ಸ್ವರೂಪಾನಂದ.ಎಂ.ಕೊಟ್ಟೂರು | Feb 10, 2013
ಎಮು ಮೇಲೆ ಬಂಡವಾಳ ಹೂಡಿದರೆ ಮೋಸವಿಲ್ಲ. ಎಮು ಮಾಂಸದ ಬೆಲೆ ಆಗಾಗ ಇಳಿಯಬಹುದು. ಆದರೆ ಅದರ ಉಪ ಉತ್ಪನ್ನಗಳಿಗೆ ಬೆಲೆ ಇದ್ದೇ ಇದೆ. ಇದರಿಂದ ಎಮು ಸಾಕಾಣಿಕೆಯಿಂದ ಆರ್ಥಿಕ ಹಿನ್ನಡೆ ಆಗದು.
ಎಮು ಪಕ್ಷಿ ಹಾಗೂ ಅದರ ಉತ್ಪನ್ನಗಳಿಗೆ ಮಾರುಕಟ್ಟೆ ಚೆನ್ನಾಗಿದೆ. ಪ್ರಮುಖವಾಗಿ ಆಂಧ್ರದಲ್ಲಿ ಈ ಉದ್ಯಮ ಹೆಮ್ಮರವಾಗಿ ಬೆಳೆದಿರುವುದರಿಂದ ಕರ್ನಾಟಕಕ್ಕೆ ಆಸರೆ. ಆಂಧ್ರದ ಪ್ರಭಾವ ಇರುವ ಎಲ್ಲಾ ಹಳ್ಳಿಗಳಲ್ಲಿ ಎಮುವಿನ ಸಾಕಾಣಿಕೆ ಉದ್ಯಮದಂತೆ ನಡೆಯುತ್ತಿದೆ. ಅಲ್ಲದೆ ಎಮು ಮಾಂಸಕ್ಕೆ ಇಟಲಿ, ಆಸ್ಟ್ರೇಲಿಯಾ, ಜರ್ಮಿನಿಗೆ ರಫ್ತು ಮಾಡಲಾಗು ತ್ತದೆ. ಈ ನಿಟ್ಟಿನಲ್ಲಿ ಎಮು ಒಂದು ಬೃಹತ್ ಉದ್ಯಮವಾಗಿ ಬೆಳೆಯುತ್ತಿದೆ.
ಎಮು ವಿಶೇಷ ಎಂದರೆ ಎರಡನೇ ವರ್ಷದಿಂದಲೇ ಮೊಟ್ಟೆ ಇಡಲು ಪ್ರಾರಂಭಿಸುತ್ತವೆ. ನವೆಂಬರ್‌ನಿಂದ ಮಾರ್ಚ್ ನಡುವಿನ ಅವಧಿ ಇವು ಮೊಟ್ಟೆಗಳನ್ನಿಡುವ ಕಾಲ. ಈ ನಡುವೆ ಒಂದು ಎಮು 40 ರಿಂದ 45 ವರೆಗೆ ಮೊಟ್ಟೆ ಇಡುತ್ತದೆ.
ಪ್ರತಿ ಎಮು ಮೊಟ್ಟೆಯನ್ನು ಮಿಷನ್‌ನಲ್ಲಿ ಮರಿ ಮಾಡಿಕೊಡಲು 350 ರೂ. ಜೊತೆಗೆ ಅವುಗಳನ್ನು ಕೆಲತಿಂಗಳ ಕಾಲ ಸಾಕಿ ಬೆಳೆಸಿಕೊಡಲು ಪ್ರತಿ ಮರಿಗೆ 500 ರೂಗಳನ್ನು ಪಡೆಯುವುದು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದೆ. ಅಲ್ಲದೆ 3 ತಿಂಗಳ ಒಂದು ಜೊತೆ ಎಮು ಬರ್ಡ್ಸ್‌ಗೆ 8000-, ಮೊದಲ ಬಾರಿ ಮೊಟ್ಟೆ ಇಡುವ ಎಮುಗಳಿಗೆ ಒಂದು ಜೊತೆ 25,000 ರೂಗಳವರೆಗೂ ಬೆಲೆ ಇದೆ.
