Udayavani | Feb 10, 2013
ನೀವು ಸಾಹಿತ್ಯ ಪರಿಷತ್ ಸದಸ್ಯರಾ?
ಯಾರೋ ಕೇಳಿದರು. ಪರಿಷತ್ತು ನನಗೆ ಸದಸ್ಯತ್ವ ಕೊಟ್ಟಿರಲಿಲ್ಲ. ಯಾರೂ ನನಗೆ ಪರಿಷತ್ತಿನ ಸದಸ್ಯರಾಗುವಂತೆಯೂ ಕೇಳಿರಲಿಲ್ಲ. ಸ್ವ ಇಚ್ಛೆಯಿಂದ ಸದಸ್ಯನಾಗಬೇಕು ಅಂತಲೂ ಅನ್ನಿಸಿರಲಿಲ್ಲ. ಇತ್ತೀಚಿನ ವರುಷಗಳಲ್ಲಿ ನಾಲ್ಕೈದು ಸಮಾರಂಭಗಳಿಗೆಂದು ನಾನು ಸಾಹಿತ್ಯ ಪರಿಷತ್ತಿಗೆ ಹೋಗಿರಬಹುದು. ಅದೊಂದು ಪರಮೋತ್ಛ ಸಂಸ್ಥೆಯೆಂದೂ ಸಾಹಿತಿಗಳೆಲ್ಲ ಅಲ್ಲಿಗೆ ಹೋಗುತ್ತಾರೆಂದೂ ಬೆಂಗಳೂರಿಗೆ ಬಂದ ಹೊಸತರಲ್ಲಿ ನಂಬಿಕೊಂಡಿದ್ದೆ. ಆದರೆ, ಕ್ರಮೇಣ ಯಾರೂ ಅಲ್ಲಿಗೆ ಹೋಗುವುದಿಲ್ಲ ಅನ್ನುವುದು ಗೊತ್ತಾಯಿತು. ಅದು ಪರಿಷತ್ ಸದಸ್ಯರು ಕೆಲವರು ಸೇರುವ ಒಂದು ಕಛೇರಿ. ಅಲ್ಲಿ ಸಾಹಿತಿಗಳಿಗೆ ಜಾಗವಿಲ್ಲ ಅಂತ ಕತೆಗಾರ ಗೆಳೆಯರೊಬ್ಬರು ಹೇಳಿ, ಅಲ್ಲಿಗೆ ಹೋಗುವ ಉತ್ಸಾಹಕ್ಕೂ ತಣ್ಣೀರು ಎರಚಿದ್ದರು.
ಅಷ್ಟಕ್ಕೂ ಸಾಹಿತ್ಯ ಪರಿಷತ್ತು ಏನು ಮಾಡುತ್ತದೆ ಅನ್ನುವುದು ನನಗೆ ಗೊತ್ತಿಲ್ಲ. ನನ್ನ ತಲೆಮಾರಿನ ಬಹುತೇಕ ಲೇಖಕರಿಗೂ ಗೊತ್ತಿದ್ದಂತಿಲ್ಲ. ಇದು ಕನ್ನಡಿಗರ ಸಂಸ್ಥೆ. ಕನ‚°ಡವನ್ನು ಕಟ್ಟುವ ಕೆಲಸ ಮಾಡುತ್ತೇವೆ ನಾವು ಅಂತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಭಾಷಣಗಳಲ್ಲಿ ಹೇಳುವುದು ಆಗಾಗ ಪತ್ರಿಕೆಗಳಲ್ಲಿ ವರದಿ ಆಗುತ್ತಿರುತ್ತದೆ. ಕನ್ನಡವನ್ನು ಕಟ್ಟುವುದು ಅಂದರೆ ಏನು ಅನ್ನುವುದೇ ಗೊಂದಲದ ಸಂಗತಿ. ಅದನ್ನೆಲ್ಲ ಭಾಷಣದಲ್ಲಿ ಹೇಳುವುದಕ್ಕೆ ಚೆನ್ನಾಗಿರುತ್ತದೆ. ಸರ್ಕಾರದ ಮರ್ಜಿ ಯಲ್ಲಿರುವ ಪರಿಷತ್ತು, ತಾನು ಸ್ವಾಯತ್ತ ಸಂಸ್ಥೆ ಎಂಬಂತೆ ಮಾತಾ ಡುತ್ತದೆ. ಕನ್ನಡಿಗರಿಂದ ಒಂದೊಂದು ರೂಪಾಯಿ ಸಂಗ್ರಹಿಸಿ ಪರಿಷತ್ತನ್ನು ಬಲಗೊಳಿಸಲು ಯತ್ನಿಸಿದ್ದೂ ಅನೇಕರಿಗೆ ನೆನಪಿರಬಹುದು.
