ಆರ್ಕಿಟೆಕ್ಟ್ ಕೆ. ಜಯರಾಮ್ | Feb 10, 2013
ಮನೆಗಳಿಗೂ ಆಯಸ್ಸು ಇರುತ್ತದೆ. ಇದನ್ನು ಜಾಸ್ತಿ ಮಾಡುವ, ಕಡಿಮೆ ಗೊಳಿಸುವುದೆಲ್ಲವೂ ನಮ್ಮ ಕೈಯಲ್ಲೇ ಇರುವುದು. ಆದ್ದರಿಂದ ಮನೆ ಕಟ್ಟುವಾಗಲೇ ಎಲ್ಲ ಲೆಕ್ಕ ಹಾಕಿದರೆ ರಿಪೇರಿ ಮಾಡುವುದು ಸುಲಭ. ಗಟ್ಟಿಮುಟ್ಟಾಗಿದ್ದರೆ ರೀಪೇರಿಯ ತಲೆನೋವೇ ಇರುವುದಿಲ್ಲ.
ಬದುಕಿಗೆ ಇರುವಂತೆ ಮನೆಗಳಿಗೂ ಡೆಡ್‌ಲೈನ್ ಅರ್ಥಾತ್ ಆಯಸ್ಸು ಇರುತ್ತದೆ. ಮನೆಯ ಆಯಸ್ಸು ಜಾಸ್ತಿ ಅಥವಾ ಕಡಿಮೆ ಮಾಡುವುದು ನಮ್ಮ ಕೈಯಲ್ಲೇ ಇರುತ್ತದೆ.
ಜಾಗರೂಕತೆ ಇದ್ದರೆ ಮನೆಯ ಆಯಸ್ಸು ಜಾಸ್ತಿ ಮಾಡಬಹುದು.
ಪಾಯದಿಂದ ಶುರುಮಾಡಿ
ಕಲ್ಲಿನಿಂದ ಕಟ್ಟಿಸಿದ್ದೀವಿ, ಏನೂ ಆಗುವುದಿಲ್ಲ ಎಂದು ಪಾಯವನ್ನು ನಿರ್ಲಕ್ಷಿ$ಸಬೇಡಿ. ಕೆಲವೊಮ್ಮೆ ಡಿಫರೆನ್ಶಿಯಲ್ ಸೆಟ್ಲ ಮೆಂಟ್ ಆದರೆ ಬಿರುಕುಗಳು ಬರಬಹುದು. ಇದಕ್ಕೆ ಕಾರಣ ಮಣ್ಣು ಒಂದೇ ರೀತಿಯಲ್ಲಿ ಗಟ್ಟಿಯಾಗಿಲ್ಲದಿರುವುದು ಹಾಗೂ ಕೆಲವೊಮ್ಮೆ ನೀರು ಬಸಿಯುವುದರಿಂದಲೂ ತಳಪಾಯದ ಮಣ್ಣು ಸಡಿಲಗೊಂಡು ಒಂದು ಭಾಗದ ಪಾಯ ಮಾತ್ರ ಸ್ವಲ್ಪ ಕುಸಿದಿರಬಹುದು.
ಬಿರುಕು ಕೇವಲ ಒಂದೆರಡು ಮಿಲಿಮೀಟರ್ ಅಗಲ ಇದ್ದರೆ ಪರವಾಗಿಲ್ಲ. ಅದರಲ್ಲೂ ಮನೆ ಕಟ್ಟಿ ಸ್ವಲ್ಪ ಸಮಯದ ನಂತರ ಬಂದರೆ ಅದು ಪರವಾಗಿಲ್ಲ. ಆದರೆ ಕೆಲವಾರು ವರ್ಷಗಳ ನಂತರ ಬಂದರೆ, ಇಷ್ಟು ವರ್ಷ ಬರದಿದ್ದದ್ದು ಈಗೇಕೆ ಬಂದಿತು? ಎಂದು ಪರಿಶೀಲಿಸಬೇಕಾಗುತ್ತದೆ. ಇಂಥ ಬಿರುಕುಗಳು ಮನೆಯ ಆಯಸ್ಸನ್ನು ನುಂಗಿಹಾಕುತ್ತದೆ. ಎಚ್ಚರ.