ತಿಂಗಳಿನಿಂದಲೇ ಎಮುವಿನ ಮಾಂಸ ಮಾರಾಟಯೋಗ್ಯವಾಗಿರುವುದರಿಂದ ಡಿಮ್ಯಾಂಡ್ ಜಾಸ್ತಿ. ಆಂಧ್ರದಲ್ಲಿ ಮಾಂಸದ ಜೀವಂತ ಎಮುವಿಗೆ ಪ್ರತಿ ಕೆ.ಜಿಗೆ 315 ರಿಂದ 350ವರೆಗೆ ಬೆಲೆ ಇದೆ. ಇತ್ತೀಚೆಗೆ ಆಂಧ್ರದ ವಿಜಯವಾಡದಲ್ಲಿ ವಿಲಿನಾ ಕಂಪನಿಯು ಪ್ರಾಸಸಿಂಗ್ ಯೂನಿಟ್ ಪ್ರಾರಂಭವಾಗಿದ್ದು, ಇದಕ್ಕೆ ಇನ್ನೂ ಬೇಡಿಕೆ ಬರಲಿದೆ. ಈ ಯೂನಿಟ್‌ನಲ್ಲಿ ದಿನವೊಂದಕ್ಕೆ 300 ಎಮುಗಳಿಂದ ಮಾಂಸ ತೆಗೆಯಲಾಗುತ್ತದೆ. ಇದರಿಂದ 2500 ಲೀಟರ್ ಎಮು ಎಣ್ಣೆ, 1500 ಮೀಟರ್ ಚರ್ಮ ಸಿಗುತ್ತದೆ. ಇದನ್ನೆಲ್ಲಾ ರಫ್ತು ಮಾಡಲಾಗುತ್ತದೆ ಅಥಾವ ಇದರ ಅನೇಕ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಬಹುದು. ನೋವು ನಿವಾರಕ ಆಯಿಲ್, ಏರ್ ಆಯಿಲ್, ಸೋಪ್, ಶ್ಯಾಂಪ್ ಹೀಗೆ ಇದರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅಲ್ಲದೆ ಅಲ್ಪ ಸ್ವಲ್ಪ ಅನುಭವ ಪಡೆದು ಎಮು ಉತ್ಪನ್ನಗಳನ್ನು ತಯಾರಿಸಬಹುದು. ಹಾಗಾಗಿ ಇಷ್ಟೆಲ್ಲಾ ಲಾಭ ನೀಡುವ ಎಮು ಉದ್ಯಮ ಅರ್ಧ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಈಗಾಗಲೇ ಬಳ್ಳಾರಿವೊಂದರಲ್ಲಿಯೇ ಸುಮಾರು 6000 ಕ್ಕಿಂತ ಹೆಚ್ಚಿನ ಎಮು ಪಕ್ಷಿಗಳಿವೆ.
ಸಣ್ಣ ಹಾಗೂ ದೊಡ್ಡ ರೈತರು ಈ ಉದ್ಯಮವನ್ನು ಕೈಗೊಳ್ಳಬಹುದು. ಬ್ಯಾಂಕ್‌ಗಳು ಲೋನ್ ನೀಡುತ್ತವೆ. ಜೊತೆಗೆ ನಬಾರ್ಡ್ ಶೇ. 25ರಷ್ಟು ಸಬ್ಸಿಡಿ ನೀಡುತ್ತದೆ. ಹಾಗಾಗಿ ಈ ಉದ್ಯಮಕ್ಕೆ ಒಳ್ಳೆಯ ಭವಿಷ್ಯವಿದೆ.
