Wednesday, May 22, 2013
Last Updated: 12:22:18 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಜಾತ್ರೆಯಿಂದ ಜಾಗ್ರತಿ
    • ಜಾತ್ರೆಯಿಂದ ಜಾಗ್ರತಿ

      • Udayavani | Feb 10, 2013

        ಇಂದು ಎಪ್ಪತ್ತೂಂಬತ್ತನೆಯ ಅಖೀಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ. ಇಂಥ ಜಾತ್ರೆಗಳಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ ಜಾಗೃತಿಗೊಳ್ಳಬೇಕು ಎಂಬ ಬಗ್ಗೆ
        ಸಮ್ಮೇಳನಾಧ್ಯಕ್ಷ ರಾಗಿರುವ ಕೋ. ಚೆನ್ನಬಸಪ್ಪ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳಿವು.

        ಬಸವನಾಡು ಮಂತ್ರವನ್ನು ಪ್ರದಾನ ಮಾಡಿದ ನನ್ನ ತಾಯಿಗೆ ನಮಿಸಿ, ಈ ಪುಣ್ಯಭೂಮಿ ವಿಜಾಪುರ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಬಸವನ ಪಾವನಕ್ಷೇತ್ರದ ಪುಣ್ಯಜೀವಿಗಳಾದ ನಿಮಗೆ, ಇಲ್ಲಿ ನೆರೆದಿರುವ ಬಸವನ ಬೀಡಿನ ವಾರಸುದಾರರಿಗೆಲ್ಲರಿಗೂ ನನ್ನ ಶರಣು.

        ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಎಂದರೆ ಕೇವಲ ಪ್ರತಿಮೆ. ಉತ್ಸವ ವಿಗ್ರಹ. ತಾಯಿ ಸರಸ್ವತಿಯನ್ನು ಸಾಂಕೇತಿಕವಾಗಿ ಪ್ರತಿನಿಧಿಸುವ ಒಂದು ಪ್ರತಿಮೆ. ಈ ಸ್ಥಾನಕ್ಕೆ ನಾನು ಯೋಗ್ಯ ಎಂದು ಪರಿಗಣಿಸಿದ ನಿಮಗೆಲ್ಲರಿಗೂ ಶರಣಾರ್ಥಿ. ನನ್ನ ಸಾರಸ್ವತ ಯೋಗ ಸಿದ್ಧಿಗೆ ತಾಯಿ ಕರುಣಿಸಿದ ಫ‌ಲ ಈ ಸಮ್ಮೇಳನದ ಅಧ್ಯಕ್ಷತೆ.

        ನನ್ನ ಸಾರಸ್ವತ ಯೋಗದೀಕ್ಷಾ ಗುರುಗಳು ಬಸವ ಭಕ್ತರಾದ ಹಡೇìಕರ್‌ ಮಂಜಪ್ಪನವರು.  ಶ್ರೀಅರವಿಂದರ ಮತ್ತು  ಶ್ರೀಮಾತಾಜಿ ಯವರ ಕರ್ನಾಟಕದ ಪ್ರಥಮ ಭಕ್ತರಾದ ಹಲಸಂಗಿ ಚೆನ್ನಮಲ್ಲಪ್ಪನವರು ಈ ಜಿಲ್ಲೆಯವರೇ.  ಶ್ರೀಅರವಿಂದರ Life Devine ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದು ಇಲ್ಲೇ, ನಾನು ಜಿಲ್ಲಾ ನ್ಯಾಯಾಧೀಶನಾಗಿದ್ದಾಗ. ಹೀಗಾಗಿ, ಈ ವಿಜಾಪುರದಲ್ಲೇ ನಡೆಯುತ್ತಿರುವ ಸಮ್ಮೇಳನದ ಅಧ್ಯಕ್ಷತೆಯ ಗೌರವ ದೊರಕಿದ್ದು ನನ್ನ ಯೋಗವಲ್ಲದೆ ಮತ್ತೇನು?

        ಸಾಹಿತಿ ಏಕೆ ಬರೆಯುತ್ತಾನೆ?