ನಾನು ಟಿ. ವಿ. ಚಾನಲ್ಲಿನಲ್ಲಿ ಕೆಲಸ ಮಾಡುತ್ತಿದ್ದಾಗ, ಸಾಹಿತ್ಯ ಪರಿಷತ್ತಿನ ಬಗ್ಗೆ ಎಷ್ಟು ಮಂದಿಗೆ ಗೊತ್ತು ಎಂದು ತಿಳಿಯುವ ಸಲುವಾಗಿ, ಒಂದು ಸಮೀಕ್ಷೆ ಮಾಡಿದ್ದೆವು. ನೂರರಲ್ಲಿ ಒಂದಿಬ್ಬರಿಗೆ ಬಿಟ್ಟರೆ, ಮತ್ಯಾರಿಗೂ ಸಾಹಿತ್ಯ ಪರಿಷತ್ತು ಅನ್ನುವ ಸಂಸ್ಥೆಯೊಂದಿದೆ ಅನ್ನುವುದು ಗೊತ್ತಿರಲಿಲ್ಲ. ತನ್ನನ್ನು ಗೊತ್ತುಪಡಿಸಿಕೊಳ್ಳುವುದಕ್ಕೆ ಅದು ಪ್ರಯತ್ನ ಕೂಡ ಮಾಡಿರಲಿಲ್ಲ. ಈಗಲೂ ಮಾಡುತ್ತಿಲ್ಲ. ವರ್ಷಕ್ಕೊಂದು ಚುನಾವಣೆ, ಬಿಟ್ಟರೆ ವರ್ಷಕ್ಕೊಂದು ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದನ್ನು ಬಿಟ್ಟರೆ, ಪರಿಷತ್ತು ಬೇರೇನು ಮಾಡುತ್ತದೆ ಅನ್ನುವುದು ಗೊತ್ತಾಗಬೇಕಿದ್ದರೆ ಮಾಹಿತಿ ಹಕ್ಕು ಕಾಯ್ದೆಯ ಮೊರೆಹೋಗಬೇಕೇನೋ?
ಬರೀ ಅಖೀಲ ಭಾರತ ಅಲ್ಲ, ಜಿಲ್ಲಾ ಸಾಹಿತ್ಯ ಸಮ್ಮೇಳನ, ತಾಲೂಕು ಸಾಹಿತ್ಯ ಸಮ್ಮೇಳನ, ಹೋಬಳಿ ಸಾಹಿತ್ಯ ಸಮ್ಮೇಳನಗಳನ್ನೂ ಅದು ಹಮ್ಮಿಕೊಳ್ಳುತ್ತದೆ. ವರ್ಷಪೂರ್ತಿ ಕನ್ನಡದ ಕೆಲಸ ನಡೆಯುತ್ತಿರುತ್ತದೆ. ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ. ಕನ್ನಡದ ಎಚ್ಚರ ಮೂಡಿದ್ದೇ ನಮ್ಮಿಂದ ಅಂತ ಪರಿಷತ್ತಿನ ಮಂದಿ ಹೇಳುತ್ತಾರೆ. ಆ ಮಾತಲ್ಲಿರುವ ವ್ಯಂಗ್ಯ ಕೂಡ ಅವರಲ್ಲಿ ಅನೇಕರಿಗೆ ಅರ್ಥವಾಗುವುದಿಲ್ಲ. ಹಾಗೆ ನೋಡಿದರೆ, ಇದರ ನಿರರ್ಥಕತೆಯನ್ನು ಬಲ್ಲವರು ಚಂದ್ರಶೇಖರ ಪಾಟೀಲರು ಒಬ್ಬರೇ ಎಂದು ಹೇಳಬೇಕು.
