Udayavani | Feb 15, 2013
ಮಲಾಲಾಳ ಪುತ್ಥಳಿಯೊಂದನ್ನು ಸ್ಥಾಪಿಸಬೇಕು ಎಂಬುದು ನನ್ನ ಎಂಟು ವರ್ಷದ ಮಗಳ ಅಭಿಪ್ರಾಯ. ಅದರ ಪಕ್ಕದಲ್ಲೊಂದು ಓದಿನ ಮನೆಯನ್ನೂ ನಿರ್ಮಿಸಬೇಕಂತೆ. ಆರು ವರ್ಷದ ಮಗಳು ಒಂದು ಪ್ರಶ್ನೆ ಕೇಳಿದಳು: 'ಮಲಾಲಾ ಬಳಿ ಸಾಕುನಾಯಿ ಅಥವಾ ಬೆಕ್ಕು ಇತ್ತೇ? ಇದ್ದರೆ ಅದನ್ನಾರು ನೋಡಿಕೊಳ್ಳುತ್ತಾರೆ? ಮಲಾಲಾಳ ಅಪ್ಪ ಅಮ್ಮ ಏನು ಮಾಡುತ್ತಾರೆ? ಅವರು ಅಳುತ್ತಿದ್ದಾರೆಯೇ?' ಅವರು ಖಂಡಿತ ಅಳುತ್ತಿದ್ದಾರೆ, ಆದರೆ ತಮ್ಮ ಮಗಳಿಗಾಗಿ ಅಲ್ಲ, ಮೂಲಭೂತ ಹಕ್ಕಿನಿಂದ ವಂಚಿತರಾಗಿರುವ ಜಗತ್ತಿನ ಎಲ್ಲ ಮಕ್ಕಳಿಗಾಗಿ ಅಳುತ್ತಿದ್ದಾರೆ ಎಂದು ನಾವೆಲ್ಲ ಸೇರಿ ನಿರ್ಧರಿಸಿದೆವು.
ಕೆಲ ತಿಂಗಳ ಹಿಂದೆ ಒಂದು ದಿನ ಎಂದಿನಂತೆ ಮನೆಯಲ್ಲಿ ಮಕ್ಕಳನ್ನು ಶಾಲೆಗೆ ಸಿದ್ಧಪಡಿಸುತ್ತಿದ್ದೆ. ಶಾಲೆಗೆ ಹೋಗುವುದಿಲ್ಲ, ಅದು ಸರಿಯಿಲ್ಲ, ಇದು ಬೇಕು, ಅದು ಬೇಡ ಎಂಬ ಯಾವೊತ್ತಿನ ತಕರಾರುಗಳು ಇದ್ದೇ ಇದ್ದವು. ಆ ಅವಸರದ ನಡುವೆಯೇ 'ದಿ ನ್ಯೂಯಾರ್ಕ್ ಟೈಮ್ಸ್'ನಲ್ಲಿನ ಹೆಡ್‌ಲೈನ್ ಕಣ್ಣಿಗೆ ಬಿತ್ತು. 'ಹಕ್ಕುಗಳಿಗಾಗಿ ದನಿಯೆತ್ತಿದ ಹುಡುಗಿಗೆ ತಾಲಿಬಾನಿಗಳ ಗುಂಡೇಟು.'
ಪಾಕಿಸ್ತಾನದ ಹುಡುಗಿಯವಳು. 14 ವರ್ಷ. ಹೆಸರು ಮಲಾಲಾ ಯೂಸಫ್ಜಾಯಿ. 'ನಾವು ನೀಡಿದ ಎಚ್ಚರಿಕೆಯನ್ನು ಆಕೆ ಕಡೆಗಣಿಸಿದ್ದರಿಂದ ನಮಗೆ ಬೇರೆ ದಾರಿಯೇ ಇರಲಿಲ್ಲ' ಎಂಬುದು ಅವಳ ಮೇಲೆ ಬಂದೂಕು ಎತ್ತಿದ ತಾಲಿಬಾನಿಗಳ ಸಮಜಾಯಿಷಿ. ಆಕೆ ಶಾಲೆಗೆ ಹೊರಟಾಗ ಶಾಲಾ ಬಸ್ಸನ್ನು ಉಗ್ರರು ಹಿಂಬಾಲಿಸಿ ಹೋಗಿದ್ದರು. ಬಸ್ ನಿಲ್ಲಿಸಿ ಅವಳ ಹೆಸರು ಹೇಳಿ ವಿಚಾರಿಸಿದ್ದರು. ನಂತರ ತಲೆಗೆ ಗುಂಡಿಟ್ಟು ಹೊಡೆದಿದ್ದರು.
ಅವಳು ಮಾಡಿದ ತಪ್ಪೇನು? ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ್ದು.ಅವಳ ಬಗೆಗಿನ ಲೇಖನ ಓದಿದ ನಂತರ ನನ್ನ ಮಕ್ಕಳ ಜೊತೆ ಆ ಕತೆಯನ್ನು ಹಂಚಿಕೊಳ್ಳದೆ ಇರಲು ಸಾಧ್ಯವಾಗಲಿಲ್ಲ. ಮಕ್ಕಳಿಗೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ತಾನು ಹಾಗೂ ತನ್ನಂತಹ ಹೆಣ್ಣುಮಕ್ಕಳು ಇತರ ಎಲ್ಲ ಮಕ್ಕಳಂತೆ ಶಾಲೆಗೆ ಹೋಗಬೇಕು ಎಂದು ಬಯಸುವ 'ತಪ್ಪು' ಮಾಡಿದ್ದಕ್ಕೆ ಅವಳನ್ನೇ ಕೊಲ್ಲಲು ಮುಂದಾಗುವ ಜಗತ್ತೂ ಒಂದಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವೂ ಆಗಿರಲಿಲ್ಲ.
ನನ್ನ ಮಕ್ಕಳ ಕಣ್ಣಲ್ಲಿ ಮಲಾಲಾ
ಆ ದಿನವಿಡೀ ಮಲಾಲಾಳ ಕತೆ ಮಕ್ಕಳ ಮನಸ್ಸಿನಲ್ಲಿ ಹೊಯ್ದಾಡುತ್ತಿತ್ತು. ರಾತ್ರಿ ಮಲಗುವ ಹೊತ್ತಿಗೆ ಅವರ ತಲೆತುಂಬಾ ಪ್ರಶ್ನೆಗಳು. ಎಲ್ಲಕ್ಕೂ ಉತ್ತರಿಸುವ ಪ್ರಯತ್ನ ಮಾಡಿದೆ. ನಂತರದ ದಿನಗಳಲ್ಲಿ ಮಲಾಲಾ ಬಗ್ಗೆ ನಾನೂ ಅವರೂ ಒಟ್ಟಿಗೆ ಕುಳಿತು ಓದಿದೆವು, ಟೀವಿ ನೋಡಿದೆವು, ಸಂದರ್ಶನ ಕೇಳಿದೆವು. ಅವಳ ಡೈರಿಯಲ್ಲೇನಿತ್ತು ಎಂಬುದನ್ನು ಕುತೂಹಲದಿಂದ ತಿಳಿದುಕೊಂಡೆವು.
ಬಿಬಿಸಿಗೆ ಬ್ಲಾಗ್ ಬರೆಯಲು ಶುರುಮಾಡಿದಾಗ ಮಲಾಲಾಗಿನ್ನೂ 11 ವರ್ಷ ವಯಸ್ಸು. ತಾಲಿಬಾನ್ ನೆರಳಿನಲ್ಲಿ ಜೀವಿಸುವ ಕಷ್ಟ ಎಂಥದ್ದು ಎಂಬುದನ್ನು ಆಕೆ ಬರೆದಿದ್ದಳು. ಶಾಲಾ ಸಮವಸ್ತ್ರವನ್ನು ಮುಚ್ಚಿಟ್ಟುಕೊಳ್ಳಲು ಅದರ ಮೇಲೆ ಬಣ್ಣವಿಲ್ಲದ ಮಾಸಲು ಬಟ್ಟೆ ತೊಟ್ಟು ಹೋಗುತ್ತಿದ್ದ ಬಗ್ಗೆ ಬರೆದಿದ್ದಳು. ಶಾಲಿನ ಹಿಂದೆ ಪುಸ್ತಕಗಳನ್ನು ಅಡಗಿಸಿಟ್ಟುಕೊಳ್ಳುತ್ತಿದ್ದುದು ಹಾಗೂ ಕ್ರಮೇಣ ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದರ ಬಗ್ಗೆಯೂ ಬರೆದಿದ್ದಳು.
ಜಗತ್ತು ಮಲಾಲಾಳ ಪುತ್ಥಳಿಯೊಂದನ್ನು ಸ್ಥಾಪಿಸಬೇಕು ಎಂಬುದು ನನ್ನ ಎಂಟು ವರ್ಷದ ಮಗಳ ಅಭಿಪ್ರಾಯ. ಅದರ ಪಕ್ಕದಲ್ಲೊಂದು ಓದಿನ ಮನೆಯನ್ನೂ ನಿರ್ಮಿಸಬೇಕಂತೆ. ಆರು ವರ್ಷದ ಮಗಳು ಒಂದು ಪ್ರಾಯೋಗಿಕ ಪ್ರಶ್ನೆ ಕೇಳಿದಳು: 'ಮಲಾಲಾ ಬಳಿ ಸಾಕುನಾಯಿ ಅಥವಾ ಬೆಕ್ಕು ಇತ್ತೇ? ಇದ್ದರೆ ಅದನ್ನಾರು ನೋಡಿಕೊಳ್ಳುತ್ತಾರೆ?' ಮಲಾಲಾಳ ಅಪ್ಪ ಅಮ್ಮ ಏನು ಮಾಡುತ್ತಾರೆ? ಅವರು ಅಳುತ್ತಿದ್ದಾರೆಯೇ ಎಂದೂ ಕೇಳಿತು. ಅವರು ಖಂಡಿತ ಅಳುತ್ತಿದ್ದಾರೆ, ಆದರೆ ತಮ್ಮ ಮಗಳಿಗಾಗಿ ಮಾತ್ರ ಅಲ್ಲ, ಮೂಲಭೂತ ಹಕ್ಕಿನಿಂದ ವಂಚಿತರಾಗಿರುವ ಜಗತ್ತಿನ ಎಲ್ಲ ಮಕ್ಕಳಿಗಾಗಿ ಅಳುತ್ತಿದ್ದಾರೆ ಎಂದು ನಾವೆಲ್ಲ ಸೇರಿ ನಿರ್ಧರಿಸಿದೆವು.
ಅವರ ಮೇಲೂ ಗುಂಡು ಹಾರಿಸ್ತಾರಾ?
ಮಲಾಲಾಳಂತೆ ಅವಳ ಅಪ್ಪ ಅಮ್ಮನೂ ಧೈರ್ಯ ಹಾಗೂ ಶಕ್ತಿಯ ಪ್ರತೀಕ. ಅವಳ ಅಪ್ಪ ಹೆಣ್ಣುಮಕ್ಕಳ ಓದಿಗಾಗಿ ಬಹಳ ವರ್ಷದಿಂದ ಹೋರಾಟ ಮಾಡುತ್ತಿದ್ದ ಮನುಷ್ಯ. ಶಾಲೆಯೊಂದರ ಪ್ರಿನ್ಸಿಪಾಲ್, ಶಿಕ್ಷಕ ಹಾಗೂ ಕವಿ ಕೂಡ. ಮರುದಿನ ಟೀವಿಯಲ್ಲಿ ಪಾಕಿಸ್ತಾನದ ಮೂಲೆಮೂಲೆಯ ಮಕ್ಕಳು ಮಲಾಲಾಳ ಚಿತ್ರ ಹಿಡಿದು ಪ್ರತಿಭಟನೆ, ಮೆರವಣಿಗೆ, ಧರಣಿ ನಡೆಸುತ್ತಿರುವ ಸುದ್ದಿ ಬಂತು. ಎಲ್ಲ ಶಾಲೆಗಳಲ್ಲಿ ಅವಳ ಆರೋಗ್ಯಕ್ಕಾಗಿ ಪ್ರಾರ್ಥನೆಗಳು ನಡೆದವು. ಪ್ರಪಂಚದ ಬೇರೆ ಬೇರೆ ಕಡೆ ಮೋಂಬತ್ತಿ ಮೆರವಣಿಗೆಗಳು ನಡೆದವು. ಮಲಾಲಾಳಿಗಾಗಿ ರ್ಯಾಲಿ ನಡೆಸುವ ಹೆಣ್ಣುಮಕ್ಕಳ ಮೇಲೂ ತಾಲಿಬಾನ್ ಉಗ್ರರು ಗುಂಡು ಹಾರಿಸಬಹುದು ಎಂಬ ಹೆದರಿಕೆ ನನ್ನ ಮಗನಿಗೆ. ಆ ಅಪಾಯ ಅವರಿಗೂ ಗೊತ್ತಿದೆ, ಆದರೆ ಸಾರ್ವಜನಿಕವಾಗಿ ಅವಳನ್ನು ಬೆಂಬಲಿಸುವುದರಿಂದ ಮಲಾಲಾಳ ಮೇಲೆ ಅವರಿಗೆ ಎಷ್ಟು ಪ್ರೀತಿ ಎಂಬುದನ್ನು ತೋರಿಸಿದಂತಾಗುತ್ತದೆ ಎಂದು ಅವನಿಗೆ ಹೇಳಿದೆ. ಮಲಾಲಾಳ ಧೈರ್ಯದಿಂದಾಗಿ ಎಲ್ಲಾ ಪಾಕಿಸ್ತಾನಿಗಳಿಗೆ ಶಿಕ್ಷಣವೆಂಬುದು ಎಷ್ಟು ಮುಖ್ಯ ಎಂಬುದು ಅರ್ಥವಾಯಿತು. ಆ ಪುಟ್ಟ ಹುಡುಗಿಯ ದಿಟ್ಟತನದಿಂದಾಗಿ ಅವರೂ ಧೈರ್ಯ ತುಂಬಿಕೊಂಡರು.
