ ರಜೆಯೂ ಇಲ್ಲದೆ ಒದ್ದಾಡುವಂತಾಯಿತು. ಇರಲಿ ಇನ್ನು ಮುಂದೆ ಅವನಲ್ಲಿ ಯಾವ ಬೇಡಿಕೆಯನ್ನೂ ಇಡಬಾರದೆಂದು ನಿರ್ಧರಿಸಿದಳು. ಆಶಾ ದೇವಸ್ಥಾನದ ಎದುರಿನ ಕಲ್ಲಬೆಂಚಿನ ಮೇಲೆ ಕುಳಿತು, ದೇವಸ್ಥಾನದ ಗೋಪುರ ವೀಕ್ಷಿಸಲಾರಂಭಿಸಿದಳು. ಅಂದೇಕೋ ಹೃದಯ ತುಂಬಿಬಂದಿತ್ತು. ಗೋಪುರ ನೋಡಿದೊಡನೆ ಹಳೆ ಅಭ್ಯಾಸದಂತೆ ಪತಿ, ಮಗ, ಮೊಮ್ಮಗ, ಸೊಸೆ ಎಲ್ಲರನ್ನು ಸುಖವಾಗಿರಿಸಪ್ಪಾ ಎಂದಿತು ಅವಳ ಮನ. ಅಂದ ಹಾಗೆ ಈ ದಿನ ತನಗಾಗಿ ಏನಾದರೂ ಕೇಳಬೇಕೆಂದಿತು ಇನ್ನೊಂದು ಮನ. ಹೌದು, ಈ ದಿನ ತನಗಾಗಿ ಕೇಳೇ ಕೇಳುತ್ತೇನೆ ಎಂದು ಗೋಪುರ ದಿಟ್ಟಿಸಲಾರಂಭಿಸಿದಳು. ನಿಜ, ಗೋಪುರ ನಗುತ್ತಿತ್ತು. ಆಶಾಳಿಗೆ ಏನೂ ತೋಚುತ್ತಿಲ್ಲಾ. ನನಗೆ (ಅಂದರೆ ಅಮ್ಮ ಹೇಳಿದ್ದು ನೆನಪಾಯಿತು. ""ಯಾರಿಗಾಗಿ ಕೇಳಿಕೊಳ್ಳುತ್ತಿಯೋ ಅವರ ಹೆಸರಿಡಿದು ಕೇಳಿಕೋ. ನಾ ಅನ್ನುವುದು ಸುಳ್ಳು. ನಮ್ಮ ದೇಹದ ಪ್ರತಿಯೊಂದು ಅಂಗಗಳಿಗೂ ಹೆಸರಿದೆ. ಹಾಗೆ, ನಮಗೆ ಕೇಳಬೇಕಾದ ನಮ್ಮ ಹೆಸರು ಹೇಳಬೇಕು' ಎಂದು) ಇಲ್ಲಾ, ಆಶಾಳಿಗೆ ತನ್ನ ಹೆಸರೇ ನೆನಪಾಗುತ್ತಿಲ್ಲಾ. ರವಿ, ಅಂಕುಶ, ಅಭಿ, ಮಾನಸಾ, ಶಿವಾನಿ ಎಲ್ಲರ ಹೆಸರು ಮನದಂಗಳದಲ್ಲಿ ಅಚ್ಚೊತ್ತಿದೆ. ಆದರೆ ತನ್ನ ಹೆಸರು ಎಷ್ಟು ನೆನಪಿಸಿಕೊಂಡರೂ ನೆನಪಾಗುತ್ತಿಲ್ಲ. ಆಗ ಅರಿವಾಗಿದ್ದು, ತಾನವರಲ್ಲಿ ಅದೆಷ್ಟು ಕರಗಿಹೋದೆನೆಂದು. ಎಲ್ಲ ಆಶೆ ನೇರವೇರಿಸಿದ ಗೋಪುರ,  ""ಕೇಳಿಕೋ, ನಿನಗೇನು ಬೇಕು? ನಾ ಕೊಡಲು ಸಿದ್ಧ' ಎಂದು ನಕ್ಕಿತ್ತು.

        ಆಶಾಳ ಹೃದಯ ಬಿಕ್ಕಿತ್ತು. ಮಂಜಿನಂತೆ ಹೆಪ್ಪು ಕಟ್ಟಿದ ದುಃಖ ಕರಗಿ, ನೀರಾಗಿ ಕಣ್ಣಿಂದ ಒಂದೊಂದೇ ಉದುರಿ, ಅವಳ ಒಡಲಲ್ಲಿ ಸೇರಿತ್ತು. ಆಶಾಳ ಕಂಗಳಿಗೆ ದೇವಸ್ಥಾನದ ಗೋಡೆಯ ಮೇಲೆ ಬರೆದ ದಪ್ಪ ಅಕ್ಷರಗಳು ನಿಚ್ಚಳವಾಗಿ ಕಾಣಲಾರಂಭಿಸಿತ್ತು.

        ""ಕರ್ಮಣ್ಯೇ ವಾಧಿಕಾರಸ್ತೇ ಮಾಫ‌ಲೇಷು ಕದಾಚನ'.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus