Udayavani | Feb 11, 2013
ಹಣ ಕೊಟ್ಟು ಲೈಂಗಿಕ ಕ್ರಿಯೆ ಖರೀದಿ ಕೂಡಾ ಗಂಭೀರ ಅಪರಾಧ
ಹೊಸ ಕಾನೂನಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಸಿದ್ಧತೆ
ವೇಶ್ಯಾಗೃಹ ನಡೆಸುವವರಿಗೂ ಕಠಿಣ ಶಿಕ್ಷೆ, ಭಾರೀ ದಂಡದ ಪ್ರಸ್ತಾಪ
ಸಂಪುಟ ಟಿಪ್ಪಣಿ ತಯಾರಿ, ಶೀಘ್ರವೇ ಕೇಂದ್ರ ಸಂಪುಟದಲ್ಲಿ ಚರ್ಚೆ
ನವದೆಹಲಿ: ಕೈತುಂಬಾ ದುಡ್ಡು, ಮೈ ತುಂಬಾ ಕಾಮ. ಎರಡನ್ನೂ ಕಳೆದುಕೊಳ್ಳಲು ವೇಶ್ಯಾಗೃಹಗಳಿಗೆ ಹೋಗುವವರು ಇನ್ನು ಈ ಚಟ ಕೈಬಿಡುವುದೊಳಿತು. ಏಕೆಂದರೆ ಈ ಚಟ ಇನ್ನು ಮುಂದೆ ಜೈಲು ಶಿಕ್ಷೆ ಜೊತೆಗೆ ಭಾರೀ ದಂಡ ಎರಡನ್ನೂ ಭರಿಸುವಂತೆ ಮಾಡಲಿದೆ! ಈ ಅಪರಾಧಕ್ಕೆ ಕನಿಷ್ಠ 3 ತಿಂಗಳಿನಿಂದ 5 ವರ್ಷಗಳ ವರೆಗೆ ಜೈಲು ಮತ್ತು 10 ಸಾವಿರ ರೂ.ನಿಂದ ಹಿಡಿದು 50 ಸಾವಿರ ರೂ.ವರೆಗೆ ದಂಡ ವಿಧಿಸಬಹುದಾಗಿದೆ.
ಹೌದು. ಲೈಂಗಿಕ ಸುಖ ಖರೀದಿ ಮಾಡುವುದನ್ನೂ ಕಾನೂನು ಬಾಹಿರ ಎಂದು ಪರಿಗಣಿಸಿ, ಇಂತಹ ಪ್ರಕರಣದ ದೋಷಿಗಳಿಗೆ ಕಠಿಣ ಶಿಕ್ಷೆಯ ಜೊತೆಗೆ ಭಾರೀ ದಂಡ ವಿಧಿಸುವ ಪ್ರಸ್ತಾಪವೊಂದನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿದ್ಧಪಡಿಸಿದೆ. ಈ ಕುರಿತು ಈಗಾಗಲೇ ಸಂಪುಟ ಟಿಪ್ಪಣಿ ಸಹ ಸಿದ್ಧಗೊಂಡಿದ್ದು, ಶೀಘ್ರವೇ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.
ನಿವೃತ್ತ ನ್ಯಾ. ಜೆ.ಎಸ್.ವರ್ಮಾ ನೇತೃತ್ವದ ಸಮಿತಿ ಇತ್ತೀಚಿಗೆ ನೀಡಿದ್ದ ವರದಿಯಲ್ಲಿನ ಅಂಶಗಳನ್ನು ಆಯ್ದುಕೊಂಡು ಸಿದ್ಧಪಡಿಸಿರುವ ಈ ಕಾನೂನು ಜಾರಿಗೆ ಬಂದರೆ, ವೇಶ್ಯಾಗೃಹಗಳಿಗೆ ಹೋಗುವವರು, ಇಲ್ಲವೇ ಹೋಟೆಲ್ ಅಥವಾ ಮನೆಯಲ್ಲೇ ವೇಶ್ಯೆಯೊಂದಿಗೆ ದೇಹ ಹಂಚಿಕೊಳ್ಳುವುದು ಸಹಾ ಅಪರಾಧವಾಗಲಿದೆ.