ಮಳೆ ನೀರು ನೇರವಾಗಿ ಮನೆಯ ಪಾಯಕ್ಕೇ ಹರಿದು ಹೋಗುವುದನ್ನು ತಪ್ಪಿಸಲು ಸುತ್ತಲೂ ಒಂದೂವರೆ ಅಡಿಯಿಂದ ಎರಡು ಅಡಿ ಅಗಲದ "ಫ್ಲಾಗಿಂಗ್ ಕಾಂಕ್ರಿಟ್' ಹಾಕುವ ಪರಿಪಾಠವಿದೆ. ಇದಕ್ಕೆ ಸಾಮಾನ್ಯವಾಗಿ 1:3:6 ಕಾಂಕ್ರಿಟ್ ಮಿಶ್ರಣಮಾಡಿ ಪಾಯದ ಪಕ್ಕದಲ್ಲಿ ಬಿದ್ದ ನೀರು ದೂರ ಸರಿಯುವಂತೆ ಇಳಿಜಾರಾಗಿ ಹಾಕಲಾಗುತ್ತದೆ. ಇದಕ್ಕೆ ಒಂದು ಇಂಚು ಸ್ಲೋಪ್ ಕೊಟ್ಟರೂ ಸಾಕು.
ಗೋಡೆ ಬಿರುಕು
ಈಗ ಬಹುತೇಕ ಉಪಯೋಗದಲ್ಲಿರುವ 53 ಗ್ರೇಡ್ ಸಿಮೆಂಟ್ ಹಿಂದೆ ಬಳಕೆಯಲ್ಲಿದ್ದ 43 ಗ್ರೇಡ್ ಸಿಮೆಂಟಿಗಿಂತ ಹೆಚ್ಚು ಗಟ್ಟಿಇದ್ದರೂ ಇದು ಹೆಚ್ಚು ಕುಗ್ಗುತ್ತದೆ. ಹಾಗಾಗಿ ಲೀಕೇಜ್ ಕ್ರಾಕ್‌ಗಳು ಬರುತ್ತದೆ. ಇದು ಕೂದಲೆಳೆಯಷ್ಟು ಅಗಲವಿದ್ದು ಸಾಮಾನ್ಯವಾಗಿ ನಿರುಪದ್ರವಿ. ಇದಕ್ಕೆ ಬಣ್ಣ ಬಳಿಯುವುವಾಗ ಬ್ರಶ್ ನಿಂದಲೇ ಸ್ವಲ್ಪ ಪೇಂಟ್ ತುಂಬಿದರೆ ಮುಚ್ಚಿಹೋಗುತ್ತದೆ. ಹೆಚ್ಚು ಅಗಲವಿದ್ದರೆ ಬಿರುಕು ಮುಚ್ಚಲೆಂದೇ ಸಿಗುವ ಮಿಶ್ರಣಗಳನ್ನು ಬಳಸಬಹುದು. ತೀರ ಅಗಲದ ಬಿರುಕಾಗಿ, ಈಕಡೆಯಿಂದ ಆಕಡೆಗೆ ಕಾಣುವಂತಿದ್ದರೆ ಹಾಗಾಗಲು ಕಾರಣವೇನು? ಎಂಬುದನ್ನು ಕಂಡುಕೊಂಡು ನಂತರ ಸಿಮೆಂಟ್ ತುಂಬಿದರೆ ಸಮಸ್ಯೆಗೆ ಪರಿಹಾರ.
ಸೂರು - ನೀರು ನಿರೋಧಕ ಪದರ
ಮನೆಯ ತಾರಸಿಯನ್ನು ಆಗಾಗ ಪರೀಕ್ಷಿಸುತ್ತಿರಿ. ಸೂರು ಸೋರುವವರೆಗೂ ಕಾದರೆ ಮನೆಯ ಒಳಗಿನ ಬಣ್ಣವೆಲ್ಲ ಹಾಳಾಗಬಹುದು. ನಡೆದಾಡಿದರೆ "ಟಪ್ ಟಪ್' ಎಂಬ ಶಬ್ದ ಬರುವುದಾಗಲಿ, ಇಲ್ಲ ಹಪ್ಪಳದಂತೆ ಎದ್ದಿದ್ದರೆ, ಕೂಡಲೆ ರಿಪೇರಿ ಮಾಡುವುದು ಉತ್ತಮ. ಸಾಮಾನ್ಯವಾಗಿ ಸ್ವಲ್ಪ ಜಾಗದಲ್ಲಿ ಮಾತ್ರ ಹೀಗಾಗಿದ್ದರೆ, ಆ ಸ್ಥಳವನ್ನು ಮಾತ್ರ ತೆಗೆದು ನೀರು ನಿರೋಧಕ ರಾಸಾಯನ ಮಿಶ್ರಮಾಡಿದ 1:3:6 ಕಾಂಕ್ರಿಟನ್ನು ಮೊದಲಿದ್ದಂತೆ ಇಳಿಜಾರಾಗಿ ಹಾಕಿ. ಹೀಗೆ ಹಾಕುವ ಮೊದಲು ಹಳೆಯ ಸಡಿಲವಾದ ಸಿಮೆಂಟ್ ಪುಡಿಯನ್ನು ತೆಗೆದು ಸಿಮೆಂಟ್ ತಿಳಿಯನ್ನು ಚೆನ್ನಾಗಿ ಬಳಿದು ನಂತರವೇ ಕಾಂಕ್ರಿಟ್ ಹಾಕಿ.
ಪೇಂಟ್ ಗಮನಿಸಿ
ಬಣ್ಣಮಾಸುತ್ತಿದ್ದರೆ, ಬೂಷ್ಟು ಬಂದರೆ ಇಲ್ಲ ಎದ್ದು ಬರುತ್ತಿದ್ದರೆ ಅದು ಸಾಮಾನ್ಯವಾಗಿ ನೀರು ಸೋರುವಿಕೆಯ ಸಂಕೇತ. ನೀರು ಎಲ್ಲಿಂದ ಬಂದಿರಬಹುದು ಎಂಬುದನ್ನು ಮೊದಲು ಗಮನಿಸಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಿ. ಈ ಹಿಂದೆ ಹೆಚ್ಚು ಬಳಕೆಯಲ್ಲಿದ್ದ ಬಾಕ್ಸ್ ಸಜಾjಗಳ ನೀರು ಹೊರಹೋಗುವ ಪೈಪ್‌ಗ್ಳು ಕಟ್ಟಿಕೊಂಡರೆ ಮನೆಯೊಳಗೆ ಲಿಂಟಲ್ ಮಟ್ಟದಲ್ಲಿ ತೇವಾಂಶ ಕಾಣುತ್ತದೆ. ಹಾಗಾಗಿ ಪೈಗಳು ಕಟ್ಟಿಕೊಳ್ಳುವುದನ್ನು ತೆರೆವುಗೊಳಿಸಿದ ನಂತರವೇ ಬಣ್ಣದ ರಿಪೇರಿ ಕೆಲಸ ಮಾಡಿ.
