ಮಾವೆಂಸ | Feb 10, 2013
ಬಾಯಿಗೆ ಬಾತ್‌ರೂಮಿಗೆ ಲಗ್ಗೆ ನಿಮ್ಮ ಹಲ್ಲು ಅವರ ಲೇಬಲ್ಲು
ನಮ್ಮ ಹಲ್ಲುಗಳ ಮೇಲೆ, ಬಚ್ಚಲ ಮನೆಯ ಮೇಲೆ ಅನೇಕ ಕಂಪನಿಗಳು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ತೀರ್ಮಾನಿಸಿವೆ. ಈಗಾಗಲೇ ಹಲ್ಲುಗಳನ್ನು ಫಳಫಳಗೊಳಿಸಲು 5-6 ಕಂಪನಿಗಳು ಇದ್ದರೂ ನಮ್ಮಲ್ಲಿ ದಿನವಹಿ ಹಲ್ಲುಜ್ಜುವವರ ಸಂಖ್ಯೆ ಶೇ.60ರಷ್ಟು ಮಾತ್ರ! ಇದನ್ನು ಶೇ. 75ಕ್ಕೆ ಏರಿಸಿದರೆ ಒಳ್ಳೆಯ ಬಿಸಿನೆಸ್ ಆಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಪೇಸ್ಟ್, ಬ್ರಷ್ ಕಂಪನಿಗಳಿವೆ. ಏರುತ್ತಿರುವ ಜನಸಂಖ್ಯೆಯನ್ನು ಬಳಸಿಕೊಂಡು ಲಾಭ ಮಾಡಬಹುದು ಎನ್ನುವುದಕ್ಕೆ ಇದೇ ಉದಾಹರಣೆ.
ನಮ್ಮಲ್ಲಿ ಜನಸಂಖ್ಯೆಯೇ ಎಲ್ಲ ಸಮಸ್ಯೆಗಳಿಗೆ ಕಾರಣ. ಜನಸಂಖ್ಯೆ ಹೆಚ್ಚಿದಷ್ಟು ಹೂಡಿಕೆ ಏರುತ್ತಿಲ್ಲ. ಉಳಿಕೆಯಾಗುತ್ತಿಲ್ಲ. ಮತ್ತೆ ಮತ್ತೆ ಸಮಸ್ಯೆಗಳು ಏರುತ್ತಿವೆ ಅಷ್ಟೇ ಅಂಥ ಲೆಕ್ಕ ಹಾಕುವವರು ಇದ್ದಾರೆ. ಹಾಕುತ್ತಲೇ ಇದ್ದಾರೆ. ಜನಸಂಖ್ಯೆ ನಿಯಂತ್ರಣ ಮಾಡಬೇಕು ಎನ್ನುವ ಉದ್ದುದ್ದ ಮಾತು ಆಡುತ್ತಲೇ ಇದ್ದಾರೆ.
ಈ ಎಲ್ಲಾ ಮಾತುಗಳಿಗೆ ಎಲ್ಲರೂ ತಲೆಯಾಡಿಸಬೇಕಾಗಿಲ್ಲ. ಒಂದೇ ಒಂದು ಬಾರಿ ಗ್ರಾಹಕ ವಸ್ತುಗಳ ತಯಾರಕರನ್ನು ವಿಚಾರಿಸಿ, ದೇಶದ ಕೋಟಿ ಕೋಟಿ ಜನಸಂಖ್ಯೆ ಅವರಲ್ಲಿ ಪುಳಕವನ್ನು ಮೂಡಿಸುತ್ತದೆ. ನೂರಾರು ಕೋಟಿ ಜನರಲ್ಲಿ ಶೇ. ಒಂದರಷ್ಟು ಜನ ಖರೀದಿಸಿದರೂ ಸಾಕು, ಕಂಪನಿ ಉದ್ಧಾರವಾದಂತೆ ಎನ್ನುವ ಲೆಕ್ಕಾಚಾರ ಮುಂದಿಡುತ್ತಾರೆ.
ಇದೇ ದಾರಿಯಲ್ಲಿ ಎಲ್ಲ ಹೊಸ ವಸ್ತುಗಳ ತಯಾರಕರು ಕರ್ನಾಟಕವನ್ನು ತಮ್ಮ ನೂತನ ತಯಾರಿಕೆಯ ಯಶಸ್ಸನ್ನು ಪರೀಕ್ಷಿಸುವ ಪ್ರಯೋಗ ಶಾಲೆಯಾಗಿ ಪರಿಗಣಿಸುತ್ತಾರೆ. ಆರು ಕೋಟಿ ಜನರಲ್ಲಿ ಶೇ. ಒಂದೆಂದರೂ ಆರು ಲಕ್ಷ ಜನ ಖರೀದಿಸಲೇಬೇಕಲ್ಲವೇ?