        ಹಿಂದಿನ ಕಾಲದ ಲಾಕ್ಷಣಿಕರ ಕಾವ್ಯರಚನೆಯ ಉದ್ದೇಶವನ್ನು 11ನೆಯ ಶತಮಾನದಲ್ಲಿ ಇದ್ದ ಕ್ರಾಂತಿಕಾರಿ ಮಹಾಕವಿ ಹರಿಹರ-

        ಮನುಜರ ಮೇಲೆ, ಸಾವವರ ಮೇಲೆ, ಕನಿಷ್ಠರ ಮೇಲೆ,

        ತನತನಗಿಂದ್ರ ಚಂದ್ರ ರವಿಕರ್ಣ ದಧೀಚಿ ಬಲೀಂದ್ರನೆಂದು ಅನವರತಂ ಪೊಗಳªಪರ್‌...
        -ಎಂದು ಹೀಗಳೆದಿದ್ದಾನೆ.

        ಸಾಂಪ್ರದಾಯಿಕ ಸಾಹಿತಿಗಳನ್ನು ಅನಾಮತ್ತಾಗಿ ಗುಡಿಸಿ, ಸಾರಿಸಿ, ಸಾಹಿತ್ಯ ಕ್ಷೇತ್ರವನ್ನು ಆಮೂಲಾಗ್ರ ಪರಿವರ್ತಿಸಿ ಮಹಾಕ್ರಾಂತಿಯನ್ನೇ ಮಾಡಿದ ಹರಿಹರ ಕವಿ, ಹಾಗೆಯೇ ಧಾರ್ಮಿಕ ಕ್ಷೇತ್ರದಲ್ಲಿ ಮಹಾಕ್ರಾಂತಿಯನ್ನು ಮಾಡಿದ ಬಸವಣ್ಣ. ಈ ಸಾಹಿತ್ಯ ಕ್ರಾಂತಿಯನ್ನು ಇನ್ನೂ ಉಜ್ವಲಗೊಳಿಸಿದ ಕವಿ ಹರಿಹರನ ಸೋದರಳಿಯ, ರಾಘವಾಂಕ. ಗುರು ಹರಿಹರ ತನ್ನ ಆರಾಧ್ಯದೈವ ಹಂಪೆಯಾಳª ವಿರೂಪಾಕ್ಷನ ಸ್ತುತಿಗೆ ಮೀಸಲಾದರೆ ಅವನ ಶಿಷ್ಯ ರಾಘವಾಂಕ ಇನ್ನೂ ಮುಂದುವರೆದು, "ಜನ ಬದುಕಬೇಕೆಂಬ ಅಪೇಕ್ಷೆಯಿಂ ಕಾವ್ಯ ಮುಖದಿಂದ ಪೇಳ್ವ' ಉದ್ದೇಶದಿಂದ ಕಾವ್ಯರಚನೆ ಮಾಡಿದ ಜೀವನ್ಮುಖೀ ಕವಿ.
        ರಾಘವಾಂಕನ ಈ ಉದ್ದೇಶ ನಮ್ಮ ಉಪನಿಷತ್‌ ಋಷಿವರೇಣ್ಯರ ಜೀವನ ದೃಷ್ಟಿಗೂ ಬಸವಣ್ಣನ ದೃಷ್ಟಿಗೂ ಮಹರ್ಷಿ ಅರವಿಂದ ಯೋಗಸಮನ್ವಯ ದೃಷ್ಟಿಗೂ ಅನುಗುಣವಾಗಿದೆ. ಜನ ಬದುಕಲು ದೇಹಕ್ಕೆ  "ಅನ್ನ ಚೈತನ್ಯ' ಬೇಕು, ಇದನ್ನು ಪೂರೈಸುವ ಪೂರಕ ಆವಶ್ಯಕತೆಯೇ ಜ್ಞಾನ. ಈ ಅಕ್ಷರ ವಿದ್ಯೆ ಕಲಿಸಿ, ಅನ್ನ ಗಳಿಸುವ ಮಾರ್ಗ ತೋರಿಸಬೇಕು, ಸಮಾಜದ ಗುರುವಾದ ಬರಹಗಾರ. ಇದು ಬರಹಗಾರನ ಪ್ರಥಮ ಕರ್ತವ್ಯ. ಈ ಮಾತನ್ನು ಮಹಾಕವಿ ಕುವೆಂಪು ತಮ್ಮ "ಕ್ರಾಂತಿಕಾಳಿ' ಎಂಬ ಕವಿತೆಯಲ್ಲಿ ಹೇಳಿದ್ದಾರೆ.