ಜೊತೆಗೆ ಮಕ್ಕಳು, ಮಹಿಳೆಯರನ್ನು ಇಂತಹ ಕೃತ್ಯಕ್ಕಾಗಿ ಅಪಹರಣ ಮಾಡುವುದು ಮತ್ತು ವೇಶ್ಯವಾಟಿಕೆ ತಾಣಗಳನ್ನು ನಡೆಸುವವರಿಗೂ 10 ವರ್ಷಕ್ಕಿಂತ ಮೇಲ್ಪಟ್ಟು ಅಥವಾ ಜೀವಾವಧಿ ಜೈಲು ಶಿಕ್ಷೆ ಜೊತೆಗೆ 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸುವ ಕಾನೂನನ್ನು ಸಂಪುಟ ಟಿಪ್ಪಣಿ ಒಳಗೊಂಡಿದೆ.
ಪ್ರಸಕ್ತ ಸ್ವೀಡನ್ ಮತ್ತು ನಾರ್ವೆ ದೇಶಗಳಲ್ಲಿ ಇಂತಹ ಕಾನೂನು ಜಾರಿಯಲ್ಲಿದ್ದು, ಅದರಿಂದ ಪ್ರಭಾವಿತಗೊಂಡಿರುವ ಕೇಂದ್ರ ಸರ್ಕಾರ ಈ ಕಾನೂನು ಜಾರಿಗೆ ಮುಂದಾಗಿದೆ.
ಏನೇನು ತಪ್ಪು?:
ವೇಶ್ಯಾವಾಟಿಕೆ ಗೃಹ, ಹೋಟೆಲ್, ವಾಹನ, ಸ್ವಂತ ಮನೆ ಅಥವಾ ಇನ್ಯಾವುದೇ ಸಾರ್ವಜನಿಕ ಅಥವಾ ಖಾಸಗೀ ಪ್ರದೇಶದಲ್ಲಿ ವೇಶ್ಯೆಯರೊಂದಿಗೆ ಯಾವುದೇ ವ್ಯಕ್ತಿ ದುಡ್ಡು ಕೊಟ್ಟು ಲೈಂಗಿಕ ಸುಖ ಪಡೆದುಕೊಳ್ಳುವುದು ಅಪರಾಧ.
ತಪ್ಪು ಮಾಡಿದವರಿಗೆ ಏನು ಶಿಕ್ಷೆ? ಎಷ್ಟು ದಂಡ?
1ನೇ ಬಾರಿ ಸಿಕ್ಕಿಬಿದ್ದರೆ 3 ತಿಂಗಳಿನಿಂದ 1 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 10,000 ರೂ.ನಿಂದ 20,000 ರೂ.ವರೆಗೆ ದಂಡ ಇಲ್ಲವೇ ಶಿಕ್ಷೆ ಮತ್ತು ದಂಡ ಎರಡೂ ಅನುಭವಿಸಬೇಕು
2ನೇ ಬಾರಿ ಸಿಕ್ಕಿಬಿದ್ದರೆ 1 ವರ್ಷದಿಂದ 5 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 20000 ರೂ.ನಿಂದ 50,000 ರೂ.ವರೆಗೆ ದಂಡ ಇಲ್ಲವೇ ಶಿಕ್ಷೆ ಮತ್ತು ದಂಡ ಎರಡನ್ನೂ ಅನುಭವಿಸಬೇಕು
ವೇಶ್ಯಾಗೃಹ ನಡೆಸುವವರಿಗೆ ಏನು ಶಿಕ್ಷೆ?
3 -5 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 50,000 ರೂ. ದಂಡ
ಮಹಿಳೆಯರ ಅಪಹರಣಕಾರರಿಗೆ ಏನು ಶಿಕ್ಷೆ? ಎಷ್ಟು ದಂಡ?
ಮೊದಲ ಬಾರಿ ಸಿಕ್ಕಿಬಿದ್ದರೆ 3 -5 ವರ್ಷ ಜೈಲು ಮತ್ತು 50,000 ರೂ. ದಂಡ
ಎರಡನೇ ಬಾರಿ ಸಿಕ್ಕಿಬಿದ್ದರೆ 7-14 ವರ್ಷ ಜೈಲು ಮತ್ತು 2 ಲಕ್ಷ ರೂ. ದಂಡ
ಮಕ್ಕಳ ಅಪಹರಣಕಾರರಿಗೆ ಏನು ಶಿಕ್ಷೆ? ಎಷ್ಟು ದಂಡ?
ಕನಿಷ್ಠ 10 ವರ್ಷ ಜೈಲು ಅಥವಾ ಜೀವಾವಧಿ ಶಿಕ್ಷೆ ಮತ್ತು 5 ಲಕ್ಷ ರೂ. ದಂಡ