ಟಾಯ್ಲೆಟ್ ಸೋರುವುದು
ಸಾಮಾನ್ಯವಾಗಿ ವಾಶರ್ ಗಳು ಹಳೆಯಾದದರೆ ಲೀಕ್ ಆಗುವುದು ಸಾಮಾನ್ಯವಾದರೂ ಅದನ್ನು ನಿರ್ಲಕ್ಷಿಸಬೇಡಿ. ಇದು ಗೋಡೆಗೆ ಅಂಟಿದ ಕೊಳಾಯಿಯಾಗಿದ್ದರೆ ಅಂಚಿನಿಂದ ಸೋರುವ ನೀರು ಗೋಡೆಗೂ ಟೈಲ್ಸ್‌ಗೂ ಮಧ್ಯದಲ್ಲಿ ಹರಿದು ಹಿಂಬದಿಯ ಗೋಡೆಯ ಪೇಂಟ್ ಹಾಳುಮಾಡಬಹುದು. ಕೆಲವೊಮ್ಮೆ ಗೋಡೆಗೆ ಹಾಕಿದ ಟೈಲ್ಸ್ ಮೇಲೆಯೇ ಸಣ್ಣದಾಗಿ ಸದಾಕಾಲ ಹರಿದರೂ ನೀರಿನಲ್ಲಿರುವ ಮಣ್ಣಿನ ಅಂಶದಿಂದಾಗಿ ಕಲೆಯಾಗಬಹುದು. ಹಾಗಾಗಿ ಸ್ವಲ್ಪ ನೀರುತಾನೆ ಎಂದು ವಾಶರ್ ಹಳೆಯದಾದಾಗ ಸೋರುವ ಕೊಳಾಯಿಗಳನ್ನು ನಿರ್ಲಕ್ಷಿ$ಸಬೇಡಿ!
ಟೈಲ್ಸ್ ಮಧ್ಯೆ ಸಂದಿ
ಕೆಲವೊಮ್ಮೆ ಟೈಲ್ಸ್‌ಗಳ ಮಧ್ಯೆ ಹಾಕಿದ ಸಿಮೆಂಟ್ ಇಲ್ಲ ಇತರೆ ಮಿಶ್ರಣಗಳು ಕಾಲಾಂತರದಲ್ಲಿ ಕರಗಿಹೋಗು ವುದುಂಟು. ನೀರು ಸುರಿದಾಗ ಸರಾಗವಾಗಿ ಹರಿದುಹೋಗುವ ಬದಲು ಕೆಳಗೆ ಇಳಿಯುವುದು ಕಂಡುಬರಬಹುದು. ಇದನ್ನು ನಿರ್ಲಕ್ಷಿ$ಸಬೇಡಿ. ಹೀಗೆಯೇ ಸೋರಿ ಸೋರಿ ಕಡೆಗೆ ಸೂರು ಒದ್ದೆಯಾಗಿ ಸೀಲಿಂಗ್‌ಗೆ ಹಾಕಿದ ಬಣ್ಣ ಮಾಸಬಹುದು, ಇಲ್ಲ ಸೋರಲೂ ಬಹುದು. ನೆಲಮಹಡಿಯ ಟಾಯ್ಲೆಟ್ ಆದರೆ ಪಾಯದವರೆಗೂ ನೀರು ಸೋರಿಹೋಗಬಹುದು. ಹಾಗಾಗಿ ಕೆಲವಾರು ವರ್ಷಕ್ಕೆ ಒಮ್ಮೆ ಯಾದರೂ ಟೈಲ್ಸ್‌ಗಳ ಮಧ್ಯೆ ಮರು ಸೀಲ್ ಮಾಡಿ. ಹೀಗೆ ಮಾಡುವುದರ ಮೂಲಕ ಕಟ್ಟಡದ ಆಯಸ್ಸೂ ಕೂಡ ಹೆಚ್ಚುತ್ತದೆ. ಬಹುತೇಕ ಕಟ್ಟಡಗಳಲ್ಲಿ ಮೊದಲು ಹಾಳಾಗುವುದೇ ಟಾಯ್ಲೆಟ್ ಬಾತ್‌ರೂಮ್ ಭಾಗಗಳು!