ಬಯಲು ಸೀಮೆ ಎಮು ಸಾಕಾಣಿಕೆಗೆ ಪೂರಕವಾಗಿದೆ. ಸುಮಾರು 6 ಅಡಿ ಎತ್ತರಕ್ಕೆ ಬೆಳೆಯುವ ಈ ಎಮು ಪಕ್ಷಿ$ಗಳನ್ನು ಮರಭೂಮಿ ಪಕ್ಷಿ ಅಂತಲೂ ಕರೆಯುತ್ತಾರೆ. ಸುಮಾರು 52 ಡಿಗ್ರಿ ಸೆಲಿÒಯಸ್‌ವರೆಗಿನ ಹವಾಮಾನದಲ್ಲಿ ಬೆಳೆಸಿದರೂ ಅಡ್ಡಿಯಿಲ್ಲ. ಕೊಳಾಯಿ ನೀರಿನಿಂದಲೇ ಎಮುಗಳ ಗಂಟಲನ್ನು ತಂಪಾಗಿಸಬಹುದಾಗಿರುವುದರಿಂದ ನೀರಿನ ಅಭಾವ ಕಾಡುವುದಿಲ್ಲ.
ಜೊತೆಗೆ ಈ ಬಯಲು ಸೀಮೆಯ ಹವಾಗುಣ ಎಲ್ಲಾ ದೃಷ್ಠಿಯಿಂದ ಇವುಗಳ ಸಾಕಾಣಿಕೆಗೆ ಪೂರಕವಾಗಿರುವುದು ವಿಶೇಷ. ಒಟ್ಟಿನಲ್ಲಿ ಬಿರುಬಿಸಲಿಗೂ ಸೈ ಅತೀ ತಂಪಿಗೂ ಜೈ ಎನ್ನುವಂಥ ದೇಹ ರಚನೆ ಎಮುವಿನದ್ದು. ಜೋಳ, ಸೋಯಬೀನ್, ಶೇಂಗಾ, ರಾಗಿ, ಮೆಕ್ಕೆಜೋಳ ಧಾನ್ಯಗಳ ಹಿಂಡಿಯೇ ಇದಕ್ಕೆ ಆಹಾರವಾಗಿ ಒದಗಿಸಲಾಗುತ್ತದೆ. ಬಯಲು ಸೀಮೆಯಲ್ಲಿ ಈ ಆಹಾರ ಧಾನ್ಯಗಳನ್ನು ಯಥೇಚ್ಚವಾಗಿ ಬೆಳೆಯುವುದರಿಂದ ಇದರ ಕೊರತೆ ಕಾಡಲಿಲ್ಲ.
ಎಮುವಿನ ಪ್ರತಿ ಭಾಗಕ್ಕೂ ಡಿಮ್ಯಾಂಡೋ ಡಿಮ್ಯಾಂಡ್. ಮೂರು ತಿಂಗಳ ಒಂದು ಎಮುವಿನ ಬೆಲೆ ಬರೋಬ್ಬರಿ 6,500 ದಿಂದ 7000 ರೂ. ಇದರ ಮಾಂಸಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. 14 ತಿಂಗಳ ಪಕ್ಷಿಯಿಂದಲೇ ಮಾಂಸಕ್ಕೆ ಮಾರಾಟ ಮಾಡಲಾಗುತ್ತದೆ. ಒಂದು ಪಕ್ಷಿಯ ಜೀವಿತಾವಧಿ 40 ರಿಂದ 50 ವರ್ಷ. ಸರಿಸುಮಾರು 40 ರಿಂದ 45 ಕೆ.ಜಿಯವರೆಗೂ ತೂಕ ಬರುತ್ತದೆ.
