ವೈ.ಜಿ.ಮುರಳೀಧರ | Feb 10, 2013
ಪಾಲಿಸಿ ನೀಡುವ ಕಂಪನಿ ಯಾವುದೇ ಸಮಯದಲ್ಲಾದರೂ ನಿಮ್ಮ ಪಾಲಿಸಿಯನ್ನು ರದ್ದುಗೊಳಿಸಬಹುದು. ನೀವು ಸತತವಾಗಿ ಯಾವುದೇ ವಿಳಂಬವಿಲ್ಲದೆ ಪ್ರೀಮಿಯಂ ಹಣ ಪಾವತಿಸುತ್ತಿದ್ದರೂ ಅದು ಮುಖ್ಯವಲ್ಲ. ಪಾಲಿಸಿ ಮುಂದುವರಿಸಿಕೊಂಡು ಹೋಗುವುದು ಅಥವಾ ಮಧ್ಯದಲ್ಲೇ ಪಾಲಿಸಿಯನ್ನು ಹಿಂಪಡೆದು ಉಳಿದ ಹಣವನ್ನು ನಿಮಗೆ ಮರುಪಾವತಿ ಮಾಡುವ ಅಧಿಕಾರ ವಿಮಾ ಕಂಪನಿಗೆ ಇದೆ. ಅನೇಕ ಗ್ರಾಹಕರಿಗೆ ಈ ವಿಷಯ ತಿಳಿದಿರಲಾರದು.
ಒಮ್ಮೆ ವಿಮೆ ಪಾಲಿಸಿ ತೆಗೆದುಕೊಂಡರೆ ಅದಕ್ಕೆ ಸಲ್ಲಿಸಬೇಕಾದ ಪ್ರಿಮಿಯಂ ಸಲ್ಲಿಸುತ್ತಿದ್ದರೆ ನನ್ನ ಜವಾಬ್ದಾರಿ ಮುಗಿಯಿತು ಎಂದು ನೀವು ನಂಬಿದ್ದರೆ ಅದು ನಿಮ್ಮ ತಪ್ಪು ಗ್ರಹಿಕೆ. ಕಾರಣ ಪಾಲಿಸಿ ನೀಡುವ ಕಂಪನಿ ಯಾವುದೇ ಸಮಯದಲ್ಲಾದರೂ ನಿಮ್ಮ ಪಾಲಿಸಿಯನ್ನು ರದ್ದುಗೊಳಿಸಬಹುದು. ನೀವು ಸತತವಾಗಿ ಯಾವುದೇ ವಿಳಂಬವಿಲ್ಲದೆ ಪ್ರೀಮಿಯಂ ಹಣ ಪಾವತಿಸುತ್ತಿದ್ದರೂ ಅದು ಮುಖ್ಯವಲ್ಲ. ಪಾಲಿಸಿ ಮುಂದುವರಿಸಿಕೊಂಡು ಹೋಗುವುದು ಅಥವಾ ಮಧ್ಯದಲ್ಲೇ ಪಾಲಿಸಿಯನ್ನು ಹಿಂಪಡೆದು ಉಳಿದ ಹಣವನ್ನು ನಿಮಗೆ ಮರುಪಾವತಿ ಮಾಡುವ ಅಧಿಕಾರ ವಿಮಾ ಕಂಪನಿಗೆ ಇದೆ. ಅನೇಕ ಗ್ರಾಹಕರಿಗೆ ಈ ವಿಷಯ ತಿಳಿದಿರಲಾರದು. ಎರಡು ವರ್ಷಗಳ ಹಿಂದೆ ರಾಷ್ಟ್ರೀಯ ಆಯೋಗ ಈ ರೀತಿಯ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಿ, ವಿಮೆ ಕಂಪನಿಯ ಅಧಿಕಾರವನ್ನು ಎತ್ತಿ ಹಿಡಿದಿದೆ.