ಅವರು ಸರ್ಕಾರವನ್ನು ರಾಜಕಾರಣಿಗಳನ್ನು ಧಿಕ್ಕರಿಸಿ ಮಾತಾಡಬಲ್ಲವರಾಗಿದ್ದರು. ಹಾಗೆ ಮಾತಾಡುವುದೇ ಒಂದು ಸಾಧನೆ ಅಲ್ಲದೇ ಇರಬಹುದು. ಆದರೆ ಹಾಗೆ ಮಾತಾಡುವ ದಿಟ್ಟತನ ಕೂಡ ಬೇಕಾಗುತ್ತದೆ ಅನ್ನುವುದನ್ನು ನಾವು ಅಲ್ಲಗಳೆಯುವ ಹಾಗಿಲ್ಲ.
ಇವತ್ತು ಬರೆಯುತ್ತಿರುವವರ ಕೃತಿಗಳ ಪೈಕಿ ಎಷ್ಟನ್ನು ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಅನಾದಿಕಾಲದಿಂದ ಮರು ಮುದ್ರಣ ಮಾಡಿಕೊಂಡು ಬಂದಿರುವ ರತ್ನಕೋಶ ಬಿಟ್ಟರೆ, ಮತ್ತೂಂದು ಪರಿಷತ್ತಿನ ಪುಸ್ತಕ ನನ್ನ ಸಂಗ್ರಹದಲ್ಲಿಲ್ಲ. ಕುಂವೀ, ಆಮೂರ, ಭೈರಪ್ಪ, ಅನಂತಮೂರ್ತಿ, ದೇವನೂರ, ಸಿದ್ಧಲಿಂಗಯ್ಯ, ಕಣವಿ- ಹೀಗೆ ಯಾರ ಪುಸ್ತಕಗಳನ್ನೂ ಪರಿಷತ್ತು ಪ್ರಕಟಿಸಿದ್ದನ್ನು ನಾನು ನೋಡಿಲ್ಲ. ಅದು ಪುಸ್ತಕ ಪ್ರಾಧಿಕಾರದ ಕೆಲಸ ಎಂದು ಹೇಳಿ ತಪ್ಪಿಸಿಕೊಳ್ಳುವುದು ಸುಲಭ. ಹಾಗೇ, ಕನ್ನಡವನ್ನು ಕಟ್ಟುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂಬ ಸಂಸ್ಥೆಯೂ ಇದೆ. ಪುಸ್ತಕ ಪ್ರಾಧಿಕಾರ, ಅಭಿವೃದ್ಧಿ ಪ್ರಾಧಿಕಾರ ಮತ್ತು ಪರಿಷತ್ತು ಮೂರೂ ಇದ್ದರೂ ಇವತ್ತು ಪುಸ್ತಕ ಪ್ರಕಟಿಸುವವರು ಖಾಸಗಿ ಪ್ರಕಾಶಕರೇ.