ಒಂದು ಕೆ.ಜಿ ಮಾಂಸಕ್ಕೆ ಐದುನೂರು ರೂಗಳಿಂದ ಎಂಟುನೂರುಗಳವರೆಗೆ ಬೆಲೆ ಇದೆ. ಅಂದಹಾಗೆ ಈ ಮಾಂಸದಲ್ಲಿ ಕೊಬ್ಬಿನ ಅಂಶವಿಲ್ಲದಿರುವುದು ವಿಶೇಷ. ಇದರ ಮಾಂಸದಿಂದ ಬರುವ ಎಣ್ಣೆ ತೆಗೆದು ನಾನಾ ಔಷಧಿಗಳಿಗೆ ಬಳಸಲಾಗುತ್ತದೆ. ಹೀಗೆ ಹೊರತೆಗೆದ ಎಣ್ಣೆ ಅನೇಕ ರೋಗಗಳಿಗೆ ರಾಮಭಾಣ, ನೋವು ನಿವಾರಕವಾಗಿರುವುದು ಧೃಡಪಟ್ಟಿದೆ. ಇದರ ಚರ್ಮವಂತೂ ನಾನಾ ವಸ್ತುಗಳ ತಯಾರಿಕೆಗೆ ಬಳಸಲಾಗುತ್ತಿದೆ. ಅಂದರೆ ಲೆದರ್ ಬ್ಯಾಗ್, ಚಪ್ಪಲಿ ಇತ್ಯಾದಿಗಳನ್ನು ಮಾಡಲಾಗುತ್ತದೆ. ಉಳಿದಂತೆ ಎಮುವಿನ ಉಗುರುಗಳನ್ನು ಸಹ ಕಾಸ್ಮಟಿಕ್ಸ್‌ಗಳಾಗಿ ಬಳಸಲಾಗುತ್ತದೆ.
ಎಮು ಪಕ್ಷಿಗಳು 18 ನೇ ತಿಂಗಳಿನಿಂದ 30 ವರ್ಷದವರೆಗೂ ಪ್ರಮುಖವಾಗಿ ಚಳಿಗಾಲದಲ್ಲಿ ಮೊಟ್ಟೆ ಇಡುತ್ತವೆ. ಒಟ್ಟು 40-45 ದಿನಗಳ ಅಂತರದಲ್ಲಿ ಸರಾಸರಿ 30 ರಿಂದ 40 ಮೊಟ್ಟೆಗಳನ್ನು ಇಡುತ್ತದೆ. ಈಗ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ ಒಂದೂವರೆ ಸಾವಿರದಿಂದ ಎರಡು ಸಾವಿರ ರೂಗಳವರೆಗೆ ಬೆಲೆ ಇದೆ. ಇವುಗಳ ಮೊಟ್ಟೆಗಳಿಗೆ ಕೃತಕ ಶಾಖ ನೀಡಿ ಮರಿ ಮಾಡಿಸುತ್ತಾರೆ.
ಮಾರುಕಟ್ಟೆಯ ಬಗ್ಗೆ ಬಳ್ಳಾರಿ ವಿರೇಶ್ ಹೀಗನ್ನುತ್ತಾರೆ.
ಉದ್ಯಮ ಹೀಗೆ ಹೆಮ್ಮೆರವಾಗಿ ಬೆಳೆಯುವ ಕಾಲದಲ್ಲಿ ಮಾರುಕಟ್ಟೆ ಸಮಸ್ಯೆ ತೀವ್ರವಾಗಿ ಕಾಡಿತು. ಎದೆಗುಂದಲಿಲ್ಲ. ಸ್ವತಃ ಬಳ್ಳಾರಿಯ ಕೌಲ್‌ಬಜಾರ್‌ನಲ್ಲಿ ಒಂದು ಎಮು ಚಿಕನ್ ಸೆಂಟರ್ ತೆರೆದೆವು. ಎಮು ಮಾಂಸಕ್ಕೆ ಜನ ಮುಗಿಬಿದ್ದರು. ಪ್ರತಿ ಕೆ.ಜಿ ಎಮು ಮಾಂಸಕ್ಕೆ 400 ರೂ. ಕೆಲವೇ ಘಂಟೆಗಳಲ್ಲಿ 200 ರಿಂದ 250 ಕೆಜಿ ಎಮು ಮಾಂಸ ಮಾರಾಟವಾಯಿತು ಎನ್ನುತ್ತಾರೆ. ಈಗ ಎಮುವನ್ನೇ ನಂಬಿ ಕೊಂಡರೆ ಕಷ್ಟ. ಆದರೆ ಇದರ ಉತ್ಪನ್ನಗಳಿಗೆ ಬೆಲೆ ಇರುವುದರಿಂದ ನಂಬಿದರ ಮೋಸವಿಲ್ಲ.