ಕೀರ್ತನ್‌ಗೊàಂಡ್ ಎಂಬುವವರು ಬಿಲಾಯ್ ಸ್ಟೀಲ್ ಪ್ಲಾಂಟ್‌ನಲ್ಲಿ ಕೆಲಸಮಾಡುತ್ತಿದ್ದರು. ಅವರು ಓರಿಯಂಟಲ್ ಇನ್ಷೊರೆನ್ಸ್ ಕಂಪನಿಯಿಂದ ಐಎನ್‌ಟಿಯುಸಿ ಮೂಲಕ ಜನತಾ ಆಕ್ಸಿಡೆಂಟ್ ಪಾಲಿಸಿ ತೆಗೆದುಕೊಂಡಿದ್ದರು. ಪಾಲಿಸಿಯು ಜನವರಿ 1999ರಿಂದ 2011 ರವರೆಗೆ ಚಾಲ್ತಿಯಲ್ಲಿತ್ತು. ಅವರು ಜುಲೈ 2006ರಲ್ಲಿ ನಿಧನರಾದರು. ಅವರ ವಾರಸುದಾರರು ವಿಮೆ ಕಂಪನಿಗೆ ಅರ್ಜಿ ಸಲ್ಲಿಸಿ ಪಾಲಿಸಿಗೆ ಬರಬೇಕಾದ ಮೊತ್ತವನ್ನು (ರೂ.5 ಲಕ್ಷ) ನೀಡುವಂತೆ ಕೋರಿಕೆ ಸಲ್ಲಿಸಿದರು. ಆದರೆ ವಿಮೆ ಕಂಪನಿಯು ಮೊತ್ತವನ್ನು ಬಿಡುಗಡೆ ಮಾಡದೆ, ಪಾಲಿಸಿ ಚಾಲ್ತಿಯಲ್ಲಿ ಇಲ್ಲವೆಂದು ಅದನ್ನು ರದ್ದುಗೊಳಿಸಲಾಗಿದೆ ಎಂಬ ಕಾರಣ ನೀಡಿತು. ಇದನ್ನು ಪ್ರಶ್ನಿಸಿ ವಾರಸುದಾರರು ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರು ಸಲ್ಲಿಸಿದರು. ವಿಚಾರಣೆ ಸಂದರ್ಭದಲ್ಲಿ ವಿಮೆ ಕಂಪನಿಯು ತನ್ನ ವಾದವನ್ನು ಮಂಡಿಸಿ, ಪಾಲಿಸಿಯನ್ನು ಬಹಳ ಹಿಂದೆ ರದ್ದುಗೊಳಿಸಿರುವುದಾಗಿ ತಿಳಿಸಿತು. ಜೊತೆಗೆ ಪಾಲಿಸಿ ರದ್ದುಪಡಿಸಿರುವ ಬಗ್ಗೆ ಪಾಲಿಸಿದಾರರಿಗೆ ನೋಂದಾಯಿತ ಅಂಚೆ ಮೂಲಕ ತಿಳಿಸಲಾಗಿದೆ ಎಂದು ಹೇಳಿಕೆ ನೀಡಿತು.
ವಿಮೆ ಕಂಪನಿಯು ಮತ್ತೂಂದು ಅಂಶವನ್ನು ವೇದಿಕೆಯ ಗಮನಕ್ಕೆ ತಂದಿತು. ವಿಮೆ ಪಾಲಿಸಿಯ ನಿಯಮ 5ರ ಪ್ರಕಾರ ಪಾಲಿಸಿಯನ್ನು ಯಾವಾಗಲಾದರು ರದ್ದುಪಡಿಸುವ ಅಧಿಕಾರ ಕಂಪನಿಗೆ ಇರುತ್ತದೆ. ಅದರ ಪ್ರಕಾರ ಪಾಲಿಸಿಯನ್ನು ರದ್ದುಗೊಳಿಸಲಾಗಿದೆ. ಪಾಲಿಸಿಯನ್ನು ರದ್ದುಗೊಳಿಸಿದ ನಂತರ ಪಾಲಿಸಿದಾರರು ನಿಧನರಾಗಿರುವ ಕಾರಣ ಅವರಿಗೆ ಯಾವುದೆ ಹಣ ನೀಡಲು ಸಾಧ್ಯವಿಲ್ಲ ಎಂದು