ಶಿವಾನಂದ ಕಳವೆ | Feb 10, 2013
ಒಂದು ಎಕರೆ ಗುಡ್ಡವನ್ನು ಕಾಡಾಗಿ ನೋಡುವುದು ಹೇಗೆ? ಹುಲ್ಲಿನಿಂದ ಮರಗಿಡಗಳು ಬೆಳೆಯುವುದು ಹೇಗೆ? ಉತ್ತರ ಹುಡುಕುತ್ತ 8 ವರ್ಷ ಕಳೆದಿದೆ. ಹಸಿರು ಅಭಿವೃದ್ಧಿಗೆ ಕಾಡು ಹಂದಿಯ ಪ್ರಮಾಣ ಪತ್ರ ಈಗ ಲಭಿಸಿದೆ!
ಕಾಡೇ ನದಿಗಳ ತಾಯಿ, ನದಿ ನಾಡಿನ ಜೀವನಾಡಿ ಎಂದು ಜಲಸಂರಕ್ಷಣೆಯ ಭಾಷಣ ಬಿಗಿಯುತ್ತ 15 ವರ್ಷವಾಗಿದೆ. ಕಲಿತ ಪಾಠಗಳನ್ನು ಮಣ್ಣಿಗೆ ಇಳಿಸುವ ಉತ್ಸಾಹದಲ್ಲಿ ಸೊಪ್ಪಿನ ಬೆಟ್ಟದಲ್ಲಿ ಜಲಕೊಯ್ಲಿನ ಮಾದರಿ ನಿರ್ಮಿಸಿದೆ. ಓಡುವ ನೀರು ಹಿಡಿದ ಬಳಿಕ ಮಲೆನಾಡಿನ ಗುಡ್ಡ ನಾಲ್ಕು ವರ್ಷಕ್ಕೆ ನೀರ ನೆಮ್ಮದಿಯ ದಾರಿ ತೋರಿಸಿದೆ. ಇದು ಇನ್ನೊಂದು ಅರ್ಥದಲ್ಲಿ ನೀರಿಂಗಿಸಿದರೆ ಅಂತರ್ಜಲ ಹೇಗೆ ಹೆಚ್ಚುತ್ತದೆಂದು ಹೇಳುವ ಧೈರ್ಯ ನೀಡಿದೆ. 14 ಅಡಿ ಆಳದ ನೂತನ ಕೆರೆ ಬೇಸಿಗೆಯಲ್ಲಿ ದಿನಕ್ಕೆ 25-30 ಸಾವಿರ ಲೀಟರ್ ನೀರುಒದಗಿಸುತ್ತಿದೆ. ಗುಡ್ಡದ ಇಳಿಜಾರಿನಲ್ಲಿ ಅಗಳ, ಹೊಂಡಗಳನ್ನು ನಿರ್ಮಿಸಿ ಓಡುವ ನೀರನ್ನು ಭೂಮಿಯಲ್ಲಿ ಇಂಗಿಸುವಾಗ ಮರಗಿಡಗಳ ಮಾತು ಮುಖ್ಯವಾಗುತ್ತದೆ.