ಜನರಿಂದ ಮೇಲೆ ಬಂದಿದ್ದು
ಜನಸಂಖ್ಯೆಯಿಂದ ಲಾಭ ಏನು ಅನ್ನೋದಕ್ಕೆ ಈಗ ಟೂತ್‌ಪೇಸ್ಟ್ ರಂಗವನ್ನು ನೋಡೋಣ. ನಮ್ಮ ದೇಶದಲ್ಲಿ ಶೇ. 55ರಷ್ಟು ಜನ ಹಲ್ಲು ಫಳಫಳಗೊಳಿಸಲು ಟೂತ್‌ಪೇಸ್ಟ್ ಬಳಸುತ್ತಾರೆ. ಇದರಲ್ಲಿ ಶೇ. 15ರಷ್ಟು ಜನ ಮಾತ್ರ ದಿನಕ್ಕೆ ಎರಡು ಬಾರಿ ಹಲ್ಲುಜ್ಜುತ್ತಾರಂತೆ. ಹಾಗಂತ ಸಂಶೋಧನೆಗಳು ಹೇಳಿವೆ. ಈಗಿನ ಲೆಕ್ಕಾಚಾರದ ಪ್ರಕಾರ, ಈ ಟೂತ್‌ಪೇಸ್ಟ್ ಅಕ್ಷರಸ್ಥರ ಸಂಖ್ಯೆ ಶೇ. 75ಕ್ಕೆ ಏರಿದರೆ ಪೇಸ್ಟ್ ವ್ಯಾಪಾರ ಡಬಲ್ ಖಚಿತ. ಕೆಲವು ಸಿನಿಕರು ಹೇಳುತ್ತಾರೆ, ಈಗಿರುವ ಬ್ರಷ್ ಮಾಡುವವರಲ್ಲಿ ಉಳಿದ 85 ಭಾಗ ಜನ ದಿನಕ್ಕೆ ಇನ್ನೊಂದು ಅಧಿಕ ಬಾರಿ ಬ್ರಷ್ ಮಾಡಿದರೂ ಸಾಕು, ವ್ಯಾಪಾರ ಸೂಪರ್. ಅಂದರೆ ಯಾರೋ ಎಲ್ಲೋ ಹಲ್ಲು ಉಜ್ಜಿದರೆ ಕಂಪನಿಗೆ ಖುಷಿ. ಜೋಳಿಗೆ ಭರ್ತಿ.
ಈ ತಂತ್ರ ವಿದೇಶಗಳಲ್ಲಿ ಸಾಕಷ್ಟು ಯಶಸ್ವಿಯಾಗಿದೆ. ಹೆಚ್ಚು ಬಾರಿ ಬ್ರಷ್ ಮಾಡುವುದರಿಂದ ಹಲ್ಲಿನ ಎನಾಮೆಲ್ ಹಾಳಾಗುತ್ತದೆ ಎಂಬುದು ಅವರಿಗೆ ಗೊತ್ತಿದ್ದಂತಿಲ್ಲ. ಮುಂದುವರಿದ ದೇಶಗಳಲ್ಲಿ ಶೆ. 97 ಜನ ಟೂತ್‌ಪೇಸ್ಟ್ ಬಳಸುತ್ತಾರೆ. ಅದರಲ್ಲಿ ಶೇ. 87 ಮಂದಿ ದಿನಕ್ಕೆರಡು ಬಾರಿ ಮುದ್ದಾಂ ಬ್ರಷ್ ಮಾಡುತ್ತಾರೆ. ಆದರೆ ನಮ್ಮಲ್ಲಿರುವ ನೈಸರ್ಗಿಕ ಹಲ್ಲು ಸೆಟ್‌ಗಳ ಸಂಖ್ಯೆಗೂ ಟೂತ್‌ಪೇಸ್ಟ್ ಮಾರಾಟಕ್ಕೂ ಸಂಬಂಧ ಇಲ್ಲ.