ಒಂದು ಸರಳ ಲೆಕ್ಕಾಚಾರ ಗಮನಿಸಿ. ಮೊನ್ನೆ ಪುಸ್ತಕ ಪ್ರೇಮಿಯೊಬ್ಬರು ಮಾತಾಡುತ್ತ, ವರ್ಷಕ್ಕೆ ಏಳು ಸಾವಿರ ಪುಸ್ತಕಗಳು ಬರುತ್ತಿವೆ. ಅದಕ್ಕೆ ಕಾರಣ ಗ್ರಂಥಾಲಯ ಇಲಾಖೆ ಪುಸ್ತಕಗಳನ್ನು ಕೊಳ್ಳುತ್ತಿರೋದು. ಹಳೆಯದು, ಹೊಸದು, ಕೆಟ್ಟದ್ದು, ಒಳ್ಳೇದು ಎಲ್ಲವೂ ಪುಸ್ತಕಗಳಾಗುತ್ತಿವೆ. ಪತ್ರಿಕೆಗಳಲ್ಲಿ ಅಂಕಣ ಶುರುವಾಗುತ್ತಿದ್ದಂತೆ ಪ್ರಕಾಶಕರು ಮುಗಿಬೀಳುತ್ತಾರೆ. ನಾವು ಪುಸ್ತಕ ಮಾಡ್ತೀವಿ ಅನ್ನುತ್ತಾರೆ. ಗ್ರಂಥಾಲಯ ಇಲಾಖೆ ಪುಸ್ತಕ ಕೊಳ್ಳುವುದು ನಿಲ್ಲಿಸಿದ ತಕ್ಷಣ ಈ ದಂಧೆಯೂ ನಿಲ್ಲುತ್ತದೆ. ಆಗ ಜನ ಓದುವ ಪುಸ್ತಕಗಳು ಮಾತ್ರ ಬರುತ್ತವೆ ಅಂದರು. ಅದು ಕೂಡ ಪರಿಹಾರ ಆಗಲಾರದು. ಜನ ಓದುವ ಪುಸ್ತಕ ಅಂದೊಡನೆ ಮತ್ತದೇ ವ್ಯಕ್ತಿತ್ವ ವಿಕಸನ, ಮ್ಯಾನೇಜ್‌ಮೆಂಟ್ ಕತೆ, ಫೆರಾರಿ ಮಾರಿದ ಫಕೀರ, ಹಣ ಮಾಡುವುದು ಹೇಗೆ ಮುಂತಾದ ಕೃತಿಗಳೇ ಬರುತ್ತವೆ. ಭಾನುಮತಿಯ ನೆತ್ತದಂಥ ಸಂಗ್ರಹಗಳಾಗಲಿ, ಸಂಶೋಧನೆ, ವಿಮರ್ಶೆ, ಶಾಸ್ತ್ರೀಯತೆಯ ಕುರಿತ ಕೃತಿಗಳಾಗಲಿ ಪ್ರಕಟವಾಗುವುದೇ ಇಲ್ಲ ಅಂದೆ. ಮಾರುಕಟ್ಟೆಯ ಕೈಗೆ ಪುಸ್ತಕವನ್ನು ಒಪ್ಪಿಸುವುದೂ ತಪ್ಪು. ಸಬ್ಸಿಡಿ ನಿಲ್ಲಿಸಿದ ತಕ್ಷಣ ಏಟು ಬೀಳುವುದು ವ್ಯಾಪಾರಿ ಚಿತ್ರಗಳಿಗಲ್ಲ, ಸಂವೇದನಾಶೀಲ ಸಣ್ಣ ಸಿನೆಮಾಗಳಿಗೆ. ಪುಸ್ತಕದಲ್ಲೂ ಹಾಗೇ ಆಗುತ್ತದೆ.
ಆದರೆ, ಅದಕ್ಕೊಂದು ಪರ್ಯಾಯ ಮಾರ್ಗವೂ ಇದೆ. ಕನ್ನಡದ ಅತ್ಯುತ್ತಮ ಪುಸ್ತಕಗಳನ್ನು ಪರಿಷತ್ತು, ಪ್ರಾಧಿಕಾರಗಳು ಪ್ರಕಟಿಸಬಹುದು. ಗ್ರಂಥಾಲಯ ಇಲಾಖೆ ಕೇವಲ ಪರಿಷತ್ತು ಮತ್ತು ಪ್ರಾಧಿಕಾರಗಳು ಪ್ರಕಟಿಸಿದ ಪುಸ್ತಕಗಳನ್ನು ಮಾತ್ರ ಕೊಳ್ಳುವಂತೆ ಮಾಡಬಹುದು. ಒಬ್ಬ ದಕ್ಷ ಐಎಎಸ್ ಅಧಿಕಾರಿ ನಿಂತು ಇದನ್ನೆಲ್ಲ ಸುಲಭವಾಗಿ ಮಾಡಬಹುದು. ಆಗ ಕಡಿಮೆ ಬೆಲೆಯಲ್ಲಿ ಜನರಿಗೂ, ಗ್ರಂಥಾಲಯಕ್ಕೂ ಪುಸ್ತಕಗಳು ಸಿಗುವಂತಾಗುತ್ತವೆ. ಜನಪ್ರಿಯ ಪುಸ್ತಕಗಳನ್ನೂ, ಮಾರುಕಟ್ಟೆಯಲ್ಲಿ ಮಾರಾಟ ಆಗುವಂಥವುಗಳನ್ನೂ ಪ್ರಕಾಶಕರು ಪ್ರಕಟಿಸಿಕೊಳ್ಳುತ್ತಾರೆ. ಇಂಥದ್ದೊಂದು ಮಾರ್ಗದ ಬಗ್ಗೆ ಯಾಕೆ ಯೋಚಿಸಬಾರದು ಎಂದು ಕೇಳಿದರೆ ಅನೇಕರು ಗಾಬರಿ ಆಗುತ್ತಾರೆ. ಇವತ್ತು ಗ್ರಂಥಾಲಯದ ಪುಸ್ತಕ ಖರೀದಿಯೇ ಒಂದು ದೊಡ್ಡ ಉದ್ಯಮ. ಒಬ್ಬ ಪ್ರಕಾಶಕ ಹತ್ತಾರು ಹೆಸರಲ್ಲಿ ಪುಸ್ತಕ ಮುದ್ರಿಸಿ ಗ್ರಂಥಾಲಯಕ್ಕೆ ತಳ್ಳುವುದರಿಂದ ಹಿಡಿದು, ಪ್ರಕಟವೇ ಆಗದ ಪುಸ್ತಕಗಳನ್ನು ಗ್ರಂಥಾಲಯದ ಪಟ್ಟಿಗೆ ಸೇರಿಸಿ ಬೆಳೆ ತೆಗೆಯುವುದೂ ನಡೆಯುತ್ತದೆ.
ಇತ್ತೀಚಿಗೆ ಬೆಸಗರಹಳ್ಳಿ ರಾಮಣ್ಣ ಅವರ ಪುಸ್ತಕವನ್ನು ಯಾರೋ ಬೇರೆ ಹೆಸರಲ್ಲಿ ಲೈಬ್ರರಿಗೆ ಮಾರಿ ದುಡ್ಡು ಪಡಕೊಂಡ ಪವಾಡವೂ ನಡೆದುಹೋಯಿತು. ರವಿಕಾಂತೇಗೌಡರಲ್ಲದೇ ಹೋಗಿದ್ದರೆ ಈ ಪ್ರಕರಣ ಬಯಲಾಗುತ್ತಲೇ ಇರಲಿಲ್ಲ.
ಇದನ್ನೆಲ್ಲ ಮಾಡುವುದಕ್ಕೆ ಪರಿಷತ್ತಿಗೆ ಪುರುಸೊ ತ್ತಿದ್ದಂತಿಲ್ಲ. 1915ರಲ್ಲಿ ಶುರುವಾದ ಸಂಸ್ಥೆಗೀಗ ತೊಂಬತ್ತೆಂಟು ವರುಷ. ಇಷ್ಟರಲ್ಲೇ ಅದು ಶತಾಯುಷಿ ಯಾಗಲಿದೆ. ಇವತ್ತು ಅದರ ಸದಸ್ಯರ ಸಂಖ್ಯೆ 1.30 ಲಕ್ಷ. ಆದರೆ, ಪರಿಷತ್ತಿನಲ್ಲೊಂದು ಕಾರ್ಯಕ್ರಮ ನಡೆದರೆ ಮೂವತ್ತು ಮಂದಿಯೂ ಬರುವುದಿಲ್ಲ. ಈ ಸದಸ್ಯರ ಪೈಕಿ ಬದುಕಿರುವವರೆಷ್ಟು ಅನ್ನುವ ಪಟ್ಟಿಯೂ ಪರಿಷತ್ತಿನ ಬಳಿ ಇದ್ದಂತಿಲ್ಲ. ಅದನ್ನೆಲ್ಲ ಮಾಡುವುದಕ್ಕೆ ಪರಿಷತ್ತಿನಲ್ಲಿ ದುಡ್ಡಿಲ್ಲ ಅನ್ನುವುದು ಅಂದಿನಿಂದ ಕೇಳಿಬರುತ್ತಿರುವ ಕೂಗು.