ಮೇಲ್ಮಣ್ಣು ಕೊಚ್ಚಿ ಹೋಗಿದೆ, ಕಲ್ಲು ಹರಳುಗಳು ನೆಲ ಆಳುತ್ತಿವೆ. ಚೋಟುದ್ದದ ಹೊಟ್ಟು ಕರಡ ಬೆಳೆಯುತ್ತಿವೆ. ಮುಳ್ಳುಕಂಟಿಗಳ ವಿಕಾರ ನಗೆ. ದಪ್ಪತೊಗಟೆಯ ಬೆಂಕಿಸಹಿಷ್ಣು ಗುಣದ ಕೌಲು, ಹಿಪ್ಪೆ, ತೊಬರು, ಬಿಕ್ಕೆ, ಈಚಲು ಸಸ್ಯ ಸಂತೆ. ಇರುವ ಸಸ್ಯಗಳು ಬೆಳೆಯುತ್ತಿಲ್ಲ, ಹೊಸ ಸಸ್ಯಗಳು ಜನಿಸುತ್ತಿಲ್ಲ. ಇಂಥ ಗುಡ್ಡವನ್ನು ಕಾಡಾಗಿ ಪರಿವರ್ತಿಸುವದು ಹೇಗೆ? ಪ್ರಶ್ನೆ ಎದುರಾಯಿತು. 8 ವರ್ಷ ಹಿಂದೆ ಒಂದು ಎಕರೆಯಲ್ಲಿ ಪುಟ್ಟ ಪ್ರಯೋಗ ಆರಂಭವಾಯಿತು. ಜಾನುವಾರು ಮೇವು ನಿಷೇಧ, ಹುಲ್ಲು ಕಟಾವಿಗೆ ತಡೆ,ಸೊಪ್ಪು,ಉರುವಲು ಸಂಗ್ರಹವನ್ನೂ ಸಂಪೂರ್ಣ ನಿಲ್ಲಿಸಲಾಯಿತು. ಬಳ್ಳಿ,ಮುಳ್ಳುಕಂಟಿಯನ್ನೂ ಕಡಿಯಲಿಲ್ಲ, ತರಗೆಲೆಗಳನ್ನೂ ಸಂಗ್ರಹಿಸಲ್ಲ. ವಿಶೇಷವೆಂದರೆ ಹೊಸದಾಗಿ ಅಲ್ಲಿ ಯಾವ ಸಸಿಯನ್ನೂ ನೆಡಲಿಲ್ಲ. ಒಟ್ಟಿನಲ್ಲಿ ಬಳಕೆಯ ಒತ್ತಡದಿಂದ ದೂರವಿಟ್ಟು ಸಸ್ಯಗಳ ಸಹಜ ಬೆಳವಣಿಗೆ ಗಮನಿಸುವುದು ಮುಖ್ಯ ಉದ್ದೇಶವಾಗಿತ್ತು. ಒಂದಾದ ನಂತರ ಒಂದು ಸಸ್ಯಗಳು ಸೇರುತ್ತ ಕಾಡು ಹೇಗೆ ಕೂಡುತ್ತದೆಂದು ನೋಡಲು ಇಂಥ ಸಣ್ಣ ಜಾಗ ಬಹಳ ಸೂಕ್ತ. ಮಾನವ ಪ್ರವೇಶ ಕಡಿಮೆಮಾಡಿದ ಬಳಿಕ ಬದಲಾವಣೆಗಳು ಘಟಿಸಿದವು. ಆಹಾರ,ಆವಾಸದ ಮೂಲಕ ಪಾತರಗಿತ್ತಿಗಳು ಸೋಜಿಗದ ವರ್ಣಲೋಕದಲ್ಲಿ ಸಸ್ಯಲೋಕ ಪರಿಚಯಿಸುವ ಸಾಮರ್ಥ್ಯ ಪಡೆದಿವೆ. ಯಾವತ್ತೂ ಅರಣ್ಯ ಪಕ್ಷಿ$,ಕೀಟಗಳ ಮೂಲಕ ಸ್ಥಿತಿಗತಿ ಬಿತ್ತರಿಸುತ್ತ ನೋವು ನಲಿವು ತೋಡಿಕೊಳ್ಳುತ್ತವೆ. ಹೀಗಾಗಿ ಅಗಸ್ಟ್ -ಸಪ್ಟೆಂಬರ್ ಸಮಯದಲ್ಲಿ ಯಾವೆಲ್ಲ ಚಿಟ್ಟೆಗಳು ಇಲ್ಲಿ ಹಾರಾಡುತ್ತಿವೆ? ಚಿತ್ರ ದಾಖಲಿಸುತ್ತ ಕಲಿಕೆ ಆರಂಭವಾಯ್ತು.