ಊಹೂn, ಪರಿಸ್ಥಿತಿ ಹಾಗಿದ್ದರೂ ಟೂತ್‌ಪೇಸ್ಟ್ ತಯಾರಕರ ಸಂಖ್ಯೆ ದೇಶದಲ್ಲಿ ದೊಡ್ಡದಾಗಿಲ್ಲ. ಇದು ಅಚ್ಚರಿ ವಿಷಯ. ಹೋಗಲಿ, ಮಾರುಕಟ್ಟೆಯ ಅಪಾರ ಸಾಧ್ಯತೆಗಳನ್ನು ಎಂಎನ್‌ಸಿಗಳು ಧಾವಿಸಬೇಕಾಗಿತ್ತಲ್ಲವೇ? ವಿಶ್ವದ ಬಹುದೊಡ್ಡ ಕಂಪನಿ ಪ್ರೋಕ್ಟರ್ ಎಂಡ್ ಗ್ಯಾಂಬಲ್ ಭಾರತದ ಮಾರುಕಟ್ಟೆ ಪ್ರವೇಶದ ದಿನಾಂಕವನ್ನು ಮುಂದೂಡಿರುವುದು ತರ್ಕದಿಂದ ಹೊರಗಿರುವಂತಾಗಿದೆ. ಹೊಸದಾಗಿ ಮಾರುಕಟ್ಟೆಗೆ ಪ್ರವೇಶಿಸುವವರಿಗೆ ದೇಶದ ನಂ. 1 ಕಂಪನಿ ಕೋಲ್ಗೇಟ್ ಪಾಮಾಲಿವ್ ಕಂಪನಿಯ ವಿಸ್ತೃತವಾದ ಮಾರುಕಟ್ಟೆ ಭಯ ಬೀಳಿಸಬಹುದು. ಕಳೆದ ಆರು ತಿಂಗಳಲ್ಲಿ ಅದು ದೇಶದ "ಓರಲ್ ಕೇರ್' ತಯಾರಿಕೆಗಳ ಶೇ. 54ರಷ್ಟು ಮಾರುಕಟ್ಟೆಯನ್ನು ತನ್ನದಾಗಿಸಿಕೊಂಡಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. ಎರಡರಷ್ಟು ಏರಿಕೆಯೂ ಹೌದು.
ಕೋಲ್ಗೇಟೇ ಗ್ರೇಟು
ಈ ಸಾಧನೆಗೆ ಕೋಲ್ಗೇಟ್ ಪಾಮಾಲಿವ್ ಶ್ರಮವನ್ನೂ ತೊಡಗಿಸಿದೆ. ಕಳೆದ ವರ್ಷ ಜಾಹೀರಾತಿಗಾಗಿ ಬಜೆಟ್‌ನಲ್ಲಿ ಶೇ. 32ರ ಹೆಚ್ಚಳ ಮಾಡಿದ್ದರಿಂದ ಮಾರುಕಟ್ಟೆಯಲ್ಲಿ 2008ರ ನಂತರ ಇದೇ ಮೊದಲ ಬಾರಿಗೆ ಅದು ಈ ಪ್ರಮಾಣದ ಸಾಧನೆ ಮಾಡಲು ಸಾಧ್ಯವಾಗಿದೆ. 10 ಹೊಸ ತಯಾರಿಕೆಗಳನ್ನು ಮಾರುಕಟ್ಟೆಗೆ ನುಗ್ಗಿಸಿದೆ. ಮಕ್ಕಳ ಟೂತ್‌ಪೇಸ್ಟ್, ಟೀತ್ ವೈಟನರ್ ಪರಿಚಯಿಸಿದೆ. ಕೇವಲ ಪೇಸ್ಟ್ ಮಾತ್ರವಲ್ಲದೆ ವಿವಿಧ ಬಾಯಿ ಸ್ವತ್ಛತಾ ಆಂದೋಲನವನ್ನು ಅದು ತೆಗೆದುಕೊಂಡಿರುವುದರಿಂದ ದೇಶದ ನಂಬರ್ 1 ಹಲ್ಲು ಉಜ್ಜಿಸುವ ಕಂಪನಿ. ನೆನಪಿರಲಿ, ಅದರ ಶೇ. 80ರಷ್ಟು ಆದಾಯ ಓರಲ್ ಕೇರ್ ವಿಭಾಗದಿಂದಲೇ ಲಭಿಸುತ್ತದೆ.