ಕೀಲು ಕೀರಲು
ನಮ್ಮ ಮನೆಗಳಿಗೆ ದಪ್ಪ ದಪ್ಪದ ಬಾಗಿಲುಗಳನ್ನು ಹಾಕಿ ಬಲವಾದ ಬೀಗ ಜಡಿದರೂ ಅದರ ಶಕ್ತಿ ಅಡಗಿರುವುದು ಕೀಲಿಗೆ ಹಾಕಿದ ಸಣ್ಣ ಕಂಬಿಯ ಮೇಲೆ. ಇದಕ್ಕೆ ನೀರು ತಾಗಿದರೆ ಇಲ್ಲವೇ ತೇವಾಂಶವಿರುವ ಪ್ರದೇಶದಲ್ಲಿ ತುಕ್ಕು ಹಿಡಿಯುವ ಸಾಧ್ಯತೆಯಿರುತ್ತದೆ. ಕೀಲಿಗೆ ಬಣ್ಣ ಬಳಿದರೂ ಅದು ತಿರುಗುವ ಕಾರಣ ಅದು ಬಹುದಿನ ನಿಲ್ಲುವುದಿಲ್ಲ. ಹಾಗಾಗಿ ನಿಮ್ಮ ಮನೆಯ ಕೀಲು ಕೀರಲು ಶಬ್ದ ಹೊರಡಿಸಲು ಶುರುಮಾಡಿದರೆ, ಸ್ವಲ್ಪ ಕೀಲೆಣ್ಣೆಯನ್ನು ಹಾಕಲು ಮರೆಯದಿರಿ.
ಕೆಲಕಾಲ ಮುಚ್ಚಟ್ಟ ಬಾಗಿಲು ಅದರಲ್ಲೂ ಕಿಟಕಿಗಳ ಹೊರಗೆ ಮಳೆ ಬಿಸಿಲಿಗೆ ತೆರೆದುಕೊಂಡ ಕೀಲುಗಳಿಗೆ ಬಹುಬೇಗ ಕಿಲುಬು ಹಿಡಿಯುತ್ತದೆ. ಕೆಲವೊಮ್ಮೆ ತೆರೆಯಲು ಕಷ್ಟವಾಯಿತೆಂದು ಬಲಪ್ರಯೋಗಿಸಿದರೆ, ಕೀಲೇ ಕಿತ್ತುಬರುವುದೂ ಉಂಟು. ಹಾಗಾಗಿ ಆಗಾಗ ಸ್ವಲ್ಪ ಕೀಲೆಣ್ಣೆಯನ್ನು ಹಾಕಲು ಮರೆಯಬೇಡಿ. ಅದರಲ್ಲೂ ಸ್ಟೀಲ್ ಕಿಟಕಿಗಳನ್ನು ಬಳಸಿದರೆ ಸ್ವಲ್ಪ ಹೆಚ್ಚಿಗೇನೇ ಕಾಳಜಿ ವಹಿಸಬೇಕಾಗುತ್ತದೆ.
ಬಿಡುವಿಲ್ಲದ ಈ ದಿನಗಳಲ್ಲಿ ಎಲ್ಲರಿಗೂ ಅವರದೇ ಅದ ಕೆಲಸಕಾರ್ಯಗಳಿರುತ್ತವೆ. ಆದರೆ ಸ್ವಲ್ಪ ಬಿಡುವುಮಾಡಿಕೊಂಡು ನಮ್ಮ ಜೀವನದ ಬಹು ಮುಖ್ಯ ಗಳಿಕೆ, ಉಳಿತಾಯದ ಪ್ರತೀಕ ಹಾಗೂ ನೆಮ್ಮದಿಯ ತಾಣದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಮುಖ್ಯ!
ಹೆಚ್ಚಿನ ಮಾಹಿತಿಗೆ: 9844132826