ಮಳೆಗಾಲದಲ್ಲಿ ಹಸಿರಾಗಿ ಬೆಳೆದು ಬೇಸಿಗೆಯಲ್ಲಿ ಕಾಡು ಹುಲ್ಲು ನೆಲಕ್ಕೆ ಮಲಗುತ್ತದೆ. ಇರುವೆಗಳು ಹುಲ್ಲು ಬೀಜ ಸಂಗ್ರಹಿಸಿ ಗೂಡಿಗೆ ಸಾಗಿಸುತ್ತ ಆಹಾರ ದಾಸ್ತಾನು ಕಾರ್ಯದಲ್ಲಿ ನಿರತವಾಗುತ್ತವೆ. ಹುಲ್ಲುಕಡ್ಡಿಗಳನ್ನು ಗೆದ್ದಲು ತಿಂದವು. ಕಾರೆ,ಪರಿಗೆ, ಗೊಣಗಲು ಮುಳ್ಳುಕಂಟಿಗಳು ಉತ್ಸಾಹದಲ್ಲಿ ಬೆಳೆದವು. ಹುಲ್ಲಿನ ಆವರಣಕ್ಕೆ ಬಚ್ಚಲು ಬಳ್ಳಿ, ಸೊಗದೇ ಬೇರು, ಶತಾವರಿ, ಹೆಗ್ಗರ್ಣೆ, ಮಧುನಾಶಿನಿ, ಭೂತಕಣ್ಣಿ ಮುಂತಾದ ಬಳ್ಳಿಗಳು ಸುತ್ತಿಕೊಂಡವು. ಕುಮುಸಲು, ಕಾಡುಮಲ್ಲಿಗೆ ಲತೆಗಳು ತಲೆಎತ್ತಿ ನರ್ತಿಸಿದವು. ಬೇಸಿಗೆಯಲ್ಲೂ ಹಸಿರಾಗಿರುವ ಕಹಿಗಡ್ಡೆ ಹುಲ್ಲಿನ ಪ್ರಮಾಣ ಹೆಚ್ಚಿತು. ನೆಲದಲ್ಲಿ ಬೆಳೆದ ಹುಲ್ಲು ಕಟಾವಾಗದೇ ಪುನಃ ಅದೇ ಮಣ್ಣಿಗೆ ಮಲಗಿದಾಗ ಇಲ್ಲಿ ಮನುಷ್ಯ ಬರುವದಿಲ್ಲವೆಂದು ನವಿಲಿಗೆ ಖಾತ್ರಿಯಾಯ್ತು. ಎರಡು ನವಿಲುಗಳು ತತ್ತಿಯಿಟ್ಟು ಮರಿ ಬೆಳೆಸಿದವು. ಮುಂದೆ ಹಾವಿನ ಆಗಮನ. ಎರಡು ವರ್ಷ ಹುಲ್ಲುಹಾಸಿನಲ್ಲಿ ಸಂತಾನೋತ್ಪತ್ತಿ ನಡೆಸಿದ ನವಿಲುಗಳು ನೆಲೆ ಪರಿವರ್ತಿಸಿಕೊಂಡವು. ಒಂದೆರಡು ವರ್ಷ ಮನೆಯಂತೆ ಇದ್ದವು ಈಗ ನೆಂಟರಂತೆ ಆಗಾಗ ಬಂದು ಹೋಗುತ್ತಿವೆ. ಹಾವಿನ ಪ್ರವೇಶ ಇವುಗಳ ಬದುಕಿಗೆ ಅಡಚಣೆಯುಂಟು ಮಾಡಿರಬಹುದು. ಕಾಡಿನ ನೆಲೆಯನ್ನು ಮನುಷ್ಯ ಪ್ರವೇಶಿಸದಿದ್ದರೆ ಅಲ್ಲಿ ಯಾರು ಬದುಕಬೇಕೆಂದು ಪರಿಸರ ನೋಡಿ ಪ್ರಾಣಿಗಳು ನಿರ್ಧರಿಸುತ್ತದೆ.