2012ರಲ್ಲಿ ಕೋಲ್ಗೇಟ್ ಪಾಮಾಲಿವ್ ಕಂಪನಿ, 180 ಡಿಗ್ರಿ ಚಲಿಸಬಲ್ಲ ತಲೆ ಇರುವ ಟೂತ್‌ಬ್ರಷ್ ಮಾಡಿ ಜನರ ಗಮನಸೆಳೆದಿತ್ತು. ಗಂಟಲು ನಾಲಿಗೆ ಕ್ಲೀನರ್‌ಗಳನ್ನೂ ಹೊರತಂದ ದಿನಗಳಿವು. ಕೋಲ್ಗೇಟ್‌ನ ಮೌತ್‌ವಾಶ್ ಶೇ. 26ರ ಮಾರುಕಟ್ಟೆಯನ್ನು ತನ್ನದಾಗಿಸಿಕೊಂಡಿದೆ. ಮೊನ್ನೆ ಮೊನ್ನೆ ಬ್ಯಾಟರಿ ಚಾಲಿತ ಟೂತ್‌ಬ್ರಷ್ ಅನ್ನೂ ಇದು ಭಾರತಕ್ಕೆ ಕೊಟ್ಟಿದೆ. ಈಗಾಗಲೇ ಇದು ದೇಶದಲ್ಲಿ 4.5 ಮಿಲಿಯನ್ ರೀಟೈಲ್ ಔಟ್‌ಲೆಟ್‌ಗಳನ್ನು ಸೃಷ್ಟಿಸಿದೆ. ಇದರ ಜೊತೆಗೆ ಮೂವರು ಮಹಿಳಾಮಣಿಯರು ಅಗ್ರಸ್ಥಾನದಲ್ಲಿ ಕುಳಿತಿದ್ದು ಈ ಸಾಧನೆಯ ಪವಾಡಕ್ಕೆ ಕಾರಣವಾಯಿತೇ? ಈ ಪ್ರಶ್ನೆ ಯಕ್ಷಪ್ರಶ್ನೆಯೂ ಆಗಿದೆ.
ಹೇಳಬೇಕಾದುದು ಅದಲ್ಲ, ಕೋಲ್ಗೇಟ್ ವಿಶ್ವದಲ್ಲಿ ಶೇ. 25ರಷ್ಟು ಪಾಲು ಪಡೆದಿದ್ದರೂ, ಏಷ್ಯಾದಲ್ಲಿ ಶೇ. 73ರ ಹಿಡಿತ ಸಾಧಿಸಿದ್ದರೂ ಭಾರತದ ಮಟ್ಟಿಗೆ ನಿರುಮ್ಮಳವಾಗಿ ಇರುವ ಸ್ಥಿತಿಯಿಲ್ಲ. ಶೇ. 85ರಷ್ಟು
ಭಾರತದ ಟೂತ್‌ಪೇಸ್ಟ್ ಮಾರುಕಟ್ಟೆಯಲ್ಲಿ ಕೋಲ್ಗೇಟ್ ಜೊತೆ ಹಿಂದೂ ಸ್ತಾನ್ ಯೂನಿಲಿವರ್ ಲಿಮಿಟೆಡ್‌ನ ಪ್ರಾಡಕ್ಟ್ಗಳಾದ ಕ್ಲೋಸ್‌ಅಪ್ ಹಾಗೂ ಪೆಪೊÕಡೆಂಟ್ ದೊಡ್ಡ ಮಟ್ಟದಲ್ಲಿ ಒಳನುಗ್ಗಲು ಪ್ರಯತ್ನಿಸುತ್ತಿದೆ. ಆಯುರ್ವೇದಿಕ್ ಹೆಸರಿನಲ್ಲಿ ಡಾಬರ್ ಕೂಡ ತನ್ನ ಛಾಪು ಮೂಡಿಸಿದೆ. ಈ ಮಧ್ಯೆ ಬೆನ್ನಹುರಿಯಲ್ಲಿ ಸೆಳಕು ಮೂಡಿಸುವಂತೆ ಪ್ರಾಕ್ಟರ್ ಎಂಡ್ ಗ್ಯಾಂಬಲ್ ಕಂಪನಿ ಇತ್ತ ಕಣ್ಣು ಹಾಕಿರುವುದಂತೂ ನಿಜ. ಒಟ್ಟಾರೆ ನಮ್ಮ ರಾಜ್ಯದ 6 ಕೋಟಿ, ದೇಶದ 110 ಕೋಟಿ ಜನರ ಹಲ್ಲಗಳ ರಕ್ಷಣೆಗೆ ಕಂಪನಿಗಳ ನಡುವೆಯೇ ಪೈಪೋಟಿ ಶುರುವಾಗಿದೆ.