ಈ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ
ಆದರೆ, ನನ್ನ ಮಕ್ಕಳು ಕೇಳಿದ ಒಂದು ಪ್ರಶ್ನೆಗೆ ಈಗಲೂ ನನಗೆ ಉತ್ತರ ತಿಳಿದಿಲ್ಲ. 'ಮಲಾಲಾಳನ್ನು ಕೊಲ್ಲಬೇಕು ಎಂದು ತಾಲಿಬಾನ್ ಉಗ್ರರೇಕೆ ನಿರ್ಧರಿಸಿದರು?' ನಾನೇನೋ ಮಕ್ಕಳಿಗೆ ಇದಕ್ಕೆ ನನಗೆ ತೋಚಿದ ಉತ್ತರ ನೀಡಿದೆ. 'ಏಕೆಂದರೆ ಶಿಕ್ಷಣ ಎಂಬುದು ಬಹಳ ಶಕ್ತಿಶಾಲಿ ಆಯುಧ' ಎಂದೆ. ಮಲಾಲಾಳ ಮೇಲೆ ಹಾರಿಸಿದ ಗುಂಡು ಇಡೀ ದೇಶದ ಹೃದಯಕ್ಕೆ ತಟ್ಟಿದೆ. ತಾಲಿಬಾನಿಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ಹೇಗೆ ಸಿದ್ಧರಿಲ್ಲವೋ ಹಾಗೆಯೇ ಪಾಕಿಸ್ತಾನದ ಜನ ಕೂಡ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ಸಿದ್ಧರಿಲ್ಲ. ಈ ದ್ವೇಷದ ಹಾಗೂ ಹಿಂಸಾತ್ಮಕ ಕೃತ್ಯದಿಂದ ತಾವೇನು ಸಾಧಿಸುತ್ತೇವೆ ಎಂದು ತಾಲಿಬಾನಿಗಳು ಅಂದುಕೊಂಡಿದ್ದರೋ ಅದಕ್ಕೆ ವಿರುದ್ಧವಾದ ಫಲಿತಾಂಶ ಅವರಿಗೆ ಸಿಕ್ಕಿದೆ. ಏಕೆಂದರೆ ಪಾಕಿಸ್ತಾನೀಯರು ಮಲಾಲಾಳ ತತ್ವವನ್ನು ಒಪ್ಪಿಕೊಂಡಿದ್ದಾರೆ ಮತ್ತು ಭಯೋತ್ಪಾದನೆಯನ್ನು ತಿರಸ್ಕರಿಸಿದ್ದಾರೆ.
ಪಾಕಿಸ್ತಾನಿ ತಾಲಿಬಾನ್‌ನ ವಕ್ತಾರನೊಬ್ಬ 'ಇದೊಂದು ಪಾಠವಾಗಲಿ' ಎಂದು ಟೀವಿಯಲ್ಲಿ ಹೇಳುತ್ತಿದ್ದ. ಖಂಡಿತ ಇದೊಂದು ಪಾಠವಾಗಬೇಕು. ಶಿಕ್ಷಣವೆಂಬುದು ಮನುಷ್ಯನ ಮೂಲಭೂತ ಅಗತ್ಯ ಎಂಬುದನ್ನು ಎಲ್ಲರಿಗೂ ತಿಳಿಸುವ ಪಾಠವಾಗಬೇಕು. ಪಾಕಿಸ್ತಾನದ ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕನ್ನು ನೀಡದೇ ಇರಬಾರದು ಎಂಬುದಕ್ಕೆ ಇದೊಂದು ಪಾಠವಾಗಬೇಕು.