ಕುಂಟುನೇರಳೆ ಗಿಡದ ಸಂಧಿಯಲ್ಲಿ ಒಂಟಿ ಹಂದಿ ಯೊಂದು 4 ವರ್ಷ ಈಚೆಗೆ ಬೇಸಿಗೆಯಲ್ಲಿ ಕಾಯಂ ಠಿಕಾಣಿ ಹೂಡುತ್ತಿರುವುದನ್ನು ಗಮನಿಸಿದ್ದೇನೆ. ನೆಲ್ಲಿ, ಗೋಡಂಬಿ ಗಿಡಗಳನ್ನು ಕೋಡಿನಿಂದ ಉಜ್ಜಿ ತೊಗಟೆ ಕೆತ್ತಿದ ಗಂಡು ಜಿಂಕೆಗಳು ತಮ್ಮ ಇರುವಿಕೆ ಸಾಬೀತು ಪಡಿಸಿವೆ. ಅಲ್ಲಲ್ಲಿ ಬಿದ್ದ ಹಿಕ್ಕೆಗಳು ಕಾಡುಕುರಿ, ಮೊಲ, ಜಿಂಕೆಗಳು ಇಲ್ಲಿಗೆ ಬಂದು ಹೋದ ಸಾಕ್ಷ್ಯ ಸಾರುತ್ತಿವೆ. ಗಿಡುಗ, ನವಿಲಿನ ಗರಿಗಳು ದೊರೆತಿವೆ. ಕಳೆದ ವರ್ಷ ಇಲ್ಲಿನ ಹಳೆಯ ಗೋಡಂಬಿ ಮರದಡಿಬಿದ್ದ ಒಂದೂ ಬೀಜಗಳನ್ನು ಆರಿಸಿರಲಿಲ್ಲ, ಅವನ್ನು ಜಾಣತನದಿಂದ ಒಡೆದು ತಿಂದದ್ದು ಮುಳ್ಳುಹಂದಿಗಳೆಂದು ಖಾತ್ರಿಯಾಗಿದೆ. ಉಡ,ಮುಂಗುಸಿ ಆಗಾಗ ನೋಡಲು ಸಿಕ್ಕಿವೆ. ಈ ವರ್ಷ ಒಂದು ಜಿಂಕೆ ಇಲ್ಲಿಯೇ ಆಶ್ರಯಿಸಿ ಮರಿಗೆ ಜನ್ಮ ನೀಡಿ ಬಾಣಂತನ ಪೂರೈಸಿಕೊಂಡು ಸುರಕ್ಷಿತ ಬದುಕು ಕಂಡುಕೊಂಡಿದೆ. ಈಗಲೂ ದಿನದ ಕೆಲ ಹೊತ್ತು ಇಲ್ಲಿಯೇ ಠಿಕಾಣಿ ಹೂಡುವುದನ್ನು ಕಂಡಿದ್ದೇನೆ. ತಾರಿಕಾಯಿ, ಪರಿಗೆ, ಸಳ್ಳೆ, ನೇರಲೆ, ಮುರುಗಲು, ನೆಲ್ಲಿ ಮುಂತಾದ ಫಲಗಳು ವರ್ಷದ ವಿವಿಧ ದಿನಗಳಲ್ಲಿ ದೊರೆಯುತ್ತವೆ. ಮನುಷ್ಯರಿಗೆ ಅಗತ್ಯವಾದ ನಾಟಾಯೋಗ್ಯ ಮರ 8 ವರ್ಷಮಿತಿಯಲ್ಲಿ ಬೆಳೆಯುವುದಿಲ್ಲ. ಆದರೆ ಪ್ರಾಣಿಗಳ ವಾಸಕ್ಕೆ ಯೋಗ್ಯ ಪರಿಸರ ನಿರ್ಮಾಣವಾಗಿದೆ. ನಮ್ಮ ಕೃಷಿ ವಲಯದ ಸುತ್ತಲಿನ ಅರಣ್ಯದಲ್ಲಿ ಮಿತಿಮೀರಿದ ಹಸ್ತಕ್ಷೇಪಗಳಿಂದ ನೆಲಹಂತದ ಸಸ್ಯಗಳು ಕತ್ತಿಯ ಪ್ರಹಾರಕ್ಕೆ ತುತ್ತಾಗುತ್ತವೆ. ಇದರಿಂದಾಗಿ ನೆಲಹಂತದಲ್ಲಿ ಬದುಕುವ ಹಂದಿ,ಜಿಂಕೆ, ಮೊಲ, ನವಿಲು ಮುಂತಾದ ಪ್ರಾಣಿಗಳಿಗೆ ತೊಂದರೆಯಾಗಿದೆ.