ಕಂಪನಿ ತನ್ನ ವಾದ ಮಂಡಿಸಿತು. ಆದರೆ ಜಿಲ್ಲಾ ವೇದಿಕೆಯು ವಿಮೆ ಕಂಪನಿಯ ವಾದವನ್ನು ಒಪ್ಪಲಿಲ್ಲ. ಪಾಲಿಸಿ ಪ್ರಕಾರ ನಿಧನರಾದವರಿಗೆ ಸೇರಬೇಕಾದ್ದ ಮೊತ್ತವನ್ನು ಅವರ ವಾರಸುದಾರರಿಗೆ ನೀಡಬೇಕೆಂದು ತೀರ್ಪು ನೀಡಿತು. ವಿಮೆ ಕಂಪನಿಯು ಇದನ್ನು ರಾಜ್ಯ ಆಯೋಗದಲ್ಲಿ ಪ್ರಶ್ನಿಸಿತು. ರಾಜ್ಯ ಆಯೋಗವು ವಿಮೆ ಕಂಪನಿಯ ಮೇಲ್ಮನವಿಯನ್ನು ಪುರಸ್ಕರಿಸಿ, ಜಿಲ್ಲಾ ವೇದಿಕೆಯ ತೀರ್ಪನ್ನು ಅನೂರ್ಜಿತಗೊಳಿಸಿತು. ವಿಮೆ ಪಾಲಿಸಿಯನ್ನು ಪಾಲಿಸಿದಾರರು ಬದುಕಿರುವಾಗಲೇ ರದ್ದುಗೊಳಿಸಿ, ಅವರು ಪಾವತಿಸಿದ್ದ ಪ್ರೀಮಿಯಮ್ ಹಣವನ್ನು ಮರುಪಾವತಿಸಲಾಗಿದೆ. ಆದ್ದರಿಂದ ಈಗ ಪಾಲಿಸಿ ಹಣವನ್ನು ಕೇಳುವುದು ಸರಿಯಲ್ಲ ಎಂದು ಆಯೋಗ ತೀರ್ಪು ನೀಡಿತು.
ಪಾಲಿಸಿದಾರರ ವಾರಸುದಾರರು ಇದನ್ನು ಪ್ರಶ್ನಿಸಿ ರಾಷ್ಟ್ರೀಯ ಆಯೋಗದಲ್ಲಿ ಮರು ಮೇಲ್ಮನವಿ ಸಲ್ಲಿಸಿದರು. ಪಾಲಿಸಿಯನ್ನು ರದ್ದುಪಡಿಸಿರುವ ವಿಷಯವನ್ನು ತಮ್ಮ ಖಾಯಂ ನಿವಾಸದ ವಿಳಾಸಕ್ಕೆ ಕಳುಹಿಸಿಲ್ಲದ ಕಾರಣ ವಿಮೆ ಕಂಪನಿ ಪಾಲಿಸಿ ಹಣವನ್ನು ನೀಡಬೇಕೆಂದು ವಾದ ಮಂಡಿಸಿದರು. ಆದರೆ ರಾಷ್ಟ್ರೀಯ ಆಯೋಗ ಇದನ್ನು ಒಪ್ಪಲಿಲ್ಲ. ಪಾಲಿಸಿದಾರರು ನಿಧನರಾದ ಸಂದರ್ಭದಲ್ಲಿ ಪಾಲಿಸಿ ಚಾಲ್ತಿಯಲ್ಲಿರಲಿಲ್ಲದ ಕಾರಣ ವಿಮೆ ಕಂಪನಿ ಆ ಮೊತ್ತವನ್ನು ಪಾಲಿಸಿದಾರರಿಗೆ ನೀಡಿಲ್ಲ. ಇದರಲ್ಲಿ ಯಾವುದೆ ದೋಷ ಇಲ್ಲವೆಂದು ಆಯೋಗ ಅಭಿಪ್ರಾಯಪಟ್ಟಿದೆ. ಜಿಲ್ಲಾ ವೇದಿಕೆಯ ತೀರ್ಪನ್ನು ತಿರಸ್ಕರಿಸಿ, ರಾಜ್ಯ ಆಯೋಗದ ತೀರ್ಪನ್ನು ಸರಿ ಎಂದು ಹೇಳಿದೆ. ಪಾಲಿಸಿ ಮುಂದುವರಿಸುವುದು ಅಥವಾ ರದ್ದುಗೊಳಿಸುವುದು ವಿಮೆ ಕಂಪನಿಯ ಹಕ್ಕು ಎಂಬುದನ್ನು ಮರೆಯಬೇಡಿ.