ಪರಿಷತ್ತಿನ ವೆಬ್‌ಸೈಟಲ್ಲಿರುವ ಮಾಹಿತಿಯೊಂದನ್ನು ಲೇಖಕರೊಬ್ಬರು ತೋರಿಸಿದರು. ಚುನಾಯಿತ ಸ್ಥಾನಗಳಿಗೆ ಮತ ಚಲಾ ಯಿಸಲು,ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು,ಮಾಸಿಕ ಪತ್ರಿಕೆ ಕನ್ನಡ ನುಡಿಯನ್ನು ಉಚಿತವಾಗಿ ಪಡೆದುಕೊಳ್ಳಲು, ಗ್ರಂಥಭಂಡಾರ ವನ್ನು ಬಳಸಿಕೊಳ್ಳಲು ಸದಸ್ಯರಿಗೆ ಹಕ್ಕು ನೀಡಲಾಗಿದೆ' ಎಂದು ಅಲ್ಲಿ ಬರೆಯಲಾಗಿತ್ತು. ಆದರೆ ಸಾಹಿತ್ಯ ಪರಿಷತ್ತಿನ ಸದಸ್ಯರ ಕರ್ತವ್ಯದ ಕುರಿತು ಅಲ್ಲಿ ಒಂದಕ್ಷರವೂ ಇರಲಿಲ್ಲ.
ಕನ್ನಡ ಸಾಹಿತ್ಯ ಪರಿಷತ್ತು ನಿಜಕ್ಕೂ ಏನು ಮಾಡಬಹುದು ಅನ್ನುವುದರ ಕುರಿತು ಅದರ ಅಧ್ಯಕ್ಷರಾಗಿ ಬರುವವರೇ ಯೋಚಿಸಬೇಕು. ಅದೊಂದು ಉಪಯುಕ್ತ ಸಂಸ್ಥೆ ಆಗದೇ ಹೋದರೆ, ವರ್ಷಕ್ಕೊಮ್ಮೆ ಸಮ್ಮೇಳನಗಳನ್ನು ಮಾಡುತ್ತ, ಸರ್ಕಾರದ ಹಣಕ್ಕೆ ಕಾಯುತ್ತ, ಗೊಣಗಾಡುತ್ತ ಇರಬೇಕಾಗುತ್ತದೆ. ಈಗಾಗಿರುವುದೂ ಅದೇ, ಹದಿನೆಂಟು ವರುಷ ಮೇಲ್ಪಟ್ಟ, ಓದು ಬರಹ ಬಲ್ಲ ಯಾರು ಬೇಕಾದರೂ ಪರಿಷತ್ತಿನ ಸದಸ್ಯರಾಗಬಹುದು ಎನ್ನುತ್ತದೆ ಪರಿಷತ್ತಿನ ನಿಯಮ. ಯಾರು ಬೇಕಾದರೂ ಆಗಬಹುದು ಅನ್ನುವುದರಲ್ಲೇ ಯಾರೂ ಆಗಬೇಕಾಗಿಲ್ಲ ಅನ್ನುವ ಧ್ವನಿಯೂ ಇದೆ ಅನ್ನುವುದನ್ನು ಮರೆಯುವಂತಿಲ್ಲ.
ಪರಿಷತ್ತಿನ ಗೋಡೆಯಲ್ಲಿ ಭಾವಚಿತ್ರಗಳಲ್ಲಿ ಹಿರಿಯ ಲೇಖಕರಿದ್ದಾರೆ. ಪರಿಷತ್ತಿನಲ್ಲಿ ಲೇಖಕರಿಲ್ಲ. ಕಿರಿಯ ಲೇಖಕರು ಪರಿಷತ್ತಿನ ಕಡೆ ತಿರುಗಿಯೂ ನೋಡುವುದಿಲ್ಲ. ಪರಿಷತ್ತೂ ಅವರನ್ನು ಕರೆಯುವ ಔದಾರ್ಯ ತೋರಿಲ್ಲ. ಈ ಕಂದರದಲ್ಲೇ ಪರಿಷತ್ತಿನ ದುರಂತವಿದೆ.