ಬೋಳು ಗುಡ್ಡಗಳಲ್ಲಿ ಜಲಸಂರಕ್ಷಣೆ, ಬೆಂಕಿ ರಕ್ಷಣೆ ಕಾರ್ಯಗಳಿಂದ ಹಸಿರು ಹೊಸ ಉತ್ಸಾಹದಲ್ಲಿ ಚಿಗುರಿದೆ. ಕಾಡಿನ ಕಥೆ ಅರಿಯಲು ಜನ ಬರುತ್ತಿರುತ್ತಾರೆ. ಗುಡ್ಡದ ತುದಿಯಲ್ಲಿ ಸುತ್ತುವಾಗ ಅವರಿಗೆಲ್ಲ ಮುದ್ದಾಂ ಹಂದಿಯ ನೆಲ ಉಳುಮೆಯ ದರ್ಶನ ಮಾಡಿಸುತ್ತೇನೆ. ಕಾಡಿನ ಹುಲ್ಲು,ತರಗೆಲೆಗಳು ಕೊಳೆತು ಮೇಲ್ಮಣ್ಣು ಸತ್ವಯುತವಾದಾಗ ಎರೆಹುಳುಗಳ ಸಂಖ್ಯೆ ಹೆಚ್ಚಾಗುತ್ತದೆ. ಇವನ್ನು ಆಹಾರವಾಗಿ ಬಳಸುವ ಹಂದಿಗಳು ಮಣ್ಣಿನಲ್ಲಿ ಅವಿತ ಜೀವಿಗಳನ್ನು ಹುಡುಕುತ್ತ ಬರುತ್ತವೆ. ಭೂಮಿಯ ಒಳಗಿನ ಜೀವಲೋಕ ಪತ್ತೆಗೆ ಅವು ಭೂಮಿ ಬಗೆಯುತ್ತವೆ. ಗದ್ದೆಬಯಲು,ಅಡಿಕೆ ತೋಟ, ನದಿದಂಡೆ, ನಿತ್ಯ ಹರಿದ್ವರ್ಣ ಕಾಡು,ಜೌಗು ನೆಲೆಗಳಲ್ಲಿ ಯಾವತ್ತೂ ಅಗೆಯುತ್ತವೆ. ಈಗ ಹಂದಿ ಮಣ್ಣು ಉಳುಮೆ ಮಾಡುತ್ತಿರುವ ಕ್ಷೇತ್ರ ಈ ಗುಡ್ಡದ ನೆಲೆಗೆ ವರ್ಗಾವಣೆಯಾಗಿದ್ದು ವಿಶೇಷ, ಇದು ಹಸಿರು ಲೋಕದ ಹೊಸ ಬದಲಾವಣೆ ಹೇಳುತ್ತದೆ. ಮಣ್ಣಿನ ಶಕ್ತಿ ಹೆಚ್ಚಿದಂತೆಲ್ಲ ಸಸ್ಯದ ಆರೋಗ್ಯ ಸುಧಾರಿಸುತ್ತದೆ. ನೀರು ಹಿಡಿಯುವ ಸಾಮರ್ಥ್ಯ ಅಧಿಕವಾಗುತ್ತದೆ.