ಶೇ.75ರಷ್ಟು ಜನ ಹಲ್ಲುಜ್ಜಬೇಕು
ಭಾರತದ ಟೂತ್‌ಪೇಸ್ಟ್ ಮಾರುಕಟ್ಟೆ 2020ರ ವೇಳೆಗೆ ಶೇ. 75 ರಷ್ಟು "ಹಲ್ಲುಜ್ಜುವ ಸಾಕ್ಷರತೆ' ಪಡೆಯುತ್ತದೆಂದು ಒಂದು ಮಾರುಕಟ್ಟೆ ಸರ್ವೆ ಹೇಳುತ್ತದೆ. ಶೇ. 7-8ರ ಬೆಳವಣಿಗೆ ಕಂಡರೂ ತಯಾರಕರು ಫುಲ್ ಖುಷ್. ಈಗಾಗಲೇ ತನ್ನ ಐದನೇ ತಯಾರಿಕಾ ಘಟಕಕ್ಕೆ ಕೋಲ್ಗೇಟ್ 20 ಮಿಲಿಯನ್ ಡಾಲರ್ ಸುರಿಯಲು ಸಿದ್ಧವಾಗಿದೆ. ಡೆಂಟಲ್ ಫೋ› ಮೌತ್ ವಾಶ್ ಹಾಗೂ ಟೀತ್ ವೈಟನರ್‌ನಂತ ನವ ತಯಾರಿಕೆಗಳಿಗೆ ನಗರ ಪ್ರದೇಶದಲ್ಲಿ ಬರುವ ದಿನಗಳಲ್ಲಿ ಜನ ಮಾರುಹೋಗುವಂತೆ ಮಾಡುವ ಪ್ರಯತ್ನ ಸಾಗಿದೆ.
ಯಾಕೋ ಗೊತ್ತಿಲ್ಲ, ಪಿ ಎಂಡ್ ಜಿ ಏಕಾಏಕಿ ಭಾರತದ ಮಾರುಕಟ್ಟೆಗೆ ಧಾವಿಸುವ ಧಾವಂತದಲ್ಲಿಲ್ಲ. ವಿಶ್ವದ 40 ದೇಶಗಳಲ್ಲಿ ತನ್ನ ಬಾಹುವನ್ನು ಚಾಚಿರುವ ಇದು ಬರೀ ಬ್ರಷ್ ಮಾರಿಯೇ ಶೇ. 10ರ ಮಾರುಕಟ್ಟೆಯ ಹಿಡಿತ ಸಾಧಿಸಿದಂತದು. ಉಳಿದ ದೇಶಗಳಲ್ಲಿ ಅದಕ್ಕೆ ಎದುರಾಗಿರುವ ಕಠಿಣ ಸ್ಪರ್ಧೆಯಿಂದಾಗಿ ಕಂಡುಬಂದಿರುವ ಕುಸಿತ ಭಾರತದ ಕನಸನ್ನು ಮುಂದಕ್ಕೆ ಹಾಕುವಂತೆ ಮಾಡಿದೆಯಂತೆ . ಉಳಿದ ಆಟಗಾರರು ಮಾತ್ರ ಸುಮ್ಮನುಳಿದಿಲ್ಲ. ಗ್ಲಾಕೊÕàಸ್ಮಿತ್‌ಕ್ಲೈನ್ ಕನ್ಸೂಮರ್ ಹೆಲ್ತ್‌ಕೇರ್‌ನ ಆಕ್ವಾಫ್ರೆಶ್ ಹಾಗೂ ಸೆನ್ಸೋಡೈನ್ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ಕಾಣಿಸಿಕೊಂಡಿವೆ. ಈಗಾಗಲೇ ಡಾಬರ್ ಮೂರು ಬ್ರಾಂಡ್‌ನೊಂದಿಗೆ ಸ್ಪರ್ಧೆಯಲ್ಲಿ ತಾನು ಇದ್ದೇನೆ ಎಂದು ಸ್ಪಷ್ಟಪಡಿಸಿದೆ. ಅತ್ತ ವಿಕೋ, ಆ್ಯಂಕರ್ ಕೂಡ ಮೂರಕ್ಕಿಳಿಯದೆ ಆರಕ್ಕೇರದೆ ಕಣದಲ್ಲಿವೆ.
ಒಟ್ಟಾರೆ ನಮ್ಮ ಬಚ್ಚಲ ಮನೆಗೆ ಟೂತ್ ಪೇಸ್ಟ್‌ಗಳು ದಾಳಿ ಮಾಡಲು ರೆಡಿಯಾಗಿವೆ. ಅಂದರೆ ನಮ್ಮ ಹಲ್ಲುಗಳ ಮೇಲೂ ಕಂಪನಿಗಳು ಪ್ರಭುತ್ವ ಸಾಧಿಸಲು ಸಿದ್ಧವಾಗಿವೆ ಎಂದರ್ಥ. ಆಯ್ಕೆ ನಿಮಗೆ ಬಿಟ್ಟದ್ದು.