        ಕುವೆಂಪು ಅವರು ಈ ಕವಿತೆ ಬರೆದ ಕಾಲಾವಧಿಯಲ್ಲಿಯೇ ಭಾರತೀಯ ಪ್ರಗತಿಶೀಲ ಸಾಹಿತ್ಯ ಸಂಘ 1936ರಲ್ಲಿ ಲಕ್ನೊ ನಗರದಲ್ಲಿ ಸ್ಥಾಪನೆಯಾಯಿತು. ಕರ್ನಾಟಕದಲ್ಲೂ ಅದರ ಶಾಖೆ 40ರ ದಶಕದಲ್ಲಿ ಅಸ್ತಿತ್ವಕ್ಕೆ ಬಂತು. ಆಗ ಕನ್ನಡ ಸಾಹಿತ್ಯದಲ್ಲಿ ಬಡವರ, ದಲಿತರ, ಶೋಷಿತರ, ದುರ್ಬಲ ಮಹಿಳೆಯರ, ಅಸ್ಪೃಶ್ಯರ- ಚಿತ್ರಣ, ಅವರ ಆರ್ತನಾದ, ಸಾಹಸಿಗರ ವೀರಗಾಥೆ ಸಾಹಿತ್ಯದಲ್ಲಿ ಬಿಂಬಿತವಾಯಿತು. ಅದುವರೆಗೂ ಸಮಾಜದಲ್ಲಿ ಅತ್ಯಂತ ಕೆಳಗಿದ್ದ- ಕನಿಷ್ಠ  ನಿಕೃಷ್ಟರ ಕಡೆ ಪ್ರಗತಿಶೀಲರು ಕಣ್ಣು ತಿರುಗಿಸಿದರು.

        "ಕಲೆ ಕಲೆಗಾಗಿ' ಎಂದ ಸಂಪ್ರದಾಯವಾದಿಗಳ ನಿಲುಮೆಯನ್ನು ಪ್ರಗತಿಶೀಲರು ಖಂಡಿಸಿದರು. ಅವರ ಸಿದ್ಧಾಂತ ಮಾನವಕಲ್ಯಾಣ ಪಕ್ಷ , ಲೋಕಕಲ್ಯಾಣ ಪಕ್ಷ. ಸತ್ಯ, ನ್ಯಾಯ ಸರಿಸಮಾನತೆಯ ಪಕ್ಷಪಾತಿಗಳೇ ನಾವು. ದುರ್ಬಲರ, ದಲಿತರ, ಹಿಂದುಳಿದವರ, ಶೋಷಿತರ, ದಮನಿತರ ಪರವಾಗಿ ಮಾತನಾಡುವವರು ಎಂದು ಪ್ರಗತಿಶೀಲ ಲೇಖಕರು ಹೇಳಿದ್ದು ತಪ್ಪು ಎಂದು ಹೇಳುವ ಧೈರ್ಯ ಯಾರಿಗಿದೆ?

        ಬರಹದ ಗುರಿಯು ದುಃಖ ನಿವಾರಣೆಯೊಂದಿಗೆ ರಸಸ್ವಾದವನ್ನು ಉಂಟುಮಾಡುವಂತಿರಬೇಕು. ಅದು ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಮೀಸಲಲ್ಲ , ಧರ್ಮ ಕ್ಷೇತ್ರದಲ್ಲೂ ಇದು ಸದಾ ನಡೆಯುತ್ತಿರುತ್ತದೆ. ಬಂಗಾಲದಲ್ಲಿ ಚೈತನ್ಯ ಪ್ರಭುಗಳು ಭಕ್ತಿಪಂಥವನ್ನು ಜನಪ್ರಿಯಗೊಳಿಸಿದಂತೆ, ಕರ್ನಾಟಕದಲ್ಲೂ ದಾಸ ಪಂಥದ ಭಾಗವತರು ಕಾಲಿಗೆ ಗೆಜೆc ಕಟ್ಟಿ , ಕೈಯಲ್ಲಿ ತಾಳ ತಂಬೂರಿ ಹಿಡಿದು ಭಕ್ತಿಯಿಂದ ಕುಣಿದು ಹಾಡುತ್ತ ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರು- ಕಲ್ಲುಸಕ್ಕರೆ ಕೊಳ್ಳಿರೋ, ರಾಮನಾಮವೆಂಬ ಕಲ್ಲುಸಕ್ಕರೆ ಕೊಳ್ಳಿರೊ ಎಂದು ಹಾಡುತ್ತ ಹೋದರು. ಅವರು ಕೊಟ್ಟದ್ದು "ಕಲ್ಲು'ಸಕ್ಕರೆಯಲ್ಲ. ಭಕ್ತಿಯೆಂಬ ಕಲ್ಲುಸಕ್ಕರೆ. ದಾಸರು ಹರಿಹರ ಕವಿ ಮಾಡಿದ ಕ್ರಾಂತಿಯನ್ನೇ ಮೃದುವಾಗಿ ಮಾಡಿದರು.

        ವೇದವನ್ನು ಶೂದ್ರರು ಓದಬಾರದು ಎಂಬ ನಂಬಿಕೆ ಇದ್ದ ಕಾಲದಲ್ಲಿ ದಯಾಮಯರಾದ ದಾಸರು, ವೇದಸತ್ಯವನ್ನು ಹಾದಿ ಬೀದಿಯಲ್ಲಿ ಕನ್ನಡದಲ್ಲಿ ಹಾಡಿದರು. ದಾಸಪಂಥದ ಈ ಮಹಾನುಭಾವರು ಮಾಡಿದ ಈ ಮಾನವೋದ್ಧಾರ ಯಾವ ಕ್ರಾಂತಿಗಿಂತ ಕಡಿಮೆ? ಪುರಂದರ ದಾಸರಾದಿಯಾಗಿ ದಾಸವರೇಣ್ಯರ ಸಮಾಜಸೇವೆ ನಿಜಕ್ಕೂ ಶ್ಲಾಘನೀಯ.

        ಈ ಸಮ್ಮೇಳನವೆಂಬ ಜಾತ್ರೆ ಭಕ್ತಿಯ, ಕಾವ್ಯದ ರಸಾಮೃತಪಾನ ವನ್ನು, ಆನಂದವನ್ನು ಸಹೃದಯರಿಗೆ ಕೊಡುವ ತಾಣ. "ಕಾವ್ಯ ರಸಾಸ್ವಾದನೆ ಮಾಡಿ ಜೊತೆಗೆ ಜೀವದ ದುಃಖ-ಸಮಸ್ಯೆ ನಿವಾರಣೋ ಪಾಯವನ್ನು ಕಾಣಿ'- ಈ ಮಾತನ್ನು ಕುವೆಂಪು ತಮ್ಮ "ಶ್ರೀರಾಮಾಯಣ ದರ್ಶನಂ' ಮಹಾಕಾವ್ಯದ ಮುಕ್ತಾಯದಲ್ಲಿ ಹೇಳಿದ್ದಾರೆ.

        ದರ್ಶನ ಧ್ವನಿ ರಸಾಮೃತ ಪಾನದಾನಂದದಿಂ

        ಲೋಕ ಶೋಕವನಳಿಸಿ, ಭುವನ ತ್ರಯಂಗಳಂ ತಣಿಪ

        18 ಅಧ್ಯಾಯಗಳಲ್ಲಿ ಹರಡಿರುವ "ಭಗವದ್ಗೀತೆಯ ಮುಖ್ಯೋದ್ದೇಶ ಅರ್ಜುನರ ದುಃಖ, ವಿಷಾದದ ನಿವಾರಣೆ. ತಮ್ಮ "ಕೈವಲ್ಯ ಪದ್ಧತಿ'ಯ ಪ್ರಾರ್ಥನಾ ಪದಗಳಲ್ಲಿ ಬರುವ "ಉದಯರಾಗ' ಪದ್ಯದಲ್ಲಿ ಶ್ರೀನಿಜಗುಣರು ಹೇಳುತ್ತಾರೆ,

        ಸಕಲ ಸಂಪದ ದೊರೆತು, ಪರದೊಳು ಗಣಪದವನೈದಿ ಮುಕ್ತಿ ಪ್ರಾಪ್ತಿ.

        ಯಾವುದರಿಂದ ಮುಕ್ತಿ? ಜೀವಕ್ಕೆ ಒದಗಿದ ದುಃಖದಿಂದ ಮುಕ್ತಿ. ನಮ್ಮ ಪ್ರಾಚೀನ ಕಾರ್ಯಗಳ ಕೊನೆಯ ಮಂಗಳವಾಕ್ಯ ಇದೇನೆ!

        ಬರಹಗಾರರಲ್ಲಿ ನನ್ನ ವಿನಂತಿ-  ಸಕಲ ಜೀವಾತ್ಮರಿಗೆ ಲೇಸನೆಸಗುವ ಸಂಜೀವಿನಿ ಔಷಧ ಕೊಡುವ ಸದ್ವೆ„ದ್ಯರಾಗಿ. ಧನ್ವಂತರಿಗಳಾಗಿ. ಲೋಕ ಕಲ್ಯಾಣ ಕತೃìಗಳಾಗಿ. ಅದನ್ನು ಮರೆತು ಪರಮತ ದೂಷಣೆಯ ಯುದ್ಧಾಸ್ತ್ರಗಳ, ಸುಳ್ಳಿನ ಆಯುಧಗಳನ್ನು ತಯಾರಿಸುವ ಆಳುವವರ ಊಳಿಗದಾಳುಗಳಾಗಬೇಡಿ.
        ಬರೆಯುವ ಸ್ವಾತಂತ್ರ್ಯ ಇದೆ, ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಯಾರನ್ನೂ ತೇಜೋವಧೆ ಮಾಡಬೇಡಿ.
        ಬರಹಗಾರ, ತನ್ನ ಬರಹ ಲೋಕ ಕಲ್ಯಾಣಕಾರಕವೋ ಮಾರಕವೋ ಎಂಬುದನ್ನು ಗಂಭೀರವಾಗಿ ಯೋಚಿಸಬೇಕು. ಅವನು ಸಮಾಜಕ್ಕೆ ಹೊಣೆಗಾರ. ಅದನ್ನು ವಿವೇಕಯುಕ್ತವಾಗಿ ನೆರವೇರಿಸಬೇಕು.

        ಕರ್ನಾಟಕ-ರಾಷ್ಟ್ರೀಯತೆ

        ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ "ಅಖೀಲ' ಎಂಬ ಗುಣವಾಚಕ ಕರ್ನಾಟಕಕ್ಕೂ ಭಾರತಕ್ಕೂ ಅನ್ವಯಿಸುತ್ತದೆ. ಈ ಭಾರತಾಂತರ್ಗತ ಅಖೀಲ ಕರ್ನಾಟಕದ ಹಿತರಕ್ಷಣೆಯನ್ನೂ ಅಭಿವೃದ್ಧಿಯನ್ನೂ ಕ್ಷೇಮವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡ ಬೇಕು. ನಮ್ಮ ನಾಡಗೀತೆಯನ್ನು ರಚಿಸಿದ ಕವಿ ಹೀಗೆ ವರ್ಣಿಸಿದ್ದಾರೆ - ಈ ನಮ್ಮ ಕರ್ನಾಟಕತ್ವ ಎಂದೆಂದಿಗೂ ಭಾರತೀಯತ್ವಕ್ಕೆ ಅವಿರುದ್ಧವಾಗಿ ನಿಲ್ಲುತ್ತದೆ.

        ಕರ್ನಾಟಕ ಮಾತೆಗೆ ಜಯಘೋಷ ಮಾಡುವಾಗಲೆಲ್ಲ ಭಾರತಮಾತೆಯ ಪುತ್ರಿಯೆಂದು ಮೊದಲೇ ಘೋಷಿಸುತ್ತೇವೆ.

        ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ

        ಕರ್ನಾಟಕ ಇಬ್ಭಾಗವಾಗಬೇಕೆಂಬ ಕೂಗಿಗೆ ನನ್ನ ಉತ್ತರ - ಸಂವಿಧಾನದ 371ನೆಯ ವಿಧಿಯಲ್ಲಿ ತಿದ್ದುಪಡಿ ಮಾಡಿದ್ದರಿಂದಲೇ "ಎರಡು ಕರ್ನಾಟಕ'ದ ಬೇಡಿಕೆಯ ಹಿಂದಿರುವ ಕಾರಣ ನಿವಾರಣೆ ಆಗುವುದಿಲ್ಲ. ನಂಜುಂಡಪ್ಪ ವರದಿಯನ್ನು ಕಾರ್ಯಗತ ಮಾಡಬೇಕು.

        ಇನ್ನು, ಎರಡನೆಯ ಬಹು ಅಪಾಯಕಾರಿ ಸಮಸ್ಯೆ ಎಂದರೆ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರದ ನಿರ್ಧಾರದಿಂದ ಕನ್ನಡ ಉಳಿದೀತೇ ಎಂಬ ಪ್ರಶ್ನೆ.

        ಕನ್ನಡ ಶಾಲೆಗಳನ್ನು ಯಾಕೆ ಮುಚ್ಚುತ್ತಾರೆ ಎಂದು ನಾವೇ ಯೋಚಿಸಬೇಕು.

        ಇಂಗ್ಲಿಷ್‌ ಕಲಿತರೆ ಮಾತ್ರ ಉದ್ಯೋಗ ಎಂಬ ಭ್ರಮೆ ಹೆತ್ತವರಲ್ಲಿ ಮೂಡಿದೆ. ಹಾಗಾಗಿ, ಕನ್ನಡ ಶಾಲೆಗೆ ವಿದ್ಯಾರ್ಥಿಗಳೇ ಬರುವುದಿಲ್ಲ. ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳಲ್ಲಿ ಉಪಾಧ್ಯಾಯರಿಗೆ ಕೆಲಸವೇನು? ಹಾಗಾಗಿ, ಈ ಭ್ರಮೆಯ ಬೇರನ್ನೂ ಕತ್ತರಿಸಬೇಕು. ಇಂಗ್ಲಿಷ್‌ ಕಲಿತವರೆಲ್ಲ ಬುದ್ಧಿವಂತ ರಲ್ಲ, ಎಲ್ಲರಿಗೂ ನೌಕರಿ ಸಿಗುವುದಿಲ್ಲ, ಹಾಗೆಯೇ ಕನ್ನಡ ಕಲಿತು ರ್‍ಯಾಂಕ್‌ ಗಳಿಸಿ, ಅವರಿಗಿಂತ ಉನ್ನತ ಹುದ್ದೆಯಲ್ಲಿರುವವರ ಅಂಕಿಸಂಖ್ಯೆ ತೋರಿಸಿ ಹೆತ್ತವರಿಗೆ ಮನವರಿಕೆ ಮಾಡಬೇಕು.

        ಇಂಗ್ಲಿಷ್‌ನ್ನು ಕಲಿಸಲೇಬಾರದೆಂದು ಯಾರೂ ಹೇಳುವುದಿಲ್ಲ. ಆದರೆ, ಪ್ರಾಥಮಿಕ ಅಭ್ಯಾಸ ಮಾತೃಭಾಷೆಯಲ್ಲೇ ಆಗಬೇಕು. ಮುಂದಿನ ತರಗತಿಗಳಲ್ಲಿ ಇಂಗ್ಲಿಷ್‌ ಕಲಿಯಲಿ. ಇದರ ಜೊತೆಗೆ ಗಣಕತಂತ್ರ ಜ್ಞಾನವನ್ನೂ ಕಲಿಸಬೇಕು. ಕನ್ನಡ ಶಾಲೆಗಳು ಯಾವ ಇಂಗ್ಲಿಷ್‌ ಶಾಲೆಗಳಿಗಿಂತ ಕಡಿಮೆ ಇಲ್ಲ ಎಂಬಂತೆ ಉನ್ನತ ವ್ಯವಸ್ಥೆ ಇರುವ ಕನ್ನಡ ಶಾಲೆಗಳನ್ನು ಒದಗಿಸಬೇಕು. ಹೀಗೆ ಮಾಡಿದರೆ ಕನ್ನಡವೂ ಉಳಿಯುತ್ತದೆ, ಇಂಗ್ಲಿಷ್‌ ಕಲಿತು ಹೊಟ್ಟೆಯೂ ತುಂಬುತ್ತದೆ.

        ಸ್ಥಳೀಯರಿಗೆ ಉದ್ಯೋಗ

        ಕರ್ನಾಟಕ ಏಕೀಕರಣ ಚಳವಳಿಯ ಉದ್ದೇಶ, ವಿವಿಧ ಪ್ರಾಂತಗಳಲ್ಲಿ ಹರಿ ಹಂಚಿ ಹೋಗಿದ್ದ ಪ್ರದೇಶಗಳೆಲ್ಲ ಒಂದಾಗಿ, ಒಂದೇ ರಾಜಕೀಯ, ರಾಜ್ಯಾಡಳಿತೆಯ ಅಡಿಯಲ್ಲಿ ಬರಬೇಕು ಎಂಬುದು. ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯಬೇಕು. ಹೊಟ್ಟೆಬಟ್ಟೆಯ ಚಿಂತೆ ಬಗೆಹರಿಸಲು ಏಕೀಕೃತ ಕರ್ನಾಟಕದ ಸ್ಥಳೀಯರಿಗೆ ಕೈತುಂಬ ಕೆಲಸ ಸಿಗಬೇಕು. ಶೇ.  80ರಷ್ಟು ಜನರು ಸ್ಥಳವಂದಿಗಳಾಗಿರಬೇಕು ಎಂಬುದು ಸರಕಾರಿ ಆಜ್ಞೆ.ಇದನ್ನು ಜಾರಿಯಲ್ಲಿ ತಂದರೂ ಈ ನಿಯಮ ಪೂರ್ತಿಯಾಗಿ ಆಚರಣೆಯಲ್ಲಿ ಬಂದಿಲ್ಲ. ಕರ್ನಾಟಕ ದಲ್ಲಂತೂ ಈ ಸಮಸ್ಯೆ ಉಲ್ಬಣವಾಗಿದೆ. ಇದರ ಪರಿಹಾರಕ್ಕಾಗಿ 20 ವರ್ಷಗಳ ಹಿಂದೆ ಸರೋಜಿನಿ ಮಹಿಷಿ ಆಯೋಗ ನೇಮಿಸಲಾಯಿತು. ಅದರ ವರದಿಯ ಅನುಷ್ಠಾನವಂತೂ ಆಗಲೇ ಇಲ್ಲ.

        ಏಕೀಕೃತ ಕರ್ನಾಟಕದ ಸಮಸ್ಯೆಗಳು ಅನಂತ. ಅಂತಾರಾಜ್ಯ ನದೀ ನೀರಿನ ಹಂಚಿಕೆಯ ಸಮಸ್ಯೆ, ಬೃಹತ್‌ ಬಹುರಾಷ್ಟ್ರೀಯ ಕಂಪೆನಿಗಳ ಕಾರ್ಖಾನೆಗಳ ಅಪಾಯ, ಕೃಷಿಭೂಮಿಗಳ ಭೂಬ್ಯಾಂಕ್‌ಗಳ ಭೀಕರ ಅಪಾಯ, ಕರ್ನಾಟಕ ಚಿತ್ರೋದ್ಯಮ - ದೂರದರ್ಶನದಲ್ಲಿ ಡಬ್ಬಿಂಗ್‌ ಸಮಸ್ಯೆ ಮುಂತಾದ ಅಪಾಯಗಳು ಕರ್ನಾಟಕವನ್ನು ಕಾಡುತ್ತಿವೆ. ಈ ಮಾರಕ ಅಪಾಯದಿಂದ ನಾವು ಪಾರಾಗದಿದ್ದರೆ ಕರ್ನಾಟಕವೂ ಉಳಿಯದು, ಕನ್ನಡವೂ ಉಳಿಯದು!

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      image
      • Copyright @ 2009 Udayavani.All rights reserved.
      • Designed & Hosted By 4cplus