ಕಾಡು ಗಿಡಮರಗಳ ಸಂಧಿಯಲ್ಲಿ ಮಣ್ಣಿನ ಅಗೆತದ ರೀತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಬಳ್ಳಿ ನೆಲೆಗಳ ಒಳಹೊಕ್ಕು ಹುಲ್ಲು ಬುಡಗಳನ್ನು ಕಿತ್ತೆಸೆದು, ತರಗೆಲೆಗಳನ್ನು ಮೂತಿಯಲ್ಲಿ ದೂಡುತ್ತ ಹಂದಿರಾಯರು ಅಕ್ಕರೆಯ ಕೈಂಕರ್ಯ ನಡೆಸುತ್ತಾರೆ. ಕುಮುಸಲು ಹಿಂಡು, ಗೊಣಗಲು ಕಂಟಿ, ಈಚಲು, ಬಿಕ್ಕೆ ಗಿಡಗಳ ಬುಡಕ್ಕೆಲ್ಲ ಬೇಸಾಯ ಹಬ್ಬಿಸುವಂತೆ ಉಳುಮೆಯ ಕೆಲಸ ಕಾಣುತ್ತದೆ. ಮಳೆಗಾಲದ ಊಟಕ್ಕೆ ಇವಕ್ಕೆ ಭೂಗತ ಎರೆಹುಳು ಬೇಕು, ನೆಲತೆಂಗು ಸಸ್ಯದ ಗಡ್ಡೆ ತಿನ್ನಬೇಕು. ಹದಮಳೆ ಸುರಿದು ಆಹಾರ ಬೇಟೆಯ ಕೆಲಸ ಶುರುವಾದರೆ ನೇಗಿಲು ಹಿಡಿದ ರೈತರಂತೆ ಇವು ಗುಡ್ಡದಲ್ಲಿ ದುಡಿಯುತ್ತವೆ, ತಂಡತಂಡವಾಗಿ ಬೀಜ ಬಿತ್ತನೆಗೆ ಪೂರ್ವತಯಾರಿಯ ಕೆಲಸವನ್ನು ಮಳೆಗಾಲವಿಡೀ ನಡೆಸುತ್ತವೆ. ನಮಗೆ ನಿಸರ್ಗ ನೋಡುವ ಕಲೆ ಕರಗತವಾದರೆ ಹುಲ್ಲು,ಇರುವೆ,ಪಕ್ಷಿ$ ಮುಂತಾದ ಜೀವಲೋಕದ ಕಣ್ಣಲ್ಲಿ ಬದಲಾವಣೆಯ ಗತಿ ಅರಿಯಬಹುದು. ಸಸ್ಯ-ಪ್ರಾಣಿಗಳ ಸಂಬಂಧ ತಿಳಿಯಬಹುದು. ಕಾಡು ಸುತ್ತುತ್ತ ಸುತ್ತುತ್ತ ಈಗ ಒಂದು ಸಂಗತಿ ಅರ್ಥವಾಗಿದೆ, ಹಸಿರು ಅಭಿವೃದ್ಧಿ ಸಾಧನೆಗೆ ವಿಜಾnನಿಗಳ ತಜ್ಞ ವರದಿಗಳಿಗಿಂತ ಹಂದಿರಾಯರ ಹಸಿರು ಪ್ರಮಾಣ ಪತ್ರ ಬಹಳ ಕರಾರುವಕ್ಕಾಗಿರುವಂತೆ ಕಾಣುತ್ತಿದೆ. ಸೆಮಿನಾರುಗಳು ಕಾಂಕ್ರಿಟ್ ಲೋಕದಲ್ಲಿ ದಿನ ಕಳೆಯುವುದಿಲ್ಲ. ಜೀವನಪೂರ್ತಿ ಕಾಡಲ್ಲೇ ಉಳಿದಿದ್ದರಿಂದ ಅವಕ್ಕೆ ನೆಲನಂಬುವ ತಜ್ಞತೆ ಬಂದಿದೆ.