ಮಕ್ಕಳಿಗೆ ಮಲಾಲಾ ಕತೆ ಹೇಳಿ
ಮಲಾಲಾ ಗುಂಡೇಟು ತಿಂದು ಲಂಡನ್ನಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಷ್ಟೂ ದಿನಗಳ ಕಾಲ ಪಾಕಿಸ್ತಾನದ ಹೆಣ್ಣುಮಕ್ಕಳು ಆಕೆಯ ಬೆಂಬಲಕ್ಕೆ ನಿಂತು ಹೋರಾಡುತ್ತಿದ್ದಾರೆ. ಪ್ರತಿಯೊಬ್ಬರೂ 'ನಾನು ಮಲಾಲಾ' ಎನ್ನುತ್ತಿದ್ದಾರೆ. ಅವರು ಏಕಾಂಗಿಯಲ್ಲ. ಜಗತ್ತಿನ ಎಲ್ಲೆಡೆಯ ತಾಯಂದಿರು ಹಾಗೂ ಶಿಕ್ಷಕರು ತಮ್ಮ ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಮಲಾಲಾಳ ಕತೆ ಹೇಳುತ್ತಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿನ ಆಂದೋಲನದಲ್ಲಿ ಪಾಲ್ಗೊಳ್ಳಲು ಅವರನ್ನು ಹುರಿದುಂಬಿಸುತ್ತಿದ್ದಾರೆ. ಮಲಾಲಾ ಜೊತೆ ನಾವಿದ್ದೇವೆ.
ಮಲಾಲಾ ಘಟನೆಯ ನಂತರ ಪಾಕಿಸ್ತಾನದಾದ್ಯಂತ ರಾಷ್ಟ್ರೀಯ ಚಳವಳಿ ಆರಂಭವಾಗಿದೆ. ಧ್ವಂಸಗೊಂಡ ಶಾಲೆಗಳನ್ನು ಮತ್ತೆ ಕಟ್ಟಬೇಕು, ಹೆಣ್ಣುಮಕ್ಕಳೂ ಸೇರಿದಂತೆ ಎಲ್ಲ ಮಕ್ಕಳಿಗೆ ಶಿಕ್ಷಣ ಕೊಡಿಸಲು ನಾವೆಲ್ಲ ಶಪಥ ಮಾಡಬೇಕು ಎಂಬ ಒತ್ತಾಯ ಶುರುವಾಗಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅಗತ್ಯವಾಗಿ ಆಗಬೇಕಾಗಿದ್ದ ಜಾಗತಿಕ ಕ್ರಾಂತಿಗೆ ಈ ದುರ್ಘಟನೆಯಿಂದ ಶುರುವಾತು ಸಿಕ್ಕಿದೆ.
ಅಸಂಖ್ಯ ಪುರುಷರು, ಮಹಿಳೆಯರು ಹಾಗೂ ಮಕ್ಕಳಲ್ಲಿ ಸ್ಫೂರ್ತಿ ತುಂಬಲು ಒಬ್ಬ ಧೈರ್ಯವಂತನ ಧ್ವನಿ ಸಾಕು ಎಂಬುದಕ್ಕೆ ಮಲಾಲಾ ಒಳ್ಳೆಯ ಉದಾಹರಣೆ. ಜಗತ್ತಿನ ಎಲ್ಲ ತಾಯಂದಿರು, ತಂದೆಯರು, ಮಕ್ಕಳು, ಶಿಕ್ಷಕರು ಎಲ್ಲಾ ಶಾಲೆಗಳ ಕ್ಲಾಸ್‌ರೂಮುಗಳಲ್ಲಿ, ಮನೆಯ ಅಡುಗೆ ಕೋಣೆಗಳಲ್ಲಿ ಇಂದಿಗೂ ಮಲಾಲಾ ಮೊದಲಿನಂತಾಗಲಿ ಎಂದು ದೇವರನ್ನು ಬೇಡಿಕೊಳ್ಳುತ್ತಿದ್ದಾರೆ. ಅವಳು ಹೊತ್ತಿಸಿದ ದೀಪವನ್ನು ಎಲ್ಲೆಡೆ ಬೆಳಗಲು ಕೋಟ್ಯಂತರ ಮಂದಿ ಸಿದ್ಧರಾಗಿದ್ದಾರೆ.
ಮೊನ್ನೆಮೊನ್ನೆ ನೊಬೆಲ್ ಶಾಂತಿ ಪ್ರಶಸ್ತಿಗೆ ಮಲಾಲಾ ಹೆಸರು ಶಿಫಾರಸು ಮಾಡಲಾಗಿದೆ ಎಂಬ ಸುದ್ದಿ ಬಂತು. ಅದನ್ನು ಆಯ್ಕೆ ಸಮಿತಿ ಗಂಭೀರವಾಗಿ ಪರಿಗಣಿಸಲಿ.
*ಏಂಜೆಲಿನಾ ಜೋಲಿ
ಪ್ರಸಿದ್ಧ ಹಾಲಿವುಡ್